ಕೇಳಿ ಗುರುವೆ ಗುರುದೇವಾ s
ಜಗತ್ತುಗುರು ಧರೆಗೆ ದೊಡ್ಡಯ್ಯ
ಮಠ ಕಟ್ಟಿ ಬಂದಿರುವಂತ ಮಕ್ಕಳಿಗೆ ಗುರುವು
ಅಡಿಗೆ ದುಡುಗಿವ್ನಿ ಗುರುವೆ ಎಂದರು
ದೊಡ್ಡಮ್ಮ
ಏನು ಅಡಿಗೆ ದುಡುಗಿದ್ದಿಯವ್ವ
ಅಣ್ಣಯ್ಯ
ಆರಕ ಅರದಿವುನಿ
ನೀರಂಬಲಿ ಕಾಯ್ಸಿವಿನಿ
ಬೇಲಿಮ್ಯಾಗಲ ಹಾಲೆ ಸೊಪ್ಪು ತಂದು ಬೇಯ್ಸಿ
ಸಪ್ಪೆ ಸೊಪ್ಪಗೆ ಉಪ್ಪಿಲ್ಲ ಸ್ವಾಮಿ

ನಾನು ಉಪ್ಪು ಇಲ್ಲದಂತೆ
ಅಡಿಗೆಯ ದುಡುಗಿವಿನಿ|| ಸಿದ್ಧಯ್ಯ ||

ದೊಡ್ಡಮ್ಮ
ಈ ಪಾಳ್ಯೆಗಾರ್ರಿ‍ಗೆ ಪವಿತ್ರವಾದ
ಅಡಿಗೆ ದುಡುಗಿದ್ದಿಯ ಕಂದಾ
ದೊಡ್ಡಮ್ಮ

ನೀನು ಬಾಳ ಭಕುತಿಯ ಒಳಗೆ
ನೀನು ಊಟುಕೆ ಬಡುಸು ನನ್ನ ಮಗಳೇ || ಸಿದ್ಧಯ್ಯ ||

ಆಗಲೀಗಾ ನನ ಕಂದಾ
ಬಾಳ ಭಕುತಿ ಒಳಗೆ ಊಟಕೆ ಬಡುಸವ್ವ ತಾಯಿ ಎಂದುರು
ಏಳುಜನ ಹಲುಗೂರು ದೊರೆಗಳ ಸಾಲು ಕುಂಡ್ರಿಸಿ ಬುಟ್ಟು
ತಾಯಿ ದೊಡ್ಡಮ್ಮನವರು

ಅವರು ನೀರಂಬಲಿ ಬುಟ್ಟಾರಂತೆ
ಹಾಲೆ ಸೊಪ್ಪ ಹಾಕುತಾರೆ || ಸಿದ್ಧಯ್ಯ ||

ಅಯ್ಯಾ ಹಾಲೆ ಸೊಪ್ಪು ಬೇಯ್ಸಿ
ನೀರಂಬಲಿ ಕಾಯ್ಸಿ
ಎಡೆಯ ಕೊಡುವಾಗ
ತಾಯಿ ದೊಡ್ಡಮ್ಮ
ನನ್ನ ಮಗನಿಗೆ ಬಂಧನಾ
ನಿವಾಗೇ ಕೊಟ್ಟದಕೆ ಗುರುವು
ಈ ಹಾಲೆಸೊಪ್ಪು ನೀರಂಬಲಿ
ಸ್ಥಿರುವಾಗಿ ಇರಲಿ ಎಂದರು || ಸಿದ್ಧಯ್ಯ ||

ನನ್ನ ಮಗನಿಗೆ ಕಂದಾs
ಇಂತಾ ಶಿಕ್ಷೇ ಬಂಧನಾ ಕೊಟ್ಟು
ನನ್ನ ಮಗನೀಗೆ ಮಠ ಕಟ್ಟಿ
ನಮ್ಮ ಮಠಕೆ ನೀವು ಬಂದದ್ರಿಂದಾ
ಈ ಹಾಲೆ ಸೊಪ್ಪು ನೀರಂಬಲಿ ನಿಮಗೆ
ಸ್ತಿರುವಾಗಲಿ ಎನುತೇಳಿ

ಏಳುಜನ ದೊರುಗಳಿಗೆ
ಎತ್ತಿ ಶಾಪ ಕೊಟ್ಟರಂತೆ || ಸಿದ್ಧಯ್ಯ ||

ಗುರುವೆ ಎತ್ತಿ ಶಾಪವ
ಕೊಟ್ಟಾರು ನನ್ನ ಗುರುವು
ತೋಪಿನ ದೊಡ್ಡಮ್ಮ
ಅಯ್ಯೊ ಶಾಪ ಕೊಟ್ಟಂತಾ
ಮಗಳನೆ ತಾಯಿ
ತಾವೆ ನೋಡಿಕಂಡು
ನನ್ನ ಧರೆಗೆ ದೊಡ್ಡಯ್ಯ
ಅವ್ವಾ ಕೇಳವ್ವ ನನ್ನ ಮಗಳೆ
ತೋಪಿನ ದೊಡ್ಡಮ್ಮ ತಾಯಿ || ಸಿದ್ಧಯ್ಯ ||

ದೊಡ್ಡಮ್ಮ
ಈ ಹಲಗೂರು ಪಂಚಾಳದವರ್ಗೆ
ಏನು ಶಾಪ ಕೊಟ್ಟುಬುಟ್ಟಿಯವ್ವ
ಅಣ್ಣಯ್ಯಾ
ನಮ್ಮ ಮಗನು ಸಿದ್ದಪ್ಪಾಜಿಗೆ
ಕೊಡಬಾರ್ದ ಕಷ್ಟ ಕೊಟ್ಟವರು ಇವರು
ಮಾಡಬಾರ್ದ ಶಿಕ್ಷೆ ಮಾಡ್ದದಂತವರು ಪಾಂಚಾಳದವರು
ಈಗ ಹಾಲೆಸೊಪ್ಪು
ನೀರಂಬಲಿ ಇವರ್ಗೆ ಸ್ಥಿರವಾಗಲಿ ಅಂತೇಳಿ
ಎತ್ತಿ ಶಾಪ ಕೊಟ್ಟಿವ್ನಿ ಅಣ್ಣಯ್ಯಾ ಎಂದುರು
ದೊಡ್ಡಮ್ಮ
ಪಾಪ
ಈ ರೀತಿ ನರಮಾನವರ್ಗೆ ನಾವು ಶಾಪ ಕೊಟ್ಟು ಬುಟ್ರೆ ಕಂದಾ

ನಾವು ಕೊಟ್ಟ ಕರ್ಮ ಕಂದಾ
ಎಲ್ಲೋಗಿ ಕಳಿದರವ್ವ || ಸಿದ್ಧಯ್ಯ ||

ಅಮ್ಮ ನಾವು ಕೊಟ್ಟ ಶಾಪ
ತಗಿಯದಿಕೆ ನನ ಕಂದಾ
ನರರಿಂದಾಗದಿಲ್ಲ
ಮಗಳೆ ಸುರರಿಂದಾಗದಿಲ್ಲ
ಅಮ್ಮ ನಾವು ಕೊಟ್ಟ ಶಾಪವ
ತಗಿಬೇಕಾದ್ರೆ ಕಂದಾ
ದೆವ್ವ ದೇವ್ಮಾನ್ರಿಂದಾ
ಆಗದಿಲ್ಲ ನನ ಕಂದಾ
ಅಮ್ಮ ನೀನೆನೋ
ಶಾಪ ಕೊಟ್ಟು ಬುಟ್ಟೆ ನನ್ನ ಮಗಳೇ
ನಾನು ಪಾತಾಳ ಲೋಕಕೆ ಹೋದ ಮೇಲೆ
ಇವರ ಶಾಪ ಕಳಿಯೋರೆ ಇಲ್ಲಾ || ಸಿದ್ಧಯ್ಯ ||

ನಾನು ಮರ್ತ್ಯ ಲೋಕಕ್ಕೆ
ಮರೆಯಾಗಿ ಹೊರಟೋದ್ರೆ ಕಂದಾ
ನೀನು ಕೊಟ್ಟ ಶಾಪ ತಗಿಯೋರು ಯಾರು ಇಲ್ಲ ದೊಡ್ಡಮ್ಮ
ನೀನು ಕೊಟ್ಟಂತ ಶಾಪ
ಈಗಲೀಗಾ ನನಗೆ ಆಗಲಿ ಕಂದಾ
ಮಾನವರ ಮನೆಯವರು
ಯಾವ ರೀತಿ ಊಟ ಮಾಡ್ತಾರೆ
ಅದೇ ಶಾಪ ಈ ಆಚಾರಿ ಮನಸ್ಥಾನದೋರಿಗೂ
ಕೊಟ್ಟುಬುಡು ಕಂದಾ
ದೊಡ್ಡಮ್ಮ
ನೀನು ಹಾಲೆಸೊಪ್ಪು ಆರುಕುದಂಬಲಿ
ಅರುವಾಗಲಿ ಅಂತಾ ಶಾಪ ಕೊ‌ಟ್ಟಿದ್ದಿಯಲ್ಲ
ಅದ ಹೇಳುತೀನಿ ಕೇಳು ಕಂದಾ
ನನ್ನ ಕಪ್ಪಡಿ ಕೈಲಾಸ
ಚಿಕ್ಕಲ್ಲೂರ ಗುರು ಮಠ
ರಾಜ ಬಪ್ಪುಗೌಡ್ನಪುರ ಮೂರು ಮಠದಲ್ಲೂ ಕಂದಾ

ನನ್ನ ನಡದು ಬರುವ ಪರುಶೇಗೆಲ್ಲಾ
ಇವರು ಅಂಬಲಿನಾದ್ರುವೆ ಬುಡಲಿ ಕಂದಾ || ಸಿದ್ಧಯ್ಯ ||

ಕಂದಾ ಹಾಲು ಅಂಬಲಿಯ
ನನ್ನ ಕಪ್ಪಡಿಗೋಗೋ ಪರುಸೆಗೆ
ಬುಡುಲಿ ನನ್ನ ಕಂದಾ
ನನ್ನ ಬಪ್ಪುಗೌಡ್ನಪುರಕೆ ಬರುವಾ
ಪರುಸೆ ಜನಕೆ
ಬುಟ್ಟು ಬುಡ್ಲಿ ನನ್ನ ಕಂದಾ
ನನ್ನ ಚಿಕ್ಕಲ್ಲೂರು ಮಠಕೆ
ಬರುವಂತ ಪರುಸೆಗೆ
ಬುಡಲಿ ನನ ಕಂದಾ
ಅವ್ವ ನೀನು ಕೊಟ್ಟ ಶಾಪ
ನನ್ನ ಭಕುತರಿಗೆ ಆಗಲವ್ವ || ಸಿದ್ಧಯ್ಯ ||

ನೀನು ಕೊಟ್ಟ ಶಾಪ ಕಂದಾ
ನನ್ನ ಬರುವಂತ ಪರುಸೆ ಜನಕ್ಕೆ ಆಗಲಿ
ಇವರಿಗೆ ಹಾಲು ಅನ್ನ
ಪಾಲು ಪರುಸಾದ ಮಾತ್ರ
ದೊರೆಯಲಿ ಕಂದಾ ಅಂತೇಳಿ
ಆಗಲೀಗಾ ಧರ್ಮ ಗುರು ಧರೆಗೆ ದೊಡ್ಡವರು
ಎತ್ತಿ ಶಾಪ ಕೊಟ್ಟು ಬುಟ್ಟು ಗುರುದೇವಾ

ಈ ಪಾಳ್ಯಾಗಾರ್ರು‍ ಮೊಕವ
ಅವರು ಕಣ್ಣೆತ್ತಿ ನೋಡುತಾರೆ || ಸಿದ್ಧಯ್ಯ ||

ಎತ್ತಿ ಶಾಪ ಕೊಟ್ಟು ಬುಟ್ಟು ಧರೆಗೆ ದೊಡ್ಡವರು
ಈ ಹಲಗೂರು ಪಂಚಾಳಗೇರಿ
ಏಳುಮಂದಿ ಪಾಳ್ಯಗಾರ್ರ‍ ಕಣ್ಣಾರೆ ನೋಡಿದ್ರಂತೆ
ಆ ಏಳುಜನ ದೊರುಗಳು ಏನು ಮಾತಾಡ್ತಾರಂದರೆ
ಏನಣ್ಣಾ
ಹಲಗೂರಲ್ಲಿ ನಾವು ಬಾಳಿ ಬದುಕುತಿದ್ದಾಗಾ
ನೊರಾಲು ನೊರೆ ಸಕ್ಕರೆ
ತೇನೆ ಇಂಬಿಹಣ್ಣು
ಎನ್ನಿಗನ ಎಳನೀರು
ಈಗಲೀಗಾ ನಂಜನಗೂಡು ರಸಬಾಳೆ
ಕೊಡಗಿನ ಕಿತ್ತಳೆ ಹಣ್ಣ
ನಾವು ಊಟ ಮಾಡಿ ಬೆಳದವರು
ಈಗಲೀಗ ಇವರಿಗೆ ನಾವು ಶಿಸು ಮಕ್ಕಳಾಗಿ ಬಂದು

ಈ ಅಂಬಲಿ ಕುಡಿಯಲೇ ಬೇಕಾ
ಆಲೆಸೊಪ್ಪು ತಿನ್ನಾ ಬೇಕಾ || ಸಿದ್ಧಯ್ಯ ||

ಮುತ್ತು ರವರತ್ನನೆ ಊಟಮಾಡಿ
ಬೆಳದಂತಾ ದೊರುಗಳು ನಾವು
ಈ ಹಾಲೆ ಸೊಪ್ಪು ಅರ್ಕದಂಬಲಿ
ನಾವು ಕುಡಿಯಬೇಕಾ
ನಾವು ಕಂಡುತುವಾಗಿ ಕುಡಿಯದಿಲ್ಲ ಅಂದುರು
ಆಗಲೀಗಾ ತೋಪಿನ ದೊಡ್ಡಮ್ಮ

ಧರೆಗೆ ದೊಡ್ಡವರ ಬಳಿಗೆ
ಅವರು ಓಡಿ ಓಡಿ ಬಂದರಂತೆ || ಸಿದ್ಧಯ್ಯ ||

ಅಣ್ಣಯ್ಯಾ
ಏಳು ಜನ ದೊರಾಂದೊರುಗಳು
ಹಲಗೂರು ಪಂಚಾಳದವರು
ಈಗಲೀಗಾ ಊಟ ಮಾಡದೆ
ಹಾಗೆ ಕೂತವರೆ ಗುರುವು ಎಂದುರು
ಏನವ್ವ ದೊಡ್ಡಮ್ಮ
ಹಾಗೆ ಕೂತಿದ್ದಾರಾ
ಅವರ ವಿಚಾರ ಎನು ಕೇಳು ಕಂದಾ ಎಂದುರು
ಆಗಲೀಗಾ
ಏನುರಪ್ಪ ಹಲಗೂರು ಪಾಂಚಾಳದವರೇ
ಯಾತುಕ್ಕೆ ಊಟ ಮಾಡದಿಲ್ವಪ್ಪ ಎಂದುರು
ಏನಮ್ಮ
ಹಾಲು ಅನ್ನ ಪಾಲು ಪರುಶಾದ
ಊಟ ಮಾಡುತಿದ್ದಂತವರು ನಾವು
ಈ ಹಾಲೆ ಸೊಪ್ಪು ಅರಕದಂಬಲಿ ನಮಗೆ ಬ್ಯಾಡ
ಮುತ್ತು ರತ್ನ ತಿಂತಿದ್ದವರಿಗೆ

ಈ ಸಪ್ಪೆಸೊಪ್ಪ ತಿನ್ನೋ
ಬಗೆಯಾಗೆ ಎಂದರಲ್ಲಾ || ಸಿದ್ಧಯ್ಯ ||

ಕೇಳಪ್ಪ ಜಗತ್ತುಗುರು ಧರೆಗೆ ದೊಡ್ಡಯ್ಯ
ಹಲಗೂರು ಪಂಚಾಳದವರು
ಮುತ್ತು ರತುನಾ ಊಟ ಮಾಡ್ತಿದ್ದರಂತೆ ಸ್ವಾಮಿ
ಈ ಸಪ್ಪೆ ಸೊಪ್ಪು ನೀರಂಬಲಿ
ನಾವು ಖಂಡಿತವಾಗೂ ಕುಡಿಯದಿಲ್ಲ ಅಂಥ ಹೆಳ್ತಾರೆ ಅಂದುರು
ದೊಡ್ಡಮ್ಮ
ಏಳುಜನ ದೊರುಗಳು ಆ ರೀತಿ ಹೇಳಿದ್ರೆ
ಅದನ್ನೆ ಕೊಟ್ಟುಬುಡವ್ವಾ ಕಂದಾ ಅಂತೇಳಿ

ಮುತ್ತುನ ಜೋಳಿಗೆ ಕೈಯಾಕಿ ನನ ಗುರುವು
ಅವರು ಮುತ್ತುರತುನಾ ತಗದರಂತೆ
ದೊರುಗಳ ಬಳಿಗೆ ಬಂದಾರಂತೆ || ಸಿದ್ಧಯ್ಯ ||

ಗುರುವೆ ದೊರಗಳ ಬಳಿಗೆ
ಬಂದವರೆ ನನ್ನಪ್ಪ
ಧರಗೆ ದೊಡ್ಡಯ್ಯ
ಮಂಟೇದ ಲಿಂಗಪ್ಪ
ನನ್ನ ಮಾಯಿಕಾರದ ಒಡೆಯ
ನನ್ನ ಪರಂಜ್ಯೋತಿಯವರು
ಅಯ್ಯಾ ಏಳುಜನ ಪಾಳ್ಯಗಾರ್ರ‍
ಕಣ್ಣಾರೆ ನೋಡುತಾರೆ || ಸಿದ್ಧಯ್ಯ ||

ತೋಪುನ ದೊಡ್ಡಮ್ಮ
ಮೊದಲು ಕೊಟ್ಟಿದ್ದ ಶಾಪಕ್ಕೆ ವ್ಯರ್ಥವಾಯ್ತು
ಇವರಿಗೆ ನೀರಂಬಲಿ
ಹಾಲಿನ ಸೊಪ್ಪಿನ ಭಾಗ್ಯಾವೆ ಭಾಗ್ಯ ಆಗಲಿ ಅಂತೇಳಿ
ಎತ್ತಿಗ ಶಾಪನೆ ಕೊಟ್ಟಿದ್ದೆ
ದೊಡ್ಡಮ್ಮ ಕೊಟ್ಟಿದ್ದ ಶಾಪ ಹಿಂದಕೆ ತಕ್ಕಂಡು
ನರಮಾನವರು ಊಟ ಮಾಡುವುದನೆ
ಊಟ ಮಾಡ್ಲಿ ಅಂತೇಳಿ
ಇವರಿಗೆ ವರ ಕೊಟ್ಟಿದ್ದೆ ತಪ್ಪಾಯಿತು
ಎನುತೇಳಿ ಜಗತ್ತು ಗುರು ಧರೆಗೆ ದೊಡ್ಡಯ್ಯ
ಏನ್ರಪ್ಪ ಹಲಗೂರು ಪಂಚಾಳದವರೆ
ಮುತ್ತುರತ್ನ ಊಟಮಾಡ್ತಿದ್ರಿಯಪ್ಪ?
ನಾವು ಮುತ್ತುರತುನನೆ ಊಟ ಮಾಡ್ತಿದ್ದೊ ಸ್ವಾಮಿ ಎಂದುರು
ಹಾಗಂದರೆ ಬಾಯಿಬುಡಿ
ಎಂದುರು ಧರೆಗೆ ದೊಡ್ಡಯ್ಯ
ಯಾವಾಗ ಪಂಚಾಳದವರು ಬಾಯಿ ಬುಟ್ಟವರೋ

ಬಾಯಿನು ತುಂಬ ಗುರುವೇ
ಅವರು ಮುತ್ತು ರತುನಾ ತುಂಬುತಾರೆ || ಸಿದ್ಧಯ್ಯ ||

ಬಾಯಿನ ತುಂಬ ಗುರುದೇವಾs
ಏಳುಜನ ದೊರಾಂದೊರುಗಳಿಗೆ
ಮುತ್ತು ರತುನಾನೆ ತುಂಬಿದುರು
ಎಳುಜನ ದೊರುಗಳು
ಬಾಯಿ ತುಂಬ ಮುತ್ತು ರತುನಾ ಮುಕ್ಕಂಡು
ನುಂಗಕಾಗದಿಲ್ಲ
ಮುತ್ತುರತ್ನ ತಿಂದ್ರೆ ನಾವು ಬದಿಕಿವಾ ಅಂತೇಳಿ
ಯೋಚಿಣಿ ಮಾಡ್ತಾ ಯೋಚಿಣಿ ಮಾಡ್ತಾ
ದೊರೆಗೆ ದೊಡ್ಡವರ ಮುಖ ನೋಡ್ತಾ
ದೊಡ್ಡಮ್ಮ ತಾಯಿ ಮುಖ ನೋಡುತಿದ್ರು
ಆಗ ಜಗತ್ತು ಗುರು
ಧರೆಗೆ ದೊಡ್ಡವರು ಎನು ಕೇಳುತವರೆ ಅಂದರೇ
ಕೇಳಿರಪ್ಪ ಆಚಾರಿ ಮನಸ್ಥಾನದವರೇ
ಹಲಗೂರು ಪಂಚಾಳದವರೆ
ಈಗಲೀಗಾ ಏನುಭಾಗ್ಯ ಬೇಕು
ಕೇಳಿ ಕೇಳಿ ಕಂದಾ

ನೀವು ಕೇಳಿದ ಭಾಗ್ಯ ನಾನು
ಕೊಡುತೀನಿ ಎಂದರಲ್ಲ || ಸಿದ್ಧಯ್ಯ ||

ನಿಮಗೆ ಒಪ್ಪಿದ ಭಾಗ್ಯ
ಮೆಚ್ಚಿದ ಭಾಗ್ಯ
ಕೊಡುತೀನಿ ಕಣಿರಪ್ಪ
ನಿಮಗೆ ಏನು ವರ ಬೇಕು
ಕೇಳಿರಿ ಎಂದರಲ್ಲ || ಸಿದ್ಧಯ್ಯ ||

ಏನು ಭಾಗ್ಯಬೇಕು ಕೇಳಿಕೇಳಿ ಎಂದುರು
ಈ ಹಲಗೂರು ಪಾಂಚಾಳ ದೊರಗಳಿಗೆ
ಮಾತಾಡಕೆ ನಾಲಿಗೆ ಇಲ್ಲ
ಬಾಯಿಗೆ ಮುತ್ತು ರತುನಾ ತುಂಬಿಕಂಡವರೆ
ಧರೆಗೆ ದೊಡ್ಡವರ ಮುಖ ನೋಡುತಾ
ಆಗಲೀಗಾ ಏನಂತ ಕೈ ತೋರುಸ್ತಾರಂದರೆ ಗುರುವು
ಇಷ್ಟುದ್ದು ಕೊಟ್ಟುಬುಡಿ ನಮಗೆ ಎಂದುರು
ದೊಡ್ಡಮ್ಮ ತಾಯಿ ನೋಡಬುಟ್ಟು
ಅಣ್ಣಯ್ಯ
ಇಷ್ಟುದ್ದ ಕೊಡಿ ಅಂತರಲ್ಲ ಏನು ಹಂಗಂದ್ರೆ
ಬರಿಕೈ ತೋರುಸ್ತಾರೆ ಹೊರತು
ಬಾಯಿಬುಟ್ಟು ಮಾತಾಡನಿಲ್ಲ
ದೊಡ್ಡಮ್ಮ
ಅವರು ಏನು ಕೇಳುತಾರೆ ಗೊತ್ತಾ
ಉತ್ತಿ ಬಿತ್ತಿ ಬೆಳಿಯೋರಾ ಮನೇಲಿ
ಮೂಡಲಾಗಿ

ಮೂರು ಪಂಚಕಡ ಬುಡಿ ಅಂತಾ
ಇವರಾಗಿ ಕೇಳುತಾರೆ || ಸಿದ್ಧಯ್ಯ ||

ಹಲಗೂರು ಪಂಚಾಳದವರ ಹೆಸರಿಗೆ
ಇಂತಾ ಸಾಸಾನ್ನದ ಕಲ್ಲಿನ ಮೇಲೆ
ಬರ್ದು ಬುಡು ದೊಡ್ಡಮ್ಮ ಎಂಬುದಾಗಿ
ಈ ಆಚಾರ ಮನಸ್ತಾನದವರಿಗೆ
ಮೂಡ್ಲಗಿ ಮೂರ ಪಂಚ ಕಡಾ
ಇವರ್ದೇ ಹೊರತು
ಬಿತ್ತಿದವರ ಬೆಳೆದವರದ್ದು ಅಲ್ಲ ಅಂತೇಳಿ
ಅರೆ ಕಲ್ಲಿನ ಮೇಲೆ ಬರ್ಸಿ ಬುಟ್ಟು ಧರೆಗೆ ದೊಡ್ಡವರು
ಪಂಚಾಳದವರೆ
ಈಗಲೀಗಾ ಮೂಡಲಾಗಿ ನಿಮಗೆ
ಮೂರುಕಡ ಪಂಚಕಡ ಬುಡುಸಿವ್ನಿ ಕಂಡ್ರಪ್ಪ
ಇನ್ನೇನು ಕೇಳಿರಿಯಪ್ಪ ಎಂದುರು
ಇಷ್ಟು ದಪ್ಪ ಕೊಟ್ಟುಬುಡಿ ಅಂತಾ
ಎರಡು ಕೈನೂ ತೋರ್ಸಿದ್ರಂತೆ
ಅಣ್ಣಯ್ಯ
ಇಷ್ಟುದ್ದ ಕೊಡಿ ಅಂದ್ರೆ
ಮೂಡ್ಲಗಿ ಮೂರು ಪಂಚಕಡ
ಬುಡ್ಸಿವ್ನಿ ಕಣಪ್ಪ ಅಂತ ಹೇಳಿದ್ರಿ
ಈಗ ಎರಡನೇದಾಗಿ ಇಷ್ಟು ದಪ್ಪ
ಕೊಡಿ ಅಂತಂದ್ರಲ್ಲ ಆದೇನದು
ದೊಡ್ಡಮ್ಮಾ
ಅದೇನು ಕೇಳ್ತಾರೆ ಗೊತ್ತಾ
ಈಗಲೀಗಾ ಭಿತ್ತಿ ಬೆಳೆದು ಕಂದಾ
ಈಗಲೀಗಾ ನಾನು ಪಡೆದ
ಭೂಮಿ ಮೇಲೆ ಕಂದಾ
ಅರಿಹೊರೆ ಕಟ್ಟವರೆ ದೊಡ್ಡಮ್ಮ
ಅರಿಹೊರೆ ಕಟ್ಟುವಾಗಾ
ಆ ಅರಿವಳ್ಗೊಂದು ಹೊರೆ ನಮುಗ್ಕೊಡ್ಸಿ
ಅಂತಾ ಕೇಳ್ತಾ ಅವುರೆ

ಅಯ್ಯಾ ಇರುವೆ ಭಾಗ್ಯ ನಿಮಗೆ
ಕೊಡ್ತಿನಿ ಎಂದರಂತೆ || ಸಿದ್ಧಯ್ಯ ||

ಅಯ್ಯಾ ಮೂಡ್ಲಗಿ ಮೂರು ಕಡ
ಕೇಳಿರಪ್ಪ ನನ ಕಂದಾ
ಕಂದಾ ನರರು ಕೊಟ್ಟ ಕಂದಾ
ಹೊರೆ ಒಳಗೆ ಕಂದಾ
ಲೋ ನಾನು ಪಡೆದ ಭೂಮಿ ಮೇಲೆ
ವಾಸ ಮಾಡಿ ಎಂದರಲ್ಲ || ಸಿದ್ಧಯ್ಯ ||

ನಾನು ಪಡೆದಾ ಭೂಮಿ ಭೂಲೋಕದಲ್ಲಿ
ವಾಸ ಮಾಡ್ರಪ್ಪ ಎನುತೇಳಿ
ಪಂಚಾಳ ದೊರುಗಳಿಗೆ ಎತ್ತಿ ಶಾಪ ಕೊಟ್ಟು ಬುಟ್ಟು
ಮಾ ಗುರು ಮಂಟೇದುಸ್ವಾಮಿ
ಈಗಲೀಗಾ ಕಿಡಗಣ್ಣು ರಾಚಪ್ಪಾಜೀ
ಹಿರೀಚನ್ನಾಜಮ್ಮ
ತೋಪಿನ ದೊಡ್ಡಮ್ಮ

ಗುರವೇ ಎಲ್ಲ ಮಕ್ಕಳ ಗುರುವೆ
ಅವರು ಪ್ರೇಮದಲ್ಲಿ ಕರೆದವರಲ್ಲ || ಸಿದ್ಧಯ್ಯ ||

ಗುರುವೆ ಎಲ್ಲ ಶಿಸು ಮಕ್ಕಳ ದೇವಾ
ಕೂಗುತಾರೆ ಧರ್ಮ ಗುರುವು || ಸಿದ್ಧಯ್ಯ ||

ಬನ್ರಪ್ಪ ನನ ಕಂದಾ
ಬನ್ರೋ ಮಕ್ಕಳೆ ಕಿಡಗಣ್ಣು ರಾಚಪ್ಪಾಜೀ
ಹಿರೀ ಚನ್ನಾಜಮ್ಮ ದುಡವುಳ್ಳ ದೊಡ್ಡಮ್ಮ
ಫಲಾರದಯ್ಯಾ ಬಾಪ್ಪ
ಮಡಿವಾಳ ಮಾಚಯ್ಯ ಓಡಿ ಬನ್ನಿ ಕಂದಾ ಎಂದುರು
ಎಲ್ಲ ಶಿಸು ಮಕ್ಕಳನು ಕರೆದು
ಮುಂಭಾಗದಲಿ ಕುಂಡ್ರಿಸಿಗಂಡು
ಮಾ ಗುರು ಮಂಟೇದು ಲಿಂಗಯ್ಯ

ಅಪ್ಪ ನರಲೋಕದ ಆಟ ಕಂದಾ
ಇಂದಿಗೆ ಸಾಕಾಯಿತಲ್ಲ || ಸಿದ್ಧಯ್ಯ ||

ಮಗನೆ ನರಲೋಕದ ಆಟ
ನನಗೆ ಇಂದಿಗೆ ಸಾಕಾಯ್ತು
ಈ ಭೂಲೋಕದ ಆಟ
ನನಗೆ ಎಂದೆಂದಿಗೂ ಬ್ಯಾಡ
ಈ ಹಾಳಾದ ನರಲೋಕ
ತರವಲ್ಲ ಎಂದಾರಲ್ಲ || ಸಿದ್ಧಯ್ಯ ||

ಈ ಹಾಳಾದ ನರಲೋಕ ನನಗೆ
ತರವಲ್ಲ ನನ ಕಂದಾ
ನರಲೋಕ ನನಗೆ
ಬ್ಯಾಡ ನನ ಕಂದಾ
ನಾನು ಮರ್ತ್ಯ ಲೋಕಕೆ ಕಂದಾ