ಊಟ ಮಾಡು ಕಂದಾs
ಕಣ್ಣಾರ ನೋಡುತೀನಿ ಊಟ ಮಾಡು ಮಗನೆ ಎಂದುರು
ಧರೆಗೆ ದೊಡ್ಡೋರ ಅಪ್ಪಣೆ ಆಗಿಬುಡ್ತು ಎನುತೇಳಿ ಕೆಂಪಣ್ಣ

ಅವನು ನಾಗರಾವ ನೋಡುತಾನೆ
ಕಚ್ಚಿ ಇಸುವ ಹೀರುತಾನೆ || ಸಿದ್ಧಯ್ಯ ||

ಅವನು ಹೆಬ್ಬೆ ಹಾವ ನೋಡುತಾನೆ
ಗಸ ಗಸನೆ ಅಗಿಯುತಾನೆ || ಸಿದ್ಧಯ್ಯ ||

ಅವನು ಕಟ್ಟುನಾವ ನೋಡುತಾನೆ
ಕಡೆದವುಡೇಲಿ ಕಡಿಯುತಾನೆ|| ಸಿದ್ಧಯ್ಯ ||

ಅವನು ಅಸುರಾವಾ ನೋಡುತಾನೆ
ಗೊಳಕ್ಕಂಡ ನುಂಗುತಾನೆ || ಸಿದ್ಧಯ್ಯ ||

ಅವನಿಗೆ ನಾಗರಾವು ಎಂದುರೇ ದೇವಾ
ಕರಿಯಾ ಕಬ್ಬಿನ ಜಿಲ್ಲೆ || ಸಿದ್ಧಯ್ಯ ||

ಅವನಿಗೆ ಹೆಬ್ಬೆಹಾವು ಎಂದುರೆ ಗುರುವೆ
ಚೇಣಿ ಕಬ್ಬಿನ ಜಲ್ಲೆ || ಸಿದ್ಧಯ್ಯ ||

ಅಪ್ಪ ಗಸಗಸನೆ ಅಗಿಯುತಾನೆ
ರಸವನ್ನೆ ಕುಡಿಯುತಾನೆ || ಸಿದ್ಧಯ್ಯ ||

ಅವನು ರಸವನ್ನೆ ಕುಡಿಯುತಾನೆ
ಸಿಪ್ಪೆನಲ್ಲಿ ಉಗಿಯುತಾನೆ || ಸಿದ್ಧಯ್ಯ ||

ಹಾವು ತಿನ್ನುವ ಮಗನಾs
ಎರಡು ಕಣ್ಣಾರ ನೋಡಿದ್ರು
ಜಗತ್ತು ಗುರು ಧರೆಗೆ ದೊಡ್ಡಯ್ಯ
ಅಯ್ಯೋ ನನ ಕಂದಾ ಅಯ್ಯೋ ಕೆಂಪಣ್ಣ
ನಾನು ಪಡಿಸಿ ಭೂಲೋಕದಲ್ಲಿ ಬುಟ್ಟಿರುವಂತಾ
ಪ್ರಾಣಿಗಳನ್ನೆಲ್ಲಾ ತಿಂದು ಕೊಂದಾಕಿಬುಡ್ತಿಯಲ್ಲೋ ಮಗನೆ
ಕಂದಾ
ತಿನ್ನ ಬ್ಯಾಡ ಸಾಕು ನಿಲ್ಲಿಸಪ್ಪ
ನಿನ್ನ ಭಕುತಿ ನೋಡ್ದೆ ನಿತ್ಯ ನೋಡಿಕಂಡೆ ಮಗನೆ
ಎಲ್ಲಾ ಪ್ರಾಣಿಗಳನು ತಿಂದುಬುಡುಬ್ಯಾಡ ಕಂದಾ
ಕೆಂಪಣ್ಣ
ನಿಮ್ಮ ತಾಯಿ ತಂದ ಮಗ ಅಂತೇಳಿ ನಾನು ತಿಳಿಕಂಡು
ಹಾವು ತಿನ್ನು ಅಂತಾ ಹೇಳಿಬುಟ್ಟೆ
ಈಗಲೀಗಾ ನಿಮ್ಮ ತಾಯಿತಂದೆ ಮಗ
ಖಂಡುತವಾಗು ನೀನಲ್ಲ ಕಂದಾ
ನನ್ನ ಮಗನೇ ಹೌದು

ನೀನು ಇಸ ಕುಡ್ದ ಮೇಲೆ ನೀನು
ಖುಷಿ ಮಗನೆ ಕಾಣೋ ಕಂದಾ || ಸಿದ್ಧಯ್ಯ ||

ಇಸಕುಡಿದ ಮೇಲೆ ನೀನು ಋಷಿಮಗನೆ ಕಂದಾs
ಸಾಕು ನಿಲ್ಲಿಸು ಕಂದಾ
ನಿಲ್ಲಿಸು ಬುಡು ಮಗನೆ ಎಂದರು
ಆಗ ಎಳೆ ಕೆಂಪಣ್ಣ ಧರೆಗೆ ದೊಡ್ಡೋರ ಮುಂದೆ
ಸುಮ್ಮನೆ ನಿಂತುಗಂಡಾ
ಕಂದಾ ಈ ಪ್ರಾಣಿಗಳು ಎಲ್ಲಾನೂ ತಕಂಡೋಗಿ
ನನ್ನ ಮಠದ ಹಿಂಭಾಗಕ್ಕೆ ಬುಟ್ಟು ಬುಡಪ್ಪ
ಎಲ್ಲಾರು ಬದಿಕಳ್ಳಿ ಬುಟ್ಟುಬುಡೋಗೋ ಕಂದಾ ಎಂದುರು
ಓಡಿಬಂದು ಹಾವು ಚವುಳು
ಎಲ್ಲಾ ಪ್ರಾಣಿಗಳನು ಹಿಡಿದು
ಕಂಕಳಲ್ಲಿ ಇರಿಕಂಡು
ಮಠದ ಹಿಂಭಾಗಕ್ಕೆ ತಕಂಡೋಗಿ
ಎಲಾದ್ರು ಬದಿಕೋಗಿರಪ್ಪ ಎನುತೇಳಿ ಬಿಟುಬುಟ್ಟರು
ಬಿಟ್ಟುಬುಟ್ಟು ಧರೆಗೆ ದೊಡ್ಡವರಾ
ಬಳಿಗೆ ಬಂದು ಮುಂಭಾಗದಲಿ ನಿಂತುಗಂಡಾ ಕೆಂಪಣ್ಣ
ನಿಂತಿದ್ದ ಮಗನೆ ನೋಡಕಂಡು ಧರೆಗೆ ದೊಡ್ಡವರು
ಆಗ ಮಗನಿಗೆ ಹೇಳುತವರೆ
ಕೆಂಪಣ್ಣ ಈಗ ನಿನ್ನ ಭಗುತಿ ನಿನ್ನ ಸತ್ಯ ಎಲ್ಲಾನು ಒಪ್ಪಿಗಂಡೀ
ಏನು ವರ ಕೇಳಿಕಂಡಿಯೊ ಕಂದಾ
ಇವತ್ತು ಕೇಳು ಮಗನೆ ಕೆಂಪಣ್ಣ

ಬೇಡಿದ ವರವ ನಿನಗೆ
ತಟ್ಟಂತಾ ಕೊಡುವುತೀನಿ || ಸಿದ್ಧಯ್ಯ ||

ಕಂದಾ ಬೇಡಿದ ವರವಾ
ನಾನೇ ಕೊಡುತೀನಿ
ಮೆಚ್ಚಿದ ಭಾಗ್ಯ
ನಾನೇ ಕೊಡುತೀನಿ

ಏನು ವರ ಕೇಳಿ ಕಂಡಿಯಪ್ಪ
ಎನು ಭಾಗ್ಯ ಕೇಳಿಕೊಂಡಿಯಾ ಮಗನೆ
ಏನು ಕೇಳಿಕಂಡ್ರು ಕೊಟ್ಟುಬುಡ್ತಿನಿ ಹೇಳು ಕಂದಾ ಎಂದರು
ಧರೆಗೆ ದೊಡ್ಡವರ ಮಾತ ಕೇಳಿಬುಟ್ಟು ಕಂದಾ
ಜಗತ್ತ ಗುರು ಮುಂಭಾಗದಲ್ಲಿ ಪಾದ ಜೋಡುಸುಗಂಡು
ಸುಮ್ಮನೆ ತಲೆ ಬಕ್ಕೊಂಡು ನಿಂತಗಂಡ ಕೆಂಪಣ್ಣ
ಕೆಂಪಣ್ಣ
ಯಾಕಪ್ಪ ಸುಮ್ಮನೆ ನಿಂತಿದ್ದಿಯೇ
ಎನು ವರ ಕೇಳಿಯೇ ಕಂದಾ
ಏನು ಭಾಗ್ಯ ಕೇಳಿಕಂಡಿಯೊ ಮಗನೆ
ಕೇಳಿಬುಡು ಕಂದಾ ಕೊಟ್ಟುಬುಡ್ತಿನಿ ಮಗು ಎಂದುರು
ಆಗಲೂಕೂಡ ಕೆಂಪಣ್ಣ ಏನು ಮಾತಾಡದೆ ನಿಂತುಗಂಡರು
ಕೆಂಪಣ್ಣ
ಯಾತಕೆ ಸುಮ್ಮನೆ ನಿಂತಿದ್ದಿಯೇ
ಹೇಳುತೀನಿ ಕೇಳು ಕಂದಾ

ಲೋ ರಾಜನಾದಿಯೋ ಮಗನೆ
ರಾಜ್ಯವಾಳಿಯೂ ಕಂದಾ
ರಾಜಾತಾನ ಕೊಡುತೀನಿ
ಮಗನೆ ದೊರಿಯಾದಿಯಾ ಕಂದಾ
ದೊರುತಾನಾ ಆಳಪ್ಪ
ದೊರುತಾನಾ ಕೊಡುತೀನಿ
ಮಗನೆ ಗೌಡುನಾದೆಯ ಕಂದಾ
ನೀ ಗೌಡುತಾನಾ ಆಳಪ್ಪ
ನಿನಗೆ ಗೌಡುತಾನ ಕೊಡುತೀನಿ
ನಿನಗೆ ಅಷ್ಟೊಂದು ವರದಲ್ಲಿ
ಏನು ವರ ಬೇಕು ಮಗನೆ || ಸಿದ್ಧಯ್ಯ||

ಗೌಡನಾದೆಯ ಕಂದಾ
ಗೌಡತಾನ ಆಳಿಯ ಮಗನೆ
ದೊರಿಯಾದೆಯ ದೊರಿತಾನ ಅಳಿಯಪ್ಪ
ರಾಜ್ಯನಾಳಿಯ ರಾಜನಾದಿಯ ಕಂದಾ
ರಾಜ್ಯ ಆಳಿಯಾ ಮಗು
ಇವು ಮೂರು ವರದಲ್ಲಿ
ಯಾವ ವರ ಬೇಕು ಕೇಳು ಕಂದಾ ಕೇಳೂ ಮಗನೆ ಎಂದರು
ಕೆಂಪಣ್ಣ ಆಗಲು ಕೂಡ ಒಂದು ಮಾತಾಡದೆ ಸುಮ್ಮನೆ ನಿಂತ್ದಂಡಾ
ಕೆಂಪಣ್ಣ
ನೀನು ನಿಂತಿರೋದು ನನಗೆ ಚೆನ್ನಾಗಿ ಗೊತ್ತು ಕಣೋ
ಬಾವಿ ಒಳಗೆ ಹನ್ನೆರಡು ವರುಸ ಇದ್ದೆ ಕಂದಾs
ನಿಮ್ಮ ತಾಯಿ ಮನೆ ಒಳಗೆ
ಏಳು ವರುಸ ಇದ್ದೆ ಮಗನೇ
ಏಳು ಹನ್ನೆರಡು ಹತ್ತೊಂಬತ್ತು ವರುಷ
ಕಳದೋಗಿ ಬುಡುತು
ನಿನಗೆ ಕಾಲು ಪ್ರಾಯ ಬಂದು ಬುಟ್ಟದೆ ಕಂದಾ
ಈಗಲೀಗಾ ಈ ಭೂಮಿ ಭೂಲೋಕ
ನಡುವೆ ನರಲೋಕದಲ್ಲಿ
ಬಾಳವರ ಮನೆ ಬದುಕವರ ಮನೆ
ಪುಣ್ಯವಂತರ ಮನೆಗೋಗಿಬುಟ್ಟು
ನಿನಗೆ ಕಣ್ಣಿಗೊಪ್ಪಿದಂತ ಹೆಣ್ಣು ತಂದು
ಮದುವೆ ಮಾಡಿಕಂಡು
ತಂದಂತ ಮಡದಿ ಸೊಸೆ ಮಾಡಿಕತ್ತಿನಿ ಕಂದಾ

ಲೋ ಮದುವೆ ಮಾಡ್ತಿನಿ ಕಂದಾ
ಆದಿಯಪ್ಪ ಎಂದರಲ್ಲಾ || ಸಿದ್ಧಯ್ಯ||

ಮದುವೆ ಮಾಡ್ತಿನಿ ಕಂದಾ
ಆದೆಯಪ್ಪ ಮಗನೆ ಆದಿಯಪ್ಪ
ಕಂದಾ ಕೆಂಪಾಚಾರಿ ಎಂದುರು
ಧರೆಗೆ ದೊಡ್ಡವರ ಮಾತ ಕೇಳಿ
ಶಿವಶಿವಾ ಎನುತೇಳಿ ಎರಡು ಕರ್ಣನು ಕೂಡ
ಭದ್ರವಾಗಿ ಮುಚಿಗಂಡು ಧರೆಗೆ ದೊಡ್ಡೋರ ಮುಂಭಾಗದಲಿ
ತಲೆ ಬಕ್ಕೊಂಡು ನಿಂತುಗಂಡ ಕೆಂಪಣ್ಣ
ಕಂದಾ
ಮದುವೆಯಾಗದಿಲ್ವ ಮಾತಾಡು ಮಗನೆ
ಮಾತಾಡು ಕಂದಾ ಎಂದರು
ಧರೆಗೆ ದೊಡ್ಡೋರ ಮಾತು ಕೇಳಿ
ಕಣ್ಣಲ್ಲಿ ಕಣ್ಣೀರು ಸುರುಸುತಾ ಕಂದಾ
ಕೇಳಿ ನಮತಂದೆ ಕೇಳಿ ನನ್ನಪ್ಪ

ಕೇಳಿ ನನ್ನಪ್ಪ ಗುರುವೇ
ದೊರಿಯಾಗದು ಬ್ಯಾಡ
ನಾ ದೊರೆತಾನಾಳದು ಬ್ಯಾಡ
ರಾಜನಾಗದು ಬ್ಯಾಡ
ಈ ರಾಜ್ಯ ಆಳದು ಬ್ಯಾಡ
ಗುರುವೆ ಗೌಡನಾಗದು ಬ್ಯಾಡ
ಗೌಡುತನ ನನಗೆ ಬ್ಯಾಡ
ಎಡತಿ ಕಾಟ ಬ್ಯಾಡ
ಮಕ್ಕಳ ಕಾಟ ಬ್ಯಾಡ
ಅಪ್ಪ ಮಡದಿಯ ಸುಖ
ನನಗೆ ಬ್ಯಾಡ ನನ್ನಪ್ಪ
ಈ ಸಂಸಾರದ ಸುಖ
ನನಗೆ ಬ್ಯಾಡಿ ನನ ಗುರುವು
ಅಪ್ಪ ನಿಮ್ಮಂಗೆ ನನ್ನನೂವೆ
ಮಾಡುಬುಡಪ್ಪ ಎಂದಾರಲ್ಲಾ || ಸಿದ್ಧಯ್ಯ||

ನಿಮ್ಮಂಗೆ ನನ್ನನು ಮಾಡಿಬುಡಿ ಸ್ವಾಮಿs
ನಿಮ್ಮಂಗೆ ನಾನು ಆಯ್ತಿನಿ ಗುರುದೇವ ಎಂದರು ಕೆಂಪಣ್ಣ
ಕೆಂಪಣ್ಣ
ನನ್ನಂಗೆ ಆದಿಯಾ ಕಂದಾ
ನಾನು ನಿನ್ನ ಕಣ್ಣಿಗೆ ಹೆಂಗೆ ಕಂಡೆನು ಕಂದಾ
ಯಾವ ತರದಲಿ ಕಂಡೆನಪ್ಪ ಎಂದುರು
ಗುರುದೇವಾ
ನನ್ನ ಕಣ್ಣಿಗೆ ಯಾವ ರೀತಿ ಕಾಣ್ತಿರಿ ಎಂದುರೆ
ಎಪ್ಪತ್ತು ಮಾರುದ್ದ ಜಡೆs
ಮೊಳದುದ್ದ ಗಡ್ಡ ಗೇಣುದ್ದ ಮೀಸೆ
ಈಗಲೀಗಾ ತಾಮ್ರದ ಜಡೆಯವರು
ಇತ್ತಾಳೆ ಜಡೆಯವರು
ಚಿನ್ನಬೆರಳಿ ಜಡೆಯವರು
ನೀವು ಇಕ್ಕಿರುವಂತ ಆಭರಣಗಳ ನೋಡಿದ್ರೆ
ಸಾಧು ಸತ್ಪುರುಷಂತೆ ಕಾಣ್ತಿರಿ ಗುರುವು

ನನ್ನ ಸತ್ಪುರುಷನಾಗಿ ಗುರುವೆ
ಇರಿಸಿಬುಡಪ್ಪ ಎಂದಾನಂತೆ || ಸಿದ್ಧಯ್ಯ||

ಏನು ನನ ಕಂದಾ ಕೆಂಪಣ್ಣ
ಸಾಧು ಸತ್ಪುರುಷನಾಗಿ ಮಾಡಿಬುಡು ಅಂತಾ ಕೇಳಿದ್ಯ ಮಗನೆ

ಸಾಧು ನಿನಗೆ ಮಾಡೋದಿಲ್ಲ
ಸತ್ಪುರಷನಾ ಮಾಡುತೀನಿ|| ಸಿದ್ಧಯ್ಯ||

ಅಯ್ಯಾ ಸತ್ಪುರುಷನಾ ಕಂದಾ
ಮಾಡೂತೀನಿ ಮಗನೆ
ಹಾಗಂದು ನನ್ನ ಗುರುವು
ಧರೆಗೆ ದೊಡ್ಡವರು
ಮಂಟೇದಾ ಲಿಂಗಪ್ಪ
ಅಪ್ಪ ಬಾರಲೋ ನನ ಕಂದಾ
ಕಿಡಿಗಣ್ಣು ರಾಚಪ್ಪಾಜಿ
ಹಿರಿ ಚನ್ನಾಜಮ್ಮ
ಮಡಿವಾಳು ಮಾಚಯ್ಯ
ಫಲಾರುದಯ್ಯ ಕಂದಾ
ಓಡುಬನ್ರೋ ನನ ಕಂದಾ
ನನ್ನ ಮಗನು ಕೆಂಪಣ್ಣನವರ
ಸತ್ಪುರುಷನ ಮಾಡುತೀನಿ || ಸಿದ್ಧಯ್ಯ||

ಗುರುವೆ ಎಲ್ಲಾ ಭಕುತರ ದೇವಾ
ಕರಕಂಡು ನನ ಗುರುವು
ಎಲ್ಲಾ ಶಿಸುಮಕ್ಕಳ
ಕರಕಂಡು ನನ್ನಪ್ಪ
ತಮ್ಮ ಮಠದಲ್ಲಿದ್ದ ದೇವಾ
ಬಿರುದುಗಳನೆಲ್ಲಾ
ಒತ್ತಗಂಡು ನನ ಗುರುವು
ಕೆಂಪಾಚಾರಿ ಮಗನ
ಒಂದಿಗೆ ಕರಕಂಡು
ಅವರು ತಲಕಾಡು ಮಾಲಾಂಗಿಗೆ
ನನ್ನ ದೇವರು ದಯ ಮಾಡುತಾರೆ || ಸಿದ್ಧಯ್ಯ||

ಗುರುವೇ ಸತ್ಯ ಶರಣರ ಗುರುವು
ಕಡುಗಂಡು ನನ ಗುರುವು
ವಿಷ್ಣು ಈಸ್ಪುರಾ
ಬ್ರಹ್ಮ ತ್ರಿಮೂರುತಿ
ಕಲ್ಯಾಣ ಅಳುವಂತಾ
ದೊಡ್ಡ ಬಸವಣ್ಣನಾ
ಒಂದಿಗೆ ಕರಕಂಡು
ಗುರುವೇ ಕಲ್ಯಾಣದ ಒಳಗೆ
ಇರುವಂತಾ ನನ್ನ ಗುರುವು
ಕೋಟಿಗೊಬ್ಬ ಶರಣ
ಕುಲಕೊಬ್ಬ ಭಗುತಾ
ಅರವತ್ತಾರು ಜಂಗುಮರು
ಮೂವತ್ತು ಮೂರು ಮಂದಿ
ಮುನಿಗಳ ಕಟ್ಟಿಗೊಂಡು
ಗುರುವೇ ಲಕ್ಷ ಕೋಟಿ ಜಂಗುಮರಾ
ಒಂದಿಗೆ ಕರಕಂಡು
ಧರೆಗೆ ದೊಡ್ಡವರು
ನನ ಮಂಟೇದಾ ಲಿಂಗಪ್ಪ
ಅವರು ತಲಕಾಡು ಮಾಲಂಗಿಗೆ
ಬಂದಾರಂತೆ ಮಾಯಕಾರ || ಸಿದ್ಧಯ್ಯ||

ಅಷ್ಟು ಕೋಟಿ ಸಾಧು ಸತ್ಪುರುಷರ ಕರಕಂಡುs
ನರ್ರ‍ ಕಟ್ಟುಗಂಡು ಸುರಪತಿಗಳ ಕರಕಂಡು
ಸತ್ಯ ಶರಣ ಮಾತ್ಮುರನೆಲ್ಲಾ ಕಟ್ಟುಗಂಡು
ರಾಚಪ್ಪಾಜಿ ದೊಡ್ಡಮ್ಮ ತಾಯಿ
ಹಿರಿಚನ್ನಾಜಮ್ಮ ಮಡಿವಾಳ ಮಾಚಪ್ಪ ಫಲಾರದಯ್ಯ
ಅಷ್ಟು ಕೋಟಿ ಮಕ್ಕಳನು ಕಡುಗಂಡು
ಜಗತ್ತು ಗುರು ಧರೆಗೆ ದೊಡ್ಡಯ್ಯ
ತಲಕಾಡು ಮಾಲಂಗಿ ಮಡೂಗೆ ಬಂದು
ಕೆಂಪಚಾರಿ ಮಗನಾ ಮುಂಭಾಗದಲ್ಲಿ ನಿಲಿಸಿಗಂಡು
ಕೆಂಪಣ್ಣ
ಇಲ್ಲಿ ಎಷ್ಟೊಂದು ದೈವ ದೇವ್ಮಾನ್ರು ಇದ್ರು ನೋಡು
ನರ್ರು‍ ಸುರ್ರು‍ ಕಂದಾ
ಎಷ್ಟು ಭಕುತಾದಿಗಳವರೆ ನೋಡು ಕಂದಾ
ಕೆಂಪಣ್ಣ
ಇದು ಎರಡು ಹೊಳೆ ಕೂಡಿದ ನದಿ ಅಂದ್ರೆ
ಕುಕ್ಕೂರು ಕಡುವು ತಲಕಾಡು ಮಾಲಂಗಿ ಅಂದ್ರೆ
ಆಕಾಸ ಭೂಮಿ ಎರಡು ಒಪ್ಪುವಂತ ಸ್ಥಳ ಕಣಪ್ಪ
ಈ ಲೋಕವೆಲ್ಲ ನೆಚ್ಚುವಂತ
ಸ್ಥಳದಲಿ ತಂದು ನಿನ್ನ ಇರಿಸಿವ್ನಿ ಕಂದಾ
ಈಗ ದೇವಲೋಕಕೂ ನೀನೇ ದೇವರಾಯ್ತಿಯಾ ಕಂದಾ
ನರಲೋಕಕು ನೀನು ದೇವರಾಯ್ತಿಯಾ ಮಗನೆ
ಕೆಂಪಣ್ಣ

ಇಲ್ಲಿ ನಿಂತಿರುವಂತ ದೇವರಿಗೆಲ್ಲ ನೀ
ದೊಡ್ಡ ದೇವುರು ನೀ ಆಗುತೀಯೇ|| ಸಿದ್ಧಯ್ಯ||

ಇಲ್ಲಿರುವಂತ ದೇವ ದೇ‌ವ್ಮಾನ್ರಿಗೆಲ್ಲಾ
ಯಾವ ಕಾರ್ಯಕೂ ಕಂದಾ
ಸೀದಾ ಸಿದ್ದನಾಯ್ತಿಯ ಮಗನೆ
ಬಾಪ್ಪ ಕಂದಾ ಎಂತೇಳಿ
ತಲಕಾಡು ಮಾಲಂಗಿ ಮಡೂಗೆ ಕರಕಂಡು ಬಂದು
ಎದೆ ಮಟ್ಟ ಗಂಗೆಗೆ ನಿಲಿಸಿ ಸ್ಥಾನ ಮಾಡಿಸಿ
ಕಂದಾ ಅಲ್ಲಿ ಕುಂತಾವರೇ ನೋಡು ಅಡಗಂಪಣ್ಣ
ಅವರ ಬಳಿಗೋಗುಬುಟ್ಟು ಮಗನೆ
ಮಂಡೇಸೂಸ್ಯಂತ್ರ ಮಾಡಿಸೋಗು ಕಂದಾ ಎಂದುರು

ಧರೆಗೆ ದೊಡ್ಡೋರ ಮಾತಾ ಕೇಳಿ
ಬರುತಾನೆ ಕೆಂಪಣ್ಣ ಶರಣ || ಸಿದ್ಧಯ್ಯ ||
ಗುರುವೆ ಹಂಪಣ್ಣನ ಬಳಿಗೆ
ಬಂದಿದಾ ನನ ಕಂದಾ
ಗುರುವೆ ಹಡಗಲ ಪಾಣಾನವರ
ಮುಂದೆ ಕೂತಿದ್ದ
ಗುರುವೆ ಹಡಿಗಲಪಾಣನವರು
ಎಳಿಯ ಕೆಂಪಣ್ಣನವರ
ಕಣ್ಣಾರೆ ನೋಡಿ
ಅವರು ಮಾಯದ ಕತ್ತಿಯ ಒಳಗೆ
ಮಂಡನಾದುದು ಬೋಳಿಸುತಾರೆ || ಸಿದ್ಧಯ್ಯ ||

ಗುರುವೆ ಮಾಯದ ಕತ್ತಿಯ ಒಳಗೆ
ಕೆಂಪಾಚಾರಿಯವರಾ
ಮಂಡೆ ಬೋಳಿಸುವರೆ
ಅರಿವಂತಾ ನದಿಗೆ
ಕರಕಂಡು ಬಂದಾವರೆ
ಅವರು ಮತ್ತು ಒಂದು ಸಲ
ಸ್ಥಾನವ ಮಾಡಿಸವರೇ
ಅಯ್ಯಾ ನೀರಿನೊಳಗೆ ದೇವಾ
ಕೆಂಪಣ್ಣನವರಾ
ನಿಲಿಸಿಗಂಡು ನನ ಗುರುವು
ಕೇಳಪ್ಪ ನನ್ನ ಮಗನೆ
ಎಳೆಯ ಕೆಂಪಣ್ಣ ಶರಣ || ಸಿದ್ಧಯ್ಯ ||

ಎದೆಮಟ್ಟ ಗಂಗೇಲಿ ಕೆಂಪಾಚಾರಿ ನಿಲಿಸಿ
ಮತ್ತು ಒಂದು ಸಾರಿ ಮುಳುಗಿಸಿ ಸ್ಥಾನ ಮಾಡಿಸಿಬುಟ್ಟು
ಎರಡು ಹೊಳೆ ಕೂಡಿದಾ ಎದೆಮಟ್ಟ ಗಂಗೆ ಒಳಗೆ
ಕೆಂಪಾಚಾರಿ ನಿಲಿಸಗಂಡು ಧರೆಗೆ ದೊಡ್ಡವರು
ಕೆಂಪಣ್ಣ
ಒಂದು ಸತಿ ಸ್ನಾನ ಮಾಡಿ
ಮಂಡೆ ಬೋಳಿಸಿಗಂಡೆ
ಈಗ ಎರಡು ಸತೀ ಸ್ನಾನ ಮಾಡಿ
ಮೇಲಕೆದ್ದು ನಿಂತಿದ್ದಿಯಾ ಕಂದಾ
ಕೆಂಪಣ್ಣ
ಇಲ್ಲಿಗಂಟಾ ಯಾರಿಗೆ ಮಗನಾಗಿದ್ದಿಯಪ್ಪ
ನಮ್ಮ ತಂದೆ ತಾಯಿಗಳಿಗೆ ಮಗನಾಗಿದ್ದೆ ಗುರುವೆ ಎಂದರು
ಇಲ್ಲಿಂದೀಚೆಗೆ ಯಾರಿಗೆ ಮಗನಾಗೂವೆ?

ಅಪ್ಪ ಧರೆಗೆ ದೊಡ್ಡವರಿಗೆ
ದತ್ತು ಮಗನಾಗುತೀನಿ || ಸಿದ್ಧಯ್ಯ ||

ಈ ಖಂಡಾಯ ಹೊತ್ತವರೀಗೆ
ಮಗನಾಗಿ ಬರುತೀನಿ || ಸಿದ್ಧಯ್ಯ ||

ನನ್ನ ಮಂಟೇದಾ ಲಿಂಗಪ್ಪನಿಗೆ
ಮಗನಾಗಿ ಹೋಗುತೀನಿ || ಸಿದ್ಧಯ್ಯ ||