ಸುತ್ತ ಮುತ್ತ ಇರ್ತಕ್ಕಂಥ s
ಹಾವು ಚವುಳು ಏನಂಥ ಕರೀತಾರಂದ್ರೆ ಸಿದ್ದಪ್ಪಾಜಿ

ಅಯ್ಯಾ ನಾಗುರಾವೆ ಬಪ್ಪಾ
ಹಸುರಾವೆ ಬಾರೋ
ಲೋ ಮಣ್ಣಗಂಡಲ ಬಪ್ಪಾ
ಹಬ್ಬಿಯಾದೆ ಬಾರೋ
ಲೋ ಕಚ್ಚೋ ಚವುಳು ಬಪ್ಪಾ
ಚುಚ್ಚೋ ಚವುಳು ಬಾರೋ
ಓಡಿ ಬಪ್ಪಾ ಮಗನೇ
ನನ್ನ ಹಸುರಾವೆ ಬಪ್ಪಾ
ನನ್ನ ಸುರುವಣುದಾರೆ ರಾಜ ಬಾರೋ
ನನ್ನ ಕಟ್ಟುನಾದೆ ಕಂದ
ಓಡಿ ಬಪ್ಪಾ ನನ್ನ ಕಂದ
ಲೋ ಹೆಜ್ಜೇನು ಬನ್ನುರಪ್ಪಾ
ಕಿರುಜೇನು ಬನ್ನಿರಯ್ಯ
ನನ್ನ ಕಡುಜನ ಮರಿಗಳೇ
ಓಡಿ ಬನ್ರಿ ಎಂದರಲ್ಲ || ಸಿದ್ಧಯ್ಯ ||

ನೂರ ಒಂದ ಹಾವು ಚವುಳು
ಎಲ್ಲಾನು ಕರುದ್ರು ಸಿದ್ದಪ್ಪಾಜಿ
ಎಲ್ಲಾ ಪ್ರಾಣಿಗಳೂವೆ
ಇವತ್ತು ಜಗತ್ತು ಗುರುಗಳ ಮಗ ಕರೀತಾವ್ರೆ ಅಂತ್ಹೇಳಿ
ಸಿದ್ದಪ್ಪಾಜಿಯವರ ಬಳಿಗೆ ಎಲ್ಲಾ ಪ್ರಾಣಿಗಳೂವೆ ಬಂದುವಂತೆ
ಬಂದ ಬಂದ ಪ್ರಾಣಿಗಳನೆಲ್ಲಾನು ನೋಡಿಕೊಂಡು ಸಿ‌ದ್ದಪ್ಪಾಜಿ

ಅವರು ನಾಗುರಾವನೆ ನೋಡುತಾರೆ
ಗಸಾಗಸಾನೆ ಅಗಿಯುತಾರೆ || ಸಿದ್ಧಯ್ಯ ||

ಅವರು ಹೆಬ್ಬಿಯಾನ್ನ ನೋಡುತಾರೆ
ಕಚ್ಚಿ ಇಸವ ಹೀರುತಾರೆ || ಸಿದ್ಧಯ್ಯ ||

ಅವರು ಹಸುರಾವೆ ನೋಡುತಾರೆ
ಗೊಳಕ ಗೊಳಕನೆ ನುಂಗುತಾರೆ || ಸಿದ್ಧಯ್ಯ ||
ಅವರು ಮಣ್ಣ ಮಂಡಲ ನೋಡಿ
ಕಡೆ ದವಡೇಲಿ ಕಡದು
ಅವರು ಕಟ್ಟುನಾದ ನೋಡಿ
ಕಟುಮ ಕಟುಮನೆ ಕಡದು
ಅವರು ಹೆಜ್ಜೇನ ನೋಡವರೆ
ಗೊಳಕ ಗೊಳಕ್ನೇ ದೇವ
ನುಂಗ್ತಾರೆ ನನ್ನಪ್ಪ
ಅವರು ಕಡುಜನ ಮರಿಗಳ
ಗೊಳಕ್ಕಂತ ನುಂಗುತಾರೆ || ಸಿದ್ಧಯ್ಯ ||

ನಾಗರಾವು ಅಂದರೆ ಚೇಣಿ ಕಬ್ಬುನ ಜಲ್ಲೆ
ಹೆಬ್ಬೆಯಾವು ಅಂದರೆ ಗುರುದೇವ
ಕರೀ ಕಬ್ಬಿನ ಜಲ್ಲೆ
ಕರುಕಾರವಾಗಿ ಗಸಗಸನೆ ಅಗದು ರಸವನ್ನೆಕುಡಿದು
ಸಿಪ್ಪೇನೆಲ್ಲಲ ಭೂಮಿಗೆ ಉಗುದು ಸಿದ್ದಪ್ಪಾಝಿ
ಈಗಲೂ ಕೂಡ ನನಗೆ ಹುಚ್ಚುನೀಲಿ ಬರ್ಲಿಲ್ಲ ಬೆಪ್ಪುನೀಲಿ ಬರ್ಲಿಲ್ಲ

ಬೆರಗು ನೀಲಿ ಬರ್ನಿಲ್ಲವಲ್ಲ
ಮರ ಹತ್ತುವಂತ ನೀಲಿ
ನೀರಿಗೆ ಬೀಳುವಂತ ನೀಲಿ
ಕೆಂಡದ ಮೇಲೆ ನಿಂತುಕೊಂಡು
ಖಂಡುಗ ಧೂಪ ಕುಡೀವಂತ ನೀಲಿ ಬರ್ಲಿಲ್ಲ ಅಂತ್ಹೇಳಿ

ಅವರು ಎಕ್ಕದಾಲ ನೋಡುತಾರೆ
ಫಕ್ಕನೆ ಬಾಯಿ ಬಾಯಿ ಬಿಡುವುತಾರೆ || ಸಿದ್ಧಯ್ಯ ||

ಗುರುವೇ ಎಕ್ಕದಾಲ ನೋಡಿ
ಗುರುವೇ ಫಕ್ಕನೆ ಬಾಯಿ ಬುಟ್ಟು
ಅವರು ಕಳ್ಳಿಯಾಲ ಕುಡುದು
ಗಟಗಟನೆ ಕುಡುದು
ಗುರುವೇ ಮೂರುಖಂಡುಗ ಎಕ್ಕೆದಾಲು
ಮೂರು ಖಂಡುಗ ಕಳ್ಳಿಯಾಲು
ಅಯ್ಯಾ ಗಟಾಗಟನೆ ಗುರುವೇ
ಕುಡುದವರೇ ನನ್ನಪ್ಪ
ಅಂಗೂವೆ ದೇವಾ
ಹುಚ್ಚು ನೀಲಿ ನನಗೆ
ಬೆಪ್ಪು ನೀಲಿ ನನಗೆ
ಬರ್ಲಿಲ್ಲ ಎನುತೇಳಿ
ಅಯ್ಯಾ ಸುಣ್ಣದ ತಿಳಿ ಗುರುವೇ
ಮೂರು ಖಂಡುಗ ಕುಡಿದರಲ್ಲ || ಸಿದ್ಧಯ್ಯ ||

ಗುರುವೇ ಭಂಗಿಯ ಇಸಕ್ಕೆ
ಎಕ್ಕದಾಲಿನ ಇಸುಕ್ಕೆ
ಕಳ್ಳಯಾಲಿನ ಇಸುಕ್ಕೆ
ಸುಣ್ಣದ ತಿಳಿಯ ಇಸುಕ್ಕೆ
ಅಯ್ಯಾ ಹಾಲಿನ ಇಸುಕ್ಕೆ
ನೀಲಿ ಸಿದ್ದಪ್ಪಾಜಿ
ಅವರಿಗೆ ಹುಚ್ಚು ನೀಲಿ ಬಂದುಬುಡ್ತು
ಬೆಪ್ಪು ನೀಲಿ ಬಂದುಬುಡ್ತು
ಅಯ್ಯಾ ಬೆರಗು ನೀಲಿ ಬಂದುಬುಡ್ತು
ಅಯ್ಯಾ ಕಲ್ಲು ಕಡಿವ ನೀಲಿ
ಮಣ್ಣು ಮುಕ್ಕುವ ನೀಲಿ
ಹಲ್ಲು ಮಸೆವ ನೀಲಿ
ನೊದಲೆ ಬೀಳುವ ನೀಲಿ
ನೀರಿಗೆ ಬೀಳುವ ನೀಲಿ
ಮರ ಹತ್ತುವ ನೀಲಿ
ಗುರುವೇ ಕೆಂಡದ ಮೇಲೆ ನಿಂತುಕೊಂಡು
ಖಂಡದ ಧೂಪ ಕುಡಿವಾ
ನೀಳಿ ಬಂದುಬುಡ್ತು
ಹಾಗಂದು ನನ್ನ ಗುರುವು
ನೀಲಿ ಸಿದ್ದಪ್ಪಾಜಿ
ಅವರು ಭಂಗಿ ಕುಡಿದ ಗ್ಯಾನದಲ್ಲಿ
ಹಲಗೂರ ನೋಡುತಾರೆ || ಸಿದ್ಧಯ್ಯ ||

ನೋಡಪ್ಪ ಭಂಗೀ ಕುಡುವುದಕ್ಕೆ ಮೊದಲೇ
ಹಲಗೂರು ಪಂಚಾಳಗೇರಿಯ ನೋಡುವಾಗ
ಸಿದ್ದಪ್ಪಾಜಿಯವರ ಕಣ್ಣೀಗೆ ಏನೂ ಕಾಣಿಸ್ಲಿಲ್ಲ
ಆಗಲೀಗ ಆಕಾಶಕ್ಕೆ ಹೊಗೆ ಹೊಯ್ತಿತ್ತು
ಹಕ್ಕಿ ಪಕ್ಷಿಗಳೆಲ್ಲ ಸುಟ್ಟು ಸುಟ್ಟು ಭೂಮಿಗೆ ಬೀಳ್ತಿದ್ದೋ
ಯಾವಾಗ ಭಂಗಿಸೇವನೆ ಮಾಡ್ಕೊಂಡು

ಹಲಗೂರು ಪಂಚಾಳಗೇರಿ
ಕಣ್ಣಾರ ನೋಡುವಾಗ ಸಿದ್ದಪ್ಪಾಜಿಯವರು

ಅಯ್ಯ ಏಳೇಳು ಹದುನಾಕ್ಕೂ ಬೀದಿ
ತಳತಳನೆ ಹೊಳ್ದವಂತೆ || ಸಿದ್ಧಯ್ಯ ||

ಗುರುವೇ ಹಲಗೂರು ಏಳು ಬೀದಿ
ಗುರುವೇ ತಿಲಪುರ ಏಳು ಬೀದಿ
ಏಳೇಳು ದೇವ
ಹದಿನಾಕ್ಕು ಬೀದಿ
ಸಿದ್ದಪ್ಪಾಜಿಯವರ ಕಣ್ಣೀಗೆ
ಗುರುವೆ ತಳ್ತಳನೇ ಹೊಳಿವಾಗ
ಅಯ್ಯ ಬೆಟ್ಟಚಾರಿ ಮನೆಯ ಮೇಲೆ
ಬೆಳ್ಳಿ ಒಳಗೆ ಏಳು ಕಳಸ || ಸಿದ್ಧಯ್ಯ ||

ಗುರುವೇ ವಜ್ರಚಾರಿ ಮನೆಯ ಮೇಲೆ
ವಜ್ರುದಲ್ಲಿ ಏಳು ಕಳಸ || ಸಿದ್ಧಯ್ಯ ||

ಅಯ್ಯಾ ಚಿನ್ನಚಾರಿ ಮನೆಯ ಮೇಲೆ
ಚಿನ್ನಾದೊಳಗೆ ಏಳು ಕಳಸ || ಸಿದ್ಧಯ್ಯ ||

ಅಪ್ಪ ಮುತ್ತಾಚಾರಿ ಮನೆಯ ಮೇಲೆ
ಮುತ್ತಿನೊಳಗೆ ಏಳು ಕಳಸ || ಸಿದ್ಧಯ್ಯ ||

ಏಳು ಜನ ದೊರ್ಗಳಾ
ಮನೆ ಮ್ಯಾಲಿಂದ ಚಿನ್ನ ಬೆರಳಿ ಮುತ್ತು ರತ್ನ ಬಂಗಾರದ ಕಳಸಗಳು
ಸಿದ್ಧಪ್ಪಾಜಿಯವರ ಕಣ್ಣೀಗೆ ತಳ್ತಳನೇ ಹೊಳಿವಾಗ
ಹಲಗೂರು ಪಂಚಾಳಗೇರಿ
ಕಣ್ಣಾರ ನೋಡ್ಕಂಡು
ಈ ಕಳಸಗಳಿರ್ತಕಂತ ಊರೆ
ಹಲಗೂರು ಪಂಚಾಳಗೇರಿ ಅಂತ ಹೇಳಿ ಸಿದ್ದಪ್ಪಾಜಿ
ರಾಜಬೊಪ್ಪಗೌಡ್ನ ಪುರಕ್ಕೆ ಕೈಯೆತ್ತಿ ಮುಗುದು
ಧರೆಗೆ ದೊಡ್ಡಯ್ಯ
ಆಗಲೀಗ ಈ ಊರಿಗೆ ನನ್ನ ಕಳುಗುದಿಯಲ್ಲಪ್ಪಾ
ಈಗ ಅಂತ ಪಟ್ಟಣ್ಕೆ ದೇವ
ಯಾವು ರೀತಿ ನಾನು ಹೋಗಬೇಕು
ನನ್ನ ಜಾತಿಯವರ ಬಳೀಲಿ ನಿಂತ್ಕಂಡು
ಯಾವು ರೀತಿ ನಾನು ಭಿಕ್ಸ ಕೇಳಬೇಕು ಎನತೇಳಿ

ಹಲಗೂರ ನೋಡಕ್ಕಂಡು
ಬಾಳ ಭಯ ಪಟ್ಟಾರಲ್ಲ || ಸಿದ್ಧಯ್ಯ ||

ಗುರುವೇ ಹಲಗೂರ ನೆನಕಂಡು
ನೀಲಿ ಸಿದ್ದಪ್ಪಾಜಿ
ಧರೆಗೆ ದೊಡ್ಡವರಿಗೆ
ಕೈಯೆತ್ತಿ ಮುಗಿವಾಗ
ಕೈಮುಗಿದ ಮಗನ
ಕಣ್ಣಾರ ದೇವ
ನೋಡ್ಬುಟ್ಟು ನನ್ನಪ್ಪ
ಅವರು ಏನು ಮಾತೊಂದಾಡುತಾರೆ
ಹೆತ್ತಯ್ಯ ಮಂಟೇದಸ್ವಾಂಇ || ಸಿದ್ಧಯ್ಯ ||

ಕುಂದೂರು ಬೆಟ್ಟದ ಮೇಲೆs
ಹಲಗೂರು ನೋಡುಬುಟ್ಟು
ಸಿದ್ದಪ್ಪಾಜಿಯವರು ಬಾಳ ಭಯ ಪಟ್ಕಂಡು ನಿಂತಿರುವಾಗ
ಧರೆಗೆ ದೊಡ್ಡವರು ಮಂಟೇದಸ್ವಾಮಿ
ತೋಪಿನ ದೊಡ್ಡಮ್ಮನ ಕರೆದು
ದೊಡ್ಡಮ್ಮ
ನನ್ನ ಮಗನು ಸಿದ್ದಪ್ಪಾಜಿ
ಈಗ ಭಂಗಿ ಸೇವನೆ ಮಾಡ್ಕಂಡು
ಹಲಗೂರು ನೋಡುಬುಟ್ಟು
ಹಲಗೂರು ನೋಡುಬುಟ್ಟು ಭಯ ಪಟ್ಟಬುಟ್ಟು
ನಿಂತವನೇ ದೊಡ್ಡಮ್ಮ
ನನ್ನ ಮಗ ಮುಂದಕ್ಕೆ ಪಾದ ಬೆಳೆಸಿ
ಪಯಣ ಮಾಡಬೇಕಾದರೇ

ನನ್ನ ನಿಸಾನಿ ದಳವ ನೀ
ಆಕಾಸಕ್ಕೆ ಏರಿಸು ಮಗಳೇ || ಸಿದ್ಧಯ್ಯ ||

ನನ್ನ ತೋಪುನು ದೊಡ್ಡಮ್ಮ
ಧರೆಗೆ ದೊಡ್ಡೋರ ಮಾತ
ಕೇಳ್ಕಂಡು ನನ್ನ ತಾಯಿ
ಅವಳು ದಾಳವ ತಗದಳಂತೆ
ಆಕಾಶಕ್ಕೆ ಬಿಟ್ಟಾಳಲ್ಲ || ಸಿದ್ಧಯ್ಯ ||

ನಿಸಾನಿ ದಳ ನೋಡುದ್ರು ಸಿದ್ದಪ್ಪಾಜಿ
ಈಗ ನಾನು ಇಲ್ಲಿ ಕೈಯೆತ್ತಿ ಮುಗ್ದಂದ ವಾರ್ತಿ
ಜಗತ್ತು ಗುರುಗೂಳಿಗೆ ಗೊತ್ತಾಗುಬುಡ್ತು
ಆಕಾಶ್ದಲ್ಲಿ ದಾಳ ಕಾಣ್ತದೆ ಏನತೇಳಿ
ನೀಲಿ ಸಿದ್ದಪ್ಪಾಜಿಯವರು
ದಾಳಕ್ಕೂ ಕೂಡ ಕೈಯೆತ್ತಿ ಮುಗ್ದುಬುಟ್ಟು ಗುರುದೇವ
ಈ ಹಲಗೂರು ಪಂಚಾಳಗೇರಿಗೆ ನಾ ಹೋಗುಬುಟ್ಟು
ಆ ದೊರ್ಗೆಳು ಬಳಿಗೋಗುಬುಟ್ಟು ಭಿಕ್ಸ ಕೇಳಕಾಗುವುದಿಲ್ಲ
ಈಗಲೀಗ ಏಳು ಮಂದಿ ರಾಜುರು ಬಳಿಗೋಗಿ
ನಾನು ಧರ್ಮ ಅಂತ ಕೇಳೋದುಕ್ಕೆ ಶಕ್ತಿ ಬರೋದಿಲ್ಲ

ಈಗ ಇಲ್ಲೊಂದು ಯಾಸ
ನಾನು ತಾಳಬೇಕು ಎಂದಾರಲ್ಲ || ಸಿದ್ಧಯ್ಯ ||

ಈಗ ಇಲ್ಲೆ ಒಂದು ಯಾಸ ತಾಳಕಂಡು
ಈಗ ನಾನು ಹಲಗೂರು ಪಂಚಾಳಗೇರಿಗೆ ಹೋಗಬೇಕಲ್ಲ
ಯಾಸಯಾಸಕ್ಕೆಲ್ಲ ಯಾವ ಯಾಸ ತಾಳಬೇಕು ಅಂತೇಳಿ ಸಿದ್ಪಪ್ಪಾಜಿ

ಈ ಹಲಗೂರು ಪಂಚಾಳಗೇರಿ ದೊರ್ಗೆಳು
ಏಳು ಜನ ದೊರೆಗೊಳ್ಗೆ
ಏಳು ಜನ ಮಡ್ದಿರವರೇ
ಅವರೇ ದೊರೇಸಾಣಗಿತ್ತೀರು
ಏಳು ಜನ ದೊರೆಸಾಣಗಿತ್ತಿರುಗೆ ದೇವಾ
ಅವರವರ ಗಂಡಿದಿರು ಗುರುವು
ಮುತ್ತು ರತ್ನದ ವಡಬೆ ಮಾಡಿ
ಅವರವರ ಮಡ್ದಿರ್ಗೆ ಮುಂಗೈಗಳಟ್ಟು ತೊಡ್ಸವರೇ
ಅವರು ತೋರ್ಸಿರುವಂತ ಮುತ್ತು
ರತ್ನುದು ಬಳಿ ಯಾತ್ಕು ಸಲ್ಲದ ಬಳೆಯಲ್ಲ
ಅವರ ಗಂಡ್ದೀರು ಸತ್ತೂದ ಕಾಲ್ದಲ್ಲ
ಅವರ ಗಂಡ್ದೀರು ಎದೆಮೇಲೆ
ತಕ್ಕಡೊಗಿ ಬಳೆ ಒಡೆದರೇ ನರ್ಕೋಗಕ್ಕಿಲ್ಲ
ತಗ್ಗೋತ್ತವೆ
ತಗ್ಗೋದ ಬಳೆ ತಕ್ಕಂಡೋಗಿ
ಜಾಯಿಕಾಯಿ ಪಟ್ಟಿ ಒಳಗೆ ಬಚ್ಚಿಟ್ಟು ಮಡಿಕತ್ತರೆ
ಈಗಲೀಗ ಮುತ್ತು ರತ್ನುದ ಬಳೆ ತಗ್ಗುಸಬೇಕು

ನಾನು ಮುತ್ತೈದೆ ಸ್ಥಾನದ ಬಳೆಯ
ಮಾಡಬೇಕು ಎಂದಾರಲ್ಲ || ಸಿದ್ಧಯ್ಯ ||
ನಾನು ಮುತ್ತೈದೆ ಕೈಗೆ
ಲಕ್ಷಣವಾದ ಗುರುವೆ
ನಾ ಬಳೆಯಾನೆ ಮಾಡ್ಕಂಡು
ಈಗ ಬಳಗಾರನ ಯಾಸ
ನಾನೇ ತಾಳಕ್ಕಂಡು
ಈಗ ಹಲಗೂರಿಗೆ ದೇವ
ನಾ ಹೋಗಬೇಕು ಎಂದಾರಲ್ಲ || ಸಿದ್ಧಯ್ಯ ||

ಹಲಗೂರಿಗೆ ದೇವಾs
ಈಗ ಬಳಗಾರನ ಯಾಸ ತಾಳ್ಕಂಡು
ಹಲಗೂರಿಗೆ ವಂಟೋಗುಬುಟ್ಟು
ಏಳು ಜನ ದೊರ್ಗಳು ಮಡ್ದೀರಿಗೆ
ಈಗಲೀಗ ಮುಂಗೈಗೆ ಬಳೆ ತೊಟ್ಟು ಬುಟ್ಟು
ಬಳೆ ದುಡ್ಡು ಕೊಡಬ್ಯಾಡಿ ಕಂಡ್ರವ್ವ
ನಮಗೆ ಗುರುವೆ ಏಳು ದುಡ್ಡಿನ ಕಬ್ಬುಣ ಬೇಕು
ಏಳು ದುಡ್ಡುನ ಉಡುಗಬಣ ಕೊಡ್ರವ್ವ
ಅಂತೇಳುಬುಟ್ಟುರೇ
ಬಳೆ ಬದಲಾಗಿ ಬಳೇಗಾರ ಕಬ್ಬಿಣ ಕೇಳ್ತಾವನೆ ಅನ್ತೇಳಿ
ಏಳು ದುಡ್ಡಿನ ಕಬ್ಬಿಣ ತಕ್ಕಂಡೋಗಿ
ಧರೆಗೆ ದೊಡ್ಡವರ್ಗೆ ಒಪ್ಪುಸುಬುಟ್ಟು
ನನ್ನ ಪ್ರಾಣ ಉಳಿಸ್ಕಬೇಕು ಅಂತೇಳಿ
ಈಗ ಬಳೆಗಾರನಾಗಿ ನಾನು ಹಲಗೂರಗೆ
ಹೋಗಬೇಕು ಅಂದುಬಿಟ್ಟು ಸಿದ್ದಪ್ಪಾಜಿ

ಅವರು ನೂರೊಂದು ಹಾವು ಚವುಳ
ಓಡಾಡಿ ಹಿಡಿದರಲ್ಲ || ಸಿದ್ಧಯ್ಯ ||

ಅವರು ನಾಗುರಾವು ಹಿಡ್ದರಂತೆ
ನಾಗ್ರು ಬಳೆಯ ಮಾಡುತಾರೆ || ಸಿದ್ಧಯ್ಯ ||

ಗುರುವೆ ನಾಗುರಾವ ಹಿಡ್ದು
ನಾಗ್ರು ಬಳೆಯ ಮಾಡಿ
ಹಸುರಾವ ಹಿಡ್ದು
ಹಸ್ರು ಬಳೆಯ ಮಾಡಿ
ಅವರು ಕಟ್ಟುನಾವ ಹಿಡ್ದು
ಹರಳು ಬಳೆಯ ಮಾಡಿ
ಅವರು ಹೆಬ್ಬೆಯಾವ ಹಿಡ್ದರಲ್ಲ
ರಬರ್ ಬಳೆಯ ಮಾಡುತಾರೆ || ಸಿದ್ಧಯ್ಯ ||

ಅವರು ಕ್ಯಾರೆಯಾವ ಹಿಡ್ದರಂತೆ
ಗಾಜುನ ಬಳೆ ಮಾಡುತಾರೆ || ಸಿದ್ಧಯ್ಯ ||

ಗುರುವೆ ಕ್ಯಾರೆ ಹಾವ ಹಿಡ್ದು ಗುರುವೆ
ಗಾಜುನ ಬಳೆಯ ಮಾಡಿ
ಗುರುವೆ ಯಮ್ಗ ಚವಳ ಹಿಡ್ದು
ಕೊಂಡಿ ಬಳೆಯ ಮಾಡಿ
ಅವರು ಆಗಲೀಗ ಗುರುವು
ಸಿದ್ದಪ್ಪಾಜಿಯವರು
ಅವರು ಕಡ್ಜನಮರಿ ಕರ್ದರಂತೆ
ಕಲ್ಲಿ ಪಿಲಿಯ್ಲ ಬಳೆಯ ಮಾಡಿ || ಸಿದ್ಧಯ್ಯ ||

ಅಯ್ಯಾ ಕಡುಜನ ಮರಿಗಳಲ್ಲಿ
ಕಲ್ಲಿ ಪಿಲ್ಲಿಬಳೆಯ
ಮಾಡ್ಕಂಡು ನನ್ನಪ್ಪ
ಗುರುವೆ ಬಾಳೆದಿಂಡ ತಗದು
ಬಳೆ ದಿಂಡಾ ಮಾಡಿ
ಅಯ್ಯ ನೊರೊಂದು ಬಳಗಳಾ
ಬಾಳೆ ದಿಂಡಿಗೆ ದೇವ
ಹಾಕಂಡು ನನ್ನಪ್ಪ
ಗುರುವೆ ಹುಲಿಯ ಚರ್ಮ ತಗದು
ಕಚ್ಚೆಯ ಹಾಕವ್ರೆ
ಹುಲ್ಲೆ ಚರುಮ ತಗದು
ಕೋಟನ್ನೆ ಮಾಡವರೇ
ಅಯ್ಯ ಎಪ್ಪತ್ತು ಮೂರುದ್ದ ಜಡೆಯ
ಟೋಪಿ ಮಾಡವರೆ
ಅವರು ಉತ್ತರ ಜೋಳಗೆ ತಗದರಂತೆ
ಬಳೆಮಲ್ಲಾರ ಮಾಡಿಕೊಂಡ್ರು || ಸಿದ್ಧಯ್ಯ ||

ಗುರುವೆ ಮುತ್ತುನ ಜೋಳಿಗೆ ತಗದು
ಬಳೆಮಲ್ಲಾರು ದೇವ
ಮಾಡ್ಕಂಡು ನನ್ನಪ್ಪ
ಗುರುವೆ ಮುರುಳಿನ ಪವಾಡ ತಗದು
ಗಿರಕಿ ಚಡಾವ
ಮಾಡ್ಕಂಡು ನನ್ನ ಗುರುವು
ಅವರು ಬೆರಳಿಯ ಬೆತ್ತ ತಗದು
ಛತ್ರಿಯ ಮಾಡ್ಕಂಡು
ಅವರು ಬಳೆಗಾರನ ಯಾಸ ದೇವ
ಬೇಗದಲ್ಲಿ ತಾಳಿಕಂಡು|| ಸಿದ್ಧಯ್ಯ ||

ಬಳೆಗಾರನ ಯಾಸ
ತಾನಾಗಿ ತಾಳಕಂಡು ಗುರುವು
ನೀಲಿಗಾರರ ಗಂಡ ನೀಲಿ ಸಿದ್ದಪ್ಪಾಜಿ
ಎಲೆ ಕುಂದೂರು ಬೆಟ್ಟದ ಮೇಲೆ ನಿಂತ್ಗಂಡು
ಕಿಡುಗಣ್ಣ ರಾಚಪ್ಪಾಜಿ
ತೊಪ್ಪಿನ ದೊಡ್ಡಮ್ಮ
ನನ್ನ ಪಡ್ದಂತ ಜಗತ್ತು ಗುರು ಧರೆಗೆ ದೊಡ್ಡಯ್ಯ
ಈಗ ಹಲಗೂರಿಗೆ ಹೋಯ್ತೀನಿ ಗುರುವೆ
ಹಲಗೂರಿಗೆ ಹೋಯ್ತೀನಿ ಎನತೇಳಿ ಸಿದ್ದಪ್ಪಾಜಿ
ಹಲಗೂರು ಪಂಚಾಳಗೇರಿ ಕಣ್ಣಿಂದ ನೋಡ್ತ
ಬಳೆ ಮಲ್ಲಾರ ಹೆಗೆಲ ಮೇಲೆ ಒತ್ತಗಂಡು
ಇಪ್ಪತ್ತು ನಾಲ್ಕು ಕಂಡ್ಗ ಭಂಗಿ ಸೊಪ್ಪುನ
ಹೊಗೆಯ ಹೊಟ್ಟೆಲಿ ತುಂಬ್ಕಂಡಿದ್ದುರು ಗುರುವು

ಹಲಗೂರು ಪಂಚಾಳ ಗೇರ್ಗೆ
ಉಫ್ ಅಂತ ಉರಬುದುರಂತೆ || ಸಿದ್ಧಯ್ಯ ||

ಗುರುವೆ ಹಲಗೂರಿಗೆ ಗುರುವು
ಭಂಗಿ ಸೇದ್ದ ಹೊಗೆಯ
ಉರುಬವರೆ ನನ್ನಪ್ಪ
ಈ ಭಂಗಿ ಹೊಗೆಯ ತಗದು
ಹಲಗೂರಿಗೆ ದೇವ
ಬಿಟ್ಟಕಾಲ್ದ ಒಳಗೆ
ಗುರುವೆ ಹಲಗೂರು ಪಂಚಾಳಗೇರಿ
ಕತ್ತಲೆ ಕವಿದೋಗಿತ್ತಲ್ಲ || ಸಿದ್ಧಯ್ಯ ||