ಗುರುವೆ ಇಜ್ಜುಲು ಬೆಂಕಿ
ಯಾವು ಪರುಕಾರ ಇರುತದೆ ನನ ಗುರುವೆ
ಅದೆ ಪರುಕಾರ ಕಬ್ಬುಣ ಕಾಯ್ಸವರೆ
ಲೋ ಕೇಳುಲೋ ಜಂಗುಮ
ಕೇಳುಲೋ ಬಿಕುಸುಕಾ
ನಿನ್ನ ಸತ್ಯ ನಾವು ಈಗಾ ಒಪ್ಪಬೇಕಾದರೆ
ನಿನ್ನ ಗುರುದೇವನ ಸತ್ಯವ ನಾವು ಮೆಚ್ಚು ಬೇಕಾದರೆ
ಈ ಕಾದಿರುವ ನೊಗದ ಗಾತ್ರ
ಕಬ್ಬುಣದ ನಿನ್ನ ಹೆಗಲ ಮೇಲೆ ಮಡಗುತೀವಿ

ಈ ಕಬ್ಬುಣದ ಎತ್ತಿಗಂಡು
ನಮಗೆ ಕೈಯ ಮುಗಿಯಬೇಕು || ಸಿದ್ಧಯ್ಯ ||

ಅಯ್ಯಾ ನೊಗದ ಗಾತ್ರ ಕಬ್ಬುಣ
ಹೆಗಲ ಮೇಲೆ ಮಡಿಕಂಡು
ಅಯ್ಯಾ ಎರಡು ಕೈಯನ್ನೆ
ನೀನೆಯೆ ಬಿಡುಬೇಕು
ನಮಗೆ ಹತ್ತ ಬೆರುಳ ಎತ್ತಿ ನೀನು
ಕೈ ಎತ್ತಿ ಮುಗಿಬೇಕು
ನೀನು ಮೂರು ಸುತ್ತು ತಿರ್ಗುಬೇಕು
ನಾವು ಕಾಸಿ ಒರಿಸಿರುವಂತಾ
ನೊಗದ ಗಾತ್ರ ಕಬ್ಬುಣ
ಅದು ಭೂಮಿಗೆ ಒಳ್ಳಬಾರದು
ನಿನ್ನ ಹೆಗಲಲ್ಲೆ ಇರಬೇಕು
ಅದೆ ರೀತಿ ಒಳಗೆ
ಮೂರು ಬಳಸು ನೀನು
ಗರಗರನೆ ಸುತ್ತಿದುರೆ
ಅಯ್ಯಾ ನಿನ್ನ ಸತ್ಯ ಒಪ್ಪುತ್ತೀವಿ
ನಿನ್ನ ಗುರುವಿನ ಸತ್ಯ ಮೆಚ್ಚುತೀವಿ|| ಸಿದ್ಧಯ್ಯ ||

ನಿನ್ನ ಗುರುವಿನ ಸತ್ಯ ಮೆಚ್ಚುತೀವಿ
ಬೇಡಿದ ಬಿಗುಸ ಕೊಡುವುತೀವಿ|| ಸಿದ್ಧಯ್ಯ ||

ಎನಪ್ಪ ಜಗತ್ತುಗುರು ಧರೆಗೆ ದೊಡ್ಡಯ್ಯ
ಹಲಗೂರ ಪಂಚಾಳದ ದೊರೆಗಳ ದೇವಾs
ನಾನು ಸೋಲಿಸಿ ಗುರುವು
ನಿಮಗೆ ಕಬ್ಬುಣ ಭಿಕ್ಷೆ ತಕಂಡುಬಂದು
ನಾನು ಕೊಡೆಬಲ್ಲೆನಪ್ಪ
ಈಗಲೀಗಾ ತೋಪುನ ದೊಡ್ಡಮ್ಮ
ನಿಮ್ಗೆ ಮಗನಾಗಿ ನಾನು
ಹಿಂದಕೆ ಬರಬಲ್ಲನಾ ತಾಯಿ
ಕಿಡುಗಣ್ಣ ರಾಚಪ್ಪಾಜಿ
ಅಪ್ಪ ನನ್ನ ಋಣವು ನಿಮಗೆ
ಇಲ್ಲಿಗೆ ಮುಗುದಿತ್ತು || ಸಿದ್ಧಯ್ಯ ||

ಈ ಪಾಂಚಾಳ ದೇವರ ಬಂಧನವಾ
ತಾಳಲಾರೆ ಧರ್ಮ ಗುರುವೆ || ಸಿದ್ಧಯ್ಯ ||

ನೀವು ಮಾಡುವಂತ ಸತ್ಯ
ನಿಲ್ಲಿಸಿಬುಡಿ ಅಣ್ಣಯ್ಯ
ನಾ ಬೇಡಿದಂತ ಭಿಕ್ಸ
ಕೊಟ್ಟುಬುಡಿ ಅಣ್ಣದೀರೇ
ನಮ್ಮ ಬ್ರಹ್ಮ ಪಂಚಾಳದವರಿಗೇ
ಅಪ್ಪ ಇನ್ನು ಬುದ್ದಿ ಬರನಿಲುವಾ || ಸಿದ್ಧಯ್ಯ ||

ಈಗಲೀಗಾ ಕಬ್ಬುಣ ಕಾಯ್ಸಿ
ಆಗಲೀಗಾ ನೊಗದ ಗಾತ್ರ ಕಬ್ಬುಣ
ಧಗ ದಗನೆ ಕತ್ತಿ ದಿಗುದಿಗುನೆ ಬೇಯುವಾಗ
ಏ ಜಂಗುಮಾ
ಈ ನೊಗದ ಗಾತ್ರ ಕಬ್ಬುಣ ಕಾಯ್ಸಿವಲ್ಲ
ಈ ಕಾದ ಕಬ್ಬುಣದ ಮೇಲೆ
ನಿನ್ನ ದೇವರು ದೈಯ್ಯ ಇದ್ದದಾ
ನಿಮ್ಮ ಗುರು ಇದ್ದಾನಾ
ನಿಮ್ಮ ಸತ್ಯ ಇದ್ದಾದಾ
ಇಕ್ಕಳದಲ್ಲಿ ಎತ್ತಿ ನಿನ್ನ ಬೆನ್ನ ಮೇಲೆ ಮಡಗುತೀವಿ
ಭದ್ರವಾಗಿ ನಿಂತುಕೊ ಅಂತೇಳಿ
ಏಳುಜನ ದೊರೆಗಳು
ನಾವು ಮುಟ್ಟು ಬುಟ್ರೆ ಸುಟ್ಟು ಬುಡ್ತಾದೆ ಸುಟ್ಟು

ಅವರು ಇಕ್ಕಳದಲ್ಲಿ ಇಡಕಂಡು
ಸಿದ್ಧಪ್ಪಾಜಿ ಕರದರಲ್ಲಾ || ಸಿದ್ಧಯ್ಯ ||

ಗುರುವೆ ಗುರುವೆ ಗುರುದೇವಾs
ಧರೆಗೆ ದೊಡ್ಡಯ್ಯಾ
ಮಂಟೇದಾ ಲಿಂಗಪ್ಪ
ಪರಂಜ್ಯೋತಿಯವರೆ
ಅಂತೇಳಿ ನನ್ನ ಗುರುವು
ಶಿವಾಶಿವಾ ಅಂತಾ
ಹೆಗಲನೆ ಒಡ್ಡವನೆ
ಎಳುಜನಾ ದೊರೊಗಳು
ನೊಗದ ಗಾತರ ಕಬ್ಬುಣ
ಹೆಗಲಿಗೆ ಮಡಗುವಾಗ
ಅಂದು ಕಾದಿರೊ ಕಬ್ಬುಣ ಗುರುವೆ
ಕಂಡಾಯ ಮಾಡುತಾರೆ || ಸಿದ್ಧಯ್ಯ ||

ಗುರುವೆ ಕಾದಿರುವಂತ ಗುರುವೆ
ನೊಗದ ಗಾತರ ಕಬ್ಬುಣ
ಕಂಡಾಯ ಮಾಡವರೆ
ಅಪ್ಪಾಜಿ ನನ್ನ ಗುರುವು
ಗುರುವೆ ಎರಡು ಕೈಯಾ ದೇವಾ
ಬುಟ್ಟುಬುಟ್ಟು ನನ್ನಪ್ಪ
ಬ್ರಹ್ಮ ಪಂಚಾಳದವರಿಗೆ
ಕೈ ಎತ್ತಿ ಮುಗುದು ಬುಟ್ಟು
ನೀಲಿ ಸಿದ್ದಪ್ಪಾಜಿ
ತನ್ನ ಹೆಗಲನೆ ನನ್ನ ಕಂದಾ
ಅದು ಬೇಯುವ ಕಬುಣವೆಲ್ಲ
ಕಂಡಾಯವಾದವಲ್ಲ || ಸಿದ್ಧಯ್ಯ ||

ನನ್ನ ಗುರು ಕೊಟ್ಟ ಕಂಡಾಯ
ನನ್ನ ಹೆಗಲ ಮೇಲೆ ಆದೆ
ಎನುತೇಳಿ ನನ ಗುರುವು
ನೀಲಿ ಸಿದ್ದಪ್ಪಾಜಿ
ಅಯ್ಯಾ ಬಾರಿ ಕಂಡಾಯಕ್ಕೆ
ಕೈ ಎತ್ತಿ ಮುಗುದನಾಗ || ಸಿದ್ಧಯ್ಯ ||

ಗುರುವೆ ಬಾರಿಯ ಕಂಡಾಯಕೆ
ಕೈ ಎತ್ತಿ ಮುಗುದಾರೆ
ಪಂಚಾಳದ ದೊರುಗೋಳು
ನಮಗೆ ಕೈ ಎತ್ತಿ
ಮುಗಿತಾನೆ ಎನುತೇಳಿ
ಅಯ್ಯಾ ಕೈ ಮುಗಿವ ಗುರುವು
ಸಿದ್ದಪ್ಪಾಜಿಯವರು
ಮುಖವನೆ ನೋಡಿಕಂಡು
ಈ ಹಲಗೂರು ಪಂಚಾಳದವರು
ಗುಲು ಗುಲನೆ ನಗುತಾರೆ || ಸಿದ್ಧಯ್ಯ ||

ಹಲಗೂರು ಪಂಚಾಳದವರು
ಗುಲುಗುಲನೆ ನಗುವಂತಾ ಕಾಲದಲ್ಲಿ
ನೀಲಗಾರ ಗಂಡ ನೀಲಿ ಸಿದ್ದಪ್ಪಾಜಿ
ಏನರಪ್ಪ ಏನಿರಣ್ಣ
ನಮ್ಮ ಭೂಮಿಗೆ ದೊಡ್ಡೋರಾ ಸತ್ಯ ಒಪ್ಪಿಗಂಡೆಯಪ್ಪ
ನನ್ನ ಮಂಟೇದಾಲಿಂಗಯ್ಯನ
ಸಾಸಾ ತಿಳಿಕಂಡ್ರಿಯಾ ಗುರುವು
ನನ ಕಿಡಗಣ್ಣು ರಾಚಪ್ಪಾಜಿಯ
ಭಕುತಿಗೆ ಒಪ್ಪಿದ್ರ ಸ್ವಾಮಿ
ನನ್ನ ನಿಜವುಳ್ಳ ದೊಡ್ಡಮ್ಮ ತಾಯಿ
ಸಕ್ತಿ ಒಪ್ಪುಗಂದ್ರಿಯಪ್ಪ

ಅಣ್ಣ ಕಬ್ಬುಣ ಭಿಕ್ಸ ಕೊಟ್ಟುಬುಡ್ರಣ್ಣ
ನನ್ನ ಗುರುವೆ ಸಿಸ್ಯರಾಗಿರಣ್ಣ || ಸಿದ್ಧಯ್ಯ ||

ಅಣ್ಣ ಗೆದ್ದ ಕನರಣ್ಣ
ನಾವು ಸೋತೋದೊ ಕನೀರಣ್ಣ
ಇವನು ಸಿದ್ದ ಅಂತೇಳಿ
ಬುದ್ಧಿ ಕಲಿಸಬೇಕು ಅಂತಾ
ಕಾದಿದ್ದೊ ಕನಿರಣ್ಣ
ಇವನು ಬುದ್ದಿ ಉಳ್ಳವನು
ನಮ್ಮ ಊರಿಗೆ ಬಂದವನೆ
ಇವನ ಬುಟ್ಟವರು ನಾವು
ಕೆಡುತೀವಿ ಎಂದರಲ್ಲ || ಸಿದ್ಧಯ್ಯ ||

ಈಗಲೀಗಾ ಈ ಮುಂಡೆ ಮಗಾ
ನಮ್ಮ ಊರಲ್ಲಿ ಬಂದು
ಇಷ್ಟು ಸತ್ಯ ಗೆದ್ದು ಪ್ರಮಾಣ ಗೆದ್ದವನು
ಇವನ ನಾಡು ದೇಸದ ಮೇಲೆ ಬುಟ್ಟುಬುಟ್ರೆ
ಇನ್ನು ನಮ್ಮಂತ ದೊರುಗಳಿಗೆ
ಇನ್ನೆಷ್ಟು ಬಂದಾನ ಕೊಡುಬಲ್ಲ

ಇವನಾ ಊರುಬುಟ್ಟು ಹೊರಗೆ ನೀವು
ಬುಡಬ್ಯಾಡಿ ಎಂದಾರಲ್ಲ || ಸಿದ್ಧಯ್ಯ ||

ಇಂಥ ಸಿದ್ದಪ್ಪಾಜಿಯವರು
ಮಾಡುವ ಸತ್ಯದ
ಕಣ್ಣಾರೆ ನೋಡಕಂಡು
ತೋಪಿನ ದೊಡ್ಡಮ್ಮ
ನನ್ನ ಹಿರಿ ಚೆನ್ನಾಜಮ್ಮ
ನನ್ನ ಕಿಡಗಣ್ಣ ರಾಚಪ್ಪಾಜಿ
ನನ್ನ ಧರೆಗೆ ದೊಡ್ಡವರಿಗೆ
ಕೈಯೆತ್ತಿ ಮುಗಿಯುತಾರೆ || ಸಿದ್ಧಯ್ಯ ||

ಅಪ್ಪಾ ನಿಮಗುವೆ ಮಗ
ನಮಗುವೆ ಮಗಾ
ಧರೆಗೆ ದೊಡ್ಡಯ್ಯ
ಮಂಟೇದ ಲಿಂಗಪ್ಪ
ನನ್ನ ಮಗನಿಗಾಗೋ ಶಿಕ್ಸೆಯ
ಕಣ್ಣಾರೆ ನೋಡಲಾರೋ || ಸಿದ್ಧಯ್ಯ ||

ನಮ್ಮ ಮಗ ಸಿದ್ದಪ್ಪಾಜಿಗಾಗುವ ಶಿಕ್ಷೆಗಳ ಗುರುವು
ಕಣ್ಣಾರಾ ನೋಡುನಾರೋ ಗುರುದೇವಾ
ಎಂಬುದಾಗಿ
ಎಲ್ಲಾ ಶಿಸು ಮಕ್ಕಳು ಜಗತ್ತುಗುರು
ಧರೆಗೆ ದೊಡ್ಡೋರ ಮುಂಭಾಗದಲಿ ಕೂತಗಂಡು
ದುಕ್ಕಿಳಿಸಿ ದುಃಖ ಪಡುವಾಗ
ಸಿದ್ದಪ್ಪಾಜಿಯವರ ಮುಖ
ಜಗತ್ತು ಗುರು ಧರೆಗೆ ದೊಡ್ಡೋರು ಕಣ್ಣಾರೆ ನೋಡುತಾರೆ
ಪಂಚಾಳ ದೊರೆಗಳು ಇನ್ನೇನು ಹೇಳುತಾರೆಂದರೆ
ಏನೋ ಜಂಗುಮ
ಈ ಸತ್ಯ ಈ ಪ್ರಮಾಣ ಮಾಡಿಬುಟ್ಟೆ
ಭಿಕ್ಷ ಕೊಡು ಎಂದು ಕೇಳ್ತಿಯಾ

ಈ ಸತ್ಯ ಈ ಪ್ರಮಾಣ
ನಾ ಒಪ್ಪದಿಲ್ಲ ಎಂದರಲ್ಲಾ || ಸಿದ್ಧಯ್ಯ ||

ಈ ಸತ್ಯ ಈ ಪ್ರಮಾಣ
ನಾವು ಒಪ್ಪುವಂತಾ ದೊರೆಂದೊರೆಗಳಲ್ಲ ಕಣೋ
ಇನ್ನೂ ಒಂದು ಸತ್ಯ ಮಾಡಬೇಕು ಕಣೋ ಎಂದುರು
ಅಣ್ಣಯ್ಯಾ ಪಂಚಾಳ ದೊರೆಗಳೇ
ಇನ್ನು ಯಾವ ಸತ್ಯ ಮಾಡಬೇಕ್ರಪ್ಪ
ನಾನು ಯಾವ ಪ್ರಮಾಣ ಮಾಡಬೇಕ್ರಯ್ಯಾ ಎಂದುರು
ಏ ಜಂಗುಮಾ
ಯಾವ ಸತ್ಯ ಯಾವ ಪ್ರಮಾಣ ಮಾಡಬೇಕು ಗೊತ್ತೆ
ಹನ್ನೆರಡಾಳುದ್ದ ಧಗ ತಗುಸ್ತಿವಿ
ಮೂರುಗಾಡಿ ಸುಣ್ಣ ಸುರಿಸ್ತಿವಿ
ಮೂರುಗಾಡಿ ಮೆಣಸಿನಕಾಯಿ ಹಾಕುಸ್ತಿವಿ
ಮೂರುಗಾಡಿ ನೀರ್ನೆ ತುಂಬಿಸ್ತೀವಿ
ಅಯ್ಯಾ ಕಾದು ಸುಣ್ಣದ ಒಳಗೆ
ನೀರುಬಿದ್ದ ಮೇಲೆ
ಅಯ್ಯಾ ನೀರು ಕತುಗ ಬೇಕು
ಸುಣ್ಣ ಕತುಗಬೇಕು
ಅಯ್ಯಾ ಬೆಂಕಿ ಕೆಂಡ ಗುರುವೆ
ಧಗ್ಗನೆ ಕತ್ತಬೇಕು

ನಿನಗೆ ಹೇಳುತೀವಿ
ಕೇಳು ಜಂಗುಮ
ಆ ಸುಣ್ಣದ ಗುಳಿಗೆ
ಮೆಣಸಿನ ಕಾಯಿನೆ ಗುರುವು
ಉರುಯೋದಿಕೆ ಗುರುವು
ನೀನು ಒಬ್ಬನೆಹೋಗಿ ನೀನು
ಅಲ್ಲಿ ಮುಳುಗಬೇಕು
ನಾವು ಕಟ್ಟುನ ಕಲ್ಲ ಮುಚ್ಚಿಬುಟ್ಟು
ಒಂದು ದಿವಸ ಮಡಗುತೀವಿ|| ಸಿದ್ಧಯ್ಯ ||

ಒಂದು ದಿವಸಾs
ಅಂತಾ ಪಾಳುಗುಳಿ ಒಳಗೆ ನಿನ್ನ ಬಿಟ್ಟುಬುಡ್ತಿವಿ
ಕಟ್ಟುವ ಕಲ್ಲು ಮುಚ್ಚುತೀವಿ ಜಂಗುಮ
ಈಗಲೀಗಾ ಮಾರಣೆ ದಿವಸಕೆ
ಬಂದು ನಾವು ಕರಿತೀವಿ
ಕಟ್ಟುವ ಕಲ್ಲು ಹಾರೋಗ ಬೇಕು
ಸುಣ್ಣ ಮೆಣಸಿನಕಾಯಿ ನೀರ್ನಿಂದ ನೀನು ಮೇಲಕೆ ಬರಬೇಕು
ನಿನ್ನ ಗುರು ಸತ್ಯ ಒಪ್ಪಿಗಂಡು ನಿನ್ನ ಬಕುತಿಗೆ ಒಪ್ಪಗಂಡು

ನೀವು ಬೇಡಿದ ಕಬ್ಬುಣದ ಭಿಕ್ಸ
ಕೊಡುತೀವಿ ಎಂದರಲ್ಲ || ಸಿದ್ಧಯ್ಯ ||

ಬೇಡಿದ ಭಿಕ್ಸ ಕೊಡುತೀವಿ
ನಾವು ಹೇಳ್ದು ಸತ್ಯ ಮಾಡು ಎಂದುರು
ಅಯ್ಯಾ ಪಂಚಾಳದ ದೊರೆಗಳೇ
ಈಗಲೀಗಾ ಈ ಸತ್ಯ ಈ ಪ್ರಮಾಣ
ನಾನು ಯಾವ ರೀತಿ ಮಾಡಬೇಕಪ್ಪ
ಜಗತ್ತು ಗುರು ಧರೆಗೆ ದೊಡ್ಡಯ್ಯ

ನಾನು ಮಾಡುವ ಸತ್ಯವೆಲ್ಲ
ನಿನ್ನ ಪಾದಕೆ ಅರುವಾಗಲಪ್ಪ || ಸಿದ್ಧಯ್ಯ ||

ನನ್ನ ಮಂಟೇದ ಲಿಂಗಯ್ಯನ ಪಾದ
ಮಂಡೆ ಮೇಲೆ ಒದಗಲಪ್ಪ || ಸಿದ್ಧಯ್ಯ ||

ನಾನು ಮಾಡುವಂತ ಸತ್ಯವೆಲ್ಲ ದೇವಾs
ನಿಮ್ಮ ಪಾದಕರುವಾಗಲಿ
ಜಗತ್ತು ಗುರು ಧರೆಗೆ ದೊಡ್ಡಯ್ಯ ಎನುತೇಳಿ
ರಾಜಬೊಪ್ಪಗೌಡ್ನ ಪುರಕೆ
ಕೈ ಎತ್ತಿ ಮುಗುದು ಸಿದ್ದಪ್ಪಾಜಿಯವರು
ಈ ಸತ್ಯನು ನಾನು ಮಾಡ್ತಿನಿ ಕಣ್ರಪ್ಪ ಮಾಡ್ತಿನಿ ಕನ್ರಣ್ಣ
ನಮಗೆ ಗುರುವು ಬೇಕಾದ
ಕಬ್ಣುದ ಭಿಕ್ಸ ಕೊಟ್ಟುಬುಡ್ರಪ್ಪ ಎಂದುರು
ಒಂಭತ್ತಾಳುದ್ದ ಧಗ ತಗಿಸಿಬುಟ್ಟು
ಮೂರು ಗಾಡಿ ಸುಣ್ಣ ಸುರಿಸಿ ಬುಟ್ಟು
ಮೂರುಗಾಡಿ ನೀರ್ನೆ ತುಂಬಿಸಿಬುಟ್ಟು
ಮೇಲೇ ಮೆಣಸಿನಕಾಯಿ ಸುರಿದುಬುಟ್ಟು
ಧಗಧಗನೆ ಕತ್ತಿ ದಿಗುದಿಗನೆ ಉರಿವಾಗ
ಬುಗುಬುಗುನೆ ಹೇಗೆ ಬರುವುದನು ಕಣ್ಣಿಂದ ನೋಡಿಬುಟ್ಟು
ಬಾರೋ ಬಾರೋ ಜಂಗುಮಾ
ಆಕಾಸಕೆ ಹೊಗೆ ಒಂಟೋಯ್ತದೆ
ನಿನ್ನ ಗುರು ಸತ್ಯ ತೋರುಬಾ ಎನುತೇಳಿ
ಸಿದ್ದಪ್ಪಾಜಿಯವರ ಕರಿವಾಗ
ರಾಜ ಬಪ್ಪುಗಣುಪುರ
ಕಣ್ಣಾರೆ ನೋಡುತಾ ಕೈ ಎತ್ತಿ ಮುಗಿತ ಸಿದ್ದಪ್ಪಾಜಿ

ಅವರು ಬಲದ ಪಾದ ತಗದರಂತೆ
ಬಾವಿ ಒಳಗೆ ಬುಟ್ಟರಂತೆ || ಸಿದ್ಧಯ್ಯ ||

ಗುರುವೆ ಬಾವಿ ಒಳಗೆ
ಬುಟ್ಟವರೆ ನನ್ನ ಗುರುವು
ನಿಲುಗಾರರ ಗಂಡ
ನನ್ನ ನೀಲಿ ಸಿದ್ದಪ್ಪಾಜಿ
ಧರೆಗೆ ದೊಡ್ಡವರು
ಕಪ್ಪು ಧೂಳ್ತ ತಗದು
ಬಾವಿಗೆ ಪಿಡಿದವರೆ
ಗುರುವೆ ಬೇಯುವಂತಾ
ಸುಣ್ಣವೆಲ್ಲ ದೇವಾ
ಸಣ್ಣ ಮಲ್ಲಿಗೆ ಹೂವ
ಮಾಡಿದುರು ನನ ಗುರುವು
ಅವರು ಊದಿರೋ ನೀರಾ
ಪನ್ನಿರಾ ಗುರುವೆ
ಮಾಡಿದರು ನನ್ನಪ್ಪ
ಅವರು ಸುರಿದಿರುವ ಗುರುವು
ಮೆಣಸಿನಕಾಯಿ ದೇವಾ
ಕೆಂಡಸಂಪಿಗೆ ಹೂವ
ಮಾಡಿದರು ನನ ಗುರುವು
ಅವರು ಹೂವಿನ ಮೇಲೆ
ನನ್ನ ಸಿದ್ದಪ್ಪಾಜಿ ಮಲಗುವರೆ || ಸಿದ್ಧಯ್ಯ ||

ಆಗಲೀಗಾ ಗುರುವೆ ಗುರುದೇವಾs
ಹೂವಿನ ಮೇಲೆ ಮಲಗಿ
ಸಿದ್ದಪ್ಪಾಜಿ ನಿದ್ದುರೆ ಮೂಡುವಾಗ
ಮೇಲೆ ಕಟ್ಟನೆ ಕಲ್ಲು ಮುಚ್ಚಿ
ಆಗಲೀಗಾ ಇವತ್ತು ಇರಲಿ ಕನ್ರಣ್ಣ
ನಾಳೆ ಇವನ ಬಂದು ಕೂಗಬೇಕು ಕನ್ರೊ
ಎಲ್ಲಾ ಸತ್ಯನು ಗೆಲ್ಲುತಿದ್ದ
ಈ ಸತ್ಯ ಮುಂಡೆ ಮಗ
ಗೆಲ್ಲ ಬಲ್ಲನಾ ಹೊರಗೆ ಬರುಬಲ್ಲನ ಎನುತೇಳಿ
ಹಲಗೂರು ಪಂಚಾಳದ ದೊರೆಗೊಳು
ಹೊರಟೋಗಿ ನಿದುರೆ ಕಳದು
ಬೆಳ್ಳಿ ಮೂಡಿ ಬೆಳಕರ್ದು ಬಂದಾಗ
ಕಬ್ಬುಣ ಕೇಳಿದಾ ಜಂಗುಮಾ
ಬಾವಿಬುಟ್ಟು ಮೇಲಕೆ ಬಾರೋ
ನಿನಗೆ ಕಬ್ಬುಣದ ಭಿಗುಸಾವ
ಕೊಡುತೀನಿ ಎಂದವರೇ || ಸಿದ್ಧಯ್ಯ ||

ಗುರುವೆ ಬತ್ತಿನಿ ಕಣಿರಪ್ಪ
ಬತ್ತಿನಿ ಕನಿರಣ್ಣ
ತಡಿರಿ ಅಣ್ಣದುರೆ
ತಡಿರಿ ಅಣ್ಣ
ಹಾಗಂದು ಗುರುವು
ಬಾವಿ ಒಳಗೆ ಕಂದಾ
ಮಾತನ್ನೆ ಆಡಿದರು
ಅಯ್ಯಾ ಕಟ್ಟಣಿ ಕಲ್ಲು ದೇವಾ
ಮುಸುಗ ತಗದು ದೇವಾ
ಬಲಗಡೆ ಬಿದ್ದೋಯ್ತು
ಅವರು ಬಾವಿಯಿಂದ ಸಿದ್ದಪ್ಪಾಜಿ
ಗಲೀಗಲೀನೆ ಎದ್ದರಲ್ಲ || ಸಿದ್ಧಯ್ಯ ||

ಈಗಲಾರುವೆs
ಬಂದು ಬುಟ್ಟಿ ಕನ್ರಣ್ಣ
ನೀವು ಹೇಲ್ದ ಸತ್ಯ ಮಾಡಿಬುಟ್ಟಿ ಕಣ್ರಯ್ಯ
ಅಣ್ಣಯ್ಯಾ
ಪಂಚಾಳ ದೊರುಗೊಳೆ

ನನ ಗುರುವಿಗೆ ಬೇಕಾದ ದಾನ
ಕೊಟ್ಟು ಬುಡ್ರಪ್ಪ ಎಂದರಂತೆ || ಸಿದ್ಧಯ್ಯ ||