ಏನೋ ಬಳೆಗಾರ
ಈ ಮುತ್ತು ರತ್ನುದ ಬಳೆ ಕಳದು ಬೆತ್ತದ ಮೊರ್ಕೆ ಮಡಗಬೇಕ?
ಆಮೇಲೆ ನಿನ್ನ ಬಳೆ ತೋರ್ಸಿ ಬಳೆ ತೊಟ್ಟಿಯಾ
ಖಂಡಿತ್ವಾಗು ತೊಟ್ತಿನೀ ಕನ್ರವ್ವ
ಖಂಡಿತ್ವಾಗು ಬಳೆ ತೊಟ್ತಿನಿ ಕನ್ರಕ್ಕ ಎಂದರು

ಏಳು ಜನ ದೊರೆಸಾನಿಗಿತ್ತೀರು
ಗೌಡೀರ ಕರ್ಸಿಬಿಟ್ಟು ಬತ್ತದ ಮೊರ ತರ್ಸಿಬಿಟ್ಟು
ಸಿದ್ದಪ್ಪಾಜಿಯವರ ಮುಂಭಾಗದಲ್ಲಿ
ಬೆತ್ತದ ಮೊರ ಮಡಗುಬುಟ್ಟು

ಈಗ ಮುಂಗೈಯ ಕೊಡ್ತೀವಿ
ಬಳೆಯನ್ನೇ ಕಳುಕಯ್ಯ|| ಸಿದ್ಧಯ್ಯ ||

ಗುರುವೆ ಏಳು ಜನ ಗುರುವು
ದೊರೆಗೊಳ ಮಡದೀರ
ಅಂಗೈಯ ಇಡ್ಕಂಡು
ನೀಲಿ ಸಿದ್ದಪ್ಪಾಜಿ
ಅವರು ಮುತ್ತು ರತ್ನುದ ಬಳೆಯ ದೇವ
ಮುಂಗೈನಿಂದ ಕಳ್ದರಲ್ಲ || ಸಿದ್ಧಯ್ಯ ||

ಗುರುವೇ ಮುತ್ತು ರತ್ನುದ
ಬಳೆಗಳ ನನ್ನ ಗುರುವು
ಗುರುವೆ ಮುಂಗೈನಿಂದ ದೇವ
ಕಳೆದರೂ ನನ್ನ ಗುರುವು
ನೀಲಿ ಸಿದ್ದಪ್ಪಾಜಿ
ಗುರುವೆ ಏಳುಜನ ದೊರೆಸಾನೀರ
ಕೈಲಿದ್ದ ಬಳೆಯ
ಎಲ್ಲಾನು ಕಳೆದಾರು
ಅವರು ಬೆತ್ತದ ಮೊರದ ತುಂಬ
ಬಳೆಗಳಾ ಮಡಗುತಾರೆ || ಸಿದ್ಧಯ್ಯ ||

ಎಲ್ಲಾ ಬಳೆಗಳನು ದೇವಾ
ಸಿದ್ದಪ್ಪಾಜಿಯವರು ಕಳದು ಕಳೆದು
ಬೆತ್ತದ ಮೊರ್ದಲ್ಲಿ ಮಡ್ಗುದ್ರು
ಏಳು ಜನ ದೊರೆಸಾನಿಗಳ ಮುಂಗೈಲ್ಲಿದ್ದಂತ ಬಳೆಗಳು
ಬೆತ್ತದ ಮೊರ್ದ ತುಂಬ ಆದವಂತೆ
ಎಲ್ಲಾ ಎಳೆಯ ಕಳದ್ಬುಟ್ಟು
ಅಕ್ಕ
ಈಗಲೀಗ ಎಲ್ಲಾ ಬಳೆನು ಕಳದು
ಬೆತ್ತದ ಮೊರ್ದಲ್ಲಿ ಮಡಗಿವ್ನಿ ಕನ್ರಕ್ಕ
ಈಗ ನಿಮ್ಮ ನೋಡದ್ರೆ ನಿಮ್ಮ ಗಂಡದಿರು

ಇದ್ರು ಮುಂಡೇರು ಕವ್ವ
ಸತ್ತೋದ್ರು ಮುಂಡೇರು ಕವ್ವ || ಸಿದ್ಧಯ್ಯ ||

ಅಕ್ಕದಿರೇ
ಈಗ ಎಲ್ಲಾ ಬಳೆ ಕಳೆದಿವ್ನಿ ಕನ್ರಮ್ಮ
ಬೆತ್ತದ ಮೊರ್ದಲ್ಲಿ ಮಡಗಿವ್ನಿ
ಈಗ ನನ್ನ ಬಳೆ ತೋರಿಸ್ತಿನಿ ನೋಡ್ರಕ್ಕ ಅಂತೇಳಿ
ನೀಲಗಾರ ಗಂಡ ನೀಲಿ ಸಿದ್ದಪ್ಪಾಜಿ
ಈಗಲೀಗ ಬಳೆ ಮಲ್ಲಾರದಿಂದ
ಬಳೆ ಮಲ್ಲಾರು ತಗ್ದು
ಏಳು ಜನ ದೊರೆಸಾನಿಗಿತ್ತಿರ ಮುಂಭಾಗದಲ್ಲಿ ಮಡುಗುದ್ರು

ಅಕ್ಕ ಬಳಗಾರ್ನ ಬಳೆ ನೋಡು
ಸುಂದರವಾಗಿ ಕಾಣುತಾವೆ|| ಸಿದ್ಧಯ್ಯ ||

ಅಕ್ಕ ಬಳ್ಗಾರ ತಂದಿರೊ
ಬಳೆಗಳ ನೋಡಿದ್ರೆ
ಅಂದ ಚೆಂದದ ಬಳೆ
ಅಕ್ಕ ಸುಂದರವಾದ ಬಳೆ
ಈ ಅಂದ ಚೆಂದದ ಬಳೆಯ
ನಾ ಹುಟ್ಟುವ ಕಾಲದಿಂದ
ನಾವಾಗಿ ತೊಡಲಿಲ್ಲ
ನಾವು ಬೆಳೆದಂತ ದಿವಾಸದಿಂದ
ಇಂತ ಬಳೆಯ ತೊಡಾಲಿಲ್ಲ || ಸಿದ್ಧಯ್ಯ ||

ಹುಟ್ಟುದ ಕಾಲದಿಂದ ಬೆಳದಂತ ಕಾಲದಿಂದ
ಈ ಬಳ್ಗಾರ ತಂದಿರುವಂತ ಬಳೆಗಳನ್ನು ನಾವು ತೊಟ್ಟಿರ್ಲಿಲ್ವಮ್ಮ
ಈ ಬಳ್ಗಾರ ತಂದಿರ್ತಕ್ಕಂತ ಬಳೆ ಅಂದ್ರೆ
ಅಂದ ಚಂದದ ಬಳೆ
ಸುಂದರವಾದ ಬಳೆ ತಂದವ್ನೆ ಕನ್ರಕ್ಕ ಅಂತೇಳಿ
ಓ ಬಳೆಗಾರ
ನಿನ್ನ ಬಳೆ ನೋಡದ್ರೆ
ನಮ್ಮಗೆ ತೊಟ್ಟಗಳುವಂತ ಆಸೆ ಉಂಟಾಗ್ಬುಟ್ಟದೆ
ಈಗಲೀಗ ನಮ್ಮ ಕೈಗೆ ಬಳೆ ತೋಡು ಎಂದರು
ಅಕ್ಕಯ್ಯಾ
ನೀವು ಪಟ್ಟೆ ಮಂಚದಮ್ಯಾಗೆ ಕೂತ್ತಿದ್ದಿರೀ
ನಾನು ಭೂಮಿ ಮ್ಯಾಲೆ ನಿಂತಿವ್ನಿ ಕನ್ರಕ್ಕ
ಈಗಲೀಗ ನೀವು ಮಂಚದ ಮ್ಯಾಲೆ ಕೂತ್ಗಂಡು
ನಾನು ಭೂಮಿ ಮ್ಯಾಲೆ ನಿಂತ್ಗಂಡು
ಈ ಮುತ್ತೈದೆ ಬಳೆ
ನಿಮ್ಮ ಮುಂಗೈಗೆ ತೊಟ್ಟರೆ

ಮುಂಗೈಗೆ ನನ್ನ ಬಳೆ
ಏರೋದಿಲ್ಲ ಎಂದಾರಲ್ಲ || ಸಿದ್ಧಯ್ಯ ||

ಮುಂಗೈಗೆ ಬಳೆ ಏರೋದಿಲ್ಲ ಕನ್ರಕ್ಕ
ಈ ಮುತ್ತೈದೆ ಬಳೆಗಳ ನಿಮ್ಮ ಮುಂಗೈಗೆ ತೋಡಬೇಕಾದ್ರೆ

ಅವ್ವ ಮಂಚ ಬುಟ್ಟೂ ಇಳೀರವ್ವ
ಭೂಮಿ ಮ್ಯಾಲೆ ಕೂತ್ಗೊಳ್ರವ್ವ || ಸಿದ್ಧಯ್ಯ ||

ಅಕ್ಕ ಭೂಮಿ ಮ್ಯಾಳೆ ಕೂತ್ಗಂಡ್ರೆ
ಮುಂಗೈಗೆ ಬಳೆಯ ನಾನು
ಅಂದವಾಗಿ ತೋಡುವುತ್ತಿನಿ|| ಸಿದ್ಧಯ್ಯ ||

ಏನೋ ಬಳೆಗಾರ
ಪಟ್ಟೇ ಮಂಚದ ಮ್ಯಾಲೆ ಕೂತಿವಿ
ಬಳೆ ತೋಡು ಅಂದ್ರೆ
ನೀವು ಕೂತಿರೀ ನಾನು ನಿಂತಿವ್ನಿ
ಈಗಲೀಗ ನಿಂತ್ಗಂಡು ಬಳೆ ತೊಟ್ಟರೆ
ನಿಮ್ಮ ಮುಂಗೈಗೆ ಬಳೆ ಏರೋದಿಲ್ಲ
ಇವು ಮುತ್ತೈದೆ ಬಳೆ ಅಂತ ಹೇಳ್ತಿಯಲ್ಲ
ಈಗ ನಾವು ಮುತ್ತೈದೆ ಬಳೆ
ತೊಡ್ಸಕಬೇಕಾದರೆ
ನೀನು ನಮ್ಮ ಕೈಗೆ ಬಳೆ ತೋಡಬೇಕಂದ್ರೆ
ಮಂಚ ಬುಟ್ಟೂ ನಾವು ಭೂಮಿಗೀಳಿಯಬೇಕಾದರೆ
ನಮ್ಮ ಕಾಲೆಲ್ಲ ಮೊಣ್ಣಾಗುಬುಡ್ತದಲ್ಲೊ

ನಮ್ಮ ಹುಟ್ಟಿರುವ ಪಟ್ಟೆ ಸೀರೆ
ಮಾಸೋಯ್ತುದೆ ಎಂದಾರಲ್ಲ || ಸಿದ್ಧಯ್ಯ ||

ಈಗಲೀಗ ಪಟ್ಟೆ ಸೀರೆ ಮಾಸೋಗುಬುಡ್ತದೆ
ನಾವು ಪಟ್ಟೆ ಮಂಚ ಬುಟ್ಟೂ ಭೂಮಿಗಿಳಿಯೋಕಾಗದಿಲ್ಲ
ಮಂಚದ ಮ್ಯಾಲೆ ನಾವು ಕೂತ್ಕತ್ತಿವಿ
ಭೂಮಿಲಿ ನೀನು ನಿಂತ್ಕಂಡು ಬಳೆ ತೊಡು ಎಂದರು
ಅಕ್ಕಯ್ಯ
ಪಟ್ಟೆ ಮಂಚದ ಮ್ಯಾಲೆ ನೀವು ಕೂತ್ಗಂಡು
ಭೂಮಿಲಿ ನಾನು ನಿತ್ಗಂಡು ಬಳೆ ತೊಟ್ಟರೆ
ನಿಮ್ಮ ಮುಂಗೈಗೆ ಬಳೆ ಏರೋದಿಲ್ಲ ಕನ್ರಮ್ಮ
ಈ ಮುತ್ತೈದೆ ಬಳೆ ನಿಮ್ಮ ಮುಂಗೈಗೆ ಏರಬೇಕಾದ್ರೆ
ಭೂಮಿಲಿ ಕೂತ್ಕಬ್ಯಾಡಿ ಅಕ್ಕಯ್ಯಾ
ನಿಮ್ಮ ಪಾದ ಮೊಣ್ಣಾಗದಂತೆ
ಸೀರೆ ಮಾಸೋಗದಂತೆ

ಒಂದು ಪಗಡೆ ಕಾಯಿನ ಮಂದಲಿಗೆಯ
ತಂದು ಹಾಸಿರವ್ವ || ಸಿದ್ಧಯ್ಯ ||

ಅಕ್ಕ ಪಗಡೆಕಾಯಿನ ಮಂದಲಿಗೆ
ಭೂಮಿಗೆ ಹಾಸ್ರಕ್ಕ
ಮಂದಲ್ಗೆ ಮೇಲೆ
ನೀವು ಕೂತ್ಗರವ್ವ
ಅಕ್ಕ ನಿಮ್ಮ ಮುಂದುಗಾಡೆ
ನಾನು ಕೂತ್ಕತ್ತಿನೀ
ಅಕ್ಕ ನೀವು ಕೇಳಿದ ಬಳೆಯ
ನಿಮ್ಮ ಕೈಗೆ ತೋಡುತಿನಿ || ಸಿದ್ಧಯ್ಯ ||

ನೀವು ಕೇಳುಕೇಳ್ದ ಬಳೆಯ
ನಿಮ್ಮ ಕಣ್ಣನ ಮುಂದ್ಗಡೆ
ನಾ ತೋಡಸ್ತಿನಿ ಕನ್ರವ್ವ
ಈ ಮಂಚವ ಬಿಟ್ಟೂ ನೀವು
ಮಂದಲ್ಗೆಗೆ ಬನ್ನಿರವ್ವ || ಸಿದ್ಧಯ್ಯ ||

ಪಟ್ಟೇ ಮಂಚ ಬುಟ್ಟು
ಮಂದಲ್ಗೆ ಮ್ಯಾಕೆ ಬಂದು ಕೂತ್ಕಳಿ ಅಕ್ಕದಿರೆ ಎಂದರು
ಈ ಸಿದ್ದಪ್ಪಾಜಿ ಮಾತ ಕೇಳ್ಕಂಡು
ಏಳು ಜನ ದೊರೆಸಾನಗಿತ್ತೀರು
ಏನೋ ಬಳೆಗಾರ
ಆದ್ರು ಆಗಲೀ
ಈಗಲೀಗ ಭೂಮಿಲಿ ನಾವು ಇರೋದಿಲ್ಲ
ಪಾದ ಮಣ್ಣು ಮಾಡ್ಕಳದಿಲ್ಲ
ಈ ಪಗಡೆ ಕಾಯ್ನ ಮಂದ್ಲಿಗೆ ಮೇಲೆ
ನಾವು ಕೂತ್ಕತ್ತಿವಿ
ನೀವು ಬಳೆ ತೊಡು
ಏನತೇಳಿ ಒಬ್ಬ ದೊರೆಸಾನಿ ಹೇಳದಳು
ಮತ್ತೊಬ್ಬ ದೊರೆಸಾನಿ ಇನ್ನೇನು ಹೇಳ್ತಳೆ ಅಂದ್ರೆ
ಏನ್ರಕ್ಕಯ್ಯ
ಈಗಲೀಗ ನಮ್ಮ ಗಂಡದೀರು ಹಿಡೀವಂತ ಕೈಯಿ
ನಮ್ಮ ಗಂಡದಿರು ಮುಟ್ಟೂವಂತ ಮೈಯಿ
ಈ ಬಳೆಗಾರ ನಮ್ಮ ಕೈಯಿ ಇಡುದ್ರೆ

ಕೈಯಿನು ಇಡ್ದಂಗೆ ಆಯ್ತು
ನಮ್ಮ ಮೈನು ಮುಟ್ದಂಗೆ ಆಯ್ತು || ಸಿದ್ಧಯ್ಯ ||

ನಮ್ಮ ಗಂಡ್ದಿರು ಇಡುವಂತ ಕೈಯಸದ
ಇವ್ನು ಇಡೀಬಹುದಾ
ಎಂದು ನನ್ನ ಗುರುವು
ಒಬ್ಬ ದೊರೆಸಾನಿ
ಸಿದ್ದಪ್ಪಾಜಿ ಮೊಕವ
ಕಣ್ಣಾರ ನೋಡ್ಕಂಡು
ಅವಳು ಪಟ್ಟದ ರಾಣಿ ವಂದಗೆ
ಮಾತ್ಗಳ ಆಡುತಾಳೆ || ಸಿದ್ಧಯ್ಯ ||

ಈಗಲೀಗ ಕೇಳ್ರಕ್ಕ
ನಮ್ಮ ಗಂಡದೀರು ಇಡೀವಂತ ಕೈಯಿ
ನಮ್ಮ ಗಂಡದೀರು ಮುಟ್ಟೂವಂತ ಮೈಯಿ
ಈ ಬಳ್ಗಾರ ಮುಟ್ಟುಬುಡ್ತನಲ್ಲ
ನಮ್ಮ ಕೈಯಿ ಇಡ್ದ ಮ್ಯಾಲೆ ಮೈಮುಟ್ದಂಗೆ ಹಾಗೋಗ್ಬುಡ್ತು
ಈಗ ಇವ್ನು ಕೈಲಿ ಯಾವು ರೀತಿ
ಮುಂಗೈ ಕೊಟ್ಟೂ ಬಳೆ ತೋಡ್ಸಕಬೇಕ್ರಮ್ಮ ಎಂದರು
ಏಳು ಜನ ಗೌಡಿ ದಾಸಿರ ಕರದು
ಕೇಳ್ರಮ್ಮ ಗೌಡಿ ದಾಸಿರೆ
ಯಾವ್ನೋ ಬಳೆಗಾರ
ಬಳೆ ತಕ್ಕಂಡು ಬಂದವನೇ
ಇವ್ನು ತಂದಿರುವಂತ ಬಳೆ ಅಂದ್ರೆ
ಅಂದ ಚಂದವಾದ ಬಳೆ ಕನ್ರಮ್ಮ
ಅಂದವಾದ ಬಳೆ ಚಂದವಾದ ಬಳೆ
ನಮ್ಮ ಮುಂಗೈಗೆ ತೊಟ್ಟಕಬೇಕು
ಈ ಬಳೆಗಾರ ನಮ್ಮ ಕೈ ಮುಟ್ಟಸ್ಕಬುಡ್ತನೆ
ಕೈ ಮುಟ್ಸಕ್ಕದ ಮೇಲೆ ಹಂಗೆ ಮನಗೆ ಹೋಗಬಾರ್ದು
ಹರಿಸಿಣ ಸೀಗೆ ಹರೀರಮ್ಮ

ನಮ್ಮಗೆ ಒಳ್ಳೆ ನೀರ ನೀವು
ಕಾಯ್ಸಿರಮ್ಮ ಎಂದಾರಂತೆ || ಸಿದ್ಧಯ್ಯ ||

ಏಳು ಜನ ಗೌಡಿ ದಾಸಿರು
ಆಗಲಿ ಕನ್ರಮ್ಮ ಆಗಲಿ ಕನ್ರವ್ವ
ಸ್ತಾನಕ್ಕೆ ನೀರ ಕಾಯ್ತೀವಿ
ಹರಿಸಿಣ ಸೀಗೆ ಹರಿತೀವಿ
ಈ ಬಳೆಗಾರ್ನ ಕೈಲಿ ಬಳೆ ತೋಡ್ಸಕ್ಕಳಿ ಅಂತೇಳಿ
ಅವರವರವ ಕೆಲಸ ಕಾರ್ಯಕ್ಕೆ ಹೊರಟೋದ್ರು
ಏಳೂಜನ ದೊರೆಸಾನಿಗಿತ್ತೀರು
ಸಿದ್ದಪ್ಪಾಜಿ ಮುಂಭಾಗದಲ್ಲಿ ಕೂತ್ಗಂಡು
ಬಳಗಾರ ಈಗ ನಮ್ಮ ಕೈಗೆ ಬಳೆತೋಡು ಅಂತೇಳಿ
ಬಲದ ಕೈತಗದು ಬಳ್ಗಾರ ಶೆಟ್ಟರ ಕೈಲಿ ಕೊಟ್ಟರು
ಏಳು ಜನ ದೊರೆಸಾನಗಿತ್ತೀರ ಮೊಕನೋಡ್ತ
ಆಗಲೀಗ ಒಬ್ಬ ರಾಜರು ಮಡದಿ ಮುಂಗೈ
ಇಡ್ಕಂಡು ಸಿದ್ದಪ್ಪಾಜಿ

ಧರಗೆ ದೊಡ್ಡವರಿಗೆ
ಕೈಯೆತ್ತಿ ಮುಗ್ದರಲ್ಲ || ಸಿದ್ಧಯ್ಯ ||

ಗುರುವೆ ಮಂಟೇದ ಲಿಂಗಯ್ಯ
ಮಾತ ನೆನ್ಕಂಡು ಗುರುವು
ಮಂಟೇದ ಲಿಂಗಯ್ಯನ
ಪಾದ ಮನದಲ್ಲಿ ನೆನ್ಕಂಡು
ತೋಪಿನ ದೊಡ್ಡಮ್ಮ
ಹೀರಿ ಚೆನ್ನಾಜಮ್ಮ
ಕಿಡಗಣ್ಣು ರಾಚಪ್ಪಾಜಿ
ಈಗ ಬಳೆಯನ್ನೆ ತೋಡುತೀನಿ
ಮನೆಗೆ ಮಂಟೇದ ಸ್ವಾಮಿ || ಸಿದ್ಧಯ್ಯ ||

ನನಗೆ ನಾಳೆ ಬರುವ ಕಷ್ಟ
ನಿಮ್ಮ ಪಾದಕ್ಕೆ ಆರುವಾಗಲಪ್ಪ|| ಸಿದ್ಧಯ್ಯ ||

ಅವ್ವ ಮುಂದೆ ಬರುವ ಕಷ್ಟವ
ನೀನೆ ಕಾಪಾಡಬೇಕು || ಸಿದ್ಧಯ್ಯ ||

ನಾಳೆ ಬರುವಂತ ಕಷ್ಟ ಗುರುವುs
ನೀನೆ ಕಾಪಾಡಬೇಕು ಜಗನ್‌ ಜ್ಯೋತಿ
ಧರೆಗೆ ದೊಡ್ಡಯ್ಯ
ಹಿರಿ ಚೆನ್ನಾಜಮ್ಮ
ಕಿಡುಗಣ್ಣು ರಾಚಪ್ಪಾಜಿ
ತಾಯಿ ದೊಡ್ಡಮ್ಮ ಏನುತೇಳಿ
ರಾಜ ಬೊಪ್ಪಣ್ಣ ಪುರಕ್ಕೆ ಕೈಯೆತ್ತಿ ಮುಗ್ದು ಸಿದ್ದಪ್ಪಾಜಿ
ಈಗಲೀಗ ಅಂದ ಚಂದದ ಬಳೆ ತಗದು
ಮುಂಭಾಗದಲ್ಲಿ ಮಡೀಕಂಡು ಸಿದ್ದಪ್ಪಾಜಿಯವರು

08_79_Mante-KUH

ಅಯ್ಯಾ ರಾಜರ ಮಡದೀರಿಗೆ
ಬಳೆಯವನ್ನೇ ತೋಡುತಾರೆ || ಸಿದ್ಧಯ್ಯ ||

ಗುರುವೆ ವಜ್ರಚಾರಿ ಮಡದಿಗೆ
ನಾಗ್ರಬಳೆಯ ತೊಡವುತಾರೆ || ಸಿದ್ಧಯ್ಯ ||

ಅಯ್ಯಾ ಬೆಟ್ಟಚಾರಿ ಮಡದಿಗೆ
ಬೆಳ್ಳಿ ಬಳೆಯ ತೊಡವುತಾರೆ || ಸಿದ್ಧಯ್ಯ ||

ಗುರುವೆ ಮುದ್ದಚಾರಿ ಮಡದಿಗೆ
ಅವರು ಹರಳು ಬಳೆಯ ತೊಡವುತಾರೆ || ಸಿದ್ಧಯ್ಯ ||

ಅಯ್ಯಾ ಚಿನ್ನಚಾರಿ ಮಡದಿಗೆ
ಅವರ ಕಡ್ಜನ ಬಳೆಯ ತೊಡವುತಾರೆ || ಸಿದ್ಧಯ್ಯ ||

ಗುರವೆ ದತ್ತಚಾರಿ ಮಡದಿಗೆ
ಹೆಜ್ಜೇನಿನ ಬಳೆಯ ತೊಟ್ಟಾರಲ್ಲ || ಸಿದ್ಧಯ್ಯ ||

ಏಳು ಜನ ಮಡದೀರುಗೂ
ಮುಂಗೈಗೆ ಎರಡೆರಡು ಡಜೇನು ಬಳೆ
ತೊಟ್ಟುಬುಟ್ಟು ಸಿದ್ದಪ್ಪಾಜಿ

ಅಕ್ಕ ಈಗ ಮುಂಗೈಯ ನೋಡ್ರುಕ್ಕ
ಸುಂದ್ರವಾಗಿ ಕಾಣುತಾವೆ || ಸಿದ್ಧಯ್ಯ ||

ನಿಮ್ಮ ಮುಂಗೈಯ ನೋಡುರುವ್ವ
ಎಷ್ಟು ಚೆನ್ನಾಗಿ ಕಾಣುತಾವೆ|| ಸಿದ್ಧಯ್ಯ ||

ಮುಂಗೈಯ ನೋಡ್ರಕ್ಕ
ಎಷ್ಟೊ ಚಂದಾಗಿ ಕಾಣ್ತವೇ
ಎಷ್ಟು ಸುಂದ್ರವಾಗಿ ಕಾಣ್ತವೆ
ನಿಮ್ಮ ನಿಮ್ಮ ಮುಂಗೈ ನೋಡ್ಕರವ್ವ ಎಂದರು
ಹೇ ಬಳೆಗಾರ
ಈಗಲೀಗ ನಮ್ಮ ಕೈಯಿನ ಬಳೆ ನೋಡ್ದಂಗೆ ಆಯ್ತು
ನಮ್ಮ ಮುಂಗೈಗೆ ನೀ ಬಳೆ ತೊಟ್ಟಾಂಗಾಯ್ತು
ನಿಮ್ಮ ಬಳೆ ದುಡ್ಡು ಎಷ್ಟು ಕೊಡಬೇಕು

ನಮ್ಮ ಮುಂದಗಾಡೆ ಹೇಳುಬುಡು
ನಾವೆಸ್ತುಬುಡ್ತೀವಿ ಎಂದಾರಲ್ಲ || ಸಿದ್ಧಯ್ಯ ||

ಅಯ್ಯಾ ಎಷ್ಟು ದುಡ್ಡು ನಿನಗೆ
ನಾವು ಕೊಡಬೇಕು ಬಳೆಗಾರ
ಹೇಳುಬುಡು ಬಳೆಗಾರ
ನೀ ಕೇಳದಷ್ಟು ದುಡ್ಡ
ನಾವೆಸ್ದುಬುಡ್ತೀವಿ
ನಾವು ಎಸ್ತಂಥ ಕಾಸು ದುಡ್ಡ
ಆಯ್ಕೊಂಡೋಗು ಎಂದಾರಲ್ಲ || ಸಿದ್ಧಯ್ಯ ||

ಕೇಳದಷ್ಟೂ ದುಡ್ಡ ಎಸಿತೀವಿ
ನಾವು ಎಸದಂತ ದುಡ್ಡ ಆಯ್ಕೊಂಡು
ನಮ್ಮ ಮನೆಬುಟ್ರೂ ವಂಟೋಗುಬುಡು ಎಂದರು
ಅಕ್ಕಯ್ಯ
ಈಗಲೀಗ ಕಾಸಿನ ಬಳೆ ನಾನು ತೊಟ್ಟಿಲ್ಲ ಕನ್ರವ್ವ
ದುಡ್ಡಿನ ಬಳೆ ನಾನು ತೊಟ್ಟಿಲ್ಲ ಕನ್ರಕ್ಕ
ಚಿನ್ನಕಾಗಿ ಬೆಳ್ಳಿಗಾಗಿ ನಿಮ್ಮ
ಮುತ್ತು ರತ್ನುಕಾಗಿ
ನಿಮ್ಮ ಮುಂಗೈಗೆ ಬಳೆ ನಾನು ತೊಟ್ಟಿಲ್ಲ ಕನ್ರಕ್ಕ
ನಮ್ಮ ಗುರು ಅಂದ್ರೆ ಧರೆಗೆ ದೊಡ್ಡವರು
ಅವರ್ಗೆ ಆರೆ ಮೂರಾಗಬೇಕಂತೆ
ಎಲಗುದ್ದಲಿ ಮೂರಾಗಬೇಕಂತೆ
ದಬ್ಬಕ ಮೂರಾಗಬೇಕಂತೆ ಕನ್ರಕ್ಕ
ಈಗಲೀಗ ಅದಕ್ಕಾಗಿ ನಿಮ್ಮ ಮನೆಗೆ ಬಂದಿವ್ನಿ
ಇದಕಾಗೆ ನಾನು ಬಳೆಗಳ ತಂದಿವ್ನಿ
ನನಗೆ ಬರಿದುಡ್ಡು ನೀವು ಕೊಡಬೇಡಿ ಕನ್ರಕ್ಕ
ಈ ಬಳೆಗೆ ಎಷ್ಟು ದುಡ್ಡಾಯ್ತದೊ

ಅಷ್ಟೂ ದುಡ್ಗುವೆ ಕಬ್ಬುಣವಾ
ಕೊಟ್ಬುಡ್ರಕ್ಕ ಎಂದಾರಲ್ಲ || ಸಿದ್ಧಯ್ಯ ||

ನನಗೆ ಹೆಚ್ಚಾಗು ಕೊಡಬ್ಯಾಡಿ
ಅಪ್ಪಾರ ಕೊಡಬ್ಯಾಡಿ ಕನ್ರವ್ವ
ನನ್ನ ಬಳೆ ದುಡ್ಡುಗಾಗುವಂತ
ಉಡ್ಗಬ್ಬಣ ಕೊಟ್ಟುಬುಡಿ ಅಕ್ಕಯ್ಯಾ
ನಾನು ತಕ್ಕಂಡೋಗಿ ನಮ್ಮಗುರುವೆ ಒಪ್ಪಿಸ್ಬುಡ್ತಿನಿ ಎಂದರು
ಸಿದ್ದಪ್ಪಾಜಿಯವರ ಮಾತ
ಏಳುಜನ ದೊರೆಸಾನಿಗಿತ್ತೀರು ಕೇಳ್ಬುಟ್ಟು
ಏನ್ರಕ್ಕ ಈ ಬಳೆಗಾರ ಮುಂಡೆ ಮಗ ಎಂಥ ಮಾತಾಡ್ದ
ಈಗಲೀಗ ಕಬ್ಬುಣ ಕೇಳ್ತವನಲ್ಲ

ಕಬ್ಬಿಣ ಕೇಳ್ದ ಮುಂಡೆಮಗ
ಇನ್ನೇನು ಕೇಳವಲ್ಲ || ಸಿದ್ಧಯ್ಯ ||
ಈ ಕಬ್ಬಿಣ ಕೇಳ್ದ ಬಳೆಗಾರ
ಇನ್ನೇನು ಕೇಳುಬಲ್ಲ|| ಸಿದ್ಧಯ್ಯ ||