ಘನ ವಿದ್ಯೆಕಾರರ ಕೈಗೆ ನನ್ನ ಕೊಟ್ಟು
ನನ್ನ ಮರೀಬ್ಯಾಡ ಕಣಪ್ಪ ಜಗತ್ತು ಗುರು ಧರೆಗೆ ದೊಡ್ಡಯ್ಯ
ನೀವು ಕೈಬುಟ್ಟರೆ ನಾನು ಯಾರ ಸೇರಬೇಕಪ್ಪ ಎಂದರು
ಆಗ ಜಗತ್ತು ಗುರು ಧರೆಗೆ ದೊಡ್ಡವರಿಗೆ
ಹೊಟ್ಟೆ ಉರಿದು ಮನ ಚುರಕ್ಕೆಂದು
ಭಾರೀ ಪಡುಗುಂಡಗೆ ಅರಗಣ್ಣು ಬಿಡುಬಾರದ್ದು ಅಂತ್ಹೇಳಿ
ಎರುಗಣ್ಣು ಬಿಟ್ಟು ನೋಡುದ್ರು
ಎರುಗಣ್ಣು ಬಿಟ್ಟು ನೋಡುವಾಗ ಗುರುವೇ
ಆಗಲೀಗ ಆನೆ ತೂಕದ ಪಡುಗುಂಡು
ಆಗಲೀಗ ಒಂದು ಹೆಬ್ಬೆಟ್ಟ ಗಾತ್ರ ತೆನೆ ಇಂಬೀ ಹಣ್ಣು ಆಯ್ತು

ಅವರು ಇಂಬೀ ಹಣ್ಣ ನೋಡುತಾರೆ
ಎರಡು ಕೈಲಿ ಎತ್ತುತಾರೆ || ಸಿದ್ಧಯ್ಯ ||

ಆಗ ರಾಚಪ್ಪಾಜಿಯವರು
ಈ ಮೋಡಿ ಮಸ್ತಪಗಾರರು ಹೇಳಿದ್ರು
ಎಡದ ಎರಡು ಬೆರಳಲ್ಲಿ
ಎತ್ತುಬೇಕು ಅಂತ ಮೊಡಿ ಹಾಕಿದ್ರು
ರಾಚಪ್ಪಾಜಿಯವರು ಕಪ್ಪು ಧೂಳ್ತ ಪಿಡಿದು
ಧರೆಗೆ ದೊಡ್ಡವ್ರು ಮಂಟೇದ ಸ್ವಾಮಿ ಪಾದ ನೆನೆದು
ಎರಡೂ ಹಸ್ತದಲ್ಲಿ
ಈ ಗುರು ಕೊಟ್ಟ ಫಲ ಎತ್ತುಬೇಕೆ ಹೊರತು
ಎಡದಾ ಬೆರಳಲ್ಲಿ ಎತ್ತಿ ಹಿಡಕೊಂಡು ಬಿಟ್ರೆ
ನನ್ನ ಗುರು ಮೆಚ್ಚೋದಿಲ್ಲ ಅಂದ್ಬುಟ್ಟು
ಎರಡು ಹಸ್ತದಲ್ಲಿ ಎತ್ಕಂಡ್ರಂತೆ
ಎರಡು ಹಸ್ತದಲ್ಲಿ ಎತ್ತುಕೊಂಡಂಥ ರಾಚಪ್ಪಾಜಿಯವರ
ಮೋಡಿಕಾರರ ಕಣ್ಣು ಬಿಟ್ಬುಟ್ಟು ನೋಡ್ಬುಟ್ರು

ಅಣ್ಣಾ ಎತ್ತುನಾರದೆ ಎರಡು ಕೈಲಿ
ಮುಕ್ಕರಿಕೊಂಡು ಎತ್ತುತಾನೆ || ಸಿದ್ಧಯ್ಯ ||

ಅಯ್ಯಾ ಎತ್ತನಾರದೇ ಗುರುವೇ
ಎರಡು ಕೈಲಿ ಇವನು
ಮುಕ್ಕರಿಕೊಂಡು ಎತ್ಬುಟ್ಟ
ಇವನು ಎತ್ತುನಾರದೇ ದೇವ
ಹಲ್ಲಲ್ಲ ಕಿರುವಾಗ ನಾ ಕಣ್ಣಾರ ನೋಡುಬುಟ್ಟಿ
ಅಣ್ಣಾ ಈ ಮೋಡಿ ಮುಪ್ಪಾಯ್ತಲ್ಲಾ
ಈ ಮೋಡಿ ಮೆಚ್ಚೋದಿಲ್ಲ || ಸಿದ್ಧಯ್ಯ ||

ಇವನು ಮಾಡಿದಂಥ ಮೋಡಿ ನನಗೆ
ಬೇಕಾಗಿಲ್ಲ ಎಂದರಂತೆ || ಸಿದ್ಧಯ್ಯ ||

ಎರಡು ಕೈಲಿ ಇತ್ಬುಟ್ಟ ಕಣ್ರಣ್ಣ
ಎರಡು ಕೈಲಿ ಇದ್ದಂಥ ಇಂಬೀಹಣ್ಣ
ಹಲ್ಲಲ್ನು ಬ್ಯಾರೆ ಕಿರಾದ್ಬುಟ್ಟ ನಾನು ಹಿಂದಗಡೆ ನೋಡ್ಕಂಡಿ ನಿಂತ್ಕಂಡು
ಈ ಮೋಡಿ ಆಟನ ನಾವು ಒಪ್ಪೋಇಲ್ಲ ಎಂದರು
ಯಾರು? ಮೋಡಿಕಾರರು
ಆಡಿದ ಮಾತನ್ನ ಕೇಳಕೊಂಡು ಕಿಡುಗಣ್ಣ ರಾಚಪ್ಪಾಜಿ
“ಏನಪ್ಪಾ ಜಗತ್ ಗುರು ಧರೆಗೆ ದೊಡ್ಡಯ್ಯ

ಎಂಥವರ ಕೈಗೆ ನಾನು
ಸಿಕ್ಕೋದಿ ಮಾಯಕಾರ || ಸಿದ್ಧಯ್ಯ ||

ಅಯ್ಯಾ ಗುರು ಮಾತ ಕೇಳದೆ
ನಾನಾಗಿ ಬಂದುದಕೆ
ಈ ಮೋಡಿಕಾರರ ಕೈಗೆ
ನಾನಾಗಿ ಸಿಕ್ಕಂಡು
ನಾನು ಯಾವ ಬಂಧನಕ್ಕೆ ನಾನು
ಗುರಿಯಾದಿ ಎಂದರಂತೆ || ಸಿದ್ಧಯ್ಯ ||

ಏನ್ರಪ್ಪಾ ಈ ಆಟ ನೀವು ಒಪ್ದೆ ಹೋದ್ರೆ
ಈ ಮೋಡಿ ನೀವು ಮೆಚ್ಚೆ ಹೋದ್ರೆ
ಮತ್ಯಾವ ಮೋಡಿ ಮಾಟ ಮಾಡಬೇಕ್ರಪ್ಪ
ಹೇಳಬುಡಿ ಮೋಡಿಕಾರರೆ ಎಂದರು
ಏ ಭಿಕ್ಷುಕ
ಇನ್ಯಾವ ಮೋಡಿ ಆಟ ಮಾಡಬೇಕು ಗೊತ್ಯೇನೊ
ಇಲ್ಲಿ ಹರಿಯುವಂತ ನದಿ ಕಣ್ಣಿಂದ ನೋಡು
ಹರಿಯುವಂತ ನದೀಗೆ
ಪಾದಕ್ಕೆ ಬೆರಳಿ ಚಡಾವು ಮೆಟ್ಕೊಂಡು
ಬಾಳೆ ಎಲೆ ಬಲಗೈಲಿಡಕೊಂಡು
ಆನೆ ಉದ್ದದ ಆಳದ ನೀರಿಗೆ ಹೋಗಿ ನಾವು ಕೂತ್ಕಂಡು
ಅಂಗಡಿ ಮಡಗುತೀವಿ
ಈಗಲೀಗ ಅನೆ ಉದ್ದ ನೀರಿಗೆ
ನೀನು ಬಂದು ಯಾಪಾರ ಸಾಪಾರ ತಕ್ಕೊಬೇಕಾದರೆ
ನಮ್ಮ ಬಳಿಗೆ ನೀನು ಬರಬೇಕಾದರೆ
ಹರಿಯುವಂತ ಸಮುದ್ರದಲ್ಲಿ
ಅಂಗಾಲಿಗೆ ನೀರಾಗಬಾರದು
ಅದೇ ಪ್ರಕಾರವಾಗಿ ನೀರಿನ ಮೇಲೆ ನಡಕೊಂಡು ಬಂದು
ನನ್ನ ಕೈಲಿ ಯಾಪಾರ ಸಾಪಾರ ತಕ್ಕೊಂಡ್ಬುಟ್ರೆ

ಕಾಸುವೆ ಕೊಡುಬ್ಯಾಡ
ನೀ ದುಡು ನೂವೆ ಕೊಡುಬ್ಯಾಡ
ನೀವು ಕೇಳಿದಂತ ಯಾಪರವ
ಕೊಡುತೀನಿ ಎಂದರಂತೆ || ಸಿದ್ಧಯ್ಯ ||

ಗುರುವೇ ಮೋಡಿಕಾರರ ಮಾತು
ಮೋಡಿಕಾರರ ಗುರುವೇ
ಮಾತ ಕೇಳಕೊಂಡು
ರಾಚಪ್ಪಾಜಿಯವರು
ಅಯ್ಯೋ ಎಂಥಾ ಗುರು ಒಂದಿಗೆ
ನಾ ಬಂದೂನಪ್ಪ ಎಂದರಂತೆ || ಸಿದ್ಧಯ್ಯ ||

ಎಂಥವರ ಜೊತೆಗೆ ಬಂದು ಸೇರದಿ
ಎಂಥವರ ಬಳಿಗೆ ನಾನು ಬಂದ್ಬುಟ್ಟಿ
ಎನುತೇಳಿ ಕಿಡುಗಣ್ಣ ರಾಚಪ್ಪಾಜಿ
ಯೋಚನೆ ಚಿಂತೆ ಪಡುವಾಗ
ಈ ಮೋಡಿ ಮಸ್ತಕದವರೆಲ್ಲ ಮಾತಾಡ್ತಾವರೆ
ಅಣ್ಣಾ ಅರೇ ಕಲ್ಲು ಇಂಬೀ ಹಣ್ಣ ಮಾಡಿದವನು
ನೀರಿನ ಮೇಲೆ ನಡ್ಕಂಡು ಬರ‍ದೆ ಬುಟ್ಟಾನ
ಬಂದ್ಬುಡ್ತನೇ ಕಣ್ರಣ್ಣ
ಅಂಗಡಿ ಸಾಮಾನ ತಕ್ಕರೋ
ಹೊಳೇ ಮಧ್ಯದಲ್ಲಿ ಅಂಗಡಿ ಇಟ್ಬುಡ್ರಣ್ಣ ಅಂತ್ಹೇಳಿ
ಅವರು ಮೋಡಿ ಆಟದಲ್ಲಿ
ಆಗಲೀಗ ತಾವಾಗಿ ಬಂದು
ನೂರೊಂದು ಸಾಮಾನು ತಕ್ಕೊಂಡು
ರಾಚಪ್ಪಾಜಿಯವರಿಗೆ ಬೇಕು ಬೇಕಾದಂಥ ಸಾಮಾನು ತಕ್ಕೊಂಡು
ಅಣ್ಣಾ, ಈ ತಿಂಡಿಯನ್ನೋ ಆಸೆಗೆ ನಮ್ಮ ದಂಡಕೆ ಬಂದು ಬಿಡಬೇಕು
ಇವನು ಗುರು ಮಗನಾದರೆ ನೀರಿನ ಮೇಲೆ ನಡ್ಕಂಡು ಬಂದ್ಬುಟ್ರೆ
ಅಂಗಡಿ ಸಾಮಾನು ತಕ್ಕೋಳೊ ಗಂಟ

ಕಡೆಯ ಕಾರಿಯವೊಳಗೆ
ನೀನು ಮೋಡಿ ಮಾಡಬೇಕು || ಸಿದ್ಧಯ್ಯ ||

ಏಳು ಮಂದಿ ಮೋಡಿಕಾರರೂ
ಮನದಲ್ಲಿ ಯೋಚನೆ ಮಾಡುಕೊಂಡು ಮನ್ಸನಲ್ಲಿ ಕೊರೆತ ಪಟ್ಟುಕೊಂಡು
ಅಣ್ಣಾ ನಾವು ಘನ ವಿದ್ಯೆಕಾರರು ಅಂದರೆ
ನಮಗಿಂತ ಘನ ವಿದ್ಯೆಕಾರ ಇವನು
ಇವನ ಸೋಲಿಸಬೇಕಾದ್ರೆ ನಾವು ಗೆಲ್ಲಬೇಕಾದರೆ
ನಮ್ಮ ಒಬ್ಬನ ಮೋಡಿ ಇವನಿಗೆ ಸಾಲದಿಲ್ಲ
ನಾವೆಲ್ಲರೂ ಸೇರಿ ಮೋಡಿ ಮಾಡಿದರೆ
ನನ್ನ ಅಂಗಡಿ ಸಾಮಾನಿಗೆ ಇವನು ಬಂದದ್ದೇ ಆಗುಬುಟ್ರೆ
ಅಲ್ಲೇ ಒಂದು ಮೋಡಿ ನೀನು ಮಾಡಿದ್ದೇ ಹೌದಾದರೆ
ಆ ಹೊಳೆವೊಳಗೆ ಸ್ನಾನಕೆ ಬರುವಂಥವರೇ
ಬೋ ಜನ ಸತ್ತು ಪ್ರಾಣ ಬಿಟ್ಟವರೆ
ಈ ಮೋಡಿಯಾಟದಲ್ಲಿ ಬಂದು
ಸಮುದ್ರದಿಂದ ಹೊರಗೆ ಬರಬಲ್ಲ

ಇವ್ನ ಸುತ್ತಮುತ್ತ ಕಾಯಿರಣ್ಣ
ಇವನು ಜಡಿದು ಮೋಡಿ ಹಾಕಿರಣ್ಣ || ಸಿದ್ಧಯ್ಯ ||

ಇವನಿಗೆ ಬೇಕಾದ ಮೋಡಿ ಹಾಕಿ
ಇವನ ಕೊಂದಾಕಿಬುಡ್ರಣ್ಣ ಎನುತೇಳಿ
ಈ ಮೋಡಿ ಮಸ್ತಪದವರೆಲ್ಲ ಮಾತಾಡ್ತರೆ
ಕಿಡುಗಣ್ಣ ರಾಚಪ್ಪಾಜಿಯವರ
ಹೆದುರುಬ್ಯಾಡಿ ಅನ್ನೋವ್ರು ಒಬ್ರೂಯಿಲ್ಲ
ಈಗಲೀಗ ಇವರು ಆಡುವಂಥ ಮಾತು
ಕಿವಿಯಾರ ಕೇಳಕೊಂಡು
ಕಿಡುಗಣ್ಣ ರಾಚಪ್ಪಾಜಿಯವರು
ಗುರು ದೇವ, ಇವತ್ತಿನ ದಿವಸದಲ್ಲಿ ಗುರುದೇವ
ಈ ಮೋಡಿಕಾರರ ಕೈಗೆ ಬಂದು ಸೇರಿದಿ
ನಾನು ಮಾತ್ರ ಗುರೂಗೆ ಮಗನಾಗದಿಲ್ಲ
ಈ ಮೋಡಿಯಾಟ ನಾನು ಗೆದ್ದು
ನಿಮ್ಮ ಬಳಿಗೆ ನಾನು ಬರದಿಲ್ಲ ಗುರುದೇವ ಎನುತೇಳಿ
ಧರೆಗೆ ದೊಡ್ಡವರ ಪಾದ ನೆನೀತಾ
ಕಿಡುಗಣ್ಣ ರಾಚಪ್ಪಾಜಿಯವರು ದುಃಖಳಿಸಿ ದುಃಖಪಡುತ್ತಿದ್ದರು
ಮೋಡಿಕಾರರೆಲ್ಲ ಮಾಯ ಮಂತ್ರಾನೆ ಹಾಕ್ಕೊಂಡು
ಆಗಲೀಗ ಬೆರಳಿ ಪಾದರಾಕ್ಷಿ ಪಾದದಲ್ಲಿ ಮೆಟ್ಕೊಂಡು
ಬಾಳೆ ಎಲೆ ಕೈಲಿಡುಕೊಂಡು
ಹರಿಯುವಂಥ ಸಮುದ್ರ
ವೇಗವಾಗಿ ಹರಕೊಂಡು ಹೊಯ್ತಾಯಿದೆ
ಆ ಸಮುದ್ರದ ಮೇಲೆ
ಲೋ ಮೋಡಿಕಾರ ಘನವಿದ್ಯೆಕಾರ
ಧರೆಗೆ ದೊಡ್ಡವರ ಮಗ ನಾನು ಅಂತ ಹೇಳಿದ್ದಲ್ಲ
ಈಗ ನಾನು ನೋಡ್ತೀನಿ ನೋಡು

ಲೋ ನೀರಿನ ಮ್ಯಾಲೆ ನಾನು
ಗುಡುಗುಡನೆ ಓಡುತೀನಿ || ಸಿದ್ಧಯ್ಯ ||

ಅಯ್ಯಾ ಗುಡುಗುಡುನೆ ನಾನು
ಓಡುತೀನಿ ಕೇಳು ಹುಚ್ಚುಕಾಡ ಪರದೇಸಿ
ನೀನು ಗುರೂಗೆ
ಮಗನಾದ ಮೇಲೆ ಲೋ ನನಗಿಂತ ಮೋಡಿಕಾರ
ನೀನು ಆದ ಮೇಲೆ

ಈ ನೀರಿನ ಮ್ಯಾಲೆ ನೀನು
ಓಡಿ ಓಡಿ ಬರಬೇಕು || ಸಿದ್ಧಯ್ಯ ||

ಏನುರಣ್ಣ ನೀರಿನ ಮೇಲೆ ಓಡಿಬುಟ್ಟೀರಿ ಅಣ್ಣಯ್ಯ
ಆಳವಾದ ನೀರು ಕಣ್ರಪ್ಪ ಎಂದರು
ಏನೋ ಜಂಗುಮ ಆಳವಾದ ನೀರು ನಿನ್ನ ಕಣ್ಣಿಗೆ
ನಮಗೆ ಬೇಕಾಗಿರತಕ್ಕಂಥ ಭೂಮಿ ಇದು ನಮಗೆ
ಈಗಲೀಗ ನಿನ್ನ ಸತ್ಯ ನಿನ್ನ ಗುರು ಸತ್ಯ
ನಿನ್ನ ಮೋಡಿತನ ನಾವು ನೋಡಬೇಕಾದ್ರೆ
ಈಗಲೀಗ ನಾವು ಓಡೋದಂಗೆ ನೀನು ನೀರಿನ ಮೇಲೆ ಓಡು ಬಾ
ನಮ್ಮತ್ರ ಬಂದು ಒಡವೆ ಸಾಮಾನುಬೇಕಾದ್ರೆ ತಕ್ಕೊ
ತಿಂಡಿ ಸಾಮಾನು ಬೇಕಾದ್ರೆ ತಕ್ಕೊ
ನಿನಗೇನು ಬೇಕು ಕೊಡ್ತೀವಿ ಬಾರೋ ಅಂತ್ಹೇಳಿ
ನೀರಿನ ಮೇಲೆ ಗುಡುಗುಡುನೆ ದೇವ
ಏಳುಜನ ಮೋಡಿಕಾರ್ರೂ‍ಓಡ್ಹೋಡಿ ಬಂದರು
ನೀರಿನ ಮೇಲೆ ಏಳೇಳು ಬಾಳೆ ಎಲೆ ಹಾಸುಕೊಂಡು
ದೊಡ್ಡದಾಗಿ ಏಳು ಅಂಗಡಿ ಇಟ್ಕೊಂಡು
ಏಳೋ ನಾನು ಧರೆಗೆ ದೊಡ್ಡವರ ಶಿಶುಮಗ
ಕಲ್ಯಾಣ ಪಟ್ಟಣದಲ್ಲಿ ಹುಟ್ಟಿದವನು
ಕಲ್ಯಾಣ ಪಟ್ಟಣದಲ್ಲಿ ಬೆಳೆದವನು
ನಾನು ಸತ್ಯಾ ಶರಣರ ಒಂದಿಗೆ ಇದ್ದವನು ಅಂತ ಹೇಳಿದ್ದಿಯಲ್ಲ
ನಿನ್ನ ಶರಣರ ದುಡ ನೋಡ್ತೀವಿ
ನಿಮ್ಮ ಗುರು ದುಡ ನೋಡ್ತೀವಿ

ನಾವು ಓಡಿ ಬಂದಂಗೆ
ನೀನು ಓಡಿಬರಬೇಕು || ಸಿದ್ಧಯ್ಯ ||

ಅಯ್ಯಾ ನಾವು ಓಡಿ ಬಂದ್ಹಂಗೆ
ನೀನು ಓಡ್ಹೋಡಿ ಬರಬೇಕು
ನೀನು ಘನ ವಿದ್ಯೆ ಸತ್ಯ
ನನಗೆ ತೋರಲುಬೇಕು
ನಿನ್ನ ಗುರುವಿನ ಮೈಮೆಯ
ನಾನು ನೋಡಲೇಬೇಕು
ನಿನಗೆ ಯಾಪಾರ ಕೊಡುತೀವಿ
ಓಡುಬಾರೊ ಎಂದರಲ್ಲ || ಸಿದ್ಧಯ್ಯ ||

ಅಯ್ಯಾ ಯಾಪಾರ ಕೊಡುತೀವಿ
ಓಡು ಬಾರೊ ಎಂದವರೇ
ಧರೆಗೆ ದೊಡ್ಡವರ ಪಾದ
ನೆನಕೊಂಡು ನನ್ನ ಗುರುವು
ನನ್ನ ಭೂಮಿಗೆ ಹಿರಿಯೋರ ಪಾದ
ನೆನಕೊಂಡು ನನ್ನ ಕಿಡುಗಣ್ಣ ರಾಚಪ್ಪಾಜಿ
ಬತ್ತೀನಿ ಕಣರಣ್ಣ ಬತ್ತೀನಿ ಕಣರಪ್ಪ
ಹಾಗಂದು ನನ್ನ ಗುರುವು
ಅಯ್ಯಾ ಧರೆಗೆ ದೊಡ್ಡಯ್ಯಾ
ಕೆಟ್ರೂ ನಿನ್ನಿಂದ ಬದುಕುದ್ರು ನಿನ್ನಿಂದ
ಬಾಳುದ್ರು ಕೂಡ ನಿನ್ನಿಂದ ನನ್ನಪ್ಪ
ಗುರುವೇ ಸತ್ತರೆ ನನ್ನ ಗುರುವು
ನೀರಲ್ಲಿ ಸಾಯ್ತೀನಿ
ಅಪ್ಪಾ ಬದುಕುದುರೆ ಗುರುವೇ
ನಿನ್ನ ಬಳಿಗೆ ಬರುತೀನಿ
ಅಪ್ಪಾ ಹೋದರೂವೆ ನನ್ನ ಪ್ರಾಣ
ನಿನ್ನಿಂದ ನನ್ನ ಗುರುವು
ಅಪ್ಪಾ ಬದುಕಿ ಬಂದರೂ ದೇವಾ
ನನ್ನ ಪ್ರಾಣ ನಿನ್ನಿಂದ
ಈ ಹರಿವ ನೀರಿನ ಮ್ಯಾಲೆ ನಾನು
ಓಡುತೀನಿ ಎಂದರಲ್ಲ || ಸಿದ್ಧಯ್ಯ ||

ಇಂಥಾ ಧರೆಗೆ ದೊಡ್ಡವರು
ಮಂಟೇದ ಲಿಂಗಪ್ಪ ಪರಂಜ್ಯೋತಿಯವರು
ಪಾತಾಳ ಜ್ಯೋತಿಯವರು
ಅವರ ಬಲದ ಮೊಗ್ಗಲು ಒಳಗೆ
ಮಲಗಿ ನಿದ್ರೆ ದೇವ
ಮಾಡುವ ಕಾಲದಲ್ಲಿ
ಅವರು ಮಗನಾಡಿದ ಮಾತ ಗುರುವೆ
ನಿದ್ರೆವೂಳುಗೆ ಕೇಳುತಾರೆ || ಸಿದ್ಧಯ್ಯ ||

ಮಗನು ರಾಚಪ್ಪಾಜಿಯವರ ಮಾತ
ಈಗಲೀಗ ನಿದ್ರೆಮೊಳಗೆ ಕೇಳುಕೊಂಡು
ಜಗತ್ತು ಗುರು ಧರೆಗೆ ದೊಡ್ಡಯ್ಯ
ಏನಪ್ಪ ರಾಚಪ್ಪಾಜಿ ನನ್ನ ಮಾತ ಮೀರಿ
ಮೋಡಿ ಮಸ್ತಪಕಾರರ ಕೈಗೆ ನೀನು ಸಿಕ್ಕಿ
ಧರೆಗೆ ದೊಡ್ಡಯ ಮಂಟೇದ ಲಿಂಗಪ್ಪ ಅಂತ್ಹೇಳಿ
ನನ್ನ ಗ್ಯಾನ ಮಾಡ್ತೀಯಲ್ಲೋ ಕಂದ
ನೀ ಮಾಡುವಂಥ ಗ್ಯಾನ ನೀ ಮಾಡುವಂತ ಸ್ವರಣೆ ನನಗೆ ಗೊತ್ತಾಯ್ತು
ಈ ಸಣ್ಣ ಕಾರ್ಯಕ್ಕಾಗಿ ಕಂದ
ಈ ಸಣ್ಣ ಮೋಡಿಗಾಗಿ ಮಗನೆ
ನನ್ನ ಯಾತಕ್ಕೆ ಕರೆದೆಯಪ್ಪ

ಈ ಕಾರ್ಯಕ್ಕೆ ಬಂದ ಮೇಲೆ
ನಾನು ಗುರುವು ಆಗೋದಿಲ್ಲ || ಸಿದ್ಧಯ್ಯ ||

ಅಯ್ಯೋ ನನಗೆ ನೀನು ಕಂದ
ಮಗನು ಆಗಬೇಕಾದರೆ
ನಾನು ನಿನಗೆ ಕಂದ
ಗುರುವಾಗ ಬೇಕಾದರೆ
ಆ ನಿನ್ನ ಶಕ್ತಿ ಕಂದ
ನಾನೆ ನೋಡಲು ಬೇಕು
ಅಯ್ಯಾ ನಿನ್ನ ದುಡುವ ಕಂದ
ನಾನೆ ತಿಳಿಯ ಬೇಕು
ಅವರು ಮಾಡಿದಂಥ ಮೋಡಿಯ
ನೀನೆ ಗೆಲ್ಲಲೇಬೇಕು || ಸಿದ್ಧಯ್ಯ ||

ರಾಚಪ್ಪಾಜಿ ನೀನು ಹೋಗಿರತಕ್ಕಂಥದ್ದು ಒಳ್ಳೆ ಕಾರ್ಯ
ನಿನ್ನ ಮೈಮೆ ಮೈತ್ಯಗಾರ ತಿಳಿಯಬೇಕಾದರೆ
ನನಗೆ ನೀನು ಮಗನಾಗಬೇಕಾದರೆ
ಆವರು ಹಾಕಿದಂಥ ಮೋಡಿ ನೀನೆ ಗೆದ್ದು ಬಾ
ಈಗಲೀಗ ನಿನ್ನ ಶಕುತಿ ಉಳ್ಳಾದ ಮಗನ ಶಿಶುಮಗನ ಮಾಡ್ಕಂಡಿದ್ದೀನಿ
ಎನ್ನುವಂಥ ವಿಚಾರ ನನಗೂ ಗೊತ್ತಾಗ್ಲಿ
ಅಲ್ಲಿ ಮೋಡಿಯಾಟ ಆಡುವಂಥ
ಮೋಡಿಕಾರರಿಗೂ ಗೊತ್ತಾಗ್ಲಿ ಅನುತೇಳಿ
ಧರೆಗೆ ದೊಡ್ಡವರು ಕೂಡ ಮಗನ ಸತ್ಯ ನೊಡಬೇಕು
ಭಕ್ತಿ ನೋಡಬೇಕು ಅಂತ್ಹೇಳಿ
ನೋಡಪ್ಪ ನೀರನಲ್ಲಿ ಬರುವಂಥ ಮಗನ
ಕಣ್ಣಿಂದ ನೋಡುಬಿಟ್ಟು ಆಗಲೀಗ ಕೈಬಿಟ್ಟು
ಅವರು ಕಣ್ಣನ್ನೇ ಮುಚ್ಚಿ ಮಲಗಿ ಬಿಟ್ಟರು ಯಾರು? ಧರೆಗೆ
ದೊಡ್ಡವರು
ಯಾವಾಗ ಮಲೀಕೊಂಡುಬುಟ್ಟರೋ
ಈ ರಾಚಪ್ಪಾಜಿಯವರಿಗೆ ಗೊತ್ತಿಲ್ಲ
ಈಗ ಧರೆಗೆ ದೊಡ್ಡವರಿಂದ ನೀರಿನ ಮೇಲೆ ಹೋಗೋದಿಕ್ಕೆ
ಅಪ್ಪಣೆಯಾಗ್ಬುಡ್ತು ಎನುತೇಳಿ

ಅವರು ಹರಿಯುವಂಥ ನೀರ
ಕಣ್ಣಾರ ನೋಡಿ ಅಯ್ಯಾ ಕಪ್ಪು ಧೂಳ್ತ ಗುರುವೆ
ತಗದಾರು ನನ್ನ ಗುರುವು
ಅವರು ಹರಿಯುವಂಥ ನದಿಯ
ಮೇಲೆ ಉರುಬವರೇ ಅವರು
ಹರಿಯುವಂಥ ನದಿಯ
ಬಿಟ್ಟುಬಿಟ್ಟು ನನ್ನ ಗುರುವು
ಅವರು ಓಡಿ ಓಡಿ ಬರುತಾರೆ
ಕಿಡುಗಣ್ಣ ರಾಚಪ್ಪಾಜಿ || ಸಿದ್ಧಯ್ಯ ||

04_79_Mante-KUH

ಹರಿಯುವಂಥ ನದೀನೆ ಬಿಟ್ಟು
ಧರೆಗೆ ದೊಡ್ಡವರ ಪಾದ ನೆನುಕೊಂಡು
ಕಪ್ಪುಧೂಳ್ತ ಕೈಲಿ ಹಿಡಕೊಂಡು
ಗುಡುಗುಡನೆ ಓಡಿಬಂದು
ಹರಿಯುವಂತ ನದಿ ಕೆರೆಗೆ ಬಂದರು
ಧರಗೆ ದೊಡ್ಡಯ್ಯ ಧರೆಗೆ ದೊಡ್ಡಯ್ಯ
ಪರಂಜ್ಯೋತಿ ಪಾವನಮೂರ್ತಿ ಅನುತೇಳಿ
ಎರಡು ಕಣ್ಣನ್ನೇ ಮುಚ್ಚುಕೊಂಡು
ಕಿಡುಗಣ್ಣ ರಾಚಪ್ಪಾಜಿಯವರು
ಈಗ ಹರಿಯುವಂತ ನೀರಿನ ಮೇಲೆ ಹೋಗುತೀನಿ ಅಂತ್ಹೇಳಿ
ಎರಡು ನೇತ್ರ ಯಾವಾಗ ಮುಚ್ಕೊಂಡ್ರೋ
ಹರಿಯುವಂಥ ನದಿಗೆ ಬಲದಪಾದ ಎತ್ತು ಮಡುಗುದ್ರೋ
ಧರೆಗೆ ದೊಡ್ಡವರಿಗೆ ಎಳ್ಳಷ್ಟು ಹೊಟ್ಟೇ ಉರುದ್ಬುಡ್ತಂತೆ
ನೋಡಿದೆಯಾ ನನ್ನ ಮಗನು ಕಿಡುಗಣ್ಣ ರಾಚಪ್ಪಾಜಿ
ಕಣ್ಣು ಮುಚ್ಚುಕೊಂಡು ಹರಿಯುವಂತ ನದೀ ದಂಡಕೆ ಬಂದ್ಬುಟ್ಟು
ಈಗ ಬದುಕುದುರೂ ನಿನ್ನಿಂದೆ ಕೆಟ್ಟರೂ ನಿನ್ನಿಂದೆ
ಬದುಕಿಸ್ದರೆ ನೀರಿನ ಮ್ಯಾಲೆ ನಡೀಸು
ಕೆಡಿಸಿದರೆ ಗುರುವು ನೀರಲ್ಲೆ ಕೆಡಿಸಿಬುಡು
ಕಣ್ಣು ಬಿಟ್ಟು ನೋಡ್ಕಂಡು ನಾನು ಪ್ರಾಣಬಿಟ್ಟೆನು ಹೊರತು
ಕಣ್ಣು ಬಿಟ್ಟು ನೋಡ್ಕಂಡು ನಾನು ಪ್ರಾಣಬಿಡೋದಿಲ್ಲ ಅಂದ್ಬುಟ್ಟು
ಸಮುದ್ರಕರೆಗೆ ಬಂದು ಕಣ್ಣೆರಡು ಮುಚ್ಕೊಂಡು ಬರುತ್ತಾವ್ನಲ್ಲ
ಈಗ ಕಣ್ಣು ಬಿಟ್ಕೊಂಡು ಮಗ ಬಂದಿದ್ರೆ ನೀನೆ ನೋಡ್ಕಂಡು ನೀನೆ
ಮುಳುಗ್ಬುಡಪ್ಪ ಅಂತೇಳಬೋದಾಗಿತ್ತು
ಕಣ್ಣು ಮುಚ್ಕೊಂಡು ಬರುವಂಥವನ ಕೈಬಿಡುವುದು ತರವಲ್ಲ ಅಂತ್ಹೇಳಿ
ಧರೆಗೆ ದೊಡ್ಡಯ್ಯ

ಅಯ್ಯಾ ರಾಚಪ್ಪಾಜಿ ಕಣ್ಣೀಗೆ
ಸಣ್ಣ ಮರಳು ಆಗೋಯ್ತು
ಮೋಡಿಕಾರರ ಕಣ್ಣೀಗೆ
ಹರಿವ ನದಿಯಾಗೋಯ್ತು
ಅವನು ಮರಳಿನ ಮ್ಯಾಲೆ ಗುರುವು
ಗುಡುಗುಡುಗುಡನೆ ಬರುವುತಾನೆ || ಸಿದ್ಧಯ್ಯ ||