ಮಲಗಿರುವ ಮಾರಮ್ಮನ ಕಣ್ಣಿಂದಾ ನೋಡಿದ್ರು ದೇವಾs
ರಾಜ ಬಪ್ಪುಗೌಡ್ನ ಪುರಕೆ ಕೈ ಎತ್ತಿ ಮುಗುದು ಸಿದ್ದಪ್ಪಾಜಿ ನೋಡಿದ್ಯಾ
ನಾನು ಮಗಗಿದ್ರು ಕೂಡ
ಈ ಕೆಟ್ಟ ಮಾರಿ ದೃಷ್ಟಮಾರಿ
ಮಠಬುಟ್ಟು ಆಚೆಗೋಗದೆ ಮಲಿಗವನಲ್ಲ ಅನುತೇಳಿ
ಆಗಲೀಗಾ ಗುರುವೇ ಗುರುದೇವಾ
ಈ ಮುಂಡೆ ಮಗನ ತಿಂದು ಬುಡ್ತಿನಿ
ಎನುತೇಳಿ ಮಾರಮ್ಮ ಬರುತ್ತಿರಬೇಕಾದುರೆ
ಮೇಲಕೆ ಎದ್ದು ಸಿದ್ದಪ್ಪಾಜಿ
ಮರಮ್ಮನಿಗಿಂತ ಮೊದಲೆ ನೋಡಿದ್ರು
ಆಗಲೀಗಾ ಏನವ್ವ ಮಾರಿ
ನಾನು ಬೆಳ್ಳಿ ಮೂಡಿ ಬೆಳಕಂಡು ಬರೋಗಂಟ ಮಠಬುಟ್ಟು ಹೊರಗೋಗಿ ಕಾಲಕ್ಕಳದ್ರೆ ಸರಿ ಹೋಯ್ತು
ಇಲ್ಲವಾದ ಪಕ್ಷದಲ್ಲಿ
ನಿನ್ನ ಮೂಗು ಮುಂದಾಲೆ ಉಳಿಯೋದಿಲ್ಲ
ಮೈಯಿನ ಚರ್ಮ ಉಳಿಯೋದಿಲ್ಲ || ಸಿದ್ಧಯ್ಯ ||

ಏನೋ
ನನ್ನ ಮಠ ನನ್ನ ಮನೆ
ನನ್ನ ಮನೆಗೆ ನೀನು ಬಂದು
ಮಠ ಬು‌ಟ್ಟು ಹೊರಗೋಗು ಅಂತ ಕೇಳಿಯಾ
ಕಂಡುವಾಗು ನಿನ್ನ ಬುಡದಿಲ್ಲ ಅಂತ ಏಳಿ
ಸಿದ್ದಪ್ಪಾಜಿಯವರಿಗೆ ಗವಿಯಗಲ ಬಾಯಿ ಬುಟ್ಟುಗಂಡು
ಮಾರಮ್ಮ ಬಂದಳು
ಬಂದಾಮಾರಿಯ ನೋಡಿ

ಎಡಗಾಲಿನಾ ಒಳಗೆ ದೇವಾ
ಜಾಡ್ಸಿ ಒತ್ತ ಒದ್ದಾರಂತೆ || ಸಿದ್ಧಯ್ಯ ||

ಅವಳು ಒದ್ದಂತ ಒತ್ತಕ್ಕೆ ಮಾರಿ
ನಡು ಬೀದಿಲಿ ಬಿದ್ದಳಲ್ಲ|| ಸಿದ್ಧಯ್ಯ ||

ಗುರುವೆ ನಡುಬೀದಿ ಒಳಗೆ ತಾಯಿ
ಒಂದು ಬಿದ್ದೋವಳು

ಈ ಕೆಟ್ಟ ಮುಂಡೆ ಮಾರಿ
ಮಠವ ಬುಟ್ಟು ಈಗ
ಹೊರಟೋದ್ಲು ಎನುತೇಳಿ
ಅಯ್ಯಾ ಮಾರಿಯ ಮಠದಲ್ಲಿ
ಸಿದ್ದಪ್ಪಾಜಿ ಒರಗುವರೆ || ಸಿದ್ಧಯ್ಯ ||

ಏನ್ರಣ್ಣ ಏನಿರಣ್ಣ
ಕಾ ಕೋಳಿ ಕೂಗುಬುಡ್ತು ಲೋಕ ಬೆಳಗಾಗಿ ಬುಡ್ತು ಕನ್ರೋ
ಈ ಜಂಗಮ
ಮಾರಿ ಬಾಯಿಗೆ ತುತ್ತಾಗಿದ್ದನೋ ಕಾಣೆ
ಇಲ್ಲಾವಾದ್ರೆ ಬದುಕಿ ಇದ್ದಾನೋ ಗೊತ್ತಿಲ್ಲ ಕನ್ರಣ್ಣ
ಬನ್ನಿಬನ್ನಿ ಎನುತೇಳಿ
ಏಳುಜನ ದೊರೆಗಳು
ಕಾಳಿಕಾದೇವಿ ಮಠಕೆ ಓಡೋಡಿ ಬರುತಿದ್ರು

ಅವರ ಮನೆದೇವತೆ ಮಾರಮ್ಮನವರು
ಬೀದಿಲಿ ಒದ್ದಾಡುವಂತೆ || ಗಂಗಾಧರ ||

ಬೀದಿಲಿ ಬಿದ್ದು ಹೊರಳುವಂತ ಮಾರಿಯ ನೋಡುತಾs
ಏಳುಜನ ದೊರೆಗೊಳು
ಬಾಯಿ ಮೇಲೆ ಕೈ ಮಡಿಕಂಡು
ಆ ಜಂಗುಮ ಎಲ್ಲಿದ್ದಾನೋ ಎನುತೇಳಿ ಕಾಳಕಾದೇವಿ ಮಠಕ್ಕೆ ಬರುವಾಗ

ನೀಲಗಾರ್ರ‍ ಗಂಡ
ನೀಲಿಸಿದ್ದಪ್ಪಾಜಿ
ಅಯ್ಯಾ ಮೂಡಲಾಗಿ ಗುರುವು
ತಲಿಯಿನಾಕಂಡು
ಪಡುವುಲಾಗಿ ದೇವಾ
ಪಾದವ ನೀಡುಕಂಡು
ಅವರು ಕಾಳಿಕಾದೇವಿ ಮಠದಲ್ಲಿ
ಸುಕಿನಿದುರೆ ಮಾಡುತಾರೆ || ಸಿದ್ಧಯ್ಯ ||

ಎನಿರಣ್ಣಾ
ಒಳ್ಳೆ ಮಾರಿ ಎನುತೇಳಿ
ನಾವು ಮಠದಲ್ಲಿ ಪೂಜೆ ಮಾಡುತಿದ್ದುವಲ್ಲ
ನಮಗೆ ಬೇಕಿದ್ದದಿದ್ದವುನಾ
ಮಠದಲಿ ಬಿಟ್ಟುಬುಟ್ಟು
ಈ ಮನೆದೇವ್ತಿ ಮಾರಮ್ಮ ಬೀದಿಲಿ ಬಿದ್ದವಳಲ್ಲ
ಇವಳು ಜೀವದ ದೇವರು ಅಂತ ಪೂಜೆ ಮಾಡುತ್ತಿದ್ದವಲ್ಲ
ಇವಳೆಲ್ಲೋ ಕಲ್ಲು ದೇವರು ಕಣಪ್ಪ

ಈ ಕೆಟ್ಟಾ ಮಾರಿ ಮುಂಡೆಯ ನಾವು
ನೆಚ್ಚಬಾರದು ಎಂದರಲ್ಲಾ || ಸಿದ್ಧಯ್ಯ ||

ಏನಿರಪ್ಪ ಅಣ್ಣದಿರೇ
ಈಗ ನನ್ನ ಗುರು ಮಯಿಮೆ ತಿಳಕಂದ್ರಿಯಪ್ಪ
ನಾನು ಮಾಡದ ಸತ್ಯ ಒಪ್ಪಿಗಂಡ್ರ ಗುರುವು

ನಾನು ಬೇಡಿದ ಭಿಕ್ಷ ಕೊಟ್ಟು ಬುಡ್ರಣ್ಣ
ಹಲಗೂರು ಪಂಚಾಳದವರೆ || ಸಿದ್ಧಯ್ಯ ||

ನನ್ನ ಗುರುವಿಗೆ ಬೇಕಾದ ದಾನ
ಕೊಟ್ಟುಬುಡ್ರಪ್ಪ ಎಂದರಲ್ಲ || ಸಿದ್ಧಯ್ಯ ||

ನಮ್ಮ ಸ್ವಾಮಿಗೆ ಬೇಕಾದ ಭಿಗುಸಾs
ಕೊಟ್ಟು ಬುಡಿ ಅಣ್ಣದುರೆ ಎಂದುರು

ಇವನು ಗಲ್ತಾನೆ ಕನಿರಣ್ಣ
ಇವನು ಬಾಲ ವಿದ್ಯೆಕಾರ
ಆ ಕೇಳಿ ಅಣ್ಣದುರೇ
ಇವನ್ನ ಎಷ್ಟು ಮಾತ್ರಕೂ ನಾವು
ಬುಡಾಬಾರದು ಎಂದರಂತೆ || ಗಂಗಾಧರ ||

ಕೇಳು ಜಂಗುಮs
ನನ್ನ ಮನೆ ದೇವತೆಗೆ ಬೀದಿಗಿಟ್ಟು
ನೀನು ಮಠದಲ್ಲಿ ಮಲಗಿದ್ದಿಯಾ
ಈಗಲೀಗಾ ನಾವು ಈ ಸತ್ಯ ಪ್ರಮಾಣ ಒಪ್ಪದಿಲ್ಲ

ನೀನು ಇನ್ನು ಒಂದು ಸತ್ಯ ನೀನು
ಮಾಡಬೇಕು ಎಂದರಲ್ಲಾ || ಗಂಗಾಧರ ||

ಏನಿರಪ್ಪ ಪಂಚಾಳ ದೊರೆಗೊಳೇ
ಈ ಸತ್ಯ ನೀವು ಒಪ್ಪುದೆ ಹೋದುರೆ
ಇನ್ಯಾವ ಸತ್ಯ ಇನ್ಯಾವ ಪ್ರಮಾಣ ಮಾಡಬೇಕ್ರಪ್ಪ ಎಂದುರು
ಏ ಜಂಗಮಾ
ಯಾವ ಸತ್ಯ ಮಾಡಬೇಕು ಅಂದರೇ
ಈಗಲೀಗಾ ಹೇಳುತೀವಿ ಕೇಳು ಜಂಗಮಾ
ಈಗಲೀಗಾ ಕೈಎಣ್ಣೆ ತರುಸ್ತೀವಿ
ಒಳ್ಳೆಣ್ಣೆ ತರುಸ್ತಿವಿ ತುಪ್ಪ ತರುಸ್ತೀವಿ
ಕೊಪ್ಪರಿಗೆಗೆ ತುಂಬುಸ್ತಿವಿ
ನಾಲಕ್ಕು ದಿಕ್ಕಿನಲಿ
ನಾಲಕು ತಿದಿ ಒತ್ತುತಿವಿ
ಯಾವ ಯಾವ ತಿದಿ ಎಂದುರೆ

ನಾವು ಒಂದು ಕಡೆ ಕೇಳು
ಎಮ್ಮೆ ತಿದಿ ಮಡಗುತೀವಿ
ಒಂದು ಕಡೆ ಕೇಳು
ಕ್ವಾಣನ ತಿದಿ ಮಡಗುತೀವಿ
ಒಂದ ಕಡೆ ನಮಗೆ
ಬೇಕು ಬೇಕಾದ ತಿದಿಯ
ನಾಲ್ಕು ಮೂಲೆಗೂ ಮಡಗುತೀವಿ
ನಾವು ಎಣ್ಣೆ ಕಾಯ್ಸತೀವಿ
ಕಾದಿರುವ ಎಣ್ಣೆಗೆ
ಕರಕಂಡು ಹೊಯ್ತೀವಿ
ನೀನು ಎಣ್ಣಿಗೆ ನೀರು
ಹೋಗಬೇಕು ಪರದೇಸಿ
ನೀ ಎಣ್ಣೆ ಒಳಗೆ ನೀನು
ಮುಳುಗಬೇಕು ಜಂಗುಮ
ನೀ ಇಕ್ಕಿರುವ ಊಬತ್ತಿ
ಕೆಟ್ಟು ಹೋಗಬಾರದು
ನಿನ್ನ ಅಣೆಯಲ್ಲಿರುವ ಕಪ್ಪು
ಮಾಸು ಹೋಗು ಬಾರದು
ನೀನು ಮ್ಯಾಲೆ ಗುರುವೆ
ಅಳುತ ಏಳು ಬಾರದು
ನಿನ್ನ ಮೈಯಿನೊಳಗೆ ಈಗ
ಉರಿಯಪ್ಪೆ ಏಳು ಬಾರದು
ನೀನು ಮೂರುಸಲ ಎದ್ದು
ನೀನು ಎಣ್ಣೆ ಕುಪ್ಪರ್ಕೆಯಿಂದ ನೀನು
ಹೊರಗೆ ತಾನೇ ಬರಬೇಕು || ಗಂಗಾಧರ ||

ಅಯ್ಯಾ ಎಣ್ಣೆ ಕೊಪ್ಪರಿಕೆಯಿಂದ
ಹೊರಗಡೆ ನೀನು ಬಂದು ಬುಟ್ಟು ಜಂಗುಮ
ನೀ ಬಿಕುಸುವ ಕೇಳಿದುರೆ

ನಿನ್ನ ಗುರು ಸತ್ಯ ಒಪ್ಪುತೀವಿ
ನಿನ್ನ ಸತ್ಯ ಮೆಚ್ಚುತೀವಿ || ಸಿದ್ಧಯ್ಯ ||

ಏನಪ್ಪ ಜಗನ್ ಜ್ಯೋತಿ ಧರೆಗೆ ದೊಡ್ಡಯ್ಯ
ಈಗಲೀಗಾ ಕಾದಿರುವಂತಾ
ಎಣ್ಣೆಗೆ ನನ್ನ ಬುಟ್ಟರಂತಲ್ಲ ಗುರುವು
ಈ ಕಾದಿರುವಂತ ಎಣ್ಣೆ ಒಳಗೆ ನಾನು ಮುಳುಗಿ
ನಾನು ಹೊರಗೆ ಬರಬಲ್ಲನಪ್ಪ
ನಿನಗೆ ದತ್ತು ಮಗ ನಾನಾಗ ಬಲ್ಲೆನ ಗುರುವು

ಅಪ್ಪ ಎಣ್ಣೆ ಒಳಗೆ ನನ್ನ ಪ್ರಾಣ
ಹೋಗುತಾದೆ ಮಾಯಿಕಾರ || ಸಿದ್ಧಯ್ಯ ||

ಎಣ್ಣೇ ಒಳಗೆ ದೇವಾs
ನನ್ನ ಪ್ರಾಣ ಹೊಯ್ತದೆ ಜಗತ್ತುಗುರು
ಧರೆಗೆ ದೊಡ್ಡಯ್ಯ ಎನ್ನುವಾಗ
ಎದುರುಬ್ಯಾಡ ಕಂದ ಬೆಚ್ಚುಬ್ಯಾಡ ಮಗನೆ ಎನುತೇಳಿ
ಈಗಲೀಗಾ ತೋಪಿನ ದೊಡ್ಡಮ್ಮ ಹಿರಿ ಚೆನ್ನಾಜಮ್ಮ
ಕಿಡಿಗಣ್ಣು ರಾಜಪ್ಪಾಜಿ ಧರೆಗೆ ದೊಡ್ಡಯ್ಯ
ಎಣ್ಣೆಗೆ ಮುಳುಗತೇನಿ ಎಂತೇಳಿ ಮಗನೇ
ಯಾತಕೆ ದುಃಖ ಪಟ್ಟಿಯಪ್ಪ ಸಿದ್ದಪ್ಪಾಜಿ

ಅಪ್ಪ ನಮ್ಮ ಪ್ರಾಣ ಹೋದರು ಕಂದಾ
ನಿನ್ನ ಪ್ರಾಣ ತೆಗಿಯೋದಿಲ್ಲಾ || ಸಿದ್ಧಯ್ಯ ||

ಕಂದಾ ಮಾಡುವಂತ ಸತ್ಯವೆಲ್ಲ
ನಮ್ಮದಾಗಲಿ ಕಂದಾ
ಗೆದ್ದಂತಾ ಬಿರುದೆಲ್ಲ
ನಿನ್ನದಾಗಲಿ ಕಂದಾ
ಅವರು ಹೇಳುವ ಸತ್ಯ ಮಾಡು ಮಗನೆ
ಹಿಂದಿಂದೆ ಬರುವುತೀನಿ || ಸಿದ್ಧಯ್ಯ ||

ಹಿಂದಿಂದೆ ಬರುತೀವಿ ಕಂದಾs
ಅವರು ಹೇಳುವ ಸತ್ಯ ಮಾಡು ಕಂದಾ
ಮಾಡುವಂತ ಸತ್ಯವೆಲ್ಲ ನಮಗಾಗಲಿ ಮಗನೆ ಎಂತೇಳಿ
ಸಿದ್ದಪ್ಪಾಜಿಯವರಿಗೆ ದೇವಾ
ಅರಸಿ ಆಶೀರ್ವಾದ ಮಾಡುವಾಗ
ಕೇಳಿ ಅಣ್ಣರೇ

ನೀವು ಹೇಳದ ಸತ್ಯ ಮಾಡ್ತಿನಪ್ಪ
ಗುರುವಿಗೆ ಭಿಕುಸಾ ನೀಡಿರಪ್ಪ || ಸಿದ್ಧಯ್ಯ ||

ನನ್ನ ಗುರುವಿಗೆ ದಾನ ನೀಡಿರಯ್ಯಾ
ನಮ್ಮ ದೇವರಿಗೆ ಶರಣರಾಗಿರಯ್ಯಾ || ಸಿದ್ಧಯ್ಯ ||

ಕೇಳಿ ಅಣ್ಣದುರೆ ಈ ಮುಂಡೆ ಮಗನ
ಸಗುತಿ ಗಿಗುತಿ ನೋಡ್ರಪ್ಪ
ಈಗಲೀಗಾ ನೀವು ಹೇಳಿದ ಸತ್ಯ ಮಾಡ್ತಿವಿ
ನಮ್ಮ ಗುರುಗೆ ಶಿಷ್ಯರಾಗಿ
ನಾನು ಬೇಡಿದ ಭಿಕ್ಷ ಕೊಡಿ ಅಂತ ಕೇಳ್ತಾನಲ್ಲ

ಇವನಿಗೆ ಎಣ್ಣೆ ಸತ್ಯ ನಾವು
ಮಾಡ್ಸಬೇಕು ಎಂದರಲ್ಲ || ಸಿದ್ಧಯ್ಯ ||

ಅವರು ತಪ್ಪವ ತರುಸವರೆ
ಅವರು ಕೈ ಎಣ್ಣೆ ತುಂಬುಸವರೆ
ಏಳ್ಳೆಣ್ಣೆ ತುಂಬುಸವರೆ
ತಿದಿಯನ್ನೆ ಊಡವರೆ
ತಿದಿಯನ್ನೆ ಒತ್ತವರೆ
ಅವರು ಎಳೆತಿದಿಯ ಒಳಗೆ ದೇವಾ
ಎಣ್ಣೆ ಹಾಲು ಕಾಯ್ಸುತಾರೆ || ಸಿದ್ಧಯ್ಯ ||

ತಿದಿ ಒತ್ತಿ ಎಣ್ಣೆ ಕಾಯ್ಸಿ
ಕಾದಎಣ್ಣೆ ಹೊಗೆ ಆಕಾಸಕ್ಕೆ ಒಯ್ತಿತ್ತು
ತಣನಾ ಮಣನಾ ಮಳ್ಳಗಾಲಿಗೆ ಎಣ್ಣೆ ಮಳ್ಳುತ್ತಿತ್ತು
ಏ ಜಂಗುಮಾ
ಈಗ ಎಣ್ಣೆಕಾಯ್ಸಿವಿ
ಈಗಲೀಗಾ ನೀನು ಎಣ್ಣೆ ಒಳಕ್ಕೋಗಿ ಮುಳುಗು
ಎಣ್ಣೆಗೆ ಮುಳುಗಿದೇಟಿಗೆ

ಮತ್ತೊಂದು ಕೊಪ್ಪರಿಕೆ
ತಂದು ನಾವು ಮುಚ್ಚುತೀವಿ || ಸಿದ್ಧಯ್ಯ ||

ಆಗಲಿ ಕಣರಪ್ಪ ಆಗಲಿ ಕಣರಣ್ಣ
ಆಗಲಿ ಗುರುವೆ ಎನುತೇಳಿ
ರಾಜಬಪ್ಪಗಣ್ಣ ಪುರಕೆ ಕೈ ಎತ್ತಿಮುಗುದು ಸಿದ್ದಪ್ಪಾಜಿ
ಎಣ್ಣೆಕೊಪ್ಪರಿಕೆ ಸುತ್ತ ಮೂರು ಬಳಸು ಬಂದು
ಬಲ್ದ ಪಾದ ಎತ್ತಿ ಎಣ್ಣೆ ಕೊಪ್ಪರಿಕೆಗೆ ಮಡಗಿದ್ರು
ಧರೆಗೆ ದೊಡ್ಡವರು ಕಪ್ಪು ಧೂಳತ ತಗದು
ಎಣ್ಣೆ ಕೊಪ್ಪರಿಕೆಗೆ ಇಟ್ಟುರು

ಕಾದಿರುವ ಎಣ್ಣೆ ಎಲ್ಲಾ
ತಣ್ಣಿರು ಕ್ವಳ ಆಯಿತಲ್ಲ || ಸಿದ್ಧಯ್ಯ ||

ಕಾದಿರುವಂತ ಎಣ್ಣೆ
ತಣ್ಣೀರು ಕ್ವಳವಾದಂತ ಕಾಲದಲ್ಲಿ ಗುರುವು
ಅಣ್ಣ ಮೇಲೆ ಮುಚ್ಚು ಬುಡ್ರಣ್ಣ
ಕೊಪ್ಪರಿಕೆ ಮುಚ್ಚುರೊ ಎನುತೇಳಿ
ಈಗಲೀಗಾ ಎಳು ಜನ ದೊರೆಗಳು ಬಂದು
ಎಣ್ಣೆ ಕೊಪ್ಪರಿಕೆ ಮುಚ್ಚು ಬುಟ್ಟರು
ಅಣ್ಣಾ
ಈಗ ಜಂಗುಮ ಎಣ್ಣೆ ಒಳಗೆ ಪ್ರಾಣ ಬುಡುತವನೆ
ಎನುತೇಳಿ ಒಬ್ಬದೊರೆ ಹೇಳ್ತಾರೆ
ಅಣ್ಣ ಅವನು ಪ್ರಾಣಬುಟ್ಟು ಎಷ್ಟು ಒತ್ತು ಆಗೋಯ್ತು
ಎನುತೇಳಿ ಒಬ್ಬರು ಹೇಳ್ತಾರೆ
ಆಗಲೀಗಾ ಆರುಗಳಿಗೆ ಮೂರುಗಳಿಗೆ
ಒಂಬತ್ತು ಗಳಿಗೆ ಆಗೋಯ್ತು ಕನ್ರೋ
ಆ ಮುಂಡೆ ಮಗ
ಈಗ ಮಾತ್ರ ಬದುಕಿಲ್ಲಾ
ಈಗಲೀಗಾ ಇದ್ದಿಯೊ ಸತ್ತೋಗಿಬುಟ್ಟಿದ್ದಿಯೊ
ಕಬ್ಬುಣ ಕೇಳಿಯ ಮುಂಡೆ ಮಗನೆ ಎಲ್ಲಿದ್ದಿಯಾ ಎಂದುರು

ಅಣ್ಣ ಸತ್ತೊದ ಅಂತಾ
ಯತೆಯ ಪಡಬ್ಯಾಡಿ
ಚಿಂತೆ ಪಡುಬ್ಯಾಡಿ
ಅಪ್ಪ ಕೊಪ್ಪರಿಕೆ ತಗಿರಪ್ಪ
ಹೋರಗಡೆ ಬರುತೀನಿ|| ಸಿದ್ಧಯ್ಯ ||

ಕೇಳಿರಪ್ಪ ಪಂಚಾಳದ ದೊರೆಗಳೆ
ನಾನು ಬದುಕಿವಿನಿ ಕನ್ರಣ್ಣ
ಈಗಲೀಗಾ ಎಣ್ಣೆಕೊಪ್ಪರಿಕೆ ಮುಸುಕು ತಗಿರಪ್ಪ
ಹೊರೆಗೆ ಬಂದು ಮಾತಾಡ್ತಿನಿ ಎನುತೇಳಿ
ಎಣ್ಣೆ ಒಳಗೆ ಸಿದ್ದಪ್ಪಾಜಜಿಯವರು ಮಾತಾಡುವಾಗ
ಏನ್ರಣ್ಣ
ಎಣ್ಣೆ ಒಳಗೆ ಸತ್ತು ಬಾಳ ಹೊತ್ತಾಯ್ತು ಜಂಗುಮ ಅಂತ ತಿಳಿದಿದ್ದೋ
ಈಗ ಕೊಪ್ಪರಿಕೆ ಮುಸುಕು ತೆಗಿರಿ ಬಂದು ಬುಡ್ತುತೀನಿ ಅಂತಾ ಕೇಳ್ತನಲ್ಲ

ಅಣ್ಣ ಕೊಪ್ಪರಿಕೆ ಮುಸುಕ ನೀವು
ತಗಿಯ ಬೇಡಿ ಎಂದರಲ್ಲ || ಸಿದ್ಧಯ್ಯ ||

ಕೇಳಿರಯ್ಯಾs
ಕೊಪ್ಪರಿಕೆ ಮುಸುಕ ನಾವು ತೆಗಿಬಾರದು
ಅಂತವನಾದ್ರೆ ಅವನೆ ತಕಂಡು ಬರ್ಲಿ ಕನ್ರಣ್ಣ ಎಂದುರು
ಜಂಗುಮ
ಕಬ್ಬುಣ ಬೇಕಾದ್ರೆ
ನಿನಗೆ ನಾವು ಶಿಷ್ಯರಾಗಬೇಕಾದ್ರೆ
ನಾವು ಮುಚ್ಚಿದಂತಾ ಮುಚ್ಚುಳ ತಗದಾಕಿಬುಟ್ಟು
ನೀನೆ ಹೊರಗೆ ಬಾ ಅಂದ್ರು
ಧರೆಗೆ ದೊಡ್ಡಯ್ಯ ಮಂಟೇದಾ ಲಿಂಗಪ್ಪ
ನೀನೆ ಗತಿ ನೀನೇ ಮತಿ ಎನುತೇಳಿ
ಎಣ್ಣೆ ವಳಗೆ ಸಿದ್ದಪ್ಪಾಜಿ ಧರೆಗೆ ದೊಡ್ಡೋರ ಪಾದ ನೆನದ್ರು
ಎಣ್ಣೆ ಕಪ್ಪರಿಕೇಲಿ ಇದ್ದಂತಾ ಮುಸಕು
ದಡ್ಡನೆ ತಗದೋತು ಆಕಾಸಕಾರೋಯ್ತು

ಅದು ಬುಗುರಿ ತಿರುಗಿದಂಗೆ ದೇವಾ
ಬುಗು ಬುಗನೆ ತಿರುಗತಾದೆ || ಸಿದ್ಧಯ್ಯ ||

ನನ್ನ ಸಿದ್ದಪ್ಪಾಜಿಯವರಿಗೆ
ನೆರಳಾಗಿ ನಿಂತಗತ್ತು || ಸಿದ್ಧಯ್ಯ ||

ಸಿದ್ದಪ್ಪಾಜಿಯವರಿಗೆ ನೆರಳಾದಂತ ಕಾಲದಲ್ಲಿ
ನೋಡ್ರಣ್ಣ ಮುಂಡೆಮಗಾ ಜಂಗುಮಾ
ತನ್ನಷ್ಟಕ್ಕೆ ತಾನೇ ಹಾರೊಂಟೋಯ್ತು ಆಕಾಸಕ್ಕೆ
ಆ ಜಂಗುಮನಿಗೆ ನೆರಳಾಗದೆ
ನಾವು ಏಳು ಜನ ದೊರೆಗಳು ಬಿಸಿಲಲ್ಲಿ ನಿಂತಿವಲ್ಲ
ಈಗಲೀಗಾ ಏನು ಮಾಡಬೇಕು ಎಂತು ಮಾಡಬೇಕುರಣ್ಣ
ನಾವು ಹೇಳಿದ ಸತ್ಯವೆಲ್ಲಾನು ಮುಂಡೆ ಮಗ ಮಾಡ್ತಾನೆ ಕನ್ರೊ

ಇವನಿಗೆ ಮಾಡಬಾರ್ದ ಸತ್ಯ ನಾವು
ಮಾಡಬೇಕು ಎಂದರಲ್ಲ || ಸಿದ್ಧಯ್ಯ ||

ಇವನಿಗೆ ಮಾಡಬಾರದು ಸತ್ಯ
ಮಾಡಬೇಕು ಕನಿರಣ್ಣ
ಎಳು ಬಾರದ ಸತ್ಯ
ಇವನಿಗೆ ಏಳಬೇಕು ಕನಿರಣ್ಣ
ಅಣ್ಣ ಕಾದಿರುವ ಕೊಪ್ಪರಿಕೆ
ಎಣ್ಣೆಯ ತಗಿರಯ್ಯ
ಇದಕ್ಕೆ ಇಜ್ಜುಲಾಕಿರಪ್ಪ
ನೆಲ್ಲೋಟು ತಕುಡರಯ್ಯಾ
ಇವನಿಗೆ ನೋಗದ ಗಾತ್ರ ಕಬ್ಬುಣನಾ
ಬೇಗದಲ್ಲಿ ಕಾಯ್ಸ ಬೇಕು || ಸಿದ್ಧಯ್ಯ ||

ಇವನಿಗೆ ನೊಗದ ಗಾತ್ರ ಕಬ್ಬುಣ
ಬೇಗನೆ ಕಾಯಿಸರಯ್ಯಾ
ಬೇಗದಲಿ ಕಾಯ್ಸಿರಪ್ಪ
ಆಗಂತ ನನ ಗುರುವು
ಏಳುಜನ ದೊರೆಗೊಳು
ಅವರು ನೆಲ್ಲೋಟು ಹಾಕವರೆ
ಕಬ್ಬುಣವ ಮಡಗವರೆ
ಇಜ್ಜಲು ಹಾಕವರೆ
ಅವರು ಎಣ್ಣೆ ತಿದಿ ಒಳಗೆ ಬಾ
ಬಗುಬಗುನೆ ಒತ್ತುತಾರೆ || ಸಿದ್ಧಯ್ಯ ||

ಅವರು ಕ್ವಾಣನ ತಿದಿ ಊದಕಂಡು
ಬುಗುಬುಗನೆ ಊದುತಾರೆ || ಸಿದ್ಧಯ್ಯ ||