ಗುರುವೇ ಸಿದ್ದು ಸಿದ್ಧರುಗೆಲ್ಲ
ನೀವು ಅತಿಮುದ್ದು ಘನನೀಲೀ
ಸಿದ್ಧಯ್ಯಾ ಸ್ವಾಮಿ ಬನ್ನಿs
ಮಂಟೇದಾs
ಲಿಂಗಯ್ಯಾ ನೀವೇ ಬನ್ನಿs

ನನ್ನ ಪಾತಾಳು ಜ್ಯೋತಿ ಬಪ್ಪಾ
ನನ್ನ ಪರಂಜ್ಯೋತಿ ಎದ್ದಿ ಬನ್ನಿ
ಸಿದ್ಧಯ್ಯಾ ಸ್ವಾಮಿ ಬನ್ನಿ
ಮಂಟೇದಾs ಲಿಂಗಯ್ಯಾ ನೀವೇ ಬನ್ನಿ

ಗುರುವೇ ಹರಳೀಕಟ್ಟಿ ಗುರುವು
ಜಗಲಿ ಮೇಲೆ ದೇವ
ಅಪ್ಪಾಜಿ ಗುರುವು
ಧರೆಗೆ ದೊಡ್ಡಪ್ಪ
ನನ್ನ ಮಂಟೇದ ಲಿಂಗಯ್ಯ
ನನ್ನ ಪರಂಜ್ಯೋತಿಯವರು
ಪಾತಾಳ ಜ್ಯೋತಿಯವರು
ಅವರು ಹರಳೀಕಟ್ಟೆ ಜಗಲೀಮ್ಯಾಲೆ
ಪಾವಾಡಿ ಮಲಗುತಾರೆ || ಸಿದ್ಧಯ್ಯ ||

ಜಗತ್ತು ಗುರುಗಳು ದೇವಾ
ಅರಳೀಕಟ್ಟೆ ಜಗಲಿಮ್ಯಾಲೆ ಸ್ವಾಮಿ
ಪವಾಡಿಸಿ ಒರಗಿರುವಾಗ
ಕಿಡುಗಣ್ಣ ರಾಚಪ್ಪಾಜಿಯವರು
ಮಲಗಿರುವಂಥ ಧರೆಗೆ ದೊಡ್ಡವರ ನಿದ್ರೆ ಭಂಗ ಪಡಿಸಬಾರದು ಎನುತೇಳಿ
ಜಗತ್ತು ಗುರುಗಳ ತಲೆದಸೇಲಿ ಇರತಕ್ಕಂಥಾ
ತಲೇ ದಿಂಬನ್ನೇ ತಗದು
ಮುತ್ತಿನ ಜೋಳಿಗೆಯನ್ನೇ ತಲೆದಿಂಬು ಮಾಡ್ಕಂಡಿದ್ರಲ್ಲ
ಮುತ್ತಿನ ಜೋಳಿಗೆನೇ ತಕ್ಕಂಡು
ಮುಂಗೈಗೆ ಆಧಾರ ಮಾಡುಕೊಂಡು ಕಿಡಿಗಣ್ಣು ರಾಚಪ್ಪಾಜಿ
ಮಲೆಯಾಳದ ಕಪ್ಪು ಮಲೆ ಈಬತ್ತೀನೆ
ಜ್ವಾಳಿಗೇಲಿ ಮಡಗಿತ್ತು ಗುರುವು
ಮುತ್ತಿನ ಜ್ವಾಳಿಗೆ ತಗದು ಮುಂಗೈಗೆ ಆಧಾರ ಮಾಡ್ಕಂಡು

ತೆಂಕಲ ದಿಕ್ಕಿಗೆ ನನ್ನ
ರಾಚಪ್ಪಾಜಿ ಬರುವುತಾರೆ || ಸಿದ್ಧಯ್ಯ ||

ಗುರುವೇ ಕಿಡುಗಣ್ಣ ರಾಚಪ್ಪಾಜಿ
ಅಯ್ಯಾ ತಾನಾಗಿ ಬರುವಾಗ
ಇಂಥ ಮೋಡಿಕಾರರ ಕೈಗೆ
ಸಿಕ್ಕೋದ ನನ್ನ ರಾಚಪ್ಪಾಜಿ || ಸಿದ್ಧಯ್ಯ ||

ಇವನು ಯಾವನೋ ಕಾಣಿ
ಯಾವ ಜಂಗುಮನೋ
ಎತ್ತಲ ನಾಡವನೋ
ಯಾವು ರಾಜ್ಯದವನೋ
ಅಯ್ಯಾ ನನಗಿಂತ ಇವನೇ
ಘನ ವಿದ್ಯಾಕಾರನೂ
ನಾವೇ ವಿದ್ಯಾವಂತರೊ
ಗೊತ್ತಲ್ಲ ಎನುತೇಳಿ
ಅವರು ಬರುವಂಥ ರಾಚಪ್ಪಾಜಿಯವರ
ದುರುದುರನೆ ನೋಡುತಾರೆ || ಸಿದ್ಧಯ್ಯ ||

ಏನಯ್ಯಾ ಜಂಗೂಮ
ಯಾವ ಪಟ್ಟಣ ಯಾವ ರಾಜ್ಯ
ಯಾವ ಶೀಮೆ
ನಿಮ್ಮ ಊರಯ್ಯಾವುದು? ನಾಡ್ಯಾವುದು?
ನಿನ್ನ ದೇಶಯಾವುದು? ಎಂದರು
ಏನರಣ್ಣ ಮೋಡಿಕಾರರೆ
ನಾನು ಕಲ್ಯಾಣ ಪಟ್ಟಣದಲ್ಲಿ
ಶಿಶುಮಕ್ಕಳು ಒಂದುಗೂಡಿಕೊಂಡು
ಬಾಳುತ್ತಿದ್ದವರು ಬದುಕುತ್ತಿದ್ದವರು ನಾವು ಕಣಪ್ಪ
ಶರಣರ ಹೊಟ್ಟೇಲಿ ಹುಟ್ಟಿ ಶರಣರ ಗರ್ಭದಲ್ಲಿ ಬೆಳೆದು
ಆದಿ ಕಲ್ಯಾಣ ಪಟ್ಟಣಕ್ಕೆ
ನಾವು ಸತ್ಯ ಶರಣರಾಗಿ ಹೋಗಿ ಸೇರಿ
ಈಗಲೀಗ ಭಕ್ತಿವುಳ್ಳು ಬಸವಣ್ಣನವರ ಕೈಲಿ
ಧರೆಗೆ ದೊಡ್ಡವರ ಕೈಲಿ
ಕರಿಯಲೆ ರಾಚಪ್ಪಾಜಿ ಎನುತೇಳಿ
ಹೆಸರನೇ ಪಡಸಿಕೊಂಡು

ನಾನು ಧರೆಗೆ ದೊಡ್ಡವರಿಗೆ
ಶಿಷ್ಯನಾಗಿ ಬಂದೆನಪ್ಪ || ಸಿದ್ಧಯ್ಯ ||

ಧರೆಗೆ ದೊಡ್ಡವರಿಗೆ ದೇವಾs
ಶಿಷ್ಯನಾಗಿ ಬಂದಿವ್ನಿ ಕಣ್ರಪ್ಪಾ
ಮೋಡಿ ಮಸ್ತಪಕಾರರೇ ಎಂದರು

ಗುರುವೇ ಆಡಿದ ಮಾತು
ಕೇಳಿಕೊಂಡು ಗುರುವು
ಮೋಡಿಕಾರರು ಗುರುವೇ
ವಿದ್ಯೆಕಾರರೂ ದೇವ
ವಿದ್ಯೆಕಾರರು ಗುರುವು
ನೀನೆಷ್ಟು ದೊಡವ್ನು ನಿನ್ನ ಗುರು ಎಷ್ಟು ಹಿರಿಯ‌ವ್ನು || ಸಿದ್ಧಯ್ಯ ||

ವಿದ್ಯೆದಾವೊಳಗೆ
ವಿದ್ಯೆಕಾರರು ನಾವು
ಬುದ್ಧಿವೊಳಗೆ ಗುರುವೆ
ಬುದ್ಧಿ ಸ್ವಾಲರು ನಾವು
ನಮಗಿಂತ ಹಿರಿಯವರು
ಎನುತ ಹೇಳುತೀಯೆ
ನಮಗಿಂತ ದೊಡ್ಡವರು
ಆಗಂತ ಹೇಳುತೀಯೆ
ಲೋ ಕೇಳೋ ನೀನು
ಎನ್ನುವ ಮಾತ ನಮ್ಮೊಂದಿಗೆ ನುಡಿಯ ಬ್ಯಾಡೋ || ಸಿದ್ಧಯ್ಯ ||

ನೋಡೋ ಇವತ್ತಿನಗಂಟ
ಭೂಮಿ ಹುಟ್ಟಿ ಭೂಮಿ ಕಟ್ಟಿದ ಕಾಲದಿಂದ
ಮೋಡಿವೊಳಗೆ ಘನ ವಿದ್ಯೆಕಾರರು ನಾವು
ಅಯ್ಯಾ ಮೋಡಿಕಾರರು ಎಂಥ ಘನವಿದ್ಯೆಕಾರರು
ಎನುತೇಳಿ ನಮ್ಮ ಲೋಕ ಲೋಕ ಹೊಗಳುವುದು
ನಾನು ಧರೆಗೆ ದೊಡ್ಡೋರು ಮಗ
ಭೂಮಿಗೆ ದೊಡ್ಡೋರ ಮಗ
ಭೂಲೋಕಕ್ಕೆ ಹಿರಿಯವ್ರ ಮಗ
ಈ ಸೂರ್ಯ ಚಂದ್ರಾದಿಗಳು
ವಿಷ್ಣು ಈಶ್ವರ ಬ್ರಹ್ಮತ್ರಿಮೂರ್ತಿ
ಕಲ್ಯಾಣ ಕೈಲಾಸ
ಆಳೀ ಬಾಳಿ ಬಂದ
ಜಗತ್ತು ಗುರು ಮಗ
ಆಗನುತೇಳಿ ನೀನು ನಮ್ಮ ಮುಂದೆ
ಅಂತೇಳುತೀಯ ನೀನು ನಮ್ಮ ಮುಂದೆ
ಅಂತೇಳುತೀ ಪರುದೇಸಿ
ಲೋ ನೀನೆಷ್ಟು ದೊಡ್ಡವನೋ
ನಿನ್ನ ಗುರುವು ಎಷ್ಟು ದೊಡ್ಡವನೋ || ಸಿದ್ಧಯ್ಯ ||

ಅಯ್ಯಾ ನೀನೆಷ್ಟು ದೊಡ್ಡವನೋ
ನಿನ್ನ ಗುರುವು ಎಷ್ಟು ದೊಡ್ಡವನೋ || ಸಿದ್ಧಯ್ಯ ||

ನಾ ದೊಡ್ಡ ಗುರು ಮಗ
ಆಗನುತೇನಿ ಹೇಳುಬ್ಯಾಡ ನಿನ್ನ ಧರೆಗೆ ದೊಡ್ಡವ್ರ ದುಡುವ
ನಾವು ನೋಡಬೇಕಾದರೆ
ನಿನ್ನ ಮಂಟೇದ ಲಿಂಗಯ್ಯನ
ಮೈಮೆ ತುಳಿಯಬೇಕಾದ್ರೆ ನೀನು ಹೆಚ್ಚಿನ ಶರಣ
ಎಂಥಾ ನಾವು ಎಲ್ಲ ತಿಳಿಯಬೇಕಾದರೆ
ನೀನು ಗುರುವಿನ ಸತ್ಯ ತೋರಾಬೇಕು
ಹೇಳಿದ ಮೋಡಿ ಮಾಡಬೇಕು || ಸಿದ್ಧಯ್ಯ ||

ಅಯ್ಯಾ, ಕೇಳಲ ಜಂಗುಮ
ಕೇಳಲೊ ಪರದೇಶಿ
ನಿನ್ನ ಗುರೂನ ಮೈಮೆ ಎಷ್ಟು
ದೊಡ್ಡವಾಗಿರಬಹುದು
ನಮ್ಮ ಮೋಡಿ ಎಷ್ಟು
ಸಣ್ಣದಾಗಿರಬಹುದು
ಗುರುಮಗನಾಗಿ ನಮ್ಮ
ಮೋಡಿಗಾರರ ಪಟ್ಟಣಕ್ಕೆ
ನೀನು ಹೇಗೆ ಬರಬಹುದು
ನಿನ್ನ ಗುರೂನ ಮೈಮೆ
ನಿನ್ನ ಮೈಮೆ ನಾವು ನೋಡುತೀವಿ
ನಾವಾಕಿದಂಥ ಮೋಡಿಯ
ನೀನೆತ್ತುಯಂಥ ಹೇಳುತಾರೆ || ಸಿದ್ಧಯ್ಯ ||

ಅಪ್ಪಾ ಬ್ಯಾಡಿ ಕಣರಣ್ಣ ಬ್ಯಾಡಿಕಣರಣ್ಣ
ನನ್ನ ಗುರುವ ಜರಿಯಬೇಡಿ ಕೇಳಿ ಮೋಡಿಕಾರರೇ
ಈ ಭೂಮಿಗೆ ದೊಡ್ಡವರ ಮೈಮೆ ನಿನಗೆ ಗೊತ್ತಿಲ್ಲ
ಈ ಧರೆಗೆ ದೊಡ್ಡವರ ಮಾಯ ಇನ್ನೂವೆ ತಿಳಿದಿಲ್ಲ
ಈ ಭೂಮಿಗೆ ದೊಡ್ಡವರು
ಭೂಲೋಕ ಪಡೆದವರೂ || ಸಿದ್ಧಯ್ಯ ||

ನಮ್ಮ ಗುರೂಗೆ ತಿರಸ್ಕಾರ ಮಾಡಿ
ಈಗಲೀಗ ನನ್ನ ಕೂಡ ಆಳಿಸಬ್ಯಾಡ್ರಿ ಕಣ್ರಪ್ಪ
ನಮ್ಮ ಗುರು ಅಂದ್ರೆ ಭೂಮಿ ಭೂಲೋಕಕ್ಕೆಲ್ಲ ದೊಡ್ಡವರು
ಈ ನಾಡು ದೇಶ ಪಡೆದಂಥ ಜಗತ್ತು ಗುರು

ನಮ್ಮ ಗುರುಗಳ ಮೈಮೆ ಮೈತ್ಗಾರ
ಏನು ಅನ್ನುವುದು ಈ ಭೂಮಿ ಭೂಲೋಕ ನಡುವೆ ನರಲೋಕದಲ್ಲಿ
ಕಂಡವರೇ ಮೊದಲಿಲ್ಲ
ಅವರ ಮೈಮೆ ತಿಳಿದವರು ಮೊದಲಿಲ್ಲ ಕಣ್ರಪ್ಪ
ಅವರ ಮಾಯ ಕಂಡಿರತಕ್ಕಂಥ ನರ ಮಾನವರು ಒಬ್ರೂ ಇಲ್ಲ
ಈಹೊತ್ತು ಅವರಿಗೆ ಭೂಮಿಗೆ ದೊಡ್ಡವ್ರೀಗೆ ನಾನು ಶಿಶು ಮಗನಾಗಿ
ಕಲ್ಯಾಣ ಪಟ್ಟಣದಿಂದ
ನಾನು ಬಂದಿವ್ನಿ ಕಣ್ರಯ್ಯಾ

ನಮಗೆ ಧರೆಗೆ ದೊಡ್ಡವ್ರೀಗೆ
ಶಿಷ್ಯರಾಗಿ ಎಂದರಂತೇ || ಸಿದ್ಧಯ್ಯ ||

ಅಣ್ಣಾ ಈ ಜಂಗೂಮ ಬಂದೀರದ ನೋಡುದ್ರೆ ಬೋ ಆಶ್ಚರ್ಯ
ಇಷ್ಟೊತ್ತು ಗಂಟ ಮಾತಾಡಿದ ಮಾತಿಗಿಂತ
ಮಾತು ಮಾತಿಗೆ ಮೇಲಾದಂತ ಮಾತನ್ನೇ ಆಡ್ತಾನೆ ಹೊರತು
ಇವನು ಕೀಳಾದ ಮಾತಾಡ್ತಾ ಇಲ್ಲ ಕಣ್ರಣ್ಣ
ಇವನಾಡುವಂತ ಮಾತ ಕೇಳಿದರೆ

ಇವನ ಒಂದಿಗೆ ನಾನೆ
ಮೋಡಿ ಆಟ ಆಡಬೇಕು || ಸಿದ್ಧಯ್ಯ ||

ಇವನೊಂದಿಗೆ ನಾನು ಮೋಡಿ ಆಟ ಮಾಡಿ
ಆ ಗುರುವೆ ಇವನ ಮಗನು ಇರದಂಗೆ ಮಾಡಿ
ಇವನ ಗುರುವಾಗಿರತಕ್ಕಂತವರ
ಮೋಡಿ ಆಟದಲ್ಲಿ ನಾನು ಸೋಲಿಸಿ
ಈಗಲೀಗ ನಮ್ಮ ಪಟ್ಟಣದಿಂದ ಹೊರಗಡೆ ಕಳುಗಬೇಕು ಕಣ್ರಣ್ಣ
ಏ ಭಿಕ್ಷುಕ
ನನ್ನ ಗುರು ಕೊಟ್ಟ ಜೋಳಿಗೆ ಅಂದ್ಬುಟ್ಟು ಜೋಳಿಗೆ ತಕ್ಕಂಡು
ಮಲೆ ಈಬತ್ತಿ ಮಡೀಕೊಂಡು
ಇದು ಮಾಯದ ಕಪ್ಪು ಅಂತೇಳಿ ಕಪ್ಪು ತಕ್ಕೊಂಡು
ನಮ್ಮ ಬಳಿಗೆ ಬಂದು
ಭೂಮಿಗೆ ದೊಡ್ಡವರ ಮಗ ನಾನು
ಧರೆಗೆ ದೊಡ್ಡವರ ಮಗ ನಾನು
ಈ ಭೂಮಿ ಪಡೆದವರ ಮಗ ನಾನು ಅಂತ ಕೇಳ್ತೀಯ
ನೀನಂಥ ದೊಡ್ಡವನಾದರೆ ಗುರು ಅಂಥ ದೊಡ್ಡವನಾದರೆ
ನಾವೇಳುವಂತ ಸತ್ಯ
ನಾವೇಳ್ತಕ್ಕಂಥ ಮೋಡಿ ಆಟ ನಿನಗೆ ಬರತದೆಯೇನೋ
ನಾವು ಮಾಡಿದಂಥ ಮೋಡೀನ ನೀನು ಗೆಲ್ತಿಯೇನೋ ಅಂದರು
ಅಣ್ಣಾ, ಮಾತಾಡ್ತೀನಿ ಅಂದರೆ ಬಹು ಕಷ್ಟ
ನೀವು ಮೋಡಿ ಆಡ್ತೀನಿ ಅಂದರೆ

ಗುರುಗಳ ಪಾದ ನೆನೆದರೆ
ನನಗೆ ಬಾಳ ಕಷ್ಟವಿಲ್ಲ || ಸಿದ್ಧಯ್ಯ ||

ಅಣ್ಣಾ ಮಾತಿನಿಂದ ನನಗೆ
ರೀತಿ ಗಳಿಸಬೇಡಿ
ನೀವು ಮೋಡಿ ಆಟ ಆಡಿದ್ರೆ
ನೀವು ಮಾಡುವಂಥ ಮೋಡಿ
ನಾ ಸುಲುಭವಾಗಿ ಗೆಲುತೀನಿ
ನೀವು ಹಾಕಿದ ಮೋಡೀಯ ನಾನು
ಗೆಲ್ಲದೇ ಹೋದರೆ ಗುರುವು
ನಾನು ಧರೆಗೆ ದೊಡ್ಡವರ
ಮಗನಲ್ಲ ಅಂದಾರಲ್ಲ || ಸಿದ್ಧಯ್ಯ ||

ನೀವು ಮಾಡಿದಂಥ ಮೋಡಿಯಾಟಾನ ನಾನು ಗೆಲ್ಲದೇ ಹೋಗ್ಬಿಟ್ರೆ
ನಾನು ಧರೆಗೆ ದೊಡ್ಡವರಿಗೆ ಮಗನಾಗದಿಲ್ಲ ಕಣ್ರಪ್ಪ
ನಿಮಗೆ ನಾನು ಮಗನಾಗ್ಬುಡ್ತೀನಿ ಕಣ್ರಯ್ಯಾ ಎಂದರು
ಏನೋ ಮಾತಾಡದೇ ಆದರೆ ಬಾಳ ಘನವಾಗಿ ಮಾತಾಡ್ದ ಕಣ್ರಣ್ಣ
ಈಗ ಮಾತಾಡ್ತೀನಿ ಅಂದರೆ ಬೋ ಕಷ್ಟುವಂತೆ ಅವನಿಗೆ
ಮೋಡಿಯಾಟ ಅಂದರೆ ಬೋ ಸುಲಬವಂತೆ
ನಮ್ಮ ಗುರುವು ಗ್ಯಾನ ಮಾಡಿಬುಟ್ಟರೇ
ನೀವಾಕಿದಂಥ ಮೋಡಿನ ನಾ ಗೆದ್ದುಕೊಂಡು ಬುಡ್ತೀನಿ ಅಂತನೆ
ಏ ಜಂಗೂಮ ನಮ್ಮ ಜೊತೇಲಿ ಬಾ ಅಂತ್ಹೇಳಿ
ಆ ರಾಚಪ್ಪಾಜಿಯವರ ಕರಕೊಂಡು ಎಲ್ಲಿಗೆ ಬರುತಾರೆ ಅಂದರೆ

ಏಳಾನೆ ತೂಕದಂಥ ಪಡುಗುಂಡಿನ ಬಳಿಗೆ ಬಂದರು
ಏನೋ ಜಂಗೂಮ
ಇದು ಏಳಾನೆ ತೂಕದ ಪಡುಗಂಡು

ಈ ಗುಂಡನ್ನೇ ಇಂಬಿಹಣ್ಣ ಮಾಡುತೀವಿ
ಎರಡು ಬೆರಳಲ್ಲಿ ಎತ್ತುತೀವಿ || ಸಿದ್ಧಯ್ಯ ||

ಇಂಬಿಹಣ್ಣ ಮಾಡುತೀವಿ
ಎರಡು ಬೆರಳ ಒಳಗೆ
ನಾವು ಪಡಗುಂಡ ಎತ್ತುತೀವಿ
ನೀನು ಇಂಬೀ ಹಣ್ಣಾದ ಮೇಲೆ
ಪಡುಗುಂಡ ಎತ್ತುತ್ತೀಯೋ
ಈ ಮೋಡಿಯಾಟದ ಒಳುಗೆ
ನೀನು ಇಂಬೀಹಣ್ಣು ಮಾಡುತೀಯೋ
ನೀ ಮಾಡುವಂಥ ಮೋಡಿಗಳ
ಹೇಳುಬುದು ಎಂದರಲ್ಲ || ಸಿದ್ಧಯ್ಯ ||

ಏನೋ ಇದು ಪಡುಗುಂಡನ್ನೇ
ಇಂಬೇ ಹಣ್ಣ ಮಾಡಿ ಎರಡು ಬೆರಳಲ್ಲಿ ಎತ್ಕತೀನಿ ಕಾಣೋ
ಇಲ್ಲವಾದರೆ ಮೋಡಿ ಆಟ ಆಡೋನು ನೀನಾದರೆ
ಈ ಪಡುಗುಂಡು ಇಂಬೇಹಣ್ಣ ಮಾಡಿ
ಎರಡು ಬೆರಳಲ್ಲಿ ಎತ್ತಿ ಇಡ್ಕೊಂಡು ತೋರಸು
ಇಲ್ಲವಾದ ಪಕ್ಷದಲ್ಲಿ ನಾವು ಮಾಡ್ತೀವಿ
ನೀನು ಕಣ್ಣಾರ ನೋಡು ಅಂದ್ರು
ಏನುರಣ್ಣ ಮೋಡಿಕಾರರೇ
ಈ ಪಡುಗುಂಡ ಇಂಬೇಹಣ್ಣು ಮಾಡ್ಬುಡ್ತೀವಿ ಎರಡು ಬೆರಳಲ್ಲಿ
ಎತ್ತುತ್ತೀವಿ ಅಂತ ಹೇಳಿದ್ರಿಯಲ್ಲಣ್ಣ

ಮೊದಲಾಗಿ ಮೋಡಿ
ನೀವು ಮಾಡುಬುಡಿ ಅಣ್ಣದೀರೆ
ನಾನೊಂದು ಮೋಡಿಯ
ನಿಮಗಾಗಿ ಮಾಡುತೀನಿ || ಸಿದ್ಧಯ್ಯ ||

ಹಾಗಲ್ಲ ಕಣೋ ನಮ್ಮ ಮೋಡಿಕಾರರ ಬಳಿಗೆ ಬಂದಮೇಲೆ
ನಿನ್ನ ಶಕ್ತಿ ನಿನ್ನ ಯುಗತಿ ನೋಡಬೇಕಾದರೆ
ನಾವು ಮಾಡಿ ಮಡಗಿರುವಂಥ
ಆನೆ ತೂಕದ ಪಡುಗುಂಡ ಇಂಬೇ ಹಣ್ಣಮಾಡಿ
ಎರಡು ಬೆರಳಲ್ಲಿ ಎತ್ತಿತೋರಸು ಅಂದರು
ಅಣ್ಣಯ್ಯಾ, ಕ್ವಾಪ ಆಗಬೇಡಿ ಸಿಟ್ಟು ಪಡಬೇಡಿ ಅಣ್ಣದೀರೇ
ಈಗಲೀಗ ನನ್ನ ಗುರುಪಾದ ನೆನಸ್ಕತೀನಿ ಸ್ವಲ್ಪ ತಡೀರಪ್ಪ ಅಂತ್ಹೇಳಿ
ಧರೆಗೆ ದೊಡ್ಡಯ್ಯ ಮಂಟೇದ ಲಿಂಗಪ್ಪ
ಜಗಂಜ್ಯೋತಿ ಧರೆಗೆ ದೊಡ್ಡವರೆ
ಗುರುದೇವಾ ಮೂಡ್ಲಾಗಿ ಹೋಗು ಪಡುಗ್ಲಾಗಿ ಹೋಗು
ಬಡಗಲಾಗಿ ಹೊರಟೋಗು
ತೆಂಕಲಾಗೆ ಮಾತ್ರ ಹೋಗಬೇಡ ಕಣಪ್ಪ ಅಂತ ಮೊದಲೇ ಹೇಳಿದ್ರಿ
ಇಲ್ಲಿ ಏನಿರಬಹುದು ಅಂತ್ಹೇಳಿ ನಿಮ್ಮ ಮಾತ್ರ ಮೀರಿ ನಾನು
ಬಂದ್ಬುಟ್ಟಿ

ನಾನು ಕೂಗುದ ಕೂಗು
ನಿಮ್ಮ ಪಾದಕೆ ಅರುವಾಗಲಯ್ಯ
ಅಯ್ಯಾ ಧರೆಗೆ ದೊಡ್ಡವರ
ಪಾದ ನೆನಕೊಂಡು
ನಾ ಕೂಗಿದಂಥ ಕೂಗು
ನಿನ್ನ ಪಾದಕೆ ಅರುವಾಗ್ಲಿ
ನನ್ನ ಪರಂಜ್ಯೋತಿಯವರೇ ಆಗರಿದು ನನ್ನ ಗುರುವು
ಕಿಡಗಣ್ಣ ರಾಚಪ್ಪಾಜಿ
ಮುತ್ತಿನ ಜೋಳಿಗೆಗೆ
ಕೈಯನ್ನ ಹಾಕವರೆ
ಈಬತ್ತಿ ಬಸುವಂಗ
ಬಲಗೈಲಿ ಹಿಡುದವರೆ
ಅಯ್ಯಾ ಭಾರೀ ತೂಕದ ಪಡುಗುಂಡ್ಗೆ
ಊಬತ್ತಿ ಉರುಬುತಾರೆ || ಸಿದ್ಧಯ್ಯ ||

ಭಾರಿ ಪಡುಗುಂಡ್ಗೆ ಈಬತ್ತಿ ಬಸುವಂಗ ಇಕ್ಕಿs
ಭಾರಿ ಪಡುಗಂಡ್ಗೆ ಜಗತ್ತು ಗುರು ಧರೆಗೆ ದೊಡ್ಡವರ ಮುತ್ತಿನ
ಜೋಳಿಗೆಯಲ್ಲಿರುವಂತ
ಮಾಯದ ಕಪ್ಪು ಮಲೆಯಾಳದ ಕಪ್ಪನ್ನೇ ಧರಿಸಿ
ಜಗಂಜ್ಯೋತಿ ಧರೆಗೆ ದೊಡ್ಡಯ್ಯ ಎಂದರು
ಈಗಲೀಗ ಕೂತಿರುವಂಥ ಮೋಡಿಕಾರರ ಕಣ್ಣಿಗೆಲ್ಲ
ಎರಡು ಬೆರಳು ಗಾತ್ರ ಇಂಬೀಹಣ್ಣು
ಈಗಲೀಗ ಜಗತ್ತು ಗುರುಗಳ ಮಗನಾಗಿರತಕ್ಕಂಥ ರಾಚಪ್ಪಾಜಿಯವರಿಗೆ
ಕಣ್ಣಿನ ನೇತ್ರಕ್ಕೆ ಪಡುಗುಂಡಾಗೆ ಕಾಣ್ತಾದೆ
ಈ ಮೋಡಿಕಾರರೆಲ್ಲ ಏನು ಹೇಳ್ತಾರೇ ಅಂದರೆ
ಏನಣ್ಣಾ ನಾವು ಮೋಡಿಕಾರರು ಅಂದ್ರೆ ನಾವು ಹೇಳಿದ ಮಾತು
ಈ ಜಂಗುಮ ಮಾಡೇಬುಟ್ನಲ್ಲ
ಈಗಲೀಗ ಇಂಬೆಹಣ್ಣಾಗ್ಬುಡ್ತಲ್ರಣ್ಣ ಇಂಬೇಹಣ್ಣು ಆಗ್ಬುಡ್ತಲ್ರೋ
ಅಣ್ಣಾ ಈ ಇಂಬೇಹಣ್ಣು ಮಾಡಿದವನು ಎತ್ತದೇ ಬುಟ್ಟಾನ

ಇವನು ಎರಡೇ ಬೆರಳಲ್ಲಿ ಅಣ್ಣ
ಎತ್ತುತಾನೆ ಎಂದರಂತೆ || ಸಿದ್ಧಯ್ಯ ||

ಎರಡು ಬೆರಳಲ್ಲಿ ಈ ಇಂಬೇಹಣ್ಣ ಎತ್ಬುಡ್ತನೆ ಕಣ್ರಣ್ಣ
ಇವರು ಗೆದ್ದೋಗ್ಬುಡ್ತನೆ ನಾವು ಸೋತೋಗ್ಬುಡ್ತೀವಿ ಕಣ್ರಣ್ಣ ಅಂತ್ಹೇಳಿ
ಈ ಮೋಡಿಕಾರ್ರೆ‍ಲ್ಲ ಮಾತಾಡ್ತರೆ
ರಾಚಪ್ಪಾಜಿಯವರ ಕಣ್ಣಿಗೆ ಪಡುಗುಂಡೆ
ಆಗ ರಾಚಪ್ಪಾಜಿಯವರು ಯೋಚನೆ ಮಾಡುತಾವರೆ
ಯಾಕಪ್ಪ ಜಗತ್ತುಗುರು ಇವತ್ತಿನ ದಿವಸದಲ್ಲಿ
ತಿಳಿಯದೇ ನಾನು ಮೋಡಿಕಾರರ ಬಳಿಗೆ ಬಂದ್ಬುಟ್ಟಿ
ನಿಮ್ಮ ಮಾತ ಮೀರಿ ಹೋದನಲ್ಲಮಗ ಅನುತೇಳಿ
ಅವರ ಕಣ್ಣಿಗೆ ಇಂಬೇಹಣ್ಣ ತೋರಿಸಿ
ನನ್ನ ಕಣ್ಣಿಗೆ ಭಾರಿ ಪಡುಗುಂಡ ಮಾಡಿಯಪ್ಪ

ನಿನ್ನ ಪಾದ ಬಿಟ್ಟಮ್ಯಾಲೆ
ನಾನ್ಯಾರ ಸೇರಲಪ್ಪ || ಸಿದ್ಧಯ್ಯ ||

ಗುರುವೇ ನಿಮ್ಮ ಪಾದ ಗುರುವೇ
ನಾನು ಬಿಟ್ಟುಬಿಟ್ಟು
ಇನ್ಯಾರ ಪಾದ ಹೋಗಿ ನಾನು
ಸೇರಲಿ ನನ್ನ ಗುರುವು
ಕಲ್ಯಾಣ ಪಟ್ಟಣವ ನಾನಾಗಿ ಬಿಟ್ಟುಟ್ಟು
ನಿಮಗೆ ಮಗನಾಗಿ ನಾನಾಗಿ ಬಂದಮೇಲೆ
ಈ ಮೋಡಿಕಾರರ ಕೈಗೆ ನನ್ನ
ಕೊಟ್ಟೀಯ ಮಾಯಕಾರ || ಸಿದ್ಧಯ್ಯ ||