ಕೆಂಪಣ್ಣಾ ಏಳು ವರ್ಷದ ಮಗನಲ್ಲಿ
ಆಚಾರಿ ಮಗನಿಂದ ಬಸವಾಚಾರಿ ಮನೆಯಿಂದ
ಮುದ್ದಮ್ಮನ ಹಟ್ಟಿಯಿಂದ
ನಿನಗೆ ಹುಚ್ಚುಬೆಪ್ಪ ಕೊಟ್ಟು ಕರಕಬಂದು ಗವಿಗೆ ಕೊಡಿಬುಟ್ಟೆ ಕಂದಾ
ಏಳು ವರ್ಷದ ಮಗನಲ್ಲೆ ರೂಪು ರೇಖೆ
ಲಾವಣ್ಯನೆಲ್ಲಾ ಕಣ್ಣಾರೆ ನೋಡಿದೆ
ಅವತ್ತು ನೋಡಿದಂತಾ ಮಗ ಇವತ್ತಿನವರೆಗೂ ನಿನ್ನ
ಮೊಕ ನೋಡಲಿಲ್ಲ ಕಂದಾ

ನಾನು ಕರೆದ ಗಳಿಗೆಯ ಒಳಗೆ
ಎದ್ದು ಬಪ್ಪಾ ಎಂದರಂತೆ || ಸಿದ್ಧಯ್ಯ ||

ನಾನು ಕರೆದಂತಾ ಮಾತಿಗೆ
ಕೂಗಿದ ಕೂಗಿಗೆ
ಅಪ್ಪಾ ಎದ್ದು ಬಾಪ್ಪ ಮಗನೆ
ಎಳೆಯವನೆ ಕೆಂಪಣ್ಣಾ
ಅಪ್ಪಾ ನನಗೆ ಮಗನಾದ ಮೇಲೆ
ನಿನ್ನ ಕೈಯಾ ಬಿಡುವುದಿಲ್ಲ || ಸಿದ್ಧಯ್ಯ ||

ಕಂದಾ ನನಗೆ ನೀನು ಕಂದಾ
ನೀ ಮಗನಾದರೆ ಮಗನೆ
ಅಪ್ಪಾ ನಾನು ಪಡೆದಿರುವಂತ
ನರಲೋಕವ ಕಂದಾ
ನಿನಗೊಬ್ಬನಿಗೆ ಮಗನೆ
ನಾ ಪಟ್ಟ ಕಟ್ಟುತೀನಿ
ಅಪ್ಪಾ ಸೂರ್ಯ ಚಂದ್ರರ ನಿನಗೆ
ಕಾವಲು ಮಾಡುತೀನಿ
ಈ ಮಾರಿರಿಗೆ ಗಂಡನಾಗಿ
ಮಡಗತೀನಿ ನನ್ನ ಮಗನೆ || ಸಿದ್ಧಯ್ಯ ||

ಅಪ್ಪಾ ಹತ್ತು ಜನವಲ್ಲ
ಮಗನೆ ಐದು ಜನವಲ್ಲ
ಲೋ ನೂರು ಜನವಲ್ಲ
ಇನ್ನೂರ ಜನ ಇಲ್ಲ ನನ್ನ ಕಂದಾ
ನರಲೋಕದ ಒಳಗೆ ನಾ
ಎಷ್ಟು ಜನ ಮಾರೀರ
ಅಪ್ಪಾ ಏಳು ನೂರು ಜನ
ಮಾರೀರ ಅಡೆದೀನಿ
ಆ ಏಳು ನೂರ ಜನ ಮಾರೀರಿಗೆ
ನಿನ್ನ ಗಂಡನಾಗಿ ಮಾಡುತೀನಿ|| ಸಿದ್ಧಯ್ಯ ||

ಕಂದಾ ಏಳು ನೂರಾ ಜನಾ
ಮಾರಿರೀಗೆ ಕಂದ
ನಿನ್ನ ಗಂಡನಾಗಿ ಮಗನೆ
ಮಡಗುತೀನಿ ಕಂದಾ
ಈ ನರಲೋಕದ ಒಳಗೆ
ನಿನ್ನ ಸಿದ್ದಪ್ಪಾಜಿ ಮಾಡುತ್ತೀನಿ
ಅಯ್ಯೋ ನನ್ನ ಕರೆಯೋಕೆ ಕಂದಾ
ಸಿದ್ದವಾಗಿ ಬಂದಂತ
ಇವನು ಮಗನು ಎನುತೇಳಿ
ಹೆಸರು ಕರೆಯುತೀನಿ
ಈ ನರಲೋಕದ ದೇವ ಮಾನವರಿಗೆ
ನಿನ್ನ ಗುರು ಮಾಡುತೀನಿ || ಸಿದ್ಧಯ್ಯ ||

ಕೆಂಪಣ್ಣಾ ನಾನಾಡಿದ ಮಾತು ಬಾವಿವೊಳಗೆ
ಗ್ಯಾನವಾಗಿ ಕೇಳುತ್ತಿದ್ದೀಯೋ
ಹಾವು ಚವಳು ಬಂಧಾನದಲ್ಲಿ ನರಳೀಯಾ ಕಂದಾ
ಕೆಂಪಣ್ಣ ನಾನು ಆಡಿದ ಖುಷಿ
ಮಾತು ಎಂದಿಗೂ ಹುಸಿಯಾಗಲಿಲ್ಲ
ನಿನ್ನ ಮಾತ್ರ ಕೈ ಬಿಡದಿಲ್ಲ ಮಗನೆ
ಬಾವಿ ಬಿಟ್ಟು ಮೇಲಕ್ಕೆ ಬಾಪ್ಪ ನಿನ್ನ ಮುಖ ತೋರು ಮಗನೆ
ನನಗೂ ಕೂಡ ತಾಯಿಲ್ಲ ತಂದ ಇಲ್ಲ
ಅಣ್ಣ ತ್ಮಮ ನನಗಿಲ್ಲ ಬಂಧು ಬಳಗದ ಸುಖವಿಲ್ಲ
ಮಡದಿ ಕಾಟ ನನಗಿಲ್ಲ ಮಕ್ಕಳ ಕಾಟ ನನಗಿಲ್ಲ
ಸಂಸಾರದ ಸುಖ ನಾನೂ ತರಲಿಲ್ಲ

ಅಪ್ಪಾ ನನಗೆ ಮಗ ನಾವಾಗಿ
ನಿನಗೂವೆ ಮೊದಲಿಲ್ಲ || ಸಿದ್ಧಯ್ಯ ||

ಕೆಂಪಣ್ಣಾ s ನಿನಗೂ ತಾಯಿ ತಂದೆ ಬಂಧು ಬಳಗ ಮೊದಲಿಲ್ಲ ನಿಜ
ನನಗೂ ತಾಯಿ ತಂದೆ ಬಂಧೂ ಬಳಗ ಇಲ್ಲ
ನೀನೂ ಒಬ್ನೆ ನಾನೂ ಒಬ್ನೆ ಕಂದಾಸ
ಕೆಂಪಣ್ಣಾ ಮಡದಿ ಉಳ್ಳಾದವರು
ಮಡದಿ ಕಟ್ಟಿಗಂಡು ಕಂದಾ
ಮಕ್ಕಳ ಪಡೆದು ಮಗನೆ
ಸುಖದಿಂದಾ ಬಾಳಿ ಬದುಕತೀನಿ ಅಂತೇಳಿ
ಹೆಚ್ಚಾಳ ಪಡುತಾರೆ ಕಂದಾ
ಕೆಂಪಣ್ಣ ಕೇಡು ಕಾಲದ ಮಡದಿ ಕೇಡುಗಾಲದ ಮಕ್ಕಳು
ಈ ನರಲೋಕದಲ್ಲಿ ನರಮಾನವರು ನಾನೇ ಪಡೆದೀನಿ ಕಂದಾ
ನಾನು ಪಡೆದಿರುವಂತ ನರಮಾನವರಿಗೆ ಮೋಸ ಮಾಡಬೇಡಮಗನೆ
ಈ ನರಲೋಕಕ್ಕೆ ನಿನ್ನ
ದೇವ್ರನ್ನ ಮಾಡಿಬುಟ್ಟು ಪಾತಾಳ ಲೋಕಕ್ಕೆ
ನಾನು ಮರೆಯಾಗಿ ಹೊಂಟೋಯ್ತಿನಿ ಕಂದಾ
ಈರು ಎಂಬತ್ತು ಜೀವರಾಶಿ ಕೋಟಿಗಳನ್ನೆ ಪಡೆದಿದೀನಿ
ಅಷ್ಟು ಜೀವರಾಶಿಗೂ ನಿನ್ನನ್ನೆ ಗುರು ಮಾಡಿ
ನರಲೋಕಕ್ಕೆ ಬಿಟ್ಟುಬುಟ್ಟು
ಮರ್ತ್ಯ ಲೋಕಕ್ಕೆ ನಾನು ಮರೆಯಾಗಿ ಹೊಂಟೋಗ್ತೀನಿ ಕಂದಾ

ನಾನು ಪಡೆದಾ ನರಲೋಕವೆ
ನಿನ್ನದು ಕಾಣೋ ನನ್ನ ಕಂದಾ || ಸಿದ್ಧಯ್ಯ ||

ಈಗ ನಾನು ನಿನ್ನ ಮರೆತು ಬಾಳಲಾರೆ ಕಂದಾ
ನಿನ್ನ ಕೈಬಿಟ್ಟು ಕಂದಾ ಈ ರಾಜಬಪ್ಪಗಣ ಪುರದಲಿ ಇರನಾರೆ ಕೆಂಪಣ್ಣ

ಎಂದಿಗೆ ನಿನ್ನ ಮುಖವ
ನಾನಾಗಿ ನೊಡಲಪ್ಪಾ || ಸಿದ್ಧಯ್ಯ ||

ಮಗನೆ ಎಂದಿಗೆ ನಿನ್ನ ಮುಖ
ಕಂದ ನಾನಾಗಿ ನೊಡಲಿ
ಅಯ್ಯೋ ನನ ಕಂದಾ
ಅಯ್ಯೋ ನನ ಮಗನೆ
ಕಾಳಿಂಗನ ಗವಿಯಲ್ಲಿ
ನಿದ್ದೆಯಾ ಕಾಣೆ
ಸತ್ತೆ ಹೊದೆಯೋ ಕಾಣೆನೊ ನನ್ನಪ್ಪ
ಅಪ್ಪ ನಿನ್ನಂತ ಶಿಶು ಮಗನ
ಇನ್ನೆಲ್ಲಿ ಪಡೆಯಲಿ || ಸಿದ್ಧಯ್ಯ ||

ನಿನ್ನಂತ ಶಿಶು ಮಗನ ಕಂದಾs
ನಿನ್ನಂತ ಕಂದನ ನಾನು ಎಲ್ಲಿ ಪಡಿಬೇಕೂ ಮಗನೆ
ನಿನ್ನಂತ ಮಗನ ಇನ್ನೆಲ್ಲಿ ಹೋಗಿ ಯಾರ ಮನೇಲಿ ಕೇಳಬೇಕು
ಎನುತೇಳಿ ಧರೆಗೆ ದೊಡ್ಡವರು
ರಾಜಬಪ್ಪಗಣ ಪುರದಲಿ ಉರಿ ಗದ್ದಿಗೆ ಮೇಲೆ ಕೂತಗಂಡು ಗುರುವ

ಅವರು ಮಗನ ನೆನಕಂಡು ಗುರುವೆ
ಬಾಳ ಚಿಂತೆ ಪಟ್ಟಾರಲ್ಲಾ || ಸಿದ್ಧಯ್ಯ ||

ಗುರುವು ಮಗನನ
ಕಂಡು ಗುರುವು
ಧರೆಗೆ ದೊಡ್ಡವರು
ಮಂಟೇದ ಲಿಂಗಪ್ಪ
ಮಾಯಕಾರದ ಒಡೆಯ
ನಮ್ಮ ಪರಂಜ್ಯೋತಿಯವರು
ನನ್ನ ಮಗನ ಈಗ
ಮರೆತು ಇರಲಾರೆ
ನನ್ನ ಮಗನ ನಾನು
ಬಿಟ್ಟು ಇರಲಾರೆ
ಈಗ ಎಲೆಯ ಕುಂದೂರ ಬೆಟ್ಟಕೆ
ಹೋಗಬೇಕು ಎಂದಾರಲ್ಲ || ಸಿದ್ಧಯ್ಯ ||

ಗುರುವೆ ಎಲೆಯ ಕುಂದೂರ ಬೆಟ್ಟಕೆ
ನಾ ಈಗಲೆ ಹೋಗಬೇಕು ಹಾಗಂದ್ರು ನನ್ನ ಗುರುವು
ಅಲ್ಲಮ ಪ್ರಭು ಮಂಟೇದಲಿಂಗಪ್ಪ

ಅವರು ರಾಜಬಪ್ಪಣ್ಣ ಪುರುವ
ಬೇಗದಲ್ಲಿ ಬಿಡುವುತಾರೆ || ಸಿದ್ಧಯ್ಯ ||

ಈಗಲೀಗ ನನ್ನ ಮಗನ ನೋಡಬೇಕು
ನನ್ನ ಮಗ ಕೆಂಪಣ್ಣ ಏನಾಗಬುಟ್ಟನೊ
ಎಂತಾಗಬುಟ್ಟನೊ ಅಂತೇಳಿ ಧರೆಗೆ ದೊಡ್ಡವರು
ರಾಜಬಪ್ಪಗಣಪುರದ ಉರಿಗದ್ದಿಗೇನೆ ಬಿಟ್ಟು ಬುಟ್ಟು

ಅವರು ಅಜ್ಜಿನಿಯ ಮೂಲೆಗಾಣೆ
ಕುಂದರು ಬೆಟ್ಟ ಹತ್ತುತಾರೆ || ಸಿದ್ಧಯ್ಯ ||

ಅಜ್ಜಿನಿ ಮೂಲೆಗಾಣಿ ದೇವಾs
ಕುಂದರೂ ಬೆಟ್ಟ ಹತ್ತುಗಂಡು ನನಪ್ಪ
ಜಗತ್ತು ಗುರು ಧರೆಗೆ ದೊಡ್ಡವರು ತಾನಾಗಿ ಬರುವಾಗ
ಏಳು ವರುಷನ ಮಗನು ಕೆಂಪಣ್ಣಾ
ಕಾಳಿಂಗನ ಗವಿವೊಳಗೆ ಕಂದಾ
ಧರೆಗೆ ದೊಡ್ಡವರು ಕೊಟ್ಟರುತಕ್ಕಂತ ಶಾಪದಲ್ಲಿ
ಆಗಲೀಗ ಗುರುವೆ ಗುರದೇವ

ಅವನಿಗೆ ನತ್ತಿ ಮೇಲೆ ದೇವ
ಮತ್ತು ಮರಗಳೆ ಹುಟ್ಟಿತ್ತು
ಹಣೆಯಲಿ ನನ ಗುರುವು
ಬುಷುಮಾಂಗ ಹುಟ್ಟಿತ್ತು
ಎಲ್ಲಾ ಆಭರಣ
ಪಡಕೊಂಡು ನನ ಕಂದಾ
ಎಳೆಯವನು ಕೆಂಪಣ್ಣಾ

ಅವನು ಕಾಳಿಂಗನಾ ಗವಿವೊಳಗೆ
ಗುಳುಗುಳುನೆ ಅಳುತಾನೆ || ಸಿದ್ಧಯ್ಯ ||

ಧರೆಗೆ ದೊಡ್ಡವರು ಮಾಡಿರುವ ಶಿಕ್ಷೆ
ಬಂಧಾನಕೆ ಒಳಗಾಗಿ ಕಂದಾ
ಈಗಲೀಗ ಮಂಟೇದ ಲಿಂಗಪ್ಪನ ಪಾದ ಎಂದು ದೊರೆತವೊ
ಯಾವತ್ತಿಗೆ ಕಂಡೇನೋ ಯಾವತ್ತಿಗೆ ಅವುರ
ದರುಶನ ಆದದೊ ಅಂದು ಕೆಂಪಣ್ಣ
ಹೆಬ್ಬಾವು ತಬ್ಬಿಕಂಡು ಕಂದಾ
ಕಾಳಿಂಗನ ಗವೀವೊಳಗೆ ಮಕಾಡೆ ಮಲಗಿದ್ದ
ಅದೇ ಹೊತ್ತಿನಲ್ಲಿ ಬಂದು
ಕುಂದೂರು ಬೆಟ್ಟದಾ
ಕೊಡೇ ಕಲ್ಲಿನ ಹತ್ತಿರ ಧರೆಗೆ ದೊಡ್ಡವರು
ತಾವಾಗೆ ನಿಂತಕಂಡು
ಕಟಕಟೆ ಕಾಳಿಂಗನ ಗವಿ
ಕಣ್ಣಿಂದ ನೋಡಿಕೊಂಡು ಧರೆಗೆ ದೊಡ್ಡವರು
ಈಗಲೀಗ ನನ ಮಗನ ಕೂಗಬೇಕು
ನನ ಮಗನ ಕರೀಬೇಕು ಎನುತೇಳಿ
ಮಗನ ಏನಂತ ಕರೀತಾರೆಂದ್ರೆ

ಅಪ್ಪಾ ಆಚಾರೆ ಮಗನೆ ಬಾರೋ
ಆಯ್ಸದಲ್ಲಿ ಪ್ರವೀಣ ಬಾರೋ || ಸಿದ್ಧಯ್ಯ ||

ಕಂದಾ ಆಚಾರಿಯ ಮಗನೇ
ಮುದ್ದಮನ ಮಗನೇ
ಲೋ ಬಸವಚಾರಿ ಮಗನೇ
ಕೇಳಪ್ಪ ನನ ಕಂದ
ಕೆಂಪಾಚಾರಿ ಕೆಂಪಾಚಾರಿ
ಎದ್ದು ಬಾಪ್ಪ ಎಂದಾರಲ್ಲಾ || ಸಿದ್ಧಯ್ಯ ||

ಅಯ್ಯಾ ಕೆಂಪಾಚಾರಿ ಮಗನೆ
ಕೆಂಪಚಾರಿ ಕಂದಾ
ಎಳೆಯ ಕೆಂಪಣ್ಣ
ಎದ್ದು ಬಾಪ್ಪ ಅಂತ
ಮೂರು ಸಲ ಕರದವರೆ
ಅಯ್ಯಾ ಕೆಂಪಣ್ಣನ ಸೊಲ್ಲು ದೇವಾ
ಬೆಲ್ಲವಾಗಿ ಹೋಯಿತಲ್ಲೋ || ಸಿದ್ಧಯ್ಯ ||

ಈ ಜಗತ್ತು ಗುರುವು ಆಗಿರತಕ್ಕಂತ ಧರೆಗೆ ದೊಡ್ಡವರು
ಕುಂದೂರು ಬೆಟ್ಟದ ಕಡೇ ಕಲ್ಲಿನ ಮೇಲೆ ನಿಂತಗಂಡು
ಆಚಾರಿ ಮಗನೆ ಬಸವಚಾರಿ ಮಗನೆ ಮುದ್ದಮ್ಮನ ಮಗನೇ
ಕಿರೀ ಕೆಂಪಣ್ಣ ಎದ್ದು ಬಾಪ್ಪ ಎಂದು ಕರೀವಾಗ
ಕಾಳಿಂಗನ ಗವೀವೊಳಗೆ ಕೆಂಪಣ್ಣ
ಹೆಬ್ಬೆ ಹಾವು ತಬ್ಬಿಕೊಂಡು ಅವನ ಸೊಲ್ಲೆ ಬೆಲ್ಲವಾಗಬುಟ್ಟು
ಧರೆಗೆ ದೊಡ್ಡವರ ಕೂಗು ಕೇಳಿಕೊಂಡು ಏನು ಮಾತಾಡ್ತನೆಂದರೆ
ಏನಪ್ಪ ಜಗದ್ಗುರು ಈಗಲೀಗ ಹನ್ನೆರಡು ವರ್ಷದಿಂದ
ಎಲ್ಲಾರ್ನು ಮರೆತು ಈ ಕಾಳಿಂಗನ ಗವಿಯೊಳಗೆ ಮಲಗಿದ್ದೀನಪ್ಪಾ

ಆ ಕೆಟ್ಟ ಮುಂಡೆ ಮಕ್ಕಳ ಹೆಸರ
ಯಾತಕ್ಕೆ ಹೇಳಿಯಪ್ಪ || ಸಿದ್ಧಯ್ಯ ||

ನನ್ನ ತಂದೆ ತಾಯ ಹೆಸರ
ಹೇಳಬೇಡ ನನ್ನ ಗುರುವು
ನನ್ನ ಕೆಂಪಚಾರಿ ಎಂಥ
ಕರೀಬ್ಯಾಡ ನನ್ನಪ್ಪ
ಹಾಳಾದ ಹೆಸರು ಗುರುವೆ
ನನಗ್ಯಾಕೆ ಎಂದಾನಲ್ಲಾ || ಸಿದ್ಧಯ್ಯ ||

ಕಿರಿ ಕೆಂಪಣ್ಣ ಎನ್ನುವ ಹೆಸರುs
ಏಳು ವರ್ಷಕ್ಕೆ ಸಾಕು ಗುರುದೇವಾ
ಆ ಕೆಂಪಣ್ಣಾ ಎನ್ನುವಂತ ಹೆಸರು ಯಾರಿಗೆ ಬೇಕು ಅಂತೇಳಿ
ಆಗಲೀಗ ಕೆಂಪಾಚಾರಿ ಹೆಬ್ಬಾವು ತಬ್ಬಿಕೊಂಡು ಸುಮ್ಮನೆ
ಮಲಗಿಕೊಂಡ
ಎರಡನೆ ಸಾರಿ ಧರೆಗೆ ದೊಡ್ಡವರು ಏನು ಮಾತಾಡ್ತಾರೆ ಎಂದರೆ
ಕಂದ ನಾನು ಕರೆದರೆ ಮಾತುಕತೆ ಒಂದೂ ಇಲ್ವಲ್ಲ ಕಂದಾ
ಈಗಲೀಗ ಮರೆತಿದ್ದೆ ಮಗನೆ
ಬಸವಚಾರಿ ಮಗನೆಂದರೆ ಬರೋದಿಲ್ಲಪ್ಪ
ಮುದ್ದಮ್ಮನ ಮಗನೆಂದರೆ ಬರೋದಿಲ್ವ ಕಂದಾ
ಕೆಂಪಣ್ಣಾ ಆಂದರೆ ಬರೋದಿ‌ಲ್ವ ಮಗನೆ
ನಿಮ್ಮ ತಾಯಿ ತಂದೆ ಕಟ್ಟಿರುವಂತ ಹೆಸರು
ಬಾವೀಲೇ ಹಾಳಾಗೋಲಿ
ಈಗಲೀಗ ನಿಮ್ಮ ತಂದ ತಾಯಿ ಕರೆದಿರುವ ಕೆಂಪಚಾರಿ
ಎನುವಂತ ಹೆಸರು ವತ್ತಿಗೇ ತೀರೋಗಲಿ
ಈಗಲಾದರೂ ಕರೀತಿನಿ ಬಾಪ್ಪ ಎನುತೇಳಿ
ಏನಂತಾ ಕರೀತಾರೆಂದ್ರೆ ಧರೆಗೆ ದೊಡ್ಡವರು

ನನ್ನ ತೊಪಿನ ದೊಡ್ಡಮ್ಮನವರ
ಮಾತಿನ ಗಿಣಿಯೊ ಬಾರೋ || ಸಿದ್ಧಯ್ಯ ||
ನನ್ನ ರಾಚು ರಾಯರ ಮಗನೆ
ಲೋ ರಾಗುಮುತ್ತೊಂದ ಹರಳೆ ಬಾಪ್ಪ|| ಸಿದ್ಧಯ್ಯ ||
ನನ್ನ ರಾಚು ರಾಯನ ಮಗನೆ
ರಾಗು ಮುತ್ತೊಂದ ಹರುಳೆ
ಎದ್ದು ಬಾಪ್ಪ ನನ ಕಂದಾ
ನನ್ನ ಚೆನ್ನಾಜಮ್ಮನವರ
ಚಿನ್ನದ ಪದಕ ಬಾರೋ || ಸಿದ್ಧಯ್ಯ ||
ನನ್ನ ಧರೆಗೆ ದೊಡ್ಡವರ ಮಗನೆ
ದಳಾವಾಯಿ ಘನನೀಲಿ || ಸಿದ್ಧಯ್ಯ ||

ಲೋ ಸಿದ್ದಾಪ್ಪಾಜಿ ಸಿದ್ದಪ್ಪಾಜಿ
ಎದ್ದು ಬಾಪ್ಪ ಎಂದರಲ್ಲಾ || ಸಿದ್ಧಯ್ಯ ||
ಕಂದಾ ಸಿದ್ದಪ್ಪಾಜಿ ಸಿದ್ದಪ್ಪಾಜಿ
ಎ‌ದ್ದು ಬಾಪ್ಪ ನನ ಕಂದಾ
ಹಾಗಂದು ನನ ಗುರುವು
ಮೂರು ಸಲ ದೇವಾ
ಕರದವರೆ ನನ್ನಪ್ಪಾ
ಈ ಸಿದ್ದಪ್ಪಾಜಿ ಎನ್ನುವ
ಹೆಸರು ಗುರುವು
ಬಾವಿಯಾಗೆ ಗ್ಯಾನವಾಗಿ
ಕೇಳಿಕಂಡ ಕಂದಾ
ಅಯ್ಯಾ ಸಿದ್ದಪ್ಪಾಜಿ ಎಂದಾ ಮೇಲೆ
ದಡಾಬಡನೆ ಎದ್ದಾನಂತೆ|| ಸಿದ್ಧಯ್ಯ ||

ಅಯ್ಯಯ್ಯೋ ಗುರುದೇವs
ಈಗಲೀಗ ಸಿದ್ದಪ್ಪಾಜಿ ಎಂದು ಕರೆದವರೆ ನನ್ನ ತಂದೆ
ಈಗಲೀಗ ನನ್ನ ಕರೆದುಬುಟ್ಟು ಎಲ್ಲಿಗೆ ಹೊಂಟೋಗುಬುಟ್ಟರೋ
ಯಾತಕೆ ಹೊಂಟೋಗುಬುಟ್ಟರೋ ಗೊತ್ತಿಲ್ಲವಲ್ಲಾ
ನನ್ನ ಪಡೆದ ಗುರು ಎಲ್ಲು ಕೂಗುವರೋ
ಕಾಣದಲ್ಲ ಎನುತೇಳಿ ಕೆಂಪಣ್ಣಾ
ಎಡಬಲ ಹೊರಳಾಡಿದ ಕಂದಾ
ಸಿದ್ದಪ್ಪಾಜಿ ಎಂದು ಕರೆದ ಘಳಿಗೆಯಲ್ಲಿ

ಅವನ ಕಣ್ಣಲ್ಲಿ ಕಣ್ಣೀರು ಗುರುವೆ
ಜುಳು ಜುಳುನೆ ಬಂದಾವಂತೆ || ಸಿದ್ಧಯ್ಯ ||

ಗುರುವೆ ಕಣ್ಣಲ್ಲಿ ಕಣ್ಣೀರು
ಜುಳುಜುಳನೆ ಬಂದೋದೋ
ಕಂದಾ ಎಳೆಯ ಕೆಂಪಣ್ಣಾ
ಅಯ್ಯಾ ಕಣ್ಣಲ್ಲಿದ್ದ ಗುರುವು
ಕಡುಜನ ಮರಿಗಳು
ಅಯ್ಯಾ ಬಾವಿಯೊಳಗೆ ಕಂದಾ
ಬುಳು ಬುಳನೆ ಉದುರೋದೊ
ಅವನು ಕಣ್ಣಾನೆ ಬುಟ್ಟಾನಂತೆ
ಎಡಾಬಲನಾ ನೋಡುತಾನೆ || ಸಿದ್ಧಯ್ಯ ||

ಕಣ್ಣನ್ನೆ ಬಿಟ್ಟುಬುಟ್ಟು ಕಂದಾ
ಎಡಬಲ ನೋಡಿದ ಕೆಂಪಣ್ಣಾ
ಮೈಕೈಲಿ ರೋಮ ರೋಮದ ಕುಳೀಲಿ
ಆಗಲೀಗ ಕಚ್ಚುವಂತ ಹಾವು
ಎಲ್ಲಾ ಪ್ರಾಣಿಗಳು ಮೈತುಂಬಾ ಕಚ್ಚಿಗಂಡಿದ್ದೊ
ಕಡೆಜನ ಮರಿಗಳು ಆಗಲೀಗ ಭೂಮಿಗೆ ಉದುರೋದೋ
ನೂರೊಂದು ಹಾವು ಚವಳು ಕಣ್ಣಾರೆ ನೋಡಿ ಕಂದಾ
ಕಡುಜನ ಮರಿ ನೋಡತ
ಅವನು ಕಚ್ಚಿಕೊಂಡಿದ್ದ ಹಾವು ಚವಳು
ಕಿತ್ತು ಕಿತ್ತು ಇಡುತಾನೆ|| ಸಿದ್ಧಯ್ಯ ||

ಗುರುವೆ ಕಚ್ಚಿಕೊಂಡಿದ್ದ ದೇವಾ
ಹಾವು ಚವುಳುಗಳಾ
ಕಿತ್ತು ಕಿತ್ತು ದೇವಾ
ಇಟ್ಟು ಬಿಟ್ಟ ಕಂದಾ
ಅವನು ತಬುಕ್ಕಂಡಿದ್ದ ಹೆಬ್ಬೆಹಾವ
ಪರಾಪರನೆ ಸಿಗದಾನಲ್ಲೋ || ಸಿದ್ಧಯ್ಯ ||

ಗುರುವೆ ತಬ್ಬುಕೊಂಡಿದ್ದ ಕಂದಾ
ಹೆಬ್ಬೆಯಾ ಹಾವನ್ನೆ
ಪರಪರನೆ ಸಿಗದಿ‌ದ್ದ
ಅವನು ಹಾವು ಸಿಗದ ಕ್ವಾಪಕೆ
ಅಂತು ಆಕಾಶ ನೋಡುತಾನೆ || ಸಿದ್ಧಯ್ಯ ||

ಹಾವನ್ನೆ ಸಿಗದುಬುಟ್ಟಂತ ಕ್ವಾಪಕ್ಕೆ ಕಂದಾ
ಅಂತ ಆಕಾಶ ನೋಡಿದ ಕೆಂಪಣ್ಣಾ
ಕಟಕಟೆ ಕಾಳಿಂಗನ ಗವಿಗೆ
ಆನೆ ತೂಕದ ಪಡುಗುಂಡು ಚಾಚಿದ್ದರು
ಚಾಚಿದ್ದಂತ ಬಾರಿ ಪಡುಗುಂಡು ಕಣ್ಣಿಂದ ನೋಡಿಬುಟ್ಟು
ಕಲ್ಲಿನ ಕಿಂಡಿವೊಳಗೆ ಸೂಜಿ ಕಣ್ಣಿನ ಗಾತ್ರ
ಸೂರ್ಯನ ಬೆಳಕು ಕಾಳಿಂಗನ ಗವಿಗೆ ಕಾಣುತಿತ್ತು
ಇದೇ ದಾರಿಮಾರ್ಗ
ಇರಬಹುದು ಎನುತೇಳಿ ಕಂದಾ

ಅವನು ಬಂದಂತ ಕ್ವಾಪದಲಿ ಬಾರಿ ಪಡುಗುಂಡಿಗೆ
ಜಾಡಿಸಿ ಒದೆತ ಒದ್ದನಂತೆ || ಸಿದ್ಧಯ್ಯ ||
ಗುರುವೆ ಭಾರಿ ಪಡಿಗುಂಡಿಗೆ
ಜಾಡಿಸಿ ಒತ್ತ ಒದ್ದಾನು
ನನ್ನ ಕಂದಾ ಕೆಂಪಣ್ಣಾ
ಒದ್ದಂತಾ ಒಡಿತಾ
ಸಬುದಾ ನನ್ನ ಗುರುವು
ಅಯ್ಯಾ ಧರೆಗೆ ದೊಡ್ಡವರಿಗೆ
ಸಿಡ್ಲು ಹೊಡೆದಂಗೆ ಆಯಿತಲ್ಲೊ || ಸಿದ್ಧಯ್ಯ ||