ಗುರುವೆ ನೊರಕ್ನೆ ಹಲ್ಲ ಕಡ್ದು
ನರ್ನೆ ಮ್ಯಾಕೆ ಎದ್ದು
ಸಿದ್ದಪ್ಪಾಜಿ ಮೊಕವ
ಕಣ್ಣಾರ ನೋಡ್ಕಂಡು
ಲೋ ಯಾವೂನ್ಲ ಬಳೆಗಾರ
ಏನತೇಳಿ ನನ್ನ ಗುರುವು
ಏಳು ಜನ ದೊರೆಗೋಳು
ಓಡಿ ಓಡಿ ಬರುತಾರೆ || ಸಿದ್ಧಯ್ಯ ||

ಎ‌ದ್ದು ಬಂದೂ
ಸಿದ್ದಪ್ಪಾಜಿ ಮೊಕ ನೋಡುವಾಗ
ಧರೆಗೆ ದೊರೆಗೋಳು ಮೊಕ ಮಟ್ಮಟ್ನೆ ನೋಡ್ಕಂಡು
ತಲ್ಬಕ್ಕಂಡು ನಿಂತ್ಗಂಡರು
ಏನೋ ಬಳೆಗಾರ
ನಮ್ಮ ಮಡ್ದೀರು ಕೈಗೆ ಬಳೆ ತೊಟ್ಟವನ್ಯಾರು?
ನಾನೆ ಬಳೆ ತೊಟ್ಟಿ ಕನಣ್ಣ
ಬಳೆ ತೊಟ್ಟಿ ಕನ್ರಪ್ಪ ಎಂದರು
ಬಳೆಗಾರ ಶೆಟ್ಟಿ
ಈಗಲೀಗ ಯಾವ ಬಳೆ ನಮ್ಮ ಮಡ್ದೀರ್ಗೆ ತೊಟ್ಟೆ
ನೀನು ತೊಟ್ಟಂತ ಬಳೆಗಳೆಲ್ಲ
ನಮ್ಮ ಮಡ್ದೀರ್ಗೆಲ್ಲ
ಇಂತ ಭವ ಬಂಧಾನ ಕೊಡಬಹುದ
ಹಾವು ಚವೂಳುನ ಒಳ ತೊಟ್ಟು
ನಮ್ಮ ಮನೆಗೆ ಬುಟ್ಟೂ ಹೊರಟೋಗಿದ್ದಿಯಲ್ಲ

ನೀನು ತೊಟ್ಟ ಬಳೆ
ಇದೇನು ಎಂದಾರಂತೆ || ಸಿದ್ಧಯ್ಯ ||

ನೀನು ತೊಟ್ಟಿರುವ ಬಳೆಗಳ
ಆಯ್ಕ ಬುಡು ಎಂದಾರಲ್ಲ || ಸಿದ್ಧಯ್ಯ ||

ನೀನು ತೊಟ್ಟಿರುವಂತ
ಬಳೇಗಳನ್ನೆಲ್ಲ
ನೀನೆ ಆಯ್ಕಬುಡು
ಬಳೆಗಾರ ಎಂದವರೆ
ಆಗಲಿ ಕನ್ರಪ್ಪ ಆಗಲಿ ಕನ್ರಣ್ಣ
ಆಗಂದು ನನ್ನ ಗುರುವು
ಗುರುವೆ ಹುರುದಾಡುತ್ತಿರುವ
ಹಾವು ಚವುಳು ಗುರುವು
ಎಲ್ಲಾನು ದೇವ
ಆಯ್ಕಂಡು ನನ್ನಪ್ಪ
ಅವನು ರಾಜ ಬೀದಿಗೆ ಬಂದಾನಂತೆ
ಭೂಮಿ ಮ್ಯಾಕೆ ಬಿಟ್ಟಾನಂತೆ || ಸಿದ್ಧಯ್ಯ ||

ಹಾವು ಚವುಳ್ನೆ ಹಾದು
ಭೂಮಿಗೆ ಬುಟ್ಟು ಬುಟ್ಟೂ ಸಿದ್ದಪ್ಪಾಜಿ
ಈಗಲೀಗ ಏಳುಜನ ಆಳುಗಳೂ
ಇವ್ನು ಎಲ್ಲಾರು ಹೊರಟೋಯ್ತನೆ
ಈ ದೊರೆಗೋಳ ಬಳಿಗೆ ಇಡ್ತಂದು
ಕೊಟ್ಟುಬುಡಬೇಕು ಎನತೇಳಿ
ಒಂದೊಂದಿಗೆ ಬಂದು
ಹಾವು ಚವುಳ್ನೆ ಬಿಡಿಸಬುಟ್ಟು

ಅಯ್ಯಾ ದೊರೆಗೊಳ ಬಳಿಗೆ ದೇವ
ಕರಕಂಡು ಬರುತಾರೆ|| ಸಿದ್ಧಯ್ಯ ||

ಗುರುವೆ ಏಳುಜನ ದೊರೆಗಳ ಬಳಿಗೆ
ಸಿದ್ದಪ್ಪಾಜಿಯವರ
ಕರ್ಕಂಡು ಬಂದು
ಅವರ ಮುಂಭಾಗದ ಒಳಗೆ
ಬುಡವ ಕಾಲದಲ್ಲಿ
ಅವರು ಸಿದ್ದಪ್ಪಾಜಿ ನೋಡುತಾರೆ
ಹಲ್ಲಲ್ಲ ಕಡಿಯುತಾರೆ || ಸಿದ್ಧಯ್ಯ ||

ಸಿದ್ದಪ್ಪಾಜಿ ನೋಡ್ತಾ
ಹಲ್ಲಲ್ಲ ಕಡಿತಾ
ಏಳುಜನ ದೊರೆಗೂಳೂ ಏಳುಜನ ಮಡ್ದೀ ಕರ್ದು ಮುಂಭಾಗದಲ್ಲಿ ನಿಲ್ಸಕ್ಕಂಡು
ಕೇಳಿ ಏಳು ಜನ ಮಡ್ದಿರೆ
ಈ ಬಳೆಗಾರ ಬಂದು
ನಿಮ್ಮ ಕೈಗೆ ಬಳೆ ತೊಡಬೇಕಾದ್ರೆ
ಈ ಬಳೆಗಾರ್ನ ವಂದ್ಗೆ
ಏನಂತ ಮಾತಾಡಿ ಬಳೆತೊಟ್ಟ ಎಂದರು
ಕೇಳಿ ಗುರುದೇವ
ಮನೆಗೆ ಬಂದ ಬಳ್ಗಾರ
ಈಗಲೀಗ ನೀವು ತೊಟ್ಟಿರ್ತಕ್ಕಂತ ಬಳೆ
ಮುತ್ತೈದೆಸ್ಥಾನಕ್ಕೆ ಲಕ್ಷಣವಾದ ಬಳೆಯಲ್ಲ ಕನ್ರಮ್ಮ
ನೀವು ತೊಟ್ಟಿರುವಂತ ಬಳೆ ಅಂದ್ರೆ
ನಿಮ್ಮ ಗಂಡಂದಿರು ಇದ್ರು ಮುಂಡೇರು
ಸತ್ತೋದ್ರು ಮುಂಡೇರು
ನನಗೆ ಮುಂಡೆರಂಗೆ ಕಾಣ್ತಿರಿ ಅಂದು ಹೇಳ್ಬುಟ್ಟು

ನೀನು ತಂದಿರು ಬಳೆ ಯಾವುದು ಅಂದು ಕೇಳ್ದೋ
ಮುತ್ತೈದೆ ಸ್ಥಾನಕ್ಕೆ ಲಕ್ಷಣವಾದ ಬಳೆ ತಂದಿವ್ನಿ ಅಂತೇಳಿ
ನನ್ನ ಬಳೇ ನೋಡ್ರವ್ವ ಅಂತೇಳಿ ಬಳೆ ತೊಟ್ಟ

ಇವ್ನು ಬಳೆ ನೋಡ್ಬುಟ್ಟು ಆಸೆಪಟ್ಟಿ
ಆಗಲೀಗ ಬಳೆ ತೊಟ್ಟುಗುಬುಟ್ಟುವು ಗುರುವು
ಇವ್ನು ಬಳೆ ತೊಟ್ಟುಬಿಟ್ಟು
ಹೊನ್ನು ಚಿನ್ನ ಬೆಳ್ಳಿ ಬಂಗಾರ
ಹಣ ಕಾಸು ಕೇಳಿದ್ರೆ ಎಷ್ಟಾರು ಎಸ್ತುಬಿಟ್ತಿದ್ದೊ
ಈ ಬಳೆಗಾರ
ಹಣ ಕಾಸು ಕೇಳ್ಳಿಲ್ಲ ಚಿನ್ನ ಬೆಳ್ಳಿ ಕೇಳ್ಳಿಲ್ಲ
ಮುತ್ತು ರತ್ನು ಕೇಳ್ಳಿಲ್ಲ
ಈಗಲೀಗ ನಮ್ಮ ಗುರುಗೊಳಗೆ
ಏಳು ದುಡ್ಡಿನ ಉಡುಗಬ್ಬಣ ಕೊಡ್ರಮ್ಮ ಅಂತಕೇಳ್ದ
ಕಬ್ಬಣ ಕೇಳ್ದ ಮುಂಡೆಮಗ ಇನ್ನೇನು ಕೇಳಬಲ್ಲ ಅಂತೇಳಿ
ಬಾಯಿಗೆ ಬಂದಂಗೆ ಮೂರು ಮಾತಾಡ್ದೋ
ಬಳೆತೊಟ್ಟುಬುಟ್ಟು ಮನೆಬುಟ್ಟು ಹೊರಗೋದ
ಅಲ್ಲೋಗಿ ಏನು ಮಂತ್ರ ಮಾಟ್ಲಮಾಡುದ್ನೋ ಗೊತ್ತಿಲ್ಲ
ಅವ್ನು ತೊಟ್ಟು ಬಿಟ್ಟೂ ಹೋದಂತ ಬಳೆಗಳೆಲ್ಲಸ
ಹೆಜ್ಜೇನು ಕಿರುಜೇನು
ಹಾವು ಚವುಳಾಗುಬುಟ್ಟೋ ಎಂದ್ರು
ಏನೋ ಬಳೆಗಾರ

ನೀನು ಘನ ಮೋಡಿಗಾರ ಅಂತ
ದುರುದುರನೆ ನೋಡುತಾರೆ || ಸಿದ್ಧಯ್ಯ ||

ಏನಲೋ ಬಳೆಗಾರ
ಏನು ಮುಂಡೇ ಮಗನೆ
ನಮ್ಮ ಮಡ್ದೀ ಕೈಯಿಗೆ
ಬಳೆಯನ್ನೇ ತೊಟ್ಟುಬಿಟ್ಟು
ಉಡುಗಬ್ಬುಣ ಕೇಳ್ದಿಯಾ
ನೀನು ಕಬ್ಬಣ ಕೇಳ್ದ ಮುಂಡೇಮಗ
ಇನ್ನೇನು ಕೇಳು ಬಲ್ಲೆ || ಸಿದ್ಧಯ್ಯ ||

ಕಬ್ಬಣ ಕೇಳ್ದು ಮುಂಡೇಮಗ
ಇನ್ನು ಏನು ಕೇಳಬಲ್ಲೆ ಪರದೇಶಿ ಎಂದರು
ಕೇಳ್ರಣ್ಣ
ಈಗಲೀಗ ನಮ್ಮ ಜಗತ್ತುಗುರುಗಳೂ
ಈಗಲೀಗ ಆರೆ ಮೂರು
ದಬ್ಬಕ ಮೂರು ಎಲ್ಗುದ್ದಲಿ ಮೂರು
ಆರು ಮೂರು ಒಂಬತ್ತು ಲಗುವಾಗಬೇಕಂತೆ
ಆರು ಮೂರು ಒಂಬತ್ತು ಲಗಾಮಾಡಬೇಕಾದ್ರೆ
ಕಬ್ಬುಣವಾಗಬೇಕಂತೆ ಕನ್ರಪ್ಪ
ಈಗಲೀಗ ನಮ್ಮ ಗುರುಗಳಿಗೆ
ಏಳುದುಡ್ಡನ ಕಬ್ಬುಣಕ್ಕಾಗಿ ಬಂದಿದ್ದಿನಿ ಅಣ್ಣಯ್ಯ

ಲೋ ನೀನೆಷ್ಟು ದೊಡ್ಡವ್ನು
ನಿನ್ನ ಗುರು ಎಷ್ಟೂ ದೊಡ್ಡವ್ನು || ಸಿದ್ಧಯ್ಯ ||

ನೀನು ಎಷ್ಟು ದೊಡ್ಡವನಾಗಿರಬಹುದು
ನಿನ್ನ ಗುರು ಎಷ್ಟು ದೊಡ್ಡವನಾಗಿರಬಹುದು ಪರದೇಶಿ

ನೀನು ಕಬ್ಬಣ ಕೇಳ್ದ ಮೇಲೆ ನಮ್ಮ
ಮಡ್ದೀರ ಕೇಳ್ದಂಗೆ ಆಯ್ತು || ಸಿದ್ಧಯ್ಯ ||

ಕಬ್ಬಣ ಕೇಳ್ದ ಮೇಲೆ
ಇವ್ನು ನಮ್ಮ ಮಡ್ದೀರ ಕೇಳ್ದಂಗೆ ಆಯ್ತಲ್ರಣ್ಣ

ಈ ಬಂದಿರೊ ಬಳೆಗಾರ್ನ
ಬುಡಬ್ಯಾಡಿ ಎಂದಾರಲ್ಲ || ಸಿದ್ಧಯ್ಯ ||

ಇವ್ನು ಬಂದಿರು ಬಳೆಗಾರ್ನ
ಖಂಡತ ಬುಡಬ್ಯಾಡ್ದು
ಇವ್ನ ಊರು ಬುಟ್ಟೂ ಹೊರಗೆ
ನಾವು ಕಳುಗು ಬಾರ್ದು ಎಂತ
ಏನು ಬಳೆಗಾರ
ನಮ್ಮ ಮಡ್ದೀರ ಕೈಯಿಗೆ
ಬಳೆಯನ್ನು ತೊಟ್ಟಬುಟ್ಟು
ಕಬ್ಬಿಣದ ಕೇಳ್ದವನು
ನಮ್ಮ ಗುರುಗೆ ಕಬ್ಬಣ
ಬೇಕು ಅನ್ತೇಳಿ
ಅಂಗಂತೀಯಾ ಪರದೇಶಿ
ನಿಮ್ಮ ಗುರು ಸತ್ಯ ನಾವು
ನೋಡಬೇಕಾದ್ರೆ ಗುರುವೆ
ನಿನ್ನ ಸತ್ಯ ನಾವು
ನೋಡಬೇಕಾದ್ರೆ ಬಳೆಗಾರ
ನಾವು ಹೇಳ್ದಂತಹ ಸತ್ಯ ನೀನು
ಮಾಡಬೇಕು ಎಂದಾರಲ್ಲ || ಸಿದ್ಧಯ್ಯ ||

ನಿನ್ನ ಸತ್ಯ ಒಪ್ಪಬೇಕಾದ್ರೆ
ನಿನ್ನ ಗುರು ಸತ್ಯ ನಾವು ತಿಳಿಬೇಕಾದ್ರೆ
ನೀನು ಒಳ್ಳೆ ಬಳೆಗಾರ ಎನತೇಳಿ ನಿನ್ನ ನೆಂಬುಕ ಬೇಕಾದ್ರೆ
ನಾವು ಹೇಳ್ದ ಸತ್ಯ ಮಾಡಿ ನಿನ್ನ ಗುರು ಸತ್ಯ
ತೋರ್ಸಬಲ್ಲೆಯ ಎಂದರು
ಏನ್ರಪ್ಪ ಏನ್ರಣ್ಣ
ಈಗಲೀಗ ನಾನು ಏನು ಸತ್ಯ ಏನು ಪ್ರಮಾಣ ಮಾಡಬೇಕ್ರಪ್ಪ
ನಾನು ಯಾವ ಪ್ರಮಾಣ ಮಾಡಿ ಸತ್ಯ ಕೋರ್ಬೇಕ್ರಣ್ಣ

ನನ್ನ ಗುರು ಕರುಣ ಇದ್ರೆ
ನೀವು ಹೇಳ್ದ ಸತ್ಯ ಮಾಡುತಿನಿ || ಸಿದ್ಧಯ್ಯ ||

ಯಾವ ಪ್ರಮಾಣ
ನಾ ಮಾಡಬೇಕು ಅಣ್ಣಯ್ಯ

ನೀವು ಹೇಳಿದ ಸತ್ಯ ನಾನು
ಮಾಡುತೀನಿ ಎಂದಾರಲ್ಲ || ಸಿದ್ಧಯ್ಯ ||

ನೋಡಿರಯ್ಯ ಅಣ್ಣಯ್ಯ
ಈ ಬಳೆಗಾರನ ಮಾತ ಕೇಳಿದ್ರಿಯ ಅಣ್ಣ
ಈಗಲೀಗಾ ಹೇಳಿದ ಸತ್ಯ ಮಾಡುತೀನಿ
ನನ್ನ ಮೈ ಮುಟ್ಟುಬೇಡಿ
ಕೈಯಿಡಿಬ್ಯಾಡಿ ಬಾಯಿ ಬುಟ್ಟು ಬೈಬೇಡಿ
ಈಗಲೀಗಾ ನನ್ನ ಮುಟ್ಟುತಟ್ಟು ಮಾಡಬೇಡಿ ಅಂತ್ಹೇಳಿ ಹೇಳ್ತವನಲ್ಲ
ಏ ಜಂಗುಮ
ನಿನ್ನ ಮುಟ್ಟು ತಟ್ಟು ಮಾಡಬ್ಯಾಡದು
ಅಂಥ ನೀನು ಹೇಳಿದ ಮೇಲೆ
ಇವತ್ತಿನ ದಿವಸದಲ್ಲಿ
ನಿನ್ನ ಮುಟ್ಟದಿಲ್ಲ ಬಾಯೆತ್ತಿ ಬೈಯದಿಲ್ಲ
ನಿನ್ನ ಮುಟ್ಟು ತಟ್ಟು ಮಾಡದಿಲ್ಲ

ನಿನ್ನ ಇಕ್ಕಳದಲ್ಲಿ ಇಡಕತಿವಿ
ರಾವುಗೋಲದಲ್ಲಿ ಬಡಿಯುತೀವಿ|| ಸಿದ್ಧಯ್ಯ ||

ನಿನ್ನ ಇಕ್ಕಳದಲ್ಲಿ ನಾವು
ಇಡಕಂಡು ಪರದೇಸಿ
ನಿನ್ನ ರವುಗೋಲಲ್ಲಿ ನಾವು
ಬಡಿತೀವಿ ಪರದೇಸಿ
ನಾವು ಕಬ್ಬುಣ ಬಡಿಯಂಗೆ
ನಿನಗೆ ಬಡಿದಾರ
ನೀನು ಬಡಿವಂತಾ ಕಾಲದಲ್ಲಿ
ಬಾಯೆತ್ತಿ ಬಯ್ಯಿಬ್ಯಾಡ
ನೀ ಕಣ್ಣಲ್ಲಿ ಕಣ್ಣೀರಾ
ಕೆಡುಗ ಬ್ಯಾಡ ಪರದೇಸಿ
ನೀ ಸತ್ತುವೇ ನಮಗೆ
ಸ್ವರುಗವು ದೊರೆಯುತಾದೆ || ಸಿದ್ಧಯ್ಯ ||

ನೀನು ಸತ್ತು ಹೋದುರು ನಮಗೆ
ಸುಖ ಸಿಕ್ಕುತ್ತಾದೆ
ಸ್ವರುಗು ದೊರೆಯುತಾದೆ
ಈ ಬಳೆತೊಟ್ಟು ಬಳೆಗಾರ್ನ
ಕಂಡುತವಾಗಿ ಬುಡಬ್ಯಾಡಿ|| ಸಿದ್ಧಯ್ಯ ||

ಆಗಲಿ ಕಂಡ್ರಪ್ಪ ಆಗಲಿ ಕಂಡ್ರಣ್ಣ
ಈಗಲೀಗಾ ಕೈಲಿ ಮುಟ್ಟುದಂತೆ ಇಕ್ಕಳದಲ್ಲಿ ಇಡಕಂಡು
ರವುಗೋಲಲ್ಲಿ ಬುಡುದಿರಿಯಪ್ಪ
ಈಗಲೀಗಾ ನನ ಗುರು ಪಾದ ನೆನಕತ್ತಿನಿ ಕನ್ರಯ್ಯಾ
ನನ ಗುರು ಪಾದ ನೆನಕತ್ತಿನಿ ಅವಾಗ ವಡಕರಪ್ಪ ಎನುತೇಳಿ

ಅಡುಗಲ್ಲಿನ ಮೇಲೆ
ಬಂದು ಕುಂತುಗಂಡಾ
ನೀಲಿ ಸಿದ್ದಪ್ಪಾಜಿ
ಗರುವೆ ಧರೆಗೆ ದೊಡ್ಡಯ್ಯಾ
ಮಂಟೇದು ಲಿಂಗಪ್ಪ
ನನ್ನ ಹಿರಿಚನ್ನಾಜಮ್ಮ
ನನ್ನ ಕಿಡಗಣ್ಣ ರಾಚಪ್ಪಾಜಿ
ಹಾಳಾದ ಪಂಚಾಳಗೇರಿಗೆ
ಕಳುಗಿದಿರಿಯ ಮಾಯಿಕಾರ || ಸಿದ್ಧಯ್ಯ ||

ಈ ದೊರೆಗಳಾ ಏಟ ನಾನು
ಯಾಗೆ ತಾನೆ ತಡಿಯಲಪ್ಪ || ಸಿದ್ಧಯ್ಯ ||

ಈ ಏಳು ಜನ ದೊರೆಗೊಳ ಏಟ ದೇವಾs
ಯಾವ ರೀತಿ ಒಳಗೆ ನಾನು ತಡಿಬೇಕು ಗುರುವು
ಯಾವ ರೀತಿ ಒಳಗೆ ನಾನು ಬದುಕಿ ಗುರುದೇವಾ
ನಿಮ್ಮ ಪಾದಕೆ ಕಬ್ಬುಣ ಭಿಕ್ಷೆ ತಂದು ಒಪ್ಪುಸುತಿನಿ ನನ್ನಪ್ಪ

ಅಪ್ಪ ಈಗಾ ನನ್ನ ಪ್ರಾಣ
ಉಳಿಯದಿಲ್ಲ ಎಂದಾರಲ್ಲ || ಸಿದ್ಧಯ್ಯ ||

ಈಗ ನನ್ನ ಪ್ರಾಣ ಉಳಿಯದಿಲ್ಲ ಏನುತೇಳಿ
ಆಗಲೀಗಾ ನೀಲ್ಗಾರ ಗಂಡ ನೀಲಿ ಸಿದ್ದಪ್ಪಾಜಿ
ಅಡಿಗಲ್ಲಿನ ಮೇಲೆ
ತಾನೆ ಕೂತಗಂಡು
ಧರೆಗೆ ದೊಡ್ಡೋರು ಪಾದ
ಮನದಲಿ ನೆನಕಂಡು
ಗುರುವೆ ಕರವೆತ್ತಿ ಕೈ ಮುಗಿದು
ಕಣ್ಣು ನೇತ್ರದೇವಾ
ಭದ್ರವಾಗಿ ಮುಚ್ಚುಗಂಡು
ಏಗುವಾಗಿ ಗುರುಗ್ಯಾನಾ
ಮಾಡುತಾ ಕುಳಿತುಗಂಡಾ || ಸಿದ್ಧಯ್ಯ ||

ಏಗುವಾಗಿ ಗುರುಗ್ಯಾನ ಮಾಡುತ ದೇವಾ
ಸಿದ್ದಪ್ಪಾಜಿ ಎರಡು ನೇತ್ರ ಕೂಡ ಮುಚ್ಚಿಗಂಡು
ಅಡುಗಲ್ಲಿನ ಮೇಲೆ ಭದ್ರವಾಗಿ ಕುತಗಂಡಾ

ಏಳುಜನ ದೊರೆಗಳು
ಅಯ್ಯಾ ಇಕ್ಕಳದಲ್ಲಿ ಗುರುವು
ಸಿದ್ದಪ್ಪಾಜಿಯವರ
ಭದ್ರವಾಗಿಡಕಂಡು
ಗುರುವೇ ನಾಲಕ್ಕು ಜನಾರು
ದೊರೆಗಳು ನನ್ನ ಗುರುವೆ
ನಾಕು ಮೂಲೇಲಿ ನಿಂತುಗಂಡು
ಗುರುವೆ ಮೂರುಜನ ದೊರೆಗಳು
ಮೂರು ಮೂಲೆ ಒಳಗೆ
ಸಿದ್ದಪ್ಪಾಜಿಯವರಾ
ಇಕ್ಕಳದಲ್ಲಿ ಇಡಕಂಡು
ಅವರು ರಬ್ಬರಬ್ಬನೆ ಬಡಿವಾಗ
ನನ್ನ ಗುರುಗ್ಯಾನ ಮಾಡಿಕಂಡಾ|| ಸಿದ್ಧಯ್ಯ ||

ಗುರುವೆ ಕಬ್ಬಿಣಕೆ ಗುರುವು
ಅವರು ಏಟನೆ ವಡಿವಾಗ
ಸಿದ್ದಪ್ಪಾಜಿಯವರ
ಕತ್ತಿನ ಮೇಲೆ
ಹೊಡಿವಂತ ಕಾಲದಲ್ಲಿ
ನನ್ನ ಧರೆಗೆ ದೊಡ್ಡಯ್ಯ
ಮಂಟೇದಾಲಿಂಗಪ್ಪ
ಕಿಡುಗಣ್ಣ ರಾಚಪ್ಪಾಜಿ
ನನ್ನ ಹಿರಿಯ ಚೆನ್ನಾಜಮ್ಮ
ಗುರುವೆ ದಿವ್ಯಾ ದೃಷ್ಟಿಯ ಒಳಗೆ
ಸಿ‌ದ್ದಪ್ಪಾಜಿಯವರಾ
ಕಣ್ಣಾರೆ ನೋಡವರೆ
ಅವರು ಹೊಡವಂತಾ ಏಟನೆಲ್ಲಾ
ಕುಸುಮವನ್ನೆ ಮಾಡುತಾರೆ || ಸಿದ್ಧಯ್ಯ ||

ಗುರುವೆ ನೂರಾರು ಏಟು
ಏಳುಜನ ದೊರೆಗೊಳು
ರವುಗೋಲಿನ ಒಳಗೆ
ಸಿದ್ದಪ್ಪಾಜಿಯವರಿಗೆ
ಹೊಡೆಯುವಾಗ ನನ ಗುರುವು
ಅವರು ಹೊಡೆವಂತಾ ಏಟುಗೊಳು
ಸಿದ್ದಪ್ಪಾಜಿಯವರಾ ಮೈಗೆ
ತುಂಬೆ ಹೂವಾ ಆಗಿದ್ದಾವು || ಸಿದ್ಧಯ್ಯ ||

ಸಿದ್ದಪ್ಪಾಜಿಯವರಾ
ಆಗಲೀಗಾ ಮೈಯಿಮಂಡೆ ತುಂಬಾ
ಆಗಲೀಗಾ ಜಾತುಗೊಂದು ಬಗೆ ಪುಷ್ಮವಾದೋ
ಏನುರಣ್ಣ

ನಾವು ವಡವಂತಾ ಏಟೆಲ್ಲಾ
ಇವನಿಗೆ ಮಲ್ಲಿಗೆ ಪುಷ್ಮ ಆಗುತಾದೆ || ಸಿದ್ಧಯ್ಯ ||

ಹೊಡೆಯುವಂತಾ ಏಟುಗಳೆಲ್ಲಾ ಈ ಮುಂಡೆಮಗನಿಗೆ
ಪುಷ್ಮಾಗಳಿಯಾಗೊದವಲ್ಲೊ
ಇವನಿಗೆ ವಡದು ವಡದು
ನಾವು ಏಳುಜನ ಸೋತೋದುವಲ್ಲ

ಇವನು ಬಾಳ ವಿದ್ಯಾಕಾರ
ಬುಡುಬ್ಯಾಡಿ ಎನ್ನುತಾರೆ || ಸಿದ್ಧಯ್ಯ ||

ಬಾಳ ವಿದ್ಯಾಕಾರ ಬುಡುಬ್ಯಾಡ್ದು ಎನ್ನುತೇಳಿ
ಒಬ್ಬ ದೊರೆ ಏಳುತಾನೆ
ಇನ್ನೊಬ್ಬ ದೊರೆ ಸಿದ್ದಪ್ಪಾಜಿ
ಮಕ ಮಟಮಟನೆ ನೋಡುತಾನೆ
ಈ ಇಕ್ಕಳ ಇಡುಕಂಡಿದ್ದವರ್ಗಿಲ್ಲ
ಬಕ್ಕಂಡು ನಿಂತಿ ನಿಂತಿ ಸೊಂಟಾ ಬ್ಯಾರ್ತಗಂಡು
ಈ ಬಳೆಗಾರ್ನ ಸುಖ ಗುರುವೆ
ಇಂದಿಗೆ ಸಾಕಾಯಿತಲ್ಲೊ || ಸಿದ್ಧಯ್ಯ ||