ನನಗೆ ತಾಯಿ ತಂದೆ ಬುಡಿಸಿ
ಅಣ್ಣ ತಮ್ಮನ ಬುಡಿಸಿ
ಜನ ಜಾತಿ ಮರೆಸಿ
ಅಪ್ಪ ನಿನಗೆ ಮಗನಾಗಿ
ನಾನಾಗಿ ಬಂದುದಕೆ
ಇವರು ಮಾಡುವ ಬಂದಾನಾ
ನಾ ತಡಿಯಲಾರೆ ಎಂದುರಲ್ಲ || ಸಿದ್ಧಯ್ಯ ||

ಇವರು ಮಾಡುವಂತ ಸಿಗಸೆಯ
ನಾ ತಡೆಯಲಾರೆ ಮಾಯಿಕಾರ || ಸಿದ್ಧಯ್ಯ ||

ಹೆದುರುಬೇಡ ಕಂದ ಬೆಚ್ಚುಬೇಡ ಮಗನೆs
ನೀಲುಗಾರ ಗಂಡ ನೀಲಿಸಿದ್ದಪ್ಪಾಜಿ
ಅವರು ಹೇಳುವಂತಾ ಪಾವಾಡಗಳನೆಲ್ಲಾ
ನಾವೆ ಮಾಡುತೀವಿ ಮಗನೆ
ನಾವು ಇದ್ದ ಮೇಲೆ ಭಯ ಯಾಕೆ ನನ್ನ ಕಂದಾ
ಹೆದುರು ಬೇಡ ಕಂದ ಹೆದುರು ಬೇಡ ಮಗು ಎನುತೇಳಿ
ಜಗತ್ತು ಗುರು ಧರೆಗೆ ದೊಡ್ಡಯ್ಯಾ
ಕಪ್ಪು ಧೂಳುತಾ ಕುದುರೆಗೆ ಪಿಡದುರು

ಗುರುವೆ ನೀಲುಗಾರರ ಗಂಡ
ನೀಲಿ ಸಿದ್ದಪ್ಪಾಜಿ
ಗುರುವೆ ಆಕಾಸಕ್ಕೆ ಕುದುರೆ
ಹಾರಿತು ನನ ಗುರುವು
ಗುರುವೆ ಆಕಾಸದ ಮೇಲೆ ದೇವಾ
ಕುದುರೆ ಮೇಲೆ ಕುಳುತಿಗಂಡರು || ಸಿದ್ಧಯ್ಯ ||

ಕುದುರೆ ಮೇಲೆ ಕೂತಗಂಡು ದೇವಾ
ಆಕಾಸದಲಿ ಮೂರು ಬಳಸು
ನೀಲಿ ಸಿದ್ದಪ್ಪಾಜಿ
ಕುದುರೆ ಹೊಡಕಂಡು ಗುರುದೇವಾ
ಇಂತ ರಾಜ ಬಪ್ಪುಗಣ್ಣುಪುರದಾ
ಸನ್ನಿದಾನದಲ್ಲಿ ಕುದುರೆ ನಿಲ್ಲಿಸಿಕಂಡು

ನಾನು ಮಾಡುವಂತ ಸೇವೆ
ನಿನ್ನ ಪಾದುಕೆ ಅರುವಾಗಲಪ್ಪ || ಸಿದ್ಧಯ್ಯ ||

ಅಪ್ಪ ಎಲ್ಲಿರುವೆ ಮಾಯಿಕಾರ
ಒದಗಿ ಬಾಪ್ಪ ಧರ್ಮ ಗುರುವೆ|| ಸಿದ್ಧಯ್ಯ ||

ಜಗತ್ತು ಗುರು ಧರೆಗೆ ದೊಡ್ಡಯ್ಯ
ಮಂಟೇದ ಲಿಂಗಪ್ಪ ಪರಂಜ್ಯೋತಿ ಪಾವನ ಮೂರುತಿ
ನೀನೆ ಗತಿ ನೀನೆಮತಿ ಎನುತೇಳಿ ಸಿದ್ದಪ್ಪಾಜಿ
ಮೂರು ಬಳಸು ಕುದುರೆ ವಡದು ಗುರುವು

ಈ ಭೂಮಿ ಭೂಲೋಕಕ್ಕೆ
ಕುದುರೆಯನ್ನೆ ಬಿಟ್ಟರಲ್ಲ || ಸಿದ್ಧಯ್ಯ ||

ಗುರುವೆ ಭೂಮಿ ಭೂಲೋಕಕ್ಕೆ
ಕುದುರೆಯನ್ನ ಗುರುವು
ಬಿಟ್ಟರು ನನ್ನಪ್ಪ
ಧರೆಗೆ ದೊಡ್ಡವರು
ಮಂಟೇದ ಲಿಂಗಯ್ಯ
ಅಯ್ಯಾ ಹೇಳಿದ ಸತ್ಯವಾ
ಮಾಡಿವ್ನಿ ಅಣ್ಣದೀರೆ
ಪಾಂಚಾಳದ ದೊರೆಗೊಳೆ
ನನ ಗುರುವಿಗೆ ಬೇಕಾದ ದಾನ
ಕೊಟ್ಟು ಬುಡ್ರಪ್ಪ ಎಂದರಲ್ಲ || ಸಿದ್ಧಯ್ಯ ||

ಏನಯ್ಯಾ ಜಂಗುಮ
ಈಗ ಕುದುರೆಮ್ಯಾಗಳ ಸವಾರಿ ಮಾಡಿದಿ
ಈಗ ನನ್ನ ಗುರುವಿಗೆ ಬೇಕಾದ ಧಾನ ಧರ್ಮ
ಭಿಕ್ಸ ಕೊಟ್ಟುಬುಡು ಅಂತಾ ಕೇಳ್ತಿಯಲ್ಲ
ನಿನಗೆ ಭಿಗುಸ ನಾವು ಕೊಡಬೇಕಾದ್ರೆ
ನಿನಗೆ ಶಿಷ್ಯರು ನಾವು ಆಗಬೇಕಾದ್ರೆ
ಯಾವ ಸತ್ಯ ಪ್ರಮಾಣ ಮಾಡಬೇಕಂದ್ರೆ
ಇಲ್ಲಿಗಂಟ ಮಾಡಿದ್ದು ಸತ್ಯ ಪ್ರಮಾಣವಲ್ಲ

ಅಯ್ಯಾ ಆನೆ ಗಾತ್ರ ಪಡುಗುಂಡಾ
ಆನೆಗಾತುರ ಕಬುಣ
ಭೂಮಿಗೆ ಮಡಗುತೀವಿ
ಏಳು ದಿಕ್ಕಿನ ಒಳಗೆ ನಾವು
ಏಳು ತಿದಿಯ ಊದುತೀವಿ
ಅಯ್ಯಾ ಇಜ್ಜುಲು ಹಾಕುತೀವಿ
ನೆಲ್ಲೊಟ್ಟು ಸುರುತೀವಿ
ಆನೆಗಾತ್ರ ಪಡಗುಂಡ
ಕಾಯ್ಸಿ ಮಡಗುತೀವಿ
ಅಯ್ಯಾ ಕಾದಿರುವ ಪಡುಗುಂಡಿಗೆ
ಪಾದನೀನು ಮಡಗಬೇಕು || ಸಿದ್ಧಯ್ಯ ||

ಕಾದಿರುವಂತಾ ಆಗಲೀಗಾ ಕಬ್ಬುಣದ ಮೇಲೆs
ಪಾದ ವೂರುಬುಟ್ಟು
ಆಗಲೀಗಾ ಕಬ್ಬುಣದ ಮೇಲೆ ನಿಂತುಗಂಡು
ಕಬ್ಬುಣದ ಭಿಕ್ಸ ಕೇಳಿಬುಟ್ರೆ

ನಿನಗೆ ಶಿಷ್ಯರಾಗುತೀವಿ
ಕೇಳಿದ ಭಿಕ್ಸ ಕೊಡುವುತೀವಿ || ಸಿದ್ಧಯ್ಯ ||

ಈ ಬ್ರಹ್ಮ ಪಂಚಾಳದವರಾ
ಬಂಧಾನ ಗುರುವು
ಇಂದಿಗೆ ಸಾಕಾಯ್ತು
ಈ ಬೇಡಿದ ದಾನ
ಕೊಟ್ಟು ಬುಡ್ರೋ ಪಂಚಾಳದವರೆ || ಸಿದ್ಧಯ್ಯ ||

ನಾನು ಕೇಳಿದಂತಾ ಭಿಕ್ಸವ
ಕೊಟ್ಟುಬುಡಿ ಪಂಚಾಳದವರೆ || ಸಿದ್ಧಯ್ಯ ||

ಎಲ್ಲಾನು ಮಾಡ್ತಿಯೇ
ಎಲ್ಲಾನು ಗೆಲ್ತಿಯೇ ಜಂಗುಮ
ಈ ಪಾವಾಡ ಗೆದ್ದುಕೊ ಎನುತೇಳಿ
ಪಂಚಾಳದ ದೊರುಗೋಳು
ಆನೆ ತೂಕದ ಪಡುಗುಂಡು
ಕಬ್ಬುಣದ ಗುಂಡನೆ ತಂದು
ಭೂಮಿಗೆ ಮಡಗುಬುಟ್ಟು
ಎಳು ದಿಕ್ಕಿನಲ್ಲಿ ಏಳುತಿದಿ ಮಡಗಿ
ಈಗಲೀಗಾ ಆನೆ ತೂಕದ ಕಬ್ಬುಣ ಕಾಯ್ಸಿ
ಕೆಂಡದ ಪರಕಾರ ಕರಗುವಾಗ ಗುರುವು
ಜಂಗುಮಾ
ಈಗಲೀಗಾ ಈ ಕಾದ ಕಬ್ಬುಣದ ಮೇಲೆ ನಿಂತುಗಂಡು
ಕಬ್ಬುಣದ ಭಿಕ್ಸ ಕೇಳು

ಕೇಳಿದ ಗಳಿಗೆ ಒಳಗೆ
ಬಂದು ಧರ್ಮ ಕೊಡುವುತೀವಿ || ಸಿದ್ಧಯ್ಯ ||

ನನ್ನ ಧರೆಗೆ ದೊಡ್ಡವರು
ಮಂಟೇದ ಲಿಂಗಪ್ಪ
ಮಾಯ್ಕಾರದ ಒಡೆಯ
ನನಗೆ ಯಾವ ಕಷ್ಟ ಗುರುವೆ
ಕೊಟ್ಟಿಯಪ್ಪ ನನ್ನ ಗುರುವೆ
ನಿನಗೆ ದತ್ತು ಮಗನಾಗಿ
ನಾ ಬರುಬವುದಪ್ಪ ಮಾಯಿಕಾರ || ಸಿದ್ಧಯ್ಯ ||

ನಿಮಗೆ ಶಿಷ್ಯನಾಗಿ ಗುರುವೆ
ನಾ ಯಾಕೆ ಬಂದೆ ಧರ್ಮ ಗುರುವೆ || ಸಿದ್ಧಯ್ಯ ||

ನಿಮಗೆ ಶಿಸು ಮಗನಾಗಿ ನಾನು ಬಂದುs
ನನ್ನ ಜಾತಿ ಮತದವರ ಕೈಲಿ ಗುರುವು
ಇಂತ ಸಿಗಸಿ ಬಂಧಾನ ಮಾಡಿಸಿಯ
ಜಗತ್ತು ಗುರು ಧರೆಗೆ ದೊಡ್ಡಯ್ಯಾ

ನನ್ನ ಜಾತಿಯರು ಮಾಡುವ ಬಂಧನ
ತಡಿಯಲಾರೆ ಎಂದರಲ್ಲ || ಸಿದ್ಧಯ್ಯ ||

ನನ್ನ ಜಾತಿ ಮತದವರು ದೇವ
ಮಾಡುವಂತ ಸಿಗಸೆ ಬಂಧಾನ ಗುರುವು ತಡಿನಾರೆ ಜಗತ್ತು ಗುರು
ಧರೆಗೆ ದೊಡ್ಡಯ್ಯಾ ಎನುತೇಳಿ
ಮಂಟೇದ ಲಿಂಗಪ್ಪನ ಯೋಚನೆ ಮಾಡುತ
ದೊಡ್ಡಮ್ಮ ತಾಯಿ ಗ್ಯಾನ ಮಾಡುತಾ
ಕಿಡಗಣ್ಣ ರಾಚಪ್ಪಾಜಿಯವರ ಮನದಲಿ ನೆನಿತಾ
ಸಿದ್ದಪ್ಪಾಜಿಯವರು ಇದ್ದುರು
ಪಂಚಾಲದ ದೊರುಗಳು

ಅಯ್ಯ ತಿದಿಯನ್ನೆ ಒತ್ತುತಾರೆ
ಕಬ್ಬುಣವನ್ನ ಕಾಯ್ಸುತಾರೆ || ಸಿದ್ಧಯ್ಯ ||

ಅಯ್ಯಾ ತಿದಿಯನ್ನೆ ಒತ್ತವರೆ
ಆನೆ ತೂಕುದಾ
ಕಬ್ಬುಣವನ್ನೆ ಕಾಯ್ಸಿ
ಗುರುವೆ ಗುರುದೇವಾ
ಅಯ್ಯಾ ಕಾದ ಕಬ್ಬುಣದ ಮೇಲೆ
ನಿನ್ನ ಪಾದ ಮಡಗು ಎಂದರಲ್ಲಾ || ಸಿದ್ಧಯ್ಯ ||

ಈಗಲೀಗಾ ಗುರುದೇವಾ
ಕಾದ ಕಬ್ಬುಣದ ಮೇಲೆ
ಪಾದ ಮಡಗು ಜಂಗುಮ
ನಿನ್ನ ಸತ್ಯ ತೋರೋ ನಿನ್ನ ಗುರು ಸತ್ಯ ತೋರು ಎಂದುರು
ಆಗಲಿ ಕಣರಪ್ಪ
ಆಗಲಿ ಕಣಿರಪ್ಪ
ಪಂಚಾಳದ ದೊರೆಗೊಳೆ
ನೀವು ಹೇಳಿದ ಸತ್ಯಾವ
ಮಾಡುತೀನಿ ಕಣಿರಪ್ಪ
ಹಾಗಂದು ನಿನ್ನ ಗುರುವು
ಗುರುವೆ ಕಾದ ಕಬ್ಬುಣದ ಸುತ್ತ
ಮೂರು ಬಳಸು ದೇವ
ಬಂದವರೆ ನನ್ನಪ್ಪ
ನನ್ನ ರಾಜ ಬೊಪ್ಪಗೌಡ್ನಪುರಕೆ
ಕೈಎತ್ತಿ ಮುಗುದವರೆ
ಅವರು ಕಾದ ಕಬ್ಬುಣದ ಮೇಲೆ
ಪಾದ ಅವರು ಮಡಗುತಾರೆ|| ಸಿದ್ಧಯ್ಯ ||

ಗುರುವೆ ಕಾದ ಕಬ್ಬುಣದ ಮೇಲೆ ದೇವಾ
ಪಾದವ ಉರಕಂಡು
ನೀಲುಗಾರರ ಗಂಡ
ನನ್ನ ನೀಲಿ ಸಿದ್ದಪ್ಪಾಜಿ
ಧರೆಗೆ ದೊಡ್ಡವರ ಪಾದ
ನೆನದಾಗ ಗುರುವು
ಅಯ್ಯಾ ಕಾದ ಕಬ್ಬುಣವೆಲ್ಲ ದೇವಾ
ಕಾವಿ ನೀರಾಗರಿಯುತಾದೆ || ಸಿದ್ಧಯ್ಯ ||

ಕಾದ ಕಬ್ಬುಣವೆಲ್ಲ ದೇವಾ
ಕಾವಿ ನೀರಾಗಿ ಗುರುವು
ಭೂಮಿಲಿ ಹರಿವಂತ ಕಾಲದಲ್ಲಿ ಗುರುದೇವಾ
ಸಿದ್ದಪ್ಪಾಜಿಯವರು ಗುರುವು
ಕಾದ ಕಬ್ಬಿಣದ ಮೇಲೆ ನಿಂತಗಂಡು ದೇವಾ

ಧರೆಗೆ ದೊಡ್ಡವರಿಗೆ
ಕೈ ಎತ್ತಿ ಮುಗುದರಾಗ || ಸಿದ್ಧಯ್ಯ ||

ನನ್ನ ತೋಪುನ ದೊಡ್ಡಮ್ಮನ ಪಾದ
ಮನದಲ್ಲಿ ನೆನದುಕಂಡು|| ಸಿದ್ಧಯ್ಯ ||

ಗುರುವೆ ಕಾದ ಕಬ್ಬುಣದ ಮೇಲೆ ಗುರುವೆ
ನಿಂತಗಂಡು ನನ ಗುರುವು
ತೋಪಿನ ದೊಡ್ಡಮ್ಮನ
ನೆನೆದುರು ನನ್ನ ಕಂದಾ
ನೀಲಿ ಸಿದ್ದಪ್ಪಾಜಿ
ಗುರುವೆ ಮಗನ ದುಃಖವಾ
ಮಗನ ಬಂಧಾನವ
ನೋಡಕಂಡು ದೊಡ್ಡಮ್ಮ
ನನ್ನ ಧರೆಗೆದೊಡ್ಡವರಿಗೆ
ಕೈ ಎತ್ತಿ ಮುಗುದಳಲ್ಲ || ಸಿದ್ಧಯ್ಯ ||

ಗುರುವೆ ಗುರುದೇವಾ
ನನ ಮಗನ ಬಾದೆ ಬಂದಾನ ಗುರುವು
ನಾನಾಗಿ ತಾಳಲಾರೆಶ
ನನ ಮಗನ ಕಷ್ಟಗಳ ಕಣ್ಣಿಂದ ನೋಡಲಾರೆ ಗುರುವು
ಧರೆಗೆ ದೊಡ್ಡಯ್ಯನ ಮಂಟೇದ ಲಿಂಗಪ್ಪ
ಈಗಲೀಗಾ ನನ್ನ ಮಗನ ಭವ ಬಂಧಾನಾ
ತಪ್ಪಿಸಿದ್ರೆ ಸರಿಯಾಯ್ತು ದೇವಾ
ತೆಪ್ಪುಸ್ದೆ ಹೋಗುಬುಟ್ರೆ ಸ್ವಾಮಿ
ನಿಮ್ಮ ಪಾದದಲಿ ಬೀಳ್ತಿನಿ
ನಾ ಬಿದ್ದು ಪ್ರಾಣ ಬುಡುತೀನಿ || ಸಿದ್ಧಯ್ಯ ||

ನನ್ನ ಮಗನ ಪ್ರಾಣಕೆ ಮೊದಲಾಗಿ ದೇವಾs
ನಾನೆ ನಿಮ್ಮ ಪಾದದಲಿ ಬಿದ್ದು ಗುರುವು
ಪ್ರಾಣ ಬುಟ್ಟುಬುಡ್ತಿನಿ ಜಗಂಜ್ಯೋತಿ ಧರೆಗೆ ದೊಡ್ಡಯ್ಯಾ ಎನುತೇಳಿ
ತೋಪುನ ದೊಡ್ಡಮ್ಮ ಕಿಡುಗಣ್ಣು ರಾಚಪ್ಪಾಜಿ
ಹಿರಿ ಚೆನ್ನಾಜಮ್ಮ ಮಡಿವಾಳು ಮಾಚಯ್ಯ ಫಲಾರುದಯ್ಯ

ಎಲ್ಲಾ ಶಿಸು ಮಕ್ಕಳು ಬಂದು
ಧರೆಗೆ ದೊಡ್ಡವರ ಬಳಸು ಗುಳು ಗುಳನೆ ಅಳುವುತಾರೆ || ಸಿದ್ಧಯ್ಯ ||

ಗುರುವೆ ಎಲ್ಲಾ ಶಿಸುಮಕ್ಕಳು ಗುರುವೆ
ದುಃಖವ ಪಡುತಾರೆ
ಕಾದ ಕಬ್ಬುಣದ ಮೇಲೆ
ನನ್ನ ಸಿದ್ದಪ್ಪಾಜಿಯವರು
ತಾವೇ ನಿಂತವರೆ
ಗುರುವೆ ಮಕ್ಕಳ ದುಃಖವಾ
ಕಣ್ಣಾರೆ ನೋಡಿಬುಟ್ಟು
ಸಿದ್ದಪ್ಪಾಜಿಯವರ
ಕಷ್ಟವನ್ನೋಡುಬುಟ್ಟು
ನನ್ನ ಧರೆಗೆ ದೊಡ್ಡವರು
ನನ್ನ ಮಂಟೇದ ಲಿಂಗಯ್ಯ
ಅಮ್ಮ ಕೇಳವ್ವ ನನ್ನ ಕಂದಾ
ಕೇಳು ನನ ಮಗಳೆ
ಹಿರಿಚೆನ್ನಾಜಮ್ಮ
ಕಿಡುಗಣ್ಣ ರಾಚಪ್ಪಾಜಿ
ನನ್ನ ತೋಪುನ ದೊಡ್ಡಮ್ಮ
ಅವ್ವ ಧರ್ಮಕ್ಕೆ ನಾ ಹುಟ್ಟಿ
ಕರ್ಮಕ್ಕೆ ಮಾರಿ
ಎನುತೇಳಿ ನನ ಕಂದಾ
ಇಲ್ಲಿಗಂಟ ನಾನು
ತಡೆದಿದ್ದೆ ದೊಡ್ಡಮ್ಮ
ಈಗ ಮೈಮೆ ಮಾಯುತುಗಾರ
ಈಗ ತಾನೆ ತೊರಬೇಕು || ಗಂಗಾಧರ ||

ಈಗಲೀಗ ಧರ್ಮಗುರು ಮಂಟೇದಲಿಂಗಯ್ಯ
ಎನ್ನುವಂತ ನಾಮಕರಣವನ್ನೆ ಪಡೆದು ಕಂದಾ
ಕರ್ಮಕ್ಕೆ ಕೈ ನೀಡಬಾರದು
ಧರ್ಮ ಬುಡಬಾರದು ಎನುತೇಳಿ
ಪಾಂಚಾಳದ ದೊರುಗಳಿಂದ
ನನ ಕಂದ ನನ್ನ ಮಗನು ಸಿದ್ದಪ್ಪಾಜಿಗೆ ಇಷ್ಟು ಬಂಧನಾ
ಕೊಟ್ಟುದಾಯ್ತು ದೊಡ್ಡಮ್ಮ
ಈಗಲೀಗಾ ನನ್ನ ಕಪ್ಪು ಧೂಳುತದ ಮಯಿವೆ
ಈಗತಾನೆ ತೋರುತೀನಿ ಕಂದಾ
ನನ್ನ ಜಗತ್ತುಗುರು ಮಯಿಮೆ
ಈಗತಾನೆ ನೋಡು ದೊಡ್ಡಮ್ಮ ಎನುತೇಳಿ

ಎಳನೂರು ಜನರು
ಮಾರಿರ ನನ ಗುರುವೆ ಅವರು
ಜೋಳುಗೆಲಿ ಮಡಗಿದ್ದುರು
ಅಪ್ಪ ಜೋಳುಗೇಲಿದ್ದ ಮಾರಿರಾ
ಅವರು ಭೂಮಿ ಮೇಲೆ ಬುಟ್ಟರಂತೆ || ಸಿದ್ಧಯ್ಯ ||

ಏಳುನೂರು ಮಾರೀರಾ ದೇವಾ
ಮುತ್ತಿನ ಜೋಳಿಗೆಯಿಂದ ಬುಟ್ರು
ಮಾ ಗುರು ಮಂಟೇದಲಿಂಗಪ್ಪ
ಎಳುನೂರು ಜನ ಮಾರೀರು ಗುರುವು
ಏನಪ್ಪ ಜಗತ್ತುಗುರು
ನಮ್ಮ ಎಲ್ಲಿಗೆ ಕಳುಗರಿ
ಯಾತಕೆ ಕಳುಗರಿ
ನೀವು ಒಕ್ಕದ ಮನೆಗೆ ಒಂಟೋಯ್ತಿನಿ ಎಂದುರು
ಕೇಳಿರಮ್ಮಾ ಏಳನೂರು ಜನ ಮಾರೀರೆ

ಹಲಗೂರು ಏಳುಬೀದಿ
ಚಿಲುಪುರ ಏಳುಬೀದಿ
ಏಳೇಳು ಬೀದಿ ಒಳಗೆ
ಕೇಳಿ ನನ್ನ ಕಂದಾ
ಅಮ್ಮ ಹದುನಾಕು ಬೀದಿ
ಜನಗಳ ನನ್ನ ಕಂದಾ
ನಿನಗೆ ಹಾರವಾಗಿಒ ಕೊಡುತೇನಿ
ಇವರು ಏಳುಜನ ಕಂದಾ
ಪಾಳ್ಳೆಗಾರ್ರ‍ ಕಂದ
ಬುಟ್ಟು ಬುಡಿ ನನ ಕಂದಾ
ಎಳುಮಂದಿ ಕಂದಾ
ದೊರೆಗಳ ಕಂದಾ
ತಂಟೆಗೆ ಹೋಗಬೇಡಿ
ಈ ಹದಿನಾಲಕು ಗ್ರಾಮ ಬೀದಿ
ಒಂದನುವೆ ಬುಡಬ್ಯಾಡಿ || ಸಿದ್ಧಯ್ಯ ||

ಹಲಗೂರು ಪಂಚಾಳಗೇರಿ
ಎಂದರೆ ನನ್ನ ಕಂದಾ
ಇದ ಹಾಳುಮಾಡುವ ಗಂಟ
ನೀವು ಬುಡನೆ ಬ್ಯಾಡಿ ಕಣ್ರವ್ವ
ಹಲಗೂರು ಪಟ್ಟಣ
ಹಾಳು ಮಾಡನೆ ಬೇಕು
ಗಾಳಿಗೆತ್ತಿ ತೊರುಬೇಕು
ಇವರಿಗೆ ಬೇಕು ಬೇಕಾದ ಕಷ್ಟ ನೀವು
ಕೊಟ್ಟು ಬುಡ್ರಮ್ಮ ಎಂದರಲ್ಲ || ಸಿದ್ಧಯ್ಯ ||

ಈಗಲೀಗಾ ನನ ಕಂದಾ
ಇವರಿಗೆ ಬೇಕು ಬೇಕಾದ ಕಷ್ಠನೆ
ಕೊಟ್ಟು ಬುಡಿ ಕಂದಾ
ಹಲಗೂರು ಪಟ್ಟಣ ಹಾಳುಮಾಡಿ ಕಂದಾ
ಅಕ್ಕಪಕ್ಕದ ಊರಿಗೆ ಮಾತ್ರ ದೃಷ್ಟಿ ಮಡಗಿ ನೋಡುಬ್ಯಾಡಿ
ಅಕ್ಕಪಕ್ಕದ ಊರಿಗೆನಾದ್ರು ಹೊರಟೋಗಿ ಬುಟ್ರೆ ಕಂದಾ

ನೀವು ಒಕ್ಕೊಕ್ಕಿದ ಮೂಲೆಗೆ
ನಾ ಹೊಗೆಯಾಕ್ತೀನಿ ಎಂದಾರಲ್ಲಾ || ಸಿದ್ಧಯ್ಯ ||

ಗುರುವೆ ಒಕ್ಕೊಕ್ಕಿದ ಮೂಲೆಗೆ
ಹೊಗೆಯಾ‌ಕ್ತಿನಿ ಕಂದ
ನೀವು ಎಲ್ಲಿಗೇಳಿದ್ರು ಕಂದಾ
ಹಲಗೂರು ಬುಟ್ಟುಬುಟ್ಟು
ನೀವು ಎಲ್ಲಿಗು ಹೋಗಬ್ಯಾಡಿ
ಈ ಹಲಗೂರು ಎಳು ಬೀದಿಯ ನೀವು
ಕಂಡುತ ಬಿಡಲೆ ಬ್ಯಾಡಿ
ನಿಮ್ಮ ಏಳುನೂರು ಮಾರಿರಿಗೆ ಕಂದಾ
ದೊಡ್ಡಬ್ಬ ಆಯ್ತದೆ
ನಿಮಗೆ ಚಿಕ್ಕಬ್ಬ ಆಯ್ತದೆ
ನಿಮಗೆ ಮರಬ್ಬ ಆಯ್ತದೆ
ಈ ಪಂಚಾಳದ ಕೇರಿಗೆ ನೀವು
ಒಂಟೋಗಿರವ್ವ ಎಂದಾರಲ್ಲಾ || ಸಿದ್ಧಯ್ಯ ||