ಈಗಲೀಗ ಗುರುವುs ಬಾಳಿ ಬದುಕಿ
ಸಕ್ಕರೆ ಪಟ್ಟಣದ ದೊರೆಗಳು ಅಂತೇಳಿ ಸಿಗಬೇಕಾದರೆ
ಈಗಲೀಗ ನಾವು ಯಾವುದಾರು ಸಂಸ್ಥಾನ ಹುಡುಕಿ
ಈ ಸಕ್ಕರೆ ಪಟ್ಟಣಕ್ಕೆ ದೊರೆಗಳಾಗಬೇಕಂತೇಳಿ
ಹಣದ ಆಸೆ ಚಿನ್ನ ಬೆಳ್ಳಿ ಆಸೆ ಮುತ್ತು ರತ್ನದ
ಆಸೆ ಮಾಡಿಕೊಂಡು ಯಾರಯಾರು ಗುರುದೇವಾs
ದಾಸ ಜೋಗಿ ತಿರುಕರು ವರಕರು
ಕಾಳಮುಕಿ ಸನಿವೇಸಿ
ಅರದೇಶಿ ಪರದೇಶಿಗಳು ಮುತ್ತು ನವರತುನ ಬೆರಳಿ ಬಂಗಾರ
ಏನಾರೂ ಮೈತುಂಬ ಉಟುಗೊಂಡು ತೊಟಗೊಂಡು
ಏನಾರೂ ಬಂದದ್ದೆ ಆಗಿಬಿಟ್ಟರೆ

ಬಾಳ ಪ್ರೀತಿಯೊಳಗೆ
ಅವರು ಬಾವುಣಿಸಿ ಕರೆಯುತಾರೆ || ಸಿದ್ಧಯ್ಯ ||

ಅಯ್ಯಾ, ಬಾಳ ಪ್ರೀತಿಯವೊಳಗೆ
ಬಾವುಣಿಸಿ ದೇವಾs
ಕರದು ಕರದು ಗುರುವು ದೇವಾ
ನಿಮಗೆ ಒಳ್ಳೇದ ಮಾಡೀವಿ
ಒಳ್ಳೇದ ಯಿಕ್ಕುತೀವಿ
ನಿಮಗೆ ಹೊಟ್ಟೆ ತುಂಬ ನಾವು
ಬಡುಸುತೀವಿ ಗುರುಗಳೆ
ಯಾ ಬನ್ನಿ ದಾಸಪ್ಪ
ಬನ್ನಿ ಗುರುವಯ್ಯಾ
ಬನ್ನಿ ಗುಡ್ಡಪ್ಪ ಎನ್ನುತೀವಿ ಗುರುವು
ಅವರು ಹೊಟ್ಟೆ ಪ್ರೀತಿಯ ಒಳಗೆ
ಕರಕಂಡು ಬರುವುತಾರೆ || ಸಿದ್ಧಯ್ಯ ||

ಅತಿ ಪ್ರೀತಿವೊಳಗೆ ದೇವಾs ಈಗಲೀಗ
ಅಟ್ಟೀ ಅರಮನೆಗೆ ಕರೆತಂದು ವಿಷದಲ್ಲಿ ಕಜ್ಜಾಯದಡಿಗೆ ಉಡುಗಿ
ಸಾಧು ತತುಪುರುಷರು ಈಗಲೀಗ ಗುಡ್ಡ, ಗುರುವ
ದಾಸ ಜೋಗಿ ಕಾಳಮುಕಿ ಸನಿವೇಸಿಗಳಿಗೆ
ಇಷ್ಟು ವಿಷದ ಕಜ್ಜಾಯನೆ ಬಡಿಸಿ
ಊಟಮಾಡಿ ಪ್ರಾಣ ಬಿಟ್ಟು ಕಾಲದಲ್ಲಿ
ಅವರ ಶಂಕು ಜಾಗಟೆ ಬೋನಾಸಿ
ಅವರ ಮೈಮೇಲಿರುವ ವಡವೆ ಆಭರಣ
ಈಗಲೀಗಾs ಗುಡ್ಡಪ್ಪನತ್ತಿರವಿರುವ ಬಿರುದು ಲಾಂಚನಗಳು
ಇಕ್ಕಿರುವಂತ ವಡವೆ ಆಭರಣಗಳು
ಈ ದಾಸಪ್ಪ ಜೋಗಪ್ಪ ಗುಡ್ಡಯ್ಯ ಗುರುವಯ್ಯರಾದಿಯಾಗಿ
ಎಂತೆಂತ ದೆವ್ವದೇವರ ಬಿರುದುಗಳಿದ್ದರೂ ಕೂಡ
ಆಗಲೀಗ ಎಲ್ಲಾ ಅಭರಣಗಳು ಕಿತ್ತು
ಸತ್ತು ಪ್ರಾಣ ಬಿಟ್ಟಂತ ದಾಸ, ಜೋಗಿ ಕಾಳಮುಕಿ ಸನಿವೇಸಿಗಳೇ
ಹಟ್ಟಿ ಅರಮನೆವೊಳಗೆ ನಡುತೊಟ್ಟಿ ಒಳಗೆ
ಹನ್ನೆರಡಾಳುದ್ದಾ ಗುರುದೇವ ಜಲಬಾವಿ ತೆಗೆಯಿಸಿ
ಬಾವಿಗೆ ಆಗಲೀಗ ಜಂಗಮರ ಸತ್ತ ಪ್ರಾಣ ಬಿಟ್ಟವರನ್ನು ಒಪ್ಪಮಾಡಿ
ಈಗಲೀಗ ಗುಟ್ಟಿಲ್ಲದಂತೆ ಬಾಳಿ ಬದುಕುವಂತ
ಸಕ್ಕರೆ ಪಟ್ಟಣದ ದೊರೆಗಳ

ಅಯ್ಯಾ ಕಣ್ಣಾರ ನೋಡಿಕಂಡ್ರು
ನನ್ನ ಧರೆಗೆ ದೊಡ್ಡವರು || ಸಿದ್ಧಯ್ಯ ||

ಗುರುವೆ ಕಣ್ಣಾರೆ ಗುರುವು
ದಿವ್ಯದೃಷ್ಟಿ ಒಳಗೆ ನೋಡಿಕಂಡ ನನ್ನಪ್ಪ
ಅಲ್ಲಮ ಪ್ರಭು ನಮ್ಮ ಪರಂಜ್ಯೋತಿಯವರು
ಈಗ ಸಕ್ಕರೆ ಪಟ್ಟಣಕೆ ನಾವು
ಹೋಗಬೇಕು ಎಂದರಂತೆ || ಸಿದ್ಧಯ್ಯ ||

ಧರೆಗೆ ದೊಡ್ಡವರು, ಈಗ ನಾನು ಸಕ್ಕರೆ ಪಟ್ಟಣಕ್ಕೆ ಹೋಗಬೇಕಲ್ಲ
ಆ ದೊರೆಗಳಾ ಭಕುತಿ ನೋಡಬೇಕಲ್ಲ
ಆ ದೊರೆಗಳ ಸತ್ಯ ತಿಳಿಬೇಕಲ್ಲ
ಈಗ ಹೊನ್ನು ಚಿನ್ನ ಬೆರಳಿ ಬಂಗಾರದ ಆಸೆಗಾಗಿ
ದಾಸ ಜೋಗಿ ಗುಡ್ಡ ಗೊರವ ಕಾಳಮುಕೇಸಿ
ಎಲ್ಲಾರನ್ನು ಕೊಂದು ಬಿರುದು ಲಾಂಚಾಣಗಳನೆ ಕಿತ್ತು
ಅವರು ವಡವೆ ಆಭರಣಗಳನೆ ಕಳೆದು
ಈಗಲೀಗ ಸತ್ತ ಪ್ರಾಣಬಿಟ್ಟವರನ್ನಷ್ಟೆ ಒಪ್ಪ ಮಾಡಿಕೊಂಡು
ಕಾಲ ಕಳೀತವರಲ್ಲಾ
ಅವರ ದೃಡಭಕುತಿ ನೋಡಬೇಕಾದರೆ
ದಾಸ ಜೋಗಿ ತಿರುಕರುವರುಕರು ಕಾಳಮುಕೇಸಿಗೋಳು
ಎಷ್ಟೆಷ್ಟು ಆಭರಣ ತಕ್ಕೊಂಡೋಗಿ ಪ್ರಾಣ ಕೊಟ್ಟವರೆ
ಅದಕೆ ಹೆಚ್ಚಿನ ಆಭರಣವನ್ನೆ ನಾನು ಮಾಡಿಕೊಂಡು
ಆ ದೊರೆಗಳ ಮನೆಗೆ
ನಾವು ಹೋಗಬೇಕು ಎಂದರಲ್ಲಾ || ಸಿದ್ಧಯ್ಯ ||

ಈಗ ಅವರ ಮನೆಗೆ
ನಾನು ಹೋಗಬೇಕು ಅಂತಾ
ಅಲ್ಲಮ ಪ್ರಭು ಮಂಟೇದ ಲಿಂಗಯ್ಯ
ಈಗ ಚಿನ್ನದಲ್ಲಿ ಕಂಡಾಯ
ಗುರುವೆ ಬೆಳ್ಳಿವೊಳಗೆ ಜಾಗಟೆ
ಗುರುವೆ ಬಂಗಾರದ ಗುರುವೆ
ಮುಳ್ಳಿನ ಪವಾಡ
ಪಾದದಲಿ ಹಾಕ್ಕೊಂಡ
ಅವರ ಬಂಗಾರದ ಗುರುವು
ಕೆಂಗುರಿಯ ಗುರುವೆ
ಎದೆಮೇಲೆ ಧರಿಸಿಕೊಂಡು
ಅವರು ಅರವತಾರು ಕಾಸು ಗುರುವೆ
ಮುವತ್ತು ಮೂರು ಬಿರುದು
ಅಷ್ಟು ಖಂಡಗದ ಜೋಳಿಗೆ
ಮುಂಗೈಲಿ ಹಿಡಕಂಡು
ಈಗ ದೊರೆಗಳ ಮನೆಗೆ ದೇವ
ಜಂಗಮರಾಗಿ ಬರುತಾರೆ || ಸಿದ್ಧಯ್ಯ ||

ದೊರೆಗಳ ಮನೆಗೆ ಗುರುವು
ಜಂಗಮ ರೂಪದಲ್ಲಿ ಬಂದರು ಜಗತ್ತು ಗುರುವು
ಧರೆಗೆ ದೊಡ್ಡಯ್ಯ ಬರುವಂತ ರೀತಿ ನೋಡಿ
ಮುಖ ನೋಡಿಕಂಡು ಸಕ್ಕರೆ ಪಟ್ಟಣದ ದೊರಾನ್ ದೊರೆಗಳು
ಏನಿರಣ್ಣಾ! ಇವತ್ತು ಬಂದಿರುವಂತ ಜಂಗಮರು ಎಂದರೆ
ಬಾಳ ಬಂಗಾರ ಉಳ್ಳಾದ ಜಂಗಮರು
ಈಗಲೀಗ ಅಷ್ಟು ಜನ ಜಂಗಮರು ಬಂದಿದ್ದರೂ ಕೂಡ
ಇಂತಪ್ಪ ಜಂಗಮರು ಇಷ್ಟೊಂದು ಆಭರಣ
ಹೊತ್ತುಗಂಡು ಇಲ್ಲೀವರೆಗೆ ಯಾರೂ ಬಂದಿರಲಿಲ್ಲ

ಈ ಬಂದಿರುವ ಜಂಗಮರ
ಕರಿಬೇಕು ಎಂದರಂತೆ || ಸಿದ್ಧಯ್ಯ ||

ಗುರುವೆ ಬಂದೆಂಬೊ ಬಂದಿರುವಂತ
ಜಂಗಮದೇವರು ನಾವು ಕರಿಬೇಕು ಎಂತ
ಗುರುವೆ ಗುರುದೇವ ಅವರು ಓಡಿ ಬಂದು
ನನ್ನ ಜಗತ್ ಗುರುಗಳ
ಮಂದೆ ಬಂದು ನಿಂತಗಂಡು
ಅವರು ಎರಡು ಕೈಯೆತ್ತಿ
ತಾವಾಗಿ ಮುಗಿದರಂತೆ || ಸಿದ್ಧಯ್ಯ ||

ಎರಡು ಕೈಯೆತ್ತಿ ಗುರುವು
ಆಗಲೀಗ ಬಾಗಿ ಶರಣು ಮಾಡಿಕೊಂಡು
ಗುರುದೇವ ನಿಮ್ಮಂತ ಮಾಮುನಿಗಳು
ನಮ್ಮಟ್ಟಿ ಅರಮನೆಗೆ ಬಂದು ಬಹುಕಾಲವಾಗೋಗಿತ್ತು
ಇವತ್ತು ನೀವು ಬಂದಿರೋದ್ರಿಂದ ಸ್ವಾಮಿ

ನಿಮಗೆ ಹಾಲು ಅನ್ನದ ಅಡಿಗೆ!
ದುಡುಗುತೀವಿ ನನ ಗುರುವು
ನಿಮ್ಮ ಬಿರುದುಗೊಪ್ಪುವ ಪೂಜೆ
ನಾವು ಮಾಡಿತೀವಿ ನನ ಗುರುವು
ಅಯ್ಯಾ ನಮ್ಮ ಮನೆಗೆ ನೀವು ಬಂದು
ಬಿನ್ಯನಾದರೂ ಕಳೆಯಬೇಕು || ಸಿದ್ಧಯ್ಯ ||

ನಮ್ಮ ಮನೆಗೆ ಬಂದು ಗುರುದೇವಾs
ಬಿನ್ಯಾ ಅಳಿಬೇಕು ಸ್ವಾಮಿ ಬಿನ್ಯಕಳಿ ಬೇಕು ಗುರುವು
ಬನ್ನಿ ನನ್ನಪ್ಪ ಬನ್ನಿ ಗುರುವೆ ಅಂತೇಳಿ
ಅತೀ ಪ್ರೀತಿಯಿಂದ ಎಲ್ಲಾ ದಾಸ ಜೋಗಿ
ಕಾಲಮುಕೇಸಿ ಸನ್ನಿವೇಸಿಗಳಿಗೆ
ಎಷ್ಟೋ ಬವಣಿಕೆ ಮಾಡಿ ಕರಕೊಂಡೊಯ್ತಿದ್ರು
ಅದಕ್ಕಿಂತ ಅತೀ ಪ್ರೀತಿಯೊಳಗೆ ಧರೆಗೆ ದೊಡ್ಡವರ ಕರೆತಂದು
ಪಟ್ಟೆಮಂಚದ ಮೇಲೆ ಕುಂದ್ರಿಸಿ
ಅವರಾs ಭಾರಿ ಖಂಡಾಯ ಭಾರಿಸಿ
ತಂಬೂರಿ ಮುರಳಿನ ಪವಾಡ ನಡುಮನೆವೊಳಗೆ ಪೂಜಿಸಿ
ಎಡೆ ಸಿದ್ಧಪಡಿಸಿ ಕಡ್ಡಿ ಕರಪೂರ ಮಂಗಳಾರತಿ ಬೆಳಗುಬಿಟ್ಟು
ಗುರುವೆ ನಮ್ಮ ಮನೆಯ ಒಳಗೆ ನೀವು
ಬಿನ್ನನಾದ್ರೂ ಕಳಿರಿ ದೇವಾ || ಸಿದ್ಧಯ್ಯ ||

ಬಿನ್ಯ ಕಳೀರಿ ಗುರುವು ಅಂತೇಳಿ
ಗೊನೆ ಮುರಿಯದ ಬಾಳೆ ಎಲೆ ತಕ್ಕೊಂಡು ಬಂದು
ಧರೆಗೆ ದೊಡ್ಡವರ ಮುಂಭಾಗದಲ್ಲಿ
ಆಗಲೀಗ ವಿಷದ ಕಜ್ಜಾಯ ತಂದು
ಊಟಮಾಡಿ ಸ್ವಾಮಿ ಅಂತೇಳಿ ಧರೆಗೆ ದೊಡ್ಡವರಿಗೆ
ಎಡೆ ಪಡಿಸುವಂತ ಸಮಯದಲ್ಲಿ

ಅವರು ಕೂಡಿಸಿದ್ದ ವಿಷವ ಗುರುವೆ
ಕಣ್ಣಾರೆ ನೋಡುತಾರೆ || ಸಿದ್ಧಯ್ಯ ||

ಗುರುವೆ ಇಕ್ಕಿರುವಂತ ವಿಷದ ಕಜ್ಜಾಯ ದೇವಾ
ಕಣ್ಣಾರ ಗುರುವು ನೋಡಿಕಂಡು ನನ್ನಪ್ಪಾ
ಈ ಶಿವ ಶಿವ ಎಂದವರೆ
ನೇತ್ರ ಮುಚ್ಚವರೆ
ಹರಹರ ಎಂದವರೆ
ಎರಡು ಕಣ್ ಮುಚ್ಚವರೆ
ಅಯ್ಯಾ ಊಟ ಮಾಡಿ ಗುರುವೆ ಅಂತ
ರಾಜು ಮನೆತನದ ದೊರೆಗಳು
ಹಟ್ಟಿ ಅರಮನೆಗೆ ಗುರುವೆ
ಮರೆಯಾಗಿ ಬರುವುತಾರೆ || ಸಿದ್ಧಯ್ಯ ||

ಶಿವಾ ಶಿವಾ ಅಂತೇಳಿ ಎರಡು ನೇತ್ರ ಮುಚ್ಚಿಕೊಂಡು
ತಾವಾಗಿ ಕೂತಿದ್ರು ಜಗತ್ತುಗುರು ಧರೆಗೆ ದೊಡ್ಡಯ್ಯ
ಈ ಸಕ್ಕರೆ ಪಟ್ಣ ದೊರೆಗಳು ಆಗಲೀಗ ಮರೆಯಾಗಿ
ಮನೆಗೆ ಹೊರಟೋದ್ರು ಆಗ ಪರಂಜ್ಯೋತಿ ಪಾತಾಳ
ಜ್ಯೋತಿಯವರು
ಇವರಿಕ್ಕಿರುವಂತ ವಿಷವ ಇವರಿಗೆ ಬಡಿಸಿ

ಅಯ್ಯಾ ಇವರನ್ನೆ ನಾನು
ಒಕ್ಕಲು ಮಾಡಬೇಕು || ಸಿದ್ಧಯ್ಯ ||

ಜಗತ್ತು ಗುರು ಧರೆಗೆ ದೊಡ್ಡಯ್ಯಾs
ದೊರೆಗಳ ಮಂಚದ ಮೇಲೆ ತಾವಾಗೆ ಕುಳಿತಿದ್ದರು
ಆಗಲೀಗ ಸಕ್ಕರೆ ಪಟ್ನದ ದೊರೆಗಳು
ಏನಿರಣ್ಣಾ! ಎಲ್ಲಾ ಜಂಗಮರು ವಿಷದ ಕಜ್ಜಾಯ ಊಟ ಮಾಡಿದ
ಹತ್ತುಗಳಿಗೆ ಐದುಗಳಿಗೆ ಒಂದಗಳಿಗೆ ಒಳಗೆ
ಸತ್ತು ಪ್ರಾಣ ಬಿಟ್ಟು ಬಿಡುತಿದ್ರು
ಈ ಇಷ್ಟು ಕಜ್ಜಾಯ ಊಟ ಮಾಡಿದ ಜಂಗುಮ
ಪಟ್ಟೆ ಮಂಚದ ಮೇಲೆ ಸುಮ್ಮನೆ ಕೂತವನಲ್ಲಾ

ಇವನು ಇನ್ನೂ ಪ್ರಾಣ ಬಿಡಲಿಲ್ಲಾ
ಇವನ ಬಂಗಾರವಾ ಕಳೆಯಲಿಲ್ಲ || ಸಿದ್ಧಯ್ಯ ||

ಆಗಲೀಗ ಗುರುದೇವ
ಕೇಳಿರಪ್ಪಾ ದೊರಾನ್ ದೊರೆಗಳೆ
ಈಗ ನಮಗೆ ಆನಂದವಾದ ಊಟಮಾಯ್ತು
ನಮ್ಮ ಕಂಡಾಯಕ್ಕೆ ಶಿವಪೂಜೆಯಾಯ್ತು
ನಾನು ಬಾರಿಸುವಂತ ತಂಬೂರಿಗೂ ಶಿವಪೂಜೆವಾಯ್ತು ಕಣ್ರಪ್ಪ
ಈಗ ನಿಮ್ಮ ನಿಮ್ಮ ಹಟ್ಟಿಮನೆ ಬಿಟ್ಟೋಯ್ತಿನಿ ಅಂತೇಳಿ
ಎಲ್ಲಾ ಬಿರುದು ಲಾಂಚಾಣ ಹೊತಗಂಡು ಧರೆಗೆ ದೊಡ್ಡವರು

ದೊರೆಗಳ ಮನೆಬಿಟು
ಹೊರಗಡೆ ಬಂದಾರಲ್ಲಾs || ಸಿದ್ಧಯ್ಯ ||

ಹೊರಗಡೆ ಬಂದರು ದೇವಾ
ಇವತ್ತಿನಾ ದಿವಸ ವಿಷಯಿಕ್ಕುದವರ ಮನೆ
ನಾಶಸ್ಥಾನ ಮಾಡಬೇಕು
ಇವರ ವಂಶಕ್ಕೆ ಒಬ್ಬರನೂ ಮಡಗಬಾರದು ಅಂತೇಳಿ
ಈ ಇಸಯಿಕ್ಕುದವರ ಮನೆ ನಾಶ ಮಡಿಬಿಟ್ಟು
ನಾನಾಗೆ ಹೋಗಬೇಕಂತೇಳಿ
ಜಗತ್ ಗುರು ಧರೆಗೆ ದೊಡ್ಡಯ್ಯ
ಆಗಲೀಗ ದೊರೆಗಳ ಮಕ್ಕಳ ರಾಜಬೀದಿಯೊಳಗೆ
ಆಟಪಾಟವಾಡುತ್ತಿದ್ದರಂತೆ
ಬನ್ನಿರಪ್ಪಾ ಮಕ್ಕಳೆ ಬನ್ನಿರಿ ಕಂದಾ
ನಿಮಗೆ ತಿಂಡಿಕೊಡತೀವಿ ಅಂತೇಳಿ
ಅವರು ಮನೇಲಿ ಕೊಟ್ಟಿದ್ದಂತ ಒಂಬತ್ತು ವಿಷದ ಕಜ್ಜಾಯ

ಒಂಬತ್ತು ಮಕ್ಕಳಿಗೆ
ಭಾಗವಾಗಿ ಕೊಟ್ಟಾರಲ್ಲಾs || ಸಿದ್ಧಯ್ಯ ||

ಅಯ್ಯಾ ಜಂಗಮರು ಕೊಟ್ಟಂತ
ಕಜ್ಜಾಯ ಅಂತೇಳಿ
ಎಲ್ಲಾ ಮಕ್ಕುಳು ದೇವ
ಊಟ ಮಾಡಿ ಗುರುವೆ
ಊಟ ಮಾಡಿದಂತ
ಆರುಗಳಿಗೆ ದೇವ
ಮೂರುಗಳಿಗೆ ವಳಗೆ
ಎಲ್ಲಾ ಮಕ್ಕಳು ದೇವ
ಸತ್ತು ಪ್ರಾಣ ಬಿಟ್ಟಾರಲ್ಲಾ
ಅಲ್ಲೆ ಅಲ್ಲೆ ಬಿದ್ದಾರಲ್ಲ || ಸಿದ್ಧಯ್ಯ ||

ಎಲ್ಲಾ ಮಕ್ಕಳು ಸ್ವಾಮಿ
ಸತ್ತು ಪ್ರಾಣ ಬಿಟ್ಟ ಕಾಲದಲ್ಲಿ ಗುರುವು
ಈಗ ವಿಷ ಕೊಟ್ಟವರ ದಮನೆ ನಾಶನವಾಯ್ತು
ಹಾಗಂದು ಜಗತ್ತು ಗುರು ಧರೆಗೆ ದೊಡ್ಡಯ್ಯ
ಊರು ಮುಂದೆ ಇರುವ ಅರಳಿಕಟ್ಟೆ ಜಗಲಿಗೆ ಬರುತ್ತಿದ್ದರು
ಸಕ್ಕರೆ ಪಟ್ಟಣದ ದೊರೆಗಳು ಓಡೋಡಿ ಬಂದು
ಧರೆಗೆ ದೊಡ್ಡವರ ಪಾದ ಇಡಕಂಡು
ಗುರುದೇವಾ ನಿಮ್ಮ ಮಹಿಮೆ ಮೈತಗಾರ ಏನು ಎಂತು
ಎನ್ನುವುದು ನಮಗೆ ಗೊತ್ತಾಗಲಿಲ್ಲ ದೇವಾ
ನಿಮ್ಮಾs ಜಂಗಮರು ಎನ್ನುತೇಳಿ ನಾವು ತಿಳಿದು
ನಿಮಗೆ ವಿಷದ ಕಜ್ಜಾಯ ತಂದು ನಾವು ಊಟಕ್ಕೆ ಬಡಿಸಿದ್ದರಿಂದ

ನಮ್ಮ ಮನೆ ವಿಷವಾಯ್ತು ಗುರುವೆ
ನಮ್ಮ ಮನೆ ಹಾಳು ಬಿತ್ತು || ಸಿದ್ಧಯ್ಯ ||

ನಮ್ಮ ಮನೆ ವಿಷಾ ಗುರುದೇವ
ನಮ್ಮ ಮನೆ ಬರಿದಾಗೋಯ್ತು
ಅಗೋಯ್ತು ಆಗೋಯ್ತು ಎನ್ನುತೇಳಿ
ಧರೆಗೆ ದೊಡ್ಡವರ ಪಾದ ಹಿಡಕಂಡು
ಹುಟ್ಟಿದ ಮಕ್ಕಳು ಸತ್ತ ಮೇಲೆ ಗುರುವು
ನಾವು ಎಲ್ಲೋಗಿ ಸೇರಬೆಕು
ಯಾ ತಾವ ಸೇರಬೆಕು
ಯಾರನಾ ಸೇರಿ ಬಾಳಿ ಬದುಕಬೇಕು ಎನುತೇಳಿ

ನಿಮಗೆ ಒಕ್ಕಲಾಗಿ
ಇರುತೀವಿ ಎನುತಾರಾಗ || ಸಿದ್ಧಯ್ಯ ||

ಈಗಲೀಗ ನಿಮಗೆ ಒಕ್ಕಲಾಗಿ ಬಾಳಿಬದುಕುತೀವಿ ಸ್ವಾಮಿ
ಎಂದೆಂದಿಗೂ ನಮ್ಮ ಕೈಬಿಡುಬೇಡಿ ಗುರುವೆ ಎನುತೇಳಿ
ಧರೆಗೆ ದೊಡ್ಡವರ ಪಾದ ಹಿಡಕೊಂಡಾಗ ಗುರುವು
ಆಗ ಪುಟ್ಟ ಬುದ್ಧಿ ರಾಜಬುದ್ಧಿ ಎನುವಂತ ನಿಮಗೆ
ಹೆಸರಾಗಲಿ ಕಂದ ಎನುತೇಳಿ
ರಾಜವಂಸದಾ ಮಕ್ಕಳ ಶಿಶು ಮಕ್ಕಳ ಮಾಡಿಕೊಂಡು
ಧರೆಗೆ ದೊಡ್ಡಯ್ಯ
ಸಕ್ಕರೆ ಪಟ್ಟಣ ಬಿಟ್ಟು
ನನ್ನ ದೇವರು ದಯಮಾಡುತಾರೆ || ಸಿದ್ಧಯ್ಯ ||

ಅಯ್ಯಾ ನಿಮ್ಮಿಂದಲೇ ಕಂದಾ
ನಮಗೆ ಹಗಲುಪೂಜೆ ಕಂದ
ಇರುಳು ಪೂಜೆ ಕಂದಾ
ನನಗಾಗಬೇಕು ಎಂತಾ
ಧರೆಗೆ ದೊಡ್ಡಯ್ಯ
ಈ ಸಕ್ಕರೆ ಪಟ್ನದ
ದೊರೆಗಳ ಮಕ್ಕಳ
ಕರೆಕೊಂಡು ಗುರುವು
ಈಗ ಎಲ್ಲಿಂದ ಎಲ್ಲಿಗೆ
ನಾನು ಹೋಗಬೇಕು ಎಂದರಲ್ಲಾ || ಸಿದ್ಧಯ್ಯ ||