ಗುರುವೆ ಅಂತಪ್ಪ ಮಗಳು ತಂದು ನನ್ನ ಗುರುವು
ನಿಮಗೆ ಶಿಶು ಮಗಳು ನಾವು ಮಾಡುತೀವಿ
ನಿಮ್ಮ ಗುರುಗುವೆ ಶಿಶು ಮಗಳ ನಾವೆ ಮಾಡುತೀವಿ
ಈ ತಬ್ಬಲಿ ಮಗಳ ಗುರುವೆ
ನಿನಗೆ ಮಗಳ ಮಾಡುತೀವಿ || ಸಿದ್ಧಯ್ಯ ||

ಗುರುದೇವಾ ತಾಯಿ ತಂದೆ ಅಣ್ಣ ತಮ್ಮ ಬಂದು ಬಳಗs
ಯಾರಂದ್ರೆ ಯಾರಿಲ್ಲಾ ಗುರುವೂ
ಯಾರೂ ಇರದಿದ್ದ ಮಗಳ ನಿಮಗೆ
ಶಿಶು ಮಗಳಾಗಿ ಮಾಡುತೀವಿ ಸ್ವಾಮಿ

ಈ ದಿಕ್ಕಿಲ್ಲದ ಮಗಳಿಗೆ
ನೀವೆ ಕಾವಲು ನನ ಗುರುವು || ಸಿದ್ಧಯ್ಯ ||
ಅಪ್ಪಾಯಾರೂ ಇಲ್ಲದ ಮಗಳ
ನೀವೇ ಕಾಪಾಡಬೇಕು || ಸಿದ್ಧಯ್ಯ ||

ಯಾರಪ್ಪಾ ನನ ಕಂದಾs ತಾಯಿ ತಂದೆ ಬಂಧು ಬಳಗ
ದಿಕ್ಕಿಲ್ಲದಂತ ಮಗಳು ಯಾರಪ್ಪಾ ಎಂದರೂ
ಗುರುದೇವಾ ಇವಳ ಹೆಸರು ಹೀರೇ ಚನ್ನಾಜಮ್ಮ ಕಣ್ರಪ್ಪ
ಯಾರೂ ಇಲ್ಲದ ಮಗಳಾ ನೀವೆ ಕರಕಂಡೋಗಿ
ಶಿಶುಮಗಳನ್ನಾಗಿ ಮಾಡಿಕೊಂಡು ಈ ದಿಕ್ಕಿಲ್ಲದ ಮಗಳಿಗೆ
ನೀವೆ ಕಾವಲು ಗುರುವು ಎನುತೇಳಿ
ಕಿಡಗಣ್ಣು ರಾಚಪ್ಪಾಜಿ ಬಳಿಗೆ ತಾನಾಗಿ ಬಾರವ್ವ ಮಗಳೆ
ಬಾರೋ ಕಂದಾ ಈ ದೇವರಿಗೆ ಮಗಳಾಗಿ
ಈ ಗುರುವಿಗೆ ಮಗಳಾಗಿ ಹೋಗವ್ವ ಎನುತೇಳಿ
ರಾಚಪ್ಪಾಜಿಯವರಿಗೆ ಮಗಳಾಗಿ

ಚೆನ್ನಮ್ಮಾಜಮ್ನ ಕರತಂದು
ಅವರು ಒಂದಾಗಾದರೆ ಕಳುಗುತಾರೆ || ಸಿದ್ಧಯ್ಯ ||

ಈ ಗುರುವಿಗೆ ಮಗಳಾಗಿs ಹೋಗವ್ವ ಕಂದಾ
ಈ ದೇವರಿಗೆ ಮಗಳಾಗಿs ಹೋಗಿ ಬದುಕವ್ವ
ಹಾಗಂದು ಗುರುವೆs ಮೋಡಿಕಾರರು ಗುರುವು
ಅವರು ಚೆನ್ನಮ್ಮಾಜಿನದೇವs ಕರೆ ತಂದು ನನ ಗುರುವೆ
ನನ್ನ ರಾಚಪ್ಪಾಜಿಯವರ ಮುಂಬಾಗದಲ್ಲಿರಸವರೆ
ಇಂಥ ರಾಚಪ್ಪಾಜಿ ಪಾದಕೆ
ಬಾಗಿ ಶರಣು ಮಾಡುತಾಳೆ || ಸಿದ್ಧಯ್ಯ ||

ಈಗಲೀಗ ಗುರುವುs
ವಿಜೇ ನಗರದಲ್ಲಿ ಈಗಲೀಗ ತ್ಯಾಗಲಿಗ ರಾಚಪ್ಪಾಜಿಯವರು ಬಂದು
ವಿಜೇ ನಗರದ ಮೋಡಿಗಾರರ
ಆಗಲೀಗ ಮೋಡಿ ಆಟದಲ್ಲಿ ಸೋಲಿಸಿ
ಹಿರೇಚನ್ನಮ್ಮನ ಶಿಶುಮಗಳಾಗಿ ಮಾಡಿಕೊಂಡು
ವಿಜೇನಗರ ಬಿಟ್ಟು ಬರುವಾಗ ಆ ರಾಚಪ್ಪಾಜಿಯವರು
ಹಿರೇ ಚನ್ನಮ್ಮನ ಕರೆದು ಮುಂಬಾಗದಲ್ಲಿ ನಿಂದರಿಸಿಕೊಂಡು
ವಿಜೇ ನಗರದಲ್ಲಿ ವಾಸಸ್ಥಾನ ಮಾಡತಕ್ಕಂತ ಮೋಡಿಕಾರರಿಗೆ

ಎತ್ತಿ ಶಾಪ ಕೊಡುವುತಾರೆ
ಸಿದ್ದಯ್ಯಾ ಸ್ವಾಮಿ ಬನ್ನಿ || ಸಿದ್ಧಯ್ಯ ||

ಇಂತಪ್ಪ ಮೋಡಿಯಾಟದಲ್ಲಿ ಗುರುವೂs
ಈ ಮೋಡಿಕಾರರು ಘನ ವಿದ್ಯಕಾರರು ಇವರಲ್ಲ
ಇವರಿಗೆ ಶಾಪ ಕೊಟ್ಟು ಮುಂದಕ್ಕೋಗಬೇಕಂತ್ಹೇಳಿ
ಕೇಳಿರಣ್ಣಾ ಮೋಡಿಕರರೆ
ಈಗಲೀಗ ನೀವು ಸುಳ್ಳು ಹೇಳಿ ಬಾಳಿಬದಕ್ ಬೇಕೆಂದರೂ ಕೂಡ

ನಿಮ್ಮ ಬಾಯಲಿ ಆಡುವ ಮಾತು
ನಿಜವಾಗಿ ಬರಲಪ್ಪs || ಸಿದ್ಧಯ್ಯ ||

ನೀವು ಆಡಿದಂತಾ ಮಾತು
ನಿಜವಾಗಿ ಬರಬೇಕು
ನಿನ್ನ ಬಾಯಲಿ ನನ್ನ ಕಂದ
ಸುಳ್ಳುಬರಲು ಬಾರದು
ಎನುತೇಳಿ ನನ ಗುರುವು
ಎತ್ತಿಶಾಪ ಗುರುವು
ಕೊಟ್ಟುಬುಟ್ಟು ನನ್ನಪ್ಪ
ಅಯ್ಯಾ ರಾಚಪ್ಪಾಜಿಯವರು
ಚೆನ್ನಾಮ್ಮಾಜಮ್ಮನ ದೇವಾ
ವಂದಿಗೆ ಕರ ಕಂಡು
ನನ್ನ ಧರೆಗೆ ದೊಡ್ಡವರ ಬಳಿಗೆ
ಓಡಿ ಓಡಿ ಬರುವುತಾರೆ || ಸಿದ್ಧಯ್ಯ ||

ಓಡೋಡಿ ಬಂದರು ದೇವಾ
ಜಗತ್ತು ಗುರು ಅಲ್ಲಾಮಾಪ್ರಭು ಮಂಟೇದ ಲಿಂಗಯ್ಯ
ಪರವಸ್ತು ಪಾವನ ಮೂರ್ತಿ ಈ ಧರೆನೆಲ್ಲಾ ತೂಕಮಾಡಿ ಬಂದಂಥs
ಧರೆಗೆ ದೊಡ್ಡವರು ತಾವಾಗೇ ಬಿದ್ದು
ಬಿದ್ದರೆ ತಿಳಿದು ಮೇಲಕ್ಕೆ ಎದ್ದು, ಎರಡು ಕಣ್ಣು ಹೊಸಕುತ್ತಿದ್ದರು
ಅದೇ ಹೊತ್ತಿನಲ್ಲಿ ಕಿಡುಗಣ್ಣುರಾಚಪ್ಪಾಜಿಯವರು
ಚೆನ್ನಮ್ಮನಾ ಕರೆತಂದು ಧರೆಗೆ ದೊಡ್ಡವರ ಮುಂಭಾಗದಲ್ಲಿರಿಸಿಕೊಂಡು

ಗುರುವಿನ ಪಾದಕೆ
ಗುರುವೆ ಬಗ್ಗಿ ಶರುಣು ಮಾಡುತಾರೆ || ಸಿದ್ಧಯ್ಯ ||

ನನ್ನ ಧರೆಗೆ ದೊಡ್ಡವರಿಗೆ
ಎತ್ತಿ ಶರಣು ಮಾಡುತಾರೆ || ಸಿದ್ಧಯ್ಯ ||

ಶರಣು ಮಾಡಿದ ಮಗನs
ಕಣ್ಣಿಂದ ನೋಡಿ ಜಗತ್ತು ಗುರೂs
ಏನಪ್ಪಾ ನನ ಕಂದ ರಾಚಪ್ಪಾಜಿ
ನಾನು ಮಲಗಿ ನಿದ್ರೆ ಮಾಡುವಾಗ ಕಂದಾs
ಗುರುದೇವಾ ನಿಮ್ಮ ಮುತ್ತಿನ ಜೋಳಿಗೆ ಕಾಯ್ಕೊಂಡು
ನಿಮ್ಮ ತಲೆದಸಿ ಇರುತೀನಿ ಪಾವಾಡಿಸಿ ನಿದ್ರೆ ಮಾಡಿ ಅಂತೇಳ್ದೆ
ನನ ಮುತ್ತಿನ ಜೋಳಿಗೆ ಮಾಯದ ಬೂದಿ ಮಲೆಯಾಳದ ಕಪ್ಪು
ತಗಂಡು ಎಲ್ಲಿಗೊರಟೋಗಿದ್ದೆ ಕಂದಾ
ಈ ಮಗಳು ಯಾರಪ್ಪಾ ಕಂದಾ ಎಂದರು
ಜಗತ್ತು ಗುರುವೆ ಮೂಡಾಗ್ಲಿ ಹೋಗಪ್ಪ ಪಡ್ಲಾಗಿ ಹೋಗು
ಬಡಗಲಾಗೆ ಹೋಗು ಕಂದಾ
ಮೂರು ದಿಕ್ಕಿಗೆ ಎಲ್ಲಾರೂ ಹೋಗಿ
ಆಸರಕೆ ಬೀಸರಕೆ ತೀರಿಸು
ತೆಂಕಲಾಗೆ ಹೋಗಬೇಡ
ಎಂದು ಹೇಳಬುಟ್ರಲ್ಲ ಗುರುದೇವಾ
ಏನು ಇರಬೌದು ಆ ಕಾಡಲ್ಲಿ
ತೆಂಕಲ ಕಾಡಾ ಕಣ್ಣಲಿ ನೋಡಿಬರಬೇಕು ಅಂತೇಳಿ
ನಾನು ಹೊರಟೋದೆ ಗುರುದೇವಾ
ಅಲ್ಲಿ ಮೋಡಿಕಾರರ ಕೈಗೆ ಸಿಕ್ಕೋಗಿಬಿಟ್ಟೆ
ನಿಮ್ಮಾs ಕಪ್ಪು ಧೂಳುತದ ಮಹಿಮಯನೆಲ್ಲಾನು

ನಿಮ್ಮ ಕಪ್ಪುದೂಳ್ತದೂಳಿಗೆ ನಾನು
ಗೆದ್ದೆನೊ ಮಾಯಕಾರಾs || ಸಿದ್ಧಯ್ಯ ||

ನಿಮ್ಮ ಕಪ್ಪು ದೂಳ್ತದದ ದೇವಾ
ಮಹಿಮೆಯಿಂದ ಗುರುವೆ
ಮೋಡಿಕಾರರ ಗುರುವೆ
ಮೋಡಿಕಾರರ ಗುರುವೆ
ಸೋಲಿಸಿದೆ ಗುರುವೇ
ನಿಮ್ಮ ಪಾದಪೂಜೆ ಮಾಡೋಕೊಬ್ಬಳ
ಶಿಶು ಮಗಳ ಪಡೆದು ತಂದೆ || ಸಿದ್ಧಯ್ಯ ||

ನಿಮ್ಮ ಪಾದ ಪೂಜೆ ಮಾಡದಕ್ಕೆ ಸ್ವಾಮಿs
ಈ ಚನ್ನಾಜಮ್ಮನ ಮೋಡಿ ಆಟದಲ್ಲಿ ಗೆದ್ದು
ಕರಕಂಡು ನಿಮ್ಮ ಬಳಿಗೆ ಬಂದೆ ಗುರುದೇವಾ ಅಂದರು
ರಾಚಪ್ಪಾಜಿ ನಾನು ಪಾವಡಿಸಿ ನಿದ್ರೆ ಮಾಡೋದ್ರೊಳಗಾಗಿ
ಮೋಡಿಕಾರರ ಹೋಗಿ ಗೆದ್ದು
ಈಗಲೀಗ ಈ ಶಿಶು ಮಗಳ ಪಡೆಕೊಂಡು
ಬಂದುದಕ್ಕೆ ಸರಿವೊಯ್ತಲ್ಲಾ ಕಂದಾ
ಆ ಮೋಡಿಯಾಟದಲಿ
ನೀನೇನಾದ್ರೂ ಸೋತಿದ್ರೆ ಕಂದಾ
ಬದುಕಿ ಬರುತಿದ್ಯಾ ಮಗನೆ

ಬಂದು ನನಗೆ ನೀನು
ಶಿಶುಮಗನಾಗುತಿದ್ದ್ಯಾ || ಸಿದ್ಧಯ್ಯ ||

ಅಪ್ಪಾ ನೀ ಬಂದು ಕಂದಾ
ನನಗೆ ಶಿಶು ಮಗನು ಆಗುತಿದ್ದ್ಯಾ ಕಂದಾ
ನನ್ನ ಮಾತು ಮೀರಿ ನನ್ನ ಮಗನೆ
ಎಲ್ಲಿಗೂ ಹೋಗಬೇಡ || ಸಿದ್ಧಯ್ಯ ||

ಈ ಗುರು ಕೊಟ್ಟ ಮಾತಿಗೆ
ತಪ್ಪಿ ನಡೆಯಬೇಡ
ಈ ಗುರು ಕೊಟ್ಟ ಒಡೆತನಕ್ಕೆ
ಮೀರಿ ನಡೆಯಬೇಕು
ನಾವು ಕೊಟ್ಟರೆ ವರ ಮಗನೆ
ಇಟ್ಟರೆ ಶಾಪವಯ್ಯ || ಸಿದ್ಧಯ್ಯ ||

ಕೊಟ್ಟರೆ ನಾನು ವರ ಮಗನೆ
ಇಟ್ಟುಬುಟ್ರೆ ಶಾಪ ನನ ಕಂದಾs
ನನ್ನ ಶಾಪಕ್ಕೆ ಸಿಕ್ಕಿ ನಾಳೆ ದಿನ ನರಳಬೇಡ ನನ ಕಂದಾ
ಈ ಗುರು ಮಾತ ತಿರಸ್ಕಾರ ಮಾಡಿಬುಟ್ಟು
ಇನ್ನೆಲ್ಲೂ ಹೋಗಬೇಡ ಮಗನೆ ಎಂದರು
ಆಗಬಹುದು ಗುರುದೇವಾ ಆಗಲಿ ನನ್ನಪ್ಪ
ನಿಮ್ಮ ಮಾತ ಮೀರಿ ಗುರುವು ನಾನೆಲ್ಲಿ ಹೋಗದಿಲ್ಲ ಗುರುದೇವಾ
ಹಾಗಂದು ಕಿಡುಗಣ್ಣು ರಾಚಪ್ಪಾಜಿಯವರು

ಗುರುವಿನ ಪಾದಕೆ
ಬಗ್ಗಿ ಶರಣು ಮಾಡುತಾರೆ || ಸಿದ್ಧಯ್ಯ ||

ಬಾರವ್ವ ನನ ಕಂದ ಬವ್ವ ಮಗಳೆ
ಬಾರೋ ನನ ಕಂದ ಶಿಶು ಮಗಳೆ

ಈಗಲೀಗ ರಾಚಪ್ಪಾಜಿಯವರಿಗೆ ಶಿಶು ಮಗಳಾಗಿ ಬಂದಿಯವ್ವಾ
ನನಗೂ ಕೂಡ ನೀನು ಶಿಶು ಮಗಳಾಗಿ ಬಂದೀಯ ಕಂದಾ
ಬವ್ವಾ, ಎನುತೇಳಿ ಗುರುದೇವ
ರಾಚಪ್ಪಾಜಿಯವರ ವಂದಿಗೆ ಕರಕೊಂಡು
ಹಿರೇಚನ್ನಾಜಮ್ಮನ ಕರಕೊಂಡು
ಹೊನ್ನರಳಿ ಕರಲಕಟ್ಟಿ ಜಗಲಿ ಬಿಟ್ಟುಬಿಟ್ಟು ಗುರುದೇವಾ

ಈಗ ಇಲ್ಲಿಂದ ಗುರುವೆ
ನಾ ಇನ್ನೆಲ್ಲಿಗೆ ಹೋಗಲಪ್ಪಾ || ಸಿದ್ಧಯ್ಯ ||

ಅಯ್ಯಾ ವಿಜೇನಗರ ದೇವ
ಬಿಟ್ಟು ಬಿಟ್ಟು ನನ ಗುರುವು
ಅರಳಿಕಟ್ಟೆ ಜಗುಲಿ
ಬಿಟ್ಟುಬಿಟ್ಟು ನನ್ನಪ್ಪ
ಈ ಹಾಲು ಗುರುಗಾನಿ ಗರುವೆ
ಆದಿಗುರು ದಯಮಾಡುತಾರೆ || ಸಿದ್ಧಯ್ಯ ||

ಗುರವೆ ಹೀರೇಚನ್ನಾಜಮ್ಮನ
ವಂದಿಗೆ ಕರಕೊಂಡು
ಕಿಡುಗಣ್ಣು ರಾಚಪ್ಪಾಜಿ
ಶಿಶು ಮಗನ ಮಾಡಿಕೊಂಡು
ಈ ಹಾಲು ಗುರುಗಾನಿಗೆ
ಧರೆಗೆ ದೊಡ್ಡವರು ತಾನಾಗೆ ಬರುವಾಗ
ಈ ಹಾಲುಗುರು ನಿಂಗಮ್ಮನ ಮಗಳಲ್ಲೊ ಗುರುದೇವಾ || ಸಿದ್ಧಯ್ಯ ||

ಅಯ್ಯಾ ಹಾಲು ಗುರು ನಿಂಗಮ್ಮನ
ಮಗಳು ಎಂದರೆ ಗುರುವೆ ಮಟ್ಟ ಮಂಗಳವಾರ
ಸುಟ್ಟು ಸುಕ್ರವಾರ ತುಂಬಿದ ಸೋಮವಾರ
ತುಂಬಿದವಮಾಸ್ಯೆ ಗುರವೆ ಗುರುದೇವ
ಅವಳು ಒಂದು ಮನೆ ಒಳಗೆ
ಒಬ್ಬಳೆ ಪ್ರಾಣಬಿಟ್ಟಳಂತೆ || ಸಿದ್ಧಯ್ಯ ||

ಹಾಲು ಗುರು ನಿಂಗಮ್ಮನ ಮಗಳು ದೇವಾ
ಮಟ್ಟು ಮಂಗಳವಾರ ಸುಟ್ಟು ಶುಕ್ರವಾರ
ತುಂಬಿದ ಸೋಮವಾರ ಸೂರ್ಯ ಮೂಡುವಂತ ಟೈಮಿನಲ್ಲಿ
ತುಂಬಿದ ಅಮವಾಸ್ಯೆ ದಿಸ ತಾ ಸ್ವತಃ ಪ್ರಾಣ ಬಿಟ್ಟಿದ್ರಂತೆ
ಹಾಲು ಗುರು ಪಟ್ಟಣದ ಜನಗಳೆಲ್ಲಾ ಕೂಡಿ
ಸತ್ತ ಶವಾನೆ ಒಪ್ಪಮಾಡಿಬಿಟ್ಟು ಹಿಂದುರಿಗಿ ಹೋಗುತ್ತಿದ್ದರು
ಅದೇ ಟೈಮಿನಲ್ಲಿ ಧರೆಗೆ ದೊಡ್ಡವರು
ಈಗಲೀಗ ರಾಚಪ್ಪಾಜಿ ಕರಕೊಂಡು
ಹಿರೇ ಚೆನ್ನಾಜಮ್ಮನ ಕರಕೊಂಡು
ಆ ಹೆಣ ಹೊತ್ತುಕೊಂಡು ಹೋದ ಮಾರ್ಗದಲ್ಲಿ
ಈ ದೇವ್ರು ಬರುತ್ತಿದ್ದರಂತೆ
ಈವತ್ತು ತುಂಬಿದವಾಮಾಸ್ಯೆಯಾದ್ರಿಂದ
ಈವತ್ತಿನಾ ದಿವಸ ತುಂಬಿದ ಸೋಮವಾರವಾದ್ರಿಂದ
ಈಗ ಸತ್ತು ಸ್ವರ್ಗ ಸೇರುತಕ್ಕಂತ ಶಿಶುಮಗಳನ್ನೆ
ನಾನು ಮಗಳ ಮಾಡಕಬೇಕಲ್ಲ
ತುಂಬಿದಾ ಅಮವಾಸ್ಯೆ ತುಂಬು ಸೋಮವಾರ
ಸತ್ತಂತಾ ಪ್ರಾಣಿ ನಾಳೆ ದಿವಸ ನನಗೆ ಬೇಕಾದ ಬದುಕು ಅಂತೇಳಿ
ಧರೆಗೆ ದೊಡ್ಡವರು ಮಂಟೇದಲಿಂಗಪ್ಪ
ಆ ಊರ ಜನಗಳೆಲ್ಲಾ ಅವರವರ ಮನೇಗೋದ ಕಾಲದಲ್ಲಿ
ಸತ್ತ ಶವದಾ ಬಳಿಗೆ ಬಂದು ಶವದ ಮುಂಭಾಗದಲ್ಲಿ
ಬಲದಲ್ಲಿ ರಾಚಪ್ಪಾಜಿ ಎಡದಲ್ಲಿ ಹಿರೇ ಚನ್ನಾಜಮ್ಮ
ಮಧ್ಯದಲ್ಲಿ ಧರೆಗೆ ದೊಡ್ಡವರು
ಸತ್ತಾ ಶವದಾ ಮುಂಭಾಗದಲ್ಲಿ ಕೂತಗೊಂಡು
ಆರುಶಾಸ್ತ್ರ ಹದಿನೆಂಟು ಪುರಾಣ ಪಾರಾಯಣ ಓದಿ

ಕಪ್ಪು ಧೂಳತನೆ ತಗದು ಸತ್ತಾ ಸಮಾದಿ ಮೇಲೆ
ಕಪ್ಪು ಧೂಳ್ತ ಪಿಡಿದರಂತೆ || ಸಿದ್ಧಯ್ಯ ||

ಅಯ್ಯಾ ಸತ್ತ ಪ್ರಾಣವ
ಬಿಟ್ಟಿದ್ದದಂತ ಪ್ರಾಣಿ
ಶವಾ ಬಿಟ್ಟು ದೇವಾ
ಭೂಮಿಯಿಂದ ಗುರುವೆ
ಹುತ್ತಾ ಮೂಡಿದ
ಅಪ್ಪಂದ ನನ ಗುರುವು
ಅವಳು ಕಿಲಿಕಿಲಿ ನೆಗುತ
ದೇವ ಮೇಲಿಕ್ಕೆ ಎದ್ದಾಳಂತೆ || ಸಿದ್ಧಯ್ಯ ||

ಅಪ್ಪಾ ಎತ್ತಣ ನಾಡವರು
ನೀವು ಯಾವ ರಾಜ್ಯದವರು
ನನ್ನ ಸತ್ತಂತ ಪ್ರಾಣಿಯಾ
ಪಡೆದೆಯಲ್ಲೋ ನನ ತಂದೆ
ಅಪ್ಪಾ ನಿಮಗೆ ಮಗಳು ಆಗುತೀನಿ
ನಿಮಗೆ ಶಿಷ್ಯಳಾಗುತೀನಿ || ಸಿದ್ಧಯ್ಯ ||

ನಿಮಗೆ ಶಿಷ್ಯಳಾಯ್ತೀನಿ ದೇವಾ
ನಿಮಗೆ ಮಗಳಾಯ್ತೀನಿ ನನ್ನಪ್ಪಾ ನೀವು ಯಾರು ತಂದೆ
ನಿಮ್ಮ ಹೆಸರೇಳಿಬಿಡಿ ಗುರುವು ಎಂದರು
ಕಂದಾ, ನಾನಾಗಿದ್ದು ನಾನು ಪಡೆದ ಮೇಲೆ
ಮಗಳಾಯ್ತಿನಿ ಎಂದು ಕೇಳಿದ್ಯಲ್ಲವ್ವ
ತುಂಬಿದಮವಾಸ್ಯೆ ತುಂಬು ಸೋಮವಾರ ಕಂದಾ
ನೀನು ಸತ್ತು ಪ್ರಾಣ ಬಿಟ್ಟು ಬಿಟ್ಟದ್ದೆಲ್ಲೋ ಕಂದಾ
ಹಾಲುಗುರು ನಿಂಗಮ್ಮನ ಮಗಳೆನ್ನುವಂತ ಹೆಸರು
ಈ ಸಮಾಧಿವಳಗೆ ಹಾಳಾಗುಬುಡ್ಲಿ

ಧರೆಗೆ ದೊಡ್ಡವರ ಶಿಶು ಮಗಳು
ನಿನ್ನ ‘ದೊಡ್ಡಮ್ಮ ತಾಯಿ’ ಎಂತ
ನಾಮಕರಣ ಆಗಲವ್ವ || ಸಿದ್ಧಯ್ಯ ||

ಅಯ್ಯಾ ದೊಡ್ಡಮ್ಮ ತಾಯಿ ಅಂತ
ನಾಮಕರಣ ನಿನಗೆ
ಅಗಲಿ ನನ ಕಂದಾ
ಹಾಗಂದು ನನ ಗುರುವು
ದರೆಗೆ ದೊಡ್ಡಪ್ಪಾ
ಇಂಥ ತೋಪಿನ ದೊಡ್ಡಮ್ಮ ಎಂದು
ನಾಮಕರಣ ಇಟ್ಟರಲ್ಲ || ಸಿದ್ಧಯ್ಯ ||

ಅವ್ವಾ ಬಾರವ್ವ ನನ ಕಂದಾ
ಬವ್ವ ನನ ಮಗಳೆ
ನನ್ನ ತೋಪಿನಾ ದೊಡ್ಡಮ್ಮ
ನನ್ನ ಹಿರೇ ಚನ್ನಾಜಮ್ಮ
ನನ್ನ ಕಿಡುಗಣ್ಣು ರಾಚಪ್ಪಾಜಿ
ಬನ್ರೊ ನನ್ನ ಕಂದಾ
ಬನ್ರೊ ನನ್ನ ಮಕ್ಕಳೆ
ಈ ನರಲೋಕದ ಒಳಗೆ
ನಿಮ್ಮ ಭೂಲೋಕದ ಒಳಗೆ
ಈ ರಾಚಪ್ಪಾಜಿಯವರಿಗೆ
ಧರುಮ ಪತ್ನಿ ಮಾಡತೀನಿ || ಸಿದ್ಧಯ್ಯ ||

ನಿನ್ನ ರಾಚಪ್ಪಾಜಿಯವರಿಗೆ
ಏಳವ್ವ ದೊಡ್ಡಮ್ಮ
ಧರುಮ ಪತ್ನಿ ನಿನ್ನ ಮಾಡುತೀನಿ
ನಿನಗೆ ಹರಿಸಿನ ಕುಂಕುಮ ಕೊಟ್ಟು ಸ್ಥಿರವಾಗಿ ಇಡುತ್ತೀನಿ
ನಿನಗೆ ಮುತ್ತೈದೆ ಭಾಗ್ಯ
ನಿಮ್ಮಬ್ಬರಿಗೂ ಕೊಡುತ್ತೀನಿ
ಸತಿಪತಿ ಉಳ್ಳಾದವರ
ಮಾಡೂತೀನಿ ಎಂದರಲ್ಲಾ || ಸಿದ್ಧಯ್ಯ ||

ರಾಚಪ್ಪಾಜಿಗೂ ನಿನಗೂವೆ ಕಂದಾs
ಧರ್ಮ ಪತ್ನಿ ಮಾಡುತೀನಿ ಕಂದಾ
ನಿನಗೆ ಮುತ್ತೈದೆ ಭಾಗ್ಯ ಸ್ಥಿರವಾಗಿ ಕೊಡುತೀನಿ
ಅಕ್ಕಸ್ಥೆ ಕುಂಕುಮದ ಭಾಗ್ಯ ನಿನಗೆ ಘನಭಾಗ್ಯ ಕೊಡುತೀನಿ ಕಂದ

ರಾಚಪ್ಪಾಜಿ ಕೈಯಾ ಹಿಡಿಸಿ
ಕನ್ಯಾದಾನ ಮಾಡುತೀನಿ || ಸಿದ್ಧಯ್ಯ ||

ಇಂತಿಂಥ ದೇವ ಮಾನವರ ಮುಂದೆ ಗುರುವುs
ವಿಷ್ಣು ಈಶ್ವರ ಬ್ರಹ್ಮ ತಿರುಮೂರ್ತಿ
ಈಗಲೀಗ ಕುಲಕೊಬ್ಬ ಕೋಟಿಗೊಬ್ಬ ಶರಣ
ನರಲೋಕದ ಸತ್ಯಾ ಶರಣರ ಮುಂದೆ ಗುರುವು
ಧರೆವೊಳಗೆ ಧರೆಗೆದೊಡ್ಡವರು
ಈ ರಾಚಪ್ಪಾಜಿಗೂ ತೋಪುನ ದೊಡ್ಡಮ್ಮನಗು
ಕೈಯಿಡಿಸಿ ಕನ್ಯಾದಾನ ಮಾಡಿಕೊಂಡು ಗುರುದೇವಾ
ಎಲ್ಲಾ ದೈವ ದೇವ ಮಾನವರ ಕೈಲಿ
ಕಿಡುಗಣ್ಣು ರಾಚಪ್ಪಾಜಿ ತೋಪುನ ದೊಡ್ಡಮ್ಮ
ಧರ್ಮ ಪತ್ನಿ ಆದರೂ ಅಂತೇಳಿ

ಎಲ್ಲಾ ದೇವಮಾನವರ ಕೈಲಿ
ಅವರು ಅಕ್ಕಿನಾದ್ರೂ ಹಿಡಿಸುತಾರೆ || ಸಿದ್ಧಯ್ಯ ||

ಅಯ್ಯಾ ರಾಚಪ್ಪಾಜಿಯವರಿಗೆ
ದುಡುವುಳ್ಳು ದೊಡ್ಡಮ್ಮನ
ಧರ್ಮದ ಪತ್ನಿ ಮಾಡಿ
ಅಯ್ಯಾ ಮೂರುಜನ ಮಕ್ಕಳ
ಗುರುವೆ ವಂದಿಗೆ ಕರಕೊಂಡು
ಈಗ ಎಲ್ಲಿಂದ ಎಲ್ಲಿಗೆ ನಾನು
ಹೋಗಬೇಕು ಎಂದರಲ್ಲಾ || ಸಿದ್ಧಯ್ಯ ||

ಈಗಲೀಗ ನರ ಲೋಕಕ್ಕೆs ಮತ್ತೈದೆ ಭಾಗ್ಯ ತಂದೀ
ಈ ನಡೆದ ನರಲೋಕಕ್ಕೆ ಕನ್ಯಾದಾನ ಆಗುವಂತ ಫಲ ಪಡೆತಂದಿ
ಈಗ ರಾಚಪ್ಪಾಜಿಗೂ ದೊಡ್ಡಮ್ಮ ತಾಯಿಗೂ ಕೈಯಿಡಿಸಿ
ಕನ್ಯಾದಾನ ಎಲ್ಲಾ ದೈವ ದೇವ ಮಾನವರ ಕೈಲಿ ಮಾಡಿಸಿ
ಈಗ ನರಲೋಕ್ಕೆ ಮುತ್ತೈದೆ ಭಾಗ್ಯ
ತಂದಂತ ತೋಪಿನಾ ದೊಡ್ಡಮ್ಮಂತೇಳಿ
ನಾಮುಕರುಣಾ ಕಟ್ಟಿಸಿಕೊಂಡು
ಹಿರೇ ಚೆನ್ನಾಜಮ್ಮಾನ ಕರಕೊಂಡು
ಕಿಡುಗಣ್ಣು ರಾಚಪ್ಪಾಜಿನ ಕರಕೊಂಡು
ದುಡುವುಳ್ಳ ದೊಡ್ಡಮ್ಮ ತಾಯಿ ಕರಕೊಂಡು
ಧರೆಗೆ ದೊಡ್ಡವರು ಮಂಟೆದಾಲಿಂಗಪ್ಪ

ಇನ್ನು ಮುಂದಕ್ಕೆ ನನ್ನ ಸ್ವಾಮಿ
ಬಿಜಯ ಮಾಡುತಾರೆ || ಸಿದ್ಧಯ್ಯ ||

ಗುರುವೆ ಇನ್ನು ಮುಂದಕ್ಕೆ
ಧರೆಗೆ ದೊಡ್ಡವರು
ನನ್ನ ಮಂಟೇದ ಲಿಂಗಪ್ಪ
ನನ್ನ ಮಾಯಕಾರದ ಒಡೆಯ
ಈಗ ಎಲ್ಲಿಂದ ಎಲ್ಲಿಗೆ ನಾವು
ಹೋಗಬೇಕು ಎಂದರಲ್ಲಾ || ಸಿದ್ಧಯ್ಯ ||

ಈಗಲೀಗ ಗುರುವುs ಈಗ ಎಲ್ಲಿಂದ ಎಲ್ಲಿಗೆ
ಹೋಗಬೇಕಂತೇಳಿ ಆಗಲೀಗ ದೂರ ದೃಷ್ಟಿವೊಳಗೆ
ಮಾಯ್ದ ಬಿರುದಿನಲ್ಲಿ ಕಣ್ಣಿಂದ ನೋಡಿದರು

ಸಕ್ಕರೆ ಪಟ್ಟಣದಲ್ಲಿ
ದೊರೆ ಮಕ್ಕಳು ಅಂದ್ರೆ ಗುರುವೆ
ಭಾರಿ ದೊಡ್ಡವರಂತೆ || ಸಿದ್ಧಯ್ಯ ||

ಅಯ್ಯಾ ಸಕ್ಕರೆ ಪಟ್ಟಣ ದೇವಾ
ದೊರೆಗಳು ಎಂದರೆ
ಅಯ್ಯಾ ಹೊನ್ನು ಚಿನ್ನಕ್ಕಾಗಿ
ಮುತ್ತು ರತ್ನಕ್ಕಾಗಿ
ಹಣ ಕಾಸುಗಾಗಿ
ಬೆರಳಿ ಬಂಗಾರಕ್ಕಾಗಿ
ಅವರು ಬಾಳು ಬಾಲಾಟದಲ್ಲಿ
ಪುಣ್ಯವಂತರಾಗಿ ನಾವು
ಬಾಳುಬೇಕು ಎನುತೇಳಿ
ನಾವು ಸ್ಥಿತಿವಂತರಾಗಿ
ಬದುಕಬೇಕು ಎನುತೇಳಿ
ಅವರು ಕೆಟ್ಟ ಭಾವನೆ ಮಾಡಿಕೊಂಡು
ವಿಷದ ಹೊಳೆಗೆ ದುಡುಗುತಾರೆ || ಸಿದ್ಧಯ್ಯ ||