ಈ ಸಿದ್ದಪ್ಪಾಜಿ ನಿಂತಿರುವುದು ಧರೆಗೆ ದೊಡ್ಡವರಿಗೆ ಗೊತ್ತು
ಈ ಸಿದ್ದಪ್ಪಾಜಿ ಏನು ತಿಳಿದರು ಅಂದ್ರೆ
ನಮ್ಮ ಗುರು ಮಗಲಿ ನಿದ್ರೆ ಮಾಡುತ ಇರಬಹುದು ಅಂತ ತಿಳಕಂಡರು
ಆಗ ನಿಂತು ಕಂದಾ ಕಾಲೆಲ್ಲಾ ಸೋತೋದೋ
ಬೀಸಿದಂತ ತೋಳು ಬೆರಗಾಯಿತು
ನೋಡುವಂತಾ ಕಣ್ಣು ಕಾಣಗದಂಗಾಯ್ತು
ಸಿದ್ದಪ್ಪಾಜಿಯವರ ಸಂಕಟ ಧರೆಗೆ ದೊಡ್ಡವರಿಗೆ ಗೊತ್ತಾಯ್ತು
ಅವರು ಯರಗಣ್ಣ ಬುಟ್ಟು ಗುರುವೆ
ಅರಗಣ್ಣ ತಗದರಲ್ಲಾ || ಸಿದ್ಧಯ್ಯ ||
ಗುರುವೆ ಯರಗಣ್ಣ
ಬಿಟ್ಟು ಗುರುವೆ
ಯರಗಣ್ಣಿನವೊಳಗೆ
ಸಿದ್ದಪ್ಪಾಜಿಯವರ
ನೋಡವರೆ ನನ್ನಪ್ಪಾ
ಅಯ್ಯಾ ನಿಂತಾ ಜಾಗದ ಒಳಗೆ
ಕೈಯೆತ್ತಿ ಮುಗಿದಾನಾಗ || ಸಿದ್ಧಯ್ಯ ||

ಧರೆಗೆ ದೊಡ್ಡವರು ಯಾವಾಗ ಕಣ್ಣು
ಬಿಟ್ಟು ನೋಡುದುರೋ
ನಿಂತ ಜಾಗದಲ್ಲೇ ಕೈಯೆತ್ತಿ ಮುಗದ
ಕೈಮುಗದ ಮಗನ ನೋಡಿದರು ಧರೆಗೆ ದೊಡ್ಡವರು
ಕೈಮುಗದಾ ಮಗನ ಆಗಲೀಗ ಕಣ್ಣು ಬಿಟ್ಟು ನೋಡಿಬಿಟ್ಟು
ಧರೆಗೆ ದೊಡ್ಡವರು
ಛೀ ನಿನ್ನ ವಂಶ ಹಾಳಾಗೋಗ
ನಿನ್ನ ವಂಶ ತೊಡೆದೋಗ
ಇನ್ನು ನಿನ್ನ ಅಹಂಕಾರ ಬಯಲಾಗಿಲ್ಲ
ಧೋರಣೆ ಬಯಲಾಗಿಲ್ವ ಕೆಂಪಣ್ಣಾ
ನಡಾಕಟ್ಟಿ ನಿಂತು ಪಾದ ಜೋಡಿಸಲಿಲ್ಲ ಕೈಯೆತ್ತಿ ಮುಗೀಲಿಲ್ಲ

ಲೋ ನಿಂತಂತ ಜಾಗದಲ್ಲಿ
ಕೈಯೆತ್ತು ಮಾಡಬಹುದಾ || ಸಿದ್ಧಯ್ಯ ||

ನೀನು ನಿಂತಕಂಡ ಜಾಗದೊಳಗೆ
ನಿಂತಗಂಡು ಶರಣ ಮಾಡಬಹುದೆ
ಹಾಗಂದವರೆ ನನ್ನ ಗುರುವು
ಧರೆಗೆ ದೊಡ್ಡವರ ಮಾತ
ಕೇಳಿಕೊಂಡು ಗುರುವು
ನೀಲಿ ಸಿದ್ದಪ್ಪಾಜಿ
ತೆಪ್ಪುದೆ ನನ್ನಪ್ಪಾ ತೆಪ್ಪುದೆ ನನ್ನ ಗುರುವು
ನಾ ಮಾಡಿದಂತ ತೆಪ್ಪಾ ನೀನು
ಮನ್ನಿಸಪ್ಪಾ ಮಾಯಿಕಾರ || ಸಿದ್ಧಯ್ಯ ||

ನಾನು ಮಾಡಿದಂತಾ ತಪ್ಪು ಸ್ವಾಮಿ
ಮನ್ನಿಸಪ್ಪಾ ಜಗಂಜ್ಯೋತಿ ಧರೆಗೆ ದೊಡ್ಡಯ್ಯ ಎಂದರು
ಆಗಲೀಗ ತೆಪ್ಪುನು ಮನ್ನಿಸಬೇಕಂದ್ರೆ ಕಂದಾ
ಈಗಲೀಗ ನೀನು ಶರಣು ಮಾಡಿದ್ದು ನಾನು ಒಪ್ಪುಗೋ ಬೇಕಂದ್ರೆ ಮಗನೆ

ಲೋ ಮತ್ತೊಂದು ಸಾರಿ ಮಗನೆ
ಶರಣನ್ನೇ ಮಾಡುಕಂದಾ || ಸಿದ್ಧಯ್ಯ ||
ಗುರುವೆ ಧರೆಗೆ ದೊಡ್ಡವರಾ
ಮಾತನ್ನೆ ಕೇಳಿಕಂಡು
ನಡುವನ್ನೆ ಕಂದಾ
ಕಟ್ಟಿಕಂಡು ಕೆಂಪಣ್ಣಾ
ಪಾದವನ್ನೆ ಗುರುವೆ
ಒಂತವಕೆ ಮಡಗಿಕೊಂಡು
ಅವನು ಎರಡು ಕೈಯನ್ನೆ
ಒಂದು ಜೊತೆ ಮಾಡಿ
ನನ್ನ ಧರೆಗೆ ದೊಡ್ಡವರ ಮುಂದೆ
ಶಿರಬಾಗಿ ಮಗಲುತಾನೆ|| ಸಿದ್ಧಯ್ಯ ||

ಧರೆಗೆ ದೊಡ್ಡವರ ಮುಂದೆ ದೇವಾs
ಶಿರಬಾಗಿ ಮಲಗಿಕೊಂಡು
ಧರೆಗೆ ದೊಡ್ಡವರ ಪಾದಕೆ ತಲೆಕೊಟ್ಟ ಕೆಂಪಣ್ಣಾ
ಶಹಬಾಸ್ ಕಂದಾ ಕೆಂಪಣ್ಣ
ಈಗ ಮಾಡಿದಂತಾ ಶರಣು
ಭೂಮಿ ಭೂಲೋಕವೆಲ್ಲಾ ಒಪ್ಪುವಂತಾ ಶರಣು
ಸೂರ್ಯ ಚಂದ್ರಾದಿಗಳೆಲ್ಲ ಮೆಚ್ಚುವಂತ ಶರಣು ಮಗನೆ
ವಿಷ್ಣು ಈಶ್ವರ ಬ್ರಹ್ಮ ಒಪ್ಪುಕೊಳ್ಳುವಂತ ಶರಣು ಕಂದಾ

ಲೋ ಜಯವಾಗಲಿ ನನ್ನ ಕಂದಾ
ಎದ್ದೇಳು ಎಂದಾರಲ್ಲಾ || ಸಿದ್ಧಯ್ಯ ||

ಗುರುವೆ ಜಯವಾಗಲಿ ಮಗನೆ
ಜಯ ಜಯ ಕಂದಾ
ಎದ್ದೇಳು ಮಗನೆ
ಹಾಗಂತೇಳಿ ನನ್ನಪ್ಪಾ
ಸಿದ್ದಪ್ಪಾಜಿ ಮುಂಗೈಯಿಡಿದು
ಮೇಲಕ್ಕೆ ಎತ್ತುತಾರೆ|| ಸಿದ್ಧಯ್ಯ ||

ಸಿದ್ದಪ್ಪಾಜಿಯ ಮುಂಗೈ ಹಿಡಿದು
ಜಯವಾಗಲಿ ಕಂದಾ ಜಯವಾಗಲಿ ಮಗನೆ
ಎದ್ದೇಳು ಕಂದ ಎಂಬುದಾಗಿ ಮಗನ ಏಳಿಸಿ
ಮುಂಭಾಗದಲ್ಲಿ ನಿಲ್ಲಿಸಗಂಡು
ಕೆಂಪಣ್ಣನ ಮುಖ ಕಣ್ಣಾರೆ ನೋಡಿಬುಟ್ಟು
ಏನಪ್ಪಾ ನನ ಕಂದ ಕೆಂಪಣ್ಣಾ
ಈವತ್ತಿಗೆ ನಿನ್ನ ಅಹಂಕಾರ ಹಾಳಾಯಿತು
ಧೋರಣೆ ಬಯಲಾಯಿತು
ನಿಮ್ಮ ತಾಯಿ ತಂದೆ ಸಾಕಿದ್ದ ಅನ್ನದಾ ಮದ ನೀರಿನಾ ಮದ
ಕಾಮ ಕ್ರೋಧದ ಮದ ಇವತ್ತಿಗೆ ಎಲ್ಲಾ ಕಳೀತು ಮಗನೆ
ನಿನ ಬಂಧಾನವೆಲ್ಲಾ ಇವತ್ತಿಗೆ ಕಳೆದೋಯ್ತು ಕಂದಾ

ಕೆಂಪಣ್ಣ ಈಗಲಾರುವೆ ಕಂದಾ
ನನಗೆ ಮಗನಾದೆಯಪ್ಪಾ || ಸಿದ್ಧಯ್ಯ ||
ಕಂದಾ ಈಗಲಾದರೂ ಕಂದ
ನನಗೆ ದತ್ತು ಮಗನಾದೆಯಪ್ಪಾ || ಸಿದ್ಧಯ್ಯ ||
ಕಂದಾ ಈಗಲಾದರೂ ಕಂದಾ
ನನಗೆ ಪತ್ತು ಮಗನಾದೆಯಪ್ಪ || ಸಿದ್ಧಯ್ಯ ||
ಈಗಲಾದರೂ ಕಂದಾ
ನನಗೆ ಬಕುತನಾಗಿ ಬಂದೆಯೇನೋ || ಸಿದ್ಧಯ್ಯ ||

ಈಗಲಾದರೂ ಕಂದಾ ನನಗೆ ಬಕುತನಾದೆಯಪ್ಪಾs
ಈಗ ನನಗೆ ದತ್ತು ಮಗನಾದೆಯಾ ಕಂದಾ ಎಂದರು
ಆಯ್ತೀನಿ ಗುರುದೇವ ಆಯ್ತೀನಿ ನನ್ನಪ್ಪಾ
ಗುರುವೆ

ನಿಮ್ಮನ್ನೆ ಬಿಟ್ಟು ನಾನು
ಇನ್ಯಾರ ಸೇರನಪ್ಪಾ || ಸಿದ್ಧಯ್ಯ ||

ನಾನು ನಿಮ್ಮನೆ ಬಿಟ್ಟು
ಇನ್ಯಾರ ಸೇರಲಿ
ನಾನೆಲ್ಲಿ ಹೋಗಿ
ಬದುಕಲಿ ನನ್ನಪ್ಪಾ
ಅಯ್ಯೋ ಗುರು ಗ್ಯಾನ ಮಾಡಿಕೊಂಡು
ನಿಮಗೆ ಮಗನಾಗುತೀನಿ || ಸಿದ್ಧಯ್ಯ ||

ನಿಮಗೆ ಮಗನಾಯ್ತೀನಿ ಸ್ವಾಮಿ ಎಂದರು
ಕೇಳಪ್ಪಾ ಕೇಳು ಮಗನೆ ಕೆಂಪಣ್ಣಾ
ಸುಮ್ಮನೆ ಮುಂಭಾಗದಲ್ಲಿ ಬಂದು
ಮಗನಾಯ್ತೀನಿ ಎಂದು ಹೇಳು ಬಿಟ್ಟೆಯಲ್ಲೊ ಕಂದಾ
ಕೆಂಪಣ್ಣಾ ಹನ್ನೆರಡು ವರ್ಷದಲ್ಲಿ ಆಗಲೀಗ
ನನ್ನ ನೀನು ನೋಡಿದ್ದಿ ಕಂದಾ
ಹನ್ನೆರಡು ವರ್ಷದಿಂದ ನಿನ್ನ ಮೊಕಾನೇ ನಾನು ನೋಡಿರಲಿಲ್ಲ
ನನ್ನ ಮೊಕ ನೀನು ನೋಡಿರಲಿಲ್ಲ
ಅಪ್ಪೊಪ್ಪರದ ಮಗನಾಗಿ ಬಂದು ನನ್ನ
ಮುಂಬಾಗದಲ್ಲಿ ನಿಂತಿದ್ದೀಯಪ್ಪಾ

ನಿಮ್ಮ ತಂದೆಗೆ ನನ್ನ ಮಗನೆ
ಏನು ಉಲುಪೆ ತಂದೀಯಪ್ಪಾ|| ಸಿದ್ಧಯ್ಯ ||

ನಿಮ್ಮ ತಂದೆಗೆ ಕಂದಾ
ನೀನು ಏನು ತಂದಿದಿಯೋ
ಎಳೆಯವನೆ ಕೆಂಪಣ್ಣಾ
ನನ್ನ ಮಗ ತಂದ ಬದುಕು ಅಂತ
ಅತೀ ಸಂತೋಷದೊಳಗೆ
ಊಟ ಮಾಡುತೀನಿ
ಮಗನೆ ಏನಾದರೂ ತಂದಿದ್ದರೆ
ಕೊಟ್ಟುಬುಡಪ್ಪ ಎಂದಾರಲ್ಲೋ || ಸಿದ್ಧಯ್ಯ ||

ಕೆಂಪಣ್ಣಾ ಮಾರುವಳ್ಳಿ ಗ್ರಾಮಕೆ ಬಂದು
ನಿಮ್ಮ ತಾಯಿ ತಂದೆಯನ್ನ ನೀನು ಯಾತಕ್ಕೆ ಕೇಳಿದೆಯಂದರೆ
ಈಗಲೀಗ ಹಣ ಉಳ್ಳರರಿಗೆ ಹಣದಾಸೆ
ಚಿನ್ನ ಬೆರಳಿ ಉಳ್ಳಾದವರಿಗೆ ಚಿನ್ನ ಬೆರಳಿಯಾಸೆ
ನಮ್ಮಂತ ಸಾಧು ಸತ್ಸುರುಷರಿಗೆ ಮಕ್ಕಳನ್ನ ಕಂಡ್ರೆ ಬಲು ಆಸೇ
ಭಾಗ್ಯ ಭಾಗ್ಯಕ್ಕೆಲ್ಲ ಮಕ್ಕಳ ಭಾಗ್ಯವೇ ದೊಡ್ಡದು ಅಂತೇಳಿ
ಭೂ ಲೋಕವೆ ಕೊಂಡಾಡುತ್ತಿತ್ತು
ಅದಕ್ಕಾಗಿ ನನಗೊಬ್ಬ ಮಗ ಬೇಕಂತೇಳಿ
ನಿಮ್ಮ ತಾಯಿ ತಂದೇನ ಕೇಳಿದ್ದಿ
ನಿಮ್ಮ ತಾಯಿ ತಂದೆ ಕೊಡದೆವೋದ ಕಾರಣ
ಇಂತಾ ಶಿಕ್ಷೆ ನಿನಗೆ ಮಾಡಿದ್ದಿ
ಕೆಂಪಣ್ಣಾ
ನನಗೇನು ಆಸೆಯಿಲ್ಲ ಕಣಪ್ಪ
ಯಾವಾಸೆಗೆ ನಾನು ನಿನ್ನ
ಪಡೆಕಂಡು ಬಂದೀಯಂದ್ರೆ
ಒಬ್ಬ ಮಗನ ಪಡೆಕಂದ್ರೆ
ಉಣ್ಣೊವೊತ್ತಿಗೆ
ಊಟ ಕೊಡುತಾನೆ
ದಾವು ಬಂದೊತ್ತಿಗೆ
ನೀರು ಬುಡುತಾನೆ ಎಂತೇಳಿ
ನಿನ್ನ ಒಬ್ಬ ಮಗನ
ಪಡಕಂಡಿ ಕಂದಾ

ನನ್ನ ಅನ್ನಹಾರ ಕೊಟ್ಟೇಗಂಡು
ನನ್ನನ್ನೆ ಕಾಪಾಡಪ್ಪಾ || ಸಿದ್ಧಯ್ಯ ||

ಈಗಲೀಗಾ ನನ್ನ ಪಡೆದ ಗುರು
ನನ್ನ ಸಾಕಿದ ತಂದೆ ಎನುತೇಳಿ
ನನ್ನ ನೀನು ಅನ್ನಾಹಾರ ಕೊಟ್ಟು ಸಾಕಿ ಸಲುಹಿದರೆ
ನಾಳೆ ದಿಸ ನರಮಾನವರ ಹೊಟ್ಟೆಯಲ್ಲಿ ಹುಟ್ಟಿದಂತ ಮಕ್ಕಳು ಕಂದಾ
ತಾಯಿ ತಂದೆಯೇ ನಮ್ಮ ದೇವರು ಎನುತೇಳಿ
ತಾಯಿ ತಂದೆಯ ಪಾದಪೂಜೆ ಮಾಡಿ
ಸಾಕಿ ಸಲಹುತಾರೆ

ಈಗಲೀಗಾ ನನ್ನ ಸಾಕಿ ಸಲಹಿಯಾ ಮಗನೆ ಎಂದರು
ಗುರುದೇವಾ
ಕಂಡುತವಾಗಿ ಸಾಕುತಿನಿ ದೇವಾ
ಕಂಡುತವಾಗೂ ನಿಮಗೆ ಮಗನಾಯ್ತಿನಿ ಸ್ವಾಮಿ

ತಂದೆಯಂಗೆ ನಿಮ್ಮ ನಾನು
ಕಾಣುತೀನಿ ಎಂದಾನಲ್ಲ || ಸಿದ್ಧಯ್ಯ ||

ಗುರುವೇ ತಂದೆಗೆ ಮೊದಲಾಗಿ
ನಿಮ್ಮನೇ ದೇವಾ
ಸಾಕೊತ್ತಿನಿ ಗುರುವು
ನಾ ಸಲುವುತೀನಿ ನನ್ನಪ್ಪ
ನನಗೆ ಹಾರ ಆಗುವ ಮೊದಲೆ ದೇವಾ
ನಿಮಗೆ ಹಾರ ಕೊಡುಸುತೀನಿ || ಸಿದ್ಧಯ್ಯ ||

ನನಗೆ ಹಾರ ಕೊಡುದ್ಕೂ ಮೊದಲೆ ಸ್ವಾಮಿ
ಈಗಲೀಗ ನಿಮಗೆ ನಾನು ಕೊಡುಸ್ತೀನಿ ನನ್ನಪ್ಪ
ಈಗಲೀಗ ಭೂಮಿ ಭೂಲೋಕ
ನಡುವೆ ನರಲೋಕದಲ್ಲಿ ಸ್ವಾಮಿ

ಅಪ್ಪ ಭಂಗಿಸೇವೆ ನನ್ನದು ಅದುರೆ
ನಿನಗೆ ಫಲಾರಸೇವೆ ಮಾಡುಸುತೀನಿ || ಸಿದ್ಧಯ್ಯ ||

ನಿಮಗೆ ಮೊದಲು ದೇವಾ
ಫಲಾರ ಪೂಜೆ ದೇವಾ
ಕೊಡುಸುತೀನಿ ಗುರುವೇ
ಹಾಗಂದು ನನ ಕಂದಾ
ಎಳೆಯವನು ಕೆಂಪಣ್ಣ

ಧರೆಗೆ ದೊಡ್ಡವರಿಗೆ
ಕೈ ಎತ್ತಿ ಮುಗುವಾನಾಗ|| ಸಿದ್ಧಯ್ಯ ||

ಸಿದ್ದಪ್ಪಾಜಿ s
ನನ್ನ ಮಗ ಫಲ ಉಳಿಸ್ತಾನೆ
ನನ್ನ ಹೆಸರು ಕಾಪಾಡ್ತಾನೆ
ಇಂತ ಪವಿತ್ರವಾದ ಮಗನ ಪಡಕಂಡೆ ಎನುತೇಳಿ ಧರೆಗೆ ದೊಡ್ಡವರು
ಇವತ್ತು ನಾನು ಪಡೆದಿರುವ ಮಗ
ನನಗೆ ಫಲಾರ ಪೂಜೆ ಕೊಡಿಸನಂತೆ
ಇಂದಲ ಪೂಜೆ ನನ ಮಗ ತಕಂದನಂತಲ್ಲ
ಇಂತಪ್ಪ ಮಗ ಇನ್ನೆಲ್ಲಿ ಪಡದರೂ
ನನಗೆ ಸಿಕ್ಕದಿಲ್ಲ ಅಂತೇಳಿ ಧರೆಗೆ ದೊಡ್ಡವರು
ಮಗನ ಭಗುತಿ ಮಗನಾ ಸಕುತಿಗೆ ಒಪ್ಪಿಕೊಂಡು
ಕೆಂಪಣ್ಣಾ
ಈಗಾ ಫಲಾರಪೂಜೆ ಕೊಡುಸ್ತಿನಿ ಮೊದಲು ನಿಮಗೇ ಮಾಡಿಸ್ತೀನಿ
ಅಂತಾ ಹೇಳ್ತೀಯಾ ಕಂದಾ
ಆಗಲೀ ಮಗನೇ
ಈಗ ಹನ್ನೆರಡು ವರುಷಕ್ಕೆ ಕಂದಾ
ಇವತ್ತು ತಂದಿಗೆ ಮಗನಾಗಿ ಬಂದು
ನನ್ನ ಮುಂಭಾಗದಲ್ಲಿ ನಿಂತಿದ್ದಿಯೇ ಕಂದಾ
ನನಗಾಸೆ ಆಯ್ತದೆ ಮಗನೆ
ನಿನ್ನ ಕೈಯಾರೆ ನನಗೆ ಎನಾರ ಊಟ ಮಾಡಿಸಪ್ಪ
ಏನು ತಂದಿದ್ದೀಯ ಕೊಟ್ಟುಬುಡು ಕಂದಾ ಎದುರು
ಗುರುದೇವಾ
ನಾನು ಕಾಡಲಿದ್ದ ಮಗ ಬಾವಿಲಿ ಬೆಳೆದ ಮಗ
ಏನು ತಂದೊಪ್ಪಿಸಿನಿ ನಾನು
ಕಾಡು ಉಲುಪೆಗಳ ತಂದಿವ್ನಿ ಗುರುವೆ
ಊಟ ಮಾಡಿರಿಯಪ್ಪ ಅಂದುರು
ಸಿದ್ದಪ್ಪಾಜಿ ಆಡಿದ ಮಾತು ಕೆಳಕಂಡು ಧರೆಗೆ ದೊಡ್ಡವರು
ಕೆಂಪಣ್ಣಾ
ಕಾಡು ಉಲುಪೆ ತಂದಿವ್ನಿ ಅಂತಿಯಲ್ಲ ಏನು ಕಾಡು ಉಲ್ಪೇ
ಅದೆನು ತಕೊಂಬಾ ಮಗನೆ ಕಣ್ಣಿಂದ ನೋಡಿ ಊಟಮಾಡಿ
ಸಂತೋಷ ಪಡುತೀನಿ ಎಂದುರು
ಗುಡುಗುಡನೆ ಓಡಿ ಬಂದು ಕಂದಾ
ದೂರವಾಗಿ ಮಡಗಿದ್ದಂತಾ

ಗುರುವೇ ಹಾವುನ ಹೊರೆಯ ತಂದಾನಂತೆ
ತಂದೆ ಮುಂದೆ ಮಡಗುತಾನೆ|| ಸಿದ್ಧಯ್ಯ ||

ತಂದು ಮಡಗಬುಟ್ರು ಕೆಂಪಣ್ಣ

ಅಪ್ಪ ಊಟ ಮಾಡಪ್ಪ ಗುರುವೇ
ಮಂಟೇದ ಲಿಂಗಯ್ಯನವರೇ || ಸಿದ್ಧಯ್ಯ ||

ಹಾವುನ ಹೊರೆ ತಂದು ಮಡಗಬುಟ್ಟು ಕಂದಾ
ಊಟ ಮಾಡಿ ಅದೇ ಊಟ ಮಾಡಿ ಗುರುದೇವಾ ಎಂದರು
ಕೆಂಪಣ್ಣ
ಇದೆ ಉಲುಪೆನಾ ನೀ ತಂದಿರೋದು
ಅವುದು ಗುರುದೇವಾ ಅವುದು ನನ್ನಪ್ಪ ಎಂದರು
ಕೆಂಪಣ್ಣ
ನೀ ತಂದಿರೋ ಉಲ್ಪೆ ನನಗೆ ಚಂದಾಗಿ ಗೊತ್ತಾಯ್ತು
ಏನು ಅಂದ್ರೆ ಕಂದಾ
ಈ ಜಂಗುಮ ನಮ್ಮಟ್ಟಿಗೆ ಬಂದು ಬುಟ್ಟು
ನಮ್ಮ ತಾಯಿ ಮುದ್ದಮ್ಮ ತಂದೆ ಬಾಚಿ ಬಸವಯ್ಯನ ಮಗನ ಕೇಳಿದ್ರು
ನಮ್ಮ ತಾಯಿ ಕೊಡಕಿಲ್ಲ ಅಂದುದಕೆ
ನಮ್ಮಟ್ಟಿ ಹಾಳುಮಾಡಿಬುಟ್ಟ ಕೊಟ್ಟಗೆ ಬರುದು ಮಾಡಿಬುಟ್ಟ
ಅಮ್ಮ ಅಟ್ಟಿ ದನ ಎತ್ತು ಎಮ್ಮೆ ಆಡು ಕುರಿ ಎಲ್ಲಾನು
ಆಗಲೀಗ ಪ್ರಾಣ ತಗದುಬುಟ್ಟ
ನಮ್ಮ ಆರುಜ ಜನ ಅಣ್ಣದೀರಿಗೆ
ಉಚ್ಚು ಬೆಪ್ಪು ಕೊಟ್ಟು
ದೀನಕೊಬ್ಬ ದೀವಾಳಿಗೊಬ್ಬನ ಮಾಡಿಬುಟ್ಟ
ನನ್ನ ಮುತ್ತು ರತ್ನನೆಲ್ಲಾನೂ
ಮಣ್ಣು ಪಾಲು ಮಾಡಿಬುಟ್ಟ
ನಮ್ಮ ತಂದೆ ತಾಯಿಗಳ ಒಂದ ಮಾಂಚದ ಮೇಲೆ
ಕೊರಗಿ ಪ್ರಾಣ ತಗದು ಬುಟ್ಟ
ನನ್ನ ಎಳು ವರ್ಷಕ್ಕೆ ಈ ಉಚ್ಚು ಬೆಪ್ಪು ಕೊಟ್ಟು
ಕಾಳಿಂಗನ ಗವಿಗೂ ಕೊಡುದಾ
ಹಾವು ಚೋಳುವಾ ಬಂದಾನ ಕೊಟ್ಟುಬುಟ್ಟು ನನಗೆ
ಇವನ ಧರೆ ಒಳಗೆ ಕಂಡುತವಾಗು ಮಡಗ ಬ್ಯಾಡ್ದು
ಇವನು ಕೆಟ್ಟ ದೇವರು ಅಂತೇಳಿ
ಹಾವುನಾರು ತಿನಿಸಿ ಕೊಂದಾಕಿ ಬುಡಬೇಕು ಅಂತೇಳಿ
ಹಾವುನ ಹೊರೆ ತಂದು ಮುಂಭಾಗದಲಿ ಮಡಗಿದ್ದಿಯಾ ಕಂದಾ
ಕೆಂಪಣ್ಣ

ಈ ಹಾವು ತಿಂದಾ ಮೇಲೆ ನಾನು
ಬದುಕಿನಪ್ಪ ಎಂದಾರಲ್ಲ || ಸಿದ್ಧಯ್ಯ ||

ಅಯ್ಯೋ ಗುರುವೇ ಗುರುದೇವಾ
ಯಂತಾ ಮಾತೇಳಿಬುಟ್ರಿ ಯಂತಾ ಮಾತೇಳಿದ್ರಿ ತಂದೆ
ಹಾವನೆ ನಿಮಗೆ ತಿನಿಸಿಬುಟ್ಟು ಖಂಡುತವಾಗು ಕೊಲ್ಲಬೇಕು ಅಂತೇಳಿ
ನಾನು ತರುನಿಲ್ಲ ನನ್ನಪ್ಪ
ಗುರುದೇವಾ
ಈ ಹಾವಿನ ಹೊರೆ ಯಾಕೆ ತಂದೆ ಗೊತ್ತಾ
ನಮ್ಮ ತಂದೆಯವರು ಊಟ ಮಾಡುವಂತ ಹೊತ್ತಿಗೆ
ಮಾಕ್ಳಿ ಬೇರ್ನ ಉಪ್ಪನಕಾಯಿ ಅಂತೇಳಿ
ನಂಚಿಗಂಡು ಊಟ ಮಾಡ್ತಾರೆ ಅಂತೇಳಿ ಬುಟ್ಟು
ಈ ಹಾವಿನೊರೆ ಒತ್ತುಗಂಡು ಬಂದಿ ನನ್ನಪ್ಪ
ಈ ಹಾವು ತಿನಿಸಿಬುಟ್ಟು ಕೊಂದಾಕಿಬುಟ್ಟಿಯಾ ಮಗನೆ
ಎಂದು ಕೇಳಿದ್ರಿಯಲ್ಲೋ ಗುರುವೇ
ಗುರುದೇವಾ
ಹನ್ನೆರಡು ವರುಷದಿಂದಾ
ನನಗೆ ಅನ್ನ ಆಹಾರ ನಿದ್ರೆನೆ ಒಂದೂ ಇಲ್ಲಾ
ಹನ್ನೆರಡು ವರುಷದಿಂದ ನನಗೆ ಆಹಾರವೇ ಮೊದಲಿಲ್ಲಾ
ಗುರುದೇವಾ
ಹಸಿದು ಹಣ್ಣಾಗಿ
ದಣುದು ದಾವಾಗಿ ನಿಮ್ಮ ಬಳಿಗೆ ಬಂದು ನಿಂತಿವ್ನಿ ಸ್ವಾಮಿ

ಅಪ್ಪ ಬ್ಯಾಡ ಅಂತಾ ಹೇಳಿಬುಟ್ರೆ
ನಾನೆ ಊಟ ಮಾಡುತೀನಿ || ಸಿದ್ಧಯ್ಯ ||

ಗುರುವೇ ಬ್ಯಾಡ ಎನುತೇಳಿ
ನನ ಗುರುವೇ
ಅಪ್ಪಣೆ ಕೊಟ್ಟುಬುಡು ನನ್ನಪ್ಪ
ಹಸುವಾಗುತ್ತದೆ

ನಿನಗೆ ಬೇಕಿಲ್ಲದ ಹಾವು ಚವುಳ
ನಾನೆ ಊಟ ಮಾಡುತೀನಿ || ಸಿದ್ಧಯ್ಯ ||

ಬೇಡದೇ ಹೋದದ್ದ
ನಾನೆ ಊಟ ಮಾಡ್ಕತೀನಿ
ನನಗಾರೆ ಅಪ್ಪಣೇ ಕೊಡಿಸ್ವಾಮಿ ಅಸುವಾಯ್ತದೆ ಎಂದರು
ಕೆಂಪಣ್ಣ
ಈ ಹಾವುನ ಹೊರೆ ನೀನೆ ಊಟ ಮಾಡ್ಕಂಡಿಯಾ
ಕೆಂಪಣ್ಣ

ತಿನ್ನಪ್ಪ ನನ್ನ ಮಗನೆ
ಕಣ್ಣಾರೆ ನೋಡುತೀನಿ || ಸಿದ್ಧಯ್ಯ ||