ಆಗ ಮಡುವಾಳು ಮಾಚಪ್ಪ ಮಲ್ಲಿಗಮಾದೇವಮ್ನಿಗೆ
ಎಳ್ಳಷ್ಟು ಧೈರ್ಯ ಬತ್ತಂತೆ
ಯಾಕೆ ಕರೆದರೆ ಬಂದ್ರೆ ಕರ್ಕೊ ಊಟಮಾಡ್ತೀನಿ
ಬರ್ದೇಯಿದ್ರೆ ಒಬ್ನೇ ಭಿನ್ಯ ಅಳಿದ್ಬುಡ್ತೀನಿ ಅಂದ್ರಲ್ಲ
ಇವರ್ಗೆ ಬೋಸಂತೋಷವಾಯ್ತು
ಈ ಧರೆಗೆ ದೊಡ್ಡವರ ಮಾತ್ಗಾಗಿ ಒಂದು ಸತಿ ಕರದ್ಬುಡ್ಮ
ಬಂದರೆ ಕರ್ಕೊಂಡು ಊಟ ಮಾಡ್ಲಿ
ಬರ್ದೇ ಹೋದ್ರೆ ನಿಮ್ಮ ಮಗ ಸತ್ತೋಗಿರೋದೆ ನಿಜ ಅಂತ್ಹೇಳಿ
ಊಟ ಮಾಡ್ಕಂಡು ನಮ್ಮ ಮನೆ ಬುಟ್ಟು ಹೊಂಟೋಗ್ಲಿ ಅಂತೇಳಿ
ಮಡುವಾಳು ಮಾಚಪ್ಪ ತಾಯಿ ಮಲ್ಲಿಗದೇವಿ
ಮಗನ ಕೂದು ಹಾಕಿದಂಥ ಹೊನ್ನೊಸಲ ಬಳಿಗೆ ಬಂದು
ಮೂಂಭಾಗದಲ್ಲಿ ನಿಂತ್ಕಂಡು
ವೀರಣ್ಣ ವೀರಣ್ಣ ಅಂತ್ಹೇಳಿ
ಮಡುವಾಳು ಮಾಚಪ್ಪ ಕೂಗ್ತಾನೆ
ಅವರು ಮಡದಿ ಮಲ್ಲಿಗ ಮಾದೇವಮ್ಮ
ಈಗಲೀಗ ಸತ್ತೋದ ಮಗ
ಕೂಗಿದರೆ ಬಂದಾನಾ ಅಂತ್ಹೇಳಿ
ಗುರುವಿನ ಮಾತಿಗೆ ಮೀರಬಾರ್ದು ಎಂಬುದಾಗಿ

ಏನಪ್ಪ ನನ್ನ ಮಗನೇ
ಸತ್ತಂತ ಕಂದ
ಕಂದ ವೀರಣ್ಣ
ಅಪ್ಪಾ ಧರೆಗೆ ದೊಡ್ಡವರು
ನಿನ್ನ ಕರೀ ಅಂತ
ಹೇಳ್ತರೆ ನನ್ನ ಮಗು
ಅಪ್ಪಾ ನಾವಾಗಿ ಕರೀತೀವಿ
ನೀನಾಗಿ ಬಂದೀಯಪ್ಪ || ಸಿದ್ಧಯ್ಯ ||

ಕಂದಾ ಈರಣ್ಣ ಈರಣ್ಣ
ಎನುತೇಳಿ ನನ್ನ ಕಂದ
ನಿನ್ನ ತಂದೆ ತಾಯಿ ನಾವಿಬ್ರು
ಕೂಗುತೀವಿ ನನ್ನ ಕಂದಾ
ನಾ ಕೂಗಿದ ಕೂಗಿಗೆ
ನೀ ಬಂದೀಯಪ್ಪ ಮಗನೇ
ನಾವು ಕರೆದಂಥ ಮಾತಿಗೆ
ನೀನು ಬರುವೆಯಾ ನನ್ನ ಕಂದ
ವೀರಣ್ಣ ವೀರಣ್ಣ
ಎದ್ದು ಬಾರೋ ಎಂದರಲ್ಲ || ಸಿದ್ಧಯ್ಯ ||

ವೀರಣ್ಣ ವೀರಣ್ಣ ಕಂದs
ಬಪ್ಪಾ ಮಗನೇ ಬಾರೋ ಕಂದ
ಜಗತ್ತು ಗುರು ಧರೆಗೆ ದೊಡ್ಡವರು ಕೂಗ್ತರೆ ಬಪ್ಪಾ ಮನೆಗೆ ಎನುತೇಳಿ
ಮಾಚಪ್ಪ ಮಲ್ಲಿಗದೇವಿ ಮೂರು ಸಲ ಕರುದ್ರು

ಅಂಗೂ ವೀರಣ್ಣನವರು
ಬರಲಿಲ್ಲ ಮಾಯ್ಕಾರ || ಸಿದ್ಧಯ್ಯ ||

ಅಂಗೂ ಕಂದನಾದ ವೀರಣ್ಣ ಬರಲಿಲ್ಲ
ಬರ್ದೇ ಹೋದ ಕಾಲದಲ್ಲಿ
ಈ ಮಡಿವಾಳ ಮಾಚಪ್ಪ ಮಲ್ಲಿಗೆ ಮಾದೇವಮ್ಮ
ಧರೆಗೆ ದೊಡ್ಡವರ ಬಳಿಗೆ ಬಂದು ಹೇಳುತಾವ್ರೆ
ಸ್ವಾಮಿ ನಿಮ್ಮ ಮಾತಿನ ಪ್ರಕಾರವಾಗಿ
ಮೂರು ಸಲ ಕೂಗ್ದೋ ದೇವ
ನನ್ನ ಮಗ ಬರಲಿಲ್ಲ ಗುರುವು
ಈಗಲಾರೂ ಸಂತೋಷದಲ್ಲಿ ಭಿನ್ನ ಅಳುದ್ಬುಟ್ಟು
ಊಟ ಮಾಡ್ಕೊಂಡು ದಯಮಾಡಿಸಿ ನನ್ನಪ್ಪ ಅಂದರು
ಮಾದೇವಮ್ಮ ಮಾಚಪ್ಪ
ನೀವು ಕರೆದರೆ ನಿಮ್ಮ ಮಗ ಬರಲಿಲ್ವ
ನಿಮ್ಮ ಮಗನಾಗಿದ್ರೆ ಕಂದ
ಕರೆದ ಗಳಿಗೆವೊಳಗೆ ಬಂದು ಬುಡೋನು ಮಾಚಯ್ಯ
ಅವನೆಲ್ಲೋ ನನ್ನ ಮಗನಾಗಿರಬೋದು ಮಗನೆ
ಅದಕ್ಕಾಗಿಯೇ ನೀವು ಕೂಗುದ್ರೂ ಬರ್ಲಿಲ್ಲ ಕಂದ
ಮಾಚಪ್ಪ ನೀವು ಕರ್ದಂಗೆ ನಾನು ಒಂದು ಸಾರಿ ಕರೀತೀನಿ
ನಾನು ಕರೆದ ಮೇಲೆ ನಿಮ್ಮ ಮಗ ಏನಾರೂ ಬಂದ್ಬುಟ್ರೆ ಕಂದ
ನನ್ನ ಕಪ್ಪಡಿ ಕೈಲಾಸ್ದಲ್ಲಿ ಮಗನೇ
ನನ್ನ ಚಿಕ್ಕಲ್ಲೂರು ಮಠಮನೆಯೊಳಗೆ
ನನ್ನ ರಾಜಬೊಪ್ಪಗೌಡನ ಪುರಕ್ಕೆ
ನಿನ್ನ ಮಗನಾ ಫಲಾರದಯ್ಯನ ಮಾಡ್ಕೋತಿನಿ ಕಂದ
ನಾನು ಕರೆದ ಗಳುಗೇಲಿ ನಿನ್ನ ಮಗ ಬಂದ್ಬುಟ್ರೆ

ಅಪ್ಪಾ ಬಂದಂಥ ನಿನ್ನ ಮಗನ
ನನ್ನ ಮಗನ ಮಾಡಿಯಪ್ಪ || ಸಿದ್ಧಯ್ಯ ||

ಬಂದಂಥ ನಿನ್ನ ಮಗನ ಕಂದಾ ನನಗೆ ಮಗನಾಗಿ ಕಳುಗ್ಬುಟ್ಟೀಯ ಕಂದಾ ಎಂದರು
ಗುರುದೇವ ನಮ್ಮಮಗನ ಈವಾಗಲೇ ಕೂದು ಅಡಿಗೆ ಮಾಡಿ
ಎಡೇ ಪಡಿಸಿದವಲ್ಯೋ ದೇವ
ಈವತ್ತುಗೂ ನಿಮ್ಮ ಮಗನಾಗಿ ಎಡೇ ಪಡುಸ್ಬುಟ್ಟೋ
ನೀವು ಕರೆದಮೇಲೆ ನನ್ನ ಮಗಾ ಏನಾರೂ ಬಂದ್ಬುಟ್ರೆ
ಬಂದ ಗಳಿಗೇವೊಳಗೆ ಕೂಡ ನಿಮಗೆ ಮಗನಾಗಿ ಕೊಟ್ಟು ಬುಡ್ತೀನಿ ಸ್ವಾಮಿ
ನಮ್ಮ ಮಗನ್ನೇ ಕರ್ಕೊಂಡೋಗ್ಬುಡಪ್ಪ
ನಮ್ಮ ಮಗನ್ನೇಕರೆದು ಶಿಷ್ಯನ ಮಾಡ್ಕೊಂಡೋಗಿ ತಂದೆ ಎಂದರು

ಆಗಲೀ ಮಾಚಪ್ಪ ಮಲ್ಲಿಗೆ ಮಾದೇವಮ್ಮ
ಗಂಡಾ ಹೆಂಡ್ತೀರ ಭಕ್ತಿ ಅಂದ್ರೆ ಹೀಗಿರಬೇಕು ಎನುತೇಳಿ
ಜಗತ್ತು ಗುರು ಧರೆಗೆ ದೊಡ್ಡಯ್ಯ
ಕಪ್ಪು ಧೂಳ್ತ ತಗದು ಗುರುವು
ಮಗನ ಕೂದಂಥ ಹೊನ್ನೊಸಲಿನ ಮೇಲೆ ಕಪ್ಪು ಧೂಳ್ತ ಇಟ್ಟುಬುಟ್ಟು
ಜಗತ್ತು ಗುರು

ಆ ಮಗನಾದ ವೀರಣ್ಣನ ಏನಂತ ಕರೀತಾರೆ ಅಂದರೆ

ಅಪ್ಪಾ ಮಡುವಾಳ ಮಾಚಪ್ನ ಮಗನೇ
ಕಂದಾ ವೀರಣ್ಣ ಬಪ್ಪಾ || ಸಿದ್ಧಯ್ಯ ||

ಕಂದಾ ಮಡಿವಾಳ ಮಾಚಪ್ನ ಮಗನೇ
ಕಂದಾ ವೀರಣ್ಣ
ಮಲ್ಲಿಗದೇವಿ ಮಗನೇ
ಓಡಿ ಬಪ್ಪ ನನ್ನ ಕಂದ
ಲೋ ವೀರಣ್ಣ ವೀರಣ್ಣ
ಎದ್ದುಬಾರೋ ಎಂದರ‍ಲ್ಲ || ಸಿದ್ಧಯ್ಯ ||

ಮಾಚಪ್ಪನ ಮಗನೇ ಮಲ್ಲಿಗದೇವಿ ಮಗನೇs
ಏಳು ವರ್ಷದ ಮಗನೇ ಕಂದ ವೀರಣ್ಣ
ಎದ್ದು ಬಪ್ಪ ಮಗನೇ
ಓಡು ಬಾರೋ ಕಂದಾ ಅಂತ್ಹೇಳಿ
ಧರೆಗೆ ದೊಡ್ಡವರು ಮೂರು ಸರತಿ ಕರುದ್ರು

ಗುರುವು ಹಂಗೂ ವೀರಣ್ಣನವರು
ಬರಲಿಲ್ಲ ಮಾಯಿಕಾರ || ಸಿದ್ಧಯ್ಯ ||
ಅಯ್ಯಾ ಮೂರು ಸಲ ಕರೆದರಂತೆ
ಮಂಕು ಮರುಳು ಆದರಲ್ಲ || ಸಿದ್ಧಯ್ಯ ||

ವೀರಣ್ಣ ವೀರಣ್ಣ ಅಂತ
ಮೂರು ಸಲ ಕರೆದರು ಪರಂಜ್ಯೋತಿ ಪಾವನಮೂರ್ತಿ ಧರೆಗೆ ದೊಡ್ಡಯ್ಯ
ಹಂಗೂ ವೀರಣ್ಣನವರು ಬರಲಿಲ್ಲ
ಬರದೇ ಹೋದ ಕಾಲದಲ್ಲಿ ಜಗತ್ತು ಗುರು ಧರೆಗೆ ದೊಡ್ಡಯ್ಯ
ಮನದಲ್ಲಿ ಮನಸಲ್ಲಿ ಏನಂಥ ವ್ಯಥೆ ಚಿಂತೆ ಪಡ್ತರೇ ಅಂದ್ರೆ
ಕಂದಾ ವೀರಣ್ಣ
ಮೂರು ಸಲ ಕರದ್ನಲ್ಲ ಯಾತುಕ್ಕೆ ಬರಲಿಲ್ಲ
ನಾನು ಕರೆದ ಮಾತಿಗೆ ಯಾಕೆ ಬರಲಿಲ್ಲ ಕಂದ
ವೀರಣ್ಣ ನಾನೇ ಮರ್ತೋಗ್ಬುಟ್ಟಿದ್ದಿ ಕನಪ್ಪ
ಮರ್ತಕಂದಿ ಕೂಗ್ಬುಟ್ಟಿ ಮಗನೇ
ವೀರಣ್ಣ, ಮಾಚಪ್ಪನ ಮಗನೇ ಅಂದ್ರೆ ಬರೋದಿಲ್ಲ
ಮಲ್ಲಿಗದೇವಿ ಮಗನೇ ಅಂದರೆ ಬರೋದಿಲ್ವ ಕಂದ
ವೀರಣ್ಣ ವೀರಣ್ಣ ಅಂದರೆ ಬರೋದಿಲ್ವ ಮಗನೇ
ಈಗಲಾರು ಕರೀತಿನಿ ಬಂದ್ಬುಡು ಕಂದಾ ಅಂತೇಳಿ ಧರೆಗೆ ದೊಡ್ಡವರು
ಎರಡನೇ ಸಾರಿ ಏನಂಥ ಕರೀತಾರೆ ಅಂದರೆ

ನನ್ನ ತೋಪಿನ ದೊಡ್ಡಮ್ಮನವರ
ಮಾತಿನರಗಣಿಯೆ ಬಾರೋ || ಸಿದ್ಧಯ್ಯ ||
ನನ್ನ ಚೆನ್ನಾಜಮ್ಮನವರ
ಚಿನ್ನದ ಪದಕ ಬಾಪ್ಪ || ಸಿದ್ಧಯ್ಯ ||

ನನ್ನ ರಾಚುರಾಯನ ಮಗನ ಕಂದ
ರಾಗಿ ಮುತ್ತಿನ ಹರಳು ಬಾರೋ || ಸಿದ್ಧಯ್ಯ ||

ನಿಮ್ಮ ತಾಯಿ ಕಟ್ಟಿದ ಹೆಸರು
ತಂದೆ ಕಟ್ಟಿದ ನಾಮಕರಣ
ಇಂದಿಗೆ ಮಗನೇ
ಹಾಳಾಗಿ ಹೋಗಲಿ
ಅಪ್ಪಾ ನಾನು ಕಟ್ಟಿದ ನಾಮಕರಣ
ನರಲೋಕದ ಒಳಗೆ ನಿನಗೆ
ಸ್ಥಿರವಾಗಿ ಉಳಕೊಳ್ಳಲಿ
ನನ್ನ ಪರಂಜ್ಯೋತಿ ಮಗನೇ ಕಂದ
ಫಲಾರದಯ್ಯ ಎದ್ದುಬಾರೋ || ಸಿದ್ಧಯ್ಯ ||

ಪರಂಜ್ಯೋತಿಯವರ ಮಗನೇs
ಫಲಾರದಯ್ಯ ನನ್ನ ಕಂದಾ
ಎದ್ದು ಬಾರೋ ಕಂದ
ಎದ್ದು ಬಪ್ಪ ಮಗನೇ ಎನುತೇಳಿ
ಜಗತ್ತು ಗುರು ಧರೆಗೆ ದೊಡ್ಡಯ್ಯ
ಮೂರು ಸಲ ಕೂಗುದ್ರು ನನ್ನಪ್ಪ
ಅಯ್ಯೋ ಭೂಮಿಯಿಂದ ದೇವ
ಹುತ್ತ ಮೂಡಿದ ಅಪ್ಪಾಂದ ನನ್ನ ಗುರುವು
ಅಯ್ಯಾ ಸಿಲೇಟು ಪುಸ್ತಕವ ಕೈಯಲ್ಲಿ ಹಿಡಕಂಡು

ನನ್ನ ಧರೆಗೆ ದೊಡ್ಡವರ ಬಳಿಗೆ
ಗುಡುಗುಡುಗುಡನೆ ಬರುವುತಾನೆ || ಸಿದ್ಧಯ್ಯ ||

ನನ್ನ ಮಂಟೇದಾಲಿಂಗಯ್ಯನ
ಬಳಿಗೆ ಓಡಿಓಡಿ ಬರುವುತಾನೆ || ಸಿದ್ಧಯ್ಯ ||

ನನ್ನ ಧರೆಗೆ ದೊಡ್ಡವರ ಬಳಿಗೆ ನನ್ನ ಕಂದ
ಓಡಿ ಓಡಿ ಬಂದು ಕಂದ ವೀರಣ್ಣ
ನನ್ನ ಧರೆಗೆ ದೊಡ್ಡವರ ಪಾದಕ್ಕೆ
ಬಗ್ಗಿ ಶರಣ ಮಾಡಿ
ಅಯ್ಯಾ ಸಿಲೇಟು ಪುಸ್ತಕವ
ಅವರ ಪಾದದ ಮುಂದೆ ಮಡಗಿ

ಅಪ್ಪ ಹಸುವಾಯ್ತದೆ ನನ್ನ ಗುರುವೇ
ಅನ್ನ ಊಟ ಮಾಡುತೀನಿ || ಸಿದ್ಧಯ್ಯ ||

ಅನ್ನ ಊಟ ಮಾಡ್ತೀನಿ ಜಗತ್ತುಗುರು ಧರೆಗೆ ದೊಡ್ಡಯ್ಯ ಎಂದರು
ಕಂದಾ ಹಸುವಾದದ ಮಗನೇ
ಆಗಲೀ ನನ್ನ ಕಂದ ಆಗಲೀ ಮಗು
ಹಾಗಂದು ಜಗತ್ತು ಗುರು ಧರೆಗೆ ದೊಡ್ಡಯ್ಯ
ಕಂದ ಫಲಾರದಯ್ಯನ ಕರಕೊಂಡು ಮುಂಭಾಗದಲ್ಲಿ ಕುಂಡರಿಸ್ಕೊಂಡು
ಮಗನ ಮಂಡೆ ಮೈ ಸವರುವಾಗ
ಮಡುವಾಳು ಮಾಚಪ್ಪ
ತಾಯಿ ಮಲ್ಲಿಗದೇವಿ

ಮಗನನ್ನೇ ನೋಡುತಾರೆ
ಕಿಲಕಿಲನೆ ನಗುತಾರೆ || ಸಿದ್ಧಯ್ಯ ||

ಮಗನ ಮೊಕವನ್ನೇ ನೋಡಿ ಮಲ್ಲಿಗದೇವಿ ಮಡಿವಾಳ ಮಾಚಪ್ಪ
ಕಿಲಕಿಲನೆ ನೆಗನಾಡ್ಕೊಂಡು ಮಾಚಪ್ಪ ಮಲ್ಲಿಗದೇವಿ

ಅಪ್ಪಾ ನಮ್ಮ ಮಗಳಲ್ಲ ನೀನು
ಭೂಮಿಗೆ ದೊಡ್ಡವರ ಮಗ || ಸಿದ್ಧಯ್ಯ ||

ಅಯ್ಯಾ ಭೂಮಿಗೆ ದೊಡ್ಡವರೆ ಮಗನು
ಭೂಲೋಕ್ಕೆ ಹಿರಿಯವರ ಮಗನು || ಸಿದ್ಧಯ್ಯ ||

ಭೂಮಿ ಭೂಲೋಕಕ್ಕೆ ದೊಡ್ಡವರ ಮಗ ನೀನು ಕಂದ
ಎನುತೇಳಿ ಜಗತ್ತು ಗುರುಗಳು ಕಂದ ವೀರಣ್ಣ
ಆಗಲೀಗ ಭಿನ್ನ ಅಳಿಯುವುದಕ್ಕೆ ಕುಳಿತುಕೊಂಡ ಕಾಲ್ದಲ್ಲಿ
ಜಗತ್ತು ಗುರುಗಳಿಗೂ ಕೈಯೆತ್ತಿ ಮುಗಿದು
ಮಗನಿಗೂ ಕೂಡ ಕೈಯೆತ್ತಿ ಮುಗುದು ಮಡಿವಾಳ ಮಾಚಪ್ಪ
ತಾಯಿ ಮಲ್ಲಿಗ ಮಾದೇವಮ್ಮ
ಸತಿ ಪತಿಗಳು ಒಂದ್ಕಡೆ ತಲೆ ಬಕ್ಕೊಂಡು ನಿಂತ್ಕಂಡ್ರು
ಆಗ ಜಗತ್ತು ಗುರು ಧರೆಗೆ ದೊಡ್ಡಯ್ಯ
ಕಂದಾ ಮಗನೇ ಹಸುವಾದದಪ್ಪ
ಊಟ ಮಾಡಬೇಕೆ ಮಗೂ
ಮಾಡು ನನಕಂದ ಮಾಡು ಮಗನೆ ಅನುತೇಳಿ
ಕಪ್ಪು ಧೂಳ್ತ ತಗದು ಮಡಿವಾಳ ಮಾಚಪ್ಪ ಬಡಿಸಿರುವ ಎಡೆಗೆ ಉರುಬುದ್ರಂತೆ
ಇಕ್ಕಿರುವಂಥಾ ಮಾಂಸಾಹಾರಗಳೆಲ್ಲ ಮಾಯವಾದೊ ಗುರುವೂ
ಜಾತಿಗೆ ಒಂದು ಬಗೆ ಸೋಡಿಗೆ ಸಾರಾಯ್ತು

ಕಂದ ಅಪ್ಪಾ ಭಿನ್ನ ಅಳಿಯಪ್ಪ ಕಂದ
ನಿನ್ನೊಂದಿಗೂಟವ ಮಾಡುತೀನಿ || ಸಿದ್ಧಯ್ಯ ||

ಅವರು ಮಗನ ಕರ್ಕೊಂಡು ಗುರುವು
ಅಗಲು ಭಿನ್ನ ಅಳಿಯುತಾರೆ || ಸಿದ್ಧಯ್ಯ ||

ವೀರಣ್ಣನ ಕರ್ಕೋಂಡುs
ಮಾಚಪ್ನ ಮನೆವೊಳಗೆ ಅಗಲು ಭಿನ್ನ ಅಳೀತಿದ್ರು ಮಾಗುರು
ಮಂಟೇದಲಿಂಗಪ್ಪ ಜಗಂಜ್ಯೋತಿ
ಆಗ ಮಡಿವಾಳ ಮಾಚಪ್ಪನಿಗೆ ಹೇಳ್ತರೆ
ಮಾಚಪ್ಪ ಕೀಳು ಜಾತಿ ಮೇಲುಜಾತಿ ಅಂತ ಹೇಳ್ತಿದ್ಯಲ್ಲಪ್ಪ

ನಿನ್ನ ಕೀಳು ಜಾತಿಯ ಮನೇಲಿ ಕಂದ
ಊಟ ಭೋಜನ ಮಾಡುತೀನಿ|| ಸಿದ್ಧಯ್ಯ ||

ಕೀಳುಜಾತಿ ಮನೇವೊಳಗೆ ಕಂದs
ಅಗಲು ಭಿನ್ನ ಅಳೀತಿನಿ ಮಾಚಪ್ಪ
ಊಟ ಮಾಡ್ತೀನಿ ಮಗನೇ
ಜಾತಿ ಅಂತ ಹೇಳಿದ್ಯಲ್ಲ ಕಂದ
ಈಗಲೀಗ ಜಾತಿ ಯಾವುದು ನನ್ನ ಕಂದ ಮಾಚಪ್ಪ
ಜ್ಯೋತಿ ಯಾವುದು ಮಗನೇ
ಲೋ ಜಾತಿಗೇನೂ ಕಟ್ಟೂ ಇಲ್ಲ
ಜ್ಯೋತಿಗೇನು ಭೇದವಿಲ್ಲ || ಸಿದ್ಧಯ್ಯ ||

ಕಂದ ಜಾತಿಗೇನು ಮಗನೇ
ಕಟ್ಟಿಲ್ಲ ಕಂದ
ಜ್ಯೋತಿಗೇನು ಕಂದಾ
ಭಿನ್ನಬೇಧವೇ ಇಲ್ಲ
ನರಮಾನವರ ಮನೇವೊಳಗೆ
ಉರಿಯುವಂತ ಜ್ಯೋತಿ
ನಾ ದೇವಮಾನವರ ಮನದಲ್ಲೂ
ಉರಿಯುವಂತ ಜ್ಯೋತಿ
ನಾ ಮಾರೀರ ಮಠದಲ್ಲೂವೆ
ಉರಿಯುವಂತ ಜ್ಯೋತಿ
ನಾ ಸರ್ವರ ಮನೇಲೂ ಕಂದ
ಪರಂಜ್ಯೋತಿ ಅಂದರಲ್ಲ || ಸಿದ್ಧಯ್ಯ ||

ಊಟ ಮಾಡಿ ಬಿನ್ಯ ಅಳಿಯುವಂತs
ಜಗತ್ತು ಗುರು ಧರೆಗೆ ದೊಡ್ಡವರ ಮೊಕ ಕಣ್ಣಾರ ನೋಡುತ್ತ
ಮಡುವಾಳು ಮಾಚಪ್ಪ
ತಾಯಿ ಮಲ್ಲಿಗದೇವಿ
ಈ ಜಗತ್ತು ಗುರುಗಳಿಗೆ
ಯಾವ ಮಾತಾಡೋದಿಕ್ಕೂ ನಮಗೆ ಶಕ್ತಿಯಿಲ್ಲ
ಎನುತೇಳಿ ಪರಂಜ್ಯೋತಿಯವರ ಮುಂಭಾಗದಲ್ಲಿ ತಲೆಬೊಕ್ಕೊಂಡು ನಿಂತುಕೊಂಡರು
ಆಗ ಜಗತ್ತುಗುರು ಧರೆಗೆ ದೊಡ್ಡವರು
ಊಟ ಮಾಡಿಕೊಂಡು ಭಿನ್ನ ಅಳಿದುಬುಟ್ಟು
ಮಡುವಾಳು ಮಾಚಪ್ಪ
ಇಂಥ ಸತ್ಯಪುರುಷರು
ಈ ನರಲೋಕದಲ್ಲಿ ವಾಸಮಾಡಬೇಡಿ ಕಂದಾ
ಈಗಲೀಗ ನೀವು ನನಗೆ ಶಿಶುಮಕ್ಕಳಾಗಿ ಬಂದ್ಬುಡಿ ಕಂದ
ನಮ್ಮ ರಾಜ ಬೊಪ್ಪಗೌಡ್ನಪುರದಲ್ಲಿ
ಕೈ ಎತ್ತರವಾದ ಮಕ್ಕಳಾಗಿ ನಿಮ್ಮ ಇಟ್ಕೋತೀವಿ ಕಂದ
ನನ್ನ ಬಿರುದು ಲಾಂಚಾನ ನನ್ನ ಕಂದ

ನನ್ನ ಮಠದಿಂದ ಹೊರಗೆ
ನನ್ನ ಬಿರುದು ಹೋಗುವಾಗ
ನೀ ಮುಂದಲ ಮಡಿ ಬುಡಬೇಕು
ನಿನ್ನ ಮಡದಿ ಮಲ್ಲಿಗದೇವಿ ಕಂದ
ಹಿಂದಲ ಮಡಿ ಎತ್ತಬೇಕು
ನಿನ್ನ ಮಗನು ಫಲಾರದಯ್ಯ
ಐರಾಳ ಮೈರಳ ಎನುತೇಳಿ ಕಂದಯ್ಯ
ಎರಡು ಪಂಜ ಕಂದ
ಕಟ್ಕೊಂಡು ನನ್ನ ಕಂದ
ನನ್ನ ಕಂಡಾಯದ ಮುಂದೆ
ಪಂಜು ಬರಲೇಬೇಕು
ಕೇಳಪ್ಪ ನನ್ನ ಮಗನೇ
ಪಂಜಿನ ಬೆಳಿಕಿನವೊಳಗೆ
ಲೋಕ ನಾನು ಮೆರೆಯಬೇಕು|| ಸಿದ್ಧಯ್ಯ ||

ಪಂಜಿನ ಬೆಳಕಿನಲ್ಲಿs
ಈಗಲೀಗ ನಾನು ನನ್ನ ಕಂದ
ನನ್ನ ಬಿರುದೆಲ್ಲ ಮಗನೇ
ಈ ನರಲೋಕನೆ ಮೆರ್ಕೊಂಡು ಬರ್ಬೇಕು ಕಂದ
ನನಗೆ ಒಕ್ಕಲು ಸಹಿತವಾಗಿ
ನಿನ್ನ ರಾಜಬೊಪ್ಪಗೌಡನ ಪುರಕ್ಕೆ ಬಂದ್ಬುಡು ಕಂದ ಅಂತೇಳಿ
ಮಡಿವಾಳ ಮಾಚಪ್ನ ವೊಂದಿಗೆ ಕರ್ಕೊಂಡು ಗುರುವು
ತಾಯಿ ಮಲ್ಲಿಗಮಾದೇವಮ್ಮನ ಕರ್ಕೊಂಡು
ಕಂದನಾದ ವೀರಣ್ಣನ ಫಲಾರದಯ್ಯನ ಮಾಡ್ಕೊಂಡು

ಅವರು ರಾಜ ಬೊಪ್ಪೇಗೌಡ್ನ ಪುರಕ್ಕೆ
ನನ್ನ ರಾಜಗುರು ದಯ ಮಾಡುತಾರೆ || ಸಿದ್ಧಯ್ಯ ||

ರಾಜ ಬೊಪ್ಪಗೌಡ್ನ ಪುರಕ್ಕೆ ಬಂದು
ಮಡುವಾಳು ಮಾಚಪ್ಪ
ಮಾಚಪ್ಪನ ಮಡದಿ ಮಲ್ಲಿಗ ಮಾದೇವಮ್ಮನ
ಬೊಪ್ಪಗೌಡನ ಪುರದ ಚಂದ್ರಶಾಲೆವೊಳಗೆ ಇರಸಿ
ಮಡಿವಾಳ ಮಾಚಪ್ಪನ ಕರೆದು
ಕೇಳಪ್ಪ ನನ್ನ ಕಂದ ಈ ಚಂದ್ರಶಾಲೆ ನಿಮ್ಮದು ನನ್ನ ಕಂದ
ಇಲ್ಲಿ ವಾಸ ಮಾಡಿ ಕಂದ
ನಾನು ಕರೆದ ಗಳಿಗೇಲಿ ಬಂದ್ಬುಡಿ ಮಕ್ಕಳೇ ಅಂತ್ಹೇಳಿ
ಮಾಚಪ್ಪ ಮಲ್ಲಿಗದೇವಿಯ ಆ ಚಂದ್ರಶಾಲೆವೊಳಗೆ ಬುಟ್ಟು
ಫಲಾರದಯ್ಯನ ಕರೆದುಕೊಂಡು ಜಗಂಜ್ಯೋತಿ ಧರೆಗೆ ದೊಡ್ಡಯ್ಯ
ತನ್ನ ಅಡ್ಗೆವೊಳಗೆ ಮಡೀಕಂಡು ನನ್ನಪ್ಪ

ಅವರು ರಾಜಬೊಪ್ಪಗೌಡ್ನ ಪುರದೊಳಗೆ
ಮೂರ್ತವಾದರು ಧರ್ಮಗುರುವು || ಸಿದ್ಧಯ್ಯ ||

ಅವರು ಹಾಸಿದರು ಹುಲಿಯ ಚರ್ಮ
ಹರಡಿದರು ಊಬತ್ತಿಗಟ್ಟಿ || ಸಿದ್ಧಯ್ಯ ||