ಈಗಲೀಗ ಜಗಂಜ್ಯೋತಿ ಧರೆಗೆ ದೊಡ್ಡಯ್ಯ
ಪರಂಜ್ಯೋತಿ ಪಾತಾಳ ಜ್ಯೋತಿಯವರು
ಆಗಲೀಗ ಶಿಶು ಮಕ್ಕಳ ಕಟ್ಟಿಕೊಂಡು
ಈಗ ನಾನು ಎಲ್ಲಿಂದ ಎಲ್ಲಿಗೆ ಹೋಗಬೇಕು ಅಂತೇಳೀ

ಅವರು ಬಾಳ ಚಿಂತೆ ಪಟ್ಟಾರಲ್ಲ
ಮಹಾಗುರು ಪರಂಜ್ಯೋತಿ || ಸಿದ್ಧಯ್ಯ||

ಗುರುವೆ ರಾಜಗುರು ನನ ದೇವಾ
ಪರಂಜ್ಯೋತಿಯವರು ಚಿಂತೆಯ ಮಾಡುತ
ವ್ಯಸನವ ಪಡುತ ಈಗ ಎಲ್ಲಿಂದ ಗುರುವೆ
ಎಲ್ಲಿಗೆ ದೇವಾ ನಾವು ಹೋಗಲಿ ಎನುತೇಳಿ
ಅವರು ತಮ್ಮ ದೃಷ್ಟಿ ಒಳಗೇಯ ನೋಡುತಾರೆ|| ಸಿದ್ಧಯ್ಯ||

ತಮ್ಮ ದಿವ್ಯದೃಷ್ಟಿಗೆ ಒಳಗೆ ಸ್ವಾಮಿ
ಈಗಲೀಗ ಮನದಲ್ಲಿ ಯೋಚನೆ ಮಾಡಿ ನೋಡಿದಂತೆ
ಮಾಯ್ಕಾರದ ಒಡೆಯ ಮಂಟೇಸ್ವಾಮಿ
ಈ ಭೂಮಿ ಪಡೆದು ಭೂಲೋಕವನ್ನೆ ಪಡೆದು
ಸೂರ್ಯಾ ಚಂದ್ರಾದಿಗಳನ್ನು ಪಡೆದು ವಿಷ್ಣು ಈಶ್ವರ
ಬ್ರಹ್ಮಾತ್ರಿಮೂರ್ತಿ ಕಲ್ಯಾಣ ಪಟ್ಟಣವನ್ನೆಲ್ಲಾ ಆಳಿ ಬಾಳಿ ಬಂದೆನಲ್ಲಾ
ಈಗಲೀಗಾ ಗುರುವೆ ಗುರುದೇವಾ
ನನಗೆ ನಾಲ್ಕು ರಾಜ್ಯಕ್ಕೂವೆ ಒಪ್ಪಿದಂತ
ಭೂಮಿಯಾಗಬೇಕು

ನನಗೆ ಒಪ್ಪಿದ ಸ್ಥಳ ಗುರುವೆ
ಎಲ್ಲಿ ದೊರಕುವುದೋ ಕಾಣೆ || ಸಿದ್ಧಯ್ಯ||

ಗುರುವೆ ಒಪ್ಪಿದ ಸ್ಥಳ ನನಗೆ
ಒಪ್ಪಿದ ಭೂಮಿ ಮೆಚ್ಚಿದ ಸ್ಥಳ
ಎಲ್ಲಿ ದೊರಕುವುದೊ
ಯಾ ತಾವು ಸಿಕ್ಕುವುದೊ
ಗೊತ್ತಿಲ್ಲ ಎನುತೇಳಿ
ಅವರು ಪೂರ್ವ ನೋಡವರೇ
ಪಶ್ಚಿಮ ನೋಡವರೆ
ಉತ್ತರ ನೋಡವರೆ
ದಕ್ಷಿಣ ನೋಡವರೆ
ಅವರು ನಾಕು ಮೂಲೆ ಎಂಟು ದಿಕ್ಕ
ಕಣ್ಣಾರೆ ನೋಡುತಾರೆ || ಸಿದ್ಧಯ್ಯ||

ಮೂಡ ಪಡುವ ತೆಂಕ ಬಡವಾ
ನಾಲ್ಕುಮೂಲೆ ಎಂಟು ದಿಕ್ಕು
ದಿವ್ಯ ದೃಷ್ಟಿ ಮಡಗಿ ನೋಡಬಿಟ್ಟು ಜಗತ್ತ ಗುರು
ಧರೆಗೆ ದೊಡ್ಡವರು ನನಗೆ ನಾಲ್ಕು ರಾಜ್ಯಕ್ಕೂ
ಮೆಚ್ಚಿದಂತ ಸ್ಥಳ ಒಪ್ಪಿದಂತ ಭೂಮಿ
ಎಲ್ಲಿ ಇರುವುದೂ ಯಾ ತಾವು ಇರುವುದೋ ಗೊತ್ತಿಲ್ಲವಲ್ಲ
ನನಗೆ ನಾಲ್ಕು ರಾಜ್ಯಕ್ಕೂ ಪವಿತ್ರವಾದಂತ ಸ್ಥಳವಾಗಬೇಕು
ಅಂತ ಪವಿತ್ರವಾದ ಸ್ಥಳದಲ್ಲಿ
ನನಗೆ ಮಠ ಮನೆಯಾಗಬೇಕು
ಮಠದ ಮುಂದೆ ಮಜ್ಜನದ ಬಾವಿಯಾಗಬೇಕು ಎನುತೇಳಿ
ನಾಲ್ಕು ದಿಕ್ಕು ಎಂಟು ಮೂಲೆ ದಿವ್ಯದೃಷ್ಟಿ ಮಡಗಿ ನೋಡಿದರು

ಅದು ಮಳವಳ್ಳಿ ತಾಲ್ಲೂಕು ಗುರುವೆ
ಮಾರುವಳ್ಳಿ ಗ್ರಾಮವಂತೆ|| ಸಿದ್ಧಯ್ಯ||

ಗುರುವೆ ಮಳವಳ್ಳಿ ತಾಲ್ಲೂಕು
ಮಾರುವಳ್ಳಿ ಗ್ರಾಮ
ಮಾರುವಳ್ಳಿ ಗ್ರಾಮದಲ್ಲಿ
ಗುರುವೆ ಗುರುದೇವ
ಇದು ಕುರುಬ ಗೌಡರಹಟ್ಟಿ
ಹೆಗಡೆ ಗೌಡರ ಮನೆ
ಹಾಲುಮತಸ್ಥ ಗೌಡ
ಈ ಬೊಪ್ಪೆಗೌಡನ ದೊಡ್ಡಿ ನಾಳೆ
ಬೊಪ್ಪೆಗೌಡನ ಪುರವ ಮಾಡಬೇಕು || ಸಿದ್ಧಯ್ಯ||

ಮಳವಳ್ಳಿ ತಾಲ್ಲೂಕು ಮಾರುವಳ್ಳಿಗ್ರಾಮ
ಮಾರುವಳ್ಳಿ ಗ್ರಾಮ ಎಂದರೆ ಗುರುದೇವ
ಪುರದ ಗೌಡ್ರಹಟ್ಟಿ ಹೆಗ್ಗಡೆ ಮನೆ ಹಾಳುಮತಸ್ಥಗೌಡ
ಬೊಪ್ಪೇಗೌಡನ ದೊಡ್ಡ ಕರುಳಿ ಕೊಂಪೆ ಒಂಟಿ ದೊಡ್ಡಿ
ಕರುಳಿ ಕೊಂಪೆ ಒಂಡಿ ದೊಡ್ಡಿ ಗುರುವು
ಇವರು ಕುರು ಕೂಡುವಂತಾs ಮಠಮನೆಯ

ಈ ಕುರಿ ಕೂಡುವ ಮನೆ ನನಗೆ
ಮಠಮನೆ ಆಗಬೇಕು || ಸಿದ್ಧಯ್ಯ||

ಈ ನಾಲ್ಕು ರಾಜ್ಯಕ್ಕೂ ಗುರುವೆ
ಪವಿತ್ರವಾದ ಸ್ಥಳಾ ಈ ಹೆಗಡೆಗೌಡನ ಮನೆ
ಕರುಳು ಕೊಂಪೆ ಗುರುವು
ಇದು ಒಂಟಿದೊಡ್ಡಿ ದೇವಾ
ಈ ಬೊಪ್ಪೆಗೌಡನ ದೊಡ್ಡಯ ನಾನು
ಬೊಪ್ಪೆಗೌಡನ ಪುರುವ ಮಾಡಬೇಕು|| ಸಿದ್ಧಯ್ಯ||

ಮಳವಳ್ಳಿ ತಾಲ್ಲೂಕು ಮಾರವಳ್ಳಿ ಗ್ರಾಮಾs
ಮಾರುವಳ್ಳಿ ಗ್ರಾಮದಲ್ಲಿ ಗುರುವು ಜಾತಿಯೊಳಗೆ ಹಾಲುಮತಸ್ಥ
ಕುರುಬ ಗೌಡ್ರ ಹಟ್ಟಿ ಹೆಗ್ಗಡೆ ಗೌಡ್ರನ ಮನೆ
ಇವರು ಕುರಿ ಕೂಡುವಂತ ಮನೆ ನನಗೆ ಮಠಮನೆಯಾಗಬೇಕು
ನಡು ತೋಪಾಗಬೇಕು ಮಠದ ಮುಂದೆ ಮಜ್ಜನದ ಬಾವಿಯಾಗಬೇಕು

ಏ ಮಡಿವಾಳು ಮಾಚಪ್ಪಾ
ಗುರುವೆ ಬೀದಿಬೀದಿಯ ಮೇಲೆ
ಬಟ್ಟೆ ತಗೊಂಡು
ಉದ್ಧ ಸುದ್ದಗೊಂಡು
ಅವನು ಉದ್ದ ಒಡ್ಡುತಾನೆ
ಅವನು ಮಡಿವಾಳು ಮಾಚಯ್ಯ
ಅವನ ಉಬ್ಬೆ ಒಲೆಯ ನಾನು
ಉರಿಗದ್ದಿಗೆ ಮಾಡಬೇಕು|| ಸಿದ್ಧಯ್ಯ||

ಈ ಮಡಿವಾಳು ಮಾಚಪ್ಪನಾs
ಬಟ್ಟೆ ಬೇಯುವ ಗುರುವು
ಉಬ್ಬೆಯ ಒಲೆ ನನಗೆ
ಉರುಗದ್ದೆಗೆ ಆಗಬೇಕು
ಈ ಮಡಿವಾಳು ಮಾಚಪ್ಪ
ಚೌಳುಮಣ್ಣು ತುಂಬುವ
ಮನೆ ನನ್ನ ಗುರುವು
ಉಗ್ರಾಣದ ಮನೆ ನನಗೆ
ಆಗಬೇಕು ಎನುತೇಳಿ
ಈಗ ಬಪ್ಪೇಗೌಡನಪುರಕೆ ನಾನು
ಹೋಗಬೇಕು ಎಂದಾರಲ್ಲಾs || ಸಿದ್ಧಯ್ಯ||

ಈಗಲೀಗ ಗುರುದೇವಾs
ಈಗ ಅಲ್ಲೊಂದು ವಸ್ತುಲಮನೆ ಮಾಡಬೇಕು
ಈ ಮಾಚಪ್ಪನಾ ಬಟ್ಟೆ ಬೇಯುವಂತ
ಉಬ್ಬೆ ಒಲೆ ನನಗೆ ಉರಿಗದ್ದಿಗೆಯಾಗಬೇಕು
ಈ ಬಪ್ಪೇಗೌಡ ಕುರಿಕೂಡುವಂತ ಕುರಿದೊಡ್ಡಿ
ನನಗೆ ಉರಿ ಗದ್ದಿಗೆಯಾಗಬೇಕಲ್ಲ
ಈಗಲೀಗ ಈ ಬಪ್ಪೆ ಗೌಡನ ದೊಡ್ಡಿಯ
ನಾಳೆ ದಿವಸ ರಾಬಪ್ಪಗೌಡನಪುರ ಎನುವಂತ
ನಾಮಕರಣ ಕಟ್ಟಬೇಕು ಎನುತೇಳಿ ಮಾಗುರು
ಮಂಡೇದ ಲಿಂಗಪ್ಪ ಜಗಂಜ್ಯೋತಿಯವರು
ಈಗ ಹೆಗ್ಗಡ ಗೌಡ್ರು ಮನೆಗೆ ನಾನು ಹೋಗಬೇಕೆಂದರೆ
ಬೆಳಿಗ್ಗೆ ಕಾಲದಲ್ಲಿ ಒಂಟೋಗುಬುಟ್ರೆ
ಯಾರೋ ಮಾಮನಿಗಳುಬಂದು ದಾನಧರ್ಮ ಕೇಳತವ್ರೆ ಅಂತೇಳಿ
ಜೋಳಿಗೆ ಬಿಕ್ಷ ಕೊಟ್ಟು ಪಾದಕ ಶರಣು ಮಾಡಿ
ಹೋಗಿದ್ದು ಬನ್ನಿ ಸ್ವಾಮಿ ಅಂತ ಕಳುಹಿಬಡುತಾರೆ
ಮಟ್ಟಮಟ್ಟ ಮಧ್ಯಾನ ಹೊಂಟೋಗುಬುಟ್ರೆ
ಯಾರೋ ಮಾ ಮುನಿಗಳು ನಮ್ಮ ಮನೆಗೆ ಬಂದುಬುಟ್ರು
ಈಗ ಊಟ ಮಾಡುವಂತ ವ್ಯಾಳ್ಯ ಅಂದುಬುಟ್ಟು
ಜಂಗುಮರ ಪಾದಕೆ ನೀರು ಕೊಟ್ಟು
ಕರದು ಊಟಕು ಬಡಿಸಿ ಊಟ ಮಾಡಿಸಿ
ಮುಂದಕೆ ಕಳಿಸಿ ಅಂತೇಳಿ
ಮಡದಿ ಮಕ್ಕಳಿಗೆಲ್ಲಾ ಅಪ್ಪಣೆ ಮಾಡಿ ಬಿಡುತಾರೆ
ಊಟಮಾಡಿಕೊಂಡು ವೀಳ್ಯ ತಗಂಡು
ನಾನು ಹೊರಟೋಗ್ ಬೇಕಾಯ್ತದೆ
ಈಗಲೀಗ ಸಂದ್ಯಾ ಸಾಯಂಕಾಲದಲ್ಲಿ ನಾನಾಗಿ ಒಂಟೋಗಿ ಬುಟ್ರೆ

ಈ ಬಪ್ಪಗೌಡನ ಮನೆ ನನಗೆ
ಮಠಮನೆ ಅಗತೈತೆ || ಸಿದ್ಧಯ್ಯ||

ಈ ಬಪ್ಪಗೌಡರ ಪುರುವ
ನಾನು ಮಠಮನೆಯ ಗುರುವೆ ಮಾಡಬೇಕು ಎಂತಾ
ಅಲ್ಲಮ ಪ್ರಭುವು
ಧರೆಗೆ ದೊಡ್ಡಯ್ಯ
ಮಟ್ಟ ಮಂಗಳವಾರ
ಸುಟ್ಟು ಶುಕ್ರವಾರ
ತುಂಬಿದ ಸೋಮವಾರ
ಧರೆಗೆ ದೊಡ್ಡಪ್ಪ
ಈಗ ಬಪ್ಪೆಗೌಡರ ಮನೆಗೆ
ನನ್ನ ದೇವರೆ ಬಿಜುಮಾಡುತಾರೆ || ಸಿದ್ಧಯ್ಯ||

ಗುರುವೆ ಹೊತ್ತೆಯ ಮುಳುಗಿತ್ತು
ದೇವಾ ಹಸ್ತಾಂಗವಾಗಿತ್ತು
ಗುರುವೇ ಒಬ್ಬರ ಮುಖ ಗುರುವೇ
ಒಬ್ಬರ್ಗೆ ಕಾಣೊದಿಲ್ಲ
ಅದೇ ಹೊತ್ತಿನ ಒಳಗೆ
ಧರೆಗೆ ದೊಡ್ಡಯ್ಯ
ಇಂತ ಬೊಪ್ಪೆಗೌಡರ ಮನೆಗೆ
ನನ್ನ ಸ್ವಾಮಿಯೇ ದಯಮಾಡುತಾರೆ || ಸಿದ್ಧಯ್ಯ||

ಗುರುವೇ ಬಪ್ಪೇಗೌಡರ ಗುರುವೇ
ಮನೆಗೆ ನನ್ನಪ್ಪ ಹೋಗುಬೇಕು ಎಂತ
ಧರೆಗೆ ದೊಡ್ಡವರು ಕಂಡಾಯ ಜ್ಯೋತಿ
ಅವರ ಕೈಲೆ ತಕಂಡು ದೇವಾ
ಹೆಗಲ ಮೇಲೆ ಒತ್ತುಕಂಡು ಧರೆಗೆ ದೊಡ್ಡಯ್ಯ
ಅವರು ಬೊಪ್ಪೇಗೌಡರ ಮನೆಗೆ ಸ್ವಾಮಿ
ದೇವುರು ದಯಮಾಡುತಾರೆ || ಸಿದ್ಧಯ್ಯ||

ನೋಡಪ್ಪ
ಹೊತ್ತುಬಿದ್ದು ಅಸ್ತಾಂಗವಾಗುವಂತಾ ಟೈಮಿನಲ್ಲಿ
ಆ ಜಗತ್ತು ಗುರುಗಳಾಗಿರುತ್ತಾ
ಧರೆಗೆ ದೊಡ್ಡವರು ಮಂಟೇದಾಲಿಂಗಪ್ಪ
ಪರಂಜ್ಯೋತಿ ಪಾವನ ಮೂರ್ತಿಯವರು
ಬೊಪ್ಪೆಗೌಡರ ಮನೆಗೆ ಬಂದು
ಅಟ್ಟಿ ಮುಂಭಾಗದಲ್ಲಿ ನಿಂತಿದುರು
ಬೊಪ್ಪೆಗೌಡರ ಕುರಿಕಾಯ್ಕೊಂಡು
ಕುರಿದೊಣ್ಣೆ ತಂದು ಮೂವೇಲಿ ಮಡುಗ್ಬುಟ್ಟು
ಕರಿ ಕಂಬಳಿ ತಗುದು
ಹಜಾರದಲಿ ಹಾಕುಬುಟ್ಟು
ಆಳುದ್ದ ಜಗಲಿ ಮೇಲೆ
ತಾವಾಗೆ ಕುಳಿತಿದುರು ಬೊಪ್ಪೆಗೌಡ

ಜಗಲಿ ಮೇಲೆ ಗುರುವು
ಬೊಪ್ಪೇಗೌಡ ಕುಳಿತವರೆ
ಭೂಮಿ ಮೇಲೆ ದೇವಾ
ಧರೆಗೆ ದೊಡ್ಡವರು ನಿಂತವರೇ
ಅವರು ಬಪ್ಪೆಗೌಡನ ಮಕವ ಗುರುವೇ
ಕಣ್ಣಾರೇ ನೋಡುತಾರೆ || ಸಿದ್ಧಯ್ಯ||

ಬೊಪ್ಪೆಗೌಡರ ಮಕವ ಕಣ್ಣಿಂದ ನೋಡಿದ್ರು
ಜಗತ್ತುಗುರು ಧರೆಗೆ ದೊಡ್ಡಯ್ಯ
ಅದೆ ಹೊತ್ತಿನಲ್ಲಿ ಬೊಪ್ಪೆಗೌಡರ ಗುರುವು
ಅಡಿಕ ಎಲೆ ತಗುದು
ಕ್ವಟ್ಟಾಲಿಗೆ ಕ್ವಾಗಲಿಗೆ ತುಂಬಿಕಂಡು
ಕ್ವಟ್ಟಾ ಕ್ವಟ್ವನೆ ಕುಟ್ಟುತ್ತಾ ಕುಳಿತಿದ್ರು
ಕುಳಿತಿರುವಂತಾ ಬೊಪ್ಪೇಗೌಡರ
ಕಣ್ಣಿಂದ ನೋಡುಬುಟ್ಟು
ಜಗತ್ತು ಗುರು ಧರೆಗೆ ದೊಡ್ಡಯ್ಯ

ಏನಪ್ಪ ನನ ಗುರುವು
ಏನಪ್ಪ ಗೌಡರೇ
ಗುರುವೇ ದಾನವೋ ದಾನ ಕಂದಾ
ಭಿಕ್ಷಾವೊ ಭಿಗುಸಾ ಎಂದುರು || ಸಿದ್ಧಯ್ಯ||

ಗುರುವೇ ದಾನವೂ ದಾನ ನಮಗೆ
ಭಿಕ್ಷಾವೊ ಭಿಗುಸಾ ನನ್ನಪ್ಪ
ಅನುತೇಳಿ ನನ ಗುರುವು
ಅಪ್ಪ ದಾನ ಕೊಟ್ಟವರಿಗೆ
ಜೋಳಿಗೆ ಹೊನ್ನಾಗಲಯ್ಯ|| ಸಿದ್ಧಯ್ಯ||

ನಮಗೆ ಭಿಕ್ಷ ಕೊಟ್ಟವರಿಗೆ
ಲಕ್ಸ ಭಾಗ್ಯಾವಾಗಲಯ್ಯಾ|| ಸಿದ್ಧಯ್ಯ||

ಧಾನ ನೀಡಿರಪ್ಪ ಧರ್ಮ ನೀಡಿರಯ್ಯ
ಬಿಗುಸಾ ನೀಡಿರಪ್ಪ
ನಮಗೆ ಬಿಗುಸಾ ಕೊಟ್ಟವರಿಗೆ
ಲಕಸಾ ಭಾಗ್ಯವಾಗಲಿ
ನಮಗೆ ದಾನ ಕೊಟ್ಟವರಿಗೆ
ಜೋಳಿಗೆ ಹೊನ್ನಾಗಲಿ ಗುರುವು
ಎನುತೇಳಿ ಧರ್ಮ ದಾನ ಬಿಕುಸಾ ಸಾರಿದ್ರು
ಧಾನದ ನುಡಿ ದರುಮದ ಸಬುತವನ್ನೆ
ಕಿವಿಯಿಂದಾ ಕೇಳಿಬುಟ್ಟು ಬೊಪ್ಪೆಗೌಡರು
ಕ್ವಟ್ಟಾಣಿ ತಕಂಡು
ಬಲಗೈಲಿ ಇಡುಕಂಡು
ಅಡಕೆಎಲೆ ಕುಟ್ಟುತ್ತಿದ್ದಂಥವರು
ಅಳುದ್ದ ಜಗಲಿ ಮಾಲೆ ಕೂತುಕಂಡು
ಧರೆಗೆ ದೊಡ್ಡವರ ಮುಖ ಕಣ್ಣಾರೆ ನೋಡಿಕಂಡು
ಏನಯ್ಯಾ ಜಂಗುಮಾ
ಹೊತ್ತೆ ಬಿದ್ದು ಅಸ್ತಾಂಗವಾಗಿ ಬುಡುತು
ಸಂದೆ ಸಾಯಂಕಾಲವಾಗಿಬುಡ್ತು
ಬೆಳಿಗ್ಗೆ ಹೊತ್ತು ಬಂದಿದುರೇ
ಭಿಕ್ಷ ಕೊಟ್ಟು ಕಳುಹಬಹುದಾಗಿತ್ತು
ಮಟಮಟಾ ಮಧ್ಯಾನದಲ್ಲಿ ಬಂದಿದ್ದರೆ
ನಮ್ಮ ಮನೆ ಒಳಗೆ ಅನ್ನಕೊಟ್ಟು ಕಳುಹಬಹುದಾಗಿತ್ತು
ಈ ಹೊತ್ತು ಬಿದ್ದು ಅಸ್ತಾಂಗವಾಗಿರುವಂತಾ
ಟೈವಿನಲಿ ಬಂದು
ದಾನಕೊಡು ಬಿಕುಸಾಕೊಡು ಅಂತಾ ಕೇಳುತಿಯಲ್ಲ

ಇಷ್ಟ ಹೊತ್ತಿನಾ ವ್ಯಾಳದಲ್ಲಿ
ಏನು ದಾನ ಕೇಳಬೇಕು || ಸಿದ್ಧಯ್ಯ||

ಇಷ್ಟು ಹೊತ್ತಿನಾ ವ್ಯಾಳ್ಯದಲ್ಲಿ
ಏನು ದಾನ ಏನು ಬಿಕುಸ ಕೊಡಬೇಕಪ್ಪ ಎಂದರು
ಆಡಿದಂತಾ ಮಾತ ಕೇಳಿಕಂಡು
ಬೊಪ್ಪೆ ಗೌಡರು ಏನಂತ ಮಾತಾಡಿಬುಟ್ಟುರು ಗುರುವು
ಈಗ ಬೆಳಿಗ್ಗೆ ಬಂದಿದುರೇ
ಭಿಕ್ಷಾ ಕೊಡುತ್ತಿದ್ದೊ
ಮದ್ದಾನದಲಿ ಬಂದಿದ್ರೆ ಊಟಕೆ ಪಡುಸ್ತಿದ್ದೊ
ಈಗ ಹೊತ್ತು ಬಿದ್ದು ಸಂದೆ ಸಾಯಿಂಕಾಲದಲ್ಲಿ ಬಂದಿದ್ದಿಯಲ್ಲ
ನಿನಗೆ ಏನು ದಾನ ಕೊಡಬೇಕು ಅಂತಾ ಕೇಳುತಾರಲ್ಲ

ಇದಕೆ ಏನು ಮಾಡಬೇಕು ಎನುತೇಳಿ
ಕೇಳಪ್ಪ ಬಪ್ಪೇಗೌಡರೇ
ಈಗಲೀಗಾ ನನಗೆ ನೋಡಿದರೇ
ಅರವತ್ತು ವರುಸ ವಯಸ್ಸು ಕಳುದೋಗ್ಬುಡ್ತು
ಮುಂದಕೆ ಪಯಣ ಮಾಡವಾ ಅಂದುರೇ
ಕಣ್ಣೆರದು ಕಣ್ಣು ನೇತ್ರವೆ ಕಾಣದಿಲ್ಲ
ಈಗಲೀಗಾ ನಡದು ನಡದು
ನನ್ನ ಪಾದವೆಲ್ಲ ನೊಂದೋಗ್ಬುಟ್ಟವೆ
ನನಗೆ ಧರ್ಮ ದಾನ ಭಿಕುಸ ಎನು ಕೊಡಬೇಡಿ ಕಣ್ರಪ್ಪ
ನಿಮ್ಮ ಆಳುದ್ದ ಜಗಲಿ ಮೇಲೆ ದೇವಾ
ನನ್ನಾ ಕಂಡಾಯ ಮಡಗದಕೆ ಗುರುವು

ಅಂಗೈ ಅಗಲ ಜಾಗ ನೀವು
ಕೊಡುರಪ್ಪ ಎಂದುರಲ್ಲ || ಸಿದ್ಧಯ್ಯ||

ಆಳುದ್ದ ಜಗಲಿ ಮೇಲೆ ಸ್ವಾಮಿ
ಅಂಗೈ ಅಗುಲ ಜಾಗ ಕೊಡಿರಪ್ಪ
ಜಾಗ ಕೊಡಿ ಗುರುವೇ ಎಂದು
ಏನಯ್ಯಾ ಜಂಗುಮಾ
ಈಗಲೀಗಾ ಅಟ್ಟಿ ದೊಡ್ಡಾಗಿ ಕಟ್ಟಿಸವರೇ
ಜಗಲಿ ಎತ್ತರವಾಗಿ ಕಟ್ಟವರೇ ಅಂತ್ಹೇಳಿ
ಈ ಗೌಡರ ಮನೆಗೆ ಹೊರಟೋಗ್ಬುಡು ಅಂದುಬುಟ್ಟು
ಯಾವ ಮುಂಡೆ ಮಕ್ಕಳಾರು ನನ್ನ ಮನೆಗೆ
ದಾರಿ ತೋರಿಕೊಟ್ಟುರಾ?
ಅಟ್ಟಿ ಕಟ್ಟನಾ ಗಂಟಾ
ನಿಮ್ಮಪ್ಪ ಬಂದು ಮಣ್ಣಗದಿದುನೇನೋ
ನಿಮ್ಮವ್ವ ಬಂದು ಮಣ್ಣುಮುದ್ದೆ ಕೊಟ್ಟಿದ್ಲ
ಅದಕ್ಕೆನಾರೂ ನನ್ನಾಳುದ್ದ ಜಗಲಿ ಮ್ಯಾಲೆ
ಅಂಗೈ ಅಗಲ ಜಾಗ ನಿನಗೆ ಕೊಡಬೇಕಾ
ಇವತ್ತಿನಾ ದಿವಸದಲಿ
ಹೇಳುತಿನಿ ಕೇಳು ಜಂಗುಮಾ

ನಿಮ್ಮಂತ ಹರುದೇಸಿ
ನಿಮ್ಮಂತ ಪರುದೇಸಿ
ದಾಸಯ್ಯಾ ಜೋಗಯ್ಯ
ಗುಡ್ಡಯ್ಯ ಗೊರವಯ್ಯ
ಕಾಳಮುಖಿ ಸನುವೇಸಿ
ಬಂದಂತಾ ಮುನುಗಳೆಲ್ಲ
ನನ್ನ ಮನೆಗೆ ಬರುತಾರೆ || ಸಿದ್ಧಯ್ಯ||

ಬಂದಂತಾ ಮಾ ಮುನಿಗಳೆಲ್ಲ
ನನ್ನ ಅಟ್ಟಿ ಅರುಮನೆಗೆ
ದಾನಕೆ ಬರುತಾರೆ ಭಿಕ್ಷುಕೆ ಬರುತಾರೆ
ಬಂದು ಬಂದವರಿಗೆಲ್ಲಾ
ನಮ್ಮ ಮನೆಲಿರ್ತಕಂತಾ
ಅಕ್ಕಿ ಬೇಳೆ ಧರ್ಮ ಕೊಟ್ಟು
ಬೆಳಿಗ್ಗೆ ಕಾಲದಲಿ ಕಳುಗಿಸಿಬುಡ್ತಿವಿ
ಮಟ್ಟ ಮದ್ದಾನದಲಿ ಬಂದುರೇ
ಯಾವ ಜಂಗುಮರು ಬಂದಿದ್ರೂ ಕೂಡಾ
ಕೈಗೆ ನೀರು ಕೊಟ್ಟು
ಹೊಟ್ಟೆ ತುಂಬಾ ಊಟ ಮಾಡ್ಸಿ
ಹೋಗಿದ್ದು ಬನ್ನಿ ಜಂಗುಮರೆ ಅಂತಾ ಹೇಳಿ
ಮನಿಂದ ಹೊರಗೆ ಕಳುಗಿಸಿ ಬುಡ್ತಿವಿ

ಸಂಜೆ ಹೊತ್ತು ಬಂದೊರ್ನ ನಾವು
ಕಂಡುತವಾಗು ಸೇರುಸೋದಿಲ್ಲ || ಸಿದ್ಧಯ್ಯ ||

ಸಂದೇ ಸಾಯಿಂಕಾಲದಲಿ ಬಂದವರಾ ಮಾತ್ರ
ಕಂಡುತವಾಗಿಯು ನಾವು ಅಟ್ಟಿ ಜಗುಲಿಗೂ ಸೇರಿಸೋದಿಲ್ಲ
ನಮ ಮಟ್ಟ ಮನೆಗೂ ನಿಮ್ಮ ಕೂಡೋದಿಲ್ಲ
ಈಗ ಸಂದೆ ಸಾಯಿಂಕಾಲದಲಿ ಬಂದು ಜಾಗ ಕೇಳುದ್ರೆ
ನಿನಗೂವೇ ಜಾಗವಿಲ್ಲ
ಕಂಡಾಯ್ಕುವೇ ಜಾಗವಿಲ್ಲ || ಸಿದ್ಧಯ್ಯ||

ಅಯ್ಯಾ ನಿನಗೂವೇ ಜಾಗಾ
ಇಲ್ಲ ಜಂಗುಮಾ
ನಿನ್ನ ಕಂಡಾಯ್ಕುವೇ ಜಾಗ
ನಮ್ಮ ಮನೆಯಲಿಲ್ಲ
ನೀನು ಇನ್ನಾರಾ ಮನೆಗಾರುವೇ
ಹೊರಟೇ ಹೋಗು ಎಂದಾರಲ್ಲ || ಸಿದ್ಧಯ್ಯ||

ಇನ್ಯಾರ ಮನೆಗಾರುವೇ
ಹೊರಟೋಗು ಜಂಗುಮ
ನಮ್ಮ ಮನೇಲಿ ಮಾತ್ರ
ಜಾಗ ಕೇಳುಬ್ಯಾಡ ಎಂದುರು
ಬೊಪ್ಪೇಗೌಡುರೇ
ಈಗಲೀಗಾ ನಿಮ್ಮ ಅಟ್ಟಿ ಮುಂಭಾಗದಲ್ಲಿರ್ತಕಂತಾ
ಈ ಮಾಳದಲ್ಲಿ
ಬಿದ್ದುದ್ದು ಕೆಡದುದ್ದು
ಬೆಳಗೆ ತುಂಬಿಸಿಗಂಡು
ಹೊಂಟೋಯ್ತಿನಿ ಕಣಪ್ಪ
ಹಾದಿಬೀದಿ ಒಳಗೆ ಗುರುವು
ನಮ್ಮ ಬಿರುದು ಮಡ್ಗಬಾರ್ದು ಕಣ್ರಯ್ಯ
ನನ್ನ ಬಿರುದು ಮಡಗಬೇಕಾದುರೇ
ತಾರಸ್ಥ ನೆಲವಾಗಬೇಕು
ಗುಡ್ಸುದಂತಾ ಜಾಗವಾಗಬೇಕು ಕಂಡ್ರಪ್ಪ
ಅದಕಾಗಿ ನಾನು ಜಾಗ ಕೇಳ್ತುನಿ ಕಂಡ್ರಯ್ಯಾ
ನಾನು ಎಲ್ಲಾದ್ರು ಬಿದ್ದಿದ್ದು ಕೆಡದಿದ್ದು
ಬೆಳಗಾದ ಮೇಲೆ ಎದ್ದೋಯ್ತಿನಿ
ನನ್ನ ಕಂಡಾಯ ಮಡಗದಕ್ರಾದ್ರು ಗುರುವು

ಅಂಗೈ ಅಗಲ ಜಾಗ ಗುರುವೇ
ಕೊಟ್ಟುಬುಡಿ ಎಂದಾರಂತೆ || ಸಿದ್ಧಯ್ಯ||