ಅಯ್ಯಾ ಕುರಿಯದೊಡ್ಡಿಗೆ ಗುರುವೇ
ಓಡಿ ಓಡಿ ಬಂದಾ
ಹಾಲು ಮತಸ್ತಾ
ಬೊಪ್ಪೇಗೌಡ ಗುರುವು
ಅಲ್ಲಿ ಬಾಗುಲು ಮುಂದೇ
ಜಗತ್ತು ಗುರು ದೇವಾ
ಧರೆಗೆ ದೊಡ್ಡಯ್ಯ
ಅವರು ಮಾಯ್ದ ಹುಲಿಯ ಮಾಡಿದುರಂತೆ
ಬಾಗುಲು ಮುಂದೆ ನಿಲ್ಸಿದರಲ್ಲ || ಸಿದ್ಧಯ್ಯ||

ಅಗಲೀಗಾ ಕುರಿಕ್ವೊಟ್ಟಿಗೆ ಬಾಗಿಲಲ್ಲಿ
ಮಾಯ್ದ ಹುಲಿ ಮಾಡಿ ಗುರುದೇವಾ
ಕುರಿಕ್ವೊಟ್ಟಿಗೆ ಬಾಗಲಲಿ ನಿಲ್ಲಿಸಿದ್ರು ಧರೆಗೆ ದೊಡ್ಡವರು
ಹುಲಿಗೊಳ ನೋಡಿಬುಟ್ಟು
ಅಯ್ಯೋ ತಂದೆ ಬಪ್ಪೇಗೌಡ
ಕುರಿ ಇರುವಂತ ಮನೆಯೊಳಗೆ
ಹುಲಿ ಸೇರಿಬುಟ್ಟದಲ್ಲಾ
ಈ ಹುಲಿ ಭರ್ಗ ಎಲ್ಲಿಂದ ಬಂದುಬುಡುತೋ
ಯಾತಾವಲಿಂದ ಬಂದು ಬುಡ್ತೊ ಎನುತೇಳಿ

ಅಪ್ಪ ಕುರಿ ಹೋದ್ರುವೇ ಗುರುವೇ
ಕ್ವೊಟ್ಟಿಗೇಗೆ ಹೋಗುಬ್ಯಾಡ || ಸಿದ್ಧಯ್ಯ||

ಕುರಿಗಳು ಹೋದ್ರು ಮತ್ತ ಸರಿಯೇ ತಂದೇ
ಕುರಿಮರಿಗಳು ಒಂಟೋಗುಬುಟ್ರು ಸರಿಯೇ
ಈ ಹುಲಿ ಇರುವಂತಾ
ಕುರಿ ಹೊಟ್ವಿಗೆಗೆ ಕಂಡುತವಾಗು
ಹೋಗುಬ್ಯಾಡಿ ಎಂದರು
ಅಗಾಲೀಗ ಬೊಪ್ಪೇಗೌಡ
ಯಾವ ಮಾಟ್ಲುಕಾರ ಜಂಗುಮನೋ
ಮಾಯ್ಕಾರ ಜಂಗುಮನೋ
ಯಾವ್ಮುಂಡೆ ಮಗ ನಮ್ಮ ಮನೆಗೆ
ಬಂದುದುನೋ ಗೋತ್ತಿಲ್ವಲ್ಲ ಅಂತೇಳಿ
ಕುರಿ ಕ್ವೊಟ್ಟಿಗೆ ಬಗ್ಗಿ
ಕ್ವೊಟಿಗೆ ನೋಡಿದುರು
ಉಲಿ ಚರ್ಮ ಹಾಸಾದೇ
ಬಾರಿ ಕಂಡಾಯಾ ಭೂಮಿಗೆ ನಾಟದೆ
ಉಲ್ಲೆ ಚರ್ಮ ಮಡ್ಗದೆ
ಧರೆಗೆ ದೊಡ್ಡವರ ಮುತ್ತಿನ ಜೋಳಿಗೆ ಕೂಡ ಮಡ್ಗದೆ

ಅವನು ಜೋಳಿಗೆ ಬೆತ್ತ ನೋಡಿಕಂಡು
ಅವನು ಬಾಳ ಚಿಂತೆ ಮಾಡುತಾನೆ || ಸಿದ್ಧಯ್ಯ||

ತಾನಾಗಿ ಗುರದೇವಾ
ನನ್ನಾ ಬಾಳವ್ನ ಬಾಳಾಟ ಎಂತಾ ಬಾಳಾಟವಾಗಿಬುಡ್ತು
ನನ್ನ ಅಟ್ಟಿಲಿದ್ದಂತಾ
ಕುರುಗಳೆಲ್ಲಾ ಹೊರಟೋಗ್ಬುಟ್ಟೊ
ಸತ್ತು ಸುತ್ತು ಪ್ರಾಣ ಬುಟ್ಟುಬುಟ್ವಲ್ಲ ಎನುತೇಳಿ
ಆಗಲೀಗಾ ಕುರಿ ಕ್ವೊಟ್ಟಗೆಬುಟ್ಟು
ಹಟ್ಟಿ ಅರಮನೆಗೆ ಬಂದಾ
ಆಗಲೀಗಾ ಅವರಟ್ಟಿ ಅರಮನೇಲಿರ್ತಕಂತಾ
ಅಕ್ಕಿಬೇಳೆ ಮುತ್ತು ರತುನಾ
ಹಣಾಕಾಸೆಲ್ಲ ಮಣ್ಣು ಪಾಲಾಗಿತ್ತು
ಮಣ್ಣು ಪಾಲಾಗಿರ್ತತಂತಾ ಅರಮನೆ ಅಸ್ತಾನಾ
ಕಣ್ಣಾರೇ ನೋಡುಬುಟ್ಟು ಬೊಪ್ಪೇಗೌವುಡ

ಅವರ್ಗೆ ದುರುಳಾಗ್ಯಾನಾ ಹೋಗಿತಂತೆ
ಗುರು ಗ್ಯಾನಾ ಬಂದಿತಲ್ಲ|| ಸಿದ್ಧಯ್ಯ||

ಅಯ್ಯಯ್ಯೋ ಗುರುದೇವಾ
ಈಗಲೀಗಾ ನನ್ನ ದ್ರೌಭಾಗ್ಯವೆಲ್ಲ
ಮಣ್ಣು ಪಾಲಾಗಿ ಬಿಡುತಲ್ಲೋ
ಈಗ ನನ್ನ ಮನೆ ಮಠದಲಿರ್ತಕಂತಾ
ಹಣಾಕಾಸಾಳಾಗದಂಗೆ
ಉಟ್ಟುದಾ ಮಕ್ಕಳು ಹಾಳಾಗ್ಬುಟ್ಟವೊ ಕಾಣೆ
ತಂದ ಮಡದಿ ಹಾಳಾಗಿಬುಟ್ಟಳೋ ಗೊತ್ತಿಲ್ಲವಲ್ಲ
ನಾನೆ ಕೆಟ್ಟೋಗಿಬುಟ್ಟನೋ ಕಾಣೆನಲ್ಲ
ಇದು ಯಾವ ಕಷ್ಟುವಲ್ಲ ಕಾಯ್ಲುವಲ್ಲ
ನಮ್ಮ ಮನೆಗೆ ಬಂದಿರ್ತಕಂತ ಜಂಗುಮರಿಂದೇ
ನಮಗಿಂತಾ ಕಷ್ಟ ಕಾಯಿಲೇ ಬಂದಿರಬಹುದು
ಈಗಲೀಗಾ ನನ್ನ ಮನೆಗೆ ಬಂದಿದ್ದಂತಹ ಸ್ವಾಮಿ
ನಿಜ ರೂಪುನಲ್ಲಾದ್ರು ಬಂದು
ಮೂರು ಮಾತಾಡಿಬುಟ್ಟು
ಅವರಲಿರ್ತುಕಂತಾ ವಾರ್ತೆ ನನಗಾರು ಹೇಳುಬುಟ್ಟುರ

ಈ ಸ್ವಾಮಿ ಹೇಳಿದಂಗೆ ನಾನು
ಕೇಳುತ್ತೇನೆ ಎಂದರಲ್ಲಾ || ಸಿದ್ಧಯ್ಯ||

ಆ ಸ್ವಾಮಿ ಹೇಳಿದಂಗೆ ಕೇಳಿಕಂಡು
ನನ ಮನಿಕಾಲ ಉಳಿಸಿಕಂಡು ಬಾಳಿ ಬದುಕುವುದಲ್ಲ ಅಂತೇಳಿ
ಧರೆಗೆ ದೊಡ್ಡವರ ಗ್ಯಾನ ಮಾಡುತಿದ್ದುರು
ಅದೇ ಹೊತ್ತಿನಲ್ಲಿ ಮಾ ಗುರು ಪರಂಜ್ಯೋತಿಯವರು

ಬಪ್ಪೇಗೌಡರ ಮನೆಗೆ ಗುರುವೇ
ನಿಜ ರೂಪಾಗಿ ಬಂದರಲ್ಲಾ || ಸಿದ್ಧಯ್ಯ||

ಅಯ್ಯಾ ಬಪ್ಪೆಗೌಡನ ಮನೆಗೆ ಗುರುವೇ
ನಿಜರೂಪನಾ ಒಳಗೆ
ಬಂದರು ನನ್ನಪ್ಪಾ
ಧರೆಗೆ ದೊಡ್ಡಯ್ಯ
ಮಂಟೇದ ಲಿಂಗಪ್ಪ
ಅಯ್ಯಾ ಕೇಳಪ್ಪ ನನ ಕಂದಾ
ಕೇಳಪ್ಪ ನನ ಮಗನೇ
ಕೇಳಯ್ಯ ಗವುಡಾ
ನೀನು ಕಟ್ಟಿರುವಂತಾ ಮನೆ
ನನಗೆ ಮಠಮನೆಯಾಗಲುಬೇಕು
ನನಗೆ ಮಠತೋಪಾಗಲುಬೇಕು
ನಿಮ್ಮ ಮಠದ ಮುಂದೆ ನನಗೆ
ಚಂದ್ರಶಾಲೆಯಾಗಬೇಕು
ಮಠದ ಮುಂದೆ ನನಗೆ
ಮಜ್ಜಣದ ಬಾವಿಯಾಗಲೇಬೇಕು
ಈ ಮಡುವಾಳು ಮಾಚಪ್ಪ
ಉಬ್ಬೆ ಒಲೆ ನನಗೆ
ಉರಿಗದ್ದಿಗೆಯಾಗಬೇಕು
ಮಡಿವಾಳ ಮಾಚಯ್ಯ
ಚೌಳು ಮಣ್ಣು ತುಂಬುವಾ
ಮನೆ ನನ ಗುರುವು
ನನಗೆ ಉಗ್ರಾಣದ ಮನೆ
ಆಗಬೇಕು ಕಣಿರಪ್ಪ
ನೀವು ಎರಡು ಒಕ್ಕುಲು ಜನಾ
ಕಟ್ಟಿರುವ ಮನಿಯಾ
ನನಗಾಗಿ ಬಿಟ್ಟು ಬಿಟ್ಟು
ನೀವು ದಕ್ಷಾಣ್ಯ ದಿಕ್ಕಿಗೆ
ನೀವಾಗೆ ಹೊರಟೋಗಿ
ಕುಂತುನು ಸೋಪ್ಪಿನ ದೊಡ್ಡಿ
ನೀವಾಗಿ ಹಾಕಂಡು
ಊರಗಲು ನೀವು
ವಾಸವನ್ನೇ ಮಾಡಿದುರೇ
ನೀವು ಮಣ್ಣು ಇಡುದುರೇ
ನಿಮಗೆ ಕಂದಾ ಚಿನ್ನ ನಾನು ಮಾಡುತೀನಿ|| ಗಂಗಾಧರ ಲಿಂಗಯ್ಯಾ ಬನ್ನಿ||

ನಿಮಗೆ ಕಟ್ಟುದಾ ಹಸ ಕಂದಾ
ಕಟ್ಟುದ ಹಸ ಮಗನೇ
ಕರುಸಿತೀನಿ ಕಂದಾ
ನಿಮಗೆ ಬಿತ್ತುದಾ ಬೆಳೆ ಕಂದಾ
ನಾ ಬೆಳಿಸುತೀನಿ ಕಂದಾ
ನೀವು ಹೊನ್ನು ಹಿಡಿದ್ರುವೇ ಕಂದಾ
ನಾ ಚಿನ್ನವನ್ನೆ ಮಾಡಿ
ನೀವು ಒಂದು ಕುರಿ ಹಿಡಿದರೇ
ಒಂಬತ್ತು ಕುರಿ ಕೊಟ್ಟು
ಈ ಕುರಿಯಾ ಸಾಕಿದರೆ
ಕುರುಬನಿಗೆ ಈಡು
ಎನ್ನುವ ಹೆಸರಾ
ನರಲೋಕದ ಒಳಗೆ ನಿಮಗೆ
ಪಡೀತಿನಿ ನನ್ನ ಕಂದಾ
ನೀವು ಕಟ್ಟಿದ ಮನಿಯನು ಬಿ‌ಟ್ಟುಬಿ‌ಟ್ಟು
ನನಗೊಕ್ಕಲಾಗಿರಯ್ಯ|| ಬಪ್ಪಗೌಡ ಲಿಂಗಯ್ಯ ಬನ್ನಿ||

ಜಗತ್ತು ಗುರುಗಳಾ ಮಾತಾ ದೇವಾ
ಕಿವಿಯಾರಾ ಕೇಳಿಕಂಡು ಬಪ್ಪೆಗೌಡ
ಅಯ್ಯಾ ಗುರುವೇ ಗುರುದೇವಾ
ನಮ್ಮಟ್ಟಿಗೆ ಬಂದಿರ್ತಾಕಂತ
ಸ್ವಾಮಿ ಯಾರಾಗಿರಬಹುದು
ಈಗ ನಾನು ಒಂದೊಕ್ಕಲು ಜನಗಳಲ್ಲವಂತೆ
ನನ್ನ ಮನೆ ಪಕ್ಕದಲ್ಲಿರ್ತಕ್ಕಂತ
ಮಡಿವಾಳ ಮಾಚಯ್ಯಾ ನಾನಿಬ್ರುವೇ
ದಕ್ಷಾಣ್ಯದಿಕ್ಕಿಗೆ ಹೋಗಿ ಒಂಡುದ ಸೊಪ್ಪಿನ
ದೊಡ್ಡಿ ಕಟ್ಟಿಕಂಡು ದೊಡ್ಡವಳಗೆ
ನಾವು ಬಾಳಿ ಬದುಕಿದುರೇ
ಮಣ್ಣು ಇಡುದ್ರು ಚಿನ್ನಾ ಆದದಂತೆ
ನಾನು ಒಂದು ಕುರಿ ಕಟುದ್ರೆ
ಒಂಬತ್ತು ಕುರಿ ಹಚ್ವೊಕ್ಕಲಾದದಂತೆ
ಚಿನ್ನ ಬೆಳ್ಳಿ ಬಂಗಾರ
ಮುತ್ತುರವರತುನಾ ಕೊಟ್ಟಾರಂತೇ
ಈಗ ಮಡುವಾಳ ಮಾಚಪ್ಪ
ನನ್ನ ಮನೆ ಪಕ್ಕದಲಿ ಅವನು ಬಾಳ್ತಾನೆ
ನನ್ನ ಮನೆ ಕೆಟ್ಟೂದಂಗೆ
ಅವನ ಮನೆ ಕೆಟ್ಟೋನೋ ಕೆಡೋದಿಲ್ವೊ ಗೊತ್ತಿಲ್ಲ
ನಾವು ಎರಡಿ ಒಕ್ಕಲು ಜನಗಳು ಕೂಡಾ
ಧರೆಗೆ ದೊಡ್ಡವರಿಗೆ ಕಟ್ಟಿದ ಮನೆ
ಬಿಟ್ಟು ಹೊಂಟೋಗಬೇಕು ಅಂತೇಳಿ
ಆಗಲೀಗಾ ಮಡಿವಾಳ ಮಾಚಪ್ಪ
ಆಗಲೀಗಾ ಬಪ್ಪೇಗೌಡ
ದಕ್ಷಾಣ್ಯ ದಿಕ್ಕಿಗೆ ಗುರುವು
ಅಟ್ಟಿಲಿರ್ತುಕಂತಹ ಸಾಮಾಗ್ರಿಗಳೆಲ್ಲಾ ತುಂಬಿಕಂಡು
ಅಕ್ಕಿಬೇಳೆ ಎಲ್ಲಾನು ತಕಂಡು
ಮಾಚಪ್ಪ ಬಪ್ಪೇಗೌಡ

ಮನೆಯ ಬಿಟ್ಟು ಹೊರಗೆ ಅವರು
ಹೋದರು ಮಾಯಕಾರ || ಸಿದ್ಧಯ್ಯ||

ಮನೆಬುಟ್ಟು ಹೊರಗೆ ಹೊರಡ್ಹೋಗುವಾಗ ದೇವಾ
ಜಗತ್ತು ಗುರು ಅಲ್ಲಾಮಪ್ರಭು ಮಂಟೇದ ಲಿಂಗಪ್ಪ
ಪರಂಜ್ಯೋತಿ ಪಾವನ ಮೂರ್ತಿಯವರು
ಈ ಬೊಪ್ಪೇಗೌಡರ ಪುರಾ ಗುರುದೇವಾ
ನಾಳೆದಿವುಸ ನನಗೆ ಬೊಪ್ಪೇ ಗೌಡನ ಪುರವಾಯ್ತು ಅನತೇಳಿ
ಇವರ ಕರುಳಿ ಕುಂಟೆ ಒಂಟಿದೊಡ್ಡಿ
ನನಗೆ ಮಠಮನೆಯಾಯ್ತು
ಈ ಮಡಿವಾಳ ಮಾಚಪ್ಪನವರು
ಬಟ್ಟೆ ಬೇಯುವಂತ ಉಬ್ಬೆ ಒಲೆ ನನಗೆ
ಉರಿಗದ್ದಿಗೆ ಆಯ್ತು ಅನುತೇಳಿ
ಅವರ ಬಾಳ ಸಂತೋಷವನ್ನೆ
ಪಟ್ಟರಂತೆ ಮಾಯಕಾರ || ಗಂಗಾಧರ ಲಿಂಗಯ್ಯಾ ಬನ್ನಿ ||

ಮನೆಬಿಟ್ಟು ಹೊರ ಹೊರಟೋದಂತಾ
ಈ ಬೊಪ್ಪೇಗೌಡರಿಗೆ ನಾನು ಶಾಪ ಕೊಡಬೇಕು
ಎಂಬುದಾಗಿ ಜಗತ್ತು ಗುರು
ಕೇಳಪ್ಪ ಬೊಪ್ಪೇಗೌವುಡ
ಈ ಜಲ್ಮದಲ್ಲಿ ಕಂದಾ
ಹಾಳುಮತೊಸ್ತುರ ಹೊಟ್ಟೇಲಿ ಹುಟ್ಟಿ
ಬಪ್ಪೇಗೌವುಡ ಅಂತ ಎಳಿ
ನಾಮಕರಣ ಪಡಕಂಡು
ಇಷ್ಟು ಕಾಲ ಬಾಳಿ ಬದುಕಿ
ನೀನು ಕಟ್ಟದ ಮನೆ ನನಗೆ ಮಠಮನೆಯಾಗಿಬಿಟ್ಟು
ಈಗಲೀಗಾ ನನಗೆ ಮನೆಕೊಟ್ಟು
ಹೊರಗೆ ಒಂಟೊಗ್ತಿಯಾ ಕಂದಾ
ಈ ಜನ್ಮದಲಿ ಬಾಳಿ ಬದುಕಿ
ನಾಳೆ ಕಾಲದಲ್ಲಿ ನೀನು ಸತ್ತು ಸ್ವರಗಳ ಸೇರುವಾಗ
ಕಂಡುತವಾಗಿ ನೀನು ಬ್ರಹ್ಮನಲ್ಲೆ ಹೋಗಬ್ಯಾಡ
ಈ ಭೂಮಿ ಭೂಲೋಕಕ್ಕೆ ನಿನ್ನ
ಯಾವ ರೀತಿ ದೇವರು ಮಾಡ್ತೀನಿ ಎಂದರೇ

ಅಯ್ಯ ತುರುಕರಿಗೆಲ್ಲಾ ಪೀರನಾ ಮಾಡಿ
ಕುರುಬರಿಗೆಲ್ಲಾ ಬೀರು ದೇವರ ಮಾಡುತೀನಿ || ಸಿದ್ಧಯ್ಯ||

ಆಗಲೀಗಾ ತುರುಕರಿಗೆಲ್ಲಾ ಕಂದಾ
ಆಗಲೀಗಾ ಪೀರ್ನು ಮಾಡ್ತೀನಿ ಮಗನೇ
ಕುರುಬರಿಗೆಲ್ಲಾ ಕಂದ ಬೀರು ದೇವುರು ಮಾಡ್ತಿನಿ ಕಂದಾ
ಈಗಲೀಗಾ ತುರುಕರ ವಂಶದಲಿ ಕಂದಾ
ಹಿಂದು ಮುಸಲ್ಮಾನ ಎಂಬುವಂತ
ನಾಮಕರಣ ಕೊಡುಸ್ತಿನಿ
ಈಗಲೀಗಾ ಈ ನಡುವೆ ನರಲೋಕದಲ್ಲಿ ಕಂದಾ
ತುರುಕರಿಗೆಲ್ಲಾ ಹಸ್ತಪೊಜೆಯಾಗಲಿ
ಕುರುಬರಿಗೆಲ್ಲಾ ಕಂದಾ
ಬೀರುದೇವರ ಲಿಂಗ ಅಂತೇಳಿ

ಲಿಂಗದ ಪೂಜೆ ಕಂದಾ ನಿನಗೆ
ಲೋಕದ ಮೇಲೆ ನಡಿಯಲಪ್ಪ || ಸಿದ್ಧಯ್ಯ|| ಬೊಪ್ಪೆಗೌಡ||

ನಿನ್ನ ಜಾತಿ ಒಳಗೆ ಕಂದಾ
ಮತದಲಿ ನನ್ನ ಕಂದಾ
ಹುಟ್ಟಿದ ಮಕ್ಕಳ ನಿನಗೆ
ಹೆಸರ ಕೊಡಬೇಕು
ಅಯ್ಯ ದೊಡ್ಡಬೀರಪ್ಪ ಅಂತಾ
ಚಿಕ್ಕಬೀರಪ್ಪ ಎಂತಾ
ಹುಟ್ಟುಬೀರಪ್ಪ ಎಂತಾ
ಹುಟ್ಟಿದಾ ಮಕ್ಕಳಾ ನರಲೋಕದ ಒಳಗೆ
ನಿನ್ನ ಹೆಸರನ್ನೆ ಕರುಸುತೀನಿ
ಕೈ ಎತ್ತಿ ಮುಗಿಸುತೀನಿ || ಸಿದ್ಧಯ್ಯ||

ಆಗಲೀಗ ನನ ಕಂದಾ
ನಿನ್ನ ಜಾತಿವಂತರಿಗೆ ನನ ಕಂದಾ
ದೇವರಾಗು ಮಗನೆ ಎನುತೇಳಿ
ಮಾಗುರು ಮಂಟೇಸ್ವಾಮಿಯವರು
ಆಗಲೀಗ ಗುರುವೇ ಗುರುಪಾದವೇ
ಆಗಲೀಗ ಬೊಪ್ಪೇಗೌಡ್ರಿಗೆ ಶಾಪಕೊಟ್ಟುಬಿಟ್ಟು
ಅವರಟ್ಟಿ ಅರಮನೆಗೆ ಬಂದು ಗುರುದೇವಾ

ಹುಲಿಯ ಚರ್ಮಹಾಸಿ
ಉಲ್ಲೆ ಚರುಮ ತೆಗೆದು
ಬೆನ್ನಿಂದೆ ಬುಟುಕಂಡು
ಬಾರಿಯ ಕಂಡಾಯ
ಜಡುದು ಭೂಮಿಗೆ ನಾಟಿ
ಕಂಡುಗ ದ್ಯಾನದ ಬುಕ್ಕು
ಕಾಲಗ ದ್ಯಾನದ ಬುಕ್ಕು
ತಾಮ್ರದ ಚಪ್ಪೋಡ
ತೊಡೆಯ ಮೇಲೆ ದೇವ
ಮಡಿಕಂಡು ನನ್ನಪ್ಪ
ಅವರು ಊಬತ್ತಿಯ ಹರಡಿ
ಕಪ್ಪು ಧೂಳುತಾ ಇಟ್ಟು
ಉರಿಗದ್ದಿಗೆ ಮಾಡಿಕಂಡು
ಗದ್ದಿಗೆ ಮೇಲೆ ಕುಳಿತುಕಂಡುರು || ಸಿದ್ಧಯ್ಯ||

ಊಬತ್ತಿ ಹರಡಿ ಉರಿಗದ್ದಿಗೆ ಮಾಡಿಕಂಡು
ಅಲ್ಲಾಮ ಪ್ರಭು ಮಂಟೇದ ಲಿಂಗಪ್ಪ
ಜಗಂಜ್ಯೋತಿ ಧರೆಗೆ ದೊಡ್ಡಯ್ಯ
ಉರಿಗದ್ದಿಗೆ ಮೇಲೆ ಗುರುವು

ಅವರು ಮೂರುಗಳಿಗೆ ನನ್ನ ಗುರುವೇ
ಅವರು ಪಾವಾಡ ಮಾಡುತವರೇ || ಸಿದ್ಧಯ್ಯ||

ಗುರುವೇ ಬಲದ ಮಗ್ಗುಲು ಒಳಗೆ
ಧರೆಗೆ ದೊಡ್ಡಯ್ಯ ಮಂಟೇದಾಲಿಂಗಪ್ಪ
ಮಾಯ್ಕಾರದ ಒಡೆಯ ಪರಂಜ್ಯೋತಿಯವರು
ಅವರು ಬಲದಮಗ್ಗುಲು ಒಳಗೆ
ಪಾವಡಿಸಿ ಒರಗುತಾರೆ || ಸಿದ್ಧಯ್ಯ||

ಮೂರುಗಳಿಗೆ ನನಪ್ಪ
ಪಾವಾಡಿಸಿ ಗುರುದೇವಾ
ನಿದ್ದರೆ ಮಾಡಿಕಂಡು
ಈ ಮಡಿವಾಳ ಮಾಚಪ್ಪನ
ಚೋಳು ಮಣ್ಣು ತುಂಬುವಂತ
ಮನೆ ನನಗೆ
ಉಗ್ರಾಣದ ಮನೆಯಾಗಲಿ
ಮಾಚಪ್ಪನವರಾ
ಬಟ್ಟೆ ಬೇಯುವಂತ
ಉಬ್ಬೆವಲೆ ನನಗೆ
ಉರಿ ಗದ್ದಿಗೆಯಾಗಲಿ
ನನ್ನ ಮಠದೆ ಮುಂದೆ
ನನಗೆ ಮಜ್ಜಣದ ಬಾವಿಯಾಗಲಿ
ಈಗ ರಾಜರ ಮನಸ್ತಾನದ
ಮಕ್ಕಳಿಬ್ಬರ್ನ ಪಡಕಂಡು ಬಂದಿವ್ನಿಲ್ಲ

ಈ ಮಕ್ಕಳಿಂದಾ ನನಗೆ
ಮಠ ಮನೆ ಆಗಲಿ ಎಂದುರು || ಸಿದ್ಧಯ್ಯ||

ರಾಜ ಮನ್ಸತಾನದ ಮಕ್ಕಳಿಂದಾ
ನನಗೆ ಮಠಮನಿಗಯಾಗಲಿ ಅನುತೇಳಿ
ಆಗಲೀಗ ಸಕ್ಕರೆ ಪಟ್ಟಣದ
ದೊರೆಗೆಳ ಮಕ್ಕಳನ್ನು ಕರೆದು
ನಿಮ್ಮಿಂದ ನನಗೆ ಮಠವಾಗಬೇಕು ಕಂದಾ
ಮಠದ ಮುಂದೆ ಮಜ್ಜಣದ ಬಾವಿಯಾಗಬೇಕು
ನನಗೆ ಮಠ ತೋಪು ಆಗಬೇಕು
ತೋಪಿನ ಮುಂದೆ ಚಂದ್ರಶಾಲೆ ಆಗಬೇಕು ಅಂತೇಳಿ
ಆಗಲೀಗಾ ಎತ್ತಿ ವರೆಕೊಟ್ಟು
ಜಗತ್ತು ಗುರು ಧರೆಗೆ ದೊಡ್ಡಯ್ಯ
ಸಕ್ಕರೆ ಪಟ್ಟಣದ ದೊರ್ಗಳು ಮಕ್ಕಳೆಲ್ಲಾ
ಹಗಲು ಪೂಜೆ ಇರುಳು ಪೂಜೆಗೆ
ಬಪ್ಪಗೌಡ್ನಪುರದಲ್ಲಿ ಇಟ್ಟುಗಂಡು
ಜಗತ್ತುಗುರು ಧರೆಗೆ ದೊಡ್ಡಯ್ಯಾ
ಈಗ ಉರಿಯ ಗದ್ದಿಗೆ ಮೇಲೆ
ಕೂತುಗಂಡು ನನ್ನಪ್ಪ
ಅವರು ಏನಂತ ನುಡಿದವರಲ್ಲ
ಹೆತ್ತಯ್ಯಾ ಮಂಡೇದು ಸ್ವಾಮಿ || ಸಿದ್ಧಯ್ಯ||

ಗುರುವೆ ಉರಿಗದ್ದಿಗೆ ಮೇಲೆ
ಮೂರುತವಾಗಿ ಗುರುವು
ಕಂಡಾಯ್ದ ಜ್ಯೋತಿ
ಧರೆಗೆ ದೊಡ್ಡಯ್ಯ
ಈಗ ಇನ್ನೇನು ಗತಿಯಾ ನಾ
ಮಾಡಬೇಕು ಎಂದರಂತೆ || ಸಿದ್ಧಯ್ಯ||

ನನಗೆ ಇಂದಲ್ಲಾ ನಾಳೆ
ಮಠುಮನಿಯಾಗುತಾವೆ
ಮಠದ ಮುಂದೆ ನನಗೆ
ಮಜ್ಜಣದ ಬಾವಿಯಾಯ್ತದೆ
ಮಠದ ಮುಂದೆ ಗುರುವೆ
ಮಠ ತೋಪಾಗುತಾದೆ
ನನ್ನ ಮಠಬಾಳು ಬೆಳಸು
ಚಂದ್ರು ಸಾಲೆಯಾಯ್ತದೆ
ಈ ಕುರಬೆ ಗೌಡನ ಮನೆ ನನಗೆ
ಮಠಮನೆಯಾಯ್ತದೆ
ಆಗಂದು ನನ ಗುರುವು
ಅವರ ಮನದಲಿ ನನ ಗುರುವೇ
ಸಂತೋಷವ ಪಟ್ಟು ನನ್ನ
ಧರೆಯ ದೊಡ್ಡಯ್ಯ
ಈಗ ಎಲ್ಲಿಂದ ಎಲ್ಲಿಗೆ ನಾ
ಹೋಗಬೇಕು ಎಂದರಲ್ಲಾ || ಸಿದ್ಧಯ್ಯ||