ಮುಟ್ಟು ತಟ್ಟಿನ ಜಾಗಕ್ಕೆ
ನಿಮ್ಮ ಪುಟ್ಟು ಪಾದ ಬರಬವುದಾ ಸ್ವಾಮಿ
ಈಗಲೀಗಾ ನನ್ನ ಮನೆಯಿಂದ
ಬಲಗಡೆ ಇರುವುದು ಶಿವಚಾರದೋರು ಮನೆ
ಎಡಗಡೆ ಇರುವಾದು
ಬ್ರಾಮುಂಡ್ರ ಕುಲಭಕುತರ ಮನೆ
ನನ್ನ ಮನೆ ಮುಂಭಾಗದಲಿರುವುದು
ಅರಸುದೊರೆಗಳ ಮನೆಯಲ್ಲಪ್ಪ
ಅರಸು ದೊರೆಗಳ ಮನೆಗೊಂಟೋಗಿ
ನಿಮಗೆ ಶಿವಪೂಜೆ ಮಾಡಿ
ಪಾದಕೆ ಶರಣು ಮಾಡಿ
ಊಟ ಬೋಜನ ಕೂಡ ಪಡುಸ್ತಾರೆ
ಶಿವಾಚಾರ್ಯದೋರಾ ಮನಿಗಾದ್ರು ಒರಟೋಗಿ
ಶಿವಪೂಜೆ ಮಾಡ್ತಾರೆ
ಬ್ರಾಮುಂಡ್ರ ಕುಲಭಕುತರ ಮನಿಗಾದ್ರು
ಒಂಟೋಗಿಬುಡಿ ಸ್ವಾಮಿ
ನನ್ನ ಹೀನಾ ಜಾತಿಯವನ ಮನಿಗೆ ಯಾಕೆ ಬಂದು ಬುಟ್ರಿಯಪ್ಪ ಎಂದುರು
ಮಾಚಯ್ಯಾ
ನನ್ನ ಹೀನಾ ಜಾತಿಯವನ ಮನಿಗೆ ಯಾತಕೆ ಬಂದ್ರಿ
ಈಗಲೀಗಾ ಉತ್ತಮರ ಮನೆಗೆ
ಒಂಟೋಗಿಬುಡಿ ಅಂತಾ ಕೇಳ್ತಿಯಲ್ಲಾ ಕಂದಾ ಮಾಚಯ್ಯ
ಹೀನಾ ಜಾತಿ ಹೀನಜಾತಿ ಅಂತ ಹೇಳ್ತಿಯಲ್ಲ ಕಂದಾ
ಈಗಲಾ ನಾನು ಮುಟ್ಟಿನ ಬಟ್ಟೆ ಒಗಿವಂತ
ಮಡಿವಾಳ ಸಟ್ಟಿ ಅಂತಾ ಹೇಳಿದೆಯಲ್ಲೊ ಮಗನೆ
ಮಾಚಪ್ಪ
ಮುಟ್ಟು ತಟ್ಟು ಮುಟ್ಟುತಟ್ಟು ಅಂತೇಳಿ
ನಿನ್ನ ಬಾಯಿನಲಿ ಮೂರು ಸತಿ ಬಂದುಬುಡ್ತು

ಈ ಮುಟ್ಟಿನ ವಿಚಾರಾ
ನೀನಾಗಿ ಕಂದಾ
ಹೇಳಿದ್ಯಲ್ಲೋ ನನ ಮಗನೇ
ಕಂದಾ ಆ ಜಾತಿ ಈ ಜಾತಿ
ಎಂದಿಯಲ್ಲಾ ನನ ಕಂದಾ
ಮಗನೆ ಕೇಳಪ್ಪ ನನ ಮಗನೇ
ಮಡಿವಾಳು ಮಾಚಯ್ಯ
ಲೋ ಮುಟ್ಟು ತಟ್ಟು ಮುಟ್ಟು ತಟ್ಟು ಎಂತೇಳಿ
ನನ್ನೊಂದಿಗೇಲಿ ಬುಟ್ಟೆ
ಈ ಮುಟ್ಟಿನ ವಿಚಾರವ ನಿನಗೆ
ಗುಟ್ಟಿನೊಳಗ ಹೇಳುತೀನಿ || ಸಿದ್ಧಯ್ಯ || ಮಾಚಯ್ಯ ಶರಣ ||

ಮಗನೆ ಮುಟ್ಟಿನ ವಿಚಾರ
ಗುಟ್ಟುನೊಳಗೆ ಕಂದಾ
ನಾನೆ ಏಳುತೀನಿ ಕೇಳಪ್ಪ ಮಾಚಯ್ಯ
ನೀನು ಮುಟ್ಟು ತಟ್ಟು ಮುಟ್ಟುತಟ್ಟು
ಎನುತೇಳಿ ನನ ಕಂದಾ
ನನ್ನೊಂದಿಗೆ ಹೇಳಿಬುಟ್ಟೆ
ನಿನಗೆ ಮುಟ್ಟಿನ ವಿಚಾರ ಮಗನೆ ಇನ್ನೂ ಗೊತ್ತಿಲ್ಲ
ನಿನಗೆ ಮುಟ್ಟಿನ ವಿಚಾರ ಕಂದಾ ಇನ್ನೂ ತಿಳುದಿಲ್ಲಾ

ಈಗ ಮುಟ್ಟಿನ ವಿಚಾರ ನಾನು
ಹೇಳುತೀನಿ ಕೇಳು ಮಗನೇ || ಸಿದ್ಧಯ್ಯ ||

ಮುಟ್ಟು ತಟ್ಟುವ ವಿಚಾರ ನಿನಗೇನು ಗೊತ್ತು ಮಾಚಯ್ಯ
ಮುಟ್ಟಿನ ವಿಚಾರ ನಿನಗಿನ್ನೂ ತಿಳಿದಿಲ್ಲ ಮಗನೆ
ಮುಟ್ಟಿನ ವಿಚಾರ ಗುಟ್ಟಿನಲ್ಲಿ ಹೇಳ್ತಿನಿ ಕೇಳು ಮಾಚಪ್ಪ
ಮಾಚಯ್ಯ
ಲೋ ಮುಟ್ಟಿನಿಂದಲೇ ಮಗನೆ
ಈ ಭೂಮಿಯೆ ಉಟ್ಟು ತಲ್ಲ
ಲೋ ಮುಟ್ಟಿನಿಂದಲೇ ಕಂದಾ
ಈ ಲೋಕವೇ ಬೆಳೀತಲ್ಲ
ಮಗನೆ ಮುಟ್ಟಿನಿಂದಲೇ ಕಂದಾ
ಹಗಲು ಆಯ್ತಲ್ಲ
ಮುಟ್ಟಿನಿಂದಲೇ ಮಗನೇ
ಇರುಳು ಆಯ್ತಲ್ಲ
ಕಂದಾ ಮುಟ್ಟಿನಿಂದಲೇ ಕಂದಾ
ಸೂರ್ಯ ಉಟ್ಟುದನಲ್ಲಾ
ಮುಟ್ಟಿನಿಂದಲೇ ಕಂದಾ
ಚಂದ್ರ ಉಟ್ಟುದನಲ್ಲಾ
ಲೋ ಮುಟ್ಟಿನಿಂದಲೇ ಕಂದಾ
ಈ ಲೋಕವೇ ಬೆಳಕಾಯ್ತು
ಲೋ ಮುಟ್ಟಿನಿಂದಲೇ ಕಂದಾ
ಈ ಲೋಕ ಕತ್ತಲೆ ಆಯ್ತು
ಲೋ ಮುಟ್ಟಿನಿಂದಲೇ ಮಗನೇ
ನೀನುವೆ ಉಟ್ಟಿದ್ಯಲ್ಲ
ನನ್ನ ಮಡಿವಾಳು ಮಾಚಪ್ಪ
ನಿಮ್ಮ ತಾಯಿ ಹೊಟ್ಟೆಯಿಂದ ನೀನು
ಧರೆಗೆ ಬರುವಾಗ
ಮುಟ್ಟು ತಟ್ಟು ನಿನಗೆ ಆಗಲಿಲ್ವ ಮಾಚಯ್ಯ
ಲೋ ಮುಟ್ಟಿನ ಬಟ್ಟೆ ಒಗೆಯುತಿದ್ದುರು
ಗುಟ್ಟು ಗೊತ್ತಿಲ್ಲವಲ್ಲೊ || ಸಿದ್ಧಯ್ಯ ||

ಮುಟ್ಟುವ ವಿಚಾರ ನನ್ನ ಕಂದಾ
ನಿನಗೆ ಇನ್ನೂ ಗೊತ್ತಿಲ್ಲ ಮಗನೆ
ಮುಟ್ಟುನ ವಿಚಾರ ನಿನಗೆ ಇನ್ನು ತಿಳಿದಿಲ್ಲ ಮಗು ಕೆಂಪಣ್ಣ
ಮುಟ್ಟು ತಟ್ಟು ಅನುತೇಳಿ
ಮೂರು ಸಲ ನಿನ್ನ ಬಾಯಿಲೆ ಬಂದುಮೇಲೆ ನನ ಕಂದಾ

ಮಗನೆ ಮುಟ್ಟಿನ ಸೂತಕ
ನಿನ್ನಿಂದ ಕಳೆಯಬೇಕು || ಸಿದ್ಧಯ್ಯ ||

ಕಂದಾ ಮುಟ್ಟು ಅನ್ನೋ ಸೂತಕ
ನಿನ್ನಿಂದ ಮಗನೆ ಕಳಿಬೇಕು ನನ ಕಂದಾ
ಮಡಿವಾಳು ಮಾಚಪ್ಪ

ನಾ ಹೇಳುವಂತ ಮಾತ ನೀ
ಗ್ಯಾನವಾಗಿ ಕೇಳುಕಂದಾ || ಸಿದ್ಧಯ್ಯ ||

ಕೇಳಪ್ಪ ನನ ಕಂದಾ ಮಡಿವಾಳ ಮಾಚಯ್ಯ
ಈಗಲೀಗಾ ಕೀಳುಜಾತಿ ಮೇಲುಜಾತಿ ಅಂತ ಹೇಳಿಬುಟ್ಟೆ
ಈ ಮುಟ್ಟು ತಟ್ಟಿನ ಮನೆಗೆ ಯಾತಕೆ ಬರಕೋದ್ರಿ
ಧರೆಗೆ ದೊಡ್ಡಯ್ಯ ಅಂತ ಕೇಳುಬುಟ್ಟೆ
ಈ ಭೂಮಿ ಭೂಲೋಕವೇ
ನಡುವೆ ನರಲೋಕವೆ ಮುಟ್ಟು ತಟ್ಟುನಿಂದಲೇ
ಹುಟ್ಟಿದೆ ಕಂದಾ
ಮುಟ್ಟು ತಟ್ಟಿನಿಂದಲೇ ಬೆಳಗದೆ ಮಗನೆ
ಈಗ ನನ್ನ ಜೊತೇಲಿ ಮುಟ್ಟು ತಟ್ಟು ಅಂತೇಳಿ
ಮೂರು ಮಾತು ಹೇಳಿದುದಕೆ
ಮುಟ್ಟು ಅನ್ನುವಂತ ಸೂತಕ
ನರಲೋಕದಲ್ಲಿ ನಿನ್ನಿಂದ್ಲೆ ಕಳೀಬೇಕು
ಮಡಿವಾಳ ಮಾಚಯ್ಯ
ಹೆಣ್ಣು ಮಕ್ಕಳು
ಮೂರು ದಿವಸ ಮನೆ ಬಿಟ್ಟು ಹೊರಗಿರಲಿ
ಅವರ ಮುಟ್ಟಾದ ಬಟ್ಟೆ ತಕಂಡೋಗಿ
ಅವರಿಗೆ ಒಪ್ಪಿಸು ಮಾಚಯ್ಯ
ಅವರಿಗೆ ಒಪ್ಪಿಸುಬಟ್ಟು ಮ್ಯಾಲೆ ಕಂದಾ
ಒಂದು ಪಾವಕ್ಕಿ ಚಟಾಕು ಬ್ಯಾಳೆ
ಅಗ್ಗದ ಕಾಸು
ಬೆಟ್ಟಚ್ಚು ಬೆಲ್ಲ
ದಾನ ಇಸುಗಂಡು ಕಂದಾ

ಲೋ ನಾನು ಪಡದ ಭೂಮಿ ಮೇಲೆ
ಬಾಳು ಬದುಕು ನನ್ನ ಮಗನೆ || ಸಿದ್ಧಯ್ಯ ||

ಮಾಚಪ್ಪ
ನಾನು ಪಡೆದಿರುತಕಂತ ಭೂಮಿ ಮೇಲೆ ವಾಸಮಾಡು
ಇವತ್ತು ತುಂಬಿದ ಸ್ವಾಮವಾರ ಮಗನೆ
ನಿನ್ನ ಅಟ್ಟಿ ಅರಮನೆಗೆ
ನಾನು ಯಾತಕೆ ಬಂದಿ ಎಂದರೆ
ಈ ಭೂಮಿ ಭೂಲೋಕ ನಡುವೆ ನರಲೋಕದಲ್ಲಿ
ಕುರ್ಚು ಕುಂಬಾರಗೇರಿ ಒಕ್ಕಲುಗೇರಿ ವಾಜರುಗೇರಿ
ಹೊನ್ನಯ್ಯನ ಕೇರಿ ಚೆನ್ನಯ್ಯನ ಕೇರಿ
ಅರಸುದೊರೆಗಳ ಮನಿಗೆಲ್ಲಾ ಬಮದಿ
ಯಾರ್ಯಾರ ಅಟ್ಟಿಗೋದ್ರು ಕಂದಾ
ಹಾಲಗ್ರ ಮೇಲಗ್ರ ಎಳ್ಳುಂಡೆ ಕೀರು ಪಾಯಸ
ಒಬ್ಬಿಟ್ಟು ಉಳಿಯನ್ನ
ಅಪ್ಪಳ ಉಪ್ಪಿನಕಾಯಿ
ಕಜ್ಜಾಯ ತುಪ್ಪ ಎಲ್ಲಾನು ಊಟ ಮಾಡಿ ಬಂದಿವ್ನಿ
ಇವತ್ತು ನೀನು ಕೀಳು ಜಾತಿ ಅಂತ ಹೇಲಿದ್ಯಲ್ಲ ಮಗನೇ

ನಿನ್ನ ಕೀಳುಜಾತಿಯವನ ಮನೆ ಒಳಗೆ
ಹಗಲು ಭಿನ್ಯಾ ಅಳಿಯಬೇಕು || ಸಿದ್ಧಯ್ಯ ||

ಮಾಚಪ್ಪ
ನಿನ್ನ ಕೀಳುಜಾತಿ ಅಂತ ಹೇಳಿಬುಟ್ಟಿಯಲ್ಲಾ
ನಿನ್ನ ಕೀಳು ಜಾತಿಯವರ ಮನೆ ಒಳಗೆ
ನಾ ಹಗಲು ಭಿನ್ಯ ಅಳಿಬೇಕು
ನಿನ್ನ ಮನೆ ಒಳಗೆ ನನ ಕಂದಾ ಮಾಚಪ್ಪ
ಇವತ್ತು ತುಂಬಿದ ಸೋಮವಾರವಾದ್ದರಿಂದ
ನಿನ್ನ ಮನೆ ಒಳಗೆ ಊಟ ಬೋಜಣ ಮಾಡಬೇಕು ಕಂದಾ
ನಿನ್ನ ಮನೆ ಒಳಗೆ ಊಟ ಬೋಜಣ ನಾನು ಮಾಡಬೇಕಾದ್ರೆ
ಸರ್ವೆಂಟು ಬಂಧು ಬಳಗ ಜನ ಜಾತಿಯೋರ ಮನೆಗೋಗಿ
ಎಲ್ಲಾನು ಊಟ ಮಾಡಿ ಬಂದಿವ್ನಿ
ಸಪ್ಪೆ ತಿಂದಿವ್ನಿ ಉಪ್ಪು ತಿಂದಿವ್ನಿ
ಸೀಯನ್ನೆ ತಿಂದಿವ್ನಿ ನನ ಕಂದಾ
ನೀನು ಕೀಳು ಜಾತಿಯವನ ಮನೆಯಾದ್ದರಿಂದ
ನಿನ್ನ ಅಟ್ಟಿ ಅರಮನೆ ಒಳಗೆ ಮಗನೆ
ಇವತ್ತು ತುಂಬಿದ ಸ್ವಾಮವಾರಾ ನಾ ಹಗಲು ಬಿನ್ಯಾ ಕಳೀಬೇಕಾದ್ರೆ
ಮಾಂಸದ ಸಾರನ್ನ ನಾನು ಊಟ ಮಾಡಬೇಕು ಮಾಚಪ್ಪ
ಮಾಚಯ್ಯ

ಮಾಮ್ಸ ಮಾಮ್ಸಕ್ಕೆಲ್ಲ ಮಗನೆ
ಯಾರ ಮಾಂಸ ರುಚಿಕಂದಾ || ಸಿದ್ಧಯ್ಯ ||

ಮಗನೆ ಮಾಮ್ಸ ಮಾಮ್ಸಕೆಲ್ಲ
ಯಾವು ಮಾಮ್ಸ ಮಗನೆ
ರುಚಿಯೋ ನನ ಕಂದಾ ಮಡಿವಾಳು ಮಾಚಯ್ಯ

ಲೋ ರುಚಿಯಾದ ಮಾಮ್ಸದ
ಎಸರೇಳು ಎಂದುರಲ್ಲಾ || ಸಿದ್ಧಯ್ಯ ||

ಮಾಚಪ್ಪ
ನೀನು ಕೀಳುಜಾತಿಯವನ ಮನೆ ಒಳಗೆ
ಭಿನ್ಯಳಿದು ನಾನು ಊಟ ಮಾಡಬೇಕಾದರೇ
ಈಗಲೀಗಾ ಮಾಮ್ಸದ್ಸಾರು ಊಟ ಮಾಡಬೇಕು
ಮಾಂಸ ಮಾಮ್ಸಕೆಲ್ಲ ಕಂದಾ ಯಾವ ಮಾಮ್ಸ ರುಚಿ
ರುಚಿಯಾದ ಮಾಮ್ಸದ ಎಸರೇಳುಬುಡು ಕಂದಾ
ಮಡಿವಾಳ ಮಾಚಪ್ಪ ಎಂದುರು
ಜಗತ್ತುಗುರು ಧರೆಗೆ ದೊಡ್ಡೋರ ಮಾತು
ಮಡಿವಾಳ ಮಾಚಪ್ಪ
ಪಾದ ಜೋಡಿಸಿಗಂಡು
ಕೈ ಎತ್ತಿ ಮುಕ್ಕಂಡು
ಕಣ್ಣನೆವು ಕೂಡ ಮುಚ್ಚಗಂಡು
ಆ ಧರೆಗೆ ದೊಡ್ಡವರಿಗೆ ಮಾತಾಡ್ತಾವರೆ
ಸ್ವಾಮಿ ಇವತ್ತು ತುಂಬಿದ ಸ್ವಾಮಾರ ನಮ್ಮ ಮನೆಗೆ ಬಂದು
ಮಾಮ್ಸದ ಸಾರ ಊಟ ಮಾಡಬೇಕೆಂದು ಕೇಳಿರ್ಯಾ
ನನ್ನ ಮನೆ ವಳಗೆ ಭಿನ್ನಳಿದಿರ್ಯಾ ನನ್ನಪ್ಪ ಎಂದುರು
ಮಾಚಯ್ಯ
ಕಂಡುತವಾಗಿ ಭಿನ್ನಳಿತೀವಿ
ನಿನ್ನ ಮನೆ ಒಳಗೆ ಊಟ ಬೋಜಣ ಮಾಡ್ತಿನಿ
ನನಗೆ ರುಚಿಯಾದ ಮಾಮ್ಸ ಯಾವುದು ಹೇಳಿಬುಡು ಎಂದುರು
ಆಗ ಮಾಚಪ್ಪ ಯೋಚುಣಿ ಮಾಡಿಕಂಡು
ಈ ಜಗತ್ತು ಗುರುಗಳಿಂದಲೇ
ಭೂಮಿ ಪಡದವರು ಭೂಲೋಕನೆ ಪಡದವರು
ಸೂರ್ಯ ಚಂದ್ರಾದಿ
ವಿಷ್ಣು ಈಸ್ಪುರ ಬ್ರಹ್ಮ ತ್ರಿಮೂರುತಿ
ಅಷ್ಟುಕೋಟಿ ಪ್ರಪಂಚ ಪಡಕಂಡು ಬಂದಿರುವಂತ
ಜಗತ್ತು ಗುರುವಾದ ಧರೆಗೆ ದೊಡ್ಡವರಿಗೆ
ನನ್ನ ಮನೆ ಒಳಗೆ ಊಟಕೆ ಪಡಿಸಲಾರಿ ದೇವಾ
ಇವರು ಯಾರಟ್ಟಿ ಯಾರ ಮುನಿಗಾರೆ ಹೋಗಿ ಊಟಮಾಡಿಕಳ್ಳಿ
ಈ ನರಲೋಕದಲ್ಲಿ ಯಾರು ತಿನ್ನ ಬಾರದಿದ್ದಂತ
ಜಾತಿ ಮಾಮ್ಸ ಹೇಳಿಬುಡಬೇಕು
ಈ ಮಾಮ್ಸ ಹೇಳಿದ್ರೆ
ನಿನ್ನ ಮನೆ ಮಾಮ್ಸ ನನಗೆ ಬೇಡಕಣ ಮಾಚಪ್ಪ ಅಂತೇಳಿ
ಅವರೆ ಒಂಟೋಯ್ತಾರೆ ಅಂತೇಳಿ
ಮಡಿವಾಳ ಮಾಚಪ್ಪ
ಏನು ಮಾತಾಡ್ತಾರೆ ಅಂದುರೆ
ಬುದ್ದಿ
ರುಚಿಯಾದ ಮಾಮ್ಸದ ಹೇಸರೇಳ್ತಿನಿ ಕೇಳಿ
ಹೇಳು ಮಾಚಪ್ಪ
ಯಾವ ಮಾಮ್ಸ ರುಚಿ ಹೇಳಿಬುಡು ಅಂದುರು

ಕೋಳಿ ಮಾಮ್ಸ ದೇವಾ
ರುಚಿ ಇಲ್ಲ ನನ್ನಪ್ಪ
ಕುರಿ ಮಾಮ್ಸ ಗುರುವು
ರುಚಿ ಇಲ್ಲ ನನ್ನಪ್ಪ
ಗುರುವೆ ಆಡಿನ ಮಾಂಸ ದೇವಾ
ಮೊಸಳೆ ಮಾಮುಸ ಗುರುವು
ಅಪ್ಪ ಉಡಿನ ಮಾಮುಸ ದೇವಾ
ಒಂಟೆ ಮಾಂಮುಸ ಗುರುವು
ಆಮೆ ಮಾಂಸಾ ಗುರುವು
ರುಚಿ ಇಲ್ಲ ನನ್ನಪ್ಪ
ಗುರುವೆ ಉಲ್ಲೆಸರಗನ ಮಾಮಸ
ಕಡಬೆ ಮಾಮಸ ಗುರುವು
ಕಾಡೆಮ್ಮೆ ಮಾಮಸ ಗುರುವು
ದನಿನ ಮಾಂಸ ದೇವಾ
ರುಚಿ ಇಲ್ಲ ನನ್ನಪ್ಪ
ಗುರುವೆ ಹಕ್ಕಿಗಳ ಮಾಮಸ
ಪಕ್ಷಿಗಳ ಮಾಮಸ
ಹಾವುಗಳ ಮಾಮಸ
ರುಚಿ ಇಲ್ಲ ನನ ಗುರುವು
ಅಪ್ಪ ಮಾವುಸ ಮಾವುಸಕೆಲ್ಲ ಗುರುವೇ
ಮನುಷ್ಯನ ಮಾಮ್ಸ ಬಾಳ ರುಚಿ || ಸಿದ್ಧಯ್ಯ ||

ಮಾಂಸ ಮಾಂಸಕ್ಕೆಲ್ಲ ಗುರುದೇವಾ
ಮನುಷ್ಯ ಮಾಂಸ ಎಂದರೆ ಬಹುರುಚಿ ನನ್ನಪ್ಪ
ಮನುಷ್ಯನ ಕೂದು ಅಡಿಗೆ ಮಾಡ್ತೀನಿ ಬುದ್ದಿ

ಅಪ್ಪ ಅಡಿಗೆಯ ಮಾಡುತಿನಿ
ಉಂಡರಿಯಾ ಮಾಯಿಕಾರ || ಸಿದ್ಧಯ್ಯ ||

ಮನುಷ್ಯನ ಮಾವುಸ ಕೊಯ್ದು
ಅಡಿಗೆ ದುಡುಗುತೀನಿ ಗುರುವು
ಊಟ ಮಾಡಿರೀಯ ತಂದೆ
ಭಿನ್ನಳಿದಿರ್ಯಾ ನನ್ನಪ್ಪ ಎಂದುರು
ಮಡಿವಾಳ ಮಾಚಪ್ಪನ ಮಾತು
ಎರಡು ಕರಣದಲಿ ಕೇಳಿ ಜಗತ್ತುಗುರು ಧರೆಗೆದೊಡ್ಡಯ್ಯ
ಮಾಚಪ್ಪ
ಹಾಗಾದ್ರೆ ಮನುಷ್ಯನ ಮಾಂಸ ಬಾಳರುಚಿಯಾ
ಬಹು ರುಚಿ ಬುದ್ದಿ
ಮಾವುಸ ಮಾವುಸಕ್ಕೆಲ್ಲಾ ರುಚಿಯಾದ ಮಾವುಸಾ
ಮನುಷ್ಯನ ಕೂದು ಅಡಿಗೆ ಮಾಡತೀನಿ
ಊಟಮಾಡೀರಿಯಾ ತಂದೆ ಎಂದರು
ಮಾಚಪ್ಪ
ಇಂತಹ ರುಚಿಯಾದ ಮಾವುಸ ನಾನು ಊಟ ಮಾಡಲೇಬೇಕು
ಈಗಲೀಗ ಬರಿ ಬರಿದೆ ಮಾತಾಡಿಬುಟ್ಟು
ಹಾಗೆ ಹೋಗುವಂತ ಜಂಗುಮರು ನಾವಲ್ಲ
ಇಡಿ ನನ ಕಂದಾ ಇಡಿಲಾ ಮಗನೆ ಅಂತೇಳಿ
ಮುತ್ತಿನ ಜೋಳಿಗೆ ಕೈ ಹಾಕಿ
ನಾಲಕಾಣೆ ಒಂದಣ ತಗದು
ಲೋ ಇಡಿಲ ಮಾಚಪ್ಪ ನಿನ್ನ
ಎರಡು ಕೈಯ ಎಂದರಲ್ಲಾ || ಸಿದ್ಧಯ್ಯ ||

ಗುರುವೇ ಇಡಿಯೋ ಮಾಚಪ್ಪ
ಎರಡು ಕೈಯ ಎಂದುರು
ನನ್ನ ಮಂಟೇದಲಿಂಗಯ್ಯ
ಇಂತ ಧರೆಗೆ ದೊಡ್ಡೋರ ಮಾತ ಕೇಳಿಬುಟ್ಟು ಮಾಚಪ್ಪ
ನಾಳೆ ಬರುವ ಕಷ್ಠ ತಿಳಿಯದೆ ನನ ಗುರುವು
ನಾಳೆ ಬರುವ ಕೇಡು ಗೊತ್ತಿಲ್ಲದೆ ಮಾಚಪ್ಪಶ

ಅವನ ಹಣ ಅನ್ನೋ ಆಸೆಗೆ
ಅಂಗೈಯ ಒ‌ಡ್ಡಿದನಲ್ಲ || ಸಿದ್ಧಯ್ಯ ||

ನಾಳೆ ಬರುವ ಕಷ್ಠಗಳ ತಿಳಿಯದೆ ಮಡಿವಾಳ ಮಾಚಪ್ಪ
ಹಣ ಎನ್ನುವಂತ ಆಸೆಗೆ ಎರಡು ಅಂಗೈಯ ಒಡ್ಡುದಾ
ಜಗತ್ತು ಗುರು ಧರೆಗೆ ದೊಡ್ಡಯ್ಯ
ನಾಲಕ್ಕಾಣೆ ಒಂದಣ ತಗದು
ಮಾಚಪ್ಪನ ಕೈಲಿ ಕೊಟ್ಟು ಬುಟ್ಟು
ಮಾಚಪ್ಪ
ಈಗ ನಿನ್ನ ಮನೆ ಬಿಟ್ಟುಬುಟ್ಟು
ತಲಕಾಡು ಮಾಲಂಗಿ ಎರಡು ಹೊಳೆ
ಕೂಡಿದ ನದಿಗೋಗಿ ಬುಟ್ಟು
ಬಾರಿ ಖಂಡಾಯ ನಿವಾದನೆ ಮಾಡಿಕಂಡು
ನಾನು ಕೂಡ ಸ್ಥಾನ ಮಡಿ ಮಾಡಿಕಂಡು
ಶಿವಪೂಜೆ ಶಿವಗ್ಯಾನ ಮಾಡಿಕಂಡು ಮಗನೆ
ಎಲ್ಲೂ ಹೋಗದೆ ನಿನ್ನಟ್ಟಿ ಅರಮನೆಗೆ
ನಾನು ಬಂದು ಬುಡ್ತಿನಿ ಮಾಚಪ್ಪ
ನಾನು ಬರೋದೊರಳಗಾಗಿ ನಿನ್ನ ಮನೆ ಒಳಗೆ
ಅಡಿಗೆ ತಾಯಾರಾಗಿರಬೇಕು
ನಾನು ಬಂದು ಗಳಿಗೆ ಒಳಗೆ
ನಿನ್ನ ಮನೆ ಒಳಗೆ ಹಗಲ ಭಿನ್ಯಾಳಿಬೇಕು
ಮಾಚಪ್ಪ
ನರಮನುಷ್ಯರ ಮಾವುಸ ಆದ ಕಾರಣಕೆ ಹೇಳ್ತಿನಿ ಕೇಳು
ಕೆಟ್ಟದ್ದು ಒಳ್ಳೆದೆಲ್ಲ ಮುಟ್ಟಿ ಊಟ
ತಿನ್ನುವಂತೆ ಚಾಂಡಾಳ ನಾನಲ್ಲ ಮಗನೆ
ನಾನು ಮಾಂಸಸಾರ ಊಟ ಮಾಡಬೇಕಾದ್ರೆ
ಪತಿ ಉಳ್ಳದಾ ಪುರುಷನಾಗಲಿ
ಸತಿ ಉಳ್ಳದ ಮಗಳಾಗಲಿ
ಸತಿಪತಿಗಳ ಮಾಂಸ
ನಿನ್ನಟ್ಟಿ ಅರಮನೆ ಒಳಗೆ ಮುಟ್ಟವನು ನಾನಲ್ಲ
ನಾನು ಊಟ ಮಾಡಿ ಭಿನ್ನ ನಿನ್ನ ಮನೆ ಒಳಗೆ ಅಳಿಬೇಕಾದ್ರೆ
ಎಳ ವರುಷದ ಮೇಲಿನ ಮಗನಾಗಬೇಕು
ಒಂಬತ್ತ ವರುಷದ ಕೆಳಾ ಮಗನಾಗಬೇಕು
ಅಂತ ಎಳೇ ಮಗನ ನೀನು ಕೂದು
ಅಡಿಗೆ ನೀನು ದುಡುಗ ಬೇಕು || ಸಿದ್ಧಯ್ಯ ||

ಎಳಿಯ ಮಗನ ಕೂದು
ಅಡಿಗೆ ದುಡುಗಬೇಕು ಮಾಚಪ್ಪ
ಇದು ಅಲ್ಲದೆ ನನಗೆ ಭಂಗಿ ಬಾಡಾಗಬೇಕು
ಈಗ ನಿನ್ನ ಮನೆಗೆ ನಾನು ಬಂದಾಗಲೆ
ಅಗಲು ದಿನಾ ಇಳಿಬೇಕು
ರುಚಿಯಾದ ಮಾಂಸದ ಅಡಿಗೆ ಆಗಬೇಕು ಕಂದಾ
ಈಗಲೀಗಾ ಮಾಡಿಯಾ ಮಗನೆ ಮಾಡೆಯಪ್ಪ ಎಂದುರು
ಚಂಚಗಾರ ಇಸ್ಕಂಡು ಮಾತ್ರಕೆ
ಕದಿವಂತ ಮಾಚಪ್ಪ ನಾನಲ್ಲ
ದಯಮಾಡಿ ಗುರುದೇವ ಸ್ಥಾನಕೆ ದಯಮಾಡಿ ನನ್ನಪ್ಪ ಎಂದುರು
ಹೆಗಲ ಮೇಲೆ ಒತ್ತಗಂಡು ಮಾಗುರು ಮಂಟೇದುಸ್ವಾಮಿ
ಅವರು ಮಾಚಪ್ಪನ ಮನೆಯ ಬುಟ್ಟು
ಮಾಯಿಕಾರ ಬರುವುತಾರೆ || ಸಿದ್ಧಯ್ಯ ||

ಮಾಚಪ್ಪನ ಮನೆಯಾ
ಬಿಟ್ಟು ನನ್ನಪ್ಪ ಧರೆಗೆ ದೊಡ್ಡವರು ಮಂಟೇದಾಲಿಂಗಯ್ಯ
ಅವರು ಕುಕ್ಕುರು ಕಣಿವೆಗೆ
ನನ್ನ ದೇವರು ದಯ ಮಾಡುತಾರೆ || ಸಿದ್ಧಯ್ಯ ||