ಅಂಗೈ ಅಗಲ ಗುರುದೇವಾ
ಜಾಗ ಕೊಡಪ್ಪ
ಜಾಗ ನೀಡಿಬುಡಪ್ಪ
ನನ ಕಂಡಾಯ್ಕೆ ಜಾಗ ಕೊಟ್ಟುದ್ದೇ ಆದರೆ
ನಿಮಗೆ ಬಾಳಾ ಧರ್ಮ ಬರ್ತದೆ ಗುರುದೇವಾ ಎಂದುರು
ಏ ಜಂಗಮ ಆಳುದ್ದ ಜಗಲಿಮೇಲೆ
ನನ ಕಂಡಾಯ ಮಡಗದುಕೆ
ಅಂಗೈ ಅಗಲ ಜಾಗಕೊಡು ಅಂತ ಕೇಳ್ತಿಯಲ್ಲಾ
ಈಗಲೀಗಾ ಆಳುದ್ದ ಜಗಲಿಮೇಲೆ
ನಿಮ್ಮಂತ ಭಿಕ್ಷುಕರಿಗೆ ಜಾಗ ಕೊಟ್ಟುಬಿಟ್ರೆ
ಈಗಲೀಗಾ ನಾನೆ ಬರಲಿ
ನನ್ನ ಮಕ್ಕಳೇ ಬರಲಿ
ನನ್ನ ಸೊಸೇರೆ ಬರುಲಿ
ನನ್ನ ಮಡದಿಯೇ ಬರಲಿ
ಈ ಗೌಡ್ರು ಮಗ ಬತ್ತಾವರೇ
ಅಗಲೀಗಾ ಗೌಡ್ರು ಮಡದಿ ಬತ್ತಾವರೇ
ಗೌಡ್ರು ಮಕ್ಕಳು ಬತ್ತಾವರೆ ಅಂತ್ಹೇಳಿ
ಜಗಲಿ ಕೊಟ್ಟುಬುಟ್ಟಂತ ಕಾಲದಲ್ಲಿ

ನೀವು ನೀಡ್ದ ಕಾಲ ತೆಗಿಯದಿಲ್ಲ
ಮುಚ್ಚಿದ ಕಣ್ಣು ಬಿಡುವುದಿಲ್ಲ || ಸಿದ್ಧಯ್ಯ||

ನೀವು ಕೋಳಿ ಕೂಗಿ ಬೆಳಕರುದ್ರು ನೀವು
ಮಲಗಿದ್ದು ಮ್ಯಾಕೆ ಏಳಾದಿಲ್ಲ|| ಸಿದ್ಧಯ್ಯ||

ಈಗಲೀಗಾ
ಜಾಗ ಕೊಟ್ರು
ನನ್ನ ಬಿರುದುಗು ಜಾಗಕೊಟ್ರು
ನಮಗೆ ಮನಿಕಳಕೊ ಜಾಗಕೊಟ್ರು
ಈ ಗೌಡ್ರು ಅಂತ್ಹೇಳಿ
ಈಗಲೀಗಾ ನೀವು ನೀಡಿದ ಕಾಲ ತಗಿಯಬೇಕಿಲ್ಲ
ಮುಚ್ಚಿದ ಕಣ್ಣು ಬುಡೋದಿಲ್ಲ
ನಮ್ಮ ಮಡದಿರಾಗಲಿ ಮಕ್ಕಳೆಯಾಗಲಿ
ಯಾರು ಬಂದ್ರು ಕೂಡಾ
ತಿರುಸ್ಕಾರಾ ಮಾಡ್ಬುಟ್ಟು
ಕೋಳಿ ಕೂಗುಬುಟ್ಟು
ಬೆಳ್ಕರುದ್ರು ಕೂಡಾ
ಮುಚ್ಚಿದ ಕಣ್ಣಾ ಮುಚ್ಚಿದಂಗ
ಮುಚ್ಚಿಕೊಂಡು ಮನಿಕತ್ತಿರಿ
ನೀವು ಮನಿಕಂದು ನಿದ್ರೆ ಮಾಡುವ ಕಾಲದಲ್ಲಿ
ನಮ್ಮ ಮಡದಿ ಮಕ್ಕಳು
ನಮ್ಮ ಸೋಸೇರು ಗಂಡುಮಕ್ಕಳು
ಏನಾರ ನಿಮ ನೋಡಿಬುಟ್ರೆ

ನಮ್ಮ ಮನೆಲಾಗೋ ಕಾರ್ಯಗಳು
ಕಂಡುತವಾಗು ನೆಡೆಯೊದಿಲ್ಲ || ಸಿದ್ಧಯ್ಯ||

ನಮ್ಮ ಮಟಮನೆಯೊಳಗೆ ಮಾಡುವಂತ
ಕೆಲಸ ಕಾರ್ಯಗಳಲ್ಲಿ
ನಡಿಯದಿಲ್ಲ ಕಾಣೋ
ನಮ್ಮ ಆಗಲೀಗಾ ಬಾಳೋರಮನೆ
ಬಾಳಾಟವೇ ಕೆಟ್ಟೋಗಿಬುಡ್ತಾದೆ
ಈಗಲೀಗಾ ಆಳುದ್ದ ಜಗಲಿ ಮೇಲೆ ಮಾತ್ರ ನಿನಗೆ
ನಾವು ಕಂಡುತವಾಗ ಜಾಗ ಕೊಡದಿಲ್ಲ
ಈಗಲೀಗಾ

ಆರುಸಾವ್ರ ಜೋಲುಗರಿ
ಆರುಸಾವ್ರ ಕುರ್ದುಗುರಿ
ಆರುಸಾವ್ರ ಕರಿ ಗುರಿ
ಅಯ್ಯಾ ಹದಿನೆಂಟು ಸಾವಿರಾ
ಕುರುಗಳುನೆಲ್ಲಾ
ಒಂದೇ ಹಟ್ಟಿ ಒಳಗೆ
ಬಚ್ಚಿಟ್ಟಿ ಕೂಡಿವಿನಿ
ಆ ಕುರಿಯ ಮನೆಗೆ ನೀನು
ಕಡ್ದು ಹೋಗು ಎಂದಾನಲ್ಲ || ಸಿದ್ಧಯ್ಯ||

ಈಗಲೀಗಾ ಆರುಸಾವ್ರ ಕುರ್ದುಗುರಿ
ಆರುಸಾವ್ರ ಜೋಲು ಗುರಿ
ಆರುಸಾವ್ರ ಕರಿ ಕರಿ
ಹದಿನೆಂಟು ಸಾವುರ ಕುರುಗಳು
ಒಂದೆ ಮನೆ ಒಳಗೆ ಕೂಡಿವಿ
ಆ ಹದಿನೆಂಟು ಸಾವಿರಾ ಕುರಿ ಒಳಗೆ
ನೀನು ಒಂದು ಕುರಿಯಾಗಿ
ಆ ಕುರಿ ಕೋಟಿಗೆಗೇ ಹೋಗಿಬಿಟ್ಟು
ಯಾವುದಾರೂ ಒಂದೆ ಮೂಲೇಲಿ ಬಿದ್ದಿದ್ದು ಕೆಡದಿದ್ದು

ನೀನು ಬೆಳಾಗಾದ ಮೇಲೆ ನೀನು
ಎದ್ದು ಹೋಗು ಎಂದರಂತೆ || ಸಿದ್ಧಯ್ಯ||

ಅಯ್ಯಾ ಬೇಳುಗಾದ ಮೇಲೆ ನೀನು
ಕಡುದೋಗು ಎಂದಾರಲ್ಲ || ಸಿದ್ಧಯ್ಯ||

ಯಾವುದಾರು ಒಂದು ಮೂಲೇಲಿ
ಆ ಕರುಯೊಂದಿಗೆ ನೀನು ಒಂದು ಕುರಿಯಾಗಿ
ಎಲ್ಲಾರೂ ಬಿದ್ದಿದ್ದು ಎದ್ದೋಗು ಎಂದುರು
ಆಗಲಿ ಕುಡ್ರಪ್ಪ
ಬೊಪ್ಪೇಗೌಡ
ಈಗಲೀಗಾ ನಿಮ್ಮ ಜಗಲಿ ಆದರೇನು
ಕುರಿಕೊಟ್ಟಿಗೆ ಆದರೆ ಏನಪ್ಪ
ಈ ಆಳುದ್ದ ಜಗುಲಿ ನಿನ್ನದೇ
ಈಗಲೀಗಾ ಹದಿನೆಂಟು ಸಾವಿರ
ಕುರಿ ಕೂಡಿರುವಂತ ಕುರಿಕೊಡುಗೂ ನಿನ್ನದೇ
ಆ ಕುರಿ ಕೊಟ್ಟುಗೆವೊಳಗೆ
ಬಿದ್ದಿದ್ದು ಕೆಡದಿದ್ದು
ಬೆಳಗಾದ ಮೇಲೆ ಎದ್ದೋಯ್ತೀನಿ ಕಣಪ್ಪ
ಅಂಗೈ ಅಗಲ ಜಾಗ ನನಗಾಗಿ ನೀನು ಕೊಟ್ಟ ಮೇಲೆ ಕಂದ
ನಿನುಗೆ ಕಟ್ಟುದಸಾ ಕರೆಯಲಿ
ಬಿತ್ತುದ ಬೆಳೆ ಬೆಳಿಯಲಿ
ಕೇಳಪ್ಪ ನನ್ನ ಕಂದಾ
ಕೇಳು ನನ್ನ ಮಗು

ನಿನ್ನ ಒಂದು ಕುರಿ ಹಿಡಿದರೆ
ಒಂಬತ್ತು ಕುರಿ ಹೆಚ್ಚಾಗಲಪ್ಪ || ಸಿದ್ಧಯ್ಯ||

ಒಂದು ಕುರಿ ಹಿಡುದ್ರೆ ಕಂದಾ
ಒಂಬತ್ತು ಕುರಿ ನಿನಗೆ ಹೆಚ್ಚಲಿ ಮಗನೇ
ಆಗಲೀಗಾ ಹೇಳುವೆನು ಕೇಳು ಕಂದಾ
ಕುರಿ ಸಾಕುದರೆ
ಕುರುಬನಿಗೆ ಈಡು ಎನ್ನುವಂತ
ಹೆಸರು ನಿನಗೆ ಉಂಟಾಗುಲಿ
ಆಗಂದು ಜಗತ್ತು ಗುರು ಧರೆಗೆ ದೊಡ್ಡವರು ಮಂಟೇದಲಿಂಗಪ್ಪ
ಆ ಬೊಪ್ಪೇಗೌಡರ
ಆಳುದ್ದ ಅಟ್ಟಿ ಜಗುಲಿನೇ ಬಿಟ್ಟುಬುಟ್ಟು
ಈ ಕುರಿಮನೆ ನನಗೆ ಪವಿತ್ರವಾದ ಮನೆ ಅಂತೇಳಿ

ಅಯ್ಯಾ ಕುರಿಯ ಕೊಟ್ಟುಗೆಗೆ
ನನ್ನ ಸ್ವಾಮಿ ಬಿಜು ಮಾಡುತಾರೆ || ಸಿದ್ಧಯ್ಯ||

ಕುರಿ ಕೊಟ್ಟುಗೇಗೆ ಬಂದುರೂ
ಜಗತ್ತು ಗುರು ಧರೆಗೆ ದೊಡ್ಡವರು
ಈ ಹಾಲು ಮತೊಸ್ತುನ ಮನಿಯೇ
ಹಾಲುಸಾಗ್ರವಾದ ಮನೆ
ಸಿಕುಬುಡ್ತು ನನಗೆ
ಇವರು ಕುರಿ ಕೊಡ್ತಕಂತ ಮನೆಯೇ
ಪವಿತ್ರವಾದ ಮನೆ ನನಗೆ
ಎನುತೇಳಿ ಜಗತ್ತು ಗುರು ಧರೆಗೆ ದೊಡ್ಡಯ್ಯ
ಆ ಕುರಿ ಕೊಟ್ಟಿಗೆ ಎಂದರೆ
ಹನ್ನೆರಡು ವರುಷದಿಂದಾ
ಕುರಿ ಕಸ ತಗುದು ಬೀದಿಗಿಟ್ಟಿಲ್ಲ
ಹನ್ನೆರಡು ವರುಷದಿಂದಾ ಗುರುದೇವಾ
ಕಸ ಬರ್ಲನ್ನೇ ಮನೆಗೆ ಪ್ರವೇಶ ಮಾಡಿಲ್ಲ
ಮಂಡಿ ಉದ್ದ ಕುರಿಕಸ ಬಿದ್ದತ್ತಂತೆ
ಇಂತಾ ಕುರಿಕಸ ಮಂಡಿ ಉದ್ದ ಬಿದ್ದಿರುವಾಗ
ಕಣ್ಣಿಂದಾ ನೋಡುಬುಟ್ರು ಧರೆಗೆ ದೊಡ್ಡಯ್ಯ
ಶಭಾಶ್
ಈಗ ಬಪ್ಪೇಗೌಡನೆ ನನಗೆ ಒಳ್ಳೆದಾರಿ
ಒಳ್ಳೆ ಮನೆ
ಒಳ್ಳೆ ಮಾರ್ಗನೆ ತೋರ್ಸಿ ಕಳುಗುದ್ರು ಅಂತೇಳಿ
ಆಗಲೀಗಾ ಬೊಪ್ಪೇಗೌಡರ ಮನೆ ನೋಡಿ
ಪವಿತ್ರವಾದ ಮನೆ ಸಿಗುತು ಅಂತೇಳಿ
ಸಂತೋಷ ಪಡ್ತಾ ನಿಂತಿದ್ದುರಂತೆ
ಬೊಪ್ಪೇಗೌಡ್ರು ಹಿರಿಮಗಾ
ಕುರಿ ಕೊಟ್ಟಗೆ ಬೀಗಾ ತಕಂಡಬಂದು
ಬೀಗನೆ ತೆಗದು ಬುಟ್ಟು
ಜಂಗುಮ ದೇವರೇ
ಈ ಕುರಿ ಕೊಟ್ಟಗೇಲಿ
ಯಾವ ಕಡಿಯಾದ್ರು ಸರಿಯೇ
ಎಲ್ಲಾರು ಅಷ್ಟು ಅಗಲ ಜಾಗ ಮಾಡ್ಕಂಡು
ಮಲಗಿದ್ದು ಬೆಳಗಾಗುವುದಕ್ಕೆ ಮೊದಲು
ಎದ್ದು ಹೊರ್ಟೋಗ್ಬುಡು ಅನುತೇಳಿ
ಬೀಗ ತಗುದುಬಿಟ್ಟು
ಕುರಿ ಕೊಟ್ಟಗೆ ಒಳಗಡೆ
ಧರೆಗೆ ದೊಡ್ಡವರ ಕೂಡುಬುಟ್ಟು
ಬೀಗನೆ ಹಾಕ್ಕಂಡು

ಅವರು ತನ್ನ ಮನೆಗೆ ಗುರುವೇ
ತಾವೇ ದಯ ಮಾಡುತಾರೆ || ಸಿದ್ಧಯ್ಯ||

ಅಗಲೀಗಾ ಗುರುದೇವಾ
ಬಪ್ಪೆಗೌಡ್ರು ಹಿರಿಮಗ ಮನೆಗೊರಟೋದ್ರು
ಆಗಾ ಧರೆಗೆ ದೊಡ್ಡವರು ಮಂಟೇದ ಸ್ವಾಮಿ
ನೋಡಪ್ಪ ಹದಿನೆಂಟು ಸಾವ್ರ ಕುರಿಗಳೆಲ್ಲ
ಒಂದರ ತಲೆಗೆ ಒಂದು ತಲೆ ಎಟ್ಕೊಂಡು ಎಟ್ಕೊಂಡು ಮಲಗಿದ್ದೊ
ಮಲಗಿರುವಂತ ಕೊಟ್ಟಗೆ ಒಳಗೆ
ಅಂಗೈ ಅಂಗಲ ಜಾಲ ಇಲ್ಲ
ಆಗ ಧರೆಗೆ ದೊಡ್ಡವರು
ನಿಸಾನಿಗೆ ಬಂದು ಗುರುವು
ಈ ನಿಸಾಲಿರುವಂತಾ ಜಾಗ
ನನಗೆ ಪವಿತ್ರವಾದಂತ ಜಾಗ
ನಾಕು ರಾಜ್ಯಕ್ಕು ಸಮಾನವಾದಂತ ಭೂಮಿ
ಎನುತೇಳಿ ಕುರಿಕೊಟ್ಟಗೆ
ಕಣ್ಣಾರೆ ನೋಡಿಕಂಡು ನನ್ನಪ್ಪ
ಮಲಗಿದ್ದಂತ ಕುರಿಗಳ ತಗುದು
ಆ ಕಡೆ ಈ ಕಡೆ ಎತ್ತಿ ಮಲಗುಸಿಬುಟ್ಟು
ಆವುರು ಹಾಸಿದರು ಹುಲಿಯ ಚರ್ಮ
ಹರಡಿದಾರೂ ಈ ಬತ್ತಿಗಟ್ಟಿ || ಸಿದ್ಧಯ್ಯ||

ಅವರು ಭಾರಿ ಕಂಡಾಯವನ್ನು
ಜಡುದು ಭೂಮಿಗೆ ನಾಡಿದರಲ್ಲ || ಸಿದ್ಧಯ್ಯ||

ಹುಲಿಯ ಚರುಮ ಗುರುವು
ಅವರು ಹಾಸುಗಂಡು ದೇವಾ
ಉಲ್ಲೆಚರ್ಮದೇವಾ
ಹೊದ್ದುಕಂಡು ನನ್ನಪ್ಪಾ
ಈ ಭಾರಿಯ ಕಂಡಾಯ ತಗುದು
ಜಡ್ಡು ಭೂಮಿಗೆ ಹಾಕಿ
ಕಂಡುಗ ದ್ಯಾನದ ಬುಕ್ಕು
ಕಾಲುಗ ದ್ಯಾನದ ಬುಕ್ಕು
ತಾಮ್ರುದಾ ಚಪ್ಪೋಡಾ
ತೊಡೆ ಮ್ಯಾಲೆ ಮಡಿಕಂಡು
ಅವರು ಹಾಲುಮತೋಸ್ತುನಾ
ಮನೆ ಒಳಗೆ ಕಾಲ್ನೀಡಿ ಮಲುಗಿದರಲ್ಲ || ಸಿದ್ಧಯ್ಯ||

ಹಾಲು ಮತೋಸ್ತನ ಮನೆಯೊಳಗೆ ಸ್ವಾಮಿ
ಅತಿ ಆನಂದದಿಂದ ಜಗತ್ತು ಗುರು ಧರೆಗೆ ದೊಡ್ಡಯ್ಯ
ಪಾದ ನೀಡಿಕಂಡು
ಬಲ್ದ ಮಗ್ಗುಲಲ್ಲಿ ಒರುಗಿದಂತೆ
ಬಲ್ದ ಮಗ್ಗುಲಲ್ಲಿ ಒರಗುವಾಗ ಗುರದೇವಾ
ಆಗಾಲೀಗಾ ಕಾ ಕೋಳಿ ಕೂಗಲಿಲ್ಲಾ
ಸಕ್ಕಮ್ಮ ಸರಿ ರಾತ್ರೆಯಲ್ಲಿ
ಒಂದು ಗಂಟೆ ಸಮರಾತ್ರೆ ಒಳಗೆ
ಜಗತ್ತು ಗುರು ಧರೆಗೆ ದೊಡ್ಡಯ್ಯ
ಈ ಬಪ್ಪೇಗೌಡರ ಮನಿಯಾ
ನನ್ನ ವಶಾ ಮಾಡಿಕಾಬೇಕಲ್ಲ ಅಂತೇಳಿ

ಮುತ್ತುನಾ ಜೋಳಿಗೆ
ಕೈಯಾಕಿ ನನ ಗುರುವು
ಧರೆಗೆ ದೊಡ್ಡಯ್ಯ
ಗುರುವೇ ಆರ್ಕಟ್ಟು ಉಡುಭಂಗಿ
ಅರ್ಕಟ್ಟು ತುಡುಭಂಗಿ
ಆರ್ಕಟ್ಟೊಗೆ ಸೊಪ್ಪು
ಆರ್ಕಟ್ಟೊಗೆ ಭಂಗಿ ಸೊಪ್ಪು
ಇಪ್ಪತ್ತು ನಾಲ್ಕು ಕಂಡುಗಾ
ಭಂಗಿ ಸೊಪ್ಪೆ ತಗದು
ಅಂಗೈಯಿನಾ ಮೇಲೆ
ಸುರುಕಂಡು ನನ್ನಪ್ಪಾ
ಅದು ನಾಗುರಾವಿನ ವಿಷ
ಎಕ್ಕದಾಲಿನ ರಸಾ
ಕಳ್ಳಿ ಹಾಲಿನಾ ರಸಾ
ಕಂಚು ಪತ್ತುರೇ ರಸಾ
ಭಂಗಿ ಸೊಪ್ಪಿನ ರಸಾ
ಗುರುವೇ ಐದವೇ ಕೂಡಿದುರೆ ಗುರುವೇ
ಪಂಚೈದು ಲೋಭ
ಅವರು ಪಂಚೈದು ಲೋಭದಲ್ಲಿ
ತೀಡಿ ಗಾಂಜಾ ಮಾಡುತಾರೆ || ಸಿದ್ಧಯ್ಯ||

ಆಗಾಲೀಗಾ ಗುರುದೇವಾ
ಇಪ್ಪತ್ತು ನಾಲ್ಕಂಡುಗ ಭಂಗಿಸೊಪ್ಪ ಗುರುವು
ಅಂಗೈ ಮೇಲೆ ಸುರುಕಂಡು ನನ್ನಪ್ಪ
ತೇದಿ ಮಿಟ್ಟ ಮಾಡಿಕಂಡು
ತೇದಿಗಾಂಜ ಮಾಡಿಕಂಡು ಗುರುವು
ಜಗತ್ತು ಗುರು ಧರೆಗೆ ದೊಡ್ಡಯ್ಯ

ಅವರು ಬಂಗಾರದ ಚಿಲುಮೆಗೆ
ಜಡುದು ಜಡುದು ತುಂಬುರಾರೆ || ಸಿದ್ಧಯ್ಯ||

ಅವರು ಜಡುದು ಜಡುದು ತುಂಬುತಾರೆ
ಹಡದು ಹಡದು ತುಂಬುತಾರೆ || ಸಿದ್ಧಯ್ಯ||

ಗುರುವೇ ಬಂಗಾರದ ಚಿಲುಮೆಗೆ
ಇಪ್ಪತ್ತು ನಾಲ್ಕು ಕಂಡುಗಾ
ಭಂಗಿಸೊಪ್ಪ ಗುರುವೂ
ತುಂಬಿಕೊಂಡು ನನ್ನಪ್ಪ ಧರೆಗೆ ದೊಡ್ಡಯ್ಯಾ
ಅವರು ಚಕುಮುಖಿ ಒಡೆದರಲ್ಲಾ
ತೊರಮೆ ಕೆಂಡಾ ತಗುದರಲ್ಲಾ || ಸಿದ್ಧಯ್ಯ||

ಗುರುವೇ ಚಕುಮುಖಿ ಒಡೆದು
ತೊರುಮೆ ಕೂಡಾ ತಗುದು
ಪರಂಜ್ಯೋತಿ ಗುರುವು
ಕಸ್ಗೊಂಡು ನನ್ನಪ್ಪಾ
ಅವರು ಒಂದು ದಮ್ಮ ಸೇದಾರಂತೆ
ಬಲಗಾಡೆ ಜೋಲುತಾರೆ|| ಸಿದ್ಧಯ್ಯ||

ಅವರು ಎರಡು ದಮ್ಮ ಸೇದವರಲ್ಲ
ಎಡಗಾಡೆ ಜೋಲುತಾರೆ || ಸಿದ್ಧಯ್ಯ||

ಅವರು ಮೂರು ದಮ್ಮ ಸೇದವರಲ್ಲೊ
ಅಪ್ಪ ಕೂತ್ತುತಾವೆ ಜೋಲುತಾರೆ|| ಸಿದ್ಧಯ್ಯ||

ಗುರುವೆ ಇಪ್ಪತ್ತುನಾಲ್ಕು ಕಂಡುಗ
ಭಂಗಿಸೊಪ್ಪು ದೇವಾ
ಅದು ಒಂದು ದಮ್ಮಿಗೆ ಗುರುವು
ತೀರ್ಲಿಲ್ಲಾ ನನ್ನಪ್ಪ
ಎರಡು ದಮ್ಮಿಗೆ ಗುರುವೇ ಅದು
ಉಳಿಯಲಿಲ್ಲಾ ಗುರುವು
ಅಪ್ಪ ಮೂರು ದಮ್ಮಿಗೆ ಅದು
ಬೂದಿಯಾಗಿ ಸುರಿದೋಯಿತಲ್ಲ || ಸಿದ್ಧಯ್ಯ||

ಇಪ್ಪತ್ನಾಲ್ಕಂಡುಗಾ,
ಭಂಗಿ ಸೊಪ್ಪುನೇ ಗುರುವು
ಎರಡು ಮೂರು ದಮ್ಮಿಗೆ
ಸೇದ್ಕಂಡರು ಮಾಗುರು
ಮಂಡೇದು ಸ್ವಾಮಿ ಜಗಂಜ್ಯೋತಿಯವರು
ಇಪ್ಪತ್ನಾಲ್ಕುಂಡುಗಾ ಭಂಗಿಸೊಪ್ಪನು ಹೊಗೆಯ ಗುರುವೂ
ಒಂದು ಚೂರು ಹೊಗೆ ಹೊರಗಡೆ ಬಡುನಿಲ್ಲ
ಬಂದ ಬಂದಾ ಹೊಗೆ ಗೂಟ ಗೂಟಾನೆ ಕುಡುದವರೆ
ಒಟ್ಟಿಗೆ ನುಂಗವರೇ
ಜಗತ್ತು ಗುರು ಧರೆಗೆ ದೊಡ್ಡಯ್ಯ
ಇಪ್ಪತ್ನಾಲ್ಕುಂಡುಗಾ ಭಂಗಿಸೊಪ್ಪಿನ ಹೊಗೆಯ
ಹೊಟ್ಟೇಲಿ ಕೂಡಕಂಡು
ಭಂಗಿ ಕುಡುವಂತಾ
ಆಗಲೀಗಾ ಭಂಗಿ ಚಿಲುಮೇ ಒಳಗಿದ್ದಂತೆ
ಆರು ಕಂಡುಗಾ ಬೂದಿ ಭೂಮಿ ಮೇಲೆ ಸುರಿದುಬುಟ್ಟು
ಭಂಗಿ ಕುಡುದಾ ಗ್ಯಾನದಲ್ಲಿ ಗುರುವು
ಹದಿನೆಂಟು ಸಾವಿರ ಕುರಿಗಳನೆ
ಕಣ್ಣಿಂದಾ ನೋಡಿದುರು ಮಾಗುರು ಮಂಡೇದುಸ್ವಾಮಿ
ಇಪ್ಪತ್ನಾಲ್ಕಂಡುಗ ಭಂಗಿ ಸೊಪ್ಪ
ಹೊಗೆ ಹೊಟ್ಟೇಲಿ ಕುಡ್ಕಂಡಿದ್ರಲ್ಲ
ಹದಿನೆಂಟು ಸಾವ್ರ ಕುರಿಗಳ ಮ್ಯಾಲೆ

ಅವರು ಉಫ್ ಅಂತ ಉರುಬುದುರಂತೆ
ಹೆತ್ತೈಯ್ಯಾ ಮಂಟೇದು ಸ್ವಾಮಿ || ಸಿದ್ಧಯ್ಯ||

ಗುರುವೇ ಉಫ್ ಅಂತ ಉರುಭವರೇ
ಅಪ್ಪಾಜಿ ಗುರುವು ಮಂಟೇದ ಲಿಂಗಪ್ಪ
ನನ್ನ ಪರಂಜ್ಯೋತಿಯವರು
ಅವನ ಹಟ್ಟಿ ಮನೆಯಲ್ಲ ಗುರುವೇ
ಹೋಗೆಯೇ ಕೌದೋಗಿತಲ್ಲ || ಸಿದ್ಧಯ್ಯ||

ಅವರ ಅಟ್ಟಿ ಮನಿಯೆಲ್ಲ ಗುರುವೇ
ಹೊಗೆಯೇ ಕವುದೋಯ್ತು
ಅಲ್ಲಾಮ ಪ್ರಭು ಮಂಟೇದ ಲಿಂಗಯ್ಯ
ಅವು ಬುಕ್ಕು ಬುಕ್ಕುನೇ ಕೆಂಬುತಾವೆ
ಪಕ್ಕನೇ ಪ್ರಾಣ ಬಿಡುವುತಾವೆ || ಸಿದ್ಧಯ್ಯ||

ಬುಕ್ಕು ಬುಕ್ಕುನೆ ಕೆಂಬುತಾ ದೇವಾ
ಪಕ್ಕ ಪಕ್ಕನೆ ಪ್ರಾಣ ಬುಟ್ಟುಬುಟ್ಟು ಗುರುವು
ಪ್ರಾಣ ಬುಟ್ಟಂತಾ ಕಾಲದಲ್ಲಿ ಗುರುವೇ ಗುರುದೇವಾ
ಕಾ ಕೋಳಿ ಕೂಗಿ ದೇವಾ
ಲೋಕಾ ಬೆಳಗಾಗುವಂತ ಟೈಮಿನಲ್ಲಿ ನನ್ನಪ್ಪ
ಜಗತ್ತುಗುರು ಧರೆಗೆ ದೊಡ್ಡಯ್ಯ
ಭಾರಿ ಕಂಡಾಯಾ
ಹಾಸಿರುವಂತ ಹುಲಿಚರ್ಮ
ಮಡಿಗಿರುವಂತ ಮುತ್ತಿನ ಜೋಳಿಗೆ
ಮಡಗುತ್ತಾವೆ ಮಡಗಿಬುಟ್ಟು
ಆ ಬಪ್ಪೇಗೌಡ್ರ ಕರಿದೊಡ್ಡಿ
ಅಕ್ದ ಬೀಗಾ ಹಾಕ್ದಾಗೆ ಇರುವುದಂತೆ

ಅವರ ಹಟ್ಟಿ ಮನಿಯಾ ಬಿಟ್ಟು ಗುರುವೇ
ಮಾಯದಲ್ಲಿ ದಯ ಮಾಡಿದ್ರಂತೆ || ಸಿದ್ಧಯ್ಯ||

ಅಟ್ಟಿ ಮನೆ ಬಿಟ್ಟುಬಿಟ್ಟು ದೇವಾ
ಮಾಯ್ದಾ ರೂಪುನಲ್ಲಿ ಜಗತ್ತು ಗುರು
ಧರೆಗೆ ದೊಡ್ಡವರು ಕಂಡಾಯದ ಜ್ಯೋತಿ
ಕಡೆದು ಹೊರಟು ಹೋದಂತಾ ಕಾಲದಲ್ಲಿ ಗುರುದೇವಾ
ಲೋಕ ಬೆಳಗಾಗಿ
ಹೊತ್ತುಟ್ಟಿ ಬೆಳಕರೆದು ಬರುವಂತ ಟೈಮಿನಲ್ಲಿ
ಬಪ್ಪೇಗೌಡರ ಮಕ್ಕಳು ಗುರುವು
ಕುರಿ ಬುಡುಬೇಕು
ರಾತ್ರೆ ಕುರಿ ಕೊಟ್ಟುಗೆಗೆ ಕೂಡಾಕಿದಂತೆ
ಜಂಗುಮನ ಕಳುಗಿಸಿಬುಡುಬೇಕು ಅಂತೇಳಿ
ಅವರು ಓಡಿ ಓಡಿ ಬಂದಾರಂತೆ
ಅವರು ಹಾಕಿದ ಬಾಗುಲ ತಗ್ದಾರಂತೆ || ಸಿದ್ಧಯ್ಯ||

ಗುರುವೇ ಓಡಿ ಓಡಿ ಬಂದು ಗುರುವೇ
ಬಾಗುಲ ತಗುದು
ಹಟ್ಟಿ ಒಳಗೆ ಬಂದು
ಬಗ್ಗಿ ನೋಡವರೇ
ಎಲ್ಲಾ ಕುರಿಗಳುವೇ
ಒಂದುರು ತಲೆಗೆ ಒಂದು
ತಲೆಯ ಎಟ್ಟಿಗಂಡು
ಸತ್ತು ಸತ್ತು ಮಲಗವೇ
ಅಲ್ಲಿ ಹುಲಿ ಚರ್ಮ ಹಾಸದೆ
ಬಾರಿ ಕಂಡಾಯ ಮಡುಗದೆ || ಸಿದ್ಧಯ್ಯ||

ಬಾರಿ ಕಂಡಾಯ
ಭೂಮಿ ತೂಕುವ ಮುತ್ತಿನಾ ಜೋಳಿಗೆ
ಮಾತ್ರ ಕುರಿ ಕೊಟ್ಟಿಗೇಲಿ ಮಡಗದೆ
ಜಗನ್‌ಜ್ಯೋತಿ ಧರೆಗೆದೊಡ್ಡವರ ಸುಳುವೇ ಇಲ್ಲ
ಗಂಡು ಮಕ್ಕಳೆಲ್ಲ ಓಡಿ ಬಂದು
ಬಪ್ಪೇ ಗೌಡ್ರ ಮುಂಭಾಗದಲಿ ನಿಂತುಕಂಡು
ಏನಪ್ಪ ತಂದೆ ಬಪ್ಪೇಗೌಡ
ರಾತ್ರೆ ಬಂದಿದ್ದಂತಾ ಜಂಗುಮನಾ
ಕುರಿ ಕ್ವೊಟಿಗ್ಹೋಗಿ ಮಲಿಕೋ ಅಂತಾ
ಅಪ್ಪುಣೆ ಮಾಡಿಬುಟ್ರಿ
ಕುರಿ ಕ್ವೊಟಿಗೆಗ್ವಾದಂತಾ ಜಂಗಮ
ಎನು ಮಾಡಿದ್ನೊ ಎಂತು ಮಾಡಿದ್ನೊ ಗೊತ್ತಿಲ್ಲಾ
ಈಗಲೀಗಾ ಮ್ಯಾಂತಾ ಅರಚ್ಕೋತುದೆ ಅಂದ್ರೆ
ಒಂದು ಕುರಿ ಕೂಡಾ ಕುರಿದೊಡ್ಡಿಲಿಲ್ಲಾ
ಹುಲಿ ಚರ್ಮ ಆಸದೆ
ಖಂಡಾಯ ಮಡ್ಗದೆ
ಅವನ ಜೋಳ್ಗೆ ಮಾತ್ರ ಕ್ವೊಟ್ಟಿಗೆಲದೆ

ಆ ಜಂಗುಮ ದೇವಾರ
ಸುಳಿವೆ ಮೊದಿಲಿಲ್ಲಾ || ಸಿದ್ಧಯ್ಯ||

ಜಂಗುಮ ದೇವುರ ಸುಳಿವೇ ಮೊದಲಿಲ್ಲಾ ದೇವಾ ಎಂದುರು
ಅಂಗಂದ್ರೆ ಏನಪ್ಪ
ಅಂಗಂದ್ರೆ ಎನ್ರೋ ಮಕ್ಕಳೆ ಎನುತೇಳಿ
ಬಪ್ಪೇಗೌಡ
ಅಣುಮಟ್ಟ ದೊಡ್ಡ ತಗುದು
ಬಲಗೈಲಿ ಇಡುಕಂಡು
ಕುರಿ ಕಂಬ್ಳಿ ತಗುದು ಹೆಗಲ ಮೇಲೆ ಮಡಿಕಂಡು
ಆಳುದ್ದ ಜಗಲಿ ಇಳಿದು

ಅಯ್ಯಾ ಕುರಿಯ ದೊಡ್ಡಿಗೆ ಅವುರು
ಓಡಿ ಓಡಿ ಬರುತಾರೆ || ಸಿದ್ಧಯ್ಯ||