ಮಗನ ಮೊಕ ನೋಡಕಂಡು
ಬಾಳಸಿಟ್ಟು ಮಾಡಕೊಂಡು ಬಾಳಕ್ವಾಪ ಮಾಡುಕೊಂಡು ಮಡಿವಾಳ ಮಾಚಪ್ಪ
ಏನೋ ಕಂದ ವೀರಣ್ಣ
ಇನ್ನೂ ಎಷ್ಟೊತ್ತೊ ನಿನ್ನ ತೂಗಬೇಕು
ಹಾಳಾದ ಸುಖ ನಿದ್ರೆ ನಿನಗೆ ಇನ್ನಾರು ಬರಬಾರದ ಅನುತೇಳಿ
ಮಗನ ಕಪಾಲದ ಮ್ಯಾಲೆ ಮಾಚಯ್ಯ
ಎರಡು ಏಟು ಹೊಡೆದ
ಮಡಿವಾಳ ಮಾಚಪ್ಪ ಹೊಡೆದಂಥ ಏಟಿಗೆ
ಏಳು ವರ್ಷದ ಮಗನು ಕಂದ ವೀರಣ್ಣ

ಹಲ್ಲನ್ನೇ ಕಚ್ಚೀಗಂಡ ಕಂದಾ
ಎರಡೂ ಕಣ್ಣ ಮುಚ್ಚಿಕೊಂಡ
ಅವನು ಸೊಕ್ಕಿ ಮಲಗಿದ ಕಂದಾ ವೀರಣ್ಣ
|| ಸುವ್ವಾ ಬಾ ಚೆನ್ನ ವೀರಣ್ಣ ||

ಕಾಗಡಿ ತೊಟ್ಲು ಒಳಗೆ ಕಂದ ವೀರಣ್ಣ
ಸೊಕ್ಕಿ ಭೂಮಿ ಮ್ಯಾಲೆ ಮಲೀಕೊಂಡು
ನನ್ನ ಮಗನು ಗುರುವು
ಈಗ ಕಣ್ಣು ಮುಚ್ಚಿ ಮಲೀಕೊಂಡ ಗುರುದೇವ
ಈಗ ನನ್ನ ಮಗ ಮನಗ್ಬುಟ್ಟ ಸ್ವಾಮಿ
ಪತಿದೇವ್ರೆ ಮಾಚಪ್ಪ
ನಾನು ಹೇಳಿದ ರೀತಿ ಮಾಡ್ಬುಡಿ
ಅಡಿಗೆ ಮನೆಗೆ ಮರೆಯಾಗಿ ಹೊರಟೋಯ್ತಿನಿ ಅಂತ್ಹೇಳಿ
ಹಿಡಿದಿರುವಂಥ ಕಾಗಡಿ ತೊಟ್ಟಿಲನ್ನೇ ಬಿಟ್ಟು ಬುಟ್ಟು
ಅಡಿಗೆ ಮನೆಗೆ ಮರೆಯಾಗಿ ಹೊರಟೋಗ್ಬುಟ್ಟಳು ತಾಯಿ ಮಲ್ಲಿಗದೇವಿ
ಮಗಲಿರ್ತಕ್ಕಂಥ ಮಗನ ಮೊಕ ಕಣ್ಣಿಂದ ನೋಡ್ಕಂಡು ಮಾಚಪ್ಪ

ಕಣ್ಣೀರ ಸುರುಸುತಾನೆ
ಕಡು ದುಃಖ ಪಡುತಾನೆ
ಅಯ್ಯೋ ಜಲ್ಮ ಕೊಟ್ಟ ತಂದೆ ಮಗನ
ಕೊಲ್ಲ ಬಹುದಾ || ಸುವ್ವಾ ಬಾ ||

ಅಯ್ಯಾ ಜಲ್ಮಕೊಟ್ಟ ತಂದೆ ನಾನು
ಮಗನ ಕೊಲ್ಲಬಹುದಾ ಎಂದು
ಅವನು ಮಗನ ಮೊಕವಾ ನೋಡಿ ಗುರುವು ಅಳುತಾನೆ || ಸುವ್ವಾ ಬಾ ||

ಜಲುಮ ಕೊಟ್ಟ ತಂದೆ ನಾನು ಗುರುವು
ಅನ್ನ ಉಣಿಸಿ ಅಂಗೈನೊಳಗೆ ಕಂದ
ನಿನ್ನ ಸಾಕಿ ಸಲುಹಿದ್ದೆ ಕಂದ ವೀರಣ್ಣ

ಅನ್ನ ಉಣಿಸಿದ ಕೈನ ಒಳಗೆ
ನಿನ್ನ ಶಿರಸ ಕುಯ್ಯತೀನಿ || ಸಿದ್ಧಯ್ಯ ||
ಸಿದ್ಧಯ್ಯಾ ಸ್ವಾಮಿ ಬನ್ನೀ
ಅಯ್ಯೋ ಮಗನೇs ಲಿಂಗಯ್ಯಾ ನೀವೇ ಬನ್ನಿ

ಅನ್ನ ಉಣಿಸಿದ ಕೈಯಲ್ಲಿ
ನಿನ್ನ ಶಿರಸ ಕೊಲ್ಲುತೀನಿ ಮಗನೆ ವೀರಣ್ಣ ಎನುತೇಳಿ
ಮಡುವಾಳು ಮಾಚಪ್ಪನವರು
ಆಗಲೀಗ ಒಂದು ಎಳೆತ ನೀರು ತಂದು
ಮಗನ ಮೊಕ್ಕೆ ಎರಚುಬುಟ್ಟು
ಕಾಗಡಿ ತೊಟ್ಲಿಂದ ಮಗನ ಎತ್ತುಕೊಂಡು
ಹೊನ್ನು ಹೊಸಲ ಬಳಿಗೆ ಬಂದು
ಹೊನ್ನು ಹೊಸಲ ಮೇಲೆ ಕಂದ ವೀರಣ್ಣನ ಮನುಗುಸ್ಕೊಂಡು ಮಾಚಪ್ಪ

ಗುರುವೇ ಕಣ್ಣಿಗೆ ಬಟ್ಟೆ ದೇವ
ಕಟ್ಟಿಕೊಂಡ ಮಾಚಯ್ಯ
ಕೈಲಿ ಚೂರಿ ಗುರುವು
ಹಿಡಕೊಂಡ ಮಾಚಪ್ಪ
ಗುರುವೇ ಮಂಡಿಗಾಲ ತಗದು
ಮಗನ ಎದೆಯ ಮೇಲೆ
ಮಡೀಕೊಂಡು ನನ್ನ ಗುರುವು
ನನ್ನ ಧರೆಗೆ ದೊಡ್ಡವರಿಗೆ
ಕೈಯೆತ್ತಿ ಮುಗಿದನಾಗ || ಸಿದ್ಧಯ್ಯ ||

ಗುರುವೇ ಧರೆಗೆ ದೊಡ್ಡವರಿಗೆ ಕೈಯೆತ್ತಿ ಮುಗಿದು
ಗುರುವೇ ಮಂಟೇದ ಲಿಂಗೈನ ಪಾದ ಮನದಲ್ಲಿ ನೆನೆದು
ಮಡಿವಾಳ ಮಾಚಪ್ಪ
ಅಯ್ಯಾ ಮಂಟೇದ ಲಿಂಗಪ್ಪ ಮಾಯ್ಕಾರದ ಒಡೆಯ
ಪರಂಜ್ಯೋತಿಯವರೆ ನನ್ನ ಪಾತಾಳ ಜ್ಯೋತಿಯವರೆ
ನನ್ನ ಮಗನನ್ನೇ ನಾನು ಕುಯ್ತೀನಿ ಗುರುವು
ನಾನು ಪಡೆದ ಮಗನ ಕೊಲ್ತೀನಿ ನನ್ನಪ್ಪ
ನಾ ಮಾಡುವ ಹರುಸೇವೆ
ನಿನ್ನ ಪಾದುಕ್ಕೆ ಅರುವಾಗಲಯ್ಯ || ಸಿದ್ಧಯ್ಯ ||

ನಾನು ಮಾಡುವ ಹರಿಸೇವೆ ಗುರುವೂ
ನಿಮ್ಮ ಪಾದಕ್ಕೆ ಅರಿವಾಗಲೀ
ಜಗತ್ತು ಗುರು ಧರೆಗೆ ದೊಡ್ಡವ್ರೆ ಮಂಟೇದಲಿಂಗಪ್ಪ ಎನುತೇಳಿ
ಮಡಿವಾಳ ಮಾಚಪ್ಪ ಮಂಡಿಗಾಲ ತಗದು ಮಗನ ಎದೇಮ್ಯಾಲೆ ಮಡೀಕೊಂಡು
ಉಕ್ಕಿನ ಚಂದ್ರಾಯ ತಗದು ಬಲಗೈಲಿಡುಕೊಂಡು
ಮಗನ ಜುಟ್ಟನ್ನೇ ಎಡಗೈಲಿ ಗುರುವು ಹಿಡಕೊಂಡು ಮಾಚಪ್ಪ
ಅವರು ಮಂಟೇದಲಿಂಗೈನ ಪಾದ ಮನದಲ್ಲಿ ನೆನಕಂಡು

ಅವನು ಎರಡು ಕಣ್ಣು ಮುಚ್ಚಿಕೊಂಡು
ಮಗನ ಕೆತ್ತ ಕುಯ್ದನಾಗ || ಸಿದ್ಧಯ್ಯ ||

ಎಡಗೈಲಿ ಮಗನ ಜುಟ್ಟ ಹಿಡಕಂಡು ದೇವ
ಎರಡು ಕಣ್ಣ ಮುಚ್ಕೊಂಡು ಮಡಿವಾಳ ಮಾಚಪ್ಪ
ಮಗನ ಕತ್ತನ್ನೇ ಕೂದು

ಮಲ್ಲಿಗದೇವಿ ಮಲ್ಲಿಗದೇವಿ ಬಾರೋ ಮಡದಿ ಎಂದರು
ಮಾಚಪ್ಪನ ಮಡದಿ ಮಲ್ಲಿಗ ಮಾದೇವಮ್ಮ
ಓಡೋಡಿ ಬಂದು ಮಗನ ರಕ್ತ ಬಸುಕೊಂಡು
ಮಗನ ರ‍ಕ್ತ ಬಸುಕೊಂಡು ಒಂದು ಕಡೆ ಮಡೀಕೊಂಡು
ಮಾಚಪ್ಪನ ಮೊಕ ಕಣ್ಣಾರೆ ನೋಡುತ್ತಾ
ಪತಿ ದೇವರೇ ಮಾಚಪ್ಪ
ಕಾಕೋಳಿ ಕೂಡಿ ಲೋಕ ಬೆಳಗಾಗಿ ಗುರುವು
ಬೆಳಗಿನ ಹೊತ್ತಲ್ಲಿ ನಾನು ಎದ್ದು
ಬಲದ ಮೊಗ್ಗಲಲ್ಲಿ ಎದ್ದ ಗಳಿಗೇಲಿ
ನನ್ನ ಮಗನ ಪಾದ ನೋಡುತ್ತಿದ್ದಿ
ನನ್ನ ಮಗನವೆರಡು ಕೈ ನೋಡುತ್ತಿದ್ದಿ
ನನ್ನ ಮಗನ ಮೊಕ ನೋಡುತ್ತಿದ್ದಿ ಗುರುವು
ಈಗ ಯಾರು ಕೈಯ ಯಾರ ಕಾಲು ಯಾರ ಮೊಕ ನೋಡ್ಬೇಕು
ಸ್ವಾಮಿ
ಪತಿದೇವರೆ ಮಾಚಪ್ಪ
ನನ್ನ ಮಗನ ಗ್ಯಾನ ಬಂದಾಗ
ನನ್ನ ಮಗನ ಪಾದ ನೋಡ್ಕತಾ ಅವನ ಕೈ ನೊಡ್ಕತಾ
ನನ್ನ ಮಗನ ಮೊಕಾ ನೋಡ್ಕಂಡು
ನನ್ನ ದುಃಖ ಪರಿಮಾರ ಮಾಡ್ಕೋತೀನಿ ದೇವ
ನನ್ನ ಮಗನ ಕಾಲು ಕೈಯ ತಲೆ ತರಿದು
ನನ್ನ ಕೈಲಿ ಕೊಟ್ಬುಡಿ ಗುರುವು
ಈ ಪಟ್ಟೆ ವಸ್ತ್ರದಲ್ಲಿ ಕಟ್ಟಿಮಡೀಕತ್ತೀನಿ
ಅಟ್ಟದ ಮೇಲೆ ಮಡೀಕೊಂಡು
ನನ್ನ ಮಗನ ಗ್ಯಾನ ಬಂದಾಗ ನೋಡಕೊಂಡು
ಬಾಳಿ ಬದುಕುತೀನಿ ಗುರುದೇವ ಎಂದರು
ಆಗಲಿ ಮಡದಿ ಮಲ್ಲಿಗದೇವಿ ಅಂತೇಳಿ ಮಾಚಪ್ಪ

06_79_Mante-KUH

ಅವನು ಪಿಡುವುಗೊಳ್ಳಿ ತಗದನಂತೆ
ಮಗನ ಕಾಲ ಕಡಿದನಾಗ || ಸಿದ್ಧಯ್ಯ ||

ಪಿಡುಚುಗೊಳ್ಳಿ ತಗದು ದೇವಾ
ಮಗನವೆರಡು ಕಾಲು ಮಗನವೆರಡ ಕೈಯನ್ನೇ ತರಿದು
ಮಗನ ತಲೆ ತಗದು
ಮಡದಿ ಮಲ್ಲಿಗ ದೇವಿ ಕೈಲಿ ಕೊಟ್ಟು
ಪಟ್ಟೆ ವಸ್ತ್ರದಲ್ಲಿ ಕಟ್ಟಿ ಮಡೀಕೊಂಡು ಮಲ್ಲಿಗದೇವಿ

ಅಟ್ಟಾದ ಮೇಲೆ ತಾಯಿ
ಮರೆಯಾಗಿ ಮಡುಗುತಾಳೆ || ಸಿದ್ಧಯ್ಯ ||
ಅಮ್ಮಾ ಅಟ್ಟಾದ ಮೇಲೆ ತಾಯಿ
ಬಚ್ಚಿಟ್ಟು ಮಡುಗುತಾಳೆ || ಸಿದ್ಧಯ್ಯ ||

ಅಟ್ಟದ ಮೇಲೆ ತಾಯಿ
ಬಚ್ಚಿಟ್ಟು ಮಡೀಕೊಂಡ್ರು ತಾಯಿ ಮಲ್ಲಿಗಮಾದೇವಿ
ಆಗ ಮಡಿವಾಳ ಮಾಚಪ್ಪನವರು
ತಾಯಿ ಮಲ್ಲಿಗದೇವಿ ಮೊಕ ನೋಡುತ್ತ
ಆಗಲೀಗ ಕಟ್ಟು ಮಡಗಿರ್ತಕ್ಕಂಥ ಪೊಟ್ಟಣ ನೋಡುತ್ತಾ
ಆಗಲೀಗ ತಾಯಿ ಮಲ್ಲಿಗಮಾದೇವಮ್ಮನಗೆ
ಮಡಿವಾಳ ಮಾಚಪ್ಪ
ತಲೆ ಕಾಲು ಕೈ ತೆಗೆದು ಮಡದೀ ಕೈಲಿ ಕೊಟ್ಟುಟ್ಟು

ಅವನು ಎದೆನ್ನೇ ಬಗೆದನಂತೆ
ಎರಡು ಪಕ್ಕೆ ಇಸಿದನಂತೆ || ಸಿದ್ಧಯ್ಯ ||

ಗುರುವೇ ಎದೆಯನ್ನೇ ಬಗೆದು
ಎರಡು ಪಕ್ಕೆ ಇಸಿದು ನನ್ನ ಮಡುವಾಳು ಮಾಚಪ್ಪ
ಗುರುವೇ ಕಳ್ಳು ಬಳ್ಳಿ ತಗದು ಅದು ಬ್ಯಾರೆ ಮಡಗವನೆ
ಗುರುವೇ ಈಲಿ ಗುಂಡ್ಕಾಯಿ ತಗದು ಅದು ಬ್ಯಾರೆ ಮಡಗವನೆ
ಗ್ವಾಡೆತಾವ ತಗದು ಅದು ಬ್ಯಾರೆ ಮಡಗವನೆ

ಅವನು ಖಂಡ ಮುಂಡ ಕೂದರಂತೆ
ಭಂಗಿ ಬಾಡು ಮಾಡುತಾರೆ || ಗಂಗಾಧರ ||

ಗುರುವೇ ಖಂಡ ಮುಂಡ ಕೂದು
ಭಂಗಿ ಬಾಡು ಮಾಡಿ
ಈಲಿ ಗುಂಡ್ಕಾಯಿ ತಗದು
ಅದು ಬೇರೆ ಉರಿದು
ಕಳ್ಳು ತೊಳ್ಳೆ ತಗದು ಅದು ಬ್ಯಾರೆ ಗೊಜ್ಜು
ಮಾಡವ್ನೆ ನನ್ನ ಗುರುವು
ರಕುತವನ್ನೆ ತಗದು
ಅದು ಬ್ಯಾರೆ ಉರಿದವರೆ
ಅವರು ಮೂಳೆ ಮಾಂಸ ತಗುದರಲ್ಲಿ
ಮೂಲೆ ಚರ್ಮ ಮಾಡುತಾರೆ || ಗಂಗಾಧರ ||

ಅವರು ಗ್ವಾಡೆತಾವ ತಗದು
ಅದು ಬ್ಯಾರೆ ಸುಟ್ಟವರೆ
ನನ್ನ ಮಡುವಾಳ ಮಾಚಪ್ಪ

ಅವನು ಒಬ್ಬ ಮಗನ ದ್ರೇಹದಲ್ಲಿ
ಐದು ಅಡಿಗೆ ದುಡುಗುತಾನೆ || ಸಿದ್ಧಯ್ಯ ||

ಒಬ್ಬ ಮಗನ ದ್ರೇಹದಲ್ಲಿ ದೇವಾ
ಐದು ಬಗೆ ಅಡುಗೆ ಸಾರು ಮಾಡಿ
ತಾಯಿ ಮಲ್ಲುಗದೇವಿ ಮಡಿವಾಳ ಮಾಚಪ್ಪ
ಆಗಲೀಗ ಜಗತ್ತು ಗುರುಗಳು ಪಾದ ನೆನಕೊಂಡು
ಹಣ್ಣು ಕಾಯಿ ಧೂಪ ಸಾಮ್ರಾಣಿ
ಗೊನೆಮುರದ ಬಾಳೆ ಎಲೆ
ಎಲ್ಲಾನು ತಂದು ಒಂದಗೂಡಕೊಂಡು
ಮಾಚಪ್ಪ ಮಲ್ಲಿಗದೇವಿ ಯೋಚ್ನೆ ಮಾಡುತವರೆ
ಈಗ ಸ್ತಾನಕ್ಕೋದ ಧರೆಗೆ ದೊಡ್ಡವ್ರು ಇನ್ನೂ ಬರ್ಲಿಲ್ವಲ್ಲ
ಅಡಿಗೆ ದುಡಗಿದವಲ್ಲ ಎನುತೇಳಿ ಮಾಚಪ್ಪ ಮಲ್ಲಿಗದೇವಿ

ಧರೆಗೆ ದೊಡ್ಡವ್ರು ಪಾದ
ಅವರ ಮನದಲ್ಲಿ ನೆನುದಾರು || ಸಿದ್ಧಯ್ಯ ||

ಧರೆಗೆ ದೊಡ್ಡವ್ರ ಪಾದ ನೆನೀತಾ
ತಾಯಿ ಮಲ್ಲಿಗದೇವಿ ಮಾಚಪ್ಪ ಪಟ್ಟೆ ಅರಮನೇಲಿ ಇದ್ದರು
ಈ ಧರೆಗೆ ದೊಡ್ಡವರು
ಮಾಚಪ್ಪ ಮಲ್ಲಿಗದೇವಿ ಧ್ಯಾನ ಮಾಡುವುದು ಕಿವಿಗೆ ಅರಿವಾಯ್ತು
ನೋಡಿದೆಯಾ ಮಾಚಪ್ಪ ಅಡಿಗೆ ದುಡೀಕೊಂಡು
ಧರೆಗೆ ದೊಡ್ಡಯ್ಯ ಅಂತ್ಹೇಳಿ ನನ್ನ ಗ್ಯಾನ ನನ್ನ ಸ್ವರಣೆ ಮಾಡ್ತವ್ರೆ
ಈಗ ಮಾಚಪ್ಪನ ದುಡ ನೋಡ್ಬೇಕು
ಅವರು ಮಡದಿ ಮಲ್ಲಿಗಮಾದೇವಮ್ಮನ ಸತ್ಯ ನೋಡಬೇಕು

ಅವರು ಗಂಡ ಹೆಂಡತೀರ ದುಡುವ
ಈಗ ತಾನೆ ನೋಡಬೇಕು || ಸಿದ್ಧಯ್ಯ ||

ಇವರ ಗಂಡಾ ಹೆಂಡಿರ ದುಡುವ
ಈಗ ತಾನೆ ನಾ ನೋಡಬೇಕು ಅನತೇಳಿ
ನನ್ನ ಧರೆಗೆ ದೊಡ್ಡಯ್ಯ
ಅವರು ಕಂಡಾಯವ ತಗೊಂಡು ತಂಬೂರಿ ತಕ್ಕೊಂಡು
ಜಾಗಟೆಯ ಹಿಡಕಂಡು ಕೆಂಪುಲಕ್ಕಿ ಗೂಡ ಎಡಗೈಲಿ ಹಿಡಕಂಡು
ಕಂಡುಗ ಧ್ಯಾನದ ಬು‌ಕ್ಕು
ಕಾಲುಗಧ್ಯಾನದ ಬುಕ್ಕ ಕಂಕ್ಳಲ್ಲಿ ಇರುಕೊಂಡು
ಅವರು ಉತ್ತುರ ದೇಶದ ಕಂಡಾಯ ಹೆಗಲ ಮೇಲೆ ಹೊತ್ತುಕೊಂಡು
ನಿಶಾನಿ ದಳಾವ ಬಲಗೈಲಿ ಹಿಡಕಂಡು
ನೂರು ಒಂದು ಬಿರುದುಗಳ ಧರಿಸ್ಕೊಂಡು ನನ್ನಪ್ಪ
ಕಂಡಾಯ್ದ ಮೂರ್ತಿ

ಅವರು ಮಡಿವಾಳು ಮಾಚಪ್ನ ಮನೆಗೆ
ಸ್ವಾಮಿಯೇ ದಯಮಾಡುತಾರೆ || ಸಿದ್ಧಯ್ಯ ||

ಅವರು ಮರುಳಿನ ಪವಾಡದ
ಮೇಲೆ ಗೊಳ್ಳಗೊಳ್ಳನೆ ಬಂದರಲ್ಲ || ಸಿದ್ಧಯ್ಯ ||

ಮುಳ್ಳಿನ ಪವಾಡದ ಮೇಲೆ ದೇವಾ
ತಾವಾಗಿ ಬಂದ್ರು ಜಗತ್ತು ಕತೃ ಧರೆಗೆ ದೊಡ್ಡಯ್ಯ
ಮಡಿವಾಳ ಮಾಚಪ್ಪನ ಹಟ್ಟಿ ಅರಮನೆಗೆ ಬಂದು
ಬಾಗಿಲು ಮುಂಭಾಗದಲ್ಲಿ ನಿಂತುಕೊಂಡರು
ಬಂದಂತ ಜಗತ್ತು ಗುರುಗಳ ಮೊಕ
ತಾಯಿ ಮಲ್ಲಿಗದೇವಿ ಮಡಿವಾಳ ಮಾಚಪ್ಪ ಕಣ್ಣಿಂದ ನೋಡಿದರು
ಮಲ್ಲಿಗದೇವಿ
ಈವತ್ತು ಜಗತ್ತು ಗುರುಗಳು ನಮ್ಮ ಮನೆಗೆ ಬಂದ್ಬುಟ್ರು ಅಂತ್ಹೇಳಿ
ಮಡಿವಾಳ ಮಾಚಪ್ಪ
ಧರೆಗೆ ದೊಡ್ರವ್ರ ಪಾದಕ್ಕೆ ಮಣೆ ತಂದು ಮಡಿಗಿದರು
ತಾಯಿ ಮಲ್ಲಿಗದೇವಿ ತನ್ನ ಇರಗಿಂಡಿವೊಳಗೆ ಆಗಣೆ ತುಂಬಕೊಂಡು
ಧರೆಗೆ ದೊಡ್ಡವರ ಬಳಿಗೆ ಓಡೋಡಿ ಬಂದು
ಧರೆಗೆ ದೊಡ್ಡವರ ಪಾದ ತೊಳೆದು
ಪಾದಕ್ಕೆ ಕಸಿ ಕುಂಕುಮ ಗಂಧ ಈಬುತ್ತಿ ಬಸುವಂಗನೇ ಧರಿಸಿ
ಆಗಲೀಗ ಕಾಯೊಡಿದು ಹಣ್ಣು ಮುರಿದು ಕರ್ಪೂರ ಸಾಂಬ್ರಾಣಿ
ಲೋಬ ಬೆಳಗ್ಬುಟ್ಟು
ಭಾರೀ ಕಂಡಾಯ್ಕೆ ಕೂಡ ಮಂಗಳಾ ಬೆಳಗ್ಬುಟ್ಟು
ಮಾಚಪ್ಪ ಮಲ್ಲಿಗದೇವಿ
ಗುರುದೇವ ಈವೊತ್ತು ನಮ್ಮ ಮನೆವೊಳಗೆ ರುಚಿಯಾದ ಅಡುಗೆ
ಈಗಲೀಗ ನನ್ನ ಹಟ್ಟಿ ಅರಮನೆಗೆ ಬನ್ನೀ ಗುರುವೂ
ನಮ್ಮ ಮನೆಗೆ ಬನ್ನೀ ನನ್ನಪ್ಪ ಅಂತ್ಹೇಳಿ
ಮಡುವಾಳು ಮಾಚಪ್ಪ
ಮುಂದುಲ ಮಡಿ ಬುಡ್ತರಂತೆ
ಅವರ ಮಡದಿ ಮಲ್ಲಿಗಮಾದೇವಮ್ಮ
ಹಿಂದಿಲ ಮಡಿ ಎತ್ತರಂತೆ

ಅವರು ನಡುಮುಡೀ ಮೇಲೆ ನನ್ನ
ಜ್ಯೋತಿ ಲಿಂಗಯ್ಯ ಬರುವತಾರೆ || ಸಿದ್ಧಯ್ಯ ||

ಗುರುವೇ ನಡುಮುಡಿಯ ಮ್ಯಾಲೆ
ಧರೆಗೆ ದೊಡ್ಡವರು ತಾವಾಗಿ ಬರುವಾಗ
ಮಡುವಾಳು ಮಾಚಪ್ಪ ಮುಂದಲ ಮಡಿ ಬುಡುತಾರೆ
ಅವರ ಮಡದಿ ಮಲ್ಲಿಗದೇವಿ ಗುರುವೆ ಹಿಂದಿಲ ಮಡಿ ಎತ್ತುತಾರೆ

ಜಗತ್ತು ಗುರುಗಳ ಕರ್ಕೊಂಡು ಬಂದು ಮಾಚಪ್ಪ ಮಲ್ಲಿಗದೇವಿ
ನಡು ತೊಟ್ಟೀವೊಳಗೆ ಪಟ್ಟೇ ಮಂಚ
ಮಂಚಕ್ಕೆ ಕರ್ಕೊಂಡು ಬಂದು
ಗುರುದೇವ ಈ ಪಟ್ಟೇ ಮಂಚದ ಮೇಲೆ ನೀವು ಮೋರ್ತವಾಗಿ
ನಡುಮನೆವೊಳಗೆ ಭಾರೀ ಕಂಡಾಯ ಪೂಜಿ
ನಡುಮನೆವೊಳಗೆ ಭಾರಿಸುವ ತಂಬೂರಿ ಪೂಜ್ಬುಡಿ ಎಂದರು
ಆಗಲೀ ಕಂದ ಮಾಚಪ್ಪ
ಮಾಚಯ್ಯ ಈಗ ಆಗಲೇ ಅಡಿಗೆ ತಯಾರಾಗಿದ್ದವ
ಖಂಡಿತವಾಗೂ ಆಗದೇ ಸ್ವಾಮಿ
ಅಡಿಗೆ ದುಡಿಗಿವಿ ಎತ್ತಯ್ಯ
ಈಗ ಭಿನ್ಯವಳಿಯದೇ ಬಾಕಿ
ನಿಮ್ಮ ಬಿರುದ ಮಡಗುಬುಡಿ ನನ್ನಪ್ಪ ಎಂದರು
ಆಗಲೀ ಮಗನೇ ಆಗಲೀ ಕಂದಾ ಅಂತ್ಹೇಲಿ ಧರೆಗೆ ದೊಡ್ಡವರು
ಆಗಲೀಗ ಮಾಚಪ್ಪನ ದೊಡ್ಡ ಮನೆವೊಳಗೆ
ಭಾರಿ ಕಂಡಾಯ ಪೂಜ್ಬುಟ್ಟು
ಭಾರಿಸುವಂಥ ತಂಬೂರಿ ಪೂಜ್ಬುಟ್ಟು
ಮಾಚಪ್ಪನ ಅಟ್ಟೀವೊಳಗೆ ಮುತ್ತಿನ ಜೋಳಿಗೆ ಕೂಡ ಪೂಜ್ಬುಟ್ಟು
ನಿಶಾನೆಗಾಳ ತಕ್ಕೊಂಡೋಗಿ ನಿಶಾನೇಲಿ ನಿಲ್ಲಿಸ್ಬುಟ್ರು
ಪಟ್ಟೆ ಮಂಚಕ್ಕೆ ಒಂದು ಮೂರ್ತವಾಗಿ ಕೂತ್ಕಂಡ್ರು ಧರೆಗೆ ದೊಡ್ಡೋವ್ರು
ಗುರುದೇವ ಊಟ ಮಾಡಿ ತಂದೆ
ಭಿನ್ಯ ಅಳೀರಿ ನನ್ನಪ್ಪಾ ಎಂದರು
ಮಾಚಪ್ಪ ನನ್ನ ಊಟ ನನ್ನ ಭಿನ್ನ ಹಾಗಿರಲಿ
ನನ್ನ ಭಾರಿಯ ಕಂಡಾಯ್ಕೆ ಎಡೆಯನ್ನೆ ಮಾಡಪ್ಪ
ನಾ ಭಾರ್ಸುವ ತಂಬೂರಿಗೆ ಎಡೆಯನ್ನೆ ಮಾಡಯ್ಯ
ನನ್ನ ಭೂಮಿ ತೂಕದ ಜೊಳಿಗ್ಗೆ ಎಡೆಯನ್ನೆ ಮಾಡಪ್ಪ
ನನ್ನ ನಿಶಾನೆಗೆ ಕಂದ ಒಂದೆಡೆ ಮಡುಗಪ್ಪ

ನನ್ನ ಬಿರುದುಗೆಡೆ ಆದ ಮೇಲೆ
ನನ್ನಗೊಂದೆಡೆಯ ಮಡಗು ಮಗನೇ || ಸಿದ್ಧಯ್ಯ ||

ನನ್ನ ಬಿರುದುಗೆಡೆ ಆದ ಮೇಲೆ
ನನಗೆ ಎಡೆಯ ಪಡಸು ಕಂದ || ಸಿದ್ಧಯ್ಯ ||

ಮಾಚಪ್ಪ
ನನ್ನ ಬಿರುದಿಗೆ ಮೊದಲಾಗಿ ಎಡಪಡಿಸು
ನನ್ನ ಬಿರುದಿಗೆ ಎಡೆಯಾದ ಮೇಲೆ
ನನಗೆ ಎಡೆಪಡಿಸು ಕಂದ ಎಂದರು
ಆಗ ತಾಯಿ ಮಲ್ಲಿಗದೇವಿ
ಮಡಿವಾಳ ಮಾಚಪ್ಪ
ಓಡೋಡಿ ಬಂದು ಗೊನಮುರಿದ ಬಾಳೆ ಎಲೆ ತಂದು
ಬಾರೀ ಕಂಡಾಯ್ಕೆ ಎಡೆ ಪಡಿಸಿ
ಧರೆಗೆ ದೊಡ್ಡವರು ಭಾರಿಸುವಂಥ ತಂಬೂರಿಗೂ ಎಡೆಪಡಿಸಿ
ಧರೆಗೆ ದೊಡ್ಡವರ ಮುತ್ತಿನ ಜೋಳಿಗೆ ಒಂದೆಡೆ ಪಡಿಸಿ
ನಿಶಾನೆ ದಾಳಕ್ಕೆ ಒಂದೆಡೆ ಪಡಿಸಿಬುಟ್ಟು
ಕಾಯೊಡೆದು ಹಣ್ಣು ಮುರಿದು
ಕರ್ಪೂರ ಸಾಂಬ್ರಾಣಿ ಲೋಬ ಬೆಳಗುಬುಟ್ಟು
ಭಾರೀ ಕಂಡಾಯ್ಕ ಭಾರಿಸುವ ತಂಬೂರಿಗೆ ಮುತ್ತಿನ ಜೋಳಿಗೆಗೆ
ನಿಶಾನೆ ದಾಳಕ್ಕೂ ಕೂಡ ಮಂಗಳಾರ್ತಿ ಬೆಳಗ್ಬುಟ್ಟು
ಗುರುದೇವ
ಈಗ ನಿಮ್ಮ ಬಿರುದಿನ ಪೂಜೆ ತೀರ್ತು ಸ್ವಾಮಿ
ಈಗಲಾರೂ ಭಿನ್ನ ಅಳೀರಿ ಊಟ ಮಾಡೀ ತಂದೆ ಎಂದರು
ಮಾಚಪ್ಪ ನನ್ನ ಬಿರುದಿಗೆ ಎಡೆಯಾಗೋಯ್ತ
ಆಯ್ತು ಗುರುವೇ

ಕಂದಾ ಐದನೇ ಎಡೇ ತಂದು
ನನಗೇ ಬಡಿಸಪ್ಪ ಮಗನೇ || ಸಿದ್ಧಯ್ಯ ||

ಗುರುವೇ ಮಡಿವಾಳ ಮಾಚಪ್ಪನ ನಡುಮನೆಯವೊಳಗೆ
ಧರೆಗೆ ದೊಡ್ಡಯ್ಯ

ಅವರು ಭಿನ್ನಕೆ ಕುಳಿತರಂತೆ
ಹೆತ್ತಯ್ಯ ಮಂಟೇದಸ್ವಾಮಿ || ಸಿದ್ಧಯ್ಯ ||

ತಾವಾಗಿ ಕೂತ್ಕಂಡ್ರು ಜಗತ್ತು ಗುರು ಧರೆಗೆ ದೊಡ್ಡಯ್ಯ
ಮಡಿವಾಳು ಮಾಚಪ್ಪ ತಾಯಿ ಮಲ್ಲಿಗದೇವಿ
ಜಗತ್ತು ಗುರು ಧರೆಗೆ ದೊಡ್ಡವರ ಮುಂಭಾಗದಲ್ಲಿ
ಬಾಳೆಯೆಲೆ ಮಡುಗಿ
ಎಲೆ ಮೇಲೆ ತಾಯಿ ಮಾಡಿರ್ತಕ್ಕಂತ ಪರ್ಸಾದ ಎಲ್ಲಾನು ಪಡಿಸಿ
ಸನ್ಣಕ್ಕಿಯನ್ನ ಇಕ್ಕಿ ಭಂಗಿ ಮಾಂಸವ ಹಾಕಿ
ಮಾಡಿರ್ತಕ್ಕಂಥ ಪರ್ಸಾದ ಎಲ್ಲಾನು ಪಡಿಸಿಬಿಟ್ಟು
ಕಾಯೊಡೆದು ಕಡ್ಡೀ ಕರ್ಪೂರ ಕಸ್ಸಿ ಮಂಗಳಾರ್ತಿ ಬೆಳಗ್ಬುಟ್ಟು
ಧರೆಗೆ ದೊಡ್ಡವ್ರ ಪಾದ ಮುಟ್ಟಿ ಶರಣ ಮಾಡ್ಬುಟ್ಟು
ಗುರುದೇವಾ
ನಾವು ಸತಿ ಪತಿ ಇಬ್ರು ಮರೆಯಾಗೋಯ್ತೀವಿ
ನೀವು ಊಟ ಮಾಡಿ ಭಿನ್ನ ಅಳೀರಿ ಸ್ವಾಂಇ ಎಂದರು
ಮಾಚಪ್ಪ
ಊಟ ಇಕ್ಕುಬುಟ್ಟು ಮರಿಯಾಗೋದ್ರಿಯಾ ಕಂದ
ಮಾಚಯ್ಯ ಹೇಳ್ತೀನಿ ಕೇಳು
ನೀನು ಮಾಡಿರ್ತಕ್ಕಂಥ ಅಡುಗೆ ಪರ್ಸಾದವೆಲ್ಲ
ಬಾಳ ರುಚಿಯಾಗಿದ್ದುದಪ್ಪ?
ಬಹು ರುಚಿಯಾಗದೇ ಬುದ್ಧಿ
ಬಾಳ ರುಚಿಯಾಗದೆ ಊಟಮಾಡಿ
ಊಟ ಮಾಡಿ ನೋಡಿ ಗುರುವೆ ಎಂದರು
ಮಾಚಪ್ಪ ಹೊರಟೋಗ್ಬೇಡ ಇಲ್ಲೇ ನಿಂತುಕೋ
ಎನುತೇಳಿ ಜಗತ್ತುಗುರು ಧರೆಗೆ ದೊಡ್ಡಯ್ಯ

ಅವರು ಇಕ್ಕಿರುವ ಮಾಂಸಾನೆಲ್ಲ
ಹಿಸುಕಿ ಹಿಸುಕಿ ನೋಡುತಾರೆ || ಸಿದ್ಧಯ್ಯ ||