ನಿನಗೂ ಒಂದು ಹಬ್ಬ ಮಾಡಿಸಿ ಕಂದಾs
ನರ ಮಾರವರ ಕೈಲಿ
ಧೂಪ ಹಾಸಿಸಿ ಕೈಯೆತ್ತಿ ಮುಗುಸ್ತಿನಿ ಮಗಳೆ
ಅಂತೇಳಿ ಮೂಗು ಮಾರಿಗೆ ಶಾಪ ಕೊಟ್ಟುಬುಟ್ಟು

ಅಯ್ಯಾ ತೆಂಕಲ ಬಾಗಲಗಾಣೆ
ನನ್ನ ಸಿದ್ದಪ್ಪಾಜಿ ಬಂದಾರಲ್ಲ || ಸಿದ್ಧಯ್ಯ ||

ಗುರುವೆ ತೆಂಕಲಗಾಣೆ ಬಾಗಲ್ಗಾಣೆ
ಸಿದ್ದಪ್ಪಾಜಿಯವರು ದೇವ
ತಾನೆ ಬರುವಾಗ
ತೆಂಕದ ಬಾಗಲೊಳಗೆ ಒಬ್ಬ
ಸುಂಕುದ ಮಾರವ್ವ
ಅವಳು ಬರುತ್ತಿದ್ದ ಸಿದ್ದಪ್ಪಾಜಿಯವರ
ಮಹಾ ಮದನೆ ನೋಡುತಾಳೆ || ಸಿದ್ಧಯ್ಯ ||

ಗುರುವೆ ಬರುವಂತ ನನ್ನ ಗುರುವು
ಸಿದ್ದಪ್ಪಾಜಿಯವರ
ಕಣ್ಣಾರ ಗುರುವೆ
ಅಯ್ಯೊ ಇವನ್ಯಾರೊ ಬಳೆಗಾರ
ಇವನ್ಯಾರೊ ಬಳೆಗಾರ
ಈ ಬಳೆಗಾರ ಎನ್ನುವನು
ಎಷ್ಟು ಚೆನ್ನಾಗಿ ಕಾಣುತಾನೆ|| ಸಿದ್ಧಯ್ಯ ||

ಬಳೇಗಾರ ಎನ್ನವನು ದೇವಾs
ಎಷ್ಟು ಚಂದ್ಗುಂದಾಗಿ ಕಾಣ್ತಾನೆ
ಇವನ ನೋಡುದ್ರು ನನಗೆ ಆಸೆಯಾಯ್ತಾದಲ್ಲ
ಇವನ ಯಾವು ರೀತಿ ಒಳಗೆ ತಿನ್ನಬೇಕು ಅಂತೇಳಿ
ಸುಂಕ್ದು ಮಾರಮ್ಮ
ಸಿದ್ದಪ್ಪಾಜಿಯವರ ನೋಡುಬುಟ್ಟು

ಅಯ್ಯಾ ಓಡೋಡಿ ಬಂದಾಳಂತೆ
ಮುಂದ್ಗಾಡೆ ನಿಂತಾಳಲ್ಲ || ಸಿದ್ಧಯ್ಯ ||

ಓಡೋಡಿ ಬಂದು ಮುಂದ್ಗಾಡೆ ನಿಂತ್ಕಂಡು ಮಾರಮ್ಮ
ಯಾವೂರ್ಲ ಬಳೆಗಾರ ಯಾವೂರ್ಲ ಬಳೆಗಾರ ಶೆಟ್ಟಿ
ನಾನಿದ್ರುವೆ ಭಯ ಭೀತಿ ಒಂದುವಿಲ್ದಂತೆ ಬರ್ತಯಿದ್ದಿಯಲ್ಲೋ
ಈಗಲೀಗ ನಿನ್ನ ನೋಡದ್ರೆ ನನ್ನಗೆ ಆಸೆ ಆಗ್ಬುಟ್ಟದೆ ಕಣೋ

ನಿನ್ನ ಬಳೆಮಲ್ಲಾರ ಇಳುಕುಬುಡು
ತಿಂದ್ಬುಡಬೇಕು ಎಂದಾಳಲ್ಲ || ಸಿದ್ಧಯ್ಯ ||

ನಿನ್ನ ಬಳೆಮಲ್ಲಾರ
ಇಟ್ಟು ಬುಡ್ಲ ಪರದೇಶಿ
ನಿನ್ನ ತಿಂದು ಬುಡಬೇಕು
ಅಂತ ಹೇಳವಳೆ ಮಾರಮ್ಮ
ಅವ್ವ ತಿನ್ಕಂಡಿಯ ಕಂದಾ
ತಿನ್ಕಂಡಿಯಾ ತಾಯಿ
ನಮ್ಮ ತಾಯಿ ನೆನ್ಕತ್ತಿನಿ
ನಮ್ಮ ತಂದೆ ನೆನ್ಕತ್ತಿನಿ
ನನ್ನ ಗುರುಪಾದ ನಾನು
ನೆನ್ಕತ್ತಿನಿ ಮಾರವ್ವ
ನಾನೆನ್ಕಳೊಗಂಟ್ನ ನೀನು
ಅಲ್ಲೇ ನಿಲ್ಲವ್ವ ತಾಯಿ || ಸಿದ್ಧಯ್ಯ ||

ಕೇಳಲೋ ಪರದೇಶಿ ಕೇಳಲೋ ಬಳೆಗಾರ
ನಿನಗೂ ಬ್ಯಾರೆ ತಾಯಿ ಇದ್ದರಾ ತಂದೆ ಇದ್ದರಾ
ನಿನಗೂ ಬ್ಯಾರೆ ಗುರು ಇದ್ದರೇನೂ
ಮೊದಲಾಗಿ ನಿಮ್ಮತಂದೆ ಯಾರು
ನಿಮ್ಮ ತಾಯಿ ಯಾರು
ನಿನ್ನ ಗುರು ಯಾರು
ಮೊದಲು ಅವರ ಹೆಸ್ರ ಹೇಳಬುಡು
ನಿನ್ ತಿನ್ಕಂಡು ಮೇಲೆ ಅವರ್ನು ತಿನ್ಕತ್ತಿನೀ ಎಂದರೂ
ಮಾರಮ್ಮ
ನನ್ನ ತಾಯಿ ತಂದೆ ಗುರು ಎಲ್ಲಾರ್ನು ತಿನ್ಕಂಡೆಯೊವ್ವ
ಅದ್ರು ಆಗಲಿ ಹೇಳ್ತೀನಿ ಕೇಳು
ನಮ್ಮ ತಂದೆ ಎಂದರೆ ರಾಚಪ್ಪಾಜಿ
ನಮ್ಮ ತಾಯಿ ಎಂದರೆ ತೋಪ್ಪುನ ದೊಡ್ಡಮ್ಮ
ನಮ್ಮ ಗುರು ಅಂದರೆ ಧರೆಗೆ ದೊಡ್ಡವರು
ಇವರು ನಮ್ಮ ತಾಯಿ ತಂದೆ
ನಮ್ಮ ಗುರು ಕಣವ್ವ ಎಂದರು
ಎಲೋ ರಾಚಪ್ಪಾಜಿ ಅಂದ್ರೆ ಅವರು
ರಾಜ್ಯಕ್ಕೆ ದೊಡ್ಡವನೇನೋ || ಸಿದ್ಧಯ್ಯ ||

ಲೋ ದೊಡ್ಡಮ್ಮ ತಾಯಿ ಎಂದರೇ
ಅವಳು ದರೆಗಾತ್ರ ಇದ್ದನೇನೋ || ಸಿದ್ಧಯ್ಯ ||

ಅಯ್ಯಾ ಧರೆಗೆ ದೊಡ್ಡೋರು ಅಂದ್ರೆ
ಅವನು ಧರೆಗಾತ್ರ ಅವನು
ಇದ್ದಾನಾ ಪರದೇಶಿ
ನಿಮ್ಮ ತಂದೆ ಹೆಸ್ರು ಗೊತ್ತಾಯ್ತು
ನಿಮ್ಮ ತಾಯಿ ಹೆಸ್ರು ಗೊತ್ತಾಯ್ತು
ನಿನ್ನ ಗುರು ಹೆಸ್ರು ಗೊತ್ತಾಯ್ತು
ನಿನ್ನ ಬಳೆಮಲ್ಲಾರ ಮಡಗುಬುಡು
ತಿನ್ನಬೇಕು ಎಂದಾಳಲ್ಲ || ಸಿದ್ಧಯ್ಯ ||

ಏನವ್ವ ಕಂದ ಮಾರಮ್ಮ
ಈಗ ನನ್ನ ಗುರು ಗ್ಯಾನ ಮಾಡ್ಕಂಡಿ ತಾಯಿ
ನನ್ನ ತಾಯ್ತಂದೆ ನೆನ್ಕಂಡೀ
ತಿಂದಿಯಾ ಕಂದ
ತಿನ್ಕಬುಡು ಮಾರವ್ವ
ಬಾವ್ವ ತಿನ್ನು ಅಂದ್ರು
ಯಾವಾಗ ಮಾರಮ್ಮ ಒಳ್ಳೆ ಆಹಾರ ಸಿಕ್ಕುಬುಡ್ತು ಅಂತೇಳಿ
ಕಿಲಕಿಲನೇ ನಗ್ತ ಸಿದ್ಧಪ್ಪಾಜಿ
ಬಳಿಗೆ ಮೂರೆ ಹೆಜ್ಜೆಗೆ ಓಡಿಬಂದಳು

ಓಡಿಬಂದ ಮಾರಿಯಾ
ಮುಂದೆಲೆಯ ಇಡ್ಕಂಡ್ರಲ್ಲ || ಸಿದ್ಧಯ್ಯ ||

ಗುರುವೆ ಓಡುಬಂದ ಮಾರಮ್ಮನ
ಮುಂದೆಲೆ ಇಡ್ಕಂಡು
ಉರುಸಿಂಗಿ ಕೊರಡಾ
ಬಲಗೈಲಿ ಇಡ್ಕಂಡು
ಗುರುವೇ ರಾಜು ಬೊಪ್ಪಗೌಡ್ನಪುರಕ್ಕೆ
ಕೈಯೆತ್ತಿ ಮುಗ್ದುಬುಟ್ಟು
ಧರೆಗೆ ದೊಡ್ಡೋರು ಪಾದ
ಮನದಲ್ಲಿ ನೆನಕ್ಕಂಡು
ಗುರುವೆ ಮಾರವ್ವಗ್ಗೆ ಮೂರು ಏಟ
ಹೊಡ್ಡರು ಮಾಯಿಕಾರ|| ಸಿದ್ಧಯ್ಯ ||

ಗುರುವೆ ಮಾರಿಗೆ
ಮೂರೇಟ ಗುರುವೇ
ಹೊಡ್ಡರು ಗುರುವು
ನೀಲುಗಾರುರ ಗಂಡ
ನನ್ನ ಮೇಲೆ ಸಿದ್ಧಪ್ಪಾಜಿ
ಅಯ್ಯಾ ಒಂದೇಟ ಹೊಡ್ದವರೆ
ಅಯ್ಯಪ್ಪ ಅಂದವಳೆ
ಎರಡೇಟ ಹೊಡ್ದವರೆ
ಅಯ್ಯವ್ವ ಅಂದವಳೆ
ಅವಳ ಮೂರೇಟ ಹೊಡಿದಾಗ
ಕಣ್ಣೇ ಬಿದ್ದೂದವಲ್ಲ || ಸಿದ್ಧಯ್ಯ ||

ಸಿದ್ಧಪ್ಪಾಜಿಯವರು ಮೂರೇಟ ಹೊಡಿದಾಗ
ಮಾರಮ್ಮನಿಗೆ ಕಣ್ಣು ಕಳೆದು ಭೂಮಿಗೆ ಬಿದ್ದೋದೋ
ಅಯ್ಯೋ ಗುರುದೇವ ಅಯ್ಯೋ ಗುರುವು
ನೀವ್ಯಾರು ಅಂತ ಗೊತ್ತಿಲ್ವಲ್ಲಪ್ಪ
ಕಣ್ಣುಬುಟ್ಟು ನೋಡುಬುಟ್ಟು
ನಿಮ್ಮ ಪಾದನಾದ್ರು ಇಡ್ಕತ್ತಿನಿ
ಅಂದ್ರೆ ನನಗೆ ಕಣ್ಣೆ ಕಾಣಕಿಲ್ವಲ್ಲಪ್ಪ
ಎನತೇಳಿ ಸಿದ್ಧಪ್ಪಾಜಿಯವರ ಪಾದವ

ಮೊಕಡ್ನನಾಗಿ ಬಿದ್ದುಕ್ಕಂಡು
ತಡಕ್ಕಂಡು ಹುಡ್ಕತ್ತವಳೆ || ಸಿದ್ಧಯ್ಯ ||

ಮಾರಮ್ಮ
ನನ್ನ ತಿನ್ಕತ್ತಿದ್ದಿವಯವ್ವ
ಈಗಲೀಗ ಕಣ್ಣು ಕಾಣದ ಕುಂಡಿಯಾಗಿ
ನೀ ಇಲ್ಲೆ ಕೂತ್ಕೋ ಮುಂಡೆ
ನಾ ಮುಂದಕ್ಕೆ ಹೋಯ್ತಿನಿ ಅಂತೇಳಿ
ಮಾರಿಗೆ ಕಣ್ಣಿಲ್ದಂಗೆ ಮಾಡಿ
ಅಂಕದಲ್ಲಿ ಬಿಟ್ಟುಬುಟ್ಟು
ತೆಂಕದಂಕ ಬಿಟ್ಟುಬುಟ್ಟು ಸಿದ್ಧಪ್ಪಾಜಿ

ಅವರು ಬಡಗಲಂಕಣದ ಒಳಗೆ ಗುರುವೆ
ಬರ್ತಾರೆ ಘನನೀಲಿ || ಸಿದ್ಧಯ್ಯ ||

ಗುರುವೆ ಬಡಗಲಂಕಣ ಒಳಗೆ
ಪಡುಮಕಾಳಿ ಗುರುವೆ
ಅಲ್ಲಿ ಕಾದುಕೂತುವಳೆ
ಬರುವ ಸಿದ್ಧಪ್ಪಾಜಿಯ
ಮಟಮಟನೆ ನೋಡವಳೆ
ಅಯ್ಯೋ ಇವನ್ಯಾರೋ ಕಾಣನಲ್ಲ
ಇವನ್ಯಾರೋ ಗೊತ್ತಿಲ್ಲ
ಇವನು ಯಾವ ರೀತಿ ಒಳಗೆ ಇವನು
ಇಲ್ಲಿಗಂಟ ಬಂದಾನಪ್ಪ || ಸಿದ್ಧಯ್ಯ ||

ಇವನ್ಯಾರೊ ಬಂದ್ಬುಟ್ಟನಲ್ಲ
ಇವನು ತಳ್ತಳನೆ ಹೊಳಿತನಲ್ಲ
ಇಂತಹ ಸುಂದರವಾದ ಬಳಗಾರ
ನನ್ನ ದಂಡಕಾಣೆ ಬಂದ್ಬುಟ್ಟವ್ನೆ ಅಂತೇಳಿ
ಸಿದ್ದಪ್ಪಾಜಿ ಮೊಕಾ ನೋಡುಬುಟ್ಟು
ಆಗಲೀಗ ಬಲ್ಮುಂಕಾಳಿ
ಯಾವುನೋ ಬಳಿಗಾರ
ಈಗಲೀಗ ನಾನು ಇದ್ರುವೆ ಇಷ್ಟು ಧೈರ್ಯವಾಗಿ ಬರ್ತಿದ್ದಿಯಲ್ಲ

ಲೋ ಇಲ್ಲೆ ನಿಂತ್ಕೋ ಬಳೆಗಾರ
ನುಂಗ್ಬುಟ್ತಿನಿ ಎಂದಾಳಲ್ಲ|| ಸಿದ್ಧಯ್ಯ ||

ಲೋ ಅತ್ತಗೋಗುಬ್ಯಾಡ
ಇಲ್ಲೆ ನಿಂತ್ಕೊ ಮುಂಡೆ ಮಗನೆ
ನುಂಗ್ದಿಡ್ತಿನಿ ಅಂತ
ಎದ್ದೇದ್ದು ಬರ್ತಾಳೆ
ಗುರುವೆ ಬರುವಂತ ಮಾರವ್ನ
ನೋಡ್ಕಂಡು ನನ್ನಪ್ಪ
ಈ ಕೆಟ್ಟ ಮಾರಿಮುಂಡೆಯ
ನಾ ಬುಡಾಬಾರ್ದು ಎಂದಾರಲ್ಲ || ಸಿದ್ಧಯ್ಯ ||

ಕೆಟ್ಟ ಮಾರಿ ಮುಂಡೆಯ ಖಂಡಿತವಾಗಿಯೂ ಬುಡಬಾರ್ದು ಎನುತೇಳಿ
ಏನವ್ವ ಬಲ್ಮುಂಕಾಳಿ
ನೀನು ಬಲವಾದ ಮಾರಿ
ಈಗಲೀಗ ನನ್ನ ಗುರು ಪಾದ
ನೆನಕಳಗಂಟ
ದಂಡಕ್ಕೆ ಬಂದ್ಬುಟ್ಟಿಯಲ್ಲೇ ಮಾರಮ್ಮ

ಅವ್ವ ಮುಟ್ಟೋ ಮುಟ್ಟೋ ಬ್ಯಾಡ
ನನ್ನ ಮುಟ್ಟು ತಟ್ಟು ಮಾಡುಬ್ಯಾಡ || ಸಿದ್ಧಯ್ಯ ||

ನನ್ನ ಮುಟ್ಟೋ ಮುಟ್ಟು ಬ್ಯಾಡ
ನನ್ನ ಮುಟ್ಟು ತಟ್ಟು ಮಾಡಬ್ಯಾಡ
ಅಲ್ಲೇ ನಿಂತ್ಗವ್ವ
ತಾಯಿ ಮಾರಮ್ಮ
ನಮ್ಮ ತಾಯಿ ತಂದೆ ನೆನ್ಕತ್ತಿನಿ
ಅಲ್ಲೆ ನಿಂತ್ಕೋ ಎಂದಾರಲ್ಲ || ಸಿದ್ಧಯ್ಯ ||

ಅಯ್ಯೋ ಧರೆಗೆ ದೊಡ್ಡಯ್ಯಾ
ಇಬ್ಬರ ಮಾರೀರ ಸೋಲಿಸಿ
ಹಲಗೂರು ಪಟ್ಟಣದ ಒಳಗಡೆ ಬಂದ್ನಲ್ಲಪ್ಪ
ಈ ಮೂರನೆ ಮಾರಿ ಮುಂಡೇ
ನನ್ನನೇ ನುಗ್ಬುಡ್ತೀನಿ ಅಂತ ಬಂದು
ನಿಂತೌಳಲ್ಲೊ ಗುರುವು

ಈ ಬಲ್ಕಂಕಾಳಿ ಮಾರಿಗೆ
ನನ್ನ ಬಲಿಯ ಕೊಟ್ಟಿಯಾ ಸ್ವಾಮಿ || ಸಿದ್ಧಯ್ಯ ||

ಇಂತ ಬಲ್ಮಂಕಾಳಿ ಬಾಯಿಗೆ ನನ್ನ
ಬಲಿಯ ಕೊಟ್ಟರಿಯಾ
ಧರೆಗೆ ದೊಡ್ಡಯ್ಯ
ಮಂಟೇದ ಲಿಂಗಪ್ಪ
ಈ ಕೆಟ್ಟು ಮಾರಿ ಮುಂಡೆಯ ನಾ
ಹೆಂಗೆತಾನೆ ಗೆಲ್ಲಾಲ್ಲಪ್ಪ || ಸಿದ್ಧಯ್ಯ ||

ಇಂತ ಕಿಟ್ಟ ಮಾರಿ ಮುಂಡೆಯ ಸ್ವಾಮಿs
ಯಾವುರೀತಿ ಒಳಗೆ ನಾನು ಗೆಲ್ಲಬೇಕಪ್ಪ
ಜಗುತ್ತು ಗುರು ಧರೆಗೆ ದೊಡ್ಡಯ್ಯಾ
ಮಂಟೇದಸ್ವಾಮಿ ಎನುತೇಳಿ
ರಾಜು ಬೊಪ್ಪಣಪುರಕೆ ಕೈಯೆತ್ತಿ ಮುಗ್ದುಬುಟ್ಟು ಗುರುವು

ಅಯ್ಯಾ ತಿಂದಿಯಾ ಕಂದ
ತಿನ್ನವ್ವ ಮಾರಮ್ಮ
ಹಾಗನುತೇಳಿ ನನ್ನ ಗುರುವು
ಬಾವ್ವ ನನ್ನ ಕಂದಾ
ತಿನುಕೋ ಬಾರೊ ಕಂದ
ಹಾಗಂದವರೆ ನನ್ನ ಗುರುವು
ಬಳೆಯ ಮಲಾರವ
ಭೂಮಿಗೆ ಮಡಗವರೆ
ಬರುವಂತ ಮಾರಿಯ
ದುರ್ದುರನೇ ನೋಡವರೆ
ಗುರುವೆ ಎಡಗೈನ ಒಳಗೆ
ಮಾರಮ್ಮನ ಮಂಡೆ
ಇಡ್ಕಂಡು ನನ್ನ ಗುರುವು
ಅವರು ಬಲ್ದ ಪಾದ ಎತ್ತುತಾರೆ
ಒಂದೊದೆತ ವದೀಯುತ್ತಾರೆ || ಸಿದ್ಧಯ್ಯ ||

ಗುರುವೆ ಬಲ್ದ ಪಾದದ ಒಳಗೆ
ಒಂದೊದೆತ ದೇವ
ಒದ್ದಾರು ನನ್ನಪ್ಪ
ನೀಲಿ ಸಿದ್ದಪ್ಪಾಜಿ
ಅಯ್ಯಾ ಬಲ್ಮಕಾಳವ್ವ
ಸಿದ್ದಪ್ಪಾಜಿಯವರು
ಒದ್ದಂತ ಒದೆತಕ್ಕೆ
ಅವಳು ಭೂಮಿ ಮ್ಯಾಲೆ ಬಿದ್ದಾಕ್ಕಂಡು
ಬುಡುಬುಡುಬುಡನೆ ಓಡುತಾಳೆ || ಸಿದ್ಧಯ್ಯ ||

ಗುರುವೆ ಸಿದ್ದಪ್ಪಾಜಿಯವರು
ಒದ್ದಂತ ಒತ್ತಕ್ಕೆ
ಬುಡ್ಬಡನೆ ಉಳಕ್ಕಂಡು
ತಟವಟನೇ ತಾಯಿ
ಒದ್ದಾಡ್ತಿವ್ನ ಮಾರಿ
ಅಪ್ಪೋ ಇನ್ನೊಂದಪ್ಪ ಒದೀಬ್ಯಾಡಿ
ಸತ್ತೋಯ್ತೀನಿ ಅಂದಾಳಂತೆ || ಸಿದ್ಧಯ್ಯ ||

ಇನ್ನೊಂದು ಒತ್ತ ಒದ್ದುಬುಟ್ರೆ ಬುದ್ಧಿ
ಸತ್ತೋಯ್ತಿನಿ ನನ್ನಪ್ಪ ಒದೀ ಬ್ಯಾಡಿ ಗುರುವೆ
ಈ ಹಲಗೂರು ಪಂಚಾಳಗೇರಿವೊಳಗೆ
ಆಗುವಂತ ವಿಷಯವೆಲ್ಲನೂ ನಿಮ್ಮೊಂದಿಗೆ ಹೇಳುತ್ತಾ

ಅಪ್ಪಾ ಮುಂದ್ಮುಂದೆ ನೀವು ಹೋದ್ರೆ
ವಂದ್ವಂದಗೇ ಬರುವುತಿನಿ || ಸಿದ್ಧಯ್ಯ ||

ನಿಮಗೆ ಗೊತ್ತಿಲ್ದವರ ಮನೆಯ
ನಾನೆ ತೊರ್ತಿನಿ ಗುರುವು || ಸಿದ್ಧಯ್ಯ ||

ಮಾರಮ್ಮ
ನಾ ಇನ್ನೊಂದು ಒದೀದೆ ಹೋದ್ರೆ
ಹಲಗೂರು ಪಂಚಾಳಗೇರಿಗೆ
ನೀನೇ ದಾರಿ ತೋರಿಸಿಯಾ
ನಾನು ನೋಡ್ದಿದ್ದ ಮನೆಗೆ ನೀನೆ
ತಕ್ಕಂಡೋಗಿ ನೋಡ್ಸಿಯವ್ವ
ಖಂಡುತವಾಗು ಕರ್ಕಂಡೋಗಿ ತೋರುಸ್ತಿನಿ ಬುದ್ದಿ
ನೀವು ಹೇಳ್ದಂಗೆ ಕೇಳ್ತೀನಿ
ಇನ್ನೊಂದೊತ್ತ ಒದೀಬ್ಯಾಡಿ ಅಂತ್ಹೇಳಿ
ಸಿದ್ದಪ್ಪಾಜಿಯವರ ಪಾದ ಇಡ್ಕಂಡರು
ಆಗಲೀಗ ಗುರುವೆ ಗುರುದೇವ
ಈಗ ಮೂರ್ವನ ಮಾರೀರ ಕಂಡಂಗೆ ಆಯ್ತು
ಇನ್ಯಾರ್ಯಾರು ಮಾರೀರು ಇದ್ದರವ್ವ ಎಂದರು
ಬುದ್ಧಿ
ನಮ್ಮಂತ ಮಾರಮ್ಮ ಇನ್ನು ಒಬ್ಬಳವಳೇ ಬುದ್ಧಿ
ಯಾವು ಮಾರಿಯವ್ವ
ಗುರುದೇವ
ಪಡುಬಾಗಲಲ್ಲಿ ಯಾವು ಮಾರಿಯವಳೇ ಗೊತ್ತ

ಅಪ್ಪೋ ಮುಂಡೆ ಮಾರಮ್ಮ ಅವಳು
ನನಗಿಂತ ದೊಡ್ಡೋಳು ಕಪ್ಪೋ || ಸಿದ್ಧಯ್ಯ ||

ಗುರುವೆ ಮಂಡೆ ಮಾರಮ್ಮ
ಎಂದರೆ ನನ್ನ ಗುರುವು
ಮಂಡೆ ಮಾರಿ ಎಂದರೆ
ಅವಳು ನನ್ಗಿಂತ ದೊಡ್ಡವಳು
ನಾನು ತೋರ್ತಿನಿ
ಬಾಪ್ಪ ಅನತೇಳಿ
ಗುರುವೆ ಮಾರವ್ವ ಕರಕೊಂಡು
ಮುಂದೆ ಮುಂದೆ ಬಾರವುತಾಳೆ || ಸಿದ್ಧಯ್ಯ ||

ಮಂಡೇ ಮಾರಮ್ಮ
ಅಲ್ಲೀ ಕೂತವಳೆ ಹೋಗಿ ಬುದ್ದಿ ಅನತೇಳಿ
ಆಗಲೀಗ ಮಂಡೆಮಾರಿ ಬಳಿಗೆ
ಸಿದ್ದಪ್ಪಾಜಿಯವರು ಬರುವಾಗ
ಬರುವಂತ ಸಿ‌ದ್ದಪ್ಪಾಜಿ ನೋಡ್ಬುಟ್ಟು
ಮಂಡೆ ಮಾರಿ
ಇವನು ಯಾವೋನೋ ಬಳೆಗಾರ
ಯಾವೋನೋ ಮುಂಡೇ ಮಗ
ನನ್ನನೇ ನೋಡ್ಕಂಡು
ಇತ್ತಗೇ ಬರ್ತಾವನೇ
ಅವನು ಬರ್ಲೀ ಬರ್ಲೀ
ತಿನ್ನುತೀನಿ ಎಂದಾಳಲ್ಲ || ಸಿದ್ಧಯ್ಯ ||

ಅಯ್ಯಾ ಸಿದ್ದಪ್ಪಾಜಿ ನೋಡದ್ಲಂತೆ
ದಢಾನೇ ಮೇಕೆ ಎದ್ದಾಳಂತೆ || ಸಿದ್ಧಯ್ಯ ||

ಗುರುವೆ ಸಿದ್ದಪ್ಪಾಜಿಯವರ
ನೋಡ್ಕಂಡು ಮಾರಮ್ಮ
ಢರ್ರನೇ ಮೇಕೆ ಎದ್ದು ನಿಂತ್ಕಂಡ್ಕು
ಅಯ್ಯಾ ಎದ್ದಂತ ಮಾರವ್ವನ
ಸಿದ್ದಪ್ಪಾಜಿಯವರು
ಮುಂದಲೆ ಇಡ್ಕಂಡರು
ಗುರುವೆ ಮುತ್ತುನ ಜೋಳಿಗೆ
ಕೈಯಾಕಿ ನನ್ನ ಗುರುವು
ಉರುಸಿಂಗಿ ಕೊರಡಾವ
ತಗದು ಬಲಗೈಲಿ ಇಡ್ಕಂಡು
ಅಯ್ಯಾ ಮಾರಮ್ಮನ ಮೈಮೇಲೆ
ಮೂರು ಏಟ ಹೊಡದರಂತೆ|| ಸಿದ್ಧಯ್ಯ ||