ಅಯ್ಯಾ ಗುಡುಗುಡನೆ ದೇವ
ಓಡಿಓಡಿ ಬಂದು
ಅಯ್ಯಾ ಏಳು ಅಂಗಡಿ ಸಾಮಾನ
ಕಣ್ಣಾರ ನೊಡಕೊಂಡು
ಧರೆಗೆ ದೊಡ್ಡವರ
ಮುತ್ತಿನ ಜೋಳಿಗೆಯ
ಮುಂಗೈಗೆ ಹಾಕ್ಕೊಂಡು
ಏಳು ಅಂಗಡಿ ಸಾಮಾನ
ಎಲ್ಲಾನೂ ತಗದೂ
ಅವರು ದರೆಗೆ ದೊಡ್ಡವರ
ಮುತ್ತಿನ ಜೋಳಿಗೆಗೆ
ಗೋರಿ ಗೋರಿ ತುಂಬ್ಕೊಂಡು
ಅವರು ಏಳು ಅಂಗಡಿ ಸಾಮಾನ
ಜೋಳಿಗ್ಗೆ ತುಂಬಿದರೂವೆ
ಈ ಧರೆಗೆ ದೊಡ್ಡವರ ಜೋಳಿಗೆ
ಅಂಗಾದ್ರೂ ತುಂಬಲಿಲ್ಲ || ಸಿದ್ಧಯ್ಯ ||

ಏನುರಣ್ಣಾ ಏನುರಣ್ಣs
ಈಗಲೀಗ ಈ ಮೋಡಿಕಾರೆ ಮುಂಡೇ ಮಗನು
ನೋಡಿದ್ರೆ ಗೇಣುದ್ದದ ಜೋಳಿಗೆ
ನಮ್ಮ ಏಳಂಗಡಿ ಸಾಮಾನು ಎಲ್ಲಾನು ಎತ್ಕೊಂಡು ತುಂಬ್ಕೋ ಬುಟ್ನಲ್ಲ
ಅಣ್ಣಾ ನೀರಿನ ಮೇಲೆ ಬಾಳೆ ಎಲೆ ಹಾಸಿದ್ದೊ
ಆ ಬಾಳೆ ಎಲೆನಂದು ಕಣ್ರಣ್ಣ ನಿಮ್ಮದಲ್ಲ
ಇದೂನು ಎತ್ಕೊಳೋನೋ ಇಲ್ಲ ಬುಟ್ಟುಬುಡೋನೋ
ಅಂತ್ಹೇಳಿ ರಾಚಪ್ಪಾಜಿಯವರು ಕೇಳಿದ್ರು
ಏನ್ರಣ್ಣ ಆ ಮೋಡಿಕಾರ ಹೇಳ್ತಾನೆ ಕೇಳು
ಗೇಣುದ್ದದ ಜೋಳಿಗೆ ತಕ್ಕೊಂಡು ಓಡ್ಬಂದ್ಬುಟ್ಟ ನೀರಿನ ಮ್ಯಾಲೆ
ದುಡ್ಡ ಕಸು ಏನೂ ಕೊಡಬೇಡ
ನಿನಗೆ ಬೇಕಾದ ಸಾಮಾನು ಎತ್ಕೊಬುಡು ಅಂತೇಳ್ದೊ
ಎಲ್ಲಾ ಸಾಮಾನ್ನೂವೆ ಗೇಣುದ್ದದ ಜೋಳಿಗೆಗೆ ತುಂಬ್ಕೊಂಡು
ಈ ಬಾಳೆ ಎಲೆ ನಿಮ್ದೊ ನಮ್ದೊ ಅಂತ ಕೇಳುತಾವ್ನಲ್ಲ

ಆ ಸಾಮಾನು ಹೋದಮೇಲೆ
ಹಾಳು ಎಲೆ ಯಾರುಗಣ್ಣ || ಸಿದ್ಧಯ್ಯ ||

ಅಂಥ ಬಾಳೆ ಎಲೆಯಣ್ಣ
ನಮಗೆ ಯಾತುಕ್ಕೆ ಬೇಕರಪ್ಪ
ಅಣ್ಣ ಅಷ್ಟು ಹಣಸುರುದು
ಅಷ್ಟು ಹಣ ಕೊಟ್ಟು ಯಾಪಾರ ಸಾಪಾರ
ತಂದಿದ್ದೆ ಕಣರಣ್ಣ
ಅಯ್ಯೋ ತಂದಿದ್ದ ಯಾಪಾರ
ಇವನ ಒಂದು ಜೋಳಿಗ್ಗೆ ಸಾಲಲಿಲ್ಲ || ಸಿದ್ಧಯ್ಯ ||

ತಂದಿರುವಂಥ ಯಾಪಾರ ಸಾಪಾರs
ಇವನ ಒಬ್ನ ಜೋಳಿಗೆಗೆ ಸಾಲಲಿಲ್ಲವಲ್ರಣ್ಣ
ಎಲ್ಲಾನು ಗೋರಕಬುಟ್ಟಕಣ್ಣಣ್ಣ ಅಂದುಬುಟ್ಟು
ಓ ಜಂಗುಮ, ಎಲ್ಲಾ ಸಾಮಾನ್ನು ನಿನ್ನವೇ ತಕ್ಕೊ
ಆ ಬಾಳೆ ಎಲೇನೂ ನಿನ್ನದೇ ಎತ್ಕೊ ಅಂದ್ರು

ಅಯ್ಯಾ ಏಳು ಬಾಳೆ ಎಲೆಯಾ
ಎತ್ತುಕೊಂಡು ನನ್ನ ಗುರುವು
ಕಿಡುಗಣ್ಣ ರಾಚಪ್ಪಾಜಿ
ಅಯ್ಯಾ ಅದೂ ಒಂದು ಮೂಲೆಗೆ
ಜೋಳಿಗ್ಗಾದರೆ ತುರುಕುತಾರೆ || ಸಿದ್ಧಯ್ಯ ||

ಏಳಂಗಡಿ ಸಾಮಾನ ಜೋಳಿಗ್ಗೆ ತುಂಬಿಕೊಂಡು
ಏಳುಬಾಳೆ ಎಲೆ ತಗದು ಒಚ್ಚೋರಿ ಒರಿಕೆಗೆ ತುರೀಕೊಂಡು
ಆಗಲೀಗ ಹೋಗನ್ರಪ್ಪ ಹೋಗನ್ರಣ್ಣ ಎಂದರು
ಈ ಏಳುಜನ ಮೋಡಿಕಾರರು ಹೇಳ್ತರೆ
ಅಣ್ಣ, ಸಾಮಾನು ಹೊಂಟೋಯ್ತವೆ ಅಂತ
ಯೋಚ್ನೆ ಮಾಡಬ್ಯಾಡಿ ಸುಮ್ಗಿರಿ
ಏಳಂಗಡಿ ಸಾಮಾನು ನಾವು ಕೈಲಿಬಾಯ್ಲಿ
ಹೊರನಾರದಂಗೆ ಹೊತ್ತುಕೊಂಡು ಬಂದಿದ್ದೊ
ನಮ್ಮ ನಮ್ಮ ಸಾಮಾನ ನಾವೆ ಹೊರನಾರದಂತೆ
ಹೊತ್ತುಕೊಂಡು ಬಂದೀವಿ
ಈ ಏಳಂಗಡಿ ಸಾಮಾನ ಎಲ್ಲಾನು ಎತ್ಕೂಂಡವ್ನು
ನೀರುಬುಟ್ಟು ಆಚ್ಗೋದಾನಾ
ಈಗಲೀಗ ಇವನ ಭಾರ ನಮ್ಮ ಅಂಗಡಿ ಭಾರ
ಎಲ್ಲಾ ಭಾರಾನು ಯಾತ್ರೂಮ್ಯಾಲೆ ಬರಬೇಕು?
ನೀರಿನ ಮ್ಯಾಲೆ ಬರಬೇಕು
ಇವನ ಅಂಗಾಲು ತ್ಯಾವಾ ಆಗ್ಬುಟ್ಟ ಮ್ಯಾಲೆ

ಅಂಗಡಿ ಸಾಮಾನ
ನೀವೊಬ್ಬರೂವೆ ಕೊಡುಬ್ಯಾಡಿ || ಸಿದ್ಧಯ್ಯ ||

ಅಯ್ಯಾ ಅಂಗಡಿ ಸಾಮಾನಾ
ನೀವೊಬ್ರೂವೆ ಕೊಡುಬ್ಯಾಡಿ
ಇವನ ಗ್ಯಾನುವಾಗಿ ನೀವು
ಸುತ್ತುಮುತ್ತ ನೋಡುರಣ್ಣ || ಸಿದ್ಧಯ್ಯ ||

ಇವನ ಅಂಗಾಲು ನೋಡ್ಕಳ್ರಣ್ಣ
ಇವನ ಕಾಲು ನೀರಾಗುಬುಟ್ರೆ
ನಮ್ಮ ಅಂಗಡಿ ಸಾಮಾನು ಅಂಗಡೀಗೆ ಬತ್ತವೆ ಅಂತೇಳಿ
ಆ ಎಲ್ಲಾ ಏಳು ಜನ ಮೋಡಿಕಾರರೂ
ರಾಚಪ್ಪಾಜಿಯವರ ಅಂಗಾಲನ್ನೇ ನೋಡ್ತಿದ್ರಂತೆ
ನೀರಿನ ಮ್ಯಾಲೆ ಅಂಗಡಿ ಸಾಮಾನು ಹೊತ್ತುಕೊಂಡು
ರಾಚಪ್ಪಾಜಿಯವರು ಅಲಗುತ್ತಾ ಮಲಗುತ್ತಾ ತಾರಾಡ್ತಾ ತೂರಾಡ್ತಾ
ಆ ನೀರಿನ ಮೇಲೆ ನಡಕೊಂಡು ಬರತಿದ್ರೆ
ಈ ಬೀದಿಗಾಣೆ ಓಡಿ ಬಂದಿದ್ರಲ್ಲ ಯಾರು ರಾಚಪ್ಪಾಜಿ
ಅವರ ಪಾದಲ್ಲಿ ಮೊಣ್ಣಿತ್ತು

ಆ ಮೊಣ್ಣೂವೆ ಕೂಡ
ನೀರೇ ಆಗಲಿಲ್ಲ || ಸಿದ್ಧಯ್ಯ ||

ಅವರ ಪಾದದಲ್ಲಿ ಇರುವಂಥ
ಪಾದಧೂಳು ದೇವ
ನೀರು ಆಗಲಿಲ್ಲ
ಅವನು ನೆಗುನೆಗುತ ನನ್ನ ಗುರುವು
ನೀರಿನ ಮೇಲೆ ಬರುವುತಾರೆ || ಸಿದ್ಧಯ್ಯ ||

ಗುರುವೆ ನೀರಿನ ಮ್ಯಾಲೆ ದೇವ
ನಡಕೊಂಡು ನಡಕೊಂಡು
ಕಿಡುಗಣ್ಣ ರಾಚಪ್ಪಾಜಿ
ಅಯ್ಯಾ ಬರುವ ಕಾಲದಲ್ಲಿ
ಮೋಡಿಕರರು ಗುರುವು
ಅವರು ಗುಳಗುಳುನೆ ಆಳುವುತಾರೆ
ಬಾಳ ದುಃಖ ಮಾಡುತಾರೆ || ಸಿದ್ಧಯ್ಯ ||

ಒಳಗೆರೆಯಿಂದ ಹೊರಗೆ ಬಂದರು ರಾಚಪ್ಪಾಜಿ
ಏನುರಣ್ಣ ಮೋಡಿಕಾರರೆ
ಈ ಏಳಂಗಡಿ ಸಾಮಾನ ನನ್ನದಾಯ್ತು ಕಣ್ರಪ್ಪ
ಈಗಲೀಗ ನೀವು ಸೋತಿರಿ
ನಾನು ಗುರುಮಗ ಗೆದ್ದೋದಿ ಕಣ್ರಣ್ಣ
ಈಗಲಾರು ನನ್ನ ಗುರುಮಗ ಅನ್ನರಪ್ಪ
ಧರೆಗೆ ದೊಡ್ಡವರ ಶಿಷ್ಯ ಅಂತಾ ಕರೀರಪ್ಪ ಅಂದ್ರು
ಛೆ ಮುಂಡೇ ಮಗನೇ
ಧರೆಗೆ ದೊಡ್ಡವರ ಮಗ
ಗುರೂ ಶಿಷ್ಯ ಅಂತ ಕೇಳಿದಿಯಾ
ಇವತ್ತಿನ ದಿವಸದಲ್ಲಿ
ಅಂಗಾಲ ನೀರು ಮೊಣ್ಣಾಗದೆ ಬಂದುಬುಟ್ಟೆಯಲ್ಲೊ
ಅಂಗಾಲ್ದಲ್ಲಿದ್ದಂಥ ಮೊಣ್ಣ ಭೂಮಿಗೆ ಬುಡದೆ ಬಂದಿಯಲ್ಲ
ನೀನು ಘನ ಮೋಡಿಗಾರಾ
ಒಂದು ಮೋಡಿ ಎರಡು ಮೋಡಿ ಕಲಿತಿಲ್ಲ
ನೀನು ನೂರೊಂದು ಮೋಡಿ ಕಲಿತು ಬಂದಿದ್ದೀಯೆ
ಯಾವುದಾದರೂ ಒಂದು ಮೋಡೀವೊಳಗೆ
ಇವನ ಸೋಲಿಸಲೇಬೇಕು

ಇವನನ್ನೇ ನಾವು ಗೆಲ್ಲುಬೇಕು
ಎಂದರಂತೆ || ಸಿದ್ಧಯ್ಯ ||

ಅಯ್ಯಾ ಯಾವಾದರೂ ಮೋಡೀಲಿ
ಇವನ ಸೋಲಿಸಬೇಕು ಕಣರಣ್ಣ
ಅಣ್ಣಾ ಯಾವುದಾರೂ ಮೋಡೀಲಿ
ನಾವು ಗೆಲುಬೇಕು ಕಣರಣ್ಣ
ಇವನ ಊರುಬುಟ್ಟು ಹೊರಗೆ ನೀವು
ಕಳುಗಬೇಡಿ ಎಂದರಲ್ಲ || ಸಿದ್ಧಯ್ಯ ||

ಊರು ಬಿಟ್ಟು ಹೊರಗಡೆ ಇವನ
ಕಳುಗಬ್ಯಾಡ್ರಿ ಕಣ್ರಪ್ಪ ಕಳುಗಬ್ಯಾಡ್ರಿ ಕಣ್ರಣ್ಣ ಎಂದರು
ಕೇಳಿರಣ್ಣ ಈಗ ನಾನೊಂದು ಮೋಡಿ ಆಟ ಆಡಿದ್ದಿ
ನೀವೊಂದು ಮೋಡಿ ಆಟ ಆಡಿದ್ರಿ
ನನ್ನದೊಂದು ಮೋಡಿ ನಿಮ್ಮದೊಂದು ಮೋಡಿ ಕಣ್ರಪ್ಪ
ಈಗಲೀಗ ನಾನು ಅರೇಕಲ್ಲು ಇಂಬೇ ಹ್ಹಣ್ಣು ಮಾಡ್ಬುಟ್ಟಿ
ನಡುಹೊಳೆವೊಳಗೆ ಅಂಗಡಿ ನೀವು ಮಡುಗಬುಟ್ರಿ

ಅಣ್ಣಾ ನಾನೊಂದು ಮೋಡಿ ಮಾಡುತೀನಿ
ನನ್ನ ಮೋಡಿ ಎತ್ತುರುಣ್ಣ || ಸಿದ್ಧಯ್ಯ ||

ಈಗಲೀಗ ಗುರುವೇ ಗುರುದೇವಾ
ನಾನೊಂದು ಮೋಡಿ ಆಟ ಆಡ್ತೀನಿ ಕಣ್ರಪ್ಪ
ನಾನು ಆಡಿದಂಥ ಮೋಡಿ ನೀವು ಗೆದ್ದುಬುಡಿ ಅಣ್ಣದೀರೆ ಎಂದರು
ಏನೋ ಜಂಗುಮ
ನಿನ್ನನೊಂದು ಮೋಡಿ ಆಟ ನಮ್ಮದೊಂದು ಮೋಡಿ ಆಟ
ಈಗ ನೀನು ಮೋಡಿ ಹಾಕಿಯಾ
ಆಮೇಲೆ ನನ್ನ ಮೋಡಿ ನೋಡಿಯಾ
ಅದ್ಯಾವ ಮೋಡಿ ಮಾಡ್ತೀಯೋ ಮಾಡು
ಈಗಲೀಗ ನೀನು ಮಾಡಿದ ಮೋಡಿ
ನಾವು ಗೆಲುತೀವಿ ಅಂತ ಹೇಳುದ್ರು

ಆಗಲೀ ಕಣ್ರಪ್ಪ
ಇದೂ ನಮ್ಮ ಗುರು ಕೊಟ್ಟ ಜೋಳಿಗೆ
ಈ ಜೋಳಗೆಯಲ್ಲಿರತಕ್ಕದ್ದು
ನಮ್ಮ ಗುರುಕೊಟ್ಟ ಈಬತ್ತಿ ಬಸುವಂಗ
ಇದು ಮಲೆಯಾಳದ ಕಪ್ಪು ಕಣ್ರಪ್ಪ
ಈ ಮುತ್ತಿನ ಜೋಳಿಗೆ
ಈಗಲೀಗ ಮಾಯದ ಬೂದಿ
ಮಲೆಯಾಳದ ಕಪ್ಪು
ಈ ಅರಳೀಕಟ್ಟೆ ಜಗಲೀಮ್ಯಾಲೆ
ಆಗಲೀಗ ಮುತ್ತಿನ ಜೋಳಿಗೆವೊಳಗೆ
ಮಾಯದ ಬೂದಿ ಮಲೆಯಾಳದ ಕಪ್ಪನ್ನೇ ಮಡಗ್ಬುಡ್ತೀನಿ
ಈ ಅರಳೀ ಕಟ್ಟೆ ಜಗಲೀಮ್ಯಾಲೆ ಮಡಗ್ಬುಡ್ತೀನಿ ಕಣ್ರಪ್ಪ

ನಮ್ಮ ಗುರು ಕೊಟ್ಟ ಜೋಳಿಗೆ
ನೀವು ಎತ್ತುಬುಡ್ರಣ್ಣ ಎಂದರಲ್ಲ || ಸಿದ್ಧಯ್ಯ ||

ನಮ್ಮ ಗುರುಗಳು ಕೊಟ್ಟ ಜೋಳಿಗೆ
ನೀವು ಎತ್ತುಬುಡ್ರಣ್ಣ ಅಂತ
ಅಯ್ಯಾ ಮುತ್ತಿನ ಜೋಳಿಗೆ
ಮಾಯದ ಬೂದಿ
ಮಲೆಯಾಳದ ಕಪ್ಪ
ಕಿಡುಗಣ್ಣ ರಾಚಪ್ಪಾಜಿ
ಹೊನ್ನರಳೀಯ ಮರ
ಅರಳೀಕಟ್ಟೆ ಜಗಲೀಮ್ಯಾಲೆ
ಮಡಗ್ಬುಟ್ಟು ನನ್ನ ಗುರುವು
ನನ್ನ ಧರೆಗೆ ದೊಡ್ಡವರಿಗೆ
ಕೈಯೆತ್ತಿ ಮುಗಿದರಲ್ಲ || ಸಿದ್ಧಯ್ಯ ||

ನನ್ನ ಧರೆಗೆ ದೊಡ್ಡವ್ರಿಗೆ
ಕೈಯೆತ್ತಿ ಮುಗಿದು
ನನ್ನ ಪರಂಜ್ಯೋತಿಯವರ
ಪಾದವ ನೆನಕೊಂಡು
ನನ್ನ ಗುರುಕೊಟ್ಟ ಜೋಳಿಗೆ
ನೀವು ಎತ್ತುರಪ್ಪ ಎಂದರಂತೆ || ಸಿದ್ಧಯ್ಯ ||

ಅವರು ನೂರೊಂದು ಜನ
ನೂರೊಂದು ಒಕ್ಕುಲು
ಅಯ್ಯಾ ನೂರೊಂದೊಕ್ಕುಲು ಜನ
ಎಲ್ರೂವೆ ಸೇರಕೊಂದು
ನನ್ನ ರಾಚಪ್ಪಾಜಿಯವರ
ಮುತ್ತಿನ ಜೋಳಿಗೆ ಗುರುವೇ
ಕಣ್ಣಾರೆ ನೋಡಕೊಂಡು
ಅಯ್ಯಾ ಎಲ್ಲಾ ಮೋಡಿಕಾರ್ರೂ‍ವೆ
ಓಡಿ ಓಡಿ ಗುರುವೇ
ಬಂದಾರು ನನ್ನ ಗುರುವು
ಅಂದಾಗೆ ಒಂದೂ
ಕಂಡುಗ ಜೋಳಿಗೆಯಲ್ಲ
ನಾವೆತ್ತದೆ ಬುಟ್ಟೀವ
ನೀವೆತ್ಬುಡಿ ಅಣ್ಣದೀರೆ
ಆಗನುತೇಳಿ ಬರುತಾರೆ
ಇದು ಭೂಮಿ ತೂಕದ ಜೋಳಿಗೆ
ಅಂತ ಒಬ್ರೂಗು ಗೊತ್ತಾಗಲಿಲ್ಲ || ಸಿದ್ಧಯ್ಯ ||

ಭೂಮಿ ತೂಕದ ಜೋಳಿಗೆ ಎನ್ನುವುದು ಗುರುವು
ನೂರೊಂದು ಜನ ಒಕ್ಕಲು
ಮೋಡಿಕಾರರಿಗೆ ಒಬ್ರೂಗೂ ಗೊತ್ತಾಗಲಿಲ್ಲ

ಅವರು ಜೋಳಿಗೆಯನ್ನು ಎತುತಾರೆ
ಅವರು ಫಕ್ಕನೆ ಪ್ರಾಣ ಬಿಡುವುತಾರೆ || ಸಿದ್ಧಯ್ಯ ||

ಅಯ್ಯಾ ಮುತ್ತಿನ ಜೋಳಿಗೆ ನೋಡದೆ
ಮೋಡಿಕಾರರು ಗುರುವು
ಅಯ್ಯೋ ಜೋಳಿಗೆ ನೋಡಿದವರು
ಸತ್ತಿ ಮಲಗವರೆ
ಅಯ್ಯೋ ಎತ್ತಾಕೆ ಹೋದವರು
ಪ್ರಾಣವ ಬಿಡುತಾರೆ
ಇದು ಎಂಥ ಮೋಡಿ ಆಟ ಅಂಥ
ಬಾಳ ದುಃಖ ಮಾಡುತಾರೆ || ಸಿದ್ಧಯ್ಯ ||

ಅಯ್ಯಾ ಬದುಕುದ್ರುವೆ ಗುರುವೆ
ನಮ್ಮ ಗುರುಪಾದ ನೆನುಕೊಂಡು
ಬದುಕೊಳ್ಳಿ ಮೋಡಿಕಾರರೆ
ಅಯ್ಯಾ ಸತ್ತೋದ್ರೂವೆ ಗುರುವೆ
ನನ್ನ ಗುರುವಿನ ಪಾದ ನೆನ್ಕೊಂಡು
ಪ್ರಾಣವನ್ನ ನಿಟ್ಟುಬಿಡಿ
ಅಣ್ಣ ಯಾರಯಾರು ಬನ್ನಿರಣ್ಣ
ನಮ್ಮ ಗುರುಗಳ ಜೋಳಿಗೆ ಎತ್ತೀರಣ್ಣ || ಸಿದ್ಧಯ್ಯ ||

ನಮ್ಮ ಗುರುಗಳ ಜೋಳಿಗೆ ಮುಟ್ಟಿದವ್ರು
ಸತ್ತು ಸ್ವರ್ಗ ಸೇರುತಾರೆ || ಸಿದ್ಧಯ್ಯ ||

ನೂರು ಒಂದು ಒಕ್ಕಲು ಜನಗಳಲ್ಲಿ ದೇವ
ಆಗಲೀಗ ಜೋಳಿಗೆ ಮುಟ್ಟಿದವರು
ಪ್ರಾಣ ಬುಟ್ಟು ಬುಡುತಾರೆ
ಧರೆಗೆ ದೊಡ್ಡವರ ಮುತ್ತಿನ ಜೋಳಿಗೆ ನೋಡ್ಬುಟ್ಟು
ಎಷ್ಟೋ ಪ್ರಾಣಿಗಳೆಲ್ಲ ಸತ್ತೀ ಸತ್ತೀ ಮಲಗವರೆ
ಆಗಲೀಗ ಸತ್ತ ಪ್ರಾಣಿಗಳೆಲ್ಲ
ದೇವೇಂದ್ರಾಯ ಬ್ರಹ್ಮದೇವ
ಈಗಲೀಗ ಇದಿಯಮ್ಮನ ಪಾದ ಸೇರಿ
ಸತ್ತು ಸ್ವರ್ಗ ಸೇರತಾಯಿದ್ದರಂತೆ
ಆಗ ಜಗತ್ತುಗುರು ಧರೆಗೆ ದೊಡ್ಡಯ್ಯ

ಅವರು ನಿದ್ರೆ ತಿಳಿದು ಹೋದಮ್ಯಾಲೆ
ಮೇಲಕ್ಕೆ ಎದ್ದರು ಸ್ವಾಮಿ || ಸಿದ್ಧಯ್ಯ ||

ಈಗಲೀಗ ಅರಳೀಕಟ್ಟೆ ಜಗಲೀಮ್ಯಾಲೆ
ಜಗತ್ತು ಗುರು ದರೆಗೆ ದೊಡ್ಡಯ್ಯ
ನಿದ್ರೆ ತಿಳಿದು ಮೇಲಕ್ಕೆ ಎದ್ದಿದ್ರು
ಮೋಡಿ ಆಟದಲ್ಲಿ ಕಿಡುಗಣ್ಣ ರಾಚಪ್ಪಾಜಿಯವರು
ಮೋಡಿಕಾರರನ್ನೇ ಸೋಲಿಸಿಬುಟ್ಟು
ಈಗಲೀಗ ಸತ್ತೀ ಸತ್ತೀ ಬಿದ್ದಿರುವ
ಮೋಡಿಕಾರರನ್ನ ಕಣ್ಣಿಂದ ನೋಡ್ಬುಟ್ಟು
ಈಗ ಸತ್ತ ಪ್ರಾಣಿಗಳೆಲ್ಲ
ದೇವಲೋಕ ಸೇರುಬುಟ್ಟರು
ಜೋಳಿಗೆ ಇವರು ಮುಟ್ಟಿಲ್ಲ
ಕಣ್ಣಿಂದ ನೋಡಿ ಸತ್ತು ಬಿದ್ದವರೆ
ಈಗ ಗುರೂನ ಪಾದ ನೆನಕೊಂಡು
ಈ ಸತ್ತು ಬಿದ್ದಿರತಕ್ಕಂಥ
ಮೋಡಿಕಾರರನ್ನ ಎಚ್ಚರಗೊಳಿಸ್ಬುಟ್ಟು
ಇವರತ್ರ ನಮ್ಮ ಗುರೂಗೆ
ಒಬ್ಬಾ ಮಗಳ ಪಡುಕೊಂಡ್ಹೋಗಿ
ಗುರುವಿನ ಪಾದಕ್ಕೆ ಒಪ್ಪಿಸಬೇಕು ಅಂತ್ಹೇಳಿ

ಕಪ್ಪು ಧೂಳ್ತ ತಗದರಂತೆ
ಅವರ ಮೈಮೇಲೆ ಉರುಬುತಾರೆ || ಸಿದ್ಧಯ್ಯ ||

ಕಪ್ಪು ಧೂಳ್ತನೇ ತಗದು ದೇವಾ
ಅಂಥಾ ಪ್ರಾಣಿಗಳ ಮೇಲೆ ಉರುಬಿದರು
ಸತ್ತೀ ಸತ್ತೀ ಮಲಗಿದ್ದಂಥ
ಮೋಡಿಕಾರರೆಲ್ಲ ಮೇಲಕೆದ್ದು
ರಾಚಪ್ಪಾಜಿಯವರ ಮೊಕ ಕಣ್ಣಿಂದ ನೋಡಿದರು
ಏನುರಣ್ಣ ನಮ್ಮ ಗುರುವಿನ ಮೈಮೆ
ನಮ್ಮ ಗುರೂನ ಶಾಪ
ಈಗ ನಿಮಗೆ ಗೊತ್ತಾಯಿತ್ರಪ್ಪ ಎಂದುರು
ಆಗಲೀ ಗುರುದೇವ
ನಿಮ್ಮ ಒಂದಿಗೆ ಮೋಡಿ ಆಟ ಮಾಡಿ
ನಿಮ್ಮ ಗುರೂ ಜೋಳಿಗೆ ಎತ್ತಿ
ಎಷ್ಟೋ ಭಕ್ತಾದಿಗಳು ಸತ್ತು ಸ್ವರ್ಗ ಸೇರುಬುಟ್ಟರು
ನಿಮ್ಮ ಗುರೂನ ಜೋಳಿಗೆ ನೋಡ್ಬುಟ್ಟು
ನಾವು ಎಷ್ಟೋ ಜನ ಪ್ರಾಣ ಬುಡ್ತಿದ್ದೊ

ನಿಮ್ಮ ಗುರುಗಳ ಮಹಿಮೆ ಕಂಡಂಗಾಯ್ತು
ಅಪ್ಪಾ ನಿಮ್ಮ ಮಹಿಮೆ ತಿಳದಂಗಾಯ್ತು || ಸಿದ್ಧಯ್ಯ ||

ನಿಮ್ಮ ಮಹಿಮೆ ಕಂಡಂಗಾಯ್ತು ದೇವಾ
ನಿಮ್ಮಾ ಗುರುವಿನ ಮಹಿಮೆ
ಕಂಡಂಗಾಯ್ತು ಗುರುವೂ
ನಿಮ್ಮ ಕಪ್ಪು ದೂಳ್ತದ ಮಹಿಮೆ
ಮಾಯ್ತಗಾರ ತಿಳದಂಗಾಯ್ತು ಸ್ವಾಮಿ
ಅಪ್ಪಾ ನಿಮಗು ನಿಮ ಗುರೂಗೂ
ಶಿಷ್ಯ ಮಕ್ಕಳಾಯ್ತೀವಿ || ಸಿದ್ಧಯ್ಯ ||

ನಿಮಗೂವೆ ಶಿಷ್ಯ ಮಕ್ಕಳಾಗುತೀವಿ ದೇವಾ
ನಿಮ್ಮ ಗುರುಗೂ ದೇವಾ ಶಿಶು ಮಕ್ಕಳಾಗುತೀವಿ ಸ್ವಾಮಿ
ನಿಮ್ಮ ಕಪ್ಪು ದೂಳ್ತದ ಮಹಿಮೆ
ನಿಮ್ಮ ಧರೆಗೆ ದೊಡ್ಡವರ ಮುತ್ತಿನ ಜೋಳಿಗೆ ಮಹಿಮೆ
ಮಾಯ್ತುಗಾರ ಧರೆಗೆ ದೊಡ್ಡವರ ಮುತ್ತಿನ ಜೋಳಿಗೆ ಮಹಿಮೆ
ಮಾಯ್ತುಗಾರ ನಮಗೆ ಗೊತ್ತಾಯ್ತು ನನ್ನಪ್ಪ ಎಂದರು

ಕೇಳಿರಪ್ಪಾ ನಮ್ಮ ಗುರುವಿನ ಬಳಿಗೆ
ನಿಮ್ಮ ಮಠ ಮನೆಯಿಂದ ನಾವು ಹಾಗೆ ಓಡೋಗೋಕಾಗೋದಿಲ್ಲ
ನಮಗೆ ಗುರುಗೆ ಬೇಕಾದಂಥ ಭಿಕ್ಷೆ ಕೊಟ್ಟು ಬಿಡಿ
ನಾನು ಹೊರಟೋಯ್ತಿನಿ ಎಂದರು
ಗುರುದೇವ ನಮ್ಮ ಮೋಡಿಕಾರ್ರು‍ನಿಮಗೇನಾಗಬೇಕು ಸ್ವಾಮಿ
ಏನು ಬಿಕುಸ ಏನು ಧರ್ಮ ಕೊಡಬೇಕಪ್ಪ
ತಾಯಿ ತಂದೆ ಅಣ್ಣ ತಮ್ಮ ಸರ್ವಿಷ್ಟು
ಬಂಧು ಬಳಗ ಇಲ್ಲದಿದ್ದಂತ ಶಿಶು ಮಗಳು
ನಮ್ಮ ಪಟ್ಟಣದದಲ್ಲವ್ಳೆ ಕಣಪ್ಪ

ಆ ಮಗಳ ತಂದು ನಿಮಗೆ
ಶಿಶುಮಗಳ ಮಾಡುತೀನಿ || ಸಿದ್ಧಯ್ಯ ||