ಗುರು ಕೊಟ್ಟ ನಾಲಕಾಣೆ ಒಂದಣ ತಗದು
ಮಡಿವಾಳ ಮಾಚಪ್ಪ ಎರಡುಕೈಲಿ ಇಡಕಂಡು
ಮುಂದಿನ ಮನೆ ಬಿಟ್ಟು ಇಂದಲ ಮನೆಗೆ ಬಂದು
ಪಟ್ಟೆ ಮಂಚದ ಮೇಲೆ ದಡ್ಡನೆ ಬಿದ್ದುಕಂಡರು ಮಾಚಯ್ಯ
ಕಣ್ಣಲ್ಲಿ ಕಣ್ಣೀರು ಸುರಿಸುತಾ
ಮನದಲಿ ಯೋಚುಣಿ ಮಾಡ್ತಾ
ಮಡಿವಾಳ ಮಾಚಪ್ಪ ಮಕಡೆಯಾಗಿ
ಮಂಚದ ಮೇಲೆ ಮಲಗವನೆ
ಬೂಮಿಗೆ ದೊಡ್ಡವರಿಗೆ
ಮಾತು ಕೊ‌ಟ್ಟು ಮೋಸ ಹೊಂದ್ಬುಟ್ಟನಲ್ಲೋ ಗುರುವು
ಯಾರು ಮಗನಾ ಕುಯ್ಯಬೇಕು
ಈಗ ಕೂದು ಅಡಿಗೆ ಮಾಡಬೇಕು
ಯಾರ ಮಗನಾ ಕೂದು ದೇವಾ
ಅಡಿಗೆ ದುಡುಗಲಿ ಗುರುವು
ಜಗತ್ತು ಗುರುವಾದ ಧರೆಗೆ ದೊಡ್ಡವರಿಗೆ
ಎಡೆಪಡುಸ್ತೀನಿ ಅಂತೇಳಿ ಮಡಿವಾಳ ಮಾಚಪ್ಪ
ಪಟ್ಟೆಮಂಚುದ ಮೇಲೆ ಮಲಿಕಂಡು
ದುಃಖ ಮಡುತಾ ದುಃಖ ಪಡುತಾ
ಮೊಕಾಡ್ನೆಯಾಗಿ ಮಲಗವರೆ ಮಾಚಪ್ಪ
ಅವರ ಮಡದಿ ಮಲ್ಲಿಗೆ ಮಾದೇವಮ್ಮ
ತಾನಕ್ಕೆ ನೀರು ಕಾಯಿಸಿಬುಟ್ಟು
ಪೂಜೆಗೆ ಪುಷ್ಮ ಕೂಡ ತಂದು ಮಡಗಿಬುಟ್ಟು
ಅಡಿಗೆ ದುಡಿಕಂಡು ನನ್ನ ಪತಿ ದೇವರು ಮಾಚಪ್ಪ ಯಾಕೆ ಬಂದಿಲ್ಲ
ಬೀದಿ ಮೇಲೆ ಬಟ್ಟೆ ತಕೊಂಡೋದ್ರೋ ಏನೋ ಕಾಣೆ
ಇಲ್ವಾದ್ರೆ ಯಾರಟ್ಟಿ ಯಾರಮನಿಗೋದ್ರೊ ಕಾಣಿನಲ್ಲ
ಸ್ಥಾನಕ್ಕೆ ಟೈಮಾಗಿ ಬುಡ್ತು
ಶಿವಪೂಜೆಗೆ ಒತ್ತಾಗಿ ಬುಡ್ತು
ಊಟ ಬೋಜನ ಕೂಡ ನನ್ನ ಪತಿ ಮಾಡಿಲ್ವಲ್ಲ ಅಂತೇಳಿ
ಮನಿಂದ ಬೀದಿಗೆ ಬರುತಾರೆ ಆದಿಬೀದಿ ನೋಡುತಾರೆ
ಎಲ್ಲೂ ಮಾಚಪ್ಪನ ದರುಷಣ ಇಲ್ಲ
ಉಬ್ಬೆ ವಲೆ ನೋಡಿದುರು
ಅಲ್ಲೂ ಕೂಡ ಮಾಚಪ್ಪ ಇಲ್ಲಾ
ಇಂದಲ ಮನೆಗೆ ಬಂದು
ತಾಳು ಮಂಚದ ಮೇಲೆ ಮೊಕಾಡ್ನೆಯಾಗಿ ಮಲಗಿರುವಂತ
ಪತಿದೇವರು ಮೂಕ ಮಠ ಮಠನೇ ನೋಡಿದ್ರು
ಓಡೋಡಿ ಬಂದು ಮಲ್ಲಿಗೆ ಮಾದೇವರಿ
ಧರೆಗೆ ದೊಡ್ಡೋರ ಪಾದ ನೆನೀತಾ
ಮಡಿವಾಳ ಮಾಚಪ್ಪನ ಬಳಿಗೆ ಬಂದು
ಪಟ್ಟೆಮಂಚದ ಮ್ಯಾಲೆ ತಲೆದಸಿ ಇಟಗಂಡು
ಗಂಡನ ತಲೆ ತಗದು ತೊಡೆ ಮೇಲೆ ಮಡಿಕಂಡು
ಪತಿದೇವರೆ ಮಾಚಪ್ಪ
ಯಾತಕ್ಕಿಷ್ಟು ದುಃಖ ಪಟ್ಟುಬುಟ್ರಿ
ಯಾತಕ್ಕಿಷ್ಟು ಸಂಕ್ಟ ಪಟ್ರಿ ಗುರುವು
ದೇವಾ
ನಿಮ್ಮ ಕಣ್ಮಲಿ ಬಂದ ಕಣ್ಣೀರು
ಭೂಮಿಗರದು
ಹೊನ್ನೊಸಲು ಮುಂಭಾಗದಲ್ಲಿ
ಗುಂಡು ಗಟ್ಟಿ ನಿಂತವಲ್ಲ ಸ್ವಾಮಿ
ನಿಮ್ಮ ಕಣ್ಣಲಿ ಕಣ್ಣೀರು ಗುರುವೇ
ಇನ್ನುವೆ ತಪ್ಪನಿಲ್ವ || ಸಿದ್ಧಯ್ಯ ||

ಕಣ್ಣಲ್ಲೀ ಕಣ್ಣೀರು ದೇವಾ
ಇನ್ನುಮುನ್ನ ತಪ್ಪನಿಲ್ವ ಪತಿದೇವರು ಮಾಚಪ್ಪ
ಯಾತಕೆ ದುಃಖ ಪಟ್ಟೀರಿ ಸ್ವಾಮಿ
ನಿಮಗೆ ಬಂದ ಕಷ್ಠ ನನಗಲ್ವ ದೇವಾ
ನನಗೆ ಬಂದಿರುವಂತ ಕಷ್ಟ ನಿಮಗಲ್ವ ಸ್ವಾಮಿ
ನಿಮಗೆ ಬಂದ ಕಷ್ಟ ಬಂಧಾನ ನನಗೂ ಸ್ವಲ್ಪ ಹೇಳಿ ಗುರುವು ಎಂದುರು
ಮಲ್ಲಿಗೆದೇವಿ
ನೀನು ನೋಡಿದ್ರೆ ಒಂದು ಕಾಸಿನ ಎಣ್ಣೆಂಗಸು
ನಾನು ನೋಡಿದ್ರೆ ಒಂದಾನೆ ಉಳ್ಳಾದಾ ಪುರುಷ
ನನ ಕೈಲಾಗದಿರುವಂತ ಕಾರ್ಯ
ನಿನ್ನ ಕೈಲೇನಾಗಬಲ್ಲದು ಮಡದಿ

ನನ್ನ ಪತಿಯನ್ನೊ ಆಸೆಯೊಂದಿಗೆ
ಮರೆತು ಬುಡು ಎಂದರಲ್ಲ || ಸಿದ್ಧಯ್ಯ ||

ನನ್ನ ಋಣ ನಿನಗೆ ತೀರಿತು ಮಡದಿ
ನನ್ನ ಆಸೆ ಇವತ್ತಿಗೆ ಮರತುಬುಡು
ಮಡದಿ ಮಲ್ಲಿಗೆ ದೇವಿ ಎಂದುರು
ಪತಿ ದೇವರೆ
ಈ ಮಾತು ನಿಮ್ಮ ಬಾಯ್ಲಿ ಯಾಕೆ ಬರಬೇಕು ಸ್ವಾಮಿ
ನಿಮ್ಮಲ್ಲಿರ್ತಕಂತಾ ವಾರ್ತೆ ನನ್ನೊಂದಿಗೆ ಹೇಳಿಬುಡಿ ಗುರುದೇವಾ ಎಂದುರು
ಮಲ್ಲಿಗೆ ಮಾದೇವಿ
ಇವತ್ತು ಎಂಟುಗಂಟೆ ಜಾಮದಲ್ಲಿ
ಧರೆಗೆ ದೊಡ್ಡೋರು ನಮ್ಮ ಮನೆಗೆ ಬಂದು
ನಿನ್ನ ಮನೆ ಒಳಗೆ ಅಗಲು ಭಿನ್ನಳಿಯಬೇಕು
ಊಟ ಮಾಡಬೇಕು ಮಾಚಪ್ಪ
ನಿನ್ನ ಮನೇಲಿ ಮಾಮುಸು ಸಾರ
ಅಡಿಗೆ ಮಾಡಬೇಕು
ರುಚಿಯಾದ ಮಾವುಸ ಯಾವುದು ಹೇಳು
ಎಂದು ಕೇಳಿದ್ರು ಮಲ್ಲಿಗೆದೇವಿ
ಈ ಭೂಮಿಗೆ ದೊಡ್ಡವರಿಗೆ
ನಮ್ಮ ಮನೆ ಒಳಗಡೆ ಅಡಿಗೆ ಮಾಡಿ
ಊಟಕೆ ಬಡಿಸಬಾರುದು
ನಮ್ಮ ಮನೆ ಒಳಗೆ ಮಾವುಸದ ಅಡಿಗೆ
ಮಾಡಬಾರದು ಅನುತೇಳಿ
ಯಾರು ತಿನ್ನಬಾರದಿದ್ದಂತ ಜಾತಿ ಮಾವುಸ ಹೇಳಬೇಕೆಂದುಬುಟ್ಟು
ಈ ಭೂಮಿ ಭೂಲೋಕದಲ್ಲಿರ್ತಕಂತಾ
ಜೀವಜಂತು ಪ್ರಾಣಿಗಳ ಮಾವುಸ ಒಂದು ಚೆನ್ನಾಗಿಲ್ಲ ಸ್ವಾಮಿ
ಮನುಸುನ ಮಾವುಸ ಬಾಳಾ ರುಚಿ ಎಂದುಬುಟ್ಟೆ
ಅಂತ ರುಚಿಯಾದ ಮಾವುಸ ಊಟ ಮಾಡಲೇಬೇಕು
ಮನುಷ್ಯನ ಕೊಯ್ದು ಅಡಿಗೆ ಮಾಡಿಬುಡು ಮಾಚಪ್ಪ
ಸ್ನಾನ ಮಾಡಿಕಂಡು ಬತ್ತೀನಿ ಅಂದುಬುಟ್ಟು
ನಾಲಕ್ಕಾಣೆ ಕೆಂಚಗಾರ ಕೊಟ್ಟು ಬುಟ್ಟು
ತಲಕಾಡು ಮಾಲಂಗಿಗೆ ಸ್ಥಾನಕ್ಕೋಗವರೆ
ಈಗ ಸ್ಥಾನ ಮಾಡಿಕಂಡು ನನ ಮನೆಗೆ ಬತ್ತರೆ ಮಡದಿ
ಅವರು ಬರೋದ್ರೋಳಗಾಗಿ
ನಾನು ಮನುಷ್ಯನ ಕೂದು ಅಡಿಗೆ ಮಾಡಬೇಕು

ಯಾರು ಮಗನ ಕುಯ್ಯಬೇಕು
ಈಗ ಕೂದು ಅಡಿಗೆ ಮಾಡಬೇಕು
ನನ್ನ ಗುರುವಿಗೆ ಎಡಿಯಾ ನಾನು ಪಡಿಸಬೇಕು || ಸುವ್ವ ಬಾ ಚೆನ್ನ ||

ಯಾರ ಮಗನ ಕೂದು ಅಡಿಗೆ ದುಡುಗಿ
ಧರೆಗೆ ದೊಡ್ಡೋರ್ಗೆ ಎಡೆ ಪಡಿಸ್ಲಿ
ಮಡದಿ ಮಲ್ಲಿಗೆ ದೇವಿ ಎದುರು
ಪತಿ ದೇವರೆ ಮಾಚಪ್ಪ
ಇದೇ ಬಾಳ ದೊಡ್ಡ ಕಾರ್ಯ ಅಂತೇಳಿ
ಇಷ್ಟೊಂದು ದುಃಖ ಮಾಡಿಬುಟ್ರಿಯಾ
ಪತಿದೇವರೇ
ಮೇಲಕ್ಕೆದ್ದೇಳೀ
ಸ್ಥಾನ ಮಡಿ ಮಾಡಕಂಡು
ಶಿವಪೂಜೆ ಮಾಡಕಂಡು
ಊಟ ಭೋಜಣೆ ಮಾಡಕಂಡು
ವಿಳ್ಯ ಕೂಡ ಸಲ್ಲಿಸಿಗಂಡು
ಇದೇ ಮಂಚದ ಮೇಲೆ ಕೂತಗಂಡು ಕೇಳಿ
ಮನುಷ್ಯನ ಕೂದು ಅಡಿಗೆ ಮಾಡುವಂತ ರೀತಿ ಎಳ್ತಿನಿ
ಬನ್ನಿ ಸ್ವಾಮಿ ಎಂದುರು
ಆಗ ಮಾಚಪ್ಪ
ಮಡದಿ ಮಾತ ಕೇಳಿಕಂಡು
ಸ್ಥಾನದ ಮನೆಗೆ ಬಂದು
ಸ್ತಾನ ಮಡಿ ಮಾಡಿ
ಶಿವಪೂಜೆ ಶಿವಗ್ಯಾನ ಮಾಡಕಂಡು
ಹಾಲು ಅನ್ನ ಪಾಲು ಪರಸಾದ ಕೂಡ
ಊಟ ಮಾಡಕಂಡು
ವೀಳ್ಯಕೂಡ ಸಲ್ಲಿಸ್ಕಂಡು
ಅದೇ ಪಟ್ಟೆ ಮಂಚದ ಮೇಲೆ ಕುಳಿತುಗಂಡು
ಮಡದಿ ಕುಳಿತವರೆ
ಮಲ್ಲಿಗೆ ದೇವಿ
ಈಗ ಧರೆಗೆ ದೊಡ್ಡವರು ನನ್ನ ಮನೆಗೆ ಬರುವಂತ ಟೈಮಾಗಿ ಬುಡ್ತು
ಅವರು ಬರೋದ್ರೊಳಗಾಗಿ ಅಡಿಗೆ ತಯಾರಾಗಿರಬೇಕು ಮಡದಿ
ಮನುಷ್ಯನ ಕೂದು ಅಡಿಗೆ ಮಾಡುವಂತ ರೀತಿ ಹೇಳಿಬುಡು ಎಂದುರು
ಪತಿದೇವುರ್ರೆ‍ ಮಾಚಪ್ಪ
ಧರೆಗೆ ದೊಡ್ಡವರು ಎಂದುರೆ ಭೂಮಿಗೆ ದೊಡ್ಡವರು
ಭೂಲೋಕಕ್ಕೆ ಹಿರಿಯವರು
ಅಂತಾ ಜಗತ್ತು ಗುರುಗಳಿಗೆ ಮಾತು ಕೊಟ್ಟು
ಮೋಸ ಹೊಂದಬಾರದು ಅಂತೇಳಿ
ನಿಮಗೆ ಎಳ್ಳಷ್ಟು ಗೊತ್ತಾಗನಿಲ್ವಾ ಸ್ವಾಮಿ
ಗುರುದೇವಾ
ರಾಜಬೀದಿ ಒಳಗೆ
ಕಂಡೋರು ಮಕ್ಕಳು ಆಟ ಪಾಠ ಆಡ್ತಾವೆ ಸ್ವಾಮಿ
ಆಡುವಂತ ಮಕ್ಕಳ ಕರೆತಂದು
ಮೋಸದಿಂದ ಪಡೆದಂತೆ ನಮ್ಮ ತಾಯಿತಂದೆಗಳು
ನಮ್ಮ ಖಂಡುತವಾಗಿಯೂ ಬುಡದಿಲ್ಲಾ
ಧರೆಗೆ ದೊಡ್ಡವರು ಕೂಡ

ಮಾಡಿದಂತ ಪರಸಾದ ಸಲ್ಲಸದಿಲ್ಲ
ನಮ್ಮ ಸತ್ಯ ಎಂಬುವದು ಎಳ್ಳಷ್ಟೂ ಉಳಿಯದಿಲ್ಲ || ಸಿದ್ಧಯ್ಯ ||

ಪತಿದೇವರೇ
ಕಂಡವರ ಮಕ್ಕಳ ಕರಕಂಡು ಕೊಯ್ದು ಅಡಿಗೆ ಮಾಡಿಬುಟ್ರೆ
ಮಕ್ಕಳ ಪಡೆದವರ ತಾಯಿ ತಂದೆಗಳು ಸ್ವಾಮಿದ
ಕಂಡುತಾವಾಗು ನಮ್ಮ ಬುಡದಿಲ್ಲ ಗುರುವು
ಧರೆಗೆ ದೊಡ್ಡವರು ಕೂಡ ಊಟ ಮಾಡದಿಲ್ಲ
ನಮ್ಮ ಸತ್ಯ ಭಕುತಿ ಎನ್ನತಕ್ಕಂಥಾದ್ದು
ಎಳ್ಳೂಮನಿಯಷ್ಟು ಉಳಿಯದಿಲ್ಲ

ಒಂದು ಕಣ್ಣು ಕಣ್ಣಲ್ಲ ದೇವಾ
ನನಗೆ ಒಬ್ಬ ಮಗ ಮಗನಲ್ಲ
ನನ್ನ ಹೊಟ್ಟೇಲಿ ವುಟ್ಟವನೆ ಕಂದಾ ವೀರಣ್ಣ || ಸುವ್ವ ಬಾ ಚೆನ್ನ ||

ಒಂದು ಕಣ್ಣು ಕಣ್ಣಲ್ಲ ಒಬ್ಬ ಮಗ ಮಗನಲ್ಲ
ಒಂದು ಕಣ್ಣು ಕಣ್ಣಲ್ಲ ಗುರುವು
ಅಯ್ಯಾ ಒಬ್ಬ ಮಗ ಮಗನಲ್ಲ ಸ್ವಾಮಿ
ನಮ್ಮ ಹೊಟ್ಟೇಲಿ ಹುಟ್ಟವನೆ
ಏಳು ವರುಸದ ಮಗ
ಕಂದಾ ವೀರಣ್ಣ
ಗುರುದೇವಾ
ಶಕ್ರೆಪಟ್ಟಣದಾ
ದೊರೆಗಳ ಮಕ್ಕಳ ಜೊತೆ ಒಳಗೆ
ಕುಂಬಳ್ಳಿ ಮಠದ ಪಾಠಶಾಲೆಗೆ
ನನ್ನ ಮಗ ಓದಕೋಗವನೆ ಸ್ವಾಮಿ
ಓದಕಂಡು ನನ್ನ ಮಗ ವೀರಣ್ಣ
ನನ್ನ ಅಟ್ಟಿ ಅರಮನೆಗೆ ಬರ್ತರೆ ಗುರುವು
ನನ್ನ ಮಗ ಬರುವಾಗ
ನಾನು ಮಾತ್ರ ನನ್ನ ಮಗನಿಗೆ
ಎದುರಾಗಿ ಮುಖತೋರದಿಲ್ಲ
ಅಡಿಗೆ ಮನೆಗೆ ಮರೆಯಾಗಿ ಹೊರ್ಟೊಯ್ತೀನಿ ಸ್ವಾಮಿ
ನನ ಮಗನು ವೀರಣ್ಣ ಬಂದು
ನಮ್ಮ ತಾಯಿ ಎಲ್ಲಪ್ಪ ಅಂತ ಕೇಳಿದ್ರೆ
ನಿಮ್ಮ ತಾಯಿ ಮನೆಲಿಲ್ಲ ಕನಪ್ಪಾ
ಅಜ್ಜಮ್ಮನ ಮನೆಗೆ ಅಬ್ಬಕ್ಕೊಂಟೋಗವಳೆ ಅಂದುಬುಟ್ಟು
ನನ್ನ ಮಗನಿಗೆ ಹಾಲು ಅನ್ನ ಪಾಲು ಪರಸಾದ ಊಟ ಮಾಡಿಸಿ
ಅನ್ನ ಊಟ ಮಾಡಿಸಿ
ಕಾಗಡಿ ತೊಟ್ಲಿಗೆ ಮಗನ ತಕೊಂಡೋಗಿ ಮನುಗುಸಿ ಗುರುವು
ನಿದ್ರೆ ಮಾಡುವಂತ ಮಗನ ಮಾತ್ರ
ಮೋಸದಿಂದ ಕೊಲ್ಲಬೇಡಿ
ಒಂದು ಅಳ್ಳೆನೀರ ತಕೋಂಡೋಗಿ
ಮಗನ ಮುಖಕ್ಕೆ ಎರಚಿಬುಟ್ಟು
ಮಗನ ಎಚ್ಚರ ಮಾಡಿಕಳ್ಳಿ ಸ್ವಾಮಿ
ಆ ಮಗನ ಎತ್ತಿಗಂಡು ಬಂದು
ಒನ್ನೊಸಲು ಮ್ಯಾಲೆ ಮಲಗುಸಿಗಂಡು
ನಾವನಾರು ಒಂಬತ್ತು ತಿಂಗಳು
ಹೊತ್ತಿ ತೆತ್ತಿ ಸಾಕಿ ಸಲಗಿದ ಎತ್ತತಾಯಿ
ನನ್ನ ಮಗನ ಕತ್ತು ಕೊಯ್ಯುವಂತೆ ನಿಮ್ಮನ್ನು
ಕಣ್ಣಿಂದ ನೋಡಿ ಸವುರಿಸಲಾರೆ ಗುರುವು
ನೀವು ಕೂಡ ಜಲುಮ ಕೊಟ್ಟತಂದೆ
ಮಗನ ಕೊಲ್ಲದಿಕ್ಕೆ ಮನಸು ಬರದಿಲ್ಲ

ಗುರುವೆ ಕಣಿಗೆ ಬಟ್ಟೆ ದೇವಾ
ಕಟ್ಟಿಗಳ್ಳಿ ಮಾಚಪ್ಪ
ಕೈಲಿ ಚೂರಿ ಗುರುವು
ಇಡಕಳ್ಳೀ ಗುಣ ಗುರುವು
ಗುರುವೆ ಮಂಡಿಗಾಲ ತಗದು
ಮಗನ ಎದೆಯ ಮೇಲೆ
ಮಡಕಂಡು ನನ ಗುರುವು
ನನ್ನ ಧರೆಗೆ ದೊಡ್ಡವರಿಗೆ
ಕೈ ಎತ್ತಿ ಮುಗಿಬೇಕು || ಸಿದ್ಧಯ್ಯ ||

ಗುರುವೇ ಧರೆಗೆ ದೊಡ್ಡವರಿಗೆ
ಕೈ ಎತ್ತಿ ಮುಗುದು
ಮಂಟೇದಲಿಂಗಯ್ಯನ ಪಾದಡ
ಮನದಲ್ಲಿ ನೆನೆದು

ಈ ಖಂಡಾಯ್ದ ಮೂರ್ತಿಗೆ
ನನ್ನ ಕಂದಾನ ಕೂದುಬುಡಪ್ಪ|| ಸಿದ್ಧಯ್ಯ ||

ಇಂತ ಧರೆಗೆ ದೊಡ್ಡವರಿಗೆ
ನನ್ನ ಮಗನ ಕೂದುಬುಡಪ್ಪ || ಸಿದ್ಧಯ್ಯ ||

ಧರೆಗೆ ದೊಡ್ಡವರಿಗೆ ಸ್ವಾಮಿ
ನನ್ನ ಮಗನ ಕೂದುಬುಡು
ಪತಿದೇವರೆ ಮಾಚಪ್ಪ ಎಂದುರು
ಮಡದಿ ಮಾತ ಕೇಳಿಕಂಡು ಮಡುವಾಳ ಮಾಚಪ್ಪ
ಶಿವಶಿವಾ ಎನುತೇಳಿ ಎರಡು ಕರ್ಣ ಮುಚ್ಚಿಗಂಡಾ
ಹರ ಹರಾ ಎನುತೇಳಿ ಎರಡು ನೀತಿ ಕೂಡ ಮುಚ್ಚಿಗಂಡು
ಮಡದಿ ಮಲ್ಲಿಗೆ ದೇವಿ ತೂಕ ನೇತ್ರ ಕಣ್ಣಾರೆ ನೋಡಕಂಡು
ಏನು ಮಡದಿ ಮಲ್ಲಿಗೆ ದೇವಿ
ಯಂತಾ ಮಾತು ಯಂತಾ ವಾರ್ತಿ ಎಳಿಬುಟ್ಟೆ ಮಡದಿ

ಎತ್ತ ತಾಯಿ ಬಾಯಿಲಿ ಮಡದಿ
ಇಂತ ಮಾತು ಬರಬಹುದಾ
ನಾನು ಜಲ್ಮಕೊಟ್ಟ ತಂದೆ ಮಗನಾ ಕೊಲ್ಲಬಹುದಾ || ಸುವ್ವ ಬಾ ಚೆನ್ನ ||

ಎತ್ತ ತಾಯಿ ಬಾಯಲ್ಲಿ
ಇಂತ ಮಾತು ಇಂತ ನುಡಿ ಬರಬಹುದ ಮಲ್ಲಿಗೆ ದೇವಿ
ಜಲುಮ ಕೊಟ್ಟ ತಂದೆ
ನಾನು ಮಗನ ಕೊಲ್ಲಬಹುದ ಮಡದಿ
ನನ್ನ ಮಗನು ಕಂದಾ ವೀರಣ್ಣನ
ಕಂಡುತವಾಗು ನಾನು ಕೊಲ್ಲಲಾರೆ ಮಡದಿ
ಮಲ್ಲಿಗೆ ದೇವಿ
ಕಂಡುತವಾಗು ನನ್ನ ಮಗನಾ
ನಾನು ಕೊಲ್ಲುಲಾರೆ ಮಲ್ಲಿಗೆ ದೇವಿ

ತಾಯಿ ಮಗ ಸೇರಿಕಂಡು
ನನ್ನ ನೀವು ಕೂದುಬುಡುದೇನೆ || ಸಿದ್ಧಯ್ಯ ||

ತಾಯಿಮಗ ಸೇರಿಕಂಡು
ನನ್ನನೆ ಕೂದು ಅಡಿಗೆ ದುಡುಗಿ ಬುಡು ಮಡದಿ ಎಂದುರು
ಪತಿದೇವರೇ ಮಾಚಪ್ಪ
ಮಗನ ಕೊಂದು ಅಡಿಗೆ ದುಡುಗ ಬೇಕಲ್ಲ ಅಂತೇಳಿ
ಯಾತಕೆ ದುಃಖ ಪಟ್ಟಿರಿ
ಧರೆಗೆ ದೊಡ್ಡೋರ ಕರುಣ ನಮ್ಮಲಿದ್ರೆ ಸ್ವಾಮಿ
ಇವತ್ತು ಕೂದು ಅಡಿಗೆ ದುಡುಗಿದಂತ ಮಗ
ನಾಳೆ ದಿವಸ ನನ್ನ ಹೊಟ್ಟೇಲಿ ಹುಟ್ತಾನೆ ಗುರುವು

ಗುರುವೇ ಒಂದೇ ಮನಸಿನ ಒಳಗೆ
ನನ್ನ ಮಗನ ಕೂದುಬುಡಪ್ಪ || ಸಿದ್ಧಯ್ಯ ||

ಪತಿದೇವರೇ
ಧರೆಗೆ ದೊಡ್ಡೋರ ಮೈಮೆ ಮೈತ್ಗಾರ
ನಮ್ಮಲ್ಲಿದ್ದರೆ ಸ್ವಾಮಿ
ಇವತ್ತು ಕೂದು ಅಡಿಗೆ ಮಾಡಿದ ಮಗ
ನಾಳೆ ದಿವಸ ನನ್ನ ಹೊಟ್ಟೇಳಿ ಉಟ್ಟೇ ಉಟ್ತಾನೆ ಸ್ವಾಮಿ
ಒಂದೆ ದುಡದಲ್ಲಿ ಒಂದೇ ಮನಸಲ್ಲಿ
ಜಗತ್ತು ಗುರು ಧರೆಗೆ ದೊಡ್ಡೋರಿಗೆ
ನನ್ನ ಮಗನ ಕೂದು ಅಡಿಗೆ ದುಡಿಗಿಬುಡಿ ಸ್ವಾಮಿ ಎಂದುರು
ಇವರ ಸತಿ ಪತಿ ಮಾಡತಿಕಳುವಂತ ಮಾತು
ತಲಕಾಡು ಮಾಲಂಗಿ ಒಳಗೆ ಸ್ನಾನ ಮಾಡಿತ್ತಿದ್ದಂತ
ಧರೆಗೆ ದೊಡ್ಡೋರ ಪಾದಕೆ ಅರುವಾಯ್ತು
ಆಗ ಜಗತ್ತು ಗುರುಗಳು ಯೋಚನೆ ಮಾಡುತವರೇ
ನೋಡಿದ್ಯಾ
ಮಡಿವಾಳ ಮಾಚಪ್ಪನ ಮಡದಿ ಮಲ್ಲಿಗೆದೇವಿ
ಮಗನ ಕೂದು ಅಡಿಗೆ ಮಾಡಿ ಅಂತೇಳಿ
ಮಾಚಪ್ಪನಿಗೆ ಎಳ್ತಾರೆ
ನನ್ನ ಮಗನ ಕೂದು ಅಡಿಗೆ ದುಡುಗನಾರಿ ಅಂತೇಳಿ ದುಃಖಪಡ್ತಾನೆ
ಹೆಡ್ತಿ ದುಡ ಗಂಡನಿಗೆ ಇಲ್ವಲ್ಲ
ಇವರ ಇಬ್ಬರ ಮನಸನ್ನ ಒಂದು ಮಾಡಬೇಕು
ಎನುತೇಳಿ ಜಗತ್ತು ಗುರು ಧರೆಗೆ ದೊಡ್ಡಯ್ಯ

ಅವರು ಕಪ್ಪುಧೂಳೂತ ತಗದರಂತೆ
ಮಾಚಪ್ಪುನಿಗೆ ಉರುಬುತಾರೆ || ಸಿದ್ಧಯ್ಯ ||

ಗುರುವೆ ಕಪ್ಪು ಧೂಳುತಾ
ತಗದವರೆ ನನ್ನಪ್ಪ
ಮಡಿವಾಳು ಮಾಚಪ್ಪನ ಮೈ ಮೇಲುರುಬವರೆ
ಆಗ ಮಡಿವಾಳು ಮಾಚಪ್ಪ
ಗುರುವೇ ಗುರುದೇವಾ

ಧರೆಗೆ ದೊಡ್ಡವರಿಗೆ ಸ್ವಾಮಿ
ಮಾತು ಕೊ‌ಟ್ಟು ಮೋಸ ಹೊಂದುಬಾರದು
ಎನುತೇಳುಬುಟ್ಟು ಗುರುವು
ಅಯ್ಯಾ ಚಿಂತೆಯ ಮಾಡುತಾನೆ
ನನ್ನ ಮಡುವಾಳ ಮಾಚಯ್ಯ ಶರಣ || ಸಿದ್ಧಯ್ಯ ||

ಯಾವಾಗ ಧರೆಗೆ ದೊಡ್ಡವ್ರು ಕಪ್ಪುಧೂಳ್ತ ಉರುಬುದ್ರೊ
ಆಗ ಮಡಿವಾಳ ಮಾಚಪ್ಪನವರು
ಜಗತ್ತು ಗುರುಗಳಿಗೆ ಮಾತುಕೊಟ್ಟು ಮೋಸ ಹೊಂದುಬಾರ್ದು
ಇವತ್ತಿನ ದಿವ್ಸದಲ್ಲಿ ಗುರುದೇವಾ
ನನ್ನ ಮಗನು ಏಳು ವರ್ಷದ ಕಂದ ಎಳೆಯ ವೀರಣ್ಣ
ನನ್ನ ಮಗನಾದ ವೀರಣ್ಣನನ್ನು ಕೂದು
ಅಡಿಗೆ ದುಡುಗಿ ಧರೆಗೆ ದೊಡ್ಡವರಿಗೆ ಎಡೆ ಪಡುಸಬೇಕು ಅಂತೇಳಿ
ಸತಿ ಪತಿ ಗಂಡಾ ಹೆಂಡ್ತೀರು
ತಾರ್ಸಿ ಗುಡುಸಿ
ರಂಗಾಲೆ ಬಿಟ್ಟು ಶೃಂಗಾರ ಮಾಡ್ಕೊಂಡು
ನಡುಮನೆವೊಳಗೆ ಕೈಯ್ಯೆಣ್ಣೆ ಜ್ಯೋತಿ ಕೂಡ ಕಸ್ಸಿಕೊಂಡು

ಕತ್ತಿಯ ಮಸುಕೊಂಡ
ಕೈಯಲ್ಲಿ ಹಿಡುಕೊಂಡ
ಅವನು ಮಗನು ಬರುವಾ ದಾರೀ ನೋಡುತಾನೆ || ಸುವ್ವಾ ಬಾ ಚನ್ನ ||

ಆಗ ಮಡುವಾಳ ಮಾಚಪ್ಪನವರು
ಕತ್ತಿ ಮಸಕೊಂಡು ಕೈಲಿಡಕಂಡು
ಮಗನಾದ ವೀರಣ್ಣ ಬರುವುದ
ದಾರಿದಾರೀ ನೋಡ್ತ ನಿಂತಿದ್ರು
ಏಳು ವರ್ಷದ ಮಗನು ಕಂದ ವೀರಣ್ಣ
ಸಕ್ಕರೆ ಪಟ್ಟಣದ ದೊರುಗಳ ಮಕ್ಕಳು ಜೊತೇವೊಳಗೆ
ಕುಂಬಳ್ಳಿ ಮಠದಲ್ಲಿ ಓದಿಕೊಂಡು
ಸಿಲೇಟು ಪುಸ್ತಕ ತಗದು ಕಂಕಳಿಗೆ ಇರೀಕೊಂಡು
ನೂರೆಂಟು ಜನ ಮಕ್ಕಳ ಜೊತೆಗುಡ್ಕಂಡು

ಅವನು ಪಾಠಶಾಲೆ ಬಿಡುವುತಾನೆ
ತನ್ನ ಮನೆಗೆ ಬರುವುತಾನೆ || ಸಿದ್ಧಯ್ಯ ||

ಗುರುವೇ ಓದೋ ಮಠವ ಕಂದ
ಬಿಟ್ಟು ಬಿಟ್ಟು ನನ್ನ ಕಂದ
ಏಳು ವರ್ಷದ ಮಗನು ಕಂದ ವೀರಣ್ಣ
ಅವನು ತನ್ನವರ ಮನೆಗೆ ಕಂದ
ತಾನೀಯೆ ಬರುವುತಾನೆ || ಸಿದ್ಧಯ್ಯ ||