ಗುರುವೆ ಸಿದ್ಧಪ್ಪಾಜಿಯವರು
ವಡೆದಂತ ಏಟುಗೆ
ಅವಳಿಗೆ ಮೈ ಉರಿ ಬಂದು ಬುಡ್ತು
ಮೈ ಜ್ವಾಲೆ ಬಂದು ಬುಡ್ತು
ಅಯ್ಯೋ ಉರಿಯೋ ಉರಿಯೇ ಅಂತ
ತೈ ತೈನೆ ಕುಣಿಯುತಾಳೆ|| ಸಿದ್ಧಯ್ಯ ||

ಅವಳು ಮೇಲ್ಕೆ ಹಾರುತಾಳೆ
ಭೂಮಿ ಅಗಲ ಬೀಳುತಾಳೆ || ಸಿದ್ಧಯ್ಯ ||

ಮೇಲಕ್ಕೆ ಹಾರೂದು
ಭೂಮಿಗೆ ಬಿಳೋದು ಮಾರಮ್ಮs
ಅಯ್ಯೋ ಗುರುದೇವ ಅಯ್ಯೊ ನನ್ನಪ್ಪ
ನನ್ನ ಉರಿ ಜ್ವರ ತಾಳನ್ನಾರ್ನಲ್ಲೊ
ನಾನು ತಡಕನಾರ್ನಲ್ಲ ಗುರುವು
ನೀವು ಯಾರಪ್ಪ ಎಂತ ಗುರುದೇವ
ನಿಮ್ಮ ತಿಂತೀನಿ ಅಂತ ಬಂದು
ಇಂತ ಕಷ್ಟಕ್ಕೆ ಗುರಿಯಾಗ್ಬುಟ್ನಿಲ್ಲಪ್ಪ ಎಂದರು
ಮಾರಮ್ಮ
ನಾನು ಯಾರು ಅಂತ ತಿಳ್ಕಂಡೆ
ಧರೆಗೆ ದೊಡ್ಡವರ ದತ್ತುಮಗನ
ನೀಲಿ ಸಿದ್ದಪ್ಪಾಜಿ
ಈಗಲೀಗ ರಾಚಪ್ಪಾಜಿಯವರು ತಂದೆ
ದೊಡ್ಡಮ್ಮ ತಾಯಿ ಮಗ ಅನ್ನೋದು ಗೊತ್ತಾಗ್ಲಿಲ್ವ ಕಂದಾ ಎಂದರು
ಗುರುದೇವ
ನನ್ನ ಉರಿ ಜ್ವರ ತಕ್ಕಬುಡಿ ಬುದ್ದಿ
ನನ್ನ ಉರಿ ಜರ ನೀವು ತಗ್ದುಬುಟ್ರೇ

ಅಪ್ಪೋ ನೀವು ಹೇಳ್ದಂಗೆ ನಾನು
ಕೇಳ್ತುನಿ ಎಂದಾಳಲ್ಲ || ಸಿದ್ಧಯ್ಯ ||

ನೀವು ಹೇಳುದಂಗೆ ನಾನು
ಕೇಳ್ತಿನಿ ನನ್ನ ಗುರುವೆ
ನೀವು ತೋರಿದಂತ ಮನೆಗೆ
ನಾ ಹೋಯ್ತೀನಿ ನನ್ನಪ್ಪ
ನಿಮ್ಮಪ್ಪ ಕೈ ಆಳು ಆಗಿ ನಾನು
ಹಿಂದಿಂದೆ ಬರುವುತಿನಿ || ಸಿದ್ಧಯ್ಯ ||

ನಿಮಗೆ ಕೈಯಾಳಾಗಿ
ಹಿಂದಿಂದೆ ಬರ್ತಿನಿ ನನ್ನಪ್ಪ
ನನ್ನ ಉರಿ ಜರ ತಕ್ಕಬುಡಿ ಗುರುದೇವ ಎಂದರು
ಮಾರಮ್ಮ
ಉರಿಜರ ತಕ್ಕಬೇಕ
ಆಗಲೀ ನನ್ನ ಕಂದ
ನಾನು ಕರ್ದಗಳಗೇಲಿ ಬರಬೇಕು
ಕೂಗ್ದ ಶಬ್ದದಲ್ಲೆ ಬಂದ್ಬುಡಬೇಕು
ಬಂದ್ಬುಡ್ತುನಿ ನನ್ನಪ್ಪ
ಮುತ್ತುನ ಜೋಳಿಗ್ಗೆ ಕೈ ಹಾಕಿ
ಕಪ್ಪು ದೂಳ್ತ ತಗ್ದು ಬಲಗೈಲಿ ಇಡ್ಕಂಡು
ಧರೆಗೆ ದೊಡ್ಡೋರ ಪಾದ ನೆನ್ಕಂಡು ಸಿದ್ದಪ್ಪಾಜಿ
ಮಾರಮ್ಮನ ಮೇಲೆ ಕಪ್ಪು ದೂಳ್ತ ಉರ್ಬುದ್ರು
ಉರಿ ಜರ ಹೋಗಿ
ಶೀತಾಳೆ ಮಡುವಾಗಿ
ಸಂತೋಷದಲ್ಲಿ ಮಾರಮ್ಮ ನಿಂತ್ಕಂಡು
ಗುರುದೇವ
ಈಗಲೀಗ ನೀವು ಹೇಳ್ದ ಮಾತ ಕೇಳ್ತಿನಿ

ಈ ಹಲಗೂರು ಪಂಚಾಳಗೇರಿಯ
ಏಳು ಬೀದಿ ತೋರುಸ್ತೀನೀ || ಸಿದ್ಧಯ್ಯ ||

ಗುರುವೆ ಏಳೇಳು ಬೀದಿಯ ನಾ
ತೋರ್ತಿನಿ ನನ್ನ ಗುರುವೆ
ಬಿನ್ನಿ ನನ್ನಪ್ಪ
ತಂದೆ ನನ್ನ ಗುರುವು
ಎನತೇಳಿ ಮಾರಮ್ಮ
ಗುರುವೆ ಸಿದ್ದಪ್ಪಾಜಿಯವರು
ಮುಂದಮುಂದೆ ಬುಟ್ಟಗಂಡು
ಅಯ್ಯಾ ಪಾಳೆಗಾರ್ರ‍ ಅರಮನೆಗೆ
ಕರ್ಕಂಡು ಬರುತಾಳೆ || ಸಿದ್ಧಯ್ಯ ||

ಗುರವೆ ಪಾಳೇಗಾರರು ಗುರುವೆ
ಏಳು ಜನ ದೊರೆಗೋಳ
ಬೀದಿ ಒಳಗೆ ಗುರುವು
ಮಾರಮ್ಮ ನನ್ನ ಗುರುವೆ
ಕರ್ಕಂಡು ಬರುವಾಗ
ಗುರುವೇ ಬಳೆಗಾರನಾಗಿ
ನನ್ನ ನೀಲಿ ಸಿದ್ದಪ್ಪಾಜಿ
ಅಕ್ಕ ಬಳೆಕನಕ್ಕ ಬಳೆಕನರವ್ವ
ಹಾಗಂದು ನನ್ನ ಗುರುವು
ಅವ್ನು ಬಳೆಬಳೆ ಎನ್ನುತೇಳಿ
ಮೂರು ಸಲ ಸಾರುತಾನೆ || ಸಿದ್ಧಯ್ಯ ||

ಏಳು ಮಂದಿ ದೊರೆಗಳ ಮನೆ ಮುಂಭಾಗದಲ್ಲಿ
ಬಳೆಕನಕ್ಕ ಬಳೆಕನಕ್ಕ
ಈಗಲೀಗ ಬಳೆ ತಂದಿವ್ನಿ
ಯಾರ್ಯಾರು ತೋಡ್ಗರಮ್ಮ ಎನತೇಳಿ
ಬಳೆ ಬಳೆ ಎನತೇಳಿ ಸಿದ್ದಪ್ಪಾಜಿಯವರು
ಮೂರು ಸಲ ಕೂಗುದ್ರು
ಮೂರು ಸಲ ಕೂಗುವಾಗ
ಏಳುಜನ ದೊರೆಗೊಳ ಮಡ್ದೀರು ದೇವ
ಏಳು ಮಂದಿ ದೊರೆಸಾಣಗಿತ್ತೀರು
ಮೇಲು ಮಾಡಿ ಒಳಗೆ
ಸಾಲು ಸಾಲಾಗಿ ಕೂತ್ಗಂಡು
ಸರಸ ವಿನೋದದ ಮಾತಾಡ್ತಿದ್ರಂತೆ
ಬಳೆಯೆನ್ನುವಂತ ಶಬ್ದ ಕೇಳ್ಕಂಡು
ಏಳು ಜನ ದೊರೆ ರಾಣೀರು

ಅವರು ಮೇಲು ಮಾಡೀಲಿ ನಿಂತ್ಗಂಡು
ಸಿದ್ದಪ್ಪಾಜಿ ನೋಡುತಾರೆ || ಸಿದ್ಧಯ್ಯ ||

ಗುರುವೆ ಸಿದ್ದಪ್ಪಾಜಿಯವರ
ಕಣ್ಣಾರ ನೋಡ್ಕಂಡು
ಏಳು ಜನ ದೊರೆಸಾನಿರು
ಗುರುವೆ ಗುರುದೇವ
ಅಕ್ಕ ಯಾವುನೋ ಬಳಗಾರ
ಯಾವುನೋ ಬಳೆಯವನೂ
ನಮ್ಮ ಊರಿಗೆ ಬಂದವನೆ
ಅಕ್ಕ ಬಳೆ ಬಳೆ ಅಂತ
ಭೂಮಿಲಿ ಸಾರ್ತವನೆ
ಈ ಬಳ್ಗಾರನ ನೋಡುದ್ರೆ
ಹೆಗ್ಯಾಂಗೋ ಕಾಣುತಾನೆ || ಸಿದ್ಧಯ್ಯ ||

ಬಳೆಗಾರನ ನೋಡುದ್ರೆ ಅಕ್ಕಯ್ಯಾ
ಹೆಂಗ್ಯಾಂಗೋ ಕಾಣ್ತಾನೆ ಕನ್ರಕ್ಕ
ಇವನು ಸೂರ್ಯನಾಗೆ ಸುಳಿತಾನೆ
ಚಂದ್ರನಾಗೆ ಹೊಳಿತಾನೆ
ಸುಂದರವಾದ ಪುರುಷ
ಬಳೆ ತಕ್ಕಂಡು ಬಂದವನೆ ಕನ್ರಮ್ಮ

ಅಕ್ಕ ಇವನೆ ಎಷ್ಟು ಚಂದಾಗವನೆ
ಇವನ ಬಳೆ ಎಂಗೆ ಇದ್ದವೋ ಕಾಣೆ|| ಸಿದ್ಧಯ್ಯ ||

ಇವನೇ ಇಷ್ಟಾ ಚಂದಾಗಿ ಕಾಣಿಸ್ತನಲ್ಲಮ್ಮ
ಇವನು ತಂದಿರುವಂತ ಬಳೆ ಎಷ್ಟು ಚಂದಾಗಿರಬಹುದು ಎನತೇಳಿ
ಬಳೆಗಾರ ಸಿದ್ದಪ್ಪಾಜಿಯವರ ಕಣ್ಣಿಂದ ನೋಡುಬುಟ್ಟು
ಏಳು ಜನ ದೊರೆಸಾಣಗಿತ್ತೀರು
ಅವರು ಏಳುಜನ ಗೌಡೀರ
ಪ್ರೇಮದಲ್ಲಿ ಕರ್ದರಲ್ಲೋ || ಸಿದ್ಧಯ್ಯ ||

ಅಮ್ಮ ಕೇಳಮ್ಮ ಗೌಡಿರೇ
ಕೇಳ್ರಮ್ಮ ದಾಸೀರೆ
ಈ ಭೂಮಿ ಮೇಲೆ ಇವನು
ಬೀದಿಲಿ ಹೋಯ್ತಾವನೆ
ಯಾವನೊ ಬಳೆಗಾರ
ಆ ಬಳ್ಗಾರನ ಕರೀರಮ್ಮ
ಬಳೆಯನ್ನೆ ನೋಡಬೇಕು || ಸಿದ್ಧಯ್ಯ ||

ಬಳೆಗಾರ್ನ ಕರಿರಮ್ಮ ಬಳೆಯನ್ನು ನೋಡಬೇಕು ಎಂದರು
ಆಗ ಏಳು ಜನ ಗೌಡೀರು
ಬಳೆಗಾರ ಬಳೆಗಾರ ಎನತೇಳಿ ಸಾರಿಕ್ಕಂಡು
ಸಿದ್ದಪ್ಪಾಜಿಯವರ ಬಳಿಗೆ ಓಡಿಬಂದು
ಬಳ್ಗಾರ ನಮ್ಮ ದೊರೆಸಾನಿಗಿತ್ತೀರು ಕರಿತಾವರೆ
ಬಳೆ ತೋಡುವೆ ಬಯ್ಯಾ ಎಂದರು

ಗುರುವೆ ಬಾರದ ಪಾವಾಡಕ್ಕೆ
ಬಂದು ಒದಗು ಮಾಯಿಕಾರ || ಸಿದ್ಧಯ್ಯ ||

ಗುರುವೆ ಎಲ್ಲಿರುವೆ ಮಾಯಿಕಾರ
ಒದಗಿ ಬಪ್ಪಾ ಪರಂಜ್ಯೋತಿ || ಸಿದ್ಧಯ್ಯ ||

ಗುರುವೆ ಎಲ್ಲಿ ಇರುವಿರೀ ನನ್ನ
ಧರೆಗೆ ದೊಡ್ಡಯ್ಯ
ಮಂಟೇದ ಲಿಂಗಪ್ಪ
ಹಾಗಂದು ಗುರುವು
ನೀಲಿ ಸಿದ್ದಪ್ಪಾಜಿ
ಅಯ್ಯಾ ಏಳು ಜನ ಗೌವಡೀರ
ಮುಂದುಮುಂದೆ ಮುಟ್ಗಂಡು
ಹಿಂದಿಂದೆ ನನ್ನ
ಸ್ವಾಮಿಒ ಬರುವಾಗ

ನನ್ನ ದೊರೆ ಮಗನ ಮೇಲೆ ನಿನ್ನ
ದುರಬಿದೃಷ್ಟಿ ಇರಲಪ್ಪ || ಸಿದ್ಧಯ್ಯ ||

ನೀವು ಪಡೆದ ಮಗ ನಾನು ದೇವs
ನೀವು ಸಾಕಿದ ಮಗನ ನಾನು ಗುರುವು
ಈಗ ದೊರೆಸಾನಗಿತ್ತೀರ ಬಳಿಗೆ ನಾನು
ಹೋಯ್ತಿನಿ ತಂದೆ

ಅಪ್ಪ ನಿನ್ನ ಕರುಣ ನನ್ನ
ಮಂಡೆ ಮೇಲೆ ಒದಗಲಪ್ಪ || ಸಿದ್ಧಯ್ಯ ||

ಗುರುವೆ ನಿಮ್ಮ ಕರುಣ
ನನ್ನ ಮಂಡೆ ಮೇಲೆ ಗುರುವು
ಒದಗಲಿ ಎನತೇಳಿ
ನೀಲಿ ಸಿದ್ದಪ್ಪಾಜಿ
ಧರೆಗೆ ದೊಡ್ಡೋರ ಪಾದ
ಮನದಲ್ಲಿ ನೆನೆಯುತ್ತ
ದೊರೆಸಾನಿರ ಮನೆಗೆ ನನ್ನ
ದೇವರು ದಯಮಾಡುತಾರೆ || ಸಿದ್ಧಯ್ಯ ||

ಏಳು ಜನ ದೊರೆಸಾನಿರ ಬಳಿಗೆ
ಏಳು ಜನ ಗೌಡೀರು ಕರ್ಕಂಡು ಬಂದೂ
ಸಿದ್ದಪ್ಪಾಜಿಯವರ ನಿಲ್ಲಿಸಿದ್ರು
ದೊರೆಸಾನಿಗಿತ್ತೀರೆ
ಈ ಬಳ್ಗಾರ್ನ ಕರ್ಕಂಡು ಬಂದಿವಿ ಕಂಡ್ರಮ್ಮ ಅಂದ್ರು
ಏಳು ಜನ ಗೌಡೀರು ದೇವಾs
ಇಂತ ಬಳ್ಗಾರನ ಕಣ್ಣಾರ ನೋಡು ಬುಟ್ಟೂ ಗುರುವು
ಏಳು ಜನ ದೊರೆಸಾನಿರು ಏನು ಮಾತಾಡ್ತರೆ ಅಂದ್ರೆ

ಅಕ್ಕ ಬಳ್ಗಾರ ನೋಡಿದರೆ
ಬಹಳ ಚಂದ ಕಾಣುತಾನೆ || ಸಿದ್ಧಯ್ಯ ||

ಈ ಬಳ್ಗಾರ ನೋಡುದ್ರೆ ಅಕ್ಕಯ್ಯಾ
ಎಷ್ಟೂ ಸುಂದರವಾಗಿ ಕಾಣ್ತಾನೆ ನೋಡ್ರಮ್ಮ
ಅಕ್ಕಯ್ಯಾ
ಈ ಬಳ್ಗಾರ ಬಹು ಚೆನ್ನಾಗವನೆ ಕನ್ರಮ್ಮ
ಎನತೇಳಿ ಏಳು ಜನ
ದೊರಸಾನಗಿತ್ತೀರು ಮಾತಾಡ್ಕಂಡು
ಏನಯ್ಯಾ ಬಳ್ಗಾರ
ಈಗಲೀಗ ಬಳೆ ಬಳೆ ಅನತೇಳಿ
ರಾಜ ಬೀದಿ ಒಳಗೆ ಸಾರ್ಕಂಡು ಹೋಯ್ತಿಯಲ್ಲ
ನಮ್ಮ ದೊರಗೊಳು
ನಮ್ಮ ಕೈಗೆ ತೊಟ್ಟಿರುವಂತ ಬಳೆ ನೋಡು
ನಾವು ತೊಟ್ಟಿರ್ತಕ್ಕಂತ ಬಳೆ ಮುತ್ತು ರತ್ನುದ ಬಳೆ
ನಮ್ಮ ಬಳೆಗಿಂತ ನಿನ್ನ ಬಳೆ ಎಷ್ಟು ಚನ್ನಾಗಿರಬಹುದು

ನಿನ್ನ ಬಳೆಯ ತೋರ್ಸು ನಾವು
ನೋಡಾಬೇಕು ಎಂದರಲ್ಲ || ಸಿದ್ಧಯ್ಯ ||

ನಿನ್ನ ಬಳೆ ತೋರ್ಸುಬುಡು ಕಣ್ಣಿಂದ ನೋಡ್ತುವಿ ಎನತೇಳಿ
ದೊರೆಸಾನಿರು ಕೇಳ್ತರೆ
ಸಿದ್ದಪ್ಪಾಜಿಯವರು
ಏಳುಜನ ದೊರೆಗಳ ಮುಂಗೈಲಿರ್ತಕ್ಕಂತ
ಮುತ್ತು ರತ್ನದ ಬಳೆ ಕಣ್ಣಿಂದ ನೋಡುಬುಟ್ಟು
ಅಕ್ಕಯ್ಯಾ ನನ್ನ ಬಳೆ ತೋರ್ಸು ಅಂದು ಕೇಳ್ತಿರಲ್ಲ
ನೀವು ನಿಮ್ಮ ನಿಮ್ಮಪತಿಗಳು ತೊಡ್ಸಿರುವಂತ ಬಳಿ
ನಿಮಗೆ ಸುಂದರವಾದ ಬಳೆಯಲ್ಲ ಕನ್ರಕ್ಕ
ಇವು ಮುತ್ತು ರತ್ನುದ ಬಳೆ ಕನ್ರವ್ವ
ಈ ಮುತ್ತು ರತ್ನುದ ಬಳೆಯನ್ನೆ ಮುಂಗೈಗಟ್ಟ ತೋಟ್ಕದಿರೀ
ತೊಟ್ಟಿದ್ರು ನಿಮ್ಮಗೆ ಫಲವಿಲ್ಲ
ನೀವು ತೊಟ್ಟಿರುವಂತ ಬಳೆ ನೋಡದ್ರೆ
ನಿಮ್ಮ ಗಂಡದಿರು

ಇದ್ರು ಮುಂಡೇರುಕ್ಕವ್ವ
ಸತ್ತೋದ್ರು ಮುಂಡೇರುಕವ್ವ|| ಸಿದ್ಧಯ್ಯ ||

ನೀವು ತೊಟ್ಟಿರುವಂತ
ಬಳೆಯನ್ನೆ ನೋಡಿದ್ರೆ
ಕೇಳಿ ಅಕ್ಕದಿರೇ
ನಿಮ್ಮ ಗಂಡದಿರು ಇದ್ದರೂವೆ ನೀವು
ಮುಂಡೆರಾಗೆ ಕಾಣುತೀರಿ|| ಸಿದ್ಧಯ್ಯ ||

ಏನರಕ್ಕ ಬಳೆಗಾರ ಎಂತ ಮಾತನ್ನಾಡದ
ನಮ್ಮ ಗಂಡದಿರು ತೊಡ್ಸಿರುವಂತ ಮುತ್ತು ರತ್ನುದಂತ ಬಳೆ
ನಮ್ಮ ಮುತ್ತೈದೆ ಸ್ಥಾನಕ್ಕೆ ಲಕ್ಷಣವಾದ ಬಳೆಯೆ ಅಲ್ಲವಂತೆ
ಈಗಲೀಗ ನಮ್ಮಗೆ ಗಂಡಿದಿರು ಇದ್ರುಕೂಡ
ಈ ಬಳೆಗಳು ತೊಟ್ಟಿರೂದು
ನೋಡುದ್ರೆ ನಾವು ಮುಂಡೆರಂಗೇ ಕಂಡಿವಂತೆ
ಹೇ ಬಳೆಗಾರ
ಈಗ ನಾವು ಮುತ್ತು ರತ್ನುದ ಬಳೆ ತೊಟ್ಟಿರುವುದಕ್ಕೆ
ಮುಂಡೆರಂಗೆ ಕಾಣ್ತೀರಿ ಅಂತ ಕೇಳ್ದಿಯಲ್ಲ
ನಿನ್ನ ಬಳೆ ತೊಟ್ಟಿದ್ರೆ ನಾವು ಹೆಂಗೆ ಕಂಡೆವು?
ಅಕ್ಕಯ್ಯ
ನಾವು ತಂದಿರುವಂತ ಬಳೆ ನೀವು ತೊಟ್ಟಿದ್ದಾದರೆ

ನೀವು ಮುಂಡೇರು ಆಗುದಿಲ್ಲ
ಮುತ್ತೈದೆರಂಗೆ ಕಾಣುತಿರೀ || ಸಿದ್ಧಯ್ಯ ||

ನೀವು ತೊಟ್ಟಿರುವಂತ ಬಳೆ ನೋಡುದ್ರೆ
ಈಗಲೀಗ ಮುಂಡೆರಂಗೆ ಕಾಣ್ತಿರಿ
ನಾನು ತೋಡುವಂತ ಬಳೆ ನೀವು ತೊಡಗಂಡರೆ
ನೀವು ಮುತ್ತೈದೆರಂಗೆ ಕಾಣ್ತಿರಿ ಕನ್ರವ್ವ
ಈಗಲೀಗ ನಾನು ತಂದಿರುವಂತ ಬಳೆ ಅಂದ್ರೆ ಅಕ್ಕಯ್ಯ
ಮುತ್ತೈದೆ ಸ್ಥಾನಕ್ಕೆ ಲಕ್ಷಣವಾದ ಬಳೆ
ನೀವು ತೊಟ್ಟಿರುವಂತ ಬಳೆ ಅಂದ್ರೆ
ಈಗಲೀಗ ನಿಮ್ಮ ಗಂಡದಿರು ಸತ್ತ ಕಾಲದಲ್ಲಿ ಅಕ್ಕಯ್ಯ
ಈ ಮುತ್ತು ರತ್ನುದ ಬಳೆ ತಕ್ಕಡೋಗಿ
ನಿಮ್ಮ ಗಂಡದೀರು-ಸಮಾದಿ ಮೇಲೆ ಒಡುದ್ರೆ
ಒಡ್ಡೋಗೋದಿಲ್ಲ ಅವು ತಗ್ಗೋಯ್ತದೆ
ನಿಮ್ಮ ಗಂಡದೀರು ಸತ್ತುರುವೆ ಅವರು ಸ್ವರ್ಗ ಸೇರದಿಲ್ಲ

ಅವರು ದೆವ್ವ ಗಾಳಿ ಆಗುತ್ತಾರೆ
ಸ್ವಪ್ನಕ್ಕೆ ಬರುವುತಾರೆ || ಸಿದ್ಧಯ್ಯ ||

ನಿಮ್ಮ ಗಂಡದಿರು ಅಕ್ಕ
ಸತ್ತಕಾಲದ ಒಳಗೆ
ಈ ಬಳೆಗಳ ಒಡೆದಾರೆ
ಅವರ್ಗೇ ಸ್ವರ್ಗ ದೊರೆಯೊದಿಲ್ಲ
ಅವರ್ಗೇ ಮುಕ್ತಿ ದೊರೆಯೊದಿಲ್ಲ
ಅವರು ನರ್‌ಲೋಕದ ಒಳಗೆ
ಗಾಳಿಯಾಗಿ ತಿರ್ಗುತಾರೆ
ಈ ಭೂಲೋಕದ ಒಳಗೆ
ಅವರು ಪಿಚಾಚಿಯಾಗುತಾರೆ
ನೀವು ಬಂದು ಮಲಗಿ
ನೀವು ನಿದ್ರೆ ಮಾಡುವಾಗ
ನಿಮ್ಮ ಸ್ವಪ್ನಕ್ಕೆ ಬಂದು ನಿಮಗೆ
ನಿದ್ರೇ ಭಂಗ ಮಾಡುತಾರೆ || ಸಿದ್ಧಯ್ಯ ||

ನಿಮ್ಮ ಗಂಡದಿರುಸತ್ತ ಮೇಲೆ
ದೈಯ ಗಾಳಿ ಪಿಚಾಚಿ ಪೀಡೆಯಾಗುಬುಡ್ತರೆ
ನೀವು ಊಟ ಮಾಡಿ ನಿದ್ರೆ ಮಾಡುವಾಗ
ಸಪ್ನಕ್ಕಾದ್ರು ಬಂದ್ಬುಡ್ತದೆ ಕನ್ರಮ್ಮ
ಸಪ್ನಕ್ಕೆ ಬಂದು ನಿಮ್ಮಗೆ ನಿದ್ರೆ ಭಂಗ ಮಾಡ್ತರೆ
ಭವ ಬಂಗಾರ ನಿಮ್ಮಗೆ ಕೊಟ್ಟು ಬುಡ್ತರೆ
ಆಗ ಸತ್ತೋದ ಗಂಡದಿರು
ನಮ್ಮ ಸ್ವಪ್ನಕ್ಕೆ ಬರ್ತರಲ್ಲ
ಏನತೇಲಿ ನೀವು ನಾಯಿಯಂಗೆ ನರಳಬೇಕಾಯ್ತದೆ
ಕೋಳಿಯಂಗೆ ಕೊರಗಬೇಕಾಯ್ತದೆ ಕನ್ರವ್ವ
ನಾನು ತಂದಿರ್ತಕ್ಕಂತ ಬಳೆ ಅಂದ್ರೆ
ನಿಮ್ಮ ಗಂಡದಿರು ಸತ್ತ ಕಾಲ್ದಲ್ಲಿ
ಅವರ ಸಮಾಧಿಮೇಲೆ ತಕ್ಕೊಂಡೋಗಿ ಬಳೆನರುಕು ಬುಟ್ಟರೆ
ನುಚ್ಚು ನುಚ್ಚಾಗುಬುಡ್ತದೆ ಕನ್ರವ್ವ

ಆ ಬಳೆ ನುಚ್ಚಾದಂಗೆ ನಿಮ್ಮ
ಗಂಡದೀರು ಸ್ವರ್ಗ ಸೇರುತಾರೆ || ಸಿದ್ಧಯ್ಯ ||

ನಾನು ಸ್ವರ್ಗದ ಬಳೆ ತಂದಿವ್ನಿ
ತೋಟ್ಗಳ್ರವ್ವ ಎಂದಾರಲ್ಲ || ಸಿದ್ಧಯ್ಯ ||

ಸತ್ತ ಗಂಡ್ದಿರು ಸ್ವರ್ಗ ಸೇರುವಂತs
ಸ್ವರ್ಗದ ಬಳೆ ತಂದಿವ್ನಿ ಕನ್ರಕ್ಕ
ಬಳೆ ತೊಟ್ಕರವ್ವ ಎಂದರು
ಅಡ್ಡಮಾತು ಕೇಳ್ಕೊಂಡು
ಏಳುಜನ ದೊರೆಸಾನಿಗಿತ್ತೀರು
ಏನಕ್ಕ
ನಮ್ಮ ಗಂಡ್ದೀರು ತೊಟ್ಟಿರುವಂತ ಬಳೆ ನೋಡದ್ರೆ
ನಮ್ಮ ಗಂಡದೀರ ಪ್ರಾಣ ಹೋದಾಗ
ಸ್ವರ್ಗ ಸೇರೋದಿಲ್ವಂತೆ
ಈ ಬಳ್ಗಾರ ತಂದಿರುವಂತ ಬಳೆ ತೊಟ್ಕಬುಟ್ಟರೆ
ಮುತ್ತೈದೆ ಸ್ಥಾನಕ್ಕೆ ಲಕ್ಷಣವಾದ ಬಳೆಯಂತೆ
ನಮ್ಮ ಪತಿಗಳು ಸತ್ತೋದ್ರೂ ನಾವು ಬಳೆ
ನುರ್ಕಿದೇಟ್ಗೆ ಸ್ವರ್ಗ ಸೇರ್ಕಂಡರಂತಲ್ಲ
ಈ ಬಳ್ಗಾರ ತಂದಿರೂವೆ ನೋಡುದ್ರೆ
ಸ್ವರ್ಗದ ಬಳೆಯಂತೆ ಕನ್ರಮ್ಮ
ಈ ಬಳೆ ತಗದು ನಮ್ಮಗ ತೋರ್ಸು ಎಂದರು

ಅವ್ವಾ ಮುತ್ತು ರತ್ನುದ ಬಳೆಯ
ಗುರುವೆ ಬಿಚ್ಚುಬುಡಿ ಅಕ್ಕಯ್ಯದಿರೋ|| ಸಿದ್ಧಯ್ಯ ||

ಅವ್ವಾ ಮುತ್ತುರತ್ನುದ ಬಳೆಯ
ಬಿಚ್ಚುಬುಡಿ ಅಕ್ಕಯ್ಯಾ
ಈ ಕಳದು ಕಳದು ಗುರುವು
ಬೆತ್ತದ ಮೊರಕ್ಕೆ
ಮಡಗಬೇಕು ಕನ್ರಮ್ಮ
ನಿಮ್ಮ ಬಳೆ ಕಳೆದ ಮ್ಯಾಲೆ ನನ್ನ
ಬಳೆಯ ನಿಮ್ಮಗೆ ತೋರುತಿನೀ || ಸಿದ್ಧಯ್ಯ ||