ಹಲಗೂರಿಗೆ ಭಿಕ್ಷಕ್ಕೆ ಹೊಂಟೋಗ್ಬುಟ್ರೆ ಬುದ್ಧಿ
ಹಲಗೂರ್ಗೆ ನಾನು ಹೋದೇಟ್ಗೆರ ಗುರುದೇವ
ಹಲಗೂರ ಪಂಚಾಳ್ದ ದೊರೆಗಳು
ನನ್ನ ಮೊಕ ನೋಡ್ಬುಟ್ಟು

ಲೋ ಇವನಾರ್ಲ ಇವರಾರ್ಲ
ನಮ್ಮ ಊರುಗ್ಬುಟ್ಟುವರ್ಯಾರೂ
ನಮ್ಮ ಕೇರಿಗೆ ಬುಟ್ಟವರ್ಯಾರೂ
ನಮ್ಮ ಗ್ರಾಮಕೆ ಬುಟ್ಟವರ್ಯಾರೂ
ಹಿಡಕರ್ಲ ಹಿಡಿಕರ್ಲ
ಹಾಗನತೇಳಿ ನನ್ನ ಗುರುವು
ನನಗೇ ಕಾದಿರುವ ಗುಳವ ತಂದು
ಅಡ್ಡು ಬರೆಯ ಎಳೆದರಪ್ಪ || ಸಿದ್ಧಯ್ಯ ||

ಕಾದಿರತಕ್ಕಂಥ ಗುಳ ತಂದ್ಬುಟ್ಟು
ಅಡ್ಡ ಬರೆ ನನಗೇಳ್ದುಬುಟ್ರು ಬುದ್ದಿ
ಈ ಊರಿಗೆ ನಾನು ಯಾತಕ್ಕೆ ಬಂದನಪ್ಪ
ಈ ಗ್ರಾಮಕ್ಕೆ ನಾನು ಯಾತುಕ್ಕೆ ಬಂದಿ
ಈಗ ಹಲಗೂರಲ್ಲಿ ನನ್ನ ಪ್ರಾಣ ಹೊಂಟೋಗ್ಬುಡ್ತದೆ
ಹಲಗೂರು ದೊರೆಗಳು ನನ್ನ ಕೊಂದಾಕ್ಬುಡ್ತರೆ ಅಂತೇಳಿ

ಅಪ್ಪ ಹಳ್ಳ ಕಾಣಿ ಬಿದ್ದೀನಪ್ಪ
ತಿಟ್ಟುಗಾಣಿ ಎದ್ದೀನಪ್ಪಾ || ಸಿದ್ಧಯ್ಯ ||

ಗುರುವೇ ಹಳ್ಳಕಾಣೆ ಬಿದ್ದೇ ನಾನು
ತಿಟ್ಟೂ ಕಾಣೆ ಎದ್ದಿ ಕೇಳಿ ನನ್ನಪ್ಪ
ಅಯ್ಯಾ ಬಿದ್ದು ಕೆಟ್ಟೂ ಗುರುವೇ
ಓಡೋಡಿ ಬಂದಿ ಗುರುವು || ಸಿದ್ಧಯ್ಯ ||

ಈಗಲೀಗ ಗುರುದೇವs
ಹಳ್ಳಕಾಣೆ ಬಿದ್ದು ತಿಟ್ಟುಗಾಣಿ ಎದ್ದು
ನಾನು ಓಡೋಡಿ ಬರುವಾಗ ನನ್ನಪ್ಪ
ಹಲಗೂರು ಪಂಚಾಳದವರು
ಅಣ್ಣಾ ಅಲ್ಲೋಡ್ತಾವ್ನೆ ಕಣಣ್ಣ
ಅಲ್ಲೋಯ್ತಾ ಅವ್ನೆ ಕಣಣ್ಣ ಮೂರ್ನಾಮದ ದಾಸಪ್ಪ
ಓಡ್ರಣ್ಣ ಓಡ್ರಣ್ಣ ಅಂತ್ಹೇಳಿ
ಹಿಂದಿಂದೆ ಅಟ್ಟಾಡ್ಕೊಂಡು ಬತ್ತಿದ್ರು ಕಣಪ್ಪ
ಈಗ ಹಲಗೂರು ಪಂಚಾಳದವರು
ನನ್ನ ಬಿಡೋದಿಲ್ಲ ಅಂದುಬುಟ್ಟು
ಬಿದ್ದು ಕೆಡ್ದು ಗುರುದೇವ ದಾಸಪ್ಪ ಅನ್ನಿಸ್ಕೊಬಾರ್ದು
ಎಲ್ಲಾನು ಅವುಸ್ಕೊಂಡಾರು ಕದ್ದೊಂಟೊಗ್ಬೇಕು ಅಂತೇಳಿ

ನನ್ನ ಜಾಗಟೇನು ಅವುಸ್ಕೊಂಡಿ
ನನ್ನ ಶಂಕುನೂವೆ ಅವುಸ್ಕೊಂಡಿ
ನನ್ನ ಬೋನಾಸಿಯ ಅವುಸ್ಕೊಂಡಿ
ಗುರುವೇ ಹಾಳಾದ ಗಂಟೆ
ಟಣಾ ಟಣಾನೆ ಹೊಡ್ಕೊಂಬುಡ್ತು || ಸಿದ್ಧಯ್ಯ ||

ಗುರುದೇವs
ಜಾಗಟೂ ಸುಮ್ಗಿತ್ತು ಕಣಪ್ಪ ಶಂಕೂ ಸುಮ್ಗಿತ್ತು
ನನ್ನ ಬೋನಾಸೂ ಸುಮ್ಗಿತ್ತು
ಹಾಳ ಮನೆದು ಬೆನ್ನಿಗೆ ಕಟ್ಟಿದ್ನಲ್ಲ ಗಂಟೆ
ಅದು ಸುಮ್ನಿರ್ಲಿಲ್ಲ ಬುದ್ಧಿ

ನಾನು ಬಿದ್ದು ಕೆಡ್ದು ಬರುವಾಗದು
ಢಣ್ ಢಣ್ ಅಂತ ಹೊಡ್ಕೊಂಬುಟ್ತು|| ಸಿದ್ಧಯ್ಯ ||

ಯಾವಾಗ ಟಣ್ ಟಣ್‌ನ ಹೊಡ್ಕೊಂಬುಡ್ತೊ
ಅಲ್ಲಿ ಗಂಟೆ ಸಬ್ದ ಆಯ್ದದೆ ಕಣಣ್ಣ
ಹೊಯ್ತವ್ನೆ ಅಂತ ಅಟ್ಟಾಡ್ಕೊಂಡ್ಬತ್ತಿದ್ರು
ಈ ಹಾಳು ಮನೆ ಗಂಟಿಂದ ನನ್ನ ಪ್ರಾಣ ಹೊಂಟೋಯ್ತದಲ್ಲ ಅಂದ್ಬುಟ್ರು

ಅಪ್ಪಾ ಗಂಟೇನಾದರೆ ಕಿತ್ತೀನಪ್ಪ
ಎಕ್ಕದ ಮೆಳೆಗೆ ಎಸ್ತೀನಪ್ಪ || ಸಿದ್ಧಯ್ಯ ||

ಗುರುದೇವಾ
ಗಂಟೆ ಕಿತ್ತಾಕ್ಬುಟ್ಟು
ಈ ಕಕ್ಕೆಮೆಳೆಗೆ ಎಸ್ತುಬುಟ್ಟಿ ಕಣಪ್ಪ
ಹಲಗೂರು ದೊರ್ಗಳೆಲ್ಲ
ಅಣ್ಣ ಬಂದಿದ್ದ ದಾಸಯ್ಯ ಸಿಕ್ದೆ ಹೊಂಟೋವ
ನಾಳಗಾದರೆ ಬತ್ತಾನೆ ಬನ್ನೀ ಅಂದ್ಬುಟ್ಟು
ಬತ್ತಿದವರೆಲ್ಲ ಹಿಂದಕ್ಕೊಂಟೋದ್ರು
ಈಗ ಸುಧಾರಿಸ್ಕೊಂಡು ಮೇಲಕ್ಕೆದ್ದು ಕೂತ್ಕೊಂಡು
ಸಂಕು ಜಾಗಟೆ ಬೋನಾಸಿ ಎಲ್ಲಾ ಅದೆ
ನನ್ನ ಗಂಟೆ ಹೊಂಟೊಯ್ತಲ್ಲ ಅಂದ್ಬುಟ್ಟು
ಈ ಕಕ್ಕೆ ಮರ್ದಂಡಲ್ಲಿ ಹುಡುಕ್ತಾ ಕೂತಿವ್ನಿ

ಹಾಳು ಮನೆ ಗಂಟೆ ನನಗೆ
ಇನ್ನೂವೆ ಸಿಕ್ಕೇ ಇಲ್ಲ || ಸಿದ್ಧಯ್ಯ ||

ಹಾಳಾದ ಗಂಟೆ ದೇವ
ಇನ್ನೂ ನನಗೆ ಸಿಕ್ಕಿಲ್ಲ ಗುರುದೇವ ಇನ್ನೂ ಸಿಕ್ಕಿಲ್ಲ ಗುರುವೆ ಎಂದರು
ದಾಸಪ್ಪ ಈ ಥರದಲ್ಲಿ ನೀನು ಹಲಗೂರರ್ಗೋದರೆ
ಹಲಗೂರು ದೊರ್ಗಳು ನಿನಗೆ ಹೆದ್ರುಕೊಂಡು ಭಿಕ್ಷ ಕೊಟ್ಟಾರ
ಈ ಥರದಲ್ಲೋಗಾಬಾರ್ದಾಗಿತ್ತು
ಈಗಲೀಗ ನಮ್ಮ ಗುರು ಕೊಟ್ಟೋದ ಕಣಯ್ಯ
ನಮ್ಮ ಗುರು ಕೊಟ್ಟಿರುವಂಥ
ಪರ್ಸಾದ ಸೇವನೆ ಮಾಡ್ಕೊಂಡು ಹೋದರೆ
ಆನೆಯಂಥ ಸಕುತಿ ಬರ್ತದೆ
ಕುದುರೆಯಂಥ ವಾಟ ಬರ್ತದೆ
ನಮ್ಮ ಗುರುಗಳು ಕೊಟ್ಟವರೆ ಹೇಳ್ತೀನಿ ಕೇಳು
ಈಗಲೀಗ ನಾವು ಇಬ್ರು ಸೇವನೆ ಮಾಡ್ಕೊಂಡು
ನಾನು ನೀನು ಇಬ್ರೂವೆ
ಹಲಗೂರು ಪಂಚಾಳಗೇರಿಗೆ ಭಿಕ್ಷಕ್ಕೊಂಟೋದ್ರೆ
ನಮ್ಮಿಬ್ರ ನೋಡಿ ಬಾಳ ಹೆದರೋಗ್ಬುಡ್ತರೆ
ಈಗಲೀಗ ಸೇವನೆ ಮಾಡ್ಕೊಂಡು ಹಲಗೂರಿಗೆ ಹೋಗವಪ್ಪ ಎಂದರು
ಗುರುದೇವ ನಿಮ್ಮ ಗುರುಗಳು ಅಂದ್ರೆ ಏನು ಕೊಟ್ಟಿದ್ದರು
ಆನೆಯಂಥ ಸಕುತಿ
ಕುದುರೆಯಂಥ ವಾಟ ಬರಬೇಕಾದರೆ
ಅದು ಏನು ತಂದೆ ಎಂದರು
ಓ ಮುತ್ತತ್ತಿ ರಾಯ
ಮೂರ್ನಾಮದ ದಾಸಪ್ಪ ಬಾ ನನ್ನ ಮುಂದ್ಗಡೆ ಕೂತ್ಕೊ
ಕೂತ್ಕೊ ಬಪ್ಪ ಎಂದರು

ಸಿದ್ಧಪ್ಪಾಜಿಯವರ ಮುಂದೆ
ತಾನು ಬಂದು ಕೂತಕೊಂಡ|| ಸಿದ್ಧಯ್ಯ ||

ಮುತ್ತತ್ತಿರಾಯನ್ನ ಮುಂದು ಕುಂಡ್ರುಸಿಗಂಡು
ಮೇಲಕ್ಕಂಡು ನೋಡಿದ್ರು ಸಿದ್ದಪ್ಪಾಜಿ
ಹಲಗೂರು ಪಂಚಾಳಗೇರಿ
ಏಳನೂರ ಹೆಗ್ಗಲುಮೆ ಹೊಂಗೆಯಲ್ಲ ಆಕಾಸುಕ್ಕೊಯ್ತಿತ್ತು
ಆಕಾಸುಕ್ಕೋಗುವ ಹಾಗೆ ನೋಡ್ಬುಟ್ಟು
ರಾಜ ಬೊಪ್ಪಗೌಡನ ಪುರಕ್ಕೆ ಕೈ ಎತ್ತಿ ಮುಗುದ್ಬುಟ್ಟು
ಅಯ್ಯೋ ಗುರುವೇ ಧರೆಗೆ ದೊಡ್ಡಪ್ಪ
ಈವತ್ತು ನನಗೆ ಎಂಥ ಕಷ್ಟ ಕೊಟ್ಬುಟ್ರಿಸ್ವಾಮಿ
ನನಗೆಂಥಾ ಬಂಧಾನಾ ಕೊಟ್ಟಿಯಪ್ಪ
ಎನುತೇಳಿ ಮುತ್ತಿನ ಜೋಳಿಗೆಗೆ ಕೈ ಹಾಕ್ದ
ಧರೆಗೆ ದೊಡ್ಡೋರ ಪಾದ ನೆನೆದ
ಮಾಯದಲ್ಲೇ ಧರೆಗೆ ದೊಡ್ಡವರು ಜೋಳೀಗೇಲಿ ಮಡಗಿದ್ದರಂತೆ
ಏನು ಅಂದರೆ

ಆರು ಕಟ್ಟು ಉಡುಭಂಗಿ
ಆರು ಕಟ್ಟು ತುಡುಭಂಗಿ
ಆರುಕಟ್ಟು ಹೊಗೆಸೊಪ್ಪು
ಆರು ಕಟ್ಟು ಭಂಗಿ ಸೊಪ್ಪು
ಗುರುವೇ ಇಪ್ಪತ್ತುನಾಲ್ಕಂಡುಗ
ಭಂಗಿ ಸೊಪ್ಪು ದೇವಾ
ಜೋಳಗೇಲಿ ಮಡಗಿತ್ತು
ಅವರು ಭಂಗಿಸೊಪ್ಪು ನೋಡುತಾರೆ
ಕೈಯೆತ್ತಿ ಮುಗಿಯುತಾರೆ || ಸಿದ್ಧಯ್ಯ ||

ಭಂಗಿ ಸೊಪ್ಪು ನೋಡ್ಬುಟ್ಟು ಕೈಯೆತ್ತಿ ಮುಗುದ್ಬುಟ್ಟು
ಲೋ ಮುತ್ತತ್ತಿ ರಾಯ
ನೋಡು ನಮ್ಮ ಗುರು ಏನು ಕೊಟ್ಟಿದಾರು ಅಂದ್ರೆ
ಇದೇ ಕಣಪ್ಪ ಕೊಟ್ಟಿರೋದು
ಇದನ್ನೇ ಸೇವನೆ ಮಾಡ್ಬುಟ್ರೆ
ಆನೆಯಂಥ ಸಕುತಿ ಬತ್ತದೆ
ಕುದುರೆಯಂಥ ವಾಟ ಬತ್ತದೆ
ನಮ್ಮ ಗುರು ಕೊಟ್ಟಿರುವ ಪರ್ಸಾದ ಸೇ‌ವ್ನೆ ಮಾಡುವ ಕೂತ್ಕೊ ಅಂತೇಳಿ
ಮುತ್ತತ್ತಿರಾಯನ ಮುಂಭಾಗದಲ್ಲಿ ಕೂಡಿಸ್ಕಂಡು ಸಿದ್ಧಪ್ಪಾಜಿಯವರು
ಆರು ಕಟ್ಟು ಹೊಗೇಸೊಪ್ಪು
ಆರು ಕಟ್ಟು ಭಂಗೀಸೊಪ್ಪು
ಆರು ಕಟ್ಟು
ಆಗಲೀಗ ಭಂಗೀಸೊಪ್ನೆ ಅಂಗೈ ಮೇಲೆ ಸುರ್ಕೋಂಡು

ಅಯ್ಯಾ ಅಂಗೈಯ್ಯಿನ ಮ್ಯಾಲೆ
ಭಂಗಿ ಸೊಪ್ಪು ಗುರುವೇ
ಮಡೀಕೊಂಡು ನನ್ನ ಗುರುವು
ಗುರುವೇ ನಾಗುರಾವ ಕರೆದು
ನಾಗರಿಸಾವ ತಕ್ಕೊಂಡ್ರು
ಅಯ್ಯಾ ನಾಗೂರಾವಿನ ವಿಸ
ಎಕ್ಕದಾಲಿನ ರಸ
ಪಂಚು ಪಾತ್ರೆ ರಸ
ಭಂಗಿ ಸೊಪ್ನ ರಸ
ಗುರುವೇ ಐದೂವೆ ಕೂಡಿದರೆ ಗುರುವು
ಪಂಚೈದು ಲೋಭ
ಅಪ್ಪಾಜಿ ನನ್ನ ಗುರುವು
ಅವರು ಪಂಚೈದು ಲೋಭದಲ್ಲಿ
ತೀಡಿಗಾಂಜ ಮಾಡುತಾರೆ || ಸಿದ್ಧಯ್ಯ ||

ಅವರು ತೀಡಿ ಗಾಂಜ ಮಾಡುತಾರೆ
ತೀಡಿ ಮಿಸ್ಟ ಮಾಡುತಾರೆ || ಸಿದ್ಧಯ್ಯ ||

ಗುರುವೇ ತೀಡಿ ಗಾಂಜ ಮಾಡಿ ಗುರುವೆ
ತೀಡಿ ಮಿಸ್ಟ ಮಾಡಿ
ಅವರು ಬಂಗಾರದ ಚಿಲುಮೆಗೆ ಅವರು
ಜಡಿದು ಜಡಿದು ತುಂಬುತಾರೆ || ಸಿದ್ಧಯ್ಯ ||

ಗುರುವೆ ಬಂಗಾರದ ಚಿಲುಮೆಗೆ
ಜಡ್ಡು ಜಡಿದು ದೇವಾ
ತುಂಬವರೇ ನನ್ನಪ್ಪ
ಅವರು ಹಡದು ಹಡದು ಗುರುವು
ತುಂಬವರೇ ನನ್ನ ಗುರುವು
ಗುರುವೇ ಇಪ್ಪತ್ತುನಾಲ್ಕಂಡುಗ
ಭಂಗಿ ಸೊಪ್ಪು ಗುರುವೇ
ಚಿಲುಮೆಗೆ ದೇವ ತುಂಬಟ್ಟು ನನ್ನಪ್ಪ
ಅವರು ಚಕಾಮಕಿ ಹೊಡೆದರಂತೆ
ತೊರೆಮೆ ಕೆಂಡ ತಗುದರಂತೆ || ಸಿದ್ಧಯ್ಯ ||

ಗುರುವೇ ಚಕಮಕಿಯ ಹೊಡೆದು
ತೊರೆಮೆ ಕೆಂಡ ತಗದು
ಪರಂಜ್ಯೋತಿ ಕಸ್ಸಿ
ಲೋ ಬಾರೋ ದಾಸಪ್ಪ
ಎಂದರಲ್ಲ ಮಾಯಿಕಾರ || ಸಿದ್ಧಯ್ಯ ||

ಚಕಮಕಿ ಹೊಡೆದು ತೊರೆಮೆ ಕೆಂಡ ತಗದು
ಬಂಗಾರದ ಚಿಲುಮೆಗೆ ತಾವಾಗಿ ತುಂಬುಕೊಂಡು
ಬಂಗಾರದ ಚಿಲುಮೆ ಮ್ಯಾಲೆ ಬೆಂಕಿಕೆಂಡ ಮಡಗ್ಬುಟ್ಟು
ದಾಸಪ್ಪ ಎದ್ದೇಳು
ಬಾ ದಾಸಯ್ಯ ಈಗಲೀಗ ಸಕ್ತಿ ಬರ್ತದೆ
ನಮ್ಮ ಗುರು ಕೊಟ್ಟ ಪರ್ಸಾದ ಸೇವ್ನೆ ಮಾಡುವ ಬಪ್ಪಾ ಅಂತೇಳಿ
ಆ ದಾಸಪ್ಪನ ಕೈಗೆ ಚಿಲುಮೆ ಕೊಟ್ರು

ಅವನು ಹಿಂದಕ್ಕೂ ನೋಡುತಾನೆ
ಮುಂದಕ್ಕೂ ನೋಡುತಾನೆ || ಸಿದ್ಧಯ್ಯ ||

ಈ ದಾಸಪ್ಪ ಹಿಂದ್ಕೂ ಮುಂದ್ಕೂ ನೋಡ್ಬುಟ್ಟು
ಅವ್ನಿಗೆ ಯೋಚ್ನೆ ಬಂದ್ಬುಡ್ತು
ಚಿಲುಮೆಯ ಈಸ್ಕೋ ಬ್ಯಾಡ್ದಾಗಿತ್ತು
ಬ್ಯಾಡ ಅಂತ ಮೊದಲೇ ಹೇಳ್ಬುಟ್ಟಿದ್ರೆ ಚೆನ್ನಾಗಿತ್ತು
ಈಗ ಕೈಯೊಡ್ಡಿ ಈಸ್ಕೊಬುಟ್ನಲ್ಲ
ಈಸ್ಕೊಂಡ್ಮೇಲೆ ಹಿಂದುಕ್ಕೆ ಕೊಡಾಕುಗದಿಲ್ಲ
ಈಗ ನಾನು ಸೇವನೆ ಮಾಡ್ಲೇಬೇಕಲ್ಲ
ಅಯ್ಯೋ ಇವ್ನು ಸಿದ್ದಪ್ಪ ನಾನು ದಾಸಪ್ಪ
ಇಬ್ಬರೆಸ್ರು ಒಂದೇ ತಾನೆ ನಿಜ
ಇವ್ನಿಗೆ ಹೆದರ್ಬಾಡ್ದು ನಾನು ಭಂಗಿಸೇವ್ನೆ ಮಾಡ್ಬುಡ್ಬೇಕು ಅಂದ್ಬುಟ್ಟು
ಜೀವಕ್ಕೆ ಧೈರ್ಯ ತಕ್ಕಂಡು ದಾಸಪ್ಪ
ಯಾವಾಗಲೂ ಸೇದದೇ ಇದ್ದವ್ನು ಏನು ಮಾಡ್ದ ಗೊತ್ತ?

ಅಯ್ಯ ಬೆಂಕಿ ಕಡೆ ಕಚ್ಚೇಬುಟ್ಟ
ಬಾಯಿಬಾಯಿ ಸುಟ್ಟೇಹೋಯ್ತು || ಸಿದ್ಧಯ್ಯ ||

ಅಯ್ಯಾ ಬೆಂಕಿ ಕಡೆ ಗುರುವೇ
ಕಚ್ಕೊಂಡು ದಾಸಪ್ಪ
ಬಾಯೇ ಸುಟ್ಟೋಯ್ತು
ಈ ಭಂಗಿ ಕುಡಿಯೋರ ಸಂಗ
ಎಂದೆಂದಿಗೂ ಬ್ಯಾಡವಪ್ಪ || ಸಿದ್ಧಯ್ಯ ||

ಈ ಭಂಗಿ ಕುಡಿಯೋರ ಸಂಗs
ಬ್ಯಾಡ ಕಣರಪ್ಪ ನನ್ನ ಬಾಯಿ ಹೊಯ್ತಲ್ಲಪ್ಪ ಅಂದರು ದಾಸಯ್ಯ
ಆಗ ಸಿದ್ದಪ್ಪಾಜಿ ನೋಡುದ್ರು
ಅಯ್ಯಯ್ಯೋ ದಾಸಪ್ಪ
ಇಂಗಲ್ಲ ಕನ ದಾಸಪ್ಪ ಸೇದೋದು
ಈಗಲೀಗ ಈಚರಕೆ ತಿರುಗಿಸಿಕೊಂಡಿರುವಂಥ
ಚಿಲುಮೆಯ ಈಚರಕೆ ತಿರುಗಸ್ಕೊ
ಪುಗೆ ಹೊಗೆ ಬತ್ತದೆ ಎಂದರು
ತಿಳಿಕೊಂಡು ಕೇಳದೇ ಹೋದೀಯಾ
ಅಯ್ಯಯ್ಯೋ ದಾಸಪ್ಪ
ಈಗ ಸೇವನೆ ಮಾಡು
ಎಲ್ಲ ಒಳ್ಳೇದಾಯ್ತದೆ ಸೇವನೆ ಮಾಡಪ್ಪ ಅಂದರು

ಅವರು ಒಂದು ದಮ್ಮ ಸೇದಿರರಂತೆ
ಬುಕುಬುಕನೆ ಕೆಂಬುತಾರೆ || ಸಿದ್ಧಯ್ಯ ||

ಗುರುವೇ ಒಂದು ದಮ್ಮ ದೇವ
ಸೇದ್ಬುಟ್ಟು ದಾಸಪ್ಪ
ಇನ್ನೊಂದು ದಮ್ಮಿಗೆ
ಗುರುವೇ ಗುರುದೇವ
ಅವನಿಗೆ ಕರಿ ಗುಳ್ಳೆ ಒಳಾಕ್ಕೋದೊ
ಬಿಳೀಗುಳ್ಳೆ ಮೇಕ್ಕೆ ಬಂದೊ|| ಸಿದ್ಧಯ್ಯ ||

ಕರೀಗುಳ್ಳೆ ಒಳಾಕೊಂಟೋದೊ ದೇವಾs
ಬಿಳೀ ಗುಳ್ಳೆ ಮೇಕ್ಕಾಗೋಗ್ಬುಡ್ತು ದಾಸಪ್ಪ

ಅಯ್ಯಾ ನೀಡಿದ ಕಾಲು ನೀಡುದಾಗೆ
ಮುಚ್ಚಿದ ಕಣ್ಣು ಮುಚ್ಚಿದಾಗೆ || ಸಿದ್ಧಯ್ಯ ||

ನನ್ನ ಸಿದ್ಧಪ್ಪಾಜಿ ಮುಂದೆ ದೇವ
ನೊದಲೆ ಕಚ್ಕೊಂಡು ಮಲೀಕೊಂಡ || ಸಿದ್ಧಯ್ಯ ||

ನೊದಲೆ ಕಚ್ಕೊಂಡು ದಾಸಪ್ಪ
ಆಗಲೀಗ ಮೊಕ್ಕಡನಾಗಿ ಮಲಗ್ಬುಟ್ಟ
ಮನೀಕೊಂಡ ದಾಸಪ್ಪನ ಕಣ್ಣಿಂದ ನೋಡ್ಬುಟ್ಟು ಸಿದ್ಧಪ್ಪಾಜಿ
ಈಗ ಮೂರು ನಾಮದ ದಾಸಪ್ಪ ಮುತ್ತತ್ತಿರಾಯ
ಇಲ್ಲೇ ಮನುಗೋಗ್ಬುಟ್ನಿಲ್ಲ
ಎನುತೇಳ್ಬುಟ್ಟು ಸಿದ್ಧಪ್ಪಾಜಿಯವರು
ಬಂಗಾರದ ಚಿಲುಮೆಯ ಬಲಗೈಲಿ ಹಿಡಕೊಂಡು

ಅವರು ರಾಜ ಬೊಪ್ಪಗೌಡ್ನ ಪುರಕೆ ದೇವ
ಕೈಯೆತ್ತಿ ಮುಗುದರ‍ಲ್ಲ || ಸಿದ್ಧಯ್ಯ ||

ಗುರುವೇ ರಾಜಬೊಪ್ಪೇಗೌಡ್ನ ಪುರಕೆ
ಕೈಯೆತ್ತಿ ನನ್ನ ಗುರುವು
ಮುಗುದವರೆ ನನ್ನ ಗುರುವು
ನೀಲುಗಾರರ ಗಂಡ
ನನ್ನ ನೀಲಿ ಸಿದ್ಧಪ್ಪಾಜಿ
ನನ್ನ ತೋಪಿನ ದೊಡ್ಡಮ್ಮನ
ಪಾದ ನೆನಕೊಂಡು
ನನ್ನ ಕಿಡುಗಣ್ಣ ರಾಚಪ್ಪಾಜಿಯವರ
ಪಾದ ನೆನಕೊಂಡು
ನನ್ನ ಹಿರೇ ಚೆನ್ನಾಜಮ್ಮನ
ಮನದಲ್ಲಿ ನೆನುಕೊಂಡು
ನೀಲಿ ಸಿದ್ದಪ್ಪಾಜಿ
ಅಯ್ಯಾ ಗುರುವೇ ಗುರುದೇವಾ
ಬಂಗಾರದ ದೇವ
ಭಂಗಿ ಚಿಲುಮೆ ಗುರುವು
ಕೈಯಲ್ಲಿ ಹಿಡಕೊಂಡು
ಅವರು ಒಂದು ದಮ್ಮ ಸೇದರಂತೆ
ಬಲಗಾಡೆ ಜೋಲುತಾರೆ || ಸಿದ್ಧಯ್ಯ ||

ಅವರು ಎರಡು ದಮ್ಮ ಸೇರದಲ್ಲ
ಎಡಗಾಡೆ ಜೋಲುತಾರೆ || ಸಿದ್ಧಯ್ಯ ||

ಗುರುವೇ ಒಂದು ದಮ್ಮು ಸೇದಿ
ಬಲಗಡೆ ಜೋಲಿ
ಎರಡು ದಮ್ಮು ಸೇದಿ
ಎಡದ ಕಡೆ ಜೋಲಿ
ಅದು ಒಂದು ದಮ್ಮಿಗೆ ತೀರಲಿಲ್ಲ
ಎರಡು ದಮ್ಮಿಗೆ ಉಳಿಯಲಿಲ್ಲ || ಸಿದ್ಧಯ್ಯ ||
ಅಪ್ಪಾ ಮೂರ್ನೇ ದಮ್ಮಿಗದು
ಬೂದಿಯಾಗಿ || ಸಿದ್ಧಯ್ಯ ||

ಇಪ್ಪತ್ತುನಾಲ್ಕು ಕಂಡ್ಗ ಭಂಗಿ ಸೊಪ್ಪ ದೇವಾs
ಎರಡು ಬಾರಿ ದಮ್ಮಿಗೆ ಸೇದ್ಕೊಂಡ್ರು ಜಗತ್ತು ಕರ್ತ ಸಿದ್ದಪ್ಪಾಜಿ
ಆರು ಖಂಡುಗ ಬೂದಿಯಾಯ್ತು
ಬೂದಿ ತಗದು ಭೂಮಿಗೆ ಸುರುದ್ಬುಟ್ಟು

ಗುರುವೇ ಬಂದ ಬಂದ ಹೊಗೆಯ
ಗೊಟಗೊಟನೆ ಕುಡುದವರೆ
ಹೊಟ್ಟೇಗೆ ನುಂಗವರೆ
ಗುರುವೇ ಬಾಯಿಂದ ಹೊರಗೆ
ಒಂದು ಚೂರು
ಹೊಗೆಯನ್ನೇ ಗುರುವೇ
ಈಚೆಗೆ ಬುಡಲಿಲ್ಲ
ಅಯ್ಯಾ ಭಂಗಿ ಕುಡುದಬುಟ್ಟ
ಸಿದ್ಧಪ್ಪಾಜಿಯವರು
ನನಗೆ ಹುಚ್ಚು ನೀಲಿ ಬರಲಿಲ್ಲ
ನನಗೆ ಬೆಪ್ಪು ನೀಲಿ ಬರೋದಿಲ್ಲ
ನನಗೆ ಬೆರಗು ನೀಲಿ ಬರಲಿಲ್ಲ
ನನಗೆ ಕಲ್ಲು ಕಡಿದ ನೀಲಿ
ನಾನು ಮಣ್ಣು ಮುಕ್ಕೋ ನೀಲಿ
ಅಯ್ಯೋ ಕೈಯ್ಸ ಮಡಿಸೋ ನೀಲಿ
ಇನ್ನೂ ಬರಲಿಲ್ಲ ಎನುತೇಳಿ
ಗುರುವೇ ಹುಚ್ಚು ನೀಲಿ ದೇವ
ಬೆಪ್ಪು ನೀಲಿ ಗುರುವು
ಬೆರಗು ನೀಲಿ ದೇವ
ಹಲ್ಲು ಕಡಿವ ನೀಲಿ
ಮರ ಹತ್ತುವ ನೀಲಿ
ಗುರುವೇ ಕೆಂಡದ ಮೇಲೆ ನಿಂತ್ಕಂಡು
ಖಂಡುಗ ಧೂಪ ಕುಡಿವ
ನೀಲಿಯು ಬರಲಿಲ್ಲ
ಹಾಗಂದು ನನ್ನ ಗುರುವು
ಅವರ ಸುತ್ತ ಮುತ್ತಲ ಹಾವುಚವುಳ
ಪ್ರೇಮದಲ್ಲಿ ಕರೆದರಲ್ಲ || ಸಿದ್ಧಯ್ಯ ||