ಈ ಬಳೆಗಾರ್ನಿಂದಾ ನಮಗೆ ಎಷ್ಟು ಕಷ್ಟ ಬಂದುಬುಡ್ತು ಎನುತೇಳಿ
ಮೂರುಜನ ದೊರೆಗೋಳು
ಅಸ್ಸು ವುಸ್ಸೊ ಅಂತಾರೆ
ಈ ವಡದಂತಗಾ ನಾಲಕ್ಕು ಜನ ದೊರೆಗೋಳು
ವಡ್ಡು ವಡ್ಡು ಧಸಬುಸನೆ ನಗರುತ್ತಾ ನಗರುತ್ತಾ ನಿಂತಿರುವಾಗ
ಸಿದ್ದಪ್ಪಾಜಿಯವರು ಕಣ್ಣುಬುಟ್ಟು ನೋಡಿಬುಟ್ಟು
ಅಣ್ಣಾ
ನಿಮ್ಮ ಕಾರ್ಯ ತೀರ್ಸಿಗಂದ್ರಿಯಪ್ಪ
ನೀವು ವಡದಂತ ಏಟುಗಳನೆಲ್ಲಾ ತಡಕಂಡು ಬುದುಕಿವ್ನಿ ಕನ್ರಣ್ಣ

ಈಗಲಾದ್ರುವೆ ಅಣ್ಣದಿರೆ
ಕಬ್ಬುಣದ ಭಿಕ್ಷ ಕೊಟ್ಟುಬುಡ್ರಪ್ಪ || ಸಿದ್ಧಯ್ಯ ||
ಅಣ್ಣ ಆರೆ ಮೂರು ಕಣ್ರೋ
ಗುದುಲಿ ಮೂರು
ದಬಕಾ ಮೂರು ಕನ್ರೋ
ಕೇಳಿ ಅಣ್ಣಯ್ಯ
ನಮ್ಮ ಗುರುವಿಗೆ ದೇವಾ
ಒಂಬತ್ತ ಲಗಾ
ಆಗಬೇಕು ಕನಿರಪ್ಪ
ನೀವು ಒಂಬತ್ತು ಲಗಾಗೊಳಾ
ಕೊಟ್ಟುಬುಡಿ ಎಂದಾರಲ್ಲ || ಸಿದ್ಧಯ್ಯ ||

ಒಂಬತ್ತು ಲಗಾಗಳ
ಕೊಟ್ಟುಬುಡಿ ಕೊಟ್ಟುಬುಡ್ರಪ್ಪ
ನಾನು ಗುರುವಿನ ಪಾದಕೆ ಒಪ್ಪುಸ್ತಿನಿ
ಕೊಟ್ಟು ಬುಡಿ ಅಣ್ಣದಿರಾ ಎಂದುರು
ಏನೋ ಜಂಗಮಾ
ಈಗಲೀಗಾ ಏಳು ದುಡ್ಡುನಾ ಉಡಗಬ್ಬಿಣನಾ ಕೇಳಿದೆ
ಈಗ ಒಂಬತ್ತು ಲಗ ಕೇಳಿದೆ
ಒಂಬತ್ತು ಲಗಾ ನಿನಗೆ ಕೊಡಬೇಕಾದ್ರೆ

ಕಾದಿರುವ ಗುಳ ತಗದು
ಅಡ್ದು ಬರಿಯ ಎಳಿಯತೇವಿ || ಸಿದ್ಧಯ್ಯ ||

ಕಾದಿರುವಂತ ಗುಳ ತಗದು
ನಿನಗೆ ಒಂಬತ್ತು ಬರೆ ಎಳಿತೀವಿ ಕಣೋ ಪರದೇಸಿ
ನೀನು ಒಂಬತ್ತು ಬರೆ ಎಳಿವಾಗ
ನೀನು ಒಂಬತ್ತು ಬರೆ ತಡಕಂಡು ಬುಟ್ರೆ

ಅಯ್ಯಾ ಕೇಳಿದ ಭಿಕ್ಷ ಕೊಡುತೀವಿ
ನಿನ್ನ ಗುರುವಿಗೆ ಶಿಷ್ಯ ಆಗುತೀವಿ || ಸಿದ್ಧಯ್ಯ ||

ನಿನಗೆ ಕಬ್ಬುಣ ಭಿಕ್ಷ ನಾವು
ಕೊಡುತೀವಿ ಕಣೋ ಜಂಗುಮ
ಕೇಳೋ ಮುಂಡೆ ಮಗನೆ
ನಿನ್ನ ಗುರುವಿಗೆ ನಾವು
ಶಿಷ್ಯರಾಗುತೀವಿ
ನಿನಗೆ ಕಾದಿರುವ ಗುಳುವಾ
ನಾ ಬರೆಯನ್ನೆ ಎಳಿಯುತೀವಿ || ಸಿದ್ಧಯ್ಯ ||

ಕಾದಿರುವಂತ ಗುಳ ತಗದು ಅಡ್ಡಬರೆ ಎಳಿತೀವಿ
ನಾವು ಬರೆದಂತ ಬರೇಗಳನ್ನೆಲ್ಲಾ ನೀನು ತಡಕೊ
ಆಮೇಲೆ ನೀನು ಕೇಳಿದ ಭಿಕ್ಷ ಕೊಡುತೀವಿ ಎಂದುರು

ಅಯ್ಯಾ ಬ್ಯಾಡಿ ಕಣಿರಪ್ಪ
ಬ್ಯಾಡಿ ಕಣಿರಯ್ಯಾ
ನಾನು ಕೆಳಿದ ಭಿಗುಸಾ ನೀವು
ಕೊಟ್ಟು ಬುಡಿ ಅಣ್ಣಯ್ಯಾ
ನನ್ನ ಗುರುವಿಗೆ ನೀವು
ಶಿಷ್ಯ ಆಗಿರಪ್ಪ
ನೀವು ಶಿಷ್ಯರಾದ ಮೇಲೆ
ನಮ್ಮ ಗುರು ಪಾದ ದೊರಿಯುತಾದೆ || ಸಿದ್ಧಯ್ಯ ||

ಏನೋ ಜಂಗಮಾ
ನಿಮಗೆ ಕಬ್ಬುಣ ಕೊಡೋದಲ್ಲದೆ
ನಿನ್ನ ಗುರುವು ನಾವು ಶಿಷ್ಯರಾಗಬೇಕಾ
ಈಗಲೀಗಾ ನಾವು ಶಿಷ್ಯರಾಗಬೇಕಾ
ಈಗಲೀಗಾ ನಾವು ಶಿಷ್ಯರಾಗಿಬುಡ್ತಿವಿ ಕಣೋ
ಮೊದಲು ಬರೆ ಎಳಿಸಿಕೋ ಎಂದುರು
ಅಯ್ಯೊ ಗುರುದೇವಾ
ಕಾದಿರುವಾ ಗುಳ ತಂದು ಗುರುವು
ಅಡ್ಡ ಬರೆ ಎಳಿತರಂತಲ್ಲಪ್ಪ
ಈ ಬ್ರಹ್ಮ ವಂಶದವರ ಕೈಗೆ ನನ್ನ
ಸಿಗಿಸಿದಿಯಪ್ಪ ಮಾಯಿಕಾರ || ಸಿದ್ಧಯ್ಯ ||

ಈ ಪಂಚಾಳದವರ ಬಂಧನವಾ
ತಡಿಯನಾರೆ ಧರ್ಮಗುರುವೆ || ಸಿದ್ಧಯ್ಯ ||

ಸಿದ್ದಪ್ಪಾಜಿಯವರಾ
ಕರಕಂಡಿ ಗುರುದೇವಾ
ಕುಲುಮೆ ಮುಂಭಾಗಕೆ
ಕರಕಂಡು ಬಂದು
ಕುಲುಮೆ ಮುಂಭಾಗದಲಿ ಕುಂಡ್ರಿಸಿಕಂಡು

ಏ ಜಂಗುಮಾ
ಮುಟ್ಟು ಬ್ಯಾಡ ಮುಟ್ಟು ತಟ್ಟು ಮಾಡಬ್ಯಾಡ ಅಂತ ಹೇಳ್ತೀಯಾ
ನಿನ್ನ ಮುಟ್ಟುವಂತ ದೊರಾಂದೊರೆಗಳು ನಾವಲ್ಲ
ಈಗಲೀಗಾ ಗುಳಾ ಕಾಯ್ತದೆ
ಭದ್ರುವಾಗಿ ಕೂತುಕೋ ಎಂದುರು
ಧರೆಗೆ ದೊಡ್ಡೋರ ಪಾದ ನನಕಂಡು ಸಿದ್ದಪ್ಪಾಜಿ
ಆದಿ ಬಪ್ಪುಗೌಡ್ನ ಪುರಕ್ಕೆ ಕೈ ಎತ್ತಿ ಮುಕ್ಕಂಡು
ಕಣ್ಣು ನೇತ್ರಾ ಮುಚ್ಚಗಂಡು
ಭೂಮಿಲಿ ಕೂತುಗಂಡರು

ಇವರು ಮಾಡುವಂತಾ ಶಿಕ್ಷೆ ನಿನ್ನ
ಪಾದಕೆ ಅರುವಾಗಲಪ್ಪ || ಸಿದ್ಧಯ್ಯ ||

ಇವರು ಮಾಡುವಂತ ಶಿಗುಸೇ
ಮಾಡುವ ಬಂಧನಾ
ನಿಮ್ಮ ಪಾದಕೆ ಅರುವಾಗಲಿ
ಮಂಟೇದಾ ಲಿಂಗಯ್ಯ
ಹಾಗಂತ ನನ ಗುರುವು
ನೀಲಿಸಿದ್ದಪ್ಪಾಜಿ
ಧರೆಗೆ ದೊಡ್ಡೋರು ಪಾದ
ನೆನವಂತ ದೋರೆಗಳು
ಅವರು ರಾವುಗೋಲನ್ನೆ ಗುರುವೆ
ಕಾಯಿಸಿಗಂಡು ಗುರುವು
ಅವರು ರಾವುಗೋಲ ಕಾಯಿಸಿಗಂಡು
ಅಡ್ಡಿಬರಿಯಾ ಏಳುದರಲ್ಲ || ಸಿದ್ಧಯ್ಯ ||

ಇವರು ಬರೆದಂತ ಬರೆಗಳೆಲ್ಲ
ಜನುವಾರ ಆದವಲ್ಲೊ || ಸಿದ್ಧಯ್ಯ ||

ಕಾದಿರುವಂತ ಗುಳ ತಂದು ಸಿದ್ದಪ್ಪಾಜಿಯವರಿಗೆ ದೇವಾ
ಅಡ್ಡಬರೆ ಎಳಿವಾಗ ಗುರುವು
ಧರೆಗೆ ದೊಡ್ಡವರ ಮಯಿಮೆ ಮೈಥುಗಾರದಿಂದಾ ಗುರುವು
ಇವರು ಎಳಿದಂತಾ ಬರಿಗಳೆಲ್ಲಾ
ಜನುವಾರ ಆಗುತಾವೆ || ಸಿದ್ಧಯ್ಯ ||

ಎನಿರಣ್ಣ
ಈ ಮುಂಡೆ ಮಗನಿಗೆ ಸಾವು
ಕಾದಿರೊ ಗುಳಾತಂದು ಅಡ್ಡಬರೆ ಎಳುದರೆ
ಇವನ ಮೈತುಂಬ ಬರಿ ದಾರುಗಳೆ ಆಯ್ತುವಲ್ಲ
ಇವನು ಬಾಳ ವಿದ್ಯಕಾರ
ಬಾಲ ಸಿದ್ದಕಾರ ಕಣೋ
ಇವನು ಮಾಟ್ಲಕಾರ
ಇವನು ಮಂತ್ರಿಕಾರ ಕಂಡ್ರಯ್ಯ ಎಂದುರು
ಅಣ್ಣಯ್ಯಾ
ನೀವು ಏಳೇಳುದ್ದೆಲ್ಲಾನೂ ಮಾಡ್ತಿನಿ ಕಣ್ರಪ್ಪ

ನನ್ನ ಗುರುವಿಗೆ ಬೇಕಾದ ಭಿಕ್ಷ
ಕೊಟ್ಟುಬುಡಿ ಪಂಚಾಳದವರೆ || ಸಿದ್ಧಯ್ಯ ||

ಅಯ್ಯಾ ಗುರುವಿಗೆ ಬೇಕಾದ
ದಾನವ ನೀವು
ಕೊಟ್ಟುಬುಡಿ ಅಣ್ಣಯ್ಯ
ಅಂದವರೆ ನನ್ನ ಗುರುವು
ಲೋ ಕೇಳಲೋ ಪರದೇಸಿ
ಕೆಳಲೋ ಭಿಕುಸಿಕಾ
ನಿನ್ನ ಗುರುವಿಗೆ ಭಿಗುಸಾ
ನಾವು ಕೊಡಬೇಕಾದ್ರೆ ಗುರುವು
ನಾವು ಇನ್ನೊಂದು ಸತ್ಯ
ನಿನಗಾಗಿ ಮಾಡುತೀವಿ
ನಾವು ಹೇಳಿದ ಸತ್ಯವಾ
ನೀನಾಗಿ ಮಾಡಬೇಕು || ಸಿದ್ಧಯ್ಯ ||

ನಾವು ಹೇಳುವ ಸತ್ಯ ಮಾಡಿದರೆ
ಬೇಡಿದ ಭಿಕ್ಷ ಕೊಡುವುತೀನಿ || ಸಿದ್ಧಯ್ಯ ||

ನಾವು ಹೇಳುವಾ ಸತ್ಯ ಮಾಡಿದುರೆ
ನೀನು ಬೇಡಿದ ಭಿಕ್ಷ ಕೊಡುತೀವಿ ಕಣೋ ಪರದೇಸಿ ಎಂದುರು
ಅಯ್ಯೋ ಅಣ್ಣದೀರೆ
ಇನ್ನು ಯಾವಸತ್ಯ
ಇನ್ನು ಯಾವ ಪ್ರಮಾಣ ಮಾಡಬೇಕರಪ್ಪ ಎಂದುರು
ಹೇ ಬಳೆಗಾರ ಯಾವಸತ್ಯ
ಯಾವ ಪ್ರಮಾಣ ಮಾಡಬೇಕು ಎಂದು ಕೇಳಿದ್ಯಾ
ಈಗಲೀಗಾ ಏಳು ಕೊಪ್ಪರ್ಕೆ ತರುಸ್ತಿವಿ
ಕೊಪ್ಪರ್ಕೆ ತುಂಬಾ
ಕಬ್ಬುಣ ತುಂಬುಸ್ತೀವಿ
ತಿದಿ ಒತ್ತುಸ್ತಿವಿ
ಆಗಲೀಗಾ ನಾಲಕು ಮೂಲೆಗೂ ನಾಲಕು ತಿದಿ ಒತ್ತಿ
ಎಣ್ಣೆ ಕಾಯ್ಸಿದಂಗೆ ಕಬ್ಬುಣಕಾಯ್ಸಿತಿವಿ
ಕೊಪ್ಪರಿಕೆ ಒಳಗೆ ಕಾವಿನೀರೊ ಪನ್ನೀರಪ್ಪಂದವಾಗಿ
ಕಬ್ಬುಣ ಕಾದು ಮಳ್ಳಬೇಕು
ಆ ಮಳ್ಳುವಂತಾ ಕಬ್ಬುಣದ
ಕೊಪ್ಪುರಿಕೆಗೋಗಿ ನೀನು ನಿಂತುಕೋಬೇಕು

ನೀನು ಮೂರುಸತಿ ಮುಳುಗಬೇಕು
ಮೂರುಸಾಲಿ ಏಳಬೇಕು || ಗಂಗಾಧರ ||

ನಿನ್ನ ಗುರುಗೆ ಶಿಷ್ಯರಾಗುತೀವಿ
ಬೇಡಿದ ಭಿಕ್ಷ ಕೊಡುವುತೀವಿ|| ಗಂಗಾಧರ ||

ಗುರುವೆ ಸಿದ್ದಪ್ಪಾಜಿಯವರು
ಧರೆಗೆ ದೊಡ್ಡಯ್ಯಾ
ಕಿಡಗಣ್ಣ ರಾಚಪ್ಪಾಜಿ
ಹಿರಿ ಚನ್ನಾಜಮ್ಮ
ನನ್ನ ತೋಪುನಾ ದೊಡ್ಡಮ್ಮ
ಈ ಪಂಚಾಳದವರು
ಹೇಳುವ ಸತ್ಯಗಳ
ಕಿವಿಯಾರೆ ಕೇಳಿಕಂಡುರು
ಸಿದ್ದಪ್ಪಾಜಿಯವರು
ಮಾಡುವ ಪಾವಾಡದ
ಕಣ್ಣಾರೆ ನೋಡುಕಂಡುರು
ಅಪ್ಪ ಎದುರು ಬ್ಯಾಡ ಮಗನೆ
ಬೆಚ್ಚುಬ್ಯಾಡ ನನ ಕಂದ
ಕಾದ ಕೊಪ್ಪರಿಕೆಗೆ
ಆಕುತಾರೆ ಎನುತೇಳಿ
ಭಯುವ ಪಡುಬ್ಯಾಡ
ನಾವು ಕಾದ ಕೊಪ್ಪರಿಕೆ ನೀರಾ
ಕಾವಿನೀರಾ ಮಾಡುತೀವಿ || ಸಿದ್ಧಯ್ಯ ||

ಕಾದ ಕೊಪ್ಪರಿಕೆಯಾ
ಕಾವಿನೀರ ಮಾಡ್ತೀವಿ ಮಗನೆ
ಭಯ ಪಡಬ್ಯಾಡ ಎನುತೇಳಿ
ಸಿದ್ದಪ್ಪಾಜಿಗೆ ಹರಸಿ ಆಶಿರುವಾದ ಕೊಟ್ಟುರು
ಅಣ್ಣಯ್ಯ
ಈಗಲೀಗಾ ಕಾದ ಕೊಪ್ಪರ್ಕಿಗೆ ಆಕ್ತಿವಿ ಅಂತಾ ಹೇಳ್ತಿರಿಯಲ್ಲಪ್ಪ
ನಾನು ಗುರು ಮಗನಾದರೆ ನನ್ನ ಜಗತ್ತು ಗುರುಗಳು
ಸತ್ಯವಂತ ದೇವುರಾದರೆ

ನೀವು ಏಳುವ ಸತ್ಯ ಮಾಡುತೀನಿ
ಬೇಡುವ ಭಿಗುಸಾ ಕೊಟುಬುಡ್ರಿ || ಗಂಗಾಧರ ||

ಈಗಲೀಗಾ ಗುರುವು
ನೀನು ಬೇಡಿದ ಭಿಗುಸಾ ಕೊಡ್ತಿವಿ ಬಾ ಮುಂಡೆ ಮಗನೆ ಎನತೇಳಿ
ಕೊಪ್ಪರಿಕೆ ತಂದು
ಕೊಪ್ಪರಿಕೆ ಒಳಗೆ ಉಡುಗಬ್ಬುಣ ತುಂಬಿ
ಆಗಲೀಗಾ ಏಳು ದಿಕ್ಕಿನಲಿ ಏಳು ಕುಲುಮೆ ಹೂಡಿ
ಆಗಲೀಗಾ ಕುಲುಮೆನೆ ಹತ್ತಿಗಂಡು
ನೀರು ಕಾದ ಪ್ರಕಾರವಾಗಿ
ಕಬ್ಬುಣ ಕಾದು ತಳಮಳ ಮಳ್ಳುವಂತಾ ಕಾಲದಲ್ಲಿ ಗುರುವು
ಏನೋ ಜಂಗುಮ
ನಿನ್ನ ಗುರು ಇಲ್ಲಿದ್ದಾರೇನು
ನಿನ್ನ ಸತ್ಯ ಇಲ್ಲಿದ್ದರಾ ಮುಂಡೆಮಗನೆ
ಈಗ ಗುರುಮಗ ನೀನಾದರೆ
ನಿನ್ನ ಗುರು ಅಂತ ಸತ್ಯವಂತನಾದರೆ

ಈ ಕಾದಿರುವ ಗಟ್ಟಿ ಮೇಲೆ
ನಿನ್ನ ಪಾದವನ್ನೆ ಮಡಗು ಅಂದರು || ಸಿದ್ಧಯ್ಯ ||

ಅಣ್ಣ ಆಗಲಿ ಕಣಿರಪ್ಪ
ಆಗಲಿ ಕಣಿರಯ್ಯಾ
ಹಾಗಂದು ನನ್ನ ಗುರುವು
ನೀಳಿ ಸಿದ್ದಪ್ಪಾಜಿ
ನನ್ನ ಧರೆಗೆ ದೊಡ್ಡೋರ ಪಾದ
ಮನದಲಿ ನೆನಕಂಡು
ಅವನು ಬಲದ ಪಾದ ತಗದು
ಕಾದಗಟ್ಟಿ ಮ್ಯಾಲೆ
ಮಡಗಿದ ನನ ಗುರುವೆ
ನೀಲಿ ಸಿದ್ದಪ್ಪಾಜಿ
ಅದು ಕಾದಗಟ್ಟಿ ಎಲ್ಲಾ ಗುರುವೆ
ಕಾವಿ ನೀರಾಗಿ ಹರಿಯಿತಂತೆ || ಸಿದ್ಧಯ್ಯ ||

ಗುರುವೆ ಮನೆಗೆ ಮಂಟೇದು ಲಿಂಗು
ಶಿವುಗೆ ನೀವು ಸಿದ್ದಪ್ಪಾಜಿ || ಸಿದ್ಧಯ್ಯ ||

ಗುರುವೆ ಅಚಾರಿ
ಮನಸ್ತಾನದವರು
ಬ್ರಹ್ಮ ಕುಲದವರ
ಬಂಧಾನ ಗುರುವು
ತಡಿಯಲಾರೆ ಗುರುವು
ಈ ಮಂಟೇದಾ ಲಿಂಗಯ್ಯನ ಪಾದ
ಮಂಡೆ ಮೇಲೆ ಒದಗಲಪ್ಪ || ಸಿದ್ಧಯ್ಯ ||

ಈ ಪಂಚಾಳದವರ ಸಿಗಸಿ
ನಾ ತಡಿಯನಾರೆ ಮಾಯಕಾರ || ಸಿದ್ಧಯ್ಯ ||

ಈ ಪಂಚಾಳದವರ ಬಂಧಾನವ
ನಾನು ತಡಿಲಾರೆ ಜಗತ್ತುಗುರು ಧರೆಗೆ ದೊಡ್ಡಯ್ಯಾ
ಇವರು ಮಾಡುವಂಥ ಸಿಗಸಿ ಗುರುವು
ಎಷ್ಟೊಂದು ತಡಿಯಲಿ ಎನುತೇಳಿ ಸಿದ್ದಪ್ಪಾಜಿ
ಧರೆಗೆ ದೊಡ್ಡೋರ ಪಾದ ಬೇಡುವಾಗ
ಈಗಲೀಗಾ ಹಲಗೂರು ಪಂಚಾಳದ ದೊರೆಗೊಳು
ಏನಿರಣ್ಣ ನಾವು ಹೇಳುದ ಸತ್ಯ ಎಲ್ಲಾ ಮಾಡುತಾನೆ
ಈಗಲೀಗಾ ನಾವು ಹೇಳಿದ ಸತ್ಯ ಇವನು ಮಾಡಬೇಕಾದ್ರೆ

ನಾವು ಒಳ್ಳೆ ಸತ್ಯ ಇವನಿಗೆ
ಮಾಡ್ಯದಿಲ್ಲ ಎಂದಾರಾಗ || ಸಿದ್ಧಯ್ಯ ||

ಇವನ ಒಳ್ಳೆಸತ್ಯ ನಾವು
ಹೇಳುಬೇಕು ಕನಿರಣ್ಣ
ಮಾಡಬಾರದ ಸತ್ಯ ಇವನಿಗೆ
ಮಾಡಬೇಕು ಕನಿರಣ್ಣ
ಇವತ್ತು ಇವನ ಕರಕಂಡು ಹೋಗಿ
ನಿಮ್ಮ ಕಾಳಿಕ ದೇವಿ ಮಠಕೆ ಇವನಾ
ಕೂಡಬೇಕು ಎಂದಾರಲ್ಲ || ಸಿದ್ಧಯ್ಯ ||

ಇವನ್ನೆ ತಕಂಡೋಗಿ
ಕಾಳಿಕಾದೇವಿ ಮಠಕ್ಕೆ ಕೂಟುಬುಡುಬೇಕು ಕನ್ರಣ್ಣ

ನಮ್ಮ ಮಾರಿ ಬಾಯಿಗೆ ಇವನ್ನ
ತುತ್ತಾಗಿ ಕೊಡಲೇಬೇಕು || ಸಿದ್ಧಯ್ಯ ||

ನಮ್ಮ ಮನೆದೇವತೆ ಮಠಕೆ
ನಿನ್ನ ಕೊಡುತೀವಿ ಜಂಗುಮ
ನಮ್ಮ ಮನೆದೇವುತೆ ಮಠದಲ್ಲಿ
ಇಂದು ರಾತ್ರಿ ನೀನು
ಅಲ್ಲೆ ಇರಬೇಕು
ನೀನು ಬೆಳಗಾದ ಮೇಲೆ ನೀನು
ಹೊರಗೆ ನೀನು ಬರಲೇಬೇಕು|| ಸಿದ್ಧಯ್ಯ ||

ಆಗಲಿ ಕಣಿರಪ್ಪ ಆಗಲಿ ಕಣಿರಣ್ಣ
ನೀವು ಹೇಳುವ ಸತ್ಯ ಮಾಡುತೀನಿ ಕನ್ರಣ್ಣ
ಸತ್ಯ ಮಾಡಿದ ಮೇಲೆ
ನಮ್ಮ ಗುರುಗೆ ಬೇಕಾದ ಧರ್ಮ ಕೊಟ್ಟುಬುಡ್ರಪ್ಪ ಎಂದುರು
ನಿನ್ನ ಗುರುವೆ ಬೇಕಾದಂತಾ ದಾನಧರ್ಮ ಕೊಡುತೀವಿ
ನಮ್ಮ ಕಾಳಿಕಾ ದೇವಿಮಠಕೆ ಬಾ ಎನುತೇಳಿ
ಕಾಳಿಕಾ ದೇವಿಮಠಕೆ ದೇವಾs
ಕರಕಂಡು ಬಂದು ಕಾಳಿಕಾದೇವಿ ಮಠಕೆ ಕೂಡಿಬುಟ್ಟು
ಬೀಗ ಮುದ್ರೆನೆ ಹಾಕ್ಕಂಡು
ಅಣ್ಣಾ ಕೆಟ್ಟ ಮಾರಿ ಅವನ
ಬಿಡುವುದಿಲ್ಲ ಎಂದರಂತೆ || ಸಿದ್ಧಯ್ಯ ||

ನನ್ನ ಮನದೇವುತೆ ಮಾರಮ್ಮ ಅವನ
ತಿಂದುಬುಡ್ತಾರೆ ಎಂದರಂತೆ|| ಸಿದ್ಧಯ್ಯ ||

ಈಗಲೀಗಾ ನಮ್ಮ ಮಾರವ್ವ
ಆಮುಂಡೆ ಮಗನ ತಿಂದಾಕಿಬುಡ್ತಾಳೆ ಬನ್ರಣ್ಣ ಎನುತೇಳಿ
ಆಗಲೀಗಾ ತಮ್ಮ ತಮ್ಮ ಮನೆಗೆ ಗುರುದೇವಾ
ಸಿದ್ದಪ್ಪಾಜಿ ಹೋದಂತಾ ಗಳಿಗೆ ಒಳಗೆ ಗುರುವು
ಮಾರಮ್ಮ ಯಾವ ರೀತಿ ಒರಗಿ ಮನಗಿ ನಿದ್ರೆ ಮಾಡ್ತಾರೆ

ಅರುವತ್ತಾರು ಹೆಣವ ಅಣ್ಣಯ್ಯ
ಅಂಗೈ ಮೇಲೆ ಇಡಕಂಡು”
ಮೂವತ್ತು ಮೂರು ಹೆಣವ
ಮಡ್ಲಲಿ ಕಟ್ಟಿಕಂಡು
ಒಂಬೊಂಬತ್ತು ಹೆಣ ಹಲ್ಲಲಿ ಕಚಿಗಂಡು
ಆಗಲೀಗಾ ಒಂದು ಕಂಡುಗಾ
ಕುಂಕುಮನೆ ಹಣೆ ತುಂಬ ಇಕ್ಕಂಡು
ಒಂದು ಕಂಡುಗಾ ಅರುಶುಣ
ಮಕತುಂಬಾ ಬಳಕಂಡು
ಒಂಬೊಂಬತ್ತು ಹೆಣವ
ಹಲ್ಲಲಿ ಕಚುಗಂಡು
ಕೆಟ್ಟ ಮಾರಮ್ಮ
ದೃಷ್ಟವಾದ ಮಾರಮ್ಮ
ಅವಳು ಬುಟ್ಟು ಬಾಯಿ ಬುಟ್ಟಂಗೆ
ಬುಟ್ಟು ಕಣ್ಣು ಬುಟ್ಟಂಗೆ
ಗುರುವೆ ಮಠಮನಿಯಾ ಒಳಗೆ
ಮನಿಗಿದ್ದ ಮಾರಮ್ಮ
ಮಲಗಿದ್ದ ಮಾರಮ್ಮನವರ
ಮಟಮಟನೆ ನೋಡುತಾರೆ|| ಸಿದ್ಧಯ್ಯ ||