ತನ್ನ ಹಟ್ಟಿಯಾದ ಮನೆಗೆ ಕಂದಾ
ತಾನಾಗಿ ಬರುತ್ತಿದ್ದ ಕಂದ ವೀರಣ್ಣ
ವೀರಣ್ಣ ಬರುವುದ ಧರೆಗೆ ದೊಡ್ಡವ್ರು ಕಣ್ಣಿಂದ ನೋಡುದ್ರು
ನೋಡಿದೆಯಾ ಮಡಿವಾಳ ಮಾಚಪ್ಪನ ಮಗ
ಕಂದ ವೀರಣ್ಣ ಓದುಕೊಂಡು ಸೀದ ಮನುಗೋಯ್ತವ್ನೆ
ಆ ಮಗನ ಸತ್ಯ ನೋಡ್ಲಿಲ್ಲವಲ್ಲ
ಆ ಮಗನ ಭಗತಿ ತಿಳೀಲಿಲ್ಲವಲ್ಲ
ಆ ಮಗನ ಸಾಹಸ ತಿಳೀಲಿಲ್ಲ ಅಂತೇಳಿ
ಮಾಯ್ಕಾರದ ಒಡೆಯ ಮಂಟೇದಲಿಂಗಪ್ಪ
ಆ ಮಾಚಪ್ಪನ ಮಗ ಬರುವಂಥ ದಾರೀಗೆ

ಓಡಿ ಓಡಿ ಬಂದರಲ್ಲ
ನಮ್ಮ ಹೆತ್ತಯ್ಯ ಮಂಟೇದಸ್ವಾಮಿ || ಸಿದ್ಧಯ್ಯ ||

ಓಡಿ ಓಡಿ ಬಂದು ಜಗತ್ತು ಗುರು ಧರೆಗೆ ದೊಡ್ಡಯ್ಯ
ಮಾಚಪ್ಪ ಮಗ ಕಂದ ವೀರಣ್ಣ ಬರುವಂಥ ದಾರೀವೊಳಗೆ
ಅರಳೀಕಟ್ಟೆ ಜಗಲಿ
ಹೊನ್ನರಳಿ ಮರ
ಅರಳೀ ಕಟ್ಟೆ ಜಗುಲಿಗೆ ಬಂದು
ಅರಳೀ ಕಟ್ಟೆ ಜಗುಲೀಮ್ಯಾಲೆ ಕೂತ್ಕಂಡು ಮಾಗುರು ಮಂಟೇದಸ್ವಾಮಿ
ನೂರೆಂಟು ಜನ ಮಕ್ಕಳು ಜೊತೇಲಿ ಬರುವಂಥ
ಕಂದ ವೀರಣ್ಣನ ಏನಂಥ ಕರಿತಾರೆ ಅಂದ್ರೆ

ಕಂದ ಯಾರಪ್ಪ ನನ್ನ ಕಂದ
ಯಾರಪ್ಪ ನನ್ನ ಮಗುನೆ
ಮಾಚಪ್ಪನ ಮಗನೆ
ಲೋ ಮಲ್ಲಿಗೆ ದೇವಿ ಮಗನೆ
ವೀರಣ್ಣ ವೀರಣ್ಣ ಎನ್ನುವರು ನನ್ನ ಕಂದ
ಅಯ್ಯಾ ವೀರಣ್ಣ ಅನ್ನುವವನು
ಈ ಗುಂಪಿನೊಳಗೆ ಯಾರು ಕಂದ || ಸಿದ್ಧಯ್ಯ ||

ಮಗನೇ ವೀರಣ್ಣ ಎನ್ನುವವರು ಈ ಗುಂಪಿನೊಳಗೆ ಕಂದ
ಯಾರಪ್ಪ ನನ್ನ ಮಗನೆ ಹಾಗಂದವರೇ ನನ್ನ ಗುರುವು
ಅಯ್ಯಾ ಧರೆಗೆ ದೊಡ್ಡವರ ಮಾತ
ನೂರೆಂಟು ಹುಡುಗರೂವೆ ಕಿವಿಯಾರ ಕೇಳಿ
ಸುಮ್ಮನೆ ನಿಂತುಕೊಂಡರು
ಮಾಚಪ್ಪನ ಮಗ ಕಂದ ವೀರಣ್ಣ

ಧರೆಗೆದೊಡ್ಡವರ ಬಳಿಗೆ
ಗುಡೂಗುಡನೆ ಬರುವುತಾನೆ || ಸಿದ್ಧಯ್ಯ ||

ಧರೆಗೆ ದೊಡ್ಡವ್ರು ಬಳಿಗೆ ಬಂದು ಕಂದ
ಏಳು ವರ್ಷದ ಮಗ ಕಂದ ವೀರಣ್ಣ
ಧರೆಗೆ ದೊಡ್ಡವರ ಮುಂಭಾಗದಲ್ಲಿ ನಿಂತುಕೊಂಡು
ಜಗತ್ತು ಗುರುಗಳು ಮೊಕಾ ಕೂಡ ನೋಡಕೊಂಡು
ಸ್ವಾಮಿ ಜಂಗಮ ದೇವ ಮಡಿವಾಳ ಮಾಚಪ್ಪನ ಮಗನೇ
ಮಲ್ಲಿಗ ಮಾದೇವಿ ಮಗನೆ
ಕಂದ ವೀರಣ್ಣ ಯಾರು ಅಂತ ಕರಿದಿಯಲ್ಲಪ್ಪ
ಗುರುವೇ ನಾನೇ ಮಡಿವಾಳ ಮಾಚಪ್ನ ಮಗ
ನನ್ನ ತಾಯಿಯ ಹೆಸ್ರು ಮಲ್ಲಿಗಮಾದೇವಿ
ನನ್ನ ಹೆಸ್ರೇ ಕಂದ ವೀರಣ್ಣ ಸ್ವಾಮಿ
ನನ್ನ ಯಾತಕ್ಕೆ ಕರಿದ್ರಿಯಪ್ಪ
ಏನು ಕಾರಣಕ್ಕೆ ಕೂಗಿಬುಟ್ರಿ ಗುರುವು ಎನುತೇಳಿ
ವೀರಣ್ಣ ಬಂದು ಧರೆಗೆ ದೊಡ್ಡವರ ಮುಂಭಾಗದಲ್ಲಿ ನೆಗುನೆಗ್ತಾ ನಿಂತ್ಕಂಡ
ವೀರಣ್ಣ ಖಂಡಿತವಾಗಲೂ ನೀನು ಮಾಚಪ್ಪನ ಮಗನೋ
ಖಂಡಿತವಾಗಲೂ ಮಾಚಪ್ಪನ ಮಗನೇ ನಾನು ಸ್ವಾಮಿ
ಏನಪ್ಪ ನನ್ನ ಕಂದ ವೀರಣ್ಣ
ನಿನ್ನ ಮೊಕ ನೋಡಿದ್ರೆ ನನ್ನ ಕಂದ
ಏಳು ವರ್ಷದ ಮಗನಾಗಿ ಕಾಣ್ತಿಯಲ್ಲೊ ಮಗು

ವೀರಣ್ಣ ಏಳು ವರ್ಷಕೆ ಕಂದಾ
ನಿನಗೆ ಮರಣಗಾಲ ಬಂದೀತಲ್ಲೋ || ಸಿದ್ಧಯ್ಯ ||

ಕಂದಾ ಏಳುವರ್ಷಕೆ ಕಂದಾ
ಮರಣಗಾಲ ಕಂದಾ
ಬಂದೀತು ನನ್ನ ಕಂದಾ
ಮಗನೇ ತಾಯಿಯ ಆಸೆ
ಮಾಡಬೇಡ ಕಂದಾ
ತಂದೆಯಾ ಆಸೆ
ಮಾಡಬೇಡ ನನ್ನ ಮಗವು
ನಿಮ್ಮ ತಂದೆ ಬಳಿಗೆ ಹೋದರೆ ಕಂದಾ
ನಿನ್ನ ಪ್ರಾಣ ಉಳಿಯೋದಿಲ್ಲ || ಸಿದ್ಧಯ್ಯ ||

ತಾಯಿ ತಂದೆ ಆಸೆ ಮಾಡಕೊಂಡು ಕಂದಾ
ಇವತ್ತು ನೀನು ಮನೆಗೆ ಹೊರಟೋಗ್ಬುಟ್ರೆ ಮಗನೇ
ಖಂಡಿತವಾಗ್ಲೂ ನಿನ್ನ ಪ್ರಾಣ ಉಳಿಯೋದಿಲ್ಲ ಮಗು
ವೀರಣ್ಣ ಇಲ್ಲಿ ನಿಂತಿರುವಂಥ ಹುಡುಗ್ರಲ್ಲಿ
ಯಾರ್ಯಾರು ನಿನಗೆ ಸ್ನೇಹಬಂಧು ಮಕ್ಕಳಿದ್ದರೆ
ಅವರು ಮನಗೊಂಟೋಗಪ್ಪ
ಅವರು ಮನೆಗೆ ಹೋಗದೇ ಹೋದ್ರೂವೆ ಕಂದ
ನಿಮ್ಮ ಅಜ್ಜಮ್ಮನ ಮನೆ ಹತ್ತಿರದಲ್ಲಿದ್ರೆ ಅಲ್ಲಿಗಾದ್ರು ಹೊಂಟೋಗು ಮಗು
ಇವತ್ತು ಎಲ್ಲರೂ ಒಂದು ದಿವ್ಸ
ಯಾರ ಹಟ್ಟಿ ಯಾರ ಮನೇಲಾದ್ರೂ ಇದ್ದು
ನಾಳೆ ಪ್ರಾತಃ ಕಾಲಕ್ಕೆ ನಿಮ್ಮ ತಾಯ್ತಂದೆ ಬಳೀಗೆ ಹೋಗು ಕಂದ
ನಿನ್ನ ಪ್ರಾಣ ಉಳೀತಾದೆ ಮಗನೆ
ಈಗೇನಾರು ನಿನ್ನ ಮನೆಗೆ ನೀನು ಹೊಂಟೋದ್ರೆ

ನಿನ್ನ ಪ್ರಾಣ ಕಂದ
ಖಂಡತಿವಾಗ್ಲೂ ಉಳಿಯೋದಿಲ್ಲ || ಸಿದ್ಧಯ್ಯ ||

ಗುರುದೇವಾ ಯಾತಕ್ಕೆ ಸ್ವಾಮಿ ಯಾತಕ್ಕೆ
ನನ್ನ ಪ್ರಾಣ ಉಳಿಯೋದಿಲ್ಲ ಅಂತ ಹೇಳಿರಿ ಗುರುವು
ಅದೇನು ಹೇಳುಬುಡಿ ಸ್ವಾಮಿ ಹೇಳಿ ಗುರುದೇವ ಅಂದುರು
ವೀರಣ್ಣ ಯಾರೋ ಜಂಗುಮರು ಇವತ್ತು ನಿನ್ನ ತಂದೆ ಬಳಿ ಹೋಗಿದ್ದರಂತೆ
ನಿಮ್ಮ ತಂದೆ ಮಾಚಪ್ಪ
ಮನುಷ್ಯನ ಮಾಂಸಾ ಬಾಳ ರುಚಿಯಂತ ಹೇಳ್ಬುಟ್ರುಂತೆ ಕಂದ
ಆ ರುಚಿಯಾದ ಮಾಂಸ ಊಟ ಮಾಡಲೇಬೇಕು
ಹಾಗೇ ಮನಸನ್ನ ಕೊಂದು ಅಡಿಗೆ ಮಾಡಬುಡು
ಹಣ ಕೊಡ್ತೀನಿ ತಕ್ಕೋ ಮಾಚಪ್ಪ ಅಂದ್ಬುಟ್ರು
ಹಣ ತಗದು ಜಂಗಮ ನಿನ್ನ ತಂದೆ ಕೈ ಕೊಟ್ಬುಟ್ಟು ಹೋಗಿದ್ದರಂತೆ
ನಿಮ್ಮ ತಂದೆ ಮಾಚಪ್ಪನವರು ಹಣ ಈಸಿ ಮನೇಲಿ ಮಡಿಕೊಂಡು
ನನ್ನ ಮಗನ್ನೇ ಕೂದು ಅಡಿಗೆ ಮಾಡಬುಡಬೇಕು ಎನುತೇಳಿ
ಕತ್ತಿ ಮಸಕೊಂಡು ಕೈಲಿಡುಕೊಂಡು ನಿನ್ನನ್ನೇ ಕಾಯ್ತಾ ಕೂತವರೇ ಕಣಪ್ಪ
ಈಗ ಹೋಗಿಬುಟ್ರೆ ಕಂದ
ನಿಮ್ಮ ತಾಯಿ ತಂದೆ ಇಬ್ರೂ ಸೇರ್ಕಂಡು
ನನ್ನ ಕೂದು ಅಡಿಗೆ ದುಡುಗ್ಬುಟ್ಟು
ಆ ಜಂಗುಮರಿಗೆ ಎಡೇಪಡಸ್ಬುಟ್ಟು ಊಟಕ್ಕೆ ಇಕ್ಕುಬುಡ್ತಾರೆ
ನಿನ್ನ ಪ್ರಾಣ ಉಳಿಯೋದಿಲ್ಲ
ಎಲ್ಲಾರು ಯಾರೆ ಮನೆಗಾದರೂ ಒಂಟೋಗ್ಬಡು ಮಗನೆ ಎಂದರು
ಜಂಗಮದೇವ ನಿಮ್ಮ ಬಾಯಲ್ಲಿ ಇಂಥ ಮಾತು ಬರಬಾರ್ದು
ನಿಮ್ಮ ಬಾಯಲ್ಲಿ ಈ ರೀತಿ ನುಡಿ ನುಡಿಬಾರ್ದು ಸ್ವಾಮಿ
ಜಲುಮ ಕೊಟ್ಟ ತಂದೆ ಎತ್ತ ತಾಯಿ ಕೈಲಿ ಪ್ರಾಣ ಕೊಟ್ಟುಬುಟ್ರೆ
ನನಗೆ ಮಾತ್ರ ನರಕ ಬರೋದಿಲ್ಲ ಸ್ವರ್ಗ ಸಿಕ್ಬುಡ್ತದೆ

ನಾನು ನಿಮ್ಮ ಮಾತು ಮೀರಿದ್ರೂನು
ನನ್ನ ತಂದೆ ಮಾತ ಮೀರಲಾರೆ || ಸಿದ್ಧಯ್ಯ ||

ನನ್ನ ಕೈಬುಡಿ ಎನ್ನ ಗುರುವೇ
ಹೋಗುತೀನಿ ಎಂದರಲ್ಲ || ಸಿದ್ದಯ್ಯ ||

ಗುರುವೇ ನಿಮ್ಮ ಮಾತು ಗುರುವೂ
ನಾನು ಮೀರುದ್ರೂವೇ ದೇವ
ನಮ್ಮ ತಾಯಿ ತಂದೆ ಮಾತ ನಾ ಕಂಡಿತ ಮೀರುದಿಲ್ಲ

ನಮ್ಮ ತಾಯಿ ತಂದೆ ಬಳಿಗೆ
ನಾ ಹೋಗುತೀನಿ ಎಂದರಲ್ಲ || ಸಿದ್ಧಯ್ಯ ||

ತಾಯಿ ತಂದೆ ಬಳಿಗೆ
ನಾನಾಗಿ ಹೊರಟೋಯ್ತಿನಿ ಸ್ವಾಮಿ ಎನುತೇಳಿ
ಏಳು ವರ್ಷದ ಮಗ ಕಂದ ವೀರಣ್ಣ
ಧರೆಗೆ ದೊಡ್ಡವರ ಕೈನೆ ಕಿತ್ಕಂದು
ರಾಜ ಬೀದಿವೊಳಗೆ ಓಡೋಡಿ ಬರುವಾಗ
ಬತ್ತೀನಿ ನನ್ನ ತಂದೆ ಬತ್ತೀನಿ ನನ್ನ ತಾಯಿ
ತಂದೆ ಮಾಚಪ್ಪ ತಾಯಿ ಮಲ್ಲಿಗೆ ದೇವಿ ಎನುತೇಳಿ ನನ್ನ ಕಂದ
ಅವನು ರಾಜಬೀದಿವೊಳಗೆ ಕಂದ
ಅಲುಕೊಂಡು ಬರುವುತಾನೆ || ಸಿದ್ಧಯ್ಯ ||

ರಾಜ ಬೀದಿವೊಳಗೆ ಬರ್ತೀನಿ ತಂದೆ ಮಾಚಪ್ಪ ಬಂದ್ಬುಟ್ಟಿ
ತಾಯಿ ಮಲ್ಲಿಗೆದೇವಿ ಎನುತೇಳಿ
ಕೂಗಿಕೊಂಡು ವಾಲಿಕೊಂಡು ಓಡಿ ಬರುತ್ತಿದ್ದ
ಬರುವಂತ ಮಗನ ಶಬುದ ಸ್ವರ ಕೇಳಿಕೊಂಡ್ರು ತಾಯಿ ಮಲ್ಲಿಗದೇವಿ
ಏನಪ್ಪಾ ಪತಿದೇವರೆ ಮಾಚಯ್ಯ
ನನ್ನ ಮಗ ಈರಣ್ಣ ಬಂದ್ಬುಟ್ಟ ಸ್ವಾಮಿ
ನನ್ನ ಮಗ ಬಂದ್ಬುಟ್ಟ ಗುರುವೇ
ನನ್ನ ಮಗ ಬರುವಾಗ ನಾ ಎದುರಾಗಿರೋದಿಲಲ
ಅಡುಗೆ ಮನೆಗೆ ಮರೆಯಾಗಿ ಹೊರಟೋಯ್ತೀನಿ ಸ್ವಾಮಿ
ನಾನು ಹೇಳಿದ ರೀತಿ ಮಾಡ್ಬುಡಿ ಅಂತೇಳಿ
ಆ ತಾಯಾದ ಮಲ್ಲಿಗೆ ದೇವಿ
ಅಡಿಗೆ ಮನೆಗೆ ಬಂದು ಮರೆಯಾಗಿ ಕೂತವ್ಳೆ
ಮಡುವಾಳು ಮಾಚಪ್ಪ
ಕತ್ತಿ ಮಸಕಂಡು
ಪಟ್ಟೆ ಮಂಚದಿಂದ ಕೆಳಗೆ ಮಡೀಕೊಂಡು
ಪಟ್ಟೆ ಮಂಚದ ಮೇಲೆ ಮಾಚಪ್ಪ ಕೂತ್ಕಂಡು
ಬರುವಂಥ ಕಂದ ವೀರಣ್ಣನ ಕಣ್ಣಿಂದ ನೋಡುತ್ತಾ
ಕಣ್ಣಲ್ಲೇ ಕಣ್ಣೀರು ಸುರಿಸುತ್ತಾ ಕೂತಿದ್ದ
ಆಗ ಮಲ್ಲಿಗೆದೇವಿ
ರಾಜ ಬೀದಿವೊಳಗೆ ಬತ್ತೀನಿ ತಂದೆ ಮಾಚಪ್ಪ ಬತ್ತೀನಿ ತಾಯಿ
ಮಲ್ಲಗದೇವಿ ಅಂತೇಳೀ
ಆಲುಕೊಂಡು ಕೂಕ್ಕೊಂಡು ಬರುವಂಥ
ಮಗನ ಶಬುದ ಸ್ವರಗಳ ಕೇಳುತ
ಅಡುಗೆ ಮನೇವೊಳಗೆ ತಾನಾಗಿ ಕೂಡಕಂಡ
ನನ್ನ ಮಗ ಕೊಕ್ಕೊಂಡು ಬರುವಂಥ ಶಬುದ ಕೇಳ್ತದೆ
ನನ್ನ ಮಗ ಆಲ್ಕೊಂಡು ಬರುವಂಥ ಸ್ವರ ಕೇಳ್ತದೆ
ಇಲ್ಲಿ ಕೂಗುತ್ತಾ ಬರ್ತಿರೋನೆ ನನ್ನ ಮಗ ಈರಣ್ಣ ಅಂತೇಳಿ ಮಲ್ಲಿಗದೇವಿ
ಮಗನ ನೆನೀತಾ ಏನಂಥ ಸಂಕಟ ಪಡ್ತಳೆ ಅಂದರೆ

ಅಯ್ಯೋ ವಿಧಿಯೇs
ಮುಂದೆ ಯಾರು ನನಗೆ ಗತಿಯೂs
ಅಯ್ಯೋ ವಿಧಿಯೇs
ಮುಂದೆ ಯಾರು ನನಗೆ ಗತಿಯೂs || ಸಿದ್ಧಯ್ಯ ||

ಒಂದು ಕಣ್ಣು ಕಣ್ಣಲ್ಲ ಗುರುವೂ
ಕುಲಕೆ ಒಬ್ಬ ಮಗನಲ್ಲ
ಒಂದು ಕಣ್ಣು ಕಣ್ಣಲ್ಲ ದೇವಾ
ಕುಲಕೆ ಒಬ್ಬ ಮಗನಲ್ಲ
ಅಯ್ಯಾ ಒಬ್ಬ ಮಗನ ನಾನು ಪಡೆದು
ಈ ರೀತಿ ಆದನಲ್ಲ

ಅಯ್ಯೋ ವಿಧಿಯೇs
ಮುಂದೆ ಯಾರೂ ನಮಗೆ ಗತಿಯೂs
ಅಯ್ಯಾ ಹಣೆಯಲ್ಲಿ ಬರದುದಕೆ
ಮೊದಲುಂಡ ಸಾಲಕ್ಕೆ
ಅಯ್ಯೋ ಈ ರೀತಿ ಬ್ರಹ್ಮ ನನಗೇ
ಬರುದಾನೂ ಜಗದೀಸ

ಆಹಾ ವಿಧಿಯೇs
ಮುಂದೆ ಯಾರೂ ನಮಗೆ ಗತಿಯು

ಅಯ್ಯಾ ತಡಕತೀನಿ ಎಂದಾರೆ ಮಗನೇ
ಆ ಯೋಗದ ದುಃಖಾವೆ ಇಲ್ಲ
ತಡಕತೀನಿ ಎಂದರೆ ಕಂದ
ಆ ಯೋಗದ ದುಃಖವೇ ಇಲ್ಲ
ಅಯ್ಯಾ ಬುಡಸ್ಕತೀನಿ ಎಂದಾರೆ ಕಂದ
ತಂದೆಯವರ ಫಲವಿಲ್ಲ

ಆಹಾ ವಿಧಿಯೇs
ಏನು ತಂದೆ ಅಯ್ಯೋ ವಿಧಿs
ಅಯ್ಯಾ ತಂದೆ ಇಲ್ಲ ತಾಯಿ ಇಲ್ಲ
ಬಂಧು ಇಲ್ಲ ಬಳಗವಿಲ್ಲ
ತಂದೆ ಇಲ್ಲ ತಾಯಿಯಿಲ್ಲ
ತಂದೆ ಇಲ್ಲ ತಾಯಿಯಿಲ್ಲ
ಅಯ್ಯೋ ಯಾರ್ಯಾರೋ ನನಗೆ ದೇವ
ಮೊದಲಲ್ಲಿ ಜಗದೀಸ

ಆಹಾ ವಿಧಿಯೇ
ಮುಂದೆ ಯಾರೂ ನನಗೆ ಗತಿಯೂs
ತಂದೆ ಆಸೆ ನಿನಗಿಲ್ಲ ಕಂದ
ತಾಯಿ ಆಸೆ ನಿನಗಿಲ್ಲ ಮಗನೇ
ನಮ್ಮಾಸೆ ನಿನಗೆ ತೀರ್ತು
ವೀರಣ್ಣ ಅಯ್ಯೋ ಆಸೆ ನಮಗೂವೆ ಮುಗುದಿತ್ತು || ಸಿದ್ಧಯ್ಯ ||

ವೀರಣ್ಣ ವೀರಣ್ಣ ಎನ್ನುವ
ಆಸೆ ಇವತ್ತಿಗೆ ತೀರ್ತು ಮಗು
ಇವತ್ತಿಗೆ ಮುಗುದೋಯ್ತು ಎನುತೇಳಿ ತಾಯಿ ಮಲ್ಲಿಗದೇವಿ
ಮಗನ ಶಬುದ ಸ್ವರ ಕೇಳುತ
ಅಡುಗೆ ಮನೆವೊಳಗೆ ದುಃಖಳಿಸಿ ದುಃಖ ಪಡುತ್ತಿದ್ದಳು
ಮಡದಿ ದುಖ ನೋಡ್ತ ಮಾಚಪ್ಪ
ಮಗನು ಬರುವುದ ಕಣ್ಣಿಂದ ನೋಡ್ತ ಮಾಚಯ್ಯ

ಪಚ್ಚೆ ಮಂಚದ ಮೇಲೆ ಗುರುವು
ಅತ್ತು ದುಃಖ ಮಾಡುತರೆ || ಸಿದ್ಧಯ್ಯ ||

ಪಟ್ಟೇ ಮಂಚದ ಮೇಲೆ ಕುಳುತ ಮಾಚಪ್ಪ
ವಿಧವಿಧವಾದ ಯೋಚುನೆ ಮಾಡುತ
ವಿಧವಿಧವಾದ ದುಃಖ ಪಡ್ತ ಕುಳುತಿದ್ದ
ಏಳು ವರ್ಷದ ಮಗ ಕಂದ ವೀರಣ್ಣ
ಓಡೋಡಿ ಬಂದು ಕಂದ
ತಂದೆ ಮಾಚಪ್ಪನ ಮುಂಭಾಗದಲ್ಲಿ ಬಂದು ನಿಂತುಕೊಂಡು
ಯಾಕಪ್ಪ ತಂದೆ ಮಾಚಯ್ಯ
ನನ್ನ ಮೊಕ ನೋಡ್ತೀರಿ
ಕಣ್ಣಲ್ಲಿ ಕಣ್ಣೀರು ಕೆಡುಗ್ತೀರಿ
ದುಃಖಿಳಿಸಿ ದುಃಖ ಪಡ್ತಿಯಲ್ಲಾ ತಂದೆ
ಆಳುಬ್ಯಾಡಿ ದುಃಖಪಡುಬ್ಯಾಡಿ ತಂದೆ ಅಂತೇಳೀ
ಪಟ್ಟೇ ವಸ್ತರದಲ್ಲಿ ಮಗನು
ತಂದೆ ಕಣ್ಣೀರ ತೊಡೆದನಾಗ || ಸಿದ್ಧಯ್ಯ ||

ಪಟ್ಟೆ ವಸ್ತ್ರದಲ್ಲಿ ಕಂದ
ತಂದೆ ಮಾಚಪ್ಪನ ಕಣ್ಣೀರು ತೊಡೆದು
ದುಃಖ ಪಡುಬ್ಯಾಡಿ ತಂದೆ ಮಾಚಪ್ಪ
ನಮ್ಮ ತಾಯಿ ಮಲ್ಲಿಗ ಮಾದೇವಮ್ಮ ಎಲ್ಲಿಗೊರಟೋದ್ರಪ್ಪ
ಎಲ್ಲಿಗೆ ಹೊರಟೋದ್ರು ತಂದೆ ಎಂದರು
ವೀರಣ್ಣ ನಿನ್ನ ತಾಯಿ ಮಲ್ಲಗಿದೇವಿ ಮನೆಯಲ್ಲಿ ಇಲ್ಲ ಕಣಪ್ಪ
ಅಜ್ಜಮ್ಮನ ಮನೆಗೆ ಹಬ್ಬಕ್ಕೆ ಹೊರಟೊದ್ರು ಕಂದ
ಈಗಲೀಗ ನಿನ್ನನ್ನಾರು ಕರ್ಕೊಂಡು
ನಿಮ್ಮ ತಾಯಿ ಹೋಗಬಾರ್ದ ಅಂತ್ಹೇಳಿ
ಬರುವಂತವನ ನಿನ್ನ ನೋಡ್ಕಂಡು ಕಣ್ಣಲ್ಲಿ ಕಣ್ಣೀರು ಬಂತು
ಅಜ್ಜಮ್ಮನ ಮನೆಗೆ ಹಬ್ಬಕ್ಕೆ
ನಿಮ್ಮ ತಾಯಿ ಒಬ್ಳೇ ಹೊಂಟೋದ್ಲು
ನಿನ್ನ ಬುಟ್ಟು ಹೋಗ್ಬುಟ್ಲು ಕಂದ ಅಂದರು
ತಂದ ಮಾಚಪ್ಪ ನಮ್ಮ ತಾಯಿ ಮಲ್ಲಿಗೆ ಮಾದೇವಮ್ಮ
ಯಾವ ಕಾಲದಲ್ಲೂ ಕೂಡ
ನನ್ನ ಬಿಟ್ಟು ಅಜ್ಜಮ್ಮನ ಮನೆಗೆ ಹಬ್ಬಕ್ಕೋಗ್ಲಿಲ್ಲ
ನೀವು ಹೇಳುವಂಥ ಮಾತು ಸುಳ್ಳೂ

ನನಗೆ ದುಃಖ ಮಾಡುವ ಶಬುದ
ಕೇಳುತಾದೆ ನಮ್ಮ ತಂದೆ || ಸಿದ್ಧಯ್ಯ ||

ನಮ್ಮ ತಾಯಿ ಅಳುವ ಶಬುದ
ನನಗೆ ಕೇಳುತಾದೆ ನನ್ನ ತಂದೆ || ಸಿದ್ಧಯ್ಯ ||

ತಂದೆ ಮಾಚಪ್ಪ
ನಮ್ಮ ತಾಯಿ ಮಲ್ಲುಗ ಮಾದೇವಮ್ಮ
ಅಡುಗೇ ಮನೇಲಿ ಅಳುವ ಶಬುದ ಕೇಳ್ತದೆ
ನನ್ನ ಕೈಬುಡಿ ಗುರುದೇವ ನಾನೆ ಹೋಗಿ ನೋಡ್ತೀನಿ ಅಂತೇಳಿ
ತಂದೆ ಮಾಚಪ್ಪನ ಕೈ ಕಿತ್ತುಕೊಂಡು
ಕಂದ ವೀರಣ್ಣ ಓಡೋಡಿ ಬಂದು ತಾಯಿ ಮಲ್ಲಿಗ ಮಾದೇವಮ್ಮನ
ಮುಂಭಾಗದಲ್ಲಿ ನಿಂತುಕೊಂಡು
ತಾಯಿಮೊಕ ಕಣ್ಣಾರೆ ನೋಡುತ್ತಾ
ಯಾಕವ್ವ ನನ್ನ ತಾಯಿ
ಅಮ್ಮ ಕಡುದುಃಖ ಪಡಿತೀಯೆ
ನಿನ್ನ ಕಣ್ಣಲ್ಲಿ ಕಣ್ಣೀರು ತಾಯಿ ತಪ್ಪಲಿಲ್ವಾ || ಸುವ್ವಾ ಬಾ ||

ಕಣ್ಣು ಕಣ್ಣೀರು ತಪ್ಪಲಿಲ್ವ ತಾಯೀ
ಯಾತಕ್ಕೇ ದುಃಖ ಪಟ್ಟೀಯವ್ವ
ಯಾತುಕ್ಕ ಸಂಕ್ಟ ಪಟ್ಟೀಯೆ ತಾಯಿ ಎಂದುರು
ವೀರಣ್ಣ ಯಾತುಕ್ಕೂ ಇಲ್ಲ ಬಾ ಮಗನೇ
ನಿಮ್ಮ ತಂದೆ ಮಾಚಪ್ಪನಿಗೆ
ಮೊಸರು ಬುಟ್ಟು ಅನ್ನ ಇಕ್ಕಿ ಕಂದ
ಮೊಸರ್ನಲ್ಲೇ ಕಲ್ಲಿತ್ತಲ್ಲ ಮಡದಿ ಅಂತ ಕೆನ್ನೇ ಮೇಲೆ ಹೊಡದ್ರು ಕಂದ
ಅದಕ್ಕಾಗಿ ದುಃಖ ಪಡ್ತಿದ್ದಿ ಬಾಪ್ಪ ಮಗನೇ ಎಂದರು
ತಾಯಿ ಮಲ್ಲಿಗದೇವಿ ಮುಂಗೈಯ ಹಿಡಕ್ಕಂಡು ಕಂದಾ
ತಂದೆ ಮಾಚಪ್ಪನ ಬಳಿಗೆ ತಾಯಮ್ನ ಕರ್ಕೊಂಡು ಬಂದು
ಮಾಚಪ್ಪನ ಮುಂಭಾಗದಲ್ಲಿ ತಾಯಿ ನಿಲ್ಲಿಸ್ಕಂಡು
ತಂದೆ ಮಾಚಪ್ಪ
ಮೊಸರ್ನಲ್ಲಿ ಕಲ್ಲಿರೋದು ನಿಜವಾ
ನಮ್ಮ ತಾಯಿ ಕೆನ್ನೇ ಮೇಲೆ ಹೊಡೆಯಬಹುದಾ ತಂದೆ
ಮಾಚಪ್ಪ ನಾನು ಇದ್ರೂ ಸರಿಯೇ
ಸತ್ತು ಸ್ವರ್ಗ ಸೇರಬುಟ್ರೂ ಸರಿಯೇ ಗುರುವು

ಎತ್ತ ತಾಯಿಗೆ ನನ್ನ ತಂದೆ
ನೀವು ಕೊಲೆಯ ಮಾಡಬ್ಯಾಡಿ || ಸಿದ್ಧಯ್ಯ ||

ನಮ್ಮ ತಾಯಿ ಮಲ್ಲಿಗ ಮಾದೇವಮ್ಮನಿಗೆ ದೇವಾ
ಕೊಲೆ ಮಾತ್ರ ಕೊಡಬ್ಯಾಡಿ ತಂದೆ ಮಾಚಪ್ಪ ಅನುತೇಳಿ
ತಂದೆ ಮಾಚಪ್ಪನ ಕಾಲಿಗೆ ಬಿದ್ದು ಶರಣ ಮಾಡಿದ ಕಂದ ವೀರಣ್ಣ
ವೀರಣ್ಣ ವೀರಣ್ಣ ಖಂಡಿತವಾಗೂ ನಿನ್ನ ತಾಯಿಗೆ
ನಾನು ಕೊಲೆ ಮಾಡೋದಿಲ್ಲ ಕಂದ
ಪಾದ ಮುಟ್ಟಬ್ಯಾಡ ಏಳುಕಂದ ಎದ್ದೇಳು ಅಂತೇಳಿ
ಮಗನಾದ ವೀರಣ್ಣನ ಎಬ್ಬುರಿಸಿಕೊಂಡು
ಮಗನ ಕರೆದು ಮುತ್ತಿಕ್ಕೆ ಮುದ್ದಮಾಡುತ್ತ
ತಾಯಿ ಮಲ್ಲಿಗದೇವಿ ಮಡಿವಾಳ ಮಾಚಪ್ಪ
ಅವರ ಆಸರಿಕೆ ಬೇಸರಿಕೆ ಎಲ್ಲಾನು ತೀರಿಸ್ಕಂಡು
ಮಗನಾದ ವೀರಣ್ಣನಿಗೆ ಹಾಲು ಅನ್ನ ಪಾಲು ಪಾರಸಾದ ಊಟ ಮಾಡಿಸಿ
ಕಾಗಡಿ ತೊಟ್ಲಿಗೆ ತಂದು
ಮಗನ ಮನುಗುಸೊಂಡು ತಂದೆ ಮಾಚಪ್ಪ ತಾಯಿ ಮಲ್ಲಿಗದೇವಿ
ವೀರಣ್ಣ ಮನುಗಿ ನಿದ್ರೆ ಮಾಡಪ್ಪ
ಮನಿಕೋ ಕಂದಾ ಅಂತ್ಹೇಳಿ
ಆ ಕಡೆ ಮಾದೇವಮ್ಮ ತೂಗ್ತರೆ
ಈ ಕಡೆ ಮಾಚಪ್ಪ ತೂಗ್ತನೆ
ತೂಗುವಂಥಾ ತಾಯ್ತಂದೆ ಕಣ್ಣಿಂದ ನೋಡುತ್ತಾ
ಏಳು ವರ್ಷದ ಮಗ ಕಂದ ವೀರಣ್ಣ

ಕಣ್ಣನ್ನೇ ಮುಚ್ಚಲಿಲ್ಲ
ಕಂದ ಹಲ್ಲನ್ನು ಕಚ್ಚಲಿಲ್ಲ
ಅವನು ತಂದೆ ತಾಯಿ ಮೊಕುವಾ ನೋಡುತಾನೆ || ಸುವ್ವಾ ಬಾ ||

ಕಣ್ಣು ಮುಚ್ಚಲಿಲ್ಲ ಕಂದ ಹಲ್ಲು ಕಚ್ಚಲಿಲ್ಲ ಮಗನೂ
ತಾಯಿ ತಂದೆ ಮೊಕವ ಮಟಮಟನೆ ನೋಡ್ತ ಮಲಗಿದ್ದ
ಮನುಗಿರುವಂಥ ಮಗನ ನೋಡ್ಕಂಡು ಮಾಚಪ್ಪ
ಮನಸಲ್ಲಿ ಮನದಲ್ಲಿ ಏನು ಯೋಚನೆ ಮಾಡ್ತಾನೆ ಅಂದರೆ
ಧರೆಗೆ ದೊಡ್ಡವರು ಮಂಟೇದಲಿಂಗಪ್ಪ
ಈಗ ನನ್ನಟ್ಟಿ ಅರಮನೆಗೆ ಬರುವಂಥ ಟೈಮಾಗ್ಬುಡ್ತು
ಈ ಮಗನಾದ ವೀರಣ್ಣ ಇನ್ನೂ ಕಣ್ಣುಮುಚ್ಚಿ ಮನಗಲಿಲ್ಲವಲ್ಲ
ಈಗ ಅಡಿಗೆ ದುಡಗಲಿಲ್ಲವಲ್ಲ ಎನುತೇಳಿ

ಅವನು ಮಗನ ಮುಖವ ನೋಡುಕಂಡು
ಬಾಳ ಸಿಟ್ಟು ಬಂದಿತಲ್ಲ || ಸಿದ್ಧಯ್ಯ ||

ಗುರುವೇ ಮಗನ ಮುಖವ ನೋಡಿ
ಬಾಳ ಸಿಟ್ಟು ದೇವ ಬಂದೋಯ್ತು ಮಾಚಪ್ಪ
ಅವನಿಗೆ ಬಾಳ ಕ್ವಾಪ ದೇವ ದೊರಕಿತು ಮಾಚಯ್ಯ

ಅವನು ಮಗನ ಮೊಕವ ನೋಡುಕೊಂಡು
ಏನು ಮಾತೊಂದಾಡುತಾನೆ || ಸಿದ್ಧಯ್ಯ ||