ಕಬ್ಬಣ ಕೇಳ್ದ ಪರದೇಶಿ
ಇನ್ನು ಏನು ಕೇಳ್ಬಲ್ಲನಮ್ಮ
ಕಬ್ಬಿಣ ಕೇಳ್ದವನು ನಮ್ಮನ್ನೆ ಕೇಳ್ದಂಗೆ ಆಗುಬುಡ್ತಲ್ಲರಕ್ಕ ಅಂತೇಳಿ
ಏಳು ಜನ ದೊರೆಸಾನಿಗಿತ್ತೀರು ಬಳೆಗಾರನ
ಮೊಕ ನೋಡುಬುಟ್ಟು
ಹೇ ಬಳೆಗಾರ
ಕಾಸು ದುಡ್ಡು ಬೇಕಾದರೆ ಕೇಳ್ಕೊ
ಇಟ್ಟೂ ಬುಡ್ತೀವಿ
ವಲ್ಲದೆ ಹೋದ್ರೆ ಸುಮ್ನೆ ವಂಟೋಗ್ಬುಡು

ಹೆಚ್ಚು ಕಮ್ಮಿಯ ಮಾತ
ಹೇಳಬ್ಯಾಡ ಎಂದಾರಂತೆ || ಸಿದ್ಧಯ್ಯ ||

ಹೆಚ್ಚು ಕಮ್ಮಿ ಮಾತಾಡುಬೇಡ ಪರದೇಶಿ
ಬೇಕಾದ್ರೆ ದುಡ್ಡು ಕಾಸು ಈಸ್ಕಂಡೋಗು
ವಲ್ದೆಹೋದ್ರೆ ಸುಮ್ನೆ ವಂಟೋಗು ಎಂದರು
ಆಗಲೀ ಕನ್ರಕ್ಕ
ಆಗಲೀ ಕನ್ರವ್ವ

ನನ್ನ ಮುಟ್ಟು ಮುಟ್ಟಲು ಬ್ಯಾಡಿ
ನನ್ನ ಮುಟ್ಟೂ ತಟ್ಟಲು ಮಾಡಬ್ಯಾಡಿ
ಅಕ್ಕ ಬಾಯೆತ್ತಿ ಬೋಯಿಬ್ಯಾಡಿ
ಕೇಳಿ ಅಕ್ಕದಿರೇ
ನೀವು ಕಬ್ಬಣವಾಕೊಟ್ಟರೆ ನಾನು
ಈಸ್ಕಂಡು ಹೋಯ್ತಿನಿ
ಕೊಡಲಿಲ್ಲ ಎಂದಾರೆ
ನಾನು ಸುಮ್ನೆ ಹೋಯ್ತಿನಿ
ನಿಮ್ಮ ಅಟ್ಟಿ ಅರಮನೆಯ ನಾನು
ಬಿಟ್ಟು ನಾ ಹೋಗುತಿನಿ || ಸಿದ್ಧಯ್ಯ ||

ನಿಮ್ಮ ನಿಮ್ಮ ಅಟ್ಟಿ ಅರಮನೆಯ
ಬಿಟ್ಟುಬಿಟ್ಟು
ನಾನು ಹೋಯ್ತಿನಿ ಕನ್ರಕ್ಕ ಹೋಯ್ತಿನಿ ಕನ್ರವ್ವ ಅಂತ ಹೇಳಿ
ಸಿದ್ದಪ್ಪಾಜಿಯವರು
ಬಳೇಮಲಾರ ತಗ್ದು ಹೆಗಲ ಮೇಲೆ ಹೊತ್ಗಂಡು
ಏಲುಜನ ದೊರೆಸಾನಿಗಿತ್ತೀರ
ಮನೆಯನ್ನು ಬಿಟ್ಟು ಗುರುವು
ರಾಜ ಬೀದಿಗೆ ಬಂದು ಸಿದ್ದಪ್ಪಾಜಿ
ಆಗಲೀಗ ರಾಜಬೀದಿಲಿ ನಿಂತ್ಗಂಡು
ಮುತ್ತಿನ ಜೋಳಿಗ್ಗೆ ಕೈಹಾಕಿ
ಕಪ್ಪು ದೂಳ್ತ ತಗದು
ಧರೆಗೆ ದೊಡ್ಡೋರ ಪಾದ ನೆನ್ಕಂಡು
ಏಳು ಮಂದಿ ದೊರಸಾನಿಗಿತ್ತಿರ್ಗೆ ಗುರುವು

ಕಪ್ಪು ಧೂಳ್ತವ ದೇವಾ
ಹರಸುತ್ತ ಇದ್ದರಂತೆ || ಸಿದ್ಧಯ್ಯ ||

ಗುರುವೆ ಕಪ್ಪು ಧೂಳ್ತವ
ಹರಸಿ ನನ್ನ ಗುರುವು
ಇಟ್ಬುಟ್ಟು ನನ್ನಪ್ಪ
ಗುರುವೆ ಊರು ಅಂಕಕ್ಕೆ
ಬರುತ್ತಿದ್ರು ನನ್ನಪ್ಪ
ಅಕ್ಕಾ ನಾನು ತೊಟ್ಟಿರುವ ಬಳೆ ಎಲ್ಲಾ
ಹಾವು ಚವಳು ಆಗಲವ್ವ || ಸಿದ್ಧಯ್ಯ ||
ಅಕ್ಕ ನಾನು ತೊಟ್ಟಿರುವಂತ
ಬಳೆಗೊಳು ಗುರುವೆ
ಹಾವು ಚವುಳು ಆಗಲಿ
ಅಕ್ಕ ನಾನು ತೊಟ್ಟಿರೋ ಬಳೆ
ನಿಮಗೆ ಕಾಡಜನ ಮರಿ ಆಗಲಿ
ಅಕ್ಕ ನಾನು ತೊಟ್ಟಿರೋ ಬಳೆ
ನಿಮಗೆ ಹೆಜ್ಜೇನು ಕಿರುಜೇನು
ಆಗಲಿ ಅಕ್ಕದಿರೇ
ನಿಮಗೆ ಸೀರೆ ಒಳಗೆ ಸೇರಿಕ್ಕಂಡು
ಚುರ್ಕ ಚುರ್ಕನೆ ಕಡಿಯಲವ್ವ || ಸಿದ್ಧಯ್ಯ ||

ನೀವು ಸಂದಿಗೋದ್ರು ಬುಡಬಾರ್ದು
ನೀವು ಗುಂದಿಗೋದ್ರು ಬುಡಬಾರ್ದು ಕನ್ರಕ್ಕ
ನೀವು ಕೋಣೆಗೋದ್ರು ಬುಡಬಾರ್ದು
ಮೂಲೆಗೋದ್ರು ಮರೆಯಾದ್ರು ಬುಡಬಾರ್ದು ಕನ್ರವ್ವ ಅಂತೇಳಿ
ಎತ್ತಿ ಶಾಪ ಕೊಟ್ಟುಬಿಟ್ಟು ಸಿದ್ದಪ್ಪಾಜಿ
ಊರು ಅಂಕದಲ್ಲಿರ್ತಕ್ಕಂತ
ಹೊನ್ನರಳಿಮರ ಅರಳಿಕಟ್ಟೆ ಜಗಲಿ

ಅರಳಿಕಟ್ಟೆ ಜಗಲಿ ಮ್ಯಾಲೆ
ಬಂದು ಮೂರ್ತವಾದರಂತೆ || ಸಿದ್ಧಯ್ಯ ||
ಗುರುವೆ ಅರಳಿಕಟ್ಟೆ ಜಗಲಿಮ್ಯಾಲೆ
ಬಂದು ಕೂತ್ಗಂಡ್ರು
ನೀಲಗಾರ್ದ ಗಂಡ
ನನ್ನ ನೀಲಿ ಸಿದ್ದಪ್ಪಾಜಿ
ಗುರುವೆ ಏಳು ಜನ ದೊರೆಸಾನಿರು
ತೊಟ್ಟಿರೊ ಬಳೆಯೆಲ್ಲ
ಹಾವು ಚವುಳು ಆಗೋದೋ
ಹೆಜ್ಜೇನು ಆಗೋದೂ
ಕಿರುಜೇನು ಆಗೋದೊ

ಅವರ ಸೀರೆ ಒಳಗೆ ಗುರುದೇವ
ಚುರ್ಕನೆ ಚುರ್ಕನೆ ಕಡಿತಾವೆ || ಸಿದ್ಧಯ್ಯ ||

ಅವರು ನಾಗರಾವು ನೋಡುತಾರೆ
ಬಾಯಿ ಬಾಯಿ ಬಡಿಯುತಾರೆ || ಸಿದ್ಧಯ್ಯ ||

ಅವರು ಕಟ್ಟುನಾವು ನೋಡುತಾರೆ
ದಿಪ್ಪಂತ ಬಿಳುವುತಾರೆ || ಸಿದ್ಧಯ್ಯ ||

ಅವರು ಮ್ಯಾಕ್ಕೊವೆ ಹಾರುತಾರೆ
ಭೂಮಿ ಮ್ಯಾಲೆ ಬಿಳುವುತಾರೆ || ಸಿದ್ಧಯ್ಯ ||

ಈಗಲೀಗ ನನಗೆ ಇರುವು ಕಡ್ಜ ಕನ್ರಕ್ಕ
ನನಗಿರೋದು ಜೇನು ಕನ್ರವ್ವ
ನನಗೆ ಇರೋದು ಕಟ್ಟನಾವು ಕನ್ರಮ್ಮ
ನನಗಿರೋದು ಹಸ್ರಾವು ಕನ್ರಕ್ಕ
ನನಗೆ ನಾಗ್ರಾವು ಬಂದ್ಬುಡ್ತು ಅಂತೇಳಿ

ಅವರು ಹಟ್ಟಿ ಮನೇಗೆಲ್ಲ
ಓಡಾಡಿ ತಿರ್ಗುತಾರೆ || ಸಿದ್ಧಯ್ಯ ||

ಹಟ್ಟಿ ಮನೆಯೆಲ್ಲಾನು ಓಡಾಡುವಾಗs
ಏಳು ಜನ ಗೌಡ ದಾಸೀರು ಗುರುವೂ
ಈಗಲೀಗ ಓಡಾಡುವಂತ
ಏಳು ಜನ ದೊರೆಸಾನಗಿತ್ತಿರ ಕಣ್ಣಿಂದ ನೋಡುಬುಟ್ಟು

ಅಯ್ಯಾ ಏಳು ಜನ ದೊರೆಗೊಳ ಬಳಿಗೆ
ಓಡಿ ಓಡಿ ಬರುವುತಾರೆ || ಸಿದ್ಧಯ್ಯ ||

ಅವರು ಏಳು ಜನ ದೊರೆಗೊಳ
ಬಳಿಗೆ ಇನ್ನೂ ಬರುವುತಾರೆ || ಸಿದ್ಧಯ್ಯ ||

ಏಳು ಜನ ದೊರೆಗೊಳ ಬಳಿಗೆ ದೇವಾs
ಓಡೋಡಿ ಬಂದು
ಏಳು ಜನ ಗುರುವು
ಗೌಡಿ ದಾಸೀರು
ಆಗಲೀಗ ಏಳು ಮಂದಿ ದೊರೆಗೊಳಗೆ ಕೈಯೆತ್ತಿ ಮುಗ್ದು
ಅಯ್ಯೋ ಗುರುದೇವ
ಯಾವನೋ ಬಳೆಗಾರ
ಬೀದಿಲಿ ಬಳೆ ಸಾರ್ಕಂಡು ಹೋಯ್ತಿದ್ದ
ನಿಮ್ಮ ನಿಮ್ಮ ಮಡ್ದೀರು
ಆಗಲೀಗ ಬಳೆಗಾರ್ನ ಕರ್ಕಂಡು ಬನ್ನಿ
ಗೌಡೀರೆ ಅಂತ ಕಳುಗುಬುಟ್ಟರು
ಗುರುದೇವ
ನಾವು ಬಳ್ಗಾರ ಶೆಟ್ಟಿ ಕರ್ಕಂಡು ಬಂದು
ನಿಮ್ಮ ಮಡ್ದೀರು ಮುಂಭಾಗದಲ್ಲಿ ಬಿಟ್ಟೊ
ನೀವು ತೋಡಿಸಿರುವ ಮುತ್ತು ರತ್ನುದ ಬಳೆ ಕಳೆದು
ಬೆತ್ತದ ಮೊರ್ದಲ್ಲಿ ನಿಮ್ಮ ಮಡ್ದಿರು ಮಡಗಿಡಿಬಿಟ್ಟೂ
ಆ ಬಳೆಗಾರ ಶೆಟ್ಟರ ಕೈನ ಬಳೆ ತೊಟ್ಕಬಿಟ್ರುಸ್ವಾಮಿ
ಬಳೆಗಾರ ಶಟ್ಟಿ
ಬಳೆ ತೊಟ್ಟು ಬಿಟ್ಟು ಬಳೆದುಡ್ಡ ಇಸ್ಗಳ್ದೆ ಹಾಗೆ ಹೋರಟೋದ
ಅವರು ಹೋರಟೋದ ಮೇಲೆ
ಏನು ಮಾಡುದ್ನೋ ಮಾಯಿಕಾರ
ಮಂತ್ರಗಾರ ಬಳ್ಗಾರ

ಅವನು ತೊಟ್ಟಿರು ಬಳೆಗಳೆಲ್ಲ
ಹಾವು ಚವುಳು ಆಯಿತಲ್ಲ || ಸಿದ್ಧಯ್ಯ ||

ಆಗಲೀಗ ಗುರುದೇವಾs
ಏಳು ಜನ ದೊರೆಸಾಣಗಿತ್ತೀರ
ಬಳೆಗಳೆಲ್ಲವು ಚವುಳಾಗುಬುಟ್ಟವೆ ಸ್ವಾಮಿ
ಹಾವು ಚವುಳು ನೋಡಲಾರದೆ
ಹೆಜ್ಜೇನು ಕಿರುಜೇನಿನ ಕಡಿತ ತಡಿಲಾರದೆ

ಅವರು ಹಟ್ಟಿ ಮನೆ ಓಡಾಡುತಾರೆ
ಬಾಳ ದುಃಖ ಮಾಡುತಾರೆ || ಸಿದ್ಧಯ್ಯ ||

ನಿಮ್ಮ ದೊರೆಸಾನಿರ ದುಃಖ ಗುರುವೆ
ನೋಡವರೆ ಯಾರು ಇಲ್ಲ || ಸಿದ್ಧಯ್ಯ ||

ಏಳುಜನ ಗೌಡೀರ ಮಾತ ಕೇಳಿ
ಏಲುಜನ ದೊರೆಗಳೂ
ಈಗಲೀಗ ಮೀಸೆ ಮೇಲೆ ಇಂಬಿಹಣ್ಣು ಮಡಿಕಂಡು
ಮುತ್ತು ರತ್ನ ರಾಶಿ ರಾಶಿ ಹಾಕ್ಕಂಡು
ಕಾಲಮೇಲೆ ಕಾಲಾಕ್ಕೊಂಡು
ಎಕ್ಕಪರೇಲು ಇಸ್ಪಡಾಡ್ತ ಕೂತಿದ್ರು
ಆಗ ಗೌಡೀರ ಮಾತ ಕೇಳುಬುಟ್ಟು
ಏಳು ಜನ ದೊರೆಗೊಳೂ
ಏನಂತ ಮಾತಾಡ್ತರೆ ಅಂದ್ರೆ
ಅಣ್ಣಯ್ಯಾ
ಈ ಗೌಡಿರಾಡ್ಡ ಮಾತ ಕೇಳದೀಯ
ಯಾವ್ನೋ ಬಳೆಗಾರ ನಮ್ಮ ಊರಿಗೆ ಬಂದ್ಬುಟ್ಟು
ನಮ್ಮ ಮಡ್ಡಿರು ಕೈಗೆ ಬಳೆ ತೊಟ್ಟುಬುಟ್ಟೂ
ಬಳೆದುಡ್ನು ಈಸ್ಕಳ್ದೆ ಹಾಗೆ ಹೋರಟೋಗಿದ್ದನಂತೆ
ಅವನು ತೊಟ್ಟುಬುಟ್ಟಿರುವಂತ ಬಳೆಗಳೆಲ್ಲ
ಹಾವು ಚವುಳಾಗುಬುಟ್ಟಿದ್ದವಂತಲ್ಲ
ಈಗಲೀಗ ಅಟ್ಟಿ ಅರಮನೆಗೆ ಬಳಗೆ ಏನಾಗಿರಬಹುದು ಅಂತೇಳಿ

ಅವರ ಮಡ್ಡೀರ ಬಳಿಗೆ ದೇವ
ಬಿದ್ದು ಕೆಡದು ಬರುವುತಾರೆ || ಸಿದ್ಧಯ್ಯ ||

ಗುರುವೆ ಮಡ್ಡೀರ ಬಳಿಗೆ ಗುರುವು
ಓಡಿ ಓಡಿ ಬಂದು
ಮಡ್ಡೀರು ದುಃಖವ
ಕಣ್ಣಾರ ನೋಡ್ಕಂಡು
ಅವರು ಬಾಳ ಚಿಂತೆ ಮಾಡ್ತ
ಬಾಳೆ ಯತೆಯ ಪಡ್ತ
ಅವರು ಏಳುಜನ ಆಳುಗೋಳ
ಬೇಗದಲಿ ಕರ್ದರಲ್ಲ || ಸಿದ್ಧಯ್ಯ ||

ಕೇಳ್ರಲ ಏಳುಜನ ಆಳುಗಳೇ
ನಮ್ಮ ಮಡ್ಡೀರು ಕೈಗೆ ಬಳೆತೊಟ್ಟಿರುವಂತ ಬಳೆಗಾರ
ನಮ್ಮ ಊರಲ್ಲಿದ್ರು ಸರಿಯೇ
ನಮ್ಮ ಊರು ಬುಟ್ಟು ಮುಂದ್ಲು ಊರಿಗೋಗಿದ್ರು ಸರಿಯೇ

ಅವನು ಎಲ್ಲಿದ್ರು ಬುಡಬ್ಯಾಡಿ
ಕರ್ಕಬನ್ನಿ ಎಂದಾರಂತೆ || ಸಿದ್ಧಯ್ಯ ||

ಅವನು ಹಟ್ಟ ಹತ್ತುದ್ರು
ಬುಡಬ್ಯಾಡಿ ಕನ್ರಯ್ಯ
ಅವನು ಬೆಟ್ಟವ ಸೇರುದ್ರು
ಬುಡುಬ್ಯಾಡಿ ಕನ್ರಯ್ಯ
ಅವನು ಗಂಗೆಗೆ ಮರೆಯಾದರು
ಬುಡಬ್ಯಾಡಿ ಕನ್ರಪ್ಪಾ
ಅವನು ಅಗ್ನಿಗೆ ಬಿದ್ದೋದ್ರು
ನೀವು ಬುಡಬ್ಯಾಡಿ ಕನ್ನರಯ್ಯ
ಅವನ ಜೀವಸೈತ ಇಡಕ್ಕಂಡು
ನಿಮಗೆ ನೀವು ಕೊಡಲೇಬೇಕು || ಸಿದ್ಧಯ್ಯ ||

ಅವನ ಪ್ರಾಣ ತೆಗೆಯಬ್ಯಾಡಿ
ಅವನ ಬೋದು ಕೊಂದುಬ್ಯಾಡಿ
ನೀವು ಹೊಡೆದು ಕೊಂದ ಬ್ಯಾಡಿ
ಅವನ ಜೀವಸಹಿತಾ
ನೀವು ಇಡ್ಕಂಡು ಕೊಟ್ಟರೆ
ಆ ಬಳೆಗಾರ ಮುಂಡೆ ಮಗನಿಗೆ
ಚನ್ನಾಗಿ ಬುದ್ದಿ ಕಲಿಸುತಿವಿ || ಸಿದ್ಧಯ್ಯ ||

ನೀವು ಕರಯೊಣೋದವರು
ಈಗಲೀಗ ಬಳೆಗಾರ ಶೆಟ್ಟಿ ಸಿಕ್ಕದೆ ಹೋಯ್ತಿದ್ದ
ವಡದು ಕೊಂದಬುಟ್ಟೋ ಅಂದ್ರೆ
ನಿಮ್ಮ ನಾವು ಕೊಂದ ಬೇಕಾಯ್ತದೆ
ನಾವು ಹೋಗಿ ಬಾಯೆತ್ತಿ ಬೋದೆಟ್ಟಗೆ ಸತ್ತೋಗುಬುಟ್ಟ ಸ್ವಾಮಿ ಅಂದ್ರೆ
ನೀವು ಸಾಯಬೇಕಾಯ್ತದೆ
ಅವನ್ಗೆ ಬಾಯೆತ್ತಿಬೋಯ್ದೆ
ಕೈಯೆತ್ತಿವಡೀದೆ
ಅವನ ಪ್ರಾಣ ತೆಗಿಯದೆ
ಅವನ್ನೇ ಕರ್ಕಂಡು ಬಂದು

ನಮ್ಮ ಏಳುಜನ ದೊರೆಗೊಳ
ಬಳಿಗೆ ಬುಡಾಬೇಕು ಎಂದಾರಲ್ಲ || ಸಿದ್ಧಯ್ಯ ||

ಗುರುವೆ ಆಗಲಿ ಗುರುದೇವಾ
ಆಗಲಿ ದೊರೆಗೋಳೆ
ಹಾಗಂದು ನನ್ನ ಗುರುವು
ಅಯ್ಯೋ ನಮ್ಮ ದೊರೆ ಮಡದಿಗೆ
ಬಳೆಯ ತೊಟ್ಟವನು
ಎಲ್ಲಿ ಇದ್ದನೊ
ಯಾವ್ತಾವು ದೊರತಾನೊ
ಎನತೇಳಿ ನನ್ನ ಗುರುವು

ಅವರು ಹುಡ್ಕತ್ತ ತಡಾಕುತ್ತ
ಓಡಿಓಡಿ ಬರುವುತಾರೆ || ಸಿದ್ಧಯ್ಯ ||

ಹುಡ್ಕುತ್ತ ತಡಕುತ್ತಾ ದೇವಾs
ಏಳುಮಂದಿ ದೊರೆಯಾನ ದೊರೆಗೊಳು
ತಾವಾಗಿ ಬರುತ್ತಿದ್ರು
ಬರುವಂತ ಕಾಲದಲ್ಲಿ
ನೀಲಗಾರ ಗಂಡ ನೀಲಿ ಸಿದ್ದಪ್ಪಾಜಿ
ಅರಳಿ ಕಟ್ಟೆ ಜಗಲಿ ಮ್ಯಾಲೆ ದೇವಾ
ಬಳೆ ಮಲಾರ ಮಡಕೊಂಡು ಸಿದ್ದಪ್ಪಾಜಿ
ಧರೆಗೆ ದೊಡ್ಡವರ ಗ್ಯಾನ ಮಾಡ್ತ
ತೊಪ್ನ ದೊಡ್ಡಮ್ಮನ ಪಾದ ನೆನಿತ
ಕಿಡಗಣ್ಣ ರಾಚಪ್ಪಾಜಿ ಮನದಲ್ಲಿ ನೆನಕುತ್ತಾ ಸಿದ್ದಪ್ಪಾಜಿ

ಅರಳಿಕಟ್ಟೆ ಜಗಲಿಮ್ಯಾಲೆ
ಸಿರಬಾಗಿ ಕುಳಿತ್ಗಂಡು || ಸಿದ್ಧಯ್ಯ ||

ಅರಳಿ ಕಟ್ಟೆ ಜಗಲಿ ಮ್ಯಾಲೆ ದೇವಾs
ಸಿರಬಾಗಿ ಕೂತ್ಗಂಡರು
ನೀಲಗಾರ ಗಂಡ ನೀಲಿ ಸಿದ್ದಪ್ಪಾಝಿ
ಏಳು ಮಂದಿ ದೊರೆಯಾನ ದೊರೆಗೊಳು
ಬಿಟ್ಟಿರುವಂತ ಏಳುಜನ ಆಳುಗಳು ಗುರುವು

ಅವರು ಏಳೇಳು ಬೀದಿಯ ಒಳಗೆ
ಓಡಿಓಡಿ ಬರುವುತ್ತಾರೆ || ಸಿದ್ಧಯ್ಯ ||

ಏಳೇಳು ಬೀದಿವೊಳಗೆ ದೇವಾ
ಏಳುಜನ ದೊರೆಗೋಳು ಗುರುವು
ಓಡೋಡಿ ಏಳಂಕ ಕಾಣೆ ಬಂದ್ರು
ಊರು ಮಧ್ಯದಲ್ಲಿ ಅರಳಿಕಟ್ಟೆ ಜಗಲಿ
ಅರಳಿ ಕಟ್ಟೆ ಜಗಲಿಯ ಕಣ್ಣಿಂದ ನೋಡುದ್ರು
ಅಣ್ಣ
ಆ ಬೀದಿ ಈ ಬೀದಿ ಎಲ್ಲನು ಸುತ್ತಾಡ್ಕಂಡು ಯಾಕ್ಬಂದೂ

ಅಣ್ಣ ಇಲ್ಲೆ ಕೂತ್ತವ್ನೇ ಕನೋ
ಬಳೆಗಾರ ಮುಂಡೆ ಮಗನೂ|| ಸಿದ್ಧಯ್ಯ ||

ಅಯ್ಯಾ ಇಲ್ಲೆ ಕೂತ್ತವ್ನೆ
ಬಳೆಗಾರ ಕನ್ರಪ್ಪ
ಈ ದೊರೆಗಳ ಬಳಗೆ
ಇವ್ನ ಕರ್ಕಂಡು ಹೋಗಬೇಕು
ಎನತೇಳಿ ನನ್ನ ಗುರುವು
ಅವರು ಸಿದ್ದಪ್ಪಾಜಿಯವರ ಬಳಿಗೆ
ಬಂದು ನಿಂತ್ಗಂಡು
ಏನಯ್ಯಾ ಬಳೆಗಾರ
ಏನು ಬಳೆಗಾರ ಶಟ್ಟಿ
ನಮ್ಮ ದೊರೆಗೊಳು ಮಡ್ಡೀರ್ಗೆ
ಬಳೆಯ ತೊಟ್ಟವ್ನು
ನೀನ ಬಳೆಗಾರ

ನಮ್ಮ ದೊರೆಗೊಳು ಕರಿತಾರೆ
ದಯಾಮಾಡು ಎಂದಾರಲ್ಲ || ಸಿದ್ಧಯ್ಯ ||

ಬಳೆಗಾರ ನಮ್ಮ ದೊರೆಗೊಳು ಕರಿತಾವರೆ
ನಮ್ಮ ದೊರೆಗೊಳ ಬಳಿಗೆ ದಯಮಾಡು ಎಂದರು
ಏನ್ರಪ್ಪ ಏನ್ರಣ್ಣ ನಿಮ್ಮ ದೊರೆಗಳು ನನ್ನ ಕರ್ದೆರಪ್ಪ
ಹೇ ಬಳೆಗಾರ
ಎದ್ದೂ ಬರ್ತಿರೋ ಇಲ್ಲ ಅಂದ್ರೆ ನಿನ್ನ
ಕೈಯಿಡಿದು ಏಳ್ಕಂಡು ಹೋಗಬೇಕೋ ಎಂದರು

ಅಣ್ಣ ಮುಟ್ಟೂ ಮುಟ್ಟಲು ಬ್ಯಾಡಿ
ನನ್ನ ಮುಟ್ಟೂ ತಟ್ಟೂ ಮಾಡಬ್ಯಾಡಿ || ಸಿದ್ಧಯ್ಯ ||

ಅಣ್ಣ ಮುಟ್ಟೂ ಮುಟ್ಟಲು ಬ್ಯಾಡಿ
ನನ್ನ ಮುಟ್ಟೂ ತಟ್ಟು ಮಾಡಬ್ಯಾಡಿ
ನನ್ನ ಚಂಡೆಕಾವಿ ಮೇಲೆ
ನಿಮ್ಮ ಅಂಗೈ ಸೋಕುದ್ರೆ

ಅಣ್ಣ ನರಲೋಕದ ಒಳಗೆ ನೀವು
ಉರ್ದು ಬೆಂದೋಗುತಿರೀ || ಸಿದ್ಧಯ್ಯ ||

ನನ್ನ ಕೆಂಡ ಕಾವಿ ಮೇಲೆ
ನಿಮ್ಮ ಅಂಗೈಯ ಮುಟ್ಟುಬುಟ್ರೆ ಅಣ್ಣಯ್ಯ
ಉರ್ದು ಬೆಂದೋಗುಬುಡ್ತಿರೀ ಕನ್ರಪ್ಪ
ನನ್ನ ಮುಟ್ಟು ಬ್ಯಾಡಿ ಮುಟ್ಟೂ ತಟ್ಟು ಮಾಡುಬ್ಯಾಡಿ

ನೀವು ಮುನ್ಮುಂದೆ ನಡೀರಣ್ಣ
ನಾ ಹಿಂದಿಂದೆ ಬರುತೀನಿ || ಸಿದ್ಧಯ್ಯ ||

ಮುಂದು ಮುಂದೆ ನಡೀರಣ್ಣ
ನಿಮ್ಮ ಹಿಂದೆ ಹಿಂದೆ ಬರ್ತೀನಿ ಕನ್ರಪ್ಪ
ಬರ್ತಿನಿ ಕನ್ರಣ್ಣ ಎಂದರು
ಬಾ ಎನತೇಳಿ ಏಳುಜನ ಜಟ್ಟಿಗಳು

ಅಯ್ಯಾ ದೊರೆಗೊಳ ಬಳಿಗೆ ದೇವ
ಕರ್ಕಂಡು ಬರುವುತಾರೆ || ಸಿದ್ಧಯ್ಯ ||

ಗುರುವೆ ಬರುವಂತ ನನ್ನ ಗುರುವು
ನೀಲಿ ಸಿದ್ದಪ್ಪಾಜಿಯ
ಏಳುಜನ ದೊರೆಗೋಳು
ಕಣ್ಣಾರ ನೋಡ್ಕಂಡು
ಅವರು ಹಲ್ಲಲ್ಲು ಕಂಡುದರಂತೆ
ಬಾಳ ಕೋಪ ಮಾಡುತಾರೆ || ಸಿದ್ಧಯ್ಯ ||