ಹಲಗೂರು ಪಂಚಾಳಗೇರಿಗೆ ಹೊರಟೋಗಿ ಕಂದ ಎಂದರು
ಏಳುನೂರು ಜನ ಮಾರೀರ್ನು ಮುತ್ತಿನ ಜೋಳಿಗೆಯಿಂದ ಬುಟ್ಟರು
ಎಳುನೂರು ಮಾರಿರು ದೇವಾ
ಧರೆಗೆ ದೊಡ್ಡವರ ಅಪ್ಪುಣೆಯಾಗಿ ಬುಡ್ತು ಎನುತೇಳಿ

ಅನ್ನ ಇಲ್ಲದಿದ್ದ ಮಾರೀರು
ನಿದ್ರೆ ಇಲ್ಲದಿದ್ದ ಮಾರೀರು
ಕಣ್ಣು ಕಾಣದ ಮಾರೀರು ಗುರುವೆ
ಕಿವಿ ಕೇಳದಿದ್ದ ಮಾರೀರು
ಅಯ್ಯಾ ಎಲ್ಲಾ ಮಾರೀರು ಗುರುವೆ
ಹಲಗೂರಿಗೆ ನುಗ್ಗುತಾರೆ || ಸಿದ್ಧಯ್ಯ ||

ಅಯ್ಯಾ ಮಾರಿನುಗ್ಗಿದ ಮನೆ ಓಳಗೆ
ಇಲಿ ಹೆಗ್ಗುಣ ಸಾಯುತಾವೆ|| ಗಂಗಾಧರ ||

ಅಯ್ಯಾ ಇಲಿ ಹೆಗ್ಗುಣ ಸತ್ತಂಗೆ
ಸಾಲು ಹೆಣವ ಕೆಡವುತಾರೆ || ಗಂಗಾಧರ ||

ಗುರುವೆ ದೊಡ್ಡ ದೊಡ್ಡವರಿಗೆಲ್ಲ
ಹಿಂದೆ ಬೇದಿಯ ಕೊಟ್ಟವರೆ
ಮುಂದು ಭೇದಿಕೊಟ್ಟವರೆ
ಒಂದು ವಮನದಲ್ಲಿ
ಒಂದೆ ಬೇದಿ ಒಳಗೆ
ಅವರು ಪಕ ಪಕನೆ ಗುರುದೇವಾ
ಪ್ರಾಣವನ್ನೆ ಬಿಡುವುತಾರೆ || ಸಿದ್ಧಯ್ಯ ||

ಗುರುವೆ ಮುದುಕಿರು ಮೋಟೀರು
ಎಡಾಯಸದೋರು ಗುರುವು
ಹೆಂಗಸರಿಗೆ ನನ್ನಪ್ಪ
ಕಂಕುಳು ಒಳಗೆ ದೇವಾ
ಶಂಕುದಾಳಿ ಕೊಟ್ಟು
ಗುರುವೆ ಒಂದು ಮೂಡಿಸವರೆ
ದೇವಾ ಒಂಭತ್ತು ಹೊಡಿಸವರೆ
ಗುರುವೆ ಶಂಕುನ ಬಾದೆ ದೇವಾ
ತಡಿನಾರುವೆ ದೇವಾ
ಅವರು ಕೊರಗಿ ಕೊರಗಿ
ಪಕ್ಕನೆ ಪ್ರಾಣ ಬಿಡುವುತಾರೆ || ಸಿದ್ಧಯ್ಯ ||

ಅವರು ಹಾಲು ಕುಡಿವ ಮಕ್ಕಳಿಗೆ
ರಕುತ ಭೇದಿ ಕೊಟ್ಟರಲ್ಲ || ಸಿದ್ಧಯ್ಯ ||

ಅವರು ಬೀದಿಲಾಡೊ ಮಕ್ಕಳಿಗೆ
ಹುಣ್ಣು ರೋಗ ಕೊಟ್ಟರಲ್ಲ || ಸಿದ್ಧಯ್ಯ ||
ಅವರು ಹಾದಿಲಾಡೋ ಮಕ್ಕಳಿಗೆ
ಗ್ವಾರು ರೋಗ ಕೊಟ್ಟರಲ್ಲಾ || ಸಿದ್ಧಯ್ಯ ||

ಅವು ಲಾಲಿಲಾಡೋ ಮಕ್ಕಳು
ಲಾಲಿ ಒಳಗೆ ಸಾಯುತಾವೆ || ಸಿದ್ಧಯ್ಯ ||

ಲಾಲಿ ಒಳಗೆ ಆಡುವಂತ ಮಕ್ಕಳುs
ಹಲಗೂರಲ್ಲಿ ಸಾಯುವಂತ ಕಾಳದಲ್ಲಿ ಗುರುವು
ಧರೆಗೆ ದೊಡ್ಡವರು ಮಂಟೇದಾ ಲಿಂಗಪ್ಪ
ಹಲಗೂರು ಪಂಚಾಳಗೇರಿಗೆ ಗುರುವು
ಮಾರೀ ಕೂಡುಬುಟ್ಟು ಗುರುದೇವಾ
ಹಲಗೂರು ಹಾಳಾಗಲಿ ಎನುತೇಳಿ ಎತ್ತಿ ಶಾಪ ಕೊಟ್ಟುಬುಟ್ಟು

ಅವರು ರಾಜಬಪ್ಪಗಣ್ಣಪುರಕೆ ನನ್ನ
ಆದಿ ಗುರು ದಯಮಾಡುತಾರೆ || ಸಿದ್ಧಯ್ಯ ||

ಹಲುಗೂರು ಬುಟ್ಟುಬುಟ್ಟು ದೇವಾs
ರಾಜ ಬೊಪ್ಪಗೌಡ್ನಪುರಕೆ ದೇವಾ
ಜಗತ್ತು ಗುರು ಧರೆಗೆ ದೊಡ್ಡವರು
ಹೊರಟೋದ ಕಾಲದಲ್ಲಿ
ಹಲಗೂರು ಪಂಚಾಳಗೇರಿ ಒಳಗೆ
ಮಾರೀರ ಆಟ ಪಾಠ
ಆಡುವಂತ ಕಾಲದಲ್ಲಿ ಗುರುವು

ಅಯ್ಯಾ ಹಾದಿಬೀದಿ ಒಳಗೆ
ಹೆಣವೆ ಇಟ್ಟಾಡುತಾವೆ || ಸಿದ್ಧಯ್ಯ ||

ಹಾದಿ ಬೀದಿ ಒಳಗೆ ದೇವಾs
ಹೆಣಗಳು ಇಟ್ಟಾಡುವಂತಾ ಕಾಲದಲ್ಲಿ
ಏಳುಮಂದಿ ದೊರೆಗಳು
ಏನಿರಣ್ಣ ನಮ್ಮ ಊರಿಗೆ
ಕಷ್ಟ ಬಂದೊಯ್ತು ಕಾಯಿಲೆ ಬಂದೊಯ್ತು
ಅಳೋ ಮಕ್ಕಳಿಲ್ಲ ಆಡುವಂತ ಹಸುಳೆ ಇಲ್ಲ
ಈಗಲೀಗಾ ಎಲ್ಲಾ ಸತ್ತು ಸತ್ತು ಪ್ರಾಣ ಬುಟ್ಟುಬುಟ್ರಲ್ಲ
ನಾವು ಏಳು ಮಂದಿ ದೊರಗಳಾಗಿ ನಾವು ಹುಟ್ಟಿ ಬೆಳದು
ಈ ಸತ್ತು ಪ್ರಾಣಿಗಳ ಒಪ್ಪ ಮಾಡಬೇಕಂತೇಳಿ
ಅಯ್ಯಾ ಕ್ವಾಣನ ಗಾಡಿನ ಮೇಲೆ
ಸತ್ತ ಹೆಣವ ಏರುತ್ತಾರೆ || ಸಿದ್ಧಯ್ಯ ||

ಸತ್ತೋದ ಪ್ರಾಣಿಗಳೆಲ್ಲಾನು ದೇವಾs
ಕ್ವಾಣನ ಗಾಡಿ ಮೇಲೆ
ಏಳುಜನ ದೊರೆಗಳು ಏರಿಸಿ
ಅಳ್ಳ ತಗಿಯಾಕಾಗದಿಲ್ಲ ಕನ್ರಪ್ಪ ಎನುತೇಳಿ
ಉತ್ತು ಹೊಲದಲಿ ಸತ್ತ ಪ್ರಾಣಿಗಳೆಲ್ಲನು ಕಳಿಸಿ
ದಿನು ಮದ್ಯಾಹ್ನದೊಳಗಾಗಿ
ಅಲ್ಲಿ ಗಬ್ಬು ನಾಥ ಹುಟ್ಟಿಸವರೆ ದೇವಾ
ಅಡುಕ ನಾತ ಹಬ್ಬುಸವರೆ

ಸತ್ತು ಬಿದ್ದಿರೊ ಪ್ರಾಣಿಗಳ ಮೇಲೆ ಗುರುವೆ
ಹದ್ದು ಕಾಗೆ ಆಡುತಾವೆ || ಸಿದ್ಧಯ್ಯ ||

ಸತ್ತೊದ ಪ್ರಾಣಿಗಳ
ಆಗಲೀಗಾ ಬಂಡಿಗಾಡಿ ಕಟ್ಟಿ ಏರಿಸಿ
ಗಬ್ಬುನಾತ ಹುಟ್ಟಿಸಿ
ಹದ್ದು ಕಾಗೆ ಆಡಿಸಿ ಗುರುವು
ಆಗಲೀಗಾ ನೀಲಗಾರರ ಗಂಡ ನೀಲಿ ಸಿದ್ದಪ್ಪಾಜಿ
ಏನಿರಪ್ಪಾ ಎಳು ಮಂದಿ ದೊರೆಗಳೆ

ನನ್ನ ಗುರುವೆ ಬೇಕಾದ ಭಿಕ್ಸ
ಕೊಟ್ಟು ಬುಡ್ರಣ್ಣ ಎಂದರಲ್ಲಾ || ಸಿದ್ಧಯ್ಯ ||

ನನ್ನ ಸ್ವಾಮಿಗೆ ಬೇಕಾದ ದಾನ
ಕೊಟ್ಟುಬುಡ್ರೊ ಎಂದರಲ್ಲ || ಸಿದ್ಧಯ್ಯ ||

ನನ್ನ ಸಿದ್ದಪ್ಪಾಜಿಯವರ
ಮಾತನೆ ಕೇಳಿಕಂಡು
ಎಳುಮಂದಿ ಗುರುವೆ
ಪಾಳ್ಳೆಗಾರ್ರು‍ ದೇವಾ
ಪುಂಡುಗಾರ್ರು‍ ಗುರುವು
ಅಯ್ಯಾ ಎನಯ್ಯಾ ಗುರುವೆ
ಏನು ಜಂಗುಮ
ನಿನಗೆ ಕಬ್ಬುಣ ಬೇಕಾದರೆ
ನಾವಾಗಿ ಕೊಡುತೀವಿ || ಸಿದ್ಧಯ್ಯ ||

ಕಬ್ಬುಣ ಬೇಕಾದ್ರೆ
ನಾವು ಕೊಟ್ಟಂತ ಕಬ್ಬುಣ
ನೀನು ಹೊತ್ತುಗಂಡು ಹೋಗಬಲ್ಲಿಯಾ
ಈಗಲೀಗಾ ನಮ್ಮ ಹಟ್ಟಿ ಹಾಳಾಗಿಬುಡ್ತು
ಕೊಟ್ಟರೆ ಬರಿದಾಗಿ ಬುಡ್ತು
ಗ್ರಾಮವೇ ಕೆಟ್ಟು ಹೋಯ್ತು

ನಮ್ಮ ಊರು ಹಾಳಾದ ಮೇಲೆ
ನಿಮಗೆ ಶಿಷ್ಯರಾಗುತೀವಿ || ಸಿದ್ಧಯ್ಯ ||

ಅಯ್ಯಾ ನಿಮಗೆ ಶಿಷ್ಯರು ನಾವು
ಆಯ್ತಿವಿ ಕಣಪ್ಪ
ನಿಮ್ಮ ಗುರುಗೆ ಭಕುತರು
ಆಯ್ತಿವಿ ಕಣಯ್ಯ

ನಾವು ಕೆಟ್ಟು ಹೋದ ಕಾಲದಲ್ಲಿ
ನಿಮ್ಮ ಪಾದ ಬೇಡಿತೀವಿ || ಸಿದ್ಧಯ್ಯ ||

ನಿಮಗೆ ನಾವು ಶಿಷ್ಯರಾಯ್ತಿವಿs
ನಿಮ್ಮ ಧರೆಗೆ ದೊಡ್ಡೋರ್ಗೆ ನಾವು ಭಕುತರಾಯ್ತಿವಿ ಎನುತೇಳಿ
ಹಲಗೂರು ಪಂಚಾಳದ ಏಳು ಜನ ದೊರುಗಳು

ಹಾರೆ ಮೂರು ಗುರುವು
ಎಲಗುದಲಿ ಮೂರು
ದಬುಕ ಮುರು ದೇವಾ
ಒಂಬತ್ತು ಆಯುಧಗಳ
ತಾವಾಗಿ ಮಾಡಿಕಂಡು
ನನ್ನ ಧರೆಗೆ ದೊಡ್ಡೋರ ಮಗನು
ನೀಲಿ ಸಿದ್ದಪ್ಪಾಜಿಯ
ವಂದಿಗೆ ಕರಕಂಡು
ಅವರು ಹಲಗೂರು ಬಿಟ್ಟರಂತೆ
ಬೊಪ್ಪಗೌಡ್ನಪುರಕೆ ಬರುವುತಾರೆ || ಸಿದ್ಧಯ್ಯ ||

ಹಲಗೂರಾ ಪಂಚಾಳಗೇರಿ ಬುಟ್ಟೂs
ರಾಜ ಬಪ್ಪುಗೌಡ್ನಪುರಕೆ ಗುರುದೇವಾ
ನೀಲುಗಾರ ಗಂಡ ನೀಲಿ ಸಿದ್ದಪ್ಪಾಜಿಯವರು
ಏಳುಜನ ದೊರು ಮಕ್ಕಳ
ಧರೆಗೆ ದೊಡ್ಡವರ್ಗೆ ಶಿಸು ಮಕ್ಕಳಾಗಿ ಪಡಕಂಡು ಗುರುವು
ಸಿದ್ದಪ್ಪಾಜಿಯವರಿಗೂ ಕೂಡ
ಶಿಸು ಮಗನಾಯ್ತಿವಿ ಎನುತೇಳಿ

ಅಯ್ಯಾ ಭೂಮಿಗೆ ದೊಡ್ಡೋರ ಬಳಿಗೆ
ಪಾಳ್ಳೆಗಾರ್ರು‍ ಬರುವುತಾರೆ || ಸಿದ್ಧಯ್ಯ ||

ಜಗತ್ತು ಗುರು
ಧರೆಗೆ ದೊಡ್ಡೋರ ಬಳಿಗೆ ದೇವಾs
ಸಿದ್ದಪ್ಪಾಜಿಯವರು
ದೊರೆಗಳ ಸಮೇತ ಬರುವಾಗ

ಗುರುವೆ ಬರುವ ಮಗನಾ ತಾಯಿ
ಕಂಡಳು ದೊಡ್ಡಮ್ಮ ತಾಯಿ || ಸಿದ್ಧಯ್ಯ ||

ಗುರುವೆ ಸಿದ್ದಪ್ಪಾಜಿಯವರು
ಬರುವ ಕಾಲದಲ್ಲಿ
ತೋಪಿನ ದೊಡ್ಡಮ್ಮ
ನನ್ನ ಮಗನು ಬಂದುಬುಟ್ಟು
ಹಾಗಂದು ತಾಯಿ ದುಡುವುಳ್ಳ ದೊಡ್ಡಮ್ಮ
ಅವಳು ಮುಂಜರಿಗಿನಲ್ಲಿ ತಾಯಿ
ಮಗನ ಇಳಿಯ ತಗುದಾಳು || ಸಿದ್ಧಯ್ಯ ||

ಅಪ್ಪ ಕಷ್ಟದಲ್ಲಿ ಕಂದಯ್ಯಾ
ನೀ ಬಂದಿಯಾ ನನ್ನ ಮಗನೆ
ಸುಖದಲಿ ಬಂದಿಯೋ
ನೀಲಿ ಸಿದ್ದಪ್ಪಾಜಿ
ನೀನು ಪಟ್ಟಂತ ಕಷ್ಟವೆಲ್ಲ
ನಮ್ಮ ಗುರುವಿಗರಿವಾಗಲಪ್ಪ || ಸಿದ್ಧಯ್ಯ ||

ಸಿದ್ದಪ್ಪಾಜೀ
ಕಷ್ಟದಲಿ ಬಂದಿಯೊ ಸುಖದಲಿ ಬಂದಿಯೋ ಕಂದಾ
ಈಗಲೀಗಾ ನಿನ್ನ ಪಟ್ಟುಪಾಡು ಕೊಟ್ಟ ಕಷ್ಟವೆಲ್ಲ
ಗುರುವಿನ ಪಾದಕೆ ಅರುವಾಯ್ತೋ ಕಂದಾ ಎಂದುರು
ದೊಡ್ಡಮ್ಮ
ಕಷ್ಟದಲಿ ಬಂದುನೋ
ಸುಖದಲಿ ಬಂದುನೋ ತಾಯಿ
ಈಗಲೀಗಾ ನಿಮ್ಮ ಪಾದ
ಕಿಡಗಣ್ಣ ರಾಚಪ್ಪಾ ಜೀಯವರ ಪಾದ
ನನ್ನ ಪಡದಂತಾ
ಧರೆಗೆ ದೊಡ್ಡವರ ಪಾದ || ಸಿದ್ಧಯ್ಯ ||

ನಾನು ಮಾಡಿದ ಸಿಗುಸಿ
ಪಟ್ಟಂತಾ ಪಾಡುs
ನಿಮ್ಮ ಮೂರು ಮಂದಿ
ಮೂರುತಿಗಳು
ಪಾದಕೆ ಗೊತ್ತು
ತಾಯಿ ದೊಡ್ಡಮ್ಮ
ಹಲಗೂರು ಪಂಚಾಳಗೇರಿ
ಪಾವಾಡನ ಗೆದ್ದು
ಈಗ ನಿನ್ನ ಪಾದಕೆ ನಾನು
ಬಂದೀವ್ನಿ ದೊಡ್ಡಮ್ಮ ತಾಯಿ || ಸಿದ್ಧಯ್ಯ ||

ಸಿದ್ದಪ್ಪಾಜೀ
ಈಗ ಜಗತ್ತು ಗುರುಗಳ ಬಳಕೆ ಕಂದಾ
ಹೋಗಪ್ಪ ಮಗನೆ
ಹೋಗು ನನ ಕಂದಾ ಎಂದುರು
ಏಳು ಮಂದಿ
ಹಲುಗೂರು ಪಂಚಾಳದವರು
ಪಾಳೆಗಾರ್ರ‍ ಕರತಂದು
ಜಗತ್ತು ಗುರುಗಳ ಮುಂಭಾಗದಲಿ ನಿಲಿಸಿ
ಸಿದ್ದಪ್ಪಾಜಿವರು

ಅವರು ಧರೆಗೆ ದೊಡ್ಡವರಿಗೆ
ಕೈ ಎತ್ತಿ ಮುಗುದರಾಗ || ಸಿದ್ಧಯ್ಯ ||

ಬಂದಂತ ಮಗನಾ ಕಣ್ಣಾರ ನೋಡಿ
ಜಗತ್ತುಗುರು ಧರೆಗೆ ದೊಡ್ಡಯ್ಯ
ಮಂಟೇದು ಲಿಂಗಪ್ಪ
ಸಿದ್ದಪ್ಪಾಜೀ
ಹಲಗೂರಿಂದ ಬಂದಿಯಾ ಕಂದಾ
ಬಂದೀ ತಂದೆ ಬಂದೀ ಗುರುದೇವಾ
ಈಗಲೀಗಾ ನೀನು ಕರಕಂಡು
ಬಂದಿರ್ತಕಂತವರು
ಇವರು ಏಳು ಜನ ಯಾರಪ್ಪ?
ಗುರುದೇವಾ
ಹಲಗೂರು ಪಂಚಾಳದಲ್ಲಿ

ಶಿಕ್ಷಿಯಾ ಮಾಡಿ ನನಗೆ
ಮೋಕ್ಷ ಕೊಟ್ಟವರು ಇವರು || ಸಿದ್ಧಯ್ಯ ||

ಶಿಗುಸಿ ಮಾಡಿ ಗುರುದೇವಾ
ಮೊಕ್ಷ ಕೊಟ್ಟಂತಾ
ಪಾಳ್ಯಗಾರ್ರು‍ ಗುರುದೇವಾ ಎಂದುರು
ಎಳು ಜನ ಪಾಳ್ಯಗಾರ್ರು‍ ಗುರುವು
ಸಿದ್ದಪ್ಪಾಜಿಯವರ ಮಾತ ಕೇಳಿಕಂಡು
ಧರೆಗೆ ದೊಡ್ಡವರ ಮುಖ ನೋಡಿಕಂಡು

ಅಪ್ಪ ಪಾಳ್ಯಗಾರ್ರ‍ ಹೆಸರು ಗುರುವೇ
ಎಂದೆಂದಿಗೂ ಬ್ಯಾಡವಪ್ಪ || ಸಿದ್ಧಯ್ಯ ||

ಅಪ್ಪ ಪಾಳ್ಯೆಗ್ರಾರು ಎಂಬ ಹೆಸರು
ಎಂದೆಂದಿಗೂ ದೇವಾ ನಮಗೆ
ಬ್ಯಾಡಿ ನನ್ನಪ್ಪ ಗುರುವು
ಅಪ್ಪ ನಿಮ್ಮ ಶಿಷ್ಯರಾಗುತೀವಿ
ನಿಮ್ಮಗನಿಗೂ ಶಿಷ್ಯರಾಗುತೀವಿ || ಸಿದ್ಧಯ್ಯ ||

ನಿಮ್ಮ ಮೈಮೆ ಮೈಥುಗಾರ ತಿಳಿಲಿಲ್ಲ ದೇವಾs
ಇವರ ಜಗತ್ತು ಗುರುಗಳು ಮಗಾ
ಸಿದ್ದಪ್ಪಾಜಿ ಎನ್ನವುದು ನಮಗೆ ಗೊತ್ತಿಲ್ಲದೆ ಗುರುವು
ಇಂತಾ ಭವ ಬಂಧನವಾ ಸಿಗುಸಿ
ನಿಮ್ಮ ಮಗನಿಗೆ ನಾವು ಕೊಟ್ಟುದಕೆ ಗುರುವು
ನಿಮಗು ಶಿಶು ಮಕ್ಕಳಾಗಿ
ನಿಮ್ಮ ಮಗ ಸಿದ್ದಪ್ಪಾಜಿಗೂ
ನಾವು ಶಿಸು ಮಕ್ಕಳಾಗಿ

ಅಪ್ಪ ಹುಟ್ಟಿದ ಮಕ್ಕಳ ನಾವು
ಸಿದ್ದಪ್ಪಾಜಿ ಎನ್ನುತೀವಿ || ಸಿದ್ಧಯ್ಯ ||

ನಿಮ್ಮ ಮನೆ ದೇವುರಾ ಮಾಡಿಕಂಡು
ಮನೆಯಲ್ಲಿ ಬಾಳುತೀವಿ || ಸಿದ್ಧಯ್ಯ ||

ಧರೆಗೆ ದೊಡ್ಡಯ್ಯ
ಈಗಲೀಗಾ ನಿಮಗೆ ಶಿಸುಮಕ್ಕಳಾಗಿ
ಈ ನಡುವೆ ನರಲೋಕದಲ್ಲಿ ಬಾಳಿ ಬದುಕುತೀವಿ ಸ್ವಾಮಿ
ಈಗಲೀಗಾ ನಮ್ಮ ಹೊಟ್ಟೆಲಿ ಗುರುದೇವಾ
ನೀವು ಮಕ್ಕಳ ಸಂತಾನ ಕೊಟ್ಟುದ್ದೇಯಾಗಿಬುಟ್ಟರೇ
ಸಿದ್ದಾಪ್ಪಾಜೀ ಎನುತೇಳಿ
ಹುಟ್ಟುವ ಮಕ್ಕಳ ಹೆಸರ ಕಟ್ಟುತೀವಿ ಗುರುವು
ಈಗಲೀಗಾ ಮಂಟೇದುಸ್ವಾಮಿ ಎನುತೇಳಿ
ನಿಮಗೆ ಹೆಸರ ಕರಿತೀವಿ ಗುರುದೇವಾ
ಸಿದ್ದಪ್ಪಾಜೀ ಧರೆಗೆ ದೊಡ್ಡಯ್ಯ ಎನುತೇಳಿ ಕೈ ಎತ್ತಿ ಮುಗುದು
ಕಾಲ ಕಳಿತೀವೋ ಹೊರತು

ಮತ್ತೊಂದು ದೇವುರ ನಾವು
ಬೇಡೋದಿಲ್ಲ ಎಂದುರಲ್ಲ || ಸಿದ್ಧಯ್ಯ ||

ಈ ರೀತಿ ಒಳಗೆ ಸ್ವಾಮಿs
ಬಾಳಿ ಬದುಕುತೀವಿ ತಂದೆ
ನಮಗೆ ಬೇಡಿದ ವರವ ಕೊಟ್ಟುಬುಡು ಎಂದುರು
ಕೇಳಿರಪ್ಪ ಹಲಗೂರು ದೊರೆಗೊಳೆ
ಈಗಲೀಗಾ ನಮಗೇ ನೀವು ಶಿಸುಮಕ್ಕಳಾದ ಮೇಲೆ
ನಮ್ಮ ಮಗನೀಗೆ ನೀವು ಶಿಷ್ಯರಾದು ಮೇಲೆ
ಈಗಲೀಗಾ ಚಿಕ್ಕದೊಂದಳ್ಳಿ ಗ್ರಾಮ ಚಿಕ್ಕಲ್ಲೂರು ಮಾಡಿವ್ನಿ ಕಂದಾ
ಚಿಕ್ಕಲೂರಲ್ಲಿ

ನನ್ನ ಮಗನು ಸಿದ್ದಪ್ಪಾಜಿಗೆ
ನೀವು ಮಠವ ಕಟ್ಟಿರಪ್ಪ || ಸಿದ್ಧಯ್ಯ ||

ನನ್ನ ಮಗನೀಗೇ ನೀವು
ಒಕ್ಕುಲಾಗಿ ಹೋಗಿರಯ್ಯಾ || ಸಿದ್ಧಯ್ಯ ||

ಆಗಲಿ ನನ್ನ ಗುರುವು
ಆಗಲಿ ನನ್ನಪ್ಪ
ಹಾಗಂದು ಗುರುವು
ಹಲಗೂರು ದೊರೆಗಳು
ಅವರು ಸಿದ್ದಪ್ಪಾಜಿ ನೆನದುಕಂಡು
ಚಿಕ್ಕಲ್ಲೂರಿಗೆ ಬರುವುತಾರೆ || ಸಿದ್ಧಯ್ಯ ||

ಚಿಕ್ಕಲ್ಲೂರಿಗೆ ಬಂದು ಗುರುದೇವಾs
ನೀಲುಗಾರ್ರ‍ ಗಂಡ ನೀಲಿ ಸಿದ್ದಪ್ಪಾಜಿಗೆ ಗುರುವು
ಅವರ ಜಾತಿಯವರ ಕೈಲಿ
ಮಠ ಮನೀಯ ಮಾಡಿಸುತಾರೆ || ಸಿದ್ಧಯ್ಯ ||

ಗುರುವೇ ಮಠವನೆ ಮಾಡಿಸವರೆ ಗುರುವೆ
ಮಠದ ಮುಂದೇ ದೇವಾ
ದಾಳ ನೆಡಸವರೆ
ಅಯ್ಯಾ ಸಿದ್ದಪ್ಪಾಜಿ ಮಠ ಅಂತಾ
ನಾಮಕರಣ ಮಾಡುತಾರೆ || ಸಿದ್ಧಯ್ಯ ||

ಚಿಕ್ಕಲ್ಲೂರು ಮಠ ಎನುತೇಳಿ
ಮಠ ಕಟ್ಟಿಸಿ ಗುರುದೇವಾ
ಏಳುಜನ ದೊರಾಂದೊರೆಗಳು
ಆಗಲೀಗಾ ಧರೆಗೆ ದೊಡ್ಡವರ ಬಳಿಗೆ ಬಂದು
ಜಗತ್ತು ಗುರುಗಳ ಮುಂಭಾಗದಲಿ ನಿಂತುಗಂಡು
ಈಗಲೀಗಾ ನಿಮಗೆ ಶಿಷ್ಯರಾಗಿ ನಾವು ಒಕ್ಕುಲಾಗಿ
ಮಠ ಕಟ್ಟಿದೋ ಸ್ವಾಮಿ ಎಂದುರು

ತೋಪುನ ದೊಡ್ಡಮ್ಮನ ಕರೆದು ಗುರುವು
ದೊಡ್ಡಮ್ಮ
ಈಗಲೀಗಾ
ನನ್ನ ಮಗನ ಶಿಷ್ಯರು ಬಂದವರೆ ತಾಯಿ
ಇವುರ್ಗೆ ಮಠ ಕಟ್ಟದವರ್ಗೆ
ನಮ್ಮನೆಗೆ ಬಂದವರ್ಗೆ
ಅಸುದು ಹೋಗಬಾರ್ದು

ನೀನು ಬಂದಿರುವ ಮಕ್ಕಳಿಗೆ
ಅಡಿಗೆ ದುಡುಗವ್ವ ತಾಯಿ || ಸಿದ್ಧಯ್ಯ ||

ಇವರು ಏಳುಜನ ದೋರೆಗಳಿಗೆ
ಅಡಿಗೆ ಮಾಡಿ ದುಡುಗ ಮಗಳೇ || ಸಿದ್ಧಯ್ಯ ||

ಆಗಲೀಗಾ ದುಡುಗವಳೆ ದೊಡ್ಡಮ್ಮ
ಜಗತ್ತು ಗುರು ಆಡಿದ ಮಾತು ಕೇಳಿಕಂಡು
ಈಗ ನನ್ನ ಮಾಯ್ಕಾರದ ಒಡೆಯಾ
ಮಂಟೇದು ಸ್ವಾಮಿಯವರಿಂದ ಅಪ್ಪಣೆ ಆಗಿಬುಡ್ತು ಅಂತೇಳಿ
ಹಲಗೂರು ಪಂಚಾಳದ ದೊರುಗೋಳು
ಹಾಲು ಅನ್ನ ಪಾಲು ಪರುಸಾದ
ಆಗಲೀಗಾ ನೊರೆ ಹಾಲು
ನೊರೆ ಪಾಯ್ಸ ಉಟ ಮಾಡುತಿದ್ದವರು
ಕೊಡಗಿನ ಕಿತ್ತಿಲಿ ಹಣ್ಣು
ನಂಜನಗೂಡು ರಸಬಾಳೆ
ಮಲೆಯಾಳದ ಸೇಬು ಊಟ ಮಾಡುತಿದ್ದವರು
ಹಲಗೂರು ದೊರೆಗಳು
ಇವರ್ಗೆ ತಕ್ಕಂಡ ಅಡಿಗೆ
ನಾನು ದುಡಿಗಿ ಊಟಕೆ ಬಡಿಸಬೇಕು ಅಂತೇಳಿ

ಹಾಲೆ ಸೊಪ್ಪ ಬೇಯ್ಸುತಾರೆ
ನೀರು ಅಂಬುಲಿ ಕಾಯ್ಸತಾರೆ || ಸಿದ್ಧಯ್ಯ ||

ಗುರುವೇ ಅರುಕದಂಬಲಿ ಕಾಯ್ಸಿ
ಹಾಲೆ ಸೊಪ್ಪು ಬೇಯ್ಸಿಸಧ
ದುಡುವುಳ್ಳ ದೊಡ್ಡಮ್ಮ
ಅವರು ಸಪ್ಪೆ ಸೊಪ್ಪು
ನೀರಂಬಲಿಯ ಬೇಗದಲಿ ದುಡುಗುತಾರೆ || ಸಿದ್ಧಯ್ಯ ||