ಹಲಗೂರು ಪಂಚಾಳ ಗೇರಿಯೆಲ್ಲ ದೇವ
ಕತ್ತಲೆ ಗವದೋಯ್ತು ಸೂರ್ಯನ ಬೆಳಕು
ಇಲ್ದಂಗೆ ಆಗೋಯ್ತು
ಊರೆ ಮಂಜು ಕವುದಂಗೆ ಕವುದೋಯ್ತು
ಆಗ ಹಲಗೂರು ಪಂಚಾಳದ ದೊರೆಗಳೂ
ಏನರಣ್ಣ ಯಾವ ದಿಕ್ಕಿನ ಹೊಗೆಯೋ ಕಾಣೆ
ಇವತ್ತು ನಮ್ಮ ಊರುಗೆ ಬಂದುಬಿಡ್ತು
ಸೂರ್ಯನ ಬೆಳಕೆ ಇಲ್ದಂಗೆ ಆಗುಬಿಡ್ತಲ್ಲ
ಇದು ಯಾವ ಹೊಗೆಯೋ ಗೊತ್ತಿಲ್ಲ ಗೊತ್ತಿಲ್ಲ ಅಂತೇಳಿ
ಏಳು ಮಂದಿ ದೊರೆಗಳೂ
ಅವರೇ ಪಾಳ್ಳಾಗಾರ್ರು‍ ಗ್ರಾಮ
ಮುತ್ತು ರವರತ್ನ ರಾಶಿರಾಶಿ ಹಾಕ್ಕಂಡು
ತೆನೆ ಇಂಬಿ ಹಣ್ಣಾ ತಗದು ಮೀಸೆ ಮೇಲೆ ಮಡಿಕಂಡು
ಯಕ್ಕೆ ಪರೇಲು ಇಸ್ಫೀಟು ಅಡ್ತ ಕೂತ್ತಿದ್ರು
ಆಗಲೀಗ ದೊರೆಗಳು ಮನೆ ಒಳಗೆ
ಇಸ್ಪೀಟು ಆಡ್ತ ಕೂತಿರುವಾಗ
ಸಿದ್ದಪ್ಪಾಜಿಯವರು ಕಣ್ಣಾರ ನೋಡು ಬುಟ್ಟು

ಅಯ್ಯೋ ಬತ್ತಿನಿ ಬತ್ತಿನಿ ಕಣ್ರೋ
ಬ್ರಹ್ಮಾ ವಂಶಾದೊರೇ || ಸಿದ್ಧಯ್ಯ ||

ಗುರುವೆ ಬತ್ತಿನಿ ಕನ್ರಣ್ಣ
ಬತ್ತಿನಿ ಕನ್ರಪ್ಪ
ಬತ್ತೀನಿ ಕನ್ರಯ್ಯ
ಬದುಕುದ್ರು ನನ್ನ ಜಾತಿಯವರು
ನನ್ನಿಂದ ಬದಿಕಳಿ
ಅಯ್ಯ ಕೆಟ್ರುವೆ ನನ್ನ ಜಾತಿಯವರು
ನನ್ನಿಂದ ಕೆಟ್ಟೋಗಿ
ಅಯ್ಯಾ ಬತ್ತಿನಿ ಕನ್ರೋ ನಮ್ಮ
ಬ್ರಹ್ಮ ವಂಸಾದೋರೆ || ಸಿದ್ಧಯ್ಯ ||

ಗುರುವೆ ಬತ್ತಿನಿ ಕನ್ರಣ್ಣ
ಹಾಗಂದು ನನ್ನ ಗುರುವು
ನೀಲಿ ಸಿದ್ದಪ್ಪಾಜಿ
ಗುರುವೆ ಬಳೆ ಮಲಾರ ದೇವ
ಹೆಗಲ ಮೇಲೆ ಹೊತ್ತಗಂಡು
ಅಯ್ಯಾ ಹಲಗೂರ ನೆನಕ್ಕಂಡು
ಈಗ ಏಳು ಜನ ಗುರುವು
ದೊರುಗೊಳ ಮಡ್ಡಿರಿಗೆ

ಅಪ್ಪ ಒಬ್ಬೊಬ್ಬರ ಕೈಯಿಗೆ ನಾ
ಎರಡೆರಡು ಡಜೇನು ತೊಡಲೇಬೇಕು|| ಸಿದ್ಧಯ್ಯ ||

ಈಗ ಏಳುಜನ ದೊರೆಗೊಳು ಮಡ್ದಿರ ಕೈಗೆ ದೇವ
ಒಂದು ಕೈಗೆ ಎರಡೆರಡು ಡಜೇನು ಬಳೆ ತೊಡಬೇಕು
ಈಗಲೀಗ ನಾನು ಬಳೆ ತೊಟ್ಟಬುಟ್ಟೂ
ಮನೆ ಬುಟ್ಟೂ ಹೊರಗೋದ ಮೇಲೆ
ನನ್ನ ಗುರು ಕೊಟ್ಟಿರು ಶಾಪ ಇಡಬೇಕು
ಎನತೇಳಿ ಸಿದ್ದಪ್ಪಾಜಿಯವರು
ಏಳು ಜನ ದೊರೆಗೊಳು ಮಡ್ದೀರ ಗ್ಯಾನಮಾಡ್ತ

ಈಗ ಕರಿಯ ಮೊಕದೊಳಿಗೆ ನಾನು
ಕಡ್ಜನು ಬಳೆಯ ತೊಡಲೇಬೇಕು|| ಸಿದ್ಧಯ್ಯ ||

ಈ ಕೆಂಪಿನ ಮೊಕದೊಳಿಗೆ ನಾನು
ಹೆಜ್ಜೇನು ಬಳೆಯ ತೊಡಲೇಬೇಕು || ಸಿದ್ಧಯ್ಯ ||

ಅಯ್ಯಾ ಕೆಂಪಚಾರಿ ಗುರುವು
ಅಯ್ಯಾ ಹೆಸರನ್ನೆ ಬಿಟ್ಟು ಬುಟ್ಟೂ
ಸಿದ್ದಪ್ಪಾಜಿಯಾಗಿ ಅವರು
ಬರುವಾಗ ನನ್ನ ಗುರುವು
ಈಗ ಪಂಚಾಳಗೇರಿ ಒಳಗೆ
ಗುರುವೆ ಗುರುದೇವ
ದೊರೆಗೊಳ ಮಡ್ದಿರ್ಗೆ ನಾನು
ಬಳೆಯ ತೊಡಬೇಕು
ಹಾಗಂದು ನನ್ನ ಗುರುವು
ಈ ಏಳು ಜನ ಮಡ್ದಿರಿಗೆ ನಾನು
ತಕ್ಕಾದು ಬಳೆಯ ತೊಡಲೇಬೇಕು || ಸಿದ್ಧಯ್ಯ ||

ಇವರು ಏಳು ಜನ ದೊರೆಗೊಳು ಮಡ್ದಿರಿಗೆ ದೇವಾs
ತಕ್ಕ ತಕ್ಕಂತ ಬಳೆ ತೊಡಬೇಕು ಎನತೇಳಿ
ಬಳಗಾರನಾಗಿ ಗುರುವು
ಸಿದ್ದಪ್ಪಾಜಿಯವರು ಬರುವಾಗ
ಈಗಲೀಗ ದೊರೆಗೊಳು ಮಡ್ದಿರ್ಗೆಲ್ಲ
ನಾನು ಬಳೆ ತೊಟ್ಟು ಬುಟ್ಟೂ ಹೊರಗೆ ಬರವಾಗ

ನಾನು ತೊಟ್ಟಿರೊ ಬಳೆಗಳೆಲ್ಲ
ಹಾವು ಚವುಳೂ ಆಗಬೇಕು || ಸಿದ್ಧಯ್ಯ ||

ನಾನು ತೊಟ್ಟಿರುವಂತ
ಬಳೆಗಳೂ ನನ್ನ ಗುರುವೆ
ಹಾವು ಚವುಳು ಗುರುವು
ಆಗಬೇಕು ನನ್ನ ಗುರುವು
ಗುರುವೆ ಕಡ್ಜನ ಬಳೆಗಳೆಲ್ಲ
ಕಡ್ಜ ಆಗಬೇಕು
ಅಯ್ಯಾ ಜೇನಿನ ಬಳೆಗಳೆಲ್ಲ
ಹೆಜ್ಜೇನು ಆಗಬೇಕು
ಅವರು ಸೀರೆ ಒಳಗೆ ಸೇರಿಕ್ಕಂಡು
ಚುರ್ಕ ಚುರ್ಕ ಕಡಿಯಬೇಕು || ಸಿದ್ಧಯ್ಯ ||

ಅವರು ಸಂದಿಗೋದ್ರು ಬುಡಬಾರ್ದು
ಗುಂದಿಗೋದ್ರು ಬುಡಲೇಬಾರ್ದು || ಸಿದ್ಧಯ್ಯ ||

ಸಂದಿಗೋದ್ರು ಬುಡಬಾರ್ದು
ಅವರು ಗುಂದಿಗೋದ್ರು ಬುಡಲೇಬಾರ್ದು
ಮೂಲೆಗೆ ಹೊಕ್ಕದ್ರು ಬುಡಬಾರ್ದು
ಏನತೇಳಿ ಸಿದ್ದಪ್ಪಾಜಿಯವರು ಯೋಚನೆಮಾಡ್ತ
ಹಲಗೂರು ಪಂಚಾಳಗೇರಿಗೆ ಬರುತ್ತಿದ್ರು
ಹಲಗೂರು ಪಂಚಾಳಗೇರಿಗೆ ಬರುವಾಗ
ನೀಲಗಾರ ಗಂಡಾ ನೀಲಿ ಸಿದ್ದಪ್ಪಾಜಿ
ಪಂಚಾಳಗೇರಿಗೆ ತಾನಾಗಿ ಬರುಕಾಲ್ದಲ್ಲ ಗುರುವು
ಹಲಗೂರು ದೊರೆಗೊಳು
ಬಾಗಬಾಗಲಲ್ಲಿ ಏನು ಕವಲು ಮಡ್ಗವರೇ ಅಂದರೇ

ಅಯ್ಯಾ ಮೂಡಲಂಕಣದ ಒಳಗೆ
ಮೂಡು ಮಾರಿ ಕವಲು
ತೆಂಕಣಂಕದ ಒಳಗೆ
ತೆಂಕ ಮಾರಿ ಕವಲು
ಗುರುವೆ ಪಡುವಲಂಕಣದ ಒಳಗೆ
ಪಡುವ ಕಾಳಿ ಕವಲು
ಅಯ್ಯಾ ಬಡಲಂಕಣದ ಒಳಗೆ
ಮುಂಡೇ ಮಾರಿ ಕವಲು
ಗುರುವೆ ಊರು ಮಧ್ಯದ ಒಳಗೆ
ಕಾಳಿಕ ದೇವತೆ ಕವಲು ಗುರುವು || ಸಿದ್ಧಯ್ಯ ||

ಗುರುವೆ ನಡು ಊರಿನ ಒಳಗೆ
ಕಾಳಿಕ ದೇವತಿ ದೇವ
ಮಡಗವರೇ ನನ್ನ ಗುರುವು
ಹಲಗೂರು ದೊರೆಗೊಳು
ಅಯ್ಯಾ ಸಿದ್ದಪ್ಪಾಜಿಯವರು
ಬರುವಂತ ಕಾಲದಲ್ಲಿ
ಅಯ್ಯಾ ಮೂಗು ಮಾರಮ್ಮ
ಅವಳ್ಗೆ ಮಾತೆ ಬರುವುದಿಲ್ಲ
ಅವಳು ಸಿದ್ದಪ್ಪಾಜಿ ನೋಡುತ್ತಾಳೆ
ಕತ್ತಂತಿ ಬರುವುತಾಳೆ || ಸಿದ್ಧಯ್ಯ ||

ಸಿದ್ದಪ್ಪಾಜಿ ನೋಡುಬುಟ್ಟು
ಕತ್ತೆಂತ್ತುಗಂಡುs
ಇವನು ಯಾರೊ ಗೊತ್ತಿಲ್ವವಲ್ಲ
ಇವನು ಎಂತೋ ಗೊತ್ತಿಲ್ಲವಲ್ಲ
ಇವನು ಯಾರಾಗಿರಬಹುದು
ಇವನಿನ್ನೂ ಎಳೆ ಹುಡುಗ
ಇನ್ನು ಬಲತಿಲ್ಲ
ನನ್ನ ಕಣ್ಣಿಗೆ ಇವನು
ಯಂಗೆಗೋ ಕಾಣತಾನೆ || ಸಿದ್ಧಯ್ಯ ||

ಅಯ್ಯಾ ನನ್ನ ಕಣ್ಣಿಗೆ ಇವನು
ಯಂಗೆಂಗೋ ಕಾಣುತಾನೆ
ನನಗೆ ಒಳ್ಳೆ ಊಟ ಸಿಕ್ಕದೆ
ಒಳ್ಳೆ ಆಹಾರ ಸಿಕ್ಕದೆ
ಇವನ ನೋಡುದಾರೆ ನನಗೆ
ಆಸೆ ಆಗುತಾದೆ
ಇವನ ಒಂದೆ ಸಾರಿ ನಾನು
ಗೊಳಕ್ನೆ ನುಂಗಬಾರ್ದು
ಇವನ ಕಿತ್ತೂಗಂಡು ಕಿತ್ತುಗಂಡು
ಇಸ್ಸುಗಂಡು ತಿನ್ನಬೇಕು|| ಸಿದ್ಧಯ್ಯ ||

ಇವನ ಒಂದು ಸಾಲ ನಾನು
ತಿಂದು ಬುಟ್ರೇ ನನ್ನ ಗುರುವೆ
ನನಗಾಸೆ ತಪ್ಪೂದಿಲ್ಲ
ಇಂತ ಮನುಷ್ಯ ಸಿಕ್ಕೋದಿಲ್ಲ
ನನ್ನ ಬವಕೆಗೆ ತಕ್ಕಂತೆ
ಹುಡುಗ ಬರುತಾವನೆ
ನನ್ನ ಬವಕು ತಿರ್ಸಕ್ಕಬೇಕು
ಇವನ ಬಾಳೆ ಹಣ್ಣು ಎಡುದಂಗೆ
ಎಡಾಕಂಡು ತಿನ್ನಬೇಕು || ಸಿದ್ಧಯ್ಯ ||

ಇವನ ಬಳೆಮಲ್ಲಾರ ನರ್ಕುದಂಗೆ
ನರಿಕ್ಕಂಡು ತಿನ್ನಬೇಕು || ಸಿದ್ಧಯ್ಯ ||

ಇವನ ತಾಯಿ ಕೆಚ್ಚುದಂಗೆ
ನಾನು ಕೆಚ್ಚುಗಂಡು ತಿನ್ನಬೇಕು || ಸಿದ್ಧಯ್ಯ ||

ನನ್ನಾಸೆ ಭಾಷೆ ತಿರ್ಸಕ್ಕಬೇಕಾದರೇ
ಇವನ ಒಂದೇ ಸತಿ ನುಂಕಳಕಾಗದಿಲ್ಲ
ನನ್ನ ಬಾವಕ್ಕೆಗೆ ತಕ್ಕಂತೆ
ಮಗ ಬಂದು ಬುಡ್ತವನೆ
ಇವನ ವಸೀಕಂಡು ತಿಂದುಬುಡಬೇಕು
ಎನ್ನುತೇಳಿ ಮಾರಮ್ಮ
ಸಿದ್ದಪ್ಪಾಜಿಯವರ ಕತ್ತಂತ್ತಿ ನೋಡುದ್ರು
ನೋಡುವಂತ ಮಾರಮ್ಮನ
ಸಿದ್ದಪ್ಪಾಜಿ ನೋಡುಬುಟ್ಟು
ಅಯ್ಯೋ ಗುರುದೇವ
ಅಯ್ಯೋ ನನ್ನಪ್ಪ ಧರೆಗೆದೊಡ್ಡಯ್ಯಾ
ಈಗಲೀಗ ಮಾರಿ ಗುರುದೇವ
ಬುಟ್ಟು ಬಾಯ ಬುಟ್ಟಾಗೆ
ಬುಟ್ಟೂ ಕಣ್ಣು ಬುಟ್ಟಾಗೆ ಮಲಗವಳಲ್ಲೊ ಗುರುವು

ಈ ಕೆಟ್ಟೂ ಮಾರಿ ಮುಂಡೆಯ
ನಾ ಯಾಗೇ ತಾನೆ ಗೆಲ್ಲಾಲ್ಲಪ್ತ || ಸಿದ್ಧಯ್ಯ ||
ಈ ಕೆಟ್ಟು ಮಾರಿ ಮುಂಡೆಯಾ
ನಾ ಯಾಂಗೆ ಗೆಲ್ಲಲುಬೇಕು
ಧರೆಗೆ ದೊಡ್ಡಯ್ಯ
ಮಂಟೇದ ಲಿಂಗಪ್ಪ
ಈ ಮೂಗು ಮಾರಿ ಬಾಯಿಗೆ ನನ್ನ
ತುತ್ತು ಮಾಡಿ ಕಳುಗಿದಿಯಪ್ಪ || ಸಿದ್ಧಯ್ಯ ||

ಮೂಗು ಮಾರಿಮುಂಡೆಗೆs
ನನ್ನ ತುತ್ತು ಮಾಡಿ ಕಳುಗಿಸ್ತುರೀಯ ಗುರುವು

ಈ ಮಾತು ಬರ್ದಿದ್ದ ಮಾರಿ ವಂದಿಗೆ
ಏನು ಮಾತನಾಡಲಪ್ಪ || ಸಿದ್ಧಯ್ಯ ||

ಮಾತು ಬರ್ದಿದ್ದ ಮಾರಿ ಮುಂಡೆ ವಂದಗೆ
ನಾನು ಯಾವು ಕಷ್ಟ ಸುಖ ಹೇಳ್ಕಂಡು
ದಾರಿ ಬುಡಸ್ಕಂಡು ನಾ ಹಲಗೂರಿಗೆ ಹೋಗನಪ್ಪ
ಜಗತ್ತು ಗುರು ಧರೆಗೆ ದೊಡ್ಡವರೇ ಎನತೇಳಿ ಸಿದ್ದಪ್ಪಾಜಿ
ಈಗಲೀಗ ಮೂಗು ಮಾರಿ ನೆನ್ಕಂಡು
ಮನದಲ್ಲಿ ಯೋಚನೆ ಮಾಡ್ಕಂಡು
ಧರೆಗೆ ದೊಡ್ಡೋರು ಪಾದ ನೆನ್ಕಂಡು
ರಾಜ ಬೊಪ್ಪಗೌಡ್ನ ಪುರಕೆ ಕೈಯೆತ್ತಿ ಮುಗ್ದು
ಮುತ್ತುನ ಜೋಳಿಗೆ ನೋಡ್ಕತ್ತಾವರೇ

ಅಯ್ಯಾ ಏಳೇಳು ಕೊರಡುಗಳು
ಜೋಳಗೆ ಒಳಗೆ ಮಡುಗಾವೆ || ಸಿದ್ಧಯ್ಯ ||

ಗುರುವೆ ಮಾರಿಗೆ ದೇವ
ಹೊಡಿವಂತ ಗುರುವೆ
ಏಳೇಳು ಗುರುವು
ಉರ್ಸಿಂಗೀಕೊರಡ
ಜೋಳ್ಗೆಲ್ಲಿ ಮಡ್ಗದೋ
ಗುರುವೆ ಕೊರಡಗಳ ನೋಡ್ದರಂತೆ
ಮುಂದಕ್ಕೆ ಸಾಗಿ ಬಂದಾರಂತೆ || ಸಿದ್ಧಯ್ಯ ||

ಮುಂದಕ್ಕೆ ಸಾಗಿ ಬಂದ್ರು ಸಿದ್ದಪ್ಪಾಜಿ
ಮಾತಾಡದಿದ್ದ ಮಾರಮ್ಮ
ದಡಭಡನೆ ಎದ್ದು ಸಿದ್ದಪ್ಪಾಜಿ ಬಳಿಗೆ ಬಂದು
ಈಗಲೀಗ ಮಾತಾಡ್ತೀನಿ ಅಂದ್ರೆ
ನಾಲಿಗೆ ಇಲ್ಲ ಮಾರಮ್ಮನಿಗೆ
ಆಗಲೀಗ ಗೊಜ್ಜ ಬಿಜ್ಜನೆ ಏನಂತ ಮಾತಾಡ್ತಳೆ ಅಂದ್ರೆ

ನಿನ್ನ ಕಂತೆ ಭೊಂತೆ ಇಟ್ಟು ಬುಡ್ಲ
ನಿನ್ನ ತಿಂದುಬುಡ್ತಿನಿ ಎಂದಾಳಂತೆ|| ಸಿದ್ಧಯ್ಯ ||

ನಿನ್ನ ಕಂತೆ ಬೊಂತೆ ನೀನು
ಇಟ್ಟುಬುಡ್ಲ ಪರದೇಶಿ
ನಿನ್ನ ತಿನ್ನಬೇಕು ಎಂದವಳೇ
ಮೂಗು ಮಾರಿ ಗುರುವು
ಅಯ್ಯಾ ತಿನ್ಕಂಡಿಯ ತಾಯಿ
ತಿನ್ಕಂಡಿಯ ಮಾರವ್ವ
ಅವ್ವ ಗುರಗ್ಯಾನ ಮಾಡ್ಕತ್ತಿನಿ
ಸ್ವಲ್ಪ ನಿಲ್ಲು ಎಂದಾರಲ್ಲ || ಸಿದ್ಧಯ್ಯ ||

ಸ್ವಲ್ಪ ನಿಲ್ಲವ್ವ ಮಾರಮ್ಮ
ನನ್ನ ಗುರುಪಾದ ನೆನ್ಕತ್ತಿನಿ ಸುಮ್ನಿರು ತಾಯಿ ಎಂದರು
ಆಗಲೀಗ ಮಾತು ಬರ್ದಿದ್ದ ಮಾರಿ
ಸಿದ್ದಪ್ಪಾಜಿ ಮೊಕವ ದುರುದುರನೆ ನೋಡ್ತಿದ್ದಳು
ರಾಜಬೊಪ್ಪಗೌಡ್ನ ಪುರಕ್ಕೆ
ಕೈಯೆತ್ತಿ ಮುಗ್ದು ಬುಟ್ಟು
ಏನವ್ವ ಮಾರಿ ತಿನ್ಕಂಡಿಯವ್ವ
ಬವ್ವ ನನ್ನ ತಿನ್ಕವ್ವ ತಾಯಿ ಎನತೇಳಿ

ಅಯ್ಯಾ ಮಾರಿ ಮುಂಡೆಯಾ ಗುರುವೆ
ದಂಡಿಕ್ಕೆ ಕರ್ದರಂತೆ || ಸಿದ್ಧಯ್ಯ ||

ಗುರುವೆ ಮೂಗುಮಾರಿ ಮುಂಡೆಯಾ
ದಂಡಿಕ್ಕೆ ಗುರುವೆ
ಕದ್ದರೂ ನನ್ನಪ್ಪ
ನೀಲಿ ಸಿದ್ದಪ್ಪಾಜಿ
ಅವರು ಎಡಗೈನ ಒಳಗೆ ದೇವ
ಜಡ್ಡು ಮುಂದಲೆ ಹಿಡ್ದರಲ್ಲ || ಸಿದ್ಧಯ್ಯ ||

ಗುರುವೆ ಮಾರವ್ವನ ದೇವ
ಮಂಡೆಯ ನನ್ನ ಗುರುವು
ಮುಂಗೈಲಿ ಜೋಳಿಗ್ಗೆ
ಕೈ ಹಾಕಿ ನನ್ನ ಗುರುವು
ಗುರುವೆ ಮಾರ್ರಿ‍ರ್ಗೆ ಒಡಿವಂತ
ಉರುಸಿಂಗಿ ಕೊರಡಾವ ತಗ್ದು
ಬಲಗೈಲಿ ಇಡ್ಕಂಡು
ಅಯ್ಯಾ ಮೂಗು ಮಾರಿ ಎಂಬುವಳಿಗೆ
ಮೂರು ಏಟ ಎಳದರಂತೆ || ಸಿದ್ಧಯ್ಯ ||

ಗುರುವೆ ಮೂಗು ಮಾರಿಗೆ ಗುರುವೆ
ಮೂರೇಟ ದೇವ
ಚಟೀರ್‌ನೆ ಚಟೀರ್‌ನೆ
ಹೊಡ್ದವರೆ ನನ್ನಪ್ಪ
ಗುರುವೆ ಹೊಡ್ದಂತ ಏಟಿಗೆ
ಮೂಗು ಮಾರಮ್ಮ
ಅಯ್ಯಪ್ಪ ಅಂದವಳೆ
ಕೆಟ್ಟ ಮಾರಮ್ಮ
ಅಯ್ಯಾ ಮಾತಾಡ್ದಿದ್ದ ಮಾರಿ ಗುರುವೆ
ಮಾತನ್ನೆ ಆಡುತಾಳೆ || ಸಿದ್ಧಯ್ಯ ||

ಗುರುವೆ ಮಾತು ಇಲ್ದಿದ್ದ ಮಾರಿಗೆ
ಮಾತೆಯೆ ಬಂದುಬುಟ್ಟೋ
ಅಯ್ಯೋ ನನ್ನಪ್ಪ
ಅಯ್ಯೋ ನನ್ನಪ್ಪ
ಆ ಗುರುವೇ ಗುರುದೇವ
ನಾನು ಮೂಗು ಮಾರಿಯಾಗಿ
ನಾ ಮೂಲೆಲ್ಲಿ ಕೂತಿದ್ದಿ
ನೀವು ಹೊಡೆದೇಟಿಗೆ ನನಗೆ ದೇವಾ
ಮಾತೇ ಬಂದೋದವವಲ್ಲೋ || ಸಿದ್ಧಯ್ಯ ||

ನೀವು ವಡೆದೇಟ್ಟಿಗೆ ಗುರುವೆs
ನನಗೆ ಮಾತು ಬಂದುಬುಟ್ಟೋ
ಗುರುದೇವ ಏನತೇಳಿ
ಸಿದ್ದಪ್ಪಾಜಿಯವರ ಮುಂದೆ
ಕಿಲಕಿಲನೆ ನಗ್ತ ಮಾರಮ್ಮ
ಪಾದಕ್ಕೆ ಬಿದ್ದು
ಶರಣು ಮಾಡ್ತ ಗುರುದೇವ
ನೀವು ಎಲ್ಲಿಗೋಗಬೇಕು ಯಾವತಾಕೋಗಬೇಕು
ಮಾರಮ್ಮ ನಾನು ಹಲಗೂರು
ಪಂಚಾಳಗೇರಿಗೆ ಭಿಕ್ಷಕ್ಕೆ ಹೋಗಬೇಕು
ದಾರಿ ತೋರಿಯ ಮಾರ‍ಮ್ಮ ಎಂದರು
ತೋರ್ತಿನಿ ಗುರುದೇವ ತೋರ್ತಿನಿ ನನ್ನಪ್ಪ

ಅಯ್ಯಾ ನಿಮಗೊಳ್ಳೆ ಜಯಕಣಪ್ಪ
ಹಲಗೂರುಗೆ ಅಪಾಜಯ || ಸಿದ್ಧಯ್ಯ ||

ನಿಮ್ಮಗೊಳ್ಳೆ ಜಯಬುದ್ಧಿs
ಹಲಗೂರ್ಗೆ ಅಪಜಯ ಕಣಪ್ಪ
ಧರೆಗೆ ದೊಡ್ಡವರ ಮಗನೆ ಸಿದ್ದಪ್ಪಾಜಿ ಎನತೇಳಿ
ಗುರುದೇವ
ಹಲಗೂರಗೇ ಹೋಗಬೇಕಾದ್ರೆ
ಇದೆ ದಾರಿ ಇದೆ ಮಾರ್ಗ
ಹೊರಟೋಗಿ ನನ್ನಪ್ಪ

ಆಗಲೀ ಕಂದಾ
ಆಗಲಿ ಮಾರಮ್ಮ
ಈಗ ಹಲಗೂರಿಮದ ಕಂದಾ
ನಾ ಕಬ್ಬುಣ ಭಿಕ್ಸ ತಕ್ಕಂಡು
ನಾ ಗುರು ಬಳಿಗೆ ಹೋದಮೇಲೆ
ನಾ ಚಿಕ್ಕದೊಂದು ಹಳ್ಳಿಗ್ರಾಮ
ಚಿಕ್ಕಲ್ಲೂರ ಮಾಡಿ
ನಾನು ಚಿಕ್ಕಲ್ಲೂರಿನ ಒಳಗೆ
ಸಿದ್ದಪ್ಪಾಜಿಯಾಯ್ತೀನಿ
ನಾನು ಸಿದ್ದಪ್ಪಾಜಿಯವರು
ಆದು ಮೇಲೆ ಕಂದ
ಉಗಾದಿಯಿಂದ ಈಚೇ
ಕಂದ ಶಿವರಾತ್ರಿಂದ ಆಚೆ
ನಿನಗೆ ಮಾರಿಹಬ್ಬ ಅನುತೇಳಿ
ನಿನಗೊಂದಬ್ಬ ಮಾಡ್ಸುತೀನಿ || ಸಿದ್ಧಯ್ಯ ||