ದೊಡ್ಡಮ್ಮಾ ಹನ್ನೆರಡಾಳುದ್ದ ಪಾತಾಳ ಲೋಕಕ್ಕೆ ನಾನು ಹೋಗಬೇಕಾದರೆ
ಮುಚ್ಚುವ ಬಾವಿ ಆಗಬೇಕಲ್ಲವ್ವ
ಬಾವಿ ತಗೀಬೇಕಾದರೆ ಕಬ್ಬಿಣ ಇಲ್ಲದೆ ಕೆಲಸ ಆಗದಿಲ್ಲ
ಹಾರೆಮೂರು ಗುದಲಿ ಮೂರು ದಬಕ ಮೂರು
ಆರು ಮೂರು ಒಂಬತ್ತು ಲಗು ಕಬ್ಬಿಣವಾಗಬೇಕು ದೊಡ್ಡಮ್ಮ
ಈಗ ಕಬ್ಬಿಣದ ಭಿಕ್ಷಕೆ ಯಾರನ್ನ ಕಳಸಲಿ ಕಂದಾ
ಕಿಡುಗಣ್ಣ ರಾಚಪ್ಪಾಜಿಯಿಂದ ಕಬ್ಬಿಣದ ಭಿಕ್ಷ ಪಡತರಕಾಗದಿಲ್ಲ
ಹೀರೇ ಚನ್ನಮ್ಮಾಜಿಯಿಂದ ಕಬ್ಬಿಣದ ಭಿಕ್ಷ ಪಡತರಕಾಗದಿಲ್ಲ
ಮಡಿವಾಳ ಮಾಚಪ್ಪನಿಂದ ಕೂಡ ಕಬ್ಬಿಣದ ಭಿಕ್ಷ ಪಡತರಕಾಗದಿಲ್ಲ
ಪಲಾರದಯ್ಯನೂ ಕೂಡ ಕಂದಾ
ಕಬ್ಬಿಣ ಪಡತರಕಾಗದಿಲ್ಲ ಮಗಳೆ
ಈಗ ಕಬ್ಬಿಣದ ಭಿಕ್ಷಕೆ ನಾನು
ಯಾರ ಕಳಿಸಬೇಕೆಂದು ಧರೆಗೆ ದೊಡ್ಡವರು
ಉರೀ ಗದ್ದಿಗೆ ಮೇಲೆ ಕೂತಗಂಡು
ಬಾಳವಾಗಿ ಯೊಚ್ನೆ ಮಾಡಿಕಂಡು
ದೊಡ್ಡಮ್ಮಾ ಕಬ್ಬಿಣಾ ತರುವಂತ ಮಗನ ಪಡಕೊಂಡು ಬಂದೀವ್ನಲ್ಲಾ ಕಂದಾ
ಮಳುವಳ್ಳಿ ತಾಲ್ಲೂಕು ಮಾರುವಳ್ಳಿ ಗ್ರಾಮ
ಮಾರುವಳ್ಳಿ ಗ್ರಾಮದಲ್ಲಿ ಬಾಚಿ ಬಸವಯ್ಯ
ತಾಯಿ ಮುದ್ದಮ್ಮಾ
ಅವರ ಹೊಟ್ಟೆಯಲ್ಲಿ ಹುಟ್ಟಿದ ಮಗ ಕಿರೀ ಕೆಂಪಣ್ಣ
ಕೆಂಪಚಾರಿ ಮಗನ ಕಂಡು ಬಂದು
ಕಟಕಟೆ ಕಾಳಿಂಗನ ಗವಿಗೆ ಕೂಡಿಬುಟ್ನಲೋ ಕಂದಾ
ಬಾವಿಗೆ ಕೂಡಿ ಹಾಕಿದ ಮಗ
ಇದ್ದಾನೋ ಕಾಣೆನಲ್ಲ
ಸತ್ತೆ ಹೋದಾನೋ ಕಾಣೆನಲ್ಲ || ಸಿದ್ಧಯ್ಯ ||

ಅವನು ಇದ್ದಾನೋ ಕಂದಾ
ಸತ್ತೇ ಹೋದನೊ
ಗೊತ್ತಿಲ್ಲಾ ಮಗಳೆ
ಆವನೆ ಹಾವೆ ತಿನುಕತ್ತೋ ಕಾಣೇ
ಚವಳೆ ತಿನಕತ್ತೋ ಕಾಣೆ || ಸಿದ್ಧಯ್ಯ ||

ಏನವ್ವಾ ನನ ಕಂದಾ ದುಡುವುಳ್ಳ ದೊಡ್ಡಮ್ಮಾs
ನಾನು ಪಡೆದುಕೊಂಡು ಬಂದ ನನ ಮಗ ಕೆಂಪಣ್ಣಾ
ಹನ್ನೆರಡು ವರ್ಷದಲ್ಲಿ ಅವನ ಕಾಳಿಂಗನ ಗವಿಗೆ ಕೂಡಿಬುಟ್ಟು ಬಂದನಲ್ಲಾ ಕಂದಾ
ಹನ್ನೆರಡು ವರ್ಷದಿಂದ ಮರೆತು ಹೋದನಲ್ಲೋ ಕಂದಾ

ಅವ್ವಾ ನಾನು ಪಡೆದ
ಮಗನು ಏನು ಆದನೋ ಕಾಣೆ || ಸಿದ್ಧಯ್ಯ ||

ಅವ್ವಾ ನನ ಮಗನು ಕಂದಾ ಏನು ಆದನೋ
ಎಂತು ಆದನೋ ಗೊತ್ತಿಲ್ಲ ಕಂದಾ
ಅವನು ಇದ್ದಾನೋ ಗೊತ್ತಿಲ್ಲ ಕಂದಾ
ಅವನು ಇದ್ದಾನೋ ಕಾಣೆ ಸತ್ತನೊ ಕಾಣೆ
ಹಾವೆ ತಿನುಕೊತ್ತೋ ಚವುಳೆತಿನಕತ್ತೋ
ಗೊತ್ತಿಲ್ಲ ದೊಡ್ಡಮ್ಮಾ

ಅವ್ವಾ ನಾನು ಪಡೆದ ಮಗನು
ಕಂದಾ ಏನು ಆದನೊ ಕಾಣೆ || ಸಿದ್ಧಯ್ಯ ||

ನನ್ನ ಮಗ ಕೆಂಪಣ್ಣ ಏನು ಆದನೋ ಗೊತ್ತಿಲ್ಲ ದೊಡ್ಡಮ್ಮಾ
ಈಗಲೀಗ ಹೇಳಿತೀನಿ ಕೇಳವ್ವ ದೊಡ್ಡಮ್ಮಾ
ಕೊಡೇ ಕಲ್ಲಿನ ಮ್ಯಾಲೆ ನಿಂತಗಬುಟ್ಟು ದೊಡ್ಡಮ್ಮಾ

ನನ್ನ ಕೆಂಪಚಾರಿ ಮಗನ ನೀ
ಕೂಗುಬುಡುವ ಎಂದರಲ್ಲಾ || ಸಿದ್ಧಯ್ಯ ||

ನನ್ನ ಕೆಂಪಣ್ಣನ ನೀ
ಕರಿಯವ್ವ ಎಂದರಲ್ಲಾ || ಸಿದ್ಧಯ್ಯ ||

ನನ್ನ ಮಗನು ಕೆಂಪಣ್ಣನ ಕಂದಾ
ಕರದುಬುಡು ಮಗಳೆ ಕೂಗುಬುಡು ದೊಡ್ಡಮ್ಮಾ
ನನ ಮಗನ ಕರದುಬುಟ್ಟು ಬಾ ಹೋಗು ಮಗಳೆ ಎಂದರು
ಅಣ್ಣಯ್ಯಾ ನೀವು ಪಡೆದುಕೊಂಡು ಬಂದ ಮಗ
ನಿಮ್ಮ ಶಿಶು ಮಗ ನೀವು ಪಡೆದಂತ ಮಗನು

ಅಪ್ಪಾ ನಾನು ಕರೆದರೆ ಗುರುವೇ
ಬಂದನಾ ಮಾಯಗಾರ || ಸಿದ್ಧಯ್ಯ ||

ಅಪ್ಪಾ ನೀವು ಪಡೆದಂತಾ ಮಗನ
ನೀವೇ ಕರೆಯಲೆ ಬೇಕು || ಸಿದ್ಧಯ್ಯ ||

ಕೇಳಪ್ಪಾ ಮಾ ಗುರು ಮಂಟೇದಲಿಂಗಯ್ಯ
ನೀವು ಪಡೆದಾ ಮಗನೂ ನೀವು ಸಾಕಿದ ಮಗನು
ನೀವು ತಕಂಡು ಬಂದಂತ ನಿಮ್ಮ ಮಗ
ನೀವೇ ಕರೀಬೇಕೇ ಹೊರತು ನಾನು ಕರೆದರೆ ಬರೋದಿಲ್ಲ
ಗುರುದೇವ ಎಂದರು ದೊಡ್ಡಮ್ಮಾ
ನನ ಮಗನ ಕರೆಯಾಕೆ ಆಗದಿಲ್ಲವಾ
ನನ ಮಗ ಏನಗಬುಟ್ನೋ ಗೊತ್ತಿಲ್ವಲ್ಲ ಅಂತೇಳಿ ಧರೆಗೆ ದೊಡ್ಡವರು
ರಾಜಬಪ್ಪಗೊಂಡನಪುರದಲ್ಲಿ ಬಿಟ್ಟು ಬುಟ್ಟು ಗುರುದೇವಾ
ಮಗನ ದ್ಯಾನ ಮಾಡಿಕೊಂಡು
ಕೆಂಪಾಚಾರಿ ಮನದಲ್ಲಿ ನೆನಕೊಂಡು
ಮಂಟೇದಸ್ವಾಮಿ ಧರೆಗೆ ದೊಡ್ಡವರು

ಅವರು ಎಲೆಯ ಕುಂದೂರು ಬೆಟ್ಟಕೆ
ಗುಡುಗುಡನೆ ಬರುತಾರೆ || ಸಿದ್ಧಯ್ಯ ||

ಎಲೆಯ ಕುಂದೂರು ಬೆಟ್ಟಕ್ಕೆs
ತಮ್ಮ ಮಗನ ತಾವು ನೆನಕೊಂಡು
ಜಗತ್ತು ಗುರುವು ಧರೆಗೆ ದೊಡ್ಡಯ

ಅವರು ಅಜ್ಜಿನಿಯ ಮೂಲಗಾಣಿ
ಕುಂದೂರುಬೆಟ್ಟ ಹತ್ತುತಾರೆ|| ಸಿದ್ಧಯ್ಯ ||

ಅವರು ಕೊಡೆಯ ಕಲ್ಲಿಗೂ
ಸ್ವಾಮಿ ಓಡಿ ಓಡಿ ಬರುತಾರೆ || ಸಿದ್ಧಯ್ಯ ||

ಗುರುವೆ ಎಲೆಯ ಕುಂದೂರು
ಬೆಟ್ಟಕೆ ಗುರುವು
ಓಡಿ ಓಡಿ ಬಂದು
ಕೊಡೆಯ ಕಲ್ಲಿನ ಮೇಲೆ
ಬಂದು ನಿಂತುಕಂಡು
ಅವರು ಕಾಳಿಂಗನ ಗವಿಯ ಗುರುವೆ
ಕಣ್ಣಾರೆ ನೋಡುತಾರೆ|| ಸಿದ್ಧಯ್ಯ ||

ಎಲೆ ಕುಂದೂರು ಬೆಟ್ಟಕ್ಕೆ ಬಂದು ನನ್ನಪ್ಪಾ
ಕೊಡೆಯ ಕಲ್ಲಿನ ಮೇಲೆ ನಿಂತಗಂಡು
ಜಗಂಜ್ಯೋತಿ ಪರಂಜ್ಯೋತಿ ಪಾತಾಳ ಜ್ಯೋತಿ ಧರೆಗೆ ದೊಡ್ಡವರು
ಕಾಳಿಂಗನ ಗವಿಯ ಕಣ್ಣಿಂದ ನೋಡಿಬುಟ್ಟು
ನನ ಮಗ ಕೆಂಪಣ್ಣ ಇದ್ದನೋ ಕಾಣೆ
ಸತ್ತೋಗುಮುಟ್ಟಿದನೋ ಗೊತ್ತಿಲ್ಲ
ಹಾವಿನ ಬಂದಾನಕೆ ಚವುಳನ ಬಂದಾನಕೆ ಯಮಚವುಳನ ಕಾಟಕ್ಕೆ
ಆ ಮಗನ ತಗಂಡೋಗಿ ಆಕುಬುಟ್ಟಿ
ಆ ಮಗಾ ಕಾಣನಲ್ಲೋ ಸತ್ತಮಗನ ಕೂಗುದರೆ ಫಲವೇನು ಅಂತೇಳಿ
ಧರೆಗೆ ದೊಡ್ಡವರು ಕುಂದೂರು ಬೆಟ್ಟದ ಮೇಲೆ ನಿಂತುಗಂಡು
ಕಟ್ಟೆಕಟ್ಟೆ ಕಾಳಿಂಗನ ಗವಿಯನ್ನು ಕಣ್ಣಿಂದ ನೋಡುತ್ತಿದ್ದರಂತೆ
ಕಾಳಿಂಗನ ಗವಿ ಒಳಗೆ ಕಂದ ಕೆಂಪಣ್ಣಾs
ಹಾವಿನ ಬಂಧಾನದಲ್ಲಿ ಚವುಳಿನ ಬಂಧಾನದಲ್ಲಿ ಕಂದಾ

ಎಡಕೆ ಹೊಳ್ಳಿದನೆಂದರೆ
ನಾಗರ ಹಾವಿನ ಕಾಟ
ಬಲಕೆ ಹೊಳ್ಳಿದನೆಂದರೆ
ಹೆಬ್ಬೆ ಹಾವಿನ ಕಾಟ
ಅಯ್ಯೋ ಇಲ್ಲೆ ಮಲಗತೀನೆಂದರೆ
ಯಮ ಚೇಳಿನ ಕಾಟ
ಈ ಹಾವಿನ ಬಂದಾನ ನಾ
ತಡೆಯಲಾರೆ ಮಾಯಕಾರ || ಸಿದ್ಧಯ್ಯ ||

ಗುರುವೆ ಹಾವಿನ ಬಂದಾನಾ
ಚವುಳಿನಾ ಬಂದಾನಾ
ನಾನು ತಡೆಯನಾರೆ ಅಂತ
ಎಳೆಯ ಕೆಂಪಣ್ಣ
ಆ ಕಾಳಿಂಗನ ಗವಿಯ ಒಳಗೆ
ಮಲಿಕೊಂಡು ನನ್ನ ಕಂದಾ
ಅರವತ್ತಾರು ಗಳಿಗೆ
ಮುವತ್ತುಮೂರು ಟೈಮು
ಅವರು ಧರೆಗೆ ದೊಡ್ಡವರ ಪಾದ
ಹೊತ್ತು ಹೊತ್ತಿಗೆ ನೆನೆಯುತ್ತಾರೆ || ಸಿದ್ಧಯ್ಯ ||

ಧರೆಗೆ ದೊಡ್ಡವರ ಪರಂಜ್ಯೋತಿ ಪಾದವಾs
ಹೊತ್ತು ಹೊತ್ತಿಗೆ ನೆನಿತಾ ಕಂದಾ ಕೆಂಪಣ್ಣ
ಈ ಭೂಮಿಗೂ ದೊಡ್ಡವರ ಸ್ಮರಣೆ ಮಾಡುತ್ತಾ ಮಗು

ಅವನು ಹೆಬ್ಬೆ ಹಾವಾ ತಬ್ಬಿಕೊಂಡು
ಗುಳುಗುಳುನೆ ಅಳುತಾನೆ || ಸಿದ್ಧಯ್ಯ ||

ಗುರುವೆ ಧರೆಗೆ ದೊಡ್ಡವರು
ಮಂಟೇದಲಿಂಗಪ್ಪ
ಕೊಟ್ಟಿರುವ ಗುರುವೆ
ಶಾಪದಲ್ಲಿ ಗುರುವು
ಅವನಿಗೆ ನೆತ್ತಿಯ ಮೇಲೆ
ಮತ್ತಿ ಮರ ಬೆಳೆದಿತ್ತು
ಕಂದ ಹಣೆಯಲ್ಲಿ ಮಗನೆ
ಭಸುಮಾಂಗ ಬೆಳೆದಿತ್ತು
ಅವನ ಎರಡು ಕಣ್ಣುಗಳ ಒಳಗೆ
ಕಡಜ ಮರಿ ಮಾಡಿತ್ತು
ಅವನ ಮೂಗನ ಮೇಲೆ
ಮೂಗುತ್ತ ಬೆಳೆದಿತ್ತು
ಗುರುವೆ ಬಾಯಿನಲ್ಲಿ ದೇವ
ಒಂದುತ್ತವೆ ಬೆಳೆದಿತ್ತು
ಅವನ ಭುಜದ ಮೇಲೆ ಗುರುವೆ
ಬೂರುಗದ ಮರ ಬೆಳೆದಿತ್ತು
ಬೆನ್ನಿನಲ್ಲಿ ಕಂದಾ
ಬಿಲ್ಪತ್ರೆ ಬೆಳೆದಿತ್ತು
ಅವನ ಎರಡು ಕಂಕಳು ಒಳಗೆ
ಹೆಜ್ಜೇನು ಕಟ್ಟಿತ್ತು ಕಂದಾ
ಕಿರುಜೇನು ಕಟ್ಟಿತ್ತು
ಅವನ ಎದೆ ಗೂಡಿನ ವೊಳಗೆ
ನಾಗರಹಾವು ಮರಿ ಮಾಡಿತ್ತು
ಅವನ ಹೊಕ್ಕಳಲ್ಲಿ ದೇವ
ಅವರಳಿಮರ ಹುಟ್ಟಿತ್ತು
ಅವನ ಅಂಗೈಯಿಂದ ಒಳಗೆ
ಅಂಗಲಿಂಗವೆ ಬೆಳೆದಿತ್ತು
ಅವನ ಪಾದದೊಳಗೆ ದೇವ
ಪಾದರಾಕ್ಷಿಯೆ ಬೆಳೆದಿತ್ತು
ಅವರಿಗೆ ಎಪ್ಪತ್ತು ಮಾರುದ್ದ ಜಡೆ
ಹೊಂಬಾಗೊಯಿತಲ್ಲಾ || ಸಿದ್ಧಯ್ಯ ||

ಎಪ್ಪತ್ತು ಮಾರುದ್ದ ಜಡೆಗಳೆಲ್ಲಾ
ಕಾಳಿಂಗನ ಗವಿ ಒಳಗೆ ಕಂದ ಕೆಂಪಣ್ಣಾ
ಹಂಬಾಗಿ ಹರುದುಬಿಟ್ಟಿದ್ದೋ
ಕೈಯಿನ ಉಗುರು ಕಾಲಿನ ಉಗುರು ಕಂದಾ

ಅವನ ಇಪ್ಪತ್ತು ಬೆರಳೆಲ್ಲಾ ಉಗುರು
ಭೂಮಿಗೆ ಹೆಪ್ಪಾಗಿತ್ತಲ್ಲ || ಸಿದ್ಧಯ್ಯ ||

ಕೆಂಪಚಾರಿ ಮಗನಿಗೆ ಇಪ್ಪತ್ತು ಬೆರಳು ಉಗುರುಗಳೆಲ್ಲಾ ಭೂಮಿಗೆ ಹೆಪ್ಪುಗಿದ್ದವಂತೆ
ನೂರಾ ಒಂದು ಹಾವು ಚೆವುಳುಗಳು ಗುರುವು
ಹಾವನ ವಿಷ ಕೆಂಪಾಚಾರಿಗೆ ಏರಕತ್ತು
ಕೆಂಪಾಚಾರಿ ವಿಷ ಹಾವಿಗೇರಿಕೊತ್ತು
ಕಾಳಿಂಗನ ಗವಿಯ ಒಳಗೆ ಕಂದ ಕೆಂಪಣ್ಣಾ

ಅವನು ಹೆಬ್ಬಿಯಾದ ತಬ್ಬಿಕೊಂಡು
ಸುಮ್ಮನೆ ಮಲಗನೆ || ಸಿದ್ಧಯ್ಯ ||

ಅವನು ಹಬ್ಬೆ ಹಾವ ತಬ್ಬಿಕೊಂಡು
ಸುಮ್ಮನೆ ಮಲಿಕಂಡು
ಹಾವುನಾ ಬಂದಾನಾ
ಚೆವುಳಿನಾ ಬಂದಾನಾ
ಹಾವುನಾ ಕಾಟ
ಚುವುಳಿನಾ ಕಾಟ
ನಾಗರಾವಿನ ಕಾಟ
ನಾ ತಾಳಲಾರೆನು ಗುರುವು
ನನ ಮಂಟೇದಲಿಂಗಯ್ಯನ ಪಾದ
ಮಂಡೇದ ಮೇಲೆ ಅರುವಾಗಲಪ್ಪ || ಸಿದ್ಧಯ್ಯ ||

ಮಂಟೇದ ಲಿಂಗಪ್ಪನ ಪಾದ ಗುರುವುs
ಎಂದಿಗೆ ಒದಗತು ಎಂದಿಗೆ ನಾನು ಕಾಣೆನೊ ಅಂತೇಳಿ ಕೆಂಪಣ್ಣಾ
ಹೆಬ್ಬೆ ಹಾವ ತಬ್ಬಿಕೊಂಡು ಕಾಲಿಂಗನ ಗವಿ ಒಳಗೆ ಕಂದಾ
ದುರುಗ್ಯಾನ ಹೊಂಟೋಗಿ ಗುರುಗ್ಯಾನ ಬಂದು ಬುಟ್ಟು
ಗುರುಪಾದವೆ ನನಗೆ ಗತಿ ಬಿಟ್ಟರೆ ನನಗ್ಯಾರು ದಿಕ್ಕಿಲ್ಲ
ಎನುತೇಳಿ ಕೆಂಪಣ್ಣಾ ಕಾಳಿಂಗನ ಗವಿ ಒಳಗೆ ಕಂದಾ

ತಾಯಿಯ ಮರತೋದ
ತಂದೆಯ ಮರೆತೋದ
ಅವನು ಅಣ್ಣ ತಮ್ಮಂದಿರಾ ಕಂದಾ
ಮರತೋದ ನನ ಕಂದಾ
ಅವನು ಹಟ್ಟಿ ದನಾ ಗುರುವೆ
ಕೊಟಿಗೆ ಕುರಿ ದೇವ
ಎತ್ತು ಎಮ್ಮೆನೆಲ್ಲಾ
ಮರತುಗಂಡ ನನ ತಂದೆ
ಅವನ ಮೆನಯಲ್ಲಿರುವಾ
ಹನ್ನೆರಡು ಲಕ್ಷ ಭಾಗ್ಯ ಎಲ್ಲಾನು ಕಂದ
ತೊರಕಂಡ ನನ ಮಗು
ಅಯ್ಯಾ ಧರೆಗೆ ದೊಡ್ಡಯ್ಯ ಗುರುವೆ
ನೀನೆ ಗತಿ ಎಂದನಲ್ಲಾ || ಸಿದ್ಧಯ್ಯ ||

ಗುರುವೆ ಧರೆಗೆ ದೊಡ್ಡಪ್ಪ
ಮಂಟೇದ ಲಿಂಗಯ್ಯ
ಪರಂಜ್ಯೋತಿ ಪಾವನ ಮೂರ್ತಿ
ಅಪ್ಪಾ ನಿನ್ನ ಪಾದವ ನಾನು
ಎಂದೀಗೆ ಕಾಣಲಪ್ಪಾ || ಸಿದ್ಧಯ್ಯ ||

ಮಂಟೇದ ಲಿಂಗಯ್ಯನ ಪಾದs
ಎಂದಿಗೇ ಕಾಣಲಿ ಜಗಂಜ್ಯೋತಿಯವರ ಪಾದ
ಯಾವತ್ತು ನೋಡಲಿ ಅಂತೇಳಿ ಕೆಂಪಣ್ಣ
ಕಾಳಿಂಗನ ಗವಿ ಒಳಗೆ ಮಲಿಕಂಡು
ವಿಧವಿಧವಾದ ದುಃಖಪಡುತ್ತಾ
ವಿಧವಾದ ಸಂಕಟ ಮಾಡುತ್ತ
ಕೆಂಪಾಚಾರಿ ಮಗನು
ಕಾಳಿಂಗನ ಗವಿಯಲ್ಲಿ ಹೆಬ್ಬೆ ಹಾವುನ ತಬ್ಬಿಕಂಡು
ಗುಳುಗುಳು ಕಣ್ಣೀರು ಸುರಿಸಿಕೊಂಡು ಸುಮ್ಮನೇ ಮಲಗಿದ್ದ
ಮಲಗಿರುವಂತ ಕಾಲದಲ್ಲಿ ಗುರುವುs
ಅಲ್ಲಮಪ್ರಭು ಮಂಟೇದಲಿಂಗಪ್ಪ ಪಾತಾಳ ಜ್ಯೋತಿಯವರು
ಕುಂದೂರು ಬೆಟ್ಟದ ಕೊಡು ಕಲ್ಲಿನ ಮೇಲೆ ನಿಂತಕಂಡು
ಈ ಕೆಂಪಾಚಾರಿ ಗೋಳಾಟ ಎಲ್ಲಾನು ಧರೆಗೆ ದೊಡ್ಡವರು
ಕಿವಿಯಾರ ಕೇಳಿದರು
ನನ ಮಗ ಬದುಕವನೆ
ನನ ಮಗ ಸತ್ತಿಲ್ಲ
ನನ ಮಗ ಜೀವ ಸೈತ ಅವ್ನೆ
ನನ ಪಾದ ಎಡಬಿಡದೆ ಬೇಡತವನೆ

ಈಗ ಬೇಡುವಂತ ಮಗನ ನಾ
ಕರೀಬೇಕು ಎಂದರಲ್ಲಾ || ಸಿದ್ಧಯ್ಯ ||

ನನ್ನ ಪಾದವ ಬೇಡುವಾ
ನನ್ನ ಮಗನನ್ನೆ ಗುರುವು
ನಾನು ಕರೆಯಬೇಕು
ಅಂತಾ ಧರೆಗೆ ದೊಡ್ಡವರು
ಮಂಟೇದಲಿಂಗಪ್ಪ
ಮಾಯಕಾರದ ಒಡೆಯ
ಅವರು ಕೆಂಪಾಚಾರಿ ಮಗನ
ಕೂಗಬೇಕು ಎಂದರಲ್ಲಾ || ಸಿದ್ಧಯ್ಯ ||

ಕೆಂಪಾಚಾರಿ ಮಗನು
ಇನ್ನು ಸತ್ತಿಲ್ಲಾ ನನ್ನ ಮಗ ಬದುಕವನೆ
ಈಗ ನನ ಮಗನ ಕರಿಬೇಕು
ನನ ಮಗನ ಕೂಗಬಿಡಬೇಕು ಅನುತೇಳಿ ಜಗಂಜ್ಯೋತಿ ಧರೆಗೆ ದೊಡ್ಡವರು
ಎಳೆಯ ಕೆಂಪಚಾರಿ ಮಗನ ದೇವಾ
ಏನಂತಾ ಕರೀತಾರೆ ಏನಂತಾ ಕೂಗುತರೆ

ಮಗನೆ ಏನಪ್ಪ ನನ ಕಂದಾ
ಏನಲೋ ನನ ಮಗನೆ
ಚಿಕ್ಕವನೆ ಕಂದಾ
ಪುಟ್ಟವನೆ ಮಗನೆ
ಏಳು ವರ್ಷದ ಕಂದಾ
ಎಳೆಯವನೆ ಕೆಂಪಣ್ಣಾ
ನಿನ್ನ ಮಾತೂನು ಕತೆಯ
ಆಡಿದಾ ಮಾತ
ಕೇಳಿ ನನ್ನ ಮಗು
ನುಡಿದಂತ ನುಡಿಗೆ
ಕ್ವಾಪಪಟು ಗಂಡು
ನಾ ತಂದು ನಿನ್ನ
ಗವಿಗೆ ಕೂಡಿದೆ
ನಿಮ್ಮ ತಾಯಿ ತಂದೆ ಮಗನಾಗಿದ್ದರೆ
ಖಂಡಿತವಾಗಿಯೂ ಉಳಿಯದಿಲ್ಲ || ಸಿದ್ಧಯ್ಯ ||

ನಿಮ್ಮ ತಾಯಿ ತಂದೆ ಮಗನು
ನೀ ಆಗಿದ್ದರೆ ನನ್ನ ಕಂದಾ
ಹನ್ನೆರಡು ವರ್ಷದಿಂದಾ
ನೀ ಉಳಿಯತಿರಲಿಲ್ಲ
ಅಯ್ಯೋ ನನ ಕಂದಾ
ನನ್ನ ಗ್ಯಾನ ಮಡಿಕಂಡು
ಬದುಕಿದಿಯಪ್ಪಾ ನನ್ನ ಮಗನೆ || ಸಿದ್ಧಯ್ಯ ||

ಎಳೆಯವನೆ ಮಗನೆ ಚಿಕ್ಕವನೆ ಕಂದಾs
ಏಳುವರ್ಷದ ಕಂದಾ ಕೆಂಪಣ್ಣಾ
ನಿಮ್ಮ ತಾಯಿ ಹೊಟ್ಟೇಲಿ ಹುಟ್ಟಿ
ಸಾಕಿ ಸಲಹಿಸಕ್ಕಂಡಿದ್ದಕ್ಕೆ ಮಗನೆ
ಏಳು ವರ್ಷದ ಮಗನ ತಗಂಡು ಬಂದು
ಕಾಳಿಂಗನ ಗವಿಗೆ ನಿನ ಕೂಡಿ ಬಿಟ್ಟನಲ್ಲೊ ಕಂದಾ
ಕೆಂಪಣ್ಣಾ ಏಳು ವರುಷ ಹನ್ನೆರಡು ವರ್ಷ ನಿನಗೆ
ಹತ್ತೊಂಬತ್ತು ವರ್ಷ ಕೆಳದೋಯ್ತು
ಹತ್ತೊಂಬತ್ತು ವರ್ಷದಿಂದ ಮಗನೆ
ಕಾಳಿಂಗನ ಗವಿವೊಳಗೆ ಹಾವು ಚವಳು ಇದರ ಬಂಧಾನದೊಳಗೆ
ಬದುಕಿ ಬಾಳಿ ಧರೆಗೆ ದೊಡ್ಡಯ್ಯ ಅಂತೇಳಿ ನನ ಗ್ಯಾನಾ ಮಾಡುತೀಯಲ್ಲೋ
ಅಪ್ಪಾ ಧರೆಗೆ ದೊಡ್ಡವರಿಗೆ ನೀ ಮಗನಾಯ್ತೀಯ ಕಂದಾ
ಈ ನರಮಾನವರಿಗೆ ಕಂದ ದೇವ್ರಾಗ್ತೀಯ ಮಗನೆ
ಈ ನರಲೋಕದವೊಳಗೆ ನಿನ್ನ ದೇವ್ರಮಾಡುತೀನಿ
ಕಂದಾ ತಂದೆ ತಾಯಿ ಬಂಧು ಬಳಗ ಎಲ್ಲಾರನೂ ಕಂದ ಕರೆಸೇನಿ

ಈಗ ಸುಖವಾದ ಫಲವ ನಿನಗೆ
ಕೊಡುತೀನಿ ಎಂದರಲ್ಲ || ಸಿದ್ಧಯ್ಯ ||

ಕೆಂಪಣ್ಣ ಈಗ ನಿನಗೆ ಸುಖವಾದ ಫಲ
ಕೊಡತೀನಿ ಕಂದಾ
ಹನ್ನೆರಡು ವರ್ಷದಿಂದ ಬದುಕಿ ಬಾಳಿ
ಹನ್ನೆರಡು ವರ್ಷದಿಂದಾ ನೀನು ಬುದುಕಿ ಬಾಳಿದ್ದೀಯಲ್ಲೋ ಕಂದ
ನಿಮ್ಮ ತಂದೆ ತಾಯಿ ಮಗನಾಗಿ ಹುಟ್ಟಿದ್ದರೆ
ಖಂಡಿತವಾಗಿ ನೀನು ಬದುಕುತಿರಲಿಲ್ಲ ಕಂದಾ
ನನಗೆ ಮಗನಾಗಿ ಇರದರಿಂದ ನೀನು ಉಳಿದಿದೀಯ ಕಂದ
ಕೆಂಪಣ್ಣಾ ನೀನು ಬಾವಿ ಬುಟ್ಟು ನಿನ್ನ ಮುಖವ
ನನಗೆ ತೋರಪ್ಪ ಮಗನೆ || ಸಿದ್ಧಯ್ಯ ||