ಈಗಲೀಗಾ ನನ್ನ ಗುರೂನಾ ಭಿಕ್ಸ ಕೊಟ್ಟುಬುಡ್ರೊ
ಎಂಬುದಾಗಿ ಸಿದ್ದಪ್ಫಾಜಿಯವರು
ಪಾಂಚಾಳ ದೊರೆಗೊಳಾ ಕೇಳುವಾಗ
ಏನರಣ್ಣ
ಈ ಮುಂಡೆ ಮಗಾ ಎಲ್ಲಾ ಸತ್ಯನು ಮಾಡ್ತಾನೆ ಕನ್ರೋ
ಈ ಜಂಗುಮ ಎಲ್ಲಾ ಪ್ರಮಾಣನೂವೆ ಮಾಡ್ತಾನೆ ಕನ್ರಣ್ಣ

ಇವನಿಗೆ ಇನ್ಯಾವಾ ಸತ್ಯ ನಾವು
ಹೇಳಬೇಕು ಎಂದರಲ್ಲಾ || ಸಿದ್ಧಯ್ಯ ||

ಇವನಿಗೆ ಇನ್ಯಾವ ಪ್ರಮಾಣ ನಾವು
ಹೇಳಬೇಕು ಎಂದರಲ್ಲಾ || ಸಿದ್ಧಯ್ಯ ||

ಇನ್ಯಾವ ಸತ್ಯ
ಇನ್ಯಾವ ಪ್ರಮಾಣ
ನಾವು ಹೇಳಬೇಕು ಅಣ್ಣದುರೆ ಎನುತೇಳಿ

ಅವರು ಏಳುಜನ ದೊರೆಗಳು
ಬಾಳ ಚಿಂತೆ ಮಾಡುತಾರೆ || ಸಿದ್ಧಯ್ಯ ||

ಅಣ್ಣ ಕಾದುಗಟ್ಟಿ ತಗದು ಇವನಾ
ಅಂಗೈ ಮೇಲೆ ಮಡುಗುರಣ್ಣ|| ಸಿದ್ಧಯ್ಯ ||

ಕೇಳಿರಣ್ಣಾ
ಈಗ ಕಾದುಗಟ್ಟಿ ತಗೀರೋ
ಈಗಲೀಗಾ ಕುಲುಮೆ ಒಳಗೆ ಚೆನ್ನಾಗಿ ಕಾಯ್ಸಿರೋ
ಈ ಕಾದ ಗಟ್ಟಿ ತಗದು
ಇವನ ಅಂಗೈ ಮಳೆ ಮಡಗಬೇಕು ಕನ್ರಣ್ಣ
ಆಗಾ ಇವನ ಸತ್ಯವೆಲ್ಲ ನಾಶವಾಯ್ತದೆ ಕನ್ರೊ
ನಿನ್ನ ಸತ್ಯ ಈ ಪ್ರಮಾಣ ಒಪ್ಪೊದಿಲ್ಲ ಜಂಗುಮಾ ಬಾ ಎನುತೇಳಿ
ಕುಲುಮೆ ಒಳಗೆ ಕರಕಂಡು ಬಂದು
ಕುಲುಮೆ ಮುಂಭಾಗದಲ್ಲಿ ನಿಲಿಸಿಗಂಡು
ಕಾದಗಟ್ಟಿ ತಗದು ಗುರುವು
ಕೆಂಡದ ಮೇಲೆ ಮಡಗಿ ತಿದಿಯೊತ್ತಿ
ಕಾದಗಟ್ಟಿನೆ ಕಾಯ್ಸಿ

ಲೋಹಿಡಿಲಾ ಜಂಗುಮ ನಿನ್ನ
ಎರಡು ಹಸ್ತ ಎಂದರಲ್ಲಾ || ಸಿದ್ಧಯ್ಯ ||

ಹಿಡಿಲಾ ಜಂಗುಮ ನಿನ್ನಂಗೈ ಹಸ್ತವ ಎಂದುರು
ಏನಿರಪ್ಪ
ಕಾದ ಗಟ್ಟಿ ತಗುದು ಅಂಗೈ ಮೇಲೆ ಮಡಗಿದ್ರೆ ಅಣ್ಣಯ್ಯ
ನನ್ನಸ್ತ ಉಳುದದ್ರಪ್ಪ
ಹಸ್ತ ಉಳುದದಾ ಗುರುವು
ಪಂಚಾಳದವರೆ
ಧರೆಗೆ ದೊಡ್ಡೋರ ಕರುಣ ನಮ್ಮಲ್ಲದ್ರೆ
ಈಗಲೀಗಾ ಮಂಟೇದ ಸ್ವಾಮಿಗೆ

ನೀವು ಕೊಟ್ಟಂತಾ ಕಾದಗಟ್ಟಿಗೆ
ಅಂಗೈಯ ನಾ ಒಡ್ಡುತೀನಿ || ಸಿದ್ಧಯ್ಯ ||

ಗುರುವೆ ಕಾದಗಟ್ಟಿ ಈಗಾ
ಅಂಗೈಯಿನ ಮೇಲೆ
ಮಡಗ್ರಪ್ಪ ಎನುತೇಳಿ
ನೀಲುಗಾರ ಗಂಡ ನೀಲಿ ಸಿದ್ದಪ್ಪಾಜಿ
ಅಯ್ಯಾ ಕಾದುಗಟ್ಟಿ ತಗದು
ಸಿದ್ದಪ್ಪಾಜಿಯವರಾ
ಅಂಗೈನಾ ಮೇಲೆ
ಮಡಗುವಾ ಕಾಲದಲ್ಲಿ
ಅಯ್ಯಾ ಕಾದುಗಟ್ಟಿ ಹೋಗಿ ಗುರುವೆ
ಅದು ತಾವರೆ ಪುಷ್ಯವಾಯಿತಲ್ಲ || ಸಿದ್ಧಯ್ಯ ||

ತಾವರೆ ಪುಷ್ಮ ಆದ ಕಾಲದಲ್ಲಿ
ಅಂಗೈಲಿ ತಾವರೆ ಪುಷ್ಮ ಹಿಡಕಂಡು ಸಿದ್ದಪ್ಪಾಜಿ

ಅಣ್ಣ ನನ್ನ ಸತ್ಯ ನೋಡಿರಿ
ನನ್ನ ಗುರುವಿನ ಸತ್ಯ ನೋಡಿರಣ್ಣ || ಸಿದ್ಧಯ್ಯ ||

ತಾವರೆ ಪುಷ್ಮ ಇಡಕಂಡು
ಧರೆಗೆ ದೊಡ್ಡವರ ಪಾದ ನೆನಿದಾಗ
ಏಳುಜನ ದೊರೆಗಳು ಪಂಚಾಳದವರು
ನೊಡಿದ್ರ ಅಣ್ಣಯ್ಯಾ
ಕಾದಗಟ್ಟಿ ತಗದು ಅವನ ಅಂಗೈ ಮಳೆ ಮಡಗಿದ್ರೆ
ತಾವರೆ ಪುಷ್ಮ ಆಗಿಬುಡತಲ್ಲ

ಇವನು ಬಾಳ ಮಾಯಕಾರ ಕಂಡ್ರೊ
ಬುಡುಬ್ಯಾಡದು ಎಂದರಂತೆ || ಸಿದ್ಧಯ್ಯ ||

ಅಯ್ಯಾ ಕೇಳಯ್ಯಾ ಜಂಗುಮ
ಕೇಳು ಜಂಗುಮ
ಈಗ ಕಾದುಗಟ್ಟಿ ಒಳುಗೆ
ನಾ ಗೆದ್ದು ಕಂಡಿ ಎನುತೀಯೇ
ಅಯ್ಯಾ ಈ ಪ್ರಮಾಣ ನಾವು
ಒಪ್ಪೋ ಗುರುಗಳಲ್ಲ
ಈ ಸತ್ಯಾನಾ ನಾವು
ಮೆಚ್ಚೋ ದೊರೆಗಳಲ್ಲ
ಅಯ್ಯಾ ಇನ್ನೊಂದು ಸತ್ಯ
ನಾವು ಹೇಳುತ್ತೀವಿ ಎಂದಾರಲ್ಲ

ಈ ಸತ್ಯ ನೀನು ಮಡಬಲ್ಯ ಜಂಗುಮ ಎಂದುರು
ಅಣ್ಣಯ್ಯಾ ಈಗ ಮಾಡಿದ ಸತ್ಯಗಳು ಒಪ್ಪುನಿಲ್ಲುವಾ
ನಾವು ಒಂದುನೂ ಒಪ್ಪದಿಲ್ಲ ಜಂಗುಮ
ಈಗೊಂದು ಸತ್ಯ ಹೇಳುತೀರಿ ಮಾಡು ಎಂದರು
ಯಾವ ಸತ್ಯ ಯಾವ ಪ್ರಮಾಣ ಮಾಡುಬೇಕು ದೇವಾ
ಏನು ಮಾಡಬೇಕು ಪಂಚಾಳದ ದೊರೆಗಳೆ ಎಂದುರು
ಕೇಳಯ್ಯಾ
ನಾವು ಯಾವ ಪ್ರಮಾಣ ಮಾಡುತ್ತೀವಿ ಎಂದುರೆ
ಈಗಲೀಗಾ ಭೂಮಿ ಭೂಲೋಕ ನಡುವೆ ನರಲೋಕದಲ್ಲಿ

ನಾವು ಮಾರಿರ್ತಕ್ಕಂತಾ
ಆಭರಣಗಳು ಎಂದುರೆ
ಅಯ್ಯಾ ಕಬ್ಬುಣದಲ್ಲಿ ನಾವು
ಚೂರಿಯಾ ಮಾಡೀವಿ
ಕಬ್ಬುಣದಲ್ಲಿ ನಾವು
ಕತ್ತಿಯ ಮಾಡೀವಿ
ಲೊಕಬ್ಬುಣದಲ್ಲಿ ನಾವು
ಕಾಟಾರಿಯ ಮಾಡೀವಿ
ಇಂತ ನೂರೊಂದು ಆಯುಧದ ಕುದುರೆ
ನಿನಗಾಗಿ ಮಾಡುತೀವಿ || ಸಿದ್ಧಯ್ಯ ||

ಅಯ್ಯಾ ನಿನಗಾಗಿ ನಾವು
ಯಾಗದ ಕುದುರೆಯ
ಮಾಡುತೀವಿ ಜಂಗುಮಾ
ಆ ಕುದುರೆ ಅಂದುರೆ ಕೇಳು
ಜೀವುದ ಕುದುರೆಯಲ್ಲ
ನಾವು ಉಕ್ಕುನೊಳಗೆ ಕುದುರೆ
ನಿನಗಾಗಿ ಮಾಡುತೀವಿ || ಗಂಗಾಧರ ||

ನಿನಗಾಗಿ ಉಕ್ಕುನ ಕುದುರೆ ಮಾಡ್ತಿವಿ
ಉಕ್ಕುನ ಕುದುರೆ ಮೈನಲ್ಲಿ
ಅಂಗೈ ಮಡಗಕೆ ಸ್ಥಳ ಇರಬಾರ್ದು
ಅಂತಾ ಆಯುಧ ಆಭರಣಗಳನೆ ಮಾಡಿs
ಆ ಕುದುರೆ ನಾಟತೀವಿ
ಈಗಲೀಗಾ ನೂರೆಂಟು
ಆಯ್ದ ಉಳ್ಳಾದ ಕುದುರೆ ಮಾಡಿಬುಟ್ಟು
ಆ ಆಯ್ದ ಉಳ್ಳಾದಾ ಕುದುರೆ ಮೇಲೆ ನಿನ್ನ ಕಂಡ್ರುಸುತೀವಿ
ಈಗಲೀಗ ಅಂತಾ
ಚಾಕು ಚೂರಿ ಬಾಕು
ಆಗಲೀಗಾ ಕೊಡ್ಳಿ ಮಚ್ಚು
ಈ ನರಲೋಕದಲ್ಲಿ ಎಷ್ಟು
ಆಭರಣಗಳಿದ್ದಾವೋ
ಎಲ್ಲಾ ಆಭರಣ ಆ ಯಾಗದ ಕುದುರೆ ಒಳಗೆ ಇರಬೇಕು
ಇಂತಾ ಯಾಗದ ಕುದುರೆ ಮೇಲೆ
ನೀನೋಗಿ ಕೂತ್ಕಬೇಕು

ಉಕ್ಕುನ ಕುದುರೆ ನೀನು ಅದ
ಜೀವುದ ಕುದುರೆ ಮಾಡಬೇಕು || ಸಿದ್ಧಯ್ಯ ||

ಅಯ್ಯಾ ಉಕ್ಕುನ ಕುದುರೆ ನೀನು
ಜೀವದ ಕುದುರೆ
ಮಾಡಕಂಡು ಜಂಗುಮ
ನೀ ಹಲಗೂರು ಬೀದಿ ಒಳಗೆ
ಬಂದು ಬುಟ್ರೆ ಜಂಗುಮ

ನಿನಗೆ ಕಬ್ಬುಣ ಬಿಕ್ಸ ಕೊಡುತೀವಿ
ನಿನ್ನ ಗುರುವಿಗೆ ಶಿಸ್ಯರಾಗುತೀವಿ || ಗಂಗಾಧರ ||

ಉಕ್ಕುನ ಕುದುರೆ ಮಾಡಿ
ಭೂಮಿ ಮ್ಯಾಲೆ ನಿಲ್ಸುತೀವಿ
ಜೀವದ ಕುದುರೆ ಮಾಡಿಕಂಡು
ಆಯುಧವುಳ್ಳ ಕುದುರೆ ಮೇಲೆ ನೀನು ಕೂತಗಂಡು
ನಮ್ಮ ಹಲುಗೂರು ಬೀದಿ ಒಳಗೆ ಬಂದುಬುಟ್ರೆ
ನೀನು ಬೇಡಿದ ಬಿಕ್ಸ ಕೊಟ್ಟು
ನಿಮ್ಮ ಗುರುವಿಗೆ ಶಿಷ್ಯರಾಗಿ
ಈಗಲೀಗಾ ಕಬ್ಬುಣದ ಭಿಕ್ಸತಂದು
ಜೋಗ್ಗೆ ಕೊಟ್ಟು ಬುಡುತೀವಿ ಕಣೋ
ಈ ಕುದುರೆ ಮೇಲೆ ಕುತಗಂಡು ಸವಾರಿ ಮಾಡಬಲ್ಯಾ ಎಂದುರು
ಆಗಲಿ ಕಣಿರಪ್ಪ
ಆಗಲಿ ಕಣಿರಣ್ಣ
ನನ ಗುರುವಿಗೆ
ಕಬ್ಬುಣ ಬೇಕಾಗಿರದ್ರಿಂದ
ನೀವು ಹೇಳಿದ ಸತ್ಯ ನಾ
ಮಾಡುತೀನೀ ಎಂದರಲ್ಲ || ಸಿದ್ಧಯ್ಯ ||

ನನ್ನ ಗುರು ಬೇಕಾಗಿ ಅಣ್ಣ
ನೀವು ಹೇಳಿರುವ ಸತ್ಯ ಏನಬೇಕಾದ್ರು ಮಾಡುತಿನಿ ಕನ್ರಪ್ಪ
ನನ ಗುರುವೆ ಬೇಕಾದ ಭಿಕ್ಷ ಕೊಟ್ಟುಬುಡ್ರೊ ಎಂದುರು
ನೀಲುಗಾರ ಗಂಡ ನೀಲಿ ಸಿದ್ದಪ್ಪಾಜಿಯವರು ಹೇಳುವಾಗ
ಆಗಲೀಗ ಉಕ್ಕುನಲ್ಲಿ ಗುರುವು
ಈಗಲೀಗಾ ಆಯುಧ ಉಳ್ಳಾದ ಕುದುರೆ ಎಲ್ಲಾ ಆಭರಣನು
ಆ ಕುದುರೆಯಲ್ಲೆ ಮಾಡಿ
ಎಲ್ಲ ಆಭರಣಗಳನು ಕುದುರೆಗೆ ನಾಟಿ
ಅಣ್ಣ
ಕುದುರೆ ಮ್ಯಾಲೆ ಇವನು
ಕೂರಕೆ ಸ್ಥಳ ಇರಬಾರದು
ಕೈ ಮಡಗಕೆ ಸ್ಥಳ ಇರಬಾರದು
ಆರೀತಿ ಒಳಗೆ

ಚಾಕು ಬಾಕುನ ಕುದುರೆ
ನಾ ಮಾಡುಬೇಕು ಎಂದರಲ್ಲ || ಸಿದ್ಧಯ್ಯ ||

ಪಂಚಾಳದ ದೊರೆಗಳು ದೇವಾ
ಈಗಲೀಗಾ ಸಿದ್ದಪ್ಪಾಜಿಯವರುs
ಎಲ್ಲೇ ಕೈ ಹಾಕಿದ್ರು ಕೂಡ
ಕುದುರೆ ಮೈ ಮಾತ್ರ ಸಿಕ್ಕ ಬಾರುದು
ಅಂತ ಚಾಕು ಬಾಕುನ ಕುದುರೆ
ಅಂತಪ್ಪ ಯಾಗುದ ಕುದುರೆ ಎಂದುರೆ ಗುರುವು

ಅಯ್ಯಾ ಎಳು ಸಾವಿರ ಚೂರಿ
ಏಳು ಸಾವಿರ ಬಾಕು
ಏಳುಸಾವಿರ ತಿರುಶೂಲ
ಅಯ್ಯಾ ಏಳು ಸಾವಿರ
ಕುಡ್ಲು ಮಚ್ಚು
ಚೂರಿ ಸೈತುವಾಗಿ
ಎಲ್ಲಾ ಆಭರಣ
ಕುದುರೆಗೆ ನಾಟವರೆ
ಲೋ ನಿನ್ನ ಸತ್ಯ ತೋರು
ನಿನ್ನ ಗುರುವಿನ ಸತ್ಯ ತೋರು ಬಾರೋ || ಸಿದ್ಧಯ್ಯ ||

ನಿನ್ನ ಸತ್ಯ ನಿನ್ನ ಗುರುವಿನ ಸತ್ಯ ತೋರು ಬಾರೋ
ಬೇಡಿದ ಭಿಕ್ಸ ಕೊಡುತೀವಿ ಬಾರೋ ಜಂಗುಮ ಎಂದುರು
ಅಂತಾ ಆಯುಧ ಕುದುರೆ ಕಣ್ಣಿಂದ ನೋಡಿದ್ರು ಸಿದ್ದಪ್ಪಾಜಿ
ಧರೆಗೆ ದೊಡ್ಡಯ್ಯ ಮಂಟೇದ ಲಿಂಗಪ್ಪ
ಈಗಲೀಗಾ ಸೂಜಿ ಊರಕೆ ಸ್ಥಳ ಇಲ್ವಲ್ಲ ಗುರುವು
ಈ ಕುದುರೆ ಮೇಲೆ ಕೂತಗಂಡು
ನಾನು ಯಾವ ರೀತಿ ಸವಾರಿ ಮಾಡಿ
ನಿನ ಪಾದಕೆ ಕಬ್ಬುಣ ತಂದು ಒಪ್ಪಿಸನೆ ಗುರುವೆ ಎನುತೇಳಿ
ಇಂತಾ ಉಕ್ಕುನ ಕುದುರೆ ಮುಂಭಾಗದಲ್ಲಿ ನಿಂತುಗಂಡು ಸಿದ್ದಪ್ಪಾಜಿ

ರಾಜ ಬೊಪ್ಪಗೌಡ್ನ ಪುರಕೆ ಗುರುವೆ
ಕೈ ಎತ್ತಿ ಮುಗುದರಾಗ || ಸಿದ್ಧಯ್ಯ ||

ಆಗಲೀಗಾ ರಾಜಬಪ್ಪಗಣ್ಣ ಪುರಕೆ
ಕೈ ಎತ್ತಿ ಮುಗುದರು
ನೀಲುಗಾರ ಗಂಡ ನೀಲಿಸಿದ್ದಪ್ಪಾಜಿ
ಕೈ ಮುಗುವಂತಾ ಕಾಲದಲ್ಲಿ ಗುರುವು
ಮಾಯ್ಕಾರದ ಗಂಡ ಜಗತ್ತು ಗುರು
ಧರಗೆ ದೊಡ್ಡಯ್ಯಾ

ಅವರು ಉಕ್ಕುನ ಕುದುರೆಗೆ
ಕಪ್ಪು ಧೂಳುತ ಪಿಡಿದರಲ್ಲ || ಸಿದ್ಧಯ್ಯ ||

ಕಪ್ಪು ಧೂಳುತ ಉರುಬುದ್ರು ದೇವಾ
ಕಪ್ಪು ಧೂಳುತ ಉರುಬುದ ಕಾಲದಲ್ಲಿ
ಜಗತ್ತು ಗುರು ಮಂಟೇದ ಲಿಂಗಪ್ಪ
ಹಲಗೂರು ಪಂಚಾಳದವರ
ಕಣ್ಣಿಗೆ ಉಕ್ಕುನ ಕುದುರೆಯಂತೆ

ಸಿದ್ದಪ್ಪಾಜಿ ಕಣ್ಣಿಗೆ ಗುರುವೆ
ಜೀವುದ ಕುದುರೆ ಮಾಡದರಲ್ಲ || ಸಿದ್ಧಯ್ಯ ||

ಗುರವೆ ಧರೆಗೆ ದೊಡ್ಡೋರ ಪಾದ
ನೆನಕಂಡು ನನ ಗುರುವು
ನೀಲುಗಾರನ ಗಂಡ
ನನ್ನ ನೀಲಿ ಸಿದ್ದಪ್ಪಾಜಿ
ಅಯ್ಯಾ ಕುದುರೆಯ ಗುರುವೆ
ಕಣ್ಣಾರೆ ನೋಡಿಕಂಡು
ಕೈ ಎತ್ತಿ ಮುಕ್ಕಂಡು
ನೀಲಿ ಸಿದ್ದಪ್ಪಾಜಿ
ಅಯ್ಯಾ ಗುರುಕೊಟ್ಟ ಜೋಳಿಗೆ
ಕಂಕ್ಳಿಗೆ ಹಾಕ್ಕಂಡು
ಬಲದ ಪಾದ ತಗದು
ಕುದುರೆ ಮೇಲೆ ದೇವಾ
ಮಡಗಿದ ನನ್ನಪ್ಪ
ಅಯ್ಯಾ ಹಲಗೂರು ಬೀದಿ ಒಳಗೆ
ನಲು ನಲುತಾ ಬರುತಾರೆ || ಸಿದ್ಧಯ್ಯ ||

ಗುರುವೆ ಕುದುರೆ ಮೇಲೆ ಗುರುವು
ಕೂತಗಂಡು ನನ ಗುರುವು
ನೀಲುಗಾರರ ಗಂಡ
ನನ್ನ ನೀಲಿ ಸಿದ್ದಪ್ಪಾಜಿ
ಗುರುವೆ ಕುದುರೆಯ ದೇವಾ
ನೆಡಕಂಡು ನೆಡಕಂಡು
ಬುರವಾಗ ನನ ಗುರುವು
ಅವರು ಬಲದಿಂದ ಎಡಕೆ
ವರುಗುತ ಸಿದ್ದಪ್ಪಾಜಿ
ಎಡದಿಂದ ಬಲಕೆ
ವರುಗುತಾ ನನ ಗುರುವು
ಅವರು ಕುದುರೆ ಮೇಲೆ ಕೂತಗಂಡು
ಕಿಲಿ ಕಿಲನೆ ನಗುದರಲ್ಲ || ಸಿದ್ಧಯ್ಯ ||

ಕುದುರೆ ಮೇಲೆ ಕುತಗಂಡು ನನ್ನಪ್ಪs
ಎಡದಿಂದ ಬಲಕೆ ಜೋಲುತ
ಬಲದಿಂದ ಎಡಕೆ ಜೋಲುತ
ಧರೆಗೆ ದೊಡ್ಡವರ ಪಾದ ನೆನಿತಾ
ತೋಪುನ ದೊಡ್ಡಮ್ಮ ಕಿಡುಗಣ್ಣ ರಾಚಪ್ಪಾಜಿ
ನೀನೆ ಗತಿ ನೀನೆ ಮತಿ ಅಂತೇಲಿ ಸಿದ್ದಪ್ಪಾಜಿ
ಅಲಕತಾ ಕುಲಕತಾ ಬರುವಾಗ ಗುರುವು
ಹಲುಗೂರು ಪಾಂಚಾಳದ ದೊರೆಗಳು
ಏನಣ್ಣ
ಅಂತಾ ಯಾಗದ ಕುದುರೆ ಮಾಡಿವಿ
ಅಷ್ಟು ಆಯುಧಗಳ ನಾಟೀವಿ
ಅಂತದ್ರೊಳಗೆ ಕೂತಗಂಡು ಬರುತವನಲ್ಲೊ ಜಂಗುಮ
ಈ ಸತ್ಯ ಈ ಪ್ರಮಾಣ ಒಪ್ಪುಬಾರದು
ಹಲಗೂರು ಬೀದ ಒಳಗೆ ಕುದುರೆ ಒಡಕಂಡು
ಬಂದ್ರೆ ನಾವು ಮೆಚ್ಚಕಾಗದಿಲ್ಲ

09_79_Mante-KUH

ಇವನು ಆಕಾಸ್ದ ಮೇಲೆ
ಮೂರು ಬಳಸು ಬರಲೇಬೇಕು|| ಸಿದ್ಧಯ್ಯ ||

ಆಕಾಸಕ್ಕೆ ಕಳುಗಿಬುಡುಬೇಕು ಕನ್ರಣ್ಣ
ಈ ಮುಂಡೆ ಮಗ ಆಕಾಸದ ಮೇಗಳಿಂದ
ಕುದುರೆ ಬುಟ್ಟ ಭೂಮಿಗೆ ಬೀಳಬೇಕು
ಬಿದ್ದು ರಕ್ತ ಕಕ್ಕಿ ಪ್ರಾಣಬಿಟ್ಟುಬುಡಬೇಕು ಕನ್ರೊ
ಆ ರೀತಿ ಮಾಡಿಬುಡಬೇಕು ಕನ್ರಣ್ಣ ಅಂತೇಳಿ
ಯೋಚನೆ ಮಾಡಿಕಂಡು
ಎಳು ಜನ ದೊರೆಗಳು
ಸಿದ್ದಪ್ಪಾಜಿ ನೋಡುತಾ ನಿಂತಿದ್ದುರು
ದೊರೆಗಳ ಬಳಿಗೆ ಬಂದು ನೀಲಿ ಸಿದ್ದಪ್ಪಾಜಿ
ಏನಿರಪ್ಪ ಪಾಂಚಾಳದ ದೊರೆಗಳೇ

ನಾನು ಹೇಳಿದ ಸತ್ಯ ಮಾಡುದನಲ್ಲ
ಬೇಡಿದ ದಾನ ಕೊಟ್ಟುಬುಡ್ರಣ್ಣ || ಸಿದ್ಧಯ್ಯ ||

ನಮ್ಮ ಗುರುವಿಗೆ ಬೇಕಾದ ಭಿಕ್ಸ
ಕೊಟ್ಟುಬು‌ಡ್ರಪ್ಪ ಎಂದರಲ್ಲ || ಸಿದ್ಧಯ್ಯ ||

ಏ ಜಂಗಮ
ಈ ಬೀದಿ ಮೇಲೆ ಕುದ್ರೆ ಮೇಲೆ
ಕುಂತ್ಕ ಬಾ ಅಂತಲ್ಲ ನಾವು ಹೇಳಿದ್ದು
ಆಕಾಸಕೆ ಕುದುರೆ ಹಾರಿಸಬೇಕು
ಆಕಾಸದಲಿ ಮೂರು ಬಳಸು
ಕುದುರೆ ಸವಾರಿ ಮಾಡಬೇಕು
ಈಗ ನಾವು ಎಲ್ಲಿ ಪ್ರಮಾಣ ಹೇಳುತೀವಿ
ಅಲ್ಲೆ ಬಂದು ಕುದುರೆ ಇಳಿಸಬೇಕು
ಆ ರೀತಿ ನೀನು ಸತ್ಯ ಪ್ರಮಾಣ ಮಾಡಿಬುಟ್ರೆ

ನೀನು ಕೇಳಿದ ಭಿಕ್ಸ ಕೊಡುತೀವಿ
ನಿನ್ನ ಗುರುವೆ ಶಿಷ್ಯರಾಗುತೀವಿ || ಸಿದ್ಧಯ್ಯ ||
ಅಯ್ಯಾ ನಿನಗೂ ನಾವು
ಭಿಕ್ಷವ ಕೊಡುತೀವಿ
ಗುರುವಿಗೆ ಶಿಷ್ಯರು
ನಾವು ಆಯ್ತಿವಿ
ನೀನು ಆಕಾಸಕ್ಕೆ ಕುದುರೆ
ಹಾರ್ಸಿಬುಡು ಎಂದರಲ್ಲ || ಸಿದ್ಧಯ್ಯ ||

ಏನಪ್ಪ ಜಗತ್ತು ಗುರು ಧರೆಗೆ ದೊಡ್ಡಯ್ಯ
ಈ ಸತ್ಯ ಈ ಪ್ರಮಾಣ ನೀವೇ ಮಾಡ್ಸಿ ಕೊಟ್ರಿಯಲ್ಲ ತಂದೆ
ಆಕಾಸಕೆ ಕುದುರೆ ಹಾರಸಬೇಕಂತಲ್ಲಪ್ಪ
ಈ ಆಕಾಸದಲ್ಲಿ ಮೂರು ಸುತ್ತು ಕುದುರೆ ಸವಾರಿ ಮಾಡಿ
ನಿಂತಿರುವಂತಾ ಜಾಗಕ್ಕೆ ಕುದುರೆ ತಂದು ಬುಟ್ಟರೆ
ನಿನಗೆ ಬೇಡಿದ ಭಿಕ್ಸ ಕೊಡುತೀನಿ ಅಂತಾ
ಕೇಳ್ತಾರಲ್ಲೊ ತಂದೆ

ಈ ಪಂಚಾಳದೊರಾ ಬಂದ್ಯಾನಾ
ತಡಿಯಲಾರೆ ಮಾಯಿಕಾರ || ಸಿದ್ಧಯ್ಯ ||