ಅಪ್ಪ ಭಕುತರಿಗೆ ಪ್ರೇಮಿಯಾದೆ
ದುರುಳರಿಗೆ ವೈರಿಯಾದೆ || ಸಿದ್ಧಯ್ಯ ||

ಗುರುವೆ ಭಕುತರಿಗೆ ನನ್ನ ಗುರುವು
ಪ್ರೇಮಿಯಾಗಿ ಗುರುವೇ
ದುರುಳರಿಗೆ ದೇವಾ
ವೈರಿಯಾಗಿ ನನ್ನಪ್ಪ
ನಿಮ್ಮ ನಂಬುದವರ ಮನೆ ಒಳಗೆ
ಪರಂಜ್ಯೋತಿಯಾಗುಬಲ್ಲೆ || ಸಿದ್ಧಯ್ಯ ||

ಗುರುವೆ ಕೈಯೆತ್ತಿ ಮುಗಿದವರ
ಕೈ ಹಿಡಿದು ಕಾಪಾಡಬಲ್ಲೆ || ಸಿದ್ಧಯ್ಯ ||
ಗುರುವೆ ಮರ್ತವರ ಮನೆಗೆ ದೇವಾ
ಮಾರಿ ಹಿಂಡು ಕೂಡಬಲ್ಲೆ || ಸಿದ್ಧಯ್ಯ ||

ಕೇಳವ್ವ ನನ ಕಂದ
ಶಿಶುಮಗಳೆ ದೊಡ್ಡಮ್ಮ
ಆಚಾರಿ ಮಗನು ಬಸವಚಾರಿ ಮಗನು ತಂದು
ಕಟೆ ಕಟೇ ಕಾಳಿಂಗನ ಗವಿಗೆ ಕೊಡಿವ್ನಿ
ಹನ್ನೆರಡು ವರ್ಷ ಸೆರೆ ಮಡಗಿವ್ನಿ ದೊಡ್ಡಮ್ಮ
ಆಗಲೀಗಾ ಎಳೆ ಕೆಂಪಣ್ಣ
ಹನ್ನೆರಡು ವರ್ಷ ಕಂದಾ
ಅವನಿಗೆ ಗುರು ಗ್ಯಾನ ಬರ್ತದೆ
ದುರುಳ ಗ್ಯಾನ ಹೊಯ್ತದೆ ಕಂದಾ
ಅಮ್ಮ ಗುರು ಗ್ಯಾನ ಬಂದ ಮೇಲೆ
ಅವ್ವ ನನಗೆ ಮಗನಾಗುತಾನೆ || ಸಿದ್ಧಯ್ಯ ||

ಅವನು ನನಗೆ ಮಗನಾಗುತಾನೆ
ನನಗೆ ಶಿಷ್ಯನಾಗುತಾನೆ || ಸಿದ್ಧಯ್ಯ ||

ನನಗೆ ಮಗನಾಯ್ತಾನೆ ಕಂದಾ
ನನಗೆ ಶಿಷ್ಯನಾಯ್ತಾನೆ ದೊಡ್ಡಮ್ಮ
ಬಾರೋ ಕಂದಾ ಬಾವ್ವ ಮಗಳೆ ಎಂದುರು
ಅಣ್ಣಯ್ಯ
ಹಾಗಾದರೆ ಶಿಶುಮಗನ ಪಡಕಂಡು ಬಂದು ಬುಟ್ರಿಯಾ
ಕಂಡುತವಾಗು ಪಡಕಂಡು ಬಂದಿವ್ನಿ ದೊಡ್ಡಮ್ಮ
ದೊಡ್ಡಮ್ಮ
ಮನಗ ಪಡಕಂಡು ಬಂದಿದ್ರೂ ಕೂಡ
ಅವರ ತಂದೆ ಬಾಚಿಬಸವಯ್ಯಾ ತಾಯಿ ಮುದ್ದಮ್ಮ
ಆ ಮಗನಿಗೆ ಜಾತಿ ಜನಿವಾರ ಹಾಕುಬುಟ್ಟವರೆ
ನಡಿಗೆ ಉಡುದಾರ ಕೂಡ ಕಟ್ಟವರೆ
ಆ ಮಗನ ಅಂದ ಚಂದಾ ನೋಡಲಾರದೆ
ಕಿರಿಕೆಂಪಣ್ಣ ಅಂತೇಳಿ
ಮಗನಿಗೆ ನಾಮಕರಣ ಕಟ್ಟವರೆ
ಅವರ ತಾಯಿ ಕಟ್ಟಿರುವಂತ
ಎಸರ್ನೆ ಹಾಳುಮಾಡಿ ಬುಡಬೇಕು
ಅವರ ತಂದೆ ಕಟ್ಟಿರುವಂತ
ನಾಮಕರಣ ಹಾಳು ಮಾಡಬೇಕು ದೊಡ್ಡಮ್ಮ
ನನಗೆ ಶಿಸುಮಗನ ಮಾಡ್ಕಬೇಕಾದರೆ
ಅವನ ನಾನು ಭಕುತುನ ಮಾಡ್ಕ ಬೇಕಾದುರೆ

ಅವರ ತಾಯಿ ಕಟ್ಟಿರೊ ಉಡುದಾರವ
ಕಿತ್ತಾಕುಬೇಕು ಎಂದುರಲ್ಲಾ || ಸಿದ್ಧಯ್ಯ ||

ಅವರ ತಾಯಿ ಕಟ್ಟಿರುವಂತ
ಉಡುದಾರವ ಕಂದಾ
ಕಿತ್ತಾಕು ಬೇಕು ಮಗಳೆ
ದುಡುವುಳ್ಳ ದೊಡ್ಡಮ್ಮ
ಅವರ ತಂದೆ ಕಟ್ಟಿರೊ ಜನಿವಾರವ
ತಗುದಾಕಬೇಕು ಎಂದುರಲ್ಲಾ || ಸಿದ್ಧಯ್ಯ ||

ತಂದೆ ಕಟ್ಟಿರುವಂತ ಜನಿವಾರ
ಈಗಲೀಗಾ ಕಿತ್ತಾಕಿ ಬುಡಬೇಕು ದೊಡ್ಡಮ್ಮ
ಅವರು ತಾಯಿ ಕಟ್ಟಿರುವಂತ ಉಡುದಾರ ತಗುದಾಕಬೇಕು
ಈಗಲೀಗಾ ಅವರ ತಂದೆ ತಾಯಿಗಳು ಕಟ್ಟಿರುವ
ಕೆಂಪಾಚಾರಿ ಎನುವಂತ ಹೆಸರ್ನೆ ಆಳುಮಾಡಿ ಬುಡಬೇಕು
ಆ ಮಗನಿಗೆ ಕೊಕ್ಕು ತರದು
ಕೊರಳಿಗೆ ಲಿಂಗ ಕಟ್ಟಿ
ಬಿರುದು ಮುಟ್ಟಿದ ಗುಡ್ಡನ ಮಾಡಿ ದೊಡ್ಡಮ್ಮ
ನಾನು ಒತ್ತಿರುವಂತ ಬಿರುದು ಲಾಂಚಾಣ
ಆ ಮಗನಿಗೆ ಒರಿಸಿ
ಅವರ ತಾಯಿ ತಂದೆ ಕಟ್ಟಿರುವಂತ
ನಾಮಕರಣನೆ ಬಿಡಿಸಿಬುಟ್ಟು
ಧರೆಗೆ ದೊಡ್ಡವರ ಶಿಶುಮಗ
ಮಂಟೇಸ್ವಾಮಿ ಮಗ

ಅವನ ಸಿದ್ದಪ್ಪಾಜಿ ಅಂತ ನಾನು
ನಾಮಕರಣ ಮಾಡಬೇಕು || ಸಿದ್ಧಯ್ಯ ||

ಅವುನ ಸಿದ್ದಪ್ಪಾಜಿ ಅಂತ
ನಾಮಕರಣ ಕಂದಾ
ನಾ ಮಾಡಬೇಕು ದೊಡ್ಡಮ್ಮ
ಮಗಳೇ ನಾನು ಪಡೆದ ನರಲೋಕಕ್ಕೆ
ಅವನ ಗಂಡು ದೇವುರ ಮಾಡಬೇಕು || ಸಿದ್ಧಯ್ಯ ||

ನಾನು ಪಡೆದಿರುವಂತ ನರಲೋಕಕ್ಕೆ ಕಂದಾ
ಆ ಮಗನ ಗಂಡು ದೇವುರ ಮಾಡಿ ಬಿಟ್ಟು ಬಿಡಬೇಕಲ್ಲ ದೊಡ್ಡಮ್ಮ
ಈ ನರಕಲೋಕಕ್ಕೆ ಅವನ ದೇವರು ಮಾಡಬೇಕು ದೊಡ್ಡಮ್ಮ
ಹಾಗಂದು ಜಗತ್ತು ಗುರು ಧರೆಗೆ ದೊಡ್ಡವರು
ಮಂಟೇದಾಲಿಂಗಪ್ಪ ಜಗಂಜ್ಯೋತಿಯವರು
ದೊಡ್ಡಮ್ಮ
ಆ ಕೆಂಪಾಚಾರಿ ಎನ್ನುವಂತ ಎಸರನ್ನ ಬಿಡಿಸಿಬುಟ್ಟು
ಸಿದ್ದಪ್ಪಾಜಿ ಎನ್ನುವಂತೆ ನಾಮಕರಣ ಕರದು
ಈ ನರಲೋಕಕೆ ನನ ಮಗ ಸಿದ್ದಪ್ಪಾಜಿ ಆದ ಮೇಲೆ
ನನ್ನ ಮಠದ ಬಿರುದು ಕಂದಾ
ನನ್ನ ಮಠದ ಕಂಡಾಯ
ನನ್ನ ಮಠದ ತಂಬೂರಿ
ನನ್ನ ಮಠದ ದಾಳ
ಛತ್ರಿ ಚಾಮರ ಸಹಿತವಾಗಿ
ನನ್ನ ಕೈಲಾಸದ ಖಂಡಾಯದ ಸಹಿತವಾಗಿ
ತಲಕಾಡು ಮಾಲಂಗಿ ಎರಡು ಹೊಳೆ ಕೂಡಿದ
ನದಿಗೆ ಹೋಗಿ ಬುಟ್ಟು
ಬಾರಿ ಖಂಡಾಯ ನಿವೇದನೆ ಮಾಡಿಕಂಡು
ನನ್ನ ಬಿರುದು ಲಾಂಚಾಣ ತಕಂಡು ದೊಡ್ಡಮ್ಮ
ನನ್ನ ಮಗ ಸಿದ್ದಪ್ಪಾಜಿ
ನನ ಮಠಕ್ಕು ನುಗ್ಗುವಾಗ
ಮಡುವಾಳು ಮಾಚಯ್ಯ
ಅವನು ಮುಂದ್ಲು ಮಡಿ ಬುಡುಬೇಕು
ಅವನ ಮಡದಿ ಮಲ್ಲಿಗದೇವಿ ಬಂದು
ಇಂದಲ ಮಡಿಯ ಎತ್ತಬೇಕು
ಗುರುವೆ ಮಾಚಪ್ಪನ ಮಗನುಕಂದಾ ವೀರಣ್ಣ
ಐರಾಳ ಮೈರಾಳ ಎನುತೇಳಿ ನನ್ನ ಕಂದಾ
ಎರಡು ಪಂಜು ಕಟ್ಟು ಕಂಡು
ನನ ಕಂಡಾಯದ ಮುಂದೆ ಮಗಳೆ ಪಂಜು ಬರಬೇಕು

ಅಮ್ಮ ಪಂಜಿನ ಬೆಳಕಿನ ಒಳಗೆ
ನನ್ನ ಮಗನು ಮಠಕೆ ನುಗ್ಗಬೇಕು || ಸಿದ್ಧಯ್ಯ ||

ಪಂಜಿನ ಬೆಳಕಿನಲ್ಲಿ
ನಮ್ಮ ಮಗ ಸಿದ್ದಪ್ಪಾಜಿ
ನನ್ನ ಮಠ ನುಗ್ಗಬೇಕು ದೊಡ್ಡಮ್ಮ

ಮಡಿವಾಳ ಮಾಚಪ್ಪ ನನಗೆ
ಮಠ ಮನೆಬುಟ್ಟು ಒಬ್ಬನೆ ಒರಟೋಗಿ ಬುಟ್ಟವನೆ ದೊಡ್ಡಮ್ಮ

ಆ ಮಡಿವಾಳು ಮಾಚಯ್ಯನಾ
ನನ್ನ ಮಠಕೆ ಮಗನ ಮಾಡಬೇಕು || ಸಿದ್ಧಯ್ಯ ||

ಅಯ್ಯಾ ಮಡಿವಾಳು ಮಾಚಪ್ಪನ
ನನ್ನ ಮಠಕು ಮಗನ ಕಂದಾ
ಮಾಡುಬೇಕು ಕಂದಾ
ನನ್ನ ರಾಜು ಬಪ್ಪಗಣ್ಣ ಪುರಕೆ
ನನ್ನ ಶಿಷ್ಯನಾಗಿ ಮಾಡಬೇಕು
ಅವನ ಮಡಿ ಬರೋಗಂಟಾ ನನ್ನ
ಮಠದ ಪೂಜೆ ನಡೆಯದಿಲ್ಲ|| ಸಿದ್ಧಯ್ಯ ||

ದೊಡ್ಡಮ್ಮ
ಮಾಚಪ್ಪನ ಮಡಿ ಬರೋಗಂಟಾ
ನನ್ನ ಮಠದ ಪೂಜೆ ನಡೆಯದಿಲ್ಲ
ಈಗಲೀಗಾ ಮಾಚಪ್ಪನ ಮಾಡಿ ಬರೋತನಕ
ನನ್ನ ಮಗಾ ಸಿದ್ದಪ್ಪಾಜಿ
ಮಠದಿಂದ ಹೊರಗೋಗ್ವಾಗಿಲ್ಲ
ಮಠದಿಂದ ನನ ಮಗ ಹೋಗಬೇಕಾದ್ರೆ ಕಂದಾ
ಮಡಿಯಿಂದಲೇ ಹೋಗಬೇಕು ಕಂದಾ
ನನ್ನ ಮಗ ಮಠಕೆ ಬರಬೇಕಾದ್ರೆ
ಮಡಿಯಿಂದೇ ಮಠಕೆ ಬರಬೇಕು
ಈ ರೀತಿ ನಾನು ಮಾಡಬೇಕಾದ್ರೆ ಕಂದಾ

ನಾನು ಮಾಚಪ್ಪನ ಮನೆಗೆ
ನಾ ಹೋಗಬೇಕು ಎಂದರಲ್ಲಾ || ಸಿದ್ಧಯ್ಯ ||

ಅಮ್ಮ ಮಾಚಪ್ಪನ ಮನೆಗೆ
ನಾನು ಹೋಗಲೆ ಬೇಕು
ಆ ಮಡಿವಾಳು ಮಾಚಪ್ಪನ
ದುಡುವ ನೊಡಲೇ ಬೇಕು
ಅವರ ಮಡದಿ ಮಲ್ಲಿಗೆ ದೇವಿ
ಸತ್ಯ ನೊಡಲೇ ಬೇಕು
ಅವರ ಗಂಡ ಹೆಡ್ತಿರಾ ದುಡುವಾ
ನಾನೇ ನೊಡಲೇ ಬೇಕು || ಸಿದ್ಧಯ್ಯ ||

ಮಡಿವಾಳ ಮಾಚಪ್ಪನವರಾ
ಸತ್ಯ ನೋಡಬೇಕು ದೊಡ್ಡಮ್ಮ
ಅವರ ಮಡುದಿ ಮಲ್ಲಿಗು ಮಾದೇವಮ್ಮನಾ
ಪತಿವರುತನ ನೋಡಬೇಕು
ಅವರ ಗಂಡ ಹೆಂಡರಾ ದುಡ ನೋಡಕಂಡು ಬರುಬೇಕು ಎನುತೇಳಿ
ಮಾಗುರು ಮಂಟೇದುಸ್ವಾಮಿ

ಈಗ ಮಾಚಪ್ಪನ ಮನೆಗೆ ನಾ
ಹೋಗುತೀನಿ ಎಂದರಲ್ಲಾ || ಸಿದ್ಧಯ್ಯ ||

ಅಯ್ಯಾ ಮಾಚಪ್ಪನು ದುಡುವಾ
ಮಾದೇವಮ್ಮನ ದುಡುವಾ
ಗೊತ್ತಿಲ್ಲಾ ಕಂದಾ
ಆಗಂದ್ರು ನನ ಗುರುವು
ಅವರು ಉತ್ತುರ ದೇಸದ ಕಂಡಾಯವಾ
ಎಗಲಮೇಲೆ ಹೊತ್ತಿಗಂಡು || ಸಿದ್ಧಯ್ಯ ||

ಗುರುವೇ ಬಾರಿಯ ಕಂಡಾಯ
ಎಗಲಮೇಲೆ ಹೊತ್ತು
ಎಪ್ಪತ್ತು ಮಾರುದ್ದ ಜಡೆಯ
ಸುತ್ತ ಬುಟ್ಟಕಂಡು
ಬಾರಿ ತಂಬೂರಿ ತಗದು
ಎಗಲಮೇಲೆ ಧರ್ಸಿಗಂಡು
ಅವರು ಮುರುಳಿನ ಪಾವಾಡದ ಮೇಲೆ
ಒಳ್ಳ ಒಳ್ಳನೆ ಬರುವರಲ್ಲಾ || ಸಿದ್ಧಯ್ಯ ||

ಮುರುಳಿನ ಪಾವಾಡ ಪಾದದಲಿಲ ಧರಿಸಿ
ಜಗತ್ತು ಗುರು ಧರೆಗೆ ದೊಡ್ಡವರು ಮಂಟೇದಲಿಂಗಪ್ಪ
ಪರವಸ್ತು ಪಾವನ ಮೂರುತಿ
ಮಡಿವಾಳ ಮಾಚಪ್ಪ ದುಡುದಲಿ ಬಹು ಶರಣಾ
ಎನುತೇಳಿ ಜಗತ್ತುಗುರು
ಮಡಿವಾಳ ಮಾಚಪ್ಪನವರ
ಅಟ್ಟಿ ಅರಮನೆಗೆ
ತಾವಾಗಿ ಬರುತಿದ್ರು
ರಾಜ ಬಪ್ಪುಗಣ್ಣ ಪುರದಿಂದಾ
ಧರೆಗೆ ದೊಡ್ಡವರು ಬರುವಾಗ
ಮಡಿವಾಳ ಮಾಚಪ್ಪನವರು
ಗುರುವೇ ಎತ್ತು ಸೂತಕದ ಬಟ್ಟೆ
ಸತ್ತ ಸೂತಕದ ಬಟ್ಟೆ
ಮೈಲಿಗೆ ಮಡಿಬಟ್ಟೆ
ಗುರುವೆ ಬೀದಿಬೀದಿ ಮೇಲೆ ದೇವಾ
ಎತ್ತಿಗಂಡು ಮಾಚಪ್ಪ
ಉಬ್ಬೆಯ ಸುತ್ತಿಗಂಡು
ಕಕ್ಕೆಮುಳ್ಳು ತಂದು
ಕಾರೆ ಮುಳ್ಳು ತಂದು
ಎಳಚಿ ಮುಳ್ಳು ತಂದು
ಅವನು ಉಬ್ಬೆಯ ಒಟ್ಟುತಾನೆ
ಬಟ್ಟೆಯ ಬೇಯ್ಸುತಾನೆ || ಸಿದ್ಧಯ್ಯ ||

ಮಡಿವಾಳ ಮಾಚಪ್ಪನವರು
ಜಗತ್ತು ಗುರುಗಳು ಬರುವಂತ ಟೈಮಿನಲ್ಲಿ
ಸತ್ತ ಸೂತುಕದ ಬಟ್ಟೆ ಹೆತ್ತ ಸೂತಕದ ಬಟ್ಟೆ
ನೆರೆದ ಸೂತಕದ ಬಟ್ಟೆ
ಬೀದಿ ಬೀದಿ ಮೇಲೆ ಎತ್ತಿಗಂಡು ಬಂದು ಮಾಚಪ್ಪ
ಉಬ್ಬೆ ಸುತ್ತಿಕಂಡು
ಕಕ್ಕೆಮುಳ್ಳು ಕಾರೆಮುಳ್ಳು ಎಡಿಚಿಮುಳ್ಳು ತಂದು

ಅವರು ಉಬ್ಬೆ ಒಟ್ಟೊ ಹೊತ್ತಿಗೆ
ಅವರ ಹಟ್ಟಿಗಾದರೆ ಬಂದರಲ್ಲಾ || ಸಿದ್ಧಯ್ಯ ||

ಗುರುವೆ ಉಬ್ಬೆ ಬೇಯಿಸುವ ಟೈಮಿನಲ್ಲಿ ಗುರುವು
ಗುರುವೇ ಮಾಚಪ್ಪನ ಮನೆಗೆ
ಓಡಿ ಓಡಿ ಬಂದು ಧರೆಗೆದೊಡ್ಡಯ್ಯ
ಗುರುವೇ ಮಡಿವಾಳು ಮಾಚಪ್ಪ
ಪಾದ ತೊಳಿವಂತ ಪಚ್ಚೆಕಲ್ಲು ಗುರುವು
ಅವರು ಪಚ್ಚೆ ಕಲ್ಲಿನ ಮೇಲೆ
ಬಂದು ನಿಂತಗಂಡು
ಅವರು ನಡಟ್ಟಿ ಒಳಗೆ
ಬಂದು ಮೂರ್ತವಾಗಿ

ಅವರು ಮಾಚಪ್ಪನ ಉಬ್ಬೆ ಒಲೆಯ
ಕಣ್ಣು ಬುಟ್ಟು ನೋಡುತಾರೆ || ಸಿದ್ಧಯ್ಯ ||

ಮಾಚಪ್ಪನವರ ದೇವಾ
ನಡಟ್ಟಿಗೆ ಬಂದು ಜಗತ್ತು ಗುರು ಧರೆಗೆ ದೊಡ್ಡಯ್ಯ
ಮಾಚಪ್ಪನವರಾ ನಡುತೊಟ್ಟಿ ಒಳಗೆ ಬಂದು ನಿಂತಗಂಡು
ಮಾಚಪ್ಪನವರಾ ಉಬ್ಬೆ ಒಲೆಗೆ
ದೂರುದ ದೃಷ್ಟಿ ಮಡಗಿ ನೋಡದ್ರಂತೆ
ಯಾವಾಗ ಧರೆಗೆ ದೊಡ್ಡವರ ದೃಷ್ಟಿ
ಉಬ್ಬೇ ಒಲಗೆ ಬಿದ್ದು ಕಾಲದಲ್ಲಿ ಗುರುವು
ಅದು ಬಗ್ಗನೆ ಕತ್ತಿದ ಒಲೆ
ಪಕ್ಕನೆ ಕೆಟ್ಟೋಗಿತಲ್ಲ || ಸಿದ್ಧಯ್ಯ ||

ಗುರುವೇ ಉರಿವಂತ ಒಲೆ
ಪಕ್ಕನೇ ಕೆಟ್ಟೋಯ್ತು
ಮಡಿವಾಳು ಮಾಚಪ್ಪ
ಕಕ್ಕೆ ಮುಳ್ಳು ತಂದು
ಕಾರೆ ಮುಳ್ಳು ತಂದು
ಎಳಚಿ ಮುಳ್ಳು ತಂದು
ಗುರುವೇ ಒಲಿಯ ತುಂಬ ಸೌದೆ ಒಟ್ಟವನೆ

ಅವನು ಉಫ್ ಅಂತ ಉರುಬ ತಾನೆ
ಬುಕ್ಕು ಬುಕ್ಕನೆ ಕೆಂಬುತಾನೆ || ಸಿದ್ಧಯ್ಯ ||

ಮಡಿವಾಳ ಮಾಚಪ್ಪ
ಕಕ್ಕೆ ಮುಳ್ಳು ಕಾರೆಮುಳ್ಳು ಯಳಚಿ ಮುಳ್ಳು ತಂದು
ಉಬ್ಬೆ ಒಲೆ ತುಂಬಾ ತುಂಬಿಟ್ಟು
ಉಫ್ ಅಂತ ಉರುಬುತಾನೆ ಮಾಚಯ್ಯ
ಬುಕು ಬುಕನೆ ಕೆಂಬುತಾನೆ ಶರಣಾ
ಅವನು ಎಷ್ಟು ಉರುಬುದ್ರು ಕೂಡಾ
ಒಲೆ ಕತ್ತನಿಲ್ಲ ಹೊಗೆ ತಪ್ಪುನಿಲ್ಲ
ಉರುಬಿ ಉರುಬಿ ಮಾಚಪ್ಪನಿಗೆ
ಕಣ್ಣಲ್ಲಲಿ ನೀರು ಬಂದು ಬುಡ್ತು

ಅವನು ಉಬ್ಬೆವಲಿಯ ಬುಟ್ಟನಂತೆ
ನಡಟ್ಟಿಗೆ ಬಂದನಂತೆ || ಸಿದ್ಧಯ್ಯ ||

ಉಬ್ಬೆ ಒಲಿಯ ಬುಟ್ಟು ನಡಟ್ಟಿಗೆ ಬಂದು ದೇವಾ
ಜಗತ್ತು ಗುರು ಧರೆಗೆ ದೊಡ್ಡವರ
ಮೊಕ ಮಠ ಮಠನೆ ನೋಡಿದ ಮಾಚಪ್ಪ
ಈ ಭೂಮಿಗೆ ದೊಡ್ಡವರ ಮೊಕ ನೋಡಿಬುಟ್ಟು
ಕೈನಟ್ಟಿ ಬಾಯ್ನಟ್ಟಿ ನರುಗುತಾ
ಅಯ್ಯೋ ಗುರುದೇವಾ
ಅಯ್ಯೋ ನನ್ನಪ್ಪಾ
ಇವತ್ತು ತುಂಬಿದು ಸ್ವಾಮರಾ
ಜಗತ್ತು ಗುರುಗಳು ನನ್ನ ಮನಿಗೆ
ಬಂದು ಬುಟ್ಟವ್ರಲ್ಲಾ ಶಿವಾಶಿವಾ
ಈ ಮಹಾನುಭಾವನಿಗೆ
ಯಾರುದಾರಿ ತೋರಿಕೊಟ್ರೊ ಕಾಣೆ
ನನ್ನ ಮನೆ ಇದೆ ಅಂತಾ ಯಾರು ತೋರ್ಸಿದ್ರೊ ಗೊತ್ತಿಲ್ಲ
ಎನುತೇಳಿ ಮಡಿವಾಳ ಮಾಚಪ್ಪನವರು
ಧರೆಗೆ ದೊಡ್ಡೋರ ಮುಖ ಕಣ್ಣೀರ ನೋಡುತಾ
ಗುಡುಗುಡನೆ ಬಂದು ಮುಂಭಾಗದಲ್ಲಿ ನಿಂತುಗಂಡು
ಗುರುದೇವಾ

ಈ ಮುಟ್ಟು ತಟ್ಟಿನಾ ಜಾಗಕ್ಕೆ
ನೀವು ಬರುಬವುದಪ್ಪ ಮಾಯಿಕಾರ || ಸಿದ್ಧಯ್ಯ ||

ಈ ಮುಟ್ಟುನಾ ಮನೆಗೆ ನೀವು
ಬರಬಹುದಾ ಧರ್ಮ ಗುರುವೇ || ಸಿದ್ಧಯ್ಯ ||

ಈ ಮುಟ್ಟು ತಟ್ಟಿನ ಮನೆಗೆ ಬಂದು ಬುಟ್ರಿಯಲ್ಲಾ ಗುರುವು
ನಮ್ಮ ಹೀನಾ ಜಾರಿಯವನ ಮನೆಗೆ ಬಂದ್ರಿಯಲ್ಲಪ್ಪ
ನನ್ನ ಹೀನಾ ಜಾತಿಯವನ ಮನೆಗೆ ಯಾತಕೆ ಬರಕೋದ್ರಿ
ನನ್ನಟ್ಟಿ ಅರಮನೆಗೆ ನೀವೆ ಬಂದ್ರಿಯಾ
ಯಾರ್ಯಾರು ದಾರಿ ತೋರಿಕೊಟ್ಟುಬುಟ್ರೋ ಗುರುವು ಎಂದುರು
ಏನಪ್ಪ ಶಿವಶರಣಾ
ನನ್ನ ಹೀನಾ ಜಾತಿಯವನ ಮನೆಗೆ ಯಾಕೆ ಬಂದ್ರಿ
ಈ ಮುಟ್ಟಿತಟ್ಟಿನ ಮನೆಗೆ ಯಾಕೆ ಬಂದ್ರಿ
ನೀವೆ ಬಂದು ಬುಟ್ರೊ ಯಾರ್ಯಾರೋ ಜಾಗ
ತೋರ್ಸಿ ಕೊಟ್ಟು ಬುಟ್ರಿಯೊ ಅಂತಾ ಕೇಳ್ತಿಯಲ್ಲಾ ಕಂದಾ
ಶಿವಶರಣಾ
ಜಾತಿ ಮತನು ಕೇಳ್ತಿಯಲ್ಲ
ನೀನು ಯಾವ ಜಾತಿಯವನು
ಯಾವ ಕುಲವನು
ನಿನ್ನ ಮತ ಯಾವುದು ಮಗನೆ ಎಂದುರು
ಗುರುದೇವಾ ನನ್ನ ಜಾತಿ ಮತ ಕೇಳಿದಿಯಾ
ನನ್ನ ಜಾತಿ ಮತ ಅಂದ್ರೆ ಗುರುವು
ನಾನು ಮುಟ್ಟುನಾ ಬಟ್ಟೆ ಒಗಿವಂತಾ
ಗುರುವೆ ಮಡಿವಾಳು ಸಟ್ಟಿ ಗುರುವು || ಸಿದ್ಧಯ್ಯ ||

ಅಪ್ಪ ಮುಟ್ಟಿನ ಬಟ್ಟೆಗಳೆಲ್ಲ
ಮೂಲೇಲಿ ಇಟ್ಟಾಡುತಾವೆ || ಸಿದ್ಧಯ್ಯ ||

ಗುರುದೇವಾ
ಮುಟ್ಟಿನ ಬಟ್ಟೆಗಳೆಲ್ಲಾ
ನನ್ನಟ್ಟಿ ಒಳಗೆ ಇಟ್ಟಾಡ್ತಾವಲ್ಲ ಬುದ್ದಿ

ಈ ಮುಟ್ಟು ತಟ್ಟಿನಾ ಮನೆಗೆ
ನಿಮ್ಮ ಪುಟ್ಟು ಪಾದ ಬರಲುಬವುದ || ಸಿದ್ಧಯ್ಯ ||