ಸಿದ್ದಪ್ಪಾಜಿಯವರು ಒದ್ದಂತಾ ಒದೆತದ ಸಬುದ
ಧರೆಗೆ ದೊಡ್ಡವರಿಗೆ ಸಿಡ್ಲಿನ ಪ್ರಕಾರವಾಯಿತಂತೆ
ಈಗಲೀಗ ಇವನು ಯಾರು ಎಂತೋ ಗೊತ್ತಿಲ್ವಲ್ಲ
ಈ ನರಲೋಕಕ್ಕೆ ನಾನೆ ಹೆಚ್ಚು ಅಂತ ತಿಳಿದಿದ್ದೆ

ಅಯ್ಯೋ ನನಗಿಂತ ಹೆಚ್ಚು
ನನ್ನ ಮಗ ಎಂದರಂತೆ || ಸಿದ್ಧಯ್ಯ ||

ನನಗಿಂತ ಹೆಚ್ಚು ನನ್ನ ಮಗಾ
ಈಗ ನನ್ನ ಮಗ ಬರುತಾನಂತೇಳಿ
ಮೂರು ಸಲ ಕರೆದುಬುಟು ಧರೆಗೆ ದೊಡ್ಡವರು
ರಾಜಬೊಪ್ಪಗೌಡ್ನಪುರಕ್ಕೆ ತಾವಾಗೆ ಬಂದವರೆ
ಊರಿಗೆಗದ್ದಿಗೆ ಮೇಲೆ ಮೂರ್ತವಾಗಿ ಕೂತಗಂಡರು
ಆ ಗಳಗೆ ಒಳಿಗೆ ಸಿದ್ದಪ್ಪಾಜಿವರು ಒದೆವಂತ ಪಡುಗುಂಡು
ಆಗಲೀಗ ಬಡ್ಡನೆ ಒಡೆದು ಸೀಳೋಯ್ತು
ಒಂದೋಳು ಕಾಳಿಂಗನ ಗವಿ ಬಳಿ ಬಿದ್ದೋಯ್ತು
ಮತ್ತೊಂದೋಳು ಸಿದ್ದಪ್ಪಾಜಿ ಒದೆದಂತ ಒದೆತಕ್ಕೆ

ಅದು ದೊಡ್ಡಮ್ಮ ತಾಯಿ ಏರಿ ಮೇಲೆ
ದಡ ದಡನೆ ಉರುಳುತಾನೆ || ಸಿದ್ಧಯ್ಯ ||
ಅಯ್ಯಾ ರಾಜ ಬೊಪ್ಪಗೌಡ್ನ ಪುರಕೆ
ಉಳ್ಳುಕೊಂಡು ಬರುತಾದೆ || ಸಿದ್ಧಯ್ಯ ||

ಸಿದ್ದಪ್ಪಾಜಿಯವರು ಒದ್ದ ಒದೆತಕ್ಕೆ ದೇವಾs
ದೊಡ್ಡಮ್ಮಾ ತಾಯಿ ಏರಿಮ್ಯಾಲೆ ದಡದಡನೆ ಉಳ್ಳುಕೊಂಡು
ರಾಜಬೊಪ್ಪಗೌಡ್ನ ಪುರದ ಮಠದ ಬಾಗಿಲಿಗೆ ಬಂದು

ಅದು ಬುಗುರಿ ತಿರುಗಿದಂಗೆ ದೇವಾ
ಬುಗುಬುಗುನೆ ತಿರುಗುತಾದೆ || ಸಿದ್ಧಯ್ಯ ||

ಗುರುವೆ ಬುಗುರಿ ತಿರುಗುದಂಗೆ ಗುರುವೆ
ಬುಗುಬುಗುನೆ ದೇವಾ
ತಿರುಗುವ ಕಾಲದಲ್ಲಿ
ಅಯ್ಯಾ ತಿರುಗುಬ ಪಡುಗುಂಡಾ
ನೋಡುಬುಟ್ಟು ನನ್ನಪ್ಪಾ
ಗರಾಗರನೆ ತಿರುಗುವಾ
ಪಡುಗಂಡು ನೋಡುಬಿಟ್ಟು
ಧರೆಗೆ ದೊಡ್ಡವರು
ನನ್ನ ಮಂಟೇದ ಲಿಂಗಪ್ಪಾ
ಬಾರವ್ವ ಬಾರವ್ವ ಮಗಳೆ
ತೋಪಿನ ದೊಡ್ಡಮ್ಮ ತಾಯಿ || ಸಿದ್ಧಯ್ಯ ||
ಗುರುವೆ ಬಾರದ ಪವಾಡಕೆ
ನೀ ಬಂದು ಒದಗು ಮಾಯಕಾರ || ಸಿದ್ಧಯ್ಯ ||

ಗುರುವೆ ಧರೆಗೆ ದೊಡ್ಡವರು
ಮಂಟೇದ ಲಿಂಗಪ್ಪ
ಮಾಯಕಾರದ ಒಡೆಯ
ಅಮ್ಮ ಬವ್ವ ನನ ಕಂದಾ
ಬಾರೆ ನನ್ನ ಮಗಳೇ
ತೋಪಿನಾ ದೊಡ್ಡಮ್ಮ
ನಾನು ಕೂಗಿದ ಮಾತಿಗೆ ಕಂದಾ
ಓಡಿ ಬಾವ್ವ ಎಂದರಲ್ಲಾ || ಸಿದ್ಧಯ್ಯ ||

ಓಡ ಬಾ ಕಂದಾ ಓಡಿ ಬಾರೋ ಮಗಳೆ ಎಂದರು
ಇಂಥಾ ಜಗತ್ತು ಗುರುಗಳ ಮಾತು ಕೇಳಿಬುಟ್ಟು
ತಾಯಿ ದೊಡ್ಡಮ್ಮ ಓಡಿ ಬಂದು
ಧರೆಗೆ ದೊಡ್ಡವರ ಮಠದ ಬಾಗಿಲಲ್ಲಿ ತಿರುಗುತಿದ್ದಂತ ಪಡುಗುಂಡು
ನೋಡಿಬಟ್ಟು
ಅಣ್ಣಯ್ಯ ಪಡುಗುಂಡು ಈ ರೀತಿ ತಿರುಗತದಲ್ಲ ಯಾತಕಪ್ಪಾ
ಈ ಪಡಗುಂಡು ಎಲ್ಲಿಂದ ಬಂದು ಬುಡ್ತು ಗುರುದೇವ
ನನ್ನತಾನೆ ಯಾತಕ್ಕೆ ಕೂಗಬುಟ್ರಿಯಪ್ಪಾ ಎಂದರು
ದೊಡ್ಡಮ್ಮಾ ನನ್ನ ಮಗ ಮೊದಲಾಗಿ ಒಪ್ಪಿಸಿರುವಂತ ಬಿರುದು ಇದು
ಕಂದಾ
ನನ್ನ ಮಗ ಒದ್ದಿರುವಂತ
ಪಡುಗುಂಡು ನನ್ನ ಮಠಕ್ಕೆ ಬಂದು ಬುಟ್ತು ದೊಡ್ಡಮ್ಮ
ಈಗಲೀಗ ಸತ್ಯವಂತ ಮಗ ಒದ್ದಂತ ಪಡುಗುಂಡು
ಮಠದ ಬಾಗಗಲಿಲ್ಲ ಸುತ್ತತಾ ನಿಂತದಲ್ಲೊ ದೊಡ್ಡಮ್ಮ
ಇದು ನಾಳದಿಸ ನನಗೆ ಬೇಕಾದ ಬದುಕು
ಈಗಲೀಗ ಹೇಳತೀನಿ ಕೇಳವ್ವ ದೊಡ್ಡಮ್ಮ
ನನ್ನ ಮಗ ಒದ್ದಿರುವಂತ ಪಡುಗುಂಡು ನಾಳೆ ದಿವಸ
ನನಗೆ ಯಾತಕೆ ಬೇಕೆಂದರೆ
ಮರ್ತಲೋಕಕ್ಕೆ ನಾನು ಹೊರಟೋಗುವಾಗ
ಈ ರಾಜಬಪ್ಪಗಣ್ಣ ಪುರದ
ಮಠದ ಬಾಗಲಿಗೆ ಕಂದಾ
ನನ್ನ ಮಗ ಬಿದ್ದಿರುವಂತ
ಪಡುಗುಂಡು ಈ ಬಾಕಲಿಗೆ ಚಾಚಿಗಂಡು

ನನ್ನ ಪಾತಾಳ ಲೋಕಕ್ಕೆ ನಾನು
ಹೋಗಬೇಕು ಎಂದರಲ್ಲಾ || ಸಿದ್ಧಯ್ಯ ||

ನನ್ನ ಮಗನು ಒದ್ದಿರುವಂತ
ಪಡುಗುಂಡು ನನ ಕಂದಾ
ಈ ಬಾಗಿಲಿಗೆ ಚಾಚಿಕೊಂಡು ನಾ ಪಾತಾಳ ಲೋಕಕ್ಕೆ
ನಾನು ಹೋಗುವಾಗ ದೊಡ್ಡಮ್ಮಾ
ಅಯ್ಯಾ ಧರೆಗೆ ದೊಡ್ಡವರು
ಇಲ್ಲೆ ವಾಸವಾಗಿ ಇರುತಾರೆ ಎನುವುದು
ಅವ್ವಾ ನರರಿಗೆ ಗೊತ್ತಾಗಬಾರದು ಕಂದಾ
ಸುರರಿಗೆ ಗೊತ್ತಾಗಬಾರದು
ಈ ನರಲೋಕದಲ್ಲಿರುವ ದೇವ ಮಾನವರಿಗೆ ತಿಳಿಯಬಾರದು
ಈ ನರಲೋಕದಲ್ಲಿರುವ ದೆವ್ವ ದೇವ ಮಾನವರಿಗೆ
ತಿಳಿಬಾರದು ನನ ಕಂದಾ ಕೇಳವ್ವಾ ದೊಡ್ಡಮ್ಮಾ

ನಾನು ಯಾರಿಗೂ ಗೊತ್ತಿಲ್ಲದಂತೆ
ಹೊಂಟೋಯ್ತಿನಿ ಎಂದರಂತೆ || ಸಿದ್ಧಯ್ಯ ||

ಜಗತ್ತು ಗುರುಗಳ ಮಾತು ಕೇಳಿ ದೊಡ್ಡಮ್ಮಾ
ಈ ಪರಂಜ್ಯೋತಿವರು ಆಡತಕ್ಕಂತ ಮಾತು
ಸುಳ್ಳೋ ನಿಜವೋ ಗೊತ್ತಿಲ್ಲವಲ್ಲ
ಮಾತು ಮಾತಿಗೂ ಕೂಡ ನರಲೋಕ ಬುಟ್ಟು ಹೊರಟೋಯ್ತೀನಿ
ಪಾತಾಳ ಲೋಕಕ್ಕೆ ಹೊರಟೋಯ್ತೀನಿ
ಎನ್ನುವಂತ ಮಾತು ಹೆಚ್ಚಾಗುಬುಟ್ಟನಲ್ಲ
ನಾಳೆ ದಿವಸ ನಮಗೆ ಏನು ಬಂದಾದೂ ಏನೋ ಗೊತ್ತಿಲ್ವಲ್ಲ
ಎನುತೇಳಿ ತೋಪಿನ ದೊಡ್ಡಮ್ಮ
ಅಣ್ಣಯ್ಯಾ ಈ ಬಾರಿ ಪಡುಗುಂಡು ಈ ರೀತಿ ಸುತ್ತುತಲ್ಲ ಇದಕ್ಕೆ
ಏನು ಮಾಡಬೇಕು ಸ್ವಾಂಇ ಎಂದರು
ದೊಡ್ಡಮ್ಮ ಕಾಲಬರೋಗಂಟ ನನ ಮಠದ ಬಾಗಿಲಲ್ಲೆ ಆ ಬಾರಿ
ಪಡುಗುಂಡು ಇರಬೇಕಾದರೆ

ನಿನ್ನ ಮುತ್ತೈದೆ ಸ್ಥಾನದಲ್ಲಿ ಮುಟ್ಟಿ
ಪೂಜೆ ಮಾಡು ಮಗಳೆ || ಸಿದ್ಧಯ್ಯ ||

ಅಮ್ಮಾ ನಿನ್ನ ಮುತ್ತೈದೆ ಸ್ಥಾನದಲ್ಲಿ
ಮುಟ್ಟಿ ಪೂಜೆ ಮಾಡು ಕಂದಾ || ಸಿದ್ಧಯ್ಯ ||

ಇಂಥ ಧರೆಗೆ ದೊಡ್ಡವರ ಮಾತ
ಕೇಳಿಬಿಟ್ಟು ದೊಡ್ಡಮ್ಮಾ
ಅವರು ಸ್ನಾನ ಜಳಕ ಮಾಡಿ
ಮಡಿಯ ಸೀರೆ ಉಟ್ಟು
ತಾಯಿ ದೊಡ್ಡಮ್ಮಾ
ಅಮ್ಮಾ ಅರಿಶಿನ ಕುಂಕುಮ
ಗಂಧ ಚಂದಿರ
ಕುಸುಮವಾ ತಗದು
ತಟ್ಟೇಲಿ ತುಂಬಿಕಂಡು
ಅವರು ಭಾರಿ ಪಡುಗುಂಡಿನ
ತಾಯಿ ದೊಡ್ಡಮ್ಮಾ
ತಾನಾಗಿ ಬಂದು
ಅವಳು ಮುತ್ತೈದೆ ಸ್ಥಾನದಲ್ಲಿ
ತಾನಾಗಿ ಪೂಜೆ ಮಾಡುತಾಳೆ || ಸಿದ್ಧಯ್ಯ ||

ಮುತ್ತೈದೆ ಸ್ಥಾನದಲ್ಲಿ ತಾಯಿ
ಮುಟ್ಟಿ ಪೂಜೆ ಮಾಡಿದರು ದೊಡ್ಡಮ್ಮ
ತಿರುಗುವಂಥ ಪಡುಗುಂಡು ಗರಕ್ಕನೆ ನಿಂತಗಂತು
ಅಣ್ಣಯ್ಯಾ ಈಗ ಪಡುಗುಂಡು ಸುತ್ತೋದಿಲ್ಲ ನಿಂತೋಯ್ತು
ಆಗಲಿ ಬವ್ವಾ ಕಂದಾ ದೊಡ್ಡಮ್ಮಾ
ಈಗ ನನಮಗ ಸಿದ್ದಪ್ಪಾಜಿ ಬರುವಂತ ಟೈಮು
ದೊಡ್ಡಮ್ಮಾ ನನ್ನ ಮಗ ಅಂದ್ರೆ ಹುಚ್ಚಿನವನು ಬೆಪ್ಪನವನು ಕಂದಾ
ಮೊಲ್ಲಾಗ್ರದವನು ಮಗಳೆ ಮೊಲ್ಲಾಗರದವನು ಹುಚ್ಚುಗೊಳಿ
ನನ್ನ ಮಗ ಬರೂವಾಗ ಏನಾದ್ರು ನೋಡುಬುಟ್ಟು ಮಗಳೆ

ನನ್ನ ಮಗನ ನೋಡುಬುಟ್ಟು
ಬಹಳ ಭಯ ಪಡುತೀಯೆ || ಸಿದ್ಧಯ್ಯ ||

ನನ್ನ ಮಗನ ನೋಡಿಕಂಡು ಕಂದ
ಬಾಳ ಭಯ ಕಂದಾ
ಪಡುತೀಯ ದೊಡ್ಡಮ್ಮಾ
ನನ್ನ ಮಗನು ಬರುವಾಗ
ನೀ ಎದುರಾಗಿ ಇರಬೇಡ
ನನ್ನ ಮಠದ ಹಿಂಭಾಗಕ್ಕೆ
ಮರೆಯಾಗು ದೊಡ್ಡಮ್ಮ ತಾಯಿ || ಸಿದ್ಧಯ್ಯ ||

ಮಠದ ಹಿಂಬಾಗಕ್ಕೆ ಮರೆಯಾಗಿ ಕಂದ ಹೊಂಟೋಗುಬುಡು
ಎಂದರು
ಧರೆಗೆ ದೊಡ್ಡವರ ಮಾತು ಕೇಳಿಬಿಟ್ಟು ದೊಡ್ಡಮ್ಮಾ
ಅಯ್ಯೋ ನನ್ನಪ್ಪಾ ನನಗೆ ಭಯಾ ಹುಟ್ಟಿಸುವಂತ ಮಗ್ನ
ಪಡದಿದೀಯಾ ದೇವಾ
ನಿನ್ನ ಮಗನ ನೋಡುಬುಟ್ರೆ ಎಷ್ಟೋ ಭಯ ಉಂಟಾಯ್ತದೆ
ಅಂತ ಹೇಳಿತೀರಿಯಲ್ಲಪ್ಪಾ
ಅಣ್ಣಯ್ಯಾ ಹಾಗಾದ ಮೇಲೆ ಭಯವಾದ ಮಗನ
ನಾವು ಯಾವ ರೀತಿ ನೋಡಬೇಕು
ಎನುತೇಳಿ ದೊಡ್ಡಮ್ಮ ತಾಯಿ

ಬಾಳ ಭಯಾ ಪಟ್ಟಳಂತೆ
ಮರೆಯಾಗಿ ಹೋಯಿತಾಳೆ || ಸಿದ್ಧಯ್ಯ ||

ಗುರುವೆ ಬಾಳ ಭಯವ ತಾಯಿ
ಪಟಗಂಡು ದೊಡ್ಡಮ್ಮಾ
ಮಠದ ಹಿಂಭಾಗಕೆ
ತಾಯಿ ಮರೆಯಾಗಿ
ಹೊರಟೋದ್ಲು ದೊಡ್ಡಮ್ಮಾ
ಅವರು ಹೋದಂತ ಕಾಲದಲ್ಲಿ
ಅಪ್ಪಾಜಿ ಗುರುವು
ಧರೆಗೆ ದೊಡ್ಡವರು
ನನ್ನ ಮಂಟೇದ ಲಿಂಗಪ್ಪ
ಅವರು ಉರಿಯ ಗದ್ದಿಗೆ ಮೇಲೆ
ಮಾರ್ತವಾಗಿ ಕುಂತರಲ್ಲ || ಸಿದ್ಧಯ್ಯ ||

ತಾನಾಗಿ ಗುರುವು
ಉರೀ ಗದ್ದಿಗೆ ಮೇಲೆ ಕುಳಿತಿದ್ದರು
ಅದೇ ಹೊತ್ತಿನಲ್ಲಿ ಕೆಂಪಾಚಾರಿ
ಕಾಳಿಂಗನ ಗವಿಯನ್ನು ಬುಟ್ಟು ಕಂದಾ
ಈಗ ಗುರು ಬಳಿಗೆ ಹೋಗಬೇಕು
ಸಾಕಿದಂತಾ ತಂದೇ ಬಳಿಗೋಗಬೇಕು
ಹಾಗೆಂದು ಕೆಂಪಾಚಾರಿ
ಈಗಲೀಗಾ ಅಜ್ಞಾನ ಹೊರಟೋಗಿಬುಟ್ಟು ಶುದ್ಧ ಗ್ಯಾನ ಬಂದು
ಈಗಲೀಗಾ ಗುರು ಗ್ಯಾನವೆ ಮಾಡಿಕೊಂಡು
ಅರವತ್ತಾರು ಟೈಮು ಮುವತ್ತು ಮೂರು ಗಳಿಗೇಲೂ ಕೂಡ
ಧರೆಗೆ ದೊಡ್ಡವರ ಪಾದ ನೆನೀತ ನೆನೀತಾ ಕೆಂಪಣ್ಣಾ
ಮನದಲ್ಲಿ ಏನಂತಾ ಯೋಚಣೆ ಮಾಡುತಾನಂದರೆ
ಹನ್ನೆರಡು ವರ್ಷಕ್ಕೆ ಇವತ್ತು ನಮ್ಮ ಗುರು ಬಳಿಗೋಯ್ತು ಇವನಿ
ಈಗ ಮಗನಾಗಯ್ಯ ಕಂದಾ ಎಂದು ಕೇಳ್ತರೆ
ಆಯ್ತು ಬುದ್ಧಿ ಅಂತ ಹೇಳ್ತೀನಿ
ಮಗನಾದ ಮೇಲೆ ನಿಮ್ಮ ತಂದೆಗೆ ಏನು ಉಲುಪೆ ತಂದಿದೀಯಂತ ಕೇಳಿದರೆ
ನಾನು ಏನು ಒಪ್ಪಿಸಬೇಕು
ನಾನು ಕಾಡಲಿದ್ದ ಮಗ
ಬಾವೀಲೆ ಬೆಳೆದ ಮಗ
ಈ ಕಾಡು ಉಲುಪೆನೆ ತಗಂಡೋಗಿ ನಮ್ಮ ತಂದೆಗೆ
ಒಪ್ಪಿಸಬೇಕಂತೇಳಿ

ಅವನು ನೂರೊಂದಾವು ಚವುಳ ಕಂದ
ಓಡಾಡಿ ಹಿಡಿಯುತಾನೆ || ಸಿದ್ಧಯ್ಯ ||

ಗುರುವೆ ನೂರೊಂದಾವು ಚೇಳ
ಓಡಾಡಿ ಕಂದಾ ಹಿಡಿಯುತಾ ಕೆಂಪಣ್ಣ
ಅವನು ಕಟ್ಟು ಹಾವು ತೆಗೆದು
ನೂರು ಕಟ್ಟು ಮಾಡಿ
ಅವನು ಕಟ್ಟು ಹಾವಿನೊಳಗೆ ದೇವಾ
ನೂರೊಂದಾವು ಕಟ್ಟುತಾನೆ || ಸಿದ್ಧಯ್ಯ ||

ಈಗಲೀಗ ಮೂರು ಕಟ್ಟನ್ನ
ಹೊರೆ ಕಟ್ಟಿದ ಎಳೇ ಕೆಂಪಣ್ಣ
ಹಾವು ಚೆವುಳು ಗೊದ್ದ ಗೋಸುಂಬೆ ಎಲ್ಲಾನು ಹಿಡದು
ಪುಟ್ಟ ಹೊರೆ ಕಟ್ಟಿಗಂಡು
ಈಗಲೀಗ ಹೊರೆ ಕಟ್ಟಿಗಂಡು ಭೂಮೀಲಿ
ಈ ಹಾವಿನೊರೆ ಹೊತಗಂಡು ನಮ್ಮ ತಂದೆಬಳಿಗೆ ಹೋಗಬೇಕು
ಈಗ ನಮ್ಮ ತಂದೆ ಬಳಿಗೆ ಹೋಗಬೇಕಾದರೆ ನನ್ನ ಮಾನದ ಮೇಲೆ
ಅಂಗೈಯಗಲ ಬಟ್ಟೆ ಕೂಡ ಇಲ್ವಲ್ಲ

ಈ ಮಾನವ ದೇವ
ನಾನು ಹೊತಗಂಡು

07_79_Mante-KUH

ಈ ಮರೀಯಾದೆ
ನಾನು ಪಡಕೊಂಡು
ನಮ್ಮ ತಂದೆಯ ಬಳಿಗೆ ನಾ
ಹೋಗಬಾರದು ಎಂದಾರಲ್ಲ || ಸಿದ್ಧಯ್ಯ ||

ಈ ಮಾನ ಈ ಮರ್ಯಾದೆ ಹೊತಗಂಡು
ಇದೇ ರೀತಿಯಾಗಿ ನಮ್ಮ ತಂದೆ ಬಳಿಗೆ ಹೋಗಬಾರದು
ಎನುತೇಳಿ ಕೆಂಪಣ್ಣ

ಅವನು ಉಗುನಿ ಹೊಂಬ ಕಿತುಗೊಂಡು
ಉಡುಗೆಯ ಉಟಗಂಡು
ಬೇವಿನ ಸೊಪ್ಪು ಕಿತ್ತು
ಬೆನ್ನಗು ಮರೆಯ ಮಾಡಿ
ತ್ಯಾಗದು ಎಲೆಯ ಕಿತ್ತು
ಎದೆಗೂ ಮರೆಯ ಮಾಡಿ
ಗುರುವೆ ಎಕ್ಕದಲೆ ಕಿತ್ತು
ಮಾನವ ನನ್ನ ಕಂದ
ಮರೆಯ ಮಾಡಿಕೊಂಡು
ಹಾವಿನ ಹೊರೆಯ ತಗದು
ನೆತ್ತಿ ಮೇಲೆ ಹೊತಗಂಡು
ಗುರುವೆ ಎಲೆಯ ಕುಂದೂರು ಬೆಟ್ಟ
ಇಳುದು ಬರುವಾಗ ನನ ಕಂದ
ಸಿದ್ದಪ್ಪಾಜಿ ಬರುವಾಗ
ಕುಂದೂರು ಬೆಟ್ಟ ನಡುಗಿತಲ್ಲೋ || ಸಿದ್ಧಯ್ಯ ||

ಗುರುವೆ ಹಾವಿನೊರೆಯ ತಗದು
ಗುರುವೆ ನೆತ್ತಿಮೇಲೆ ಹೊತ್ತಗಂಡು
ಕುಂದೂರು ಬೆಟ್ಟ ಇಳದು
ಬರುವಂತ ಕಾಲದಲ್ಲಿ
ಗುರುವೆ ಕುಂದೂರು ಬೆಟ್ಟವೆಲ್ಲಾ
ಗಡಗಡನೆ ನಡಗೋಯ್ತು
ಆಕಾಸುವು ಎಲ್ಲ
ಅಗಲವಾಗಿ ಹೋಯ್ತು
ಗುರುವೆ ಆಕಾಸದ ಮೇಲೆ
ಇರುವಂತ ನನ್ನ ದೇವಾ
ನಕ್ಷತ್ರಗಳು ಎಲ್ಲಾ
ಅವು ಕತ್ತರಿಸಿ ಕತ್ತರಿಸಿ ದೇವಾ
ಭೂಮಿ ಮೇಲೆ ಬೀಳುತಾವೆ || ಸಿದ್ಧಯ್ಯ ||

ನೋಡಪ್ಪಾ ಸಿದ್ದಪ್ಪಾಜಿ ಹಾವಿನ ಹೊರೆ ಹೊತಗಂಡು
ಕುಂದೂರುಬೆಟ್ಟ ಇಳದು ಬರುವಾಗ
ಕುಂದೂರು ಬೆಟ್ಟವೆಲ್ಲಾ ಗಡಗಡನೆ ನಡುಗುಬುಡ್ತಂತೆ
ಆಕಾಸವೆ ಹೆದರಿ ಅಗಲವಾಗಿ ಬುಡ್ತಂತೆ
ಆಕಾಸದಲ್ಲಿರುವ ನಕ್ಷತ್ರಗಳೆಲ್ಲಾ
ಸಿದ್ದಪ್ಪಾಜಿಯವರ ಮೈಮೇಲೆ ಗುರುವು

ಅಯ್ಯಾ ಮಲ್ಲಿಗೆ ಪುಷ್ಮವಾಗಿ
ಅವರ ಮೈಮೇಲೆ ಉದುರುತಾವೆ || ಸಿದ್ಧಯ್ಯ ||

ಗುರುವೆ ಸಿದ್ದಪ್ಪಾಜಿಯವರು
ಬರುವಂತ ಗುರುವು
ಅಂದ ಚೆಂದಕ್ಕೆ
ರೂಪುರೇಶೆಗೆ
ಗುರುವೆ ಗುರುದೇವ
ಅಯ್ಯಾ ದೇವಲೋಕದ ಒಳಗೆ
ಇರುವಂತ ನನ್ನ ಗುರುವು
ವಿಷ್ಣು ಈಶ್ವರ
ಬ್ರಹ್ಮ ತ್ರಿಮೂರ್ತಿ
ಗಂಗೆ ಗೌರಮ್ಮ
ಗಿರಿಜ ಪಾರ್ವತಿ
ನನ್ನ ಸಿದ್ದಪ್ಪಾಜಿ ನೋಡಿ ಕಂಡು
ಕೈಯೆತ್ತಿ ಮುಗಿಯುತಾರೆ || ಸಿದ್ಧಯ್ಯ ||

ವಿಷ್ಣು ಈಶ್ವರ ಬ್ರಹ್ಮ ತ್ರಿಮೂರ್ತಿಗಳು ದೇವಾ
ಧರೆಗೆ ದೊಡ್ಡವರ ಶಿಶುಮಗ ಸಿದ್ದಪ್ಪಾಜಿ ಹೊಯ್ತವರೆ
ಇವರು ನರಲೋಕದ ಮಗನಲ್ಲ ದೇವ ಲೋಕದವನಲ್ಲ
ಈಗಲೀಗ ಸುರಪತಿ ಬಳಿಗೆ ಸಿದ್ದಪ್ಪಾಜಿಯವರು ಹೊಯ್ತವರೆ
ಎನುತೇಳಿ ದೈವದೇವ ಮಾನವರೆಲ್ಲಾ
ಸಿದ್ದಪ್ಪಾಜಿಯವರ ಮುಖ ನೋಡಿ ಕೈಯೆತ್ತಿ ಮುಗಿಯುತ್ತಿದ್ದರಂತೆ

ಅವನು ಹಾವಿನೊರೆಯ ಹೊತ್ತಗಂಡು
ಬುಳುಬುಳುನೆ ಇಳದನಂತೆ || ಸಿದ್ಧಯ್ಯ ||

ಗುರುವೆ ಹಾವಿನೊರೆಯ ಕಂದಾ
ನೆತ್ತಿಯಲಿ ಹೊತಗಂಡು
ಅವರ ಕುಂದೂರು ಬೆಟ್ಟವ
ಬುಳುಬುಳನೆ ಇಳದು
ಬರುವಂತ ಕಾಲದಲ್ಲಿ
ಅವರು ರಾಜಬಪ್ಪಗಣ್ಣಪುರಕೆ ಕಂದಾ
ಓಡಿಓಡಿ ಬರುವರಲ್ಲಾ || ಸಿದ್ಧಯ್ಯ ||

ರಾಜಬಪ್ಪಗೌಡ್ನ ಪುರಕೆ ಬಂದರು ಸಿದ್ದಪ್ಪಾಜಿ
ಈ ಹಾವಿನ ಹೊರೆ ತಕ್ಕಂಡೋಗಿ ಗುರು ಮುಂಬಾಗದಲ್ಲಿ
ಮಡಗಬಾರದು ಎಂಬುದಾಗಿ
ದೂರತಕ್ಕಂಡೋಗಿ ಹಾವಿನ ಹೊರೆ ಮಡಗಿಬುಟ್ಟು ಸಿದ್ದಪ್ಪಾಜಿ
ಓಡೋಡಿ ಬಂದು ರಾಜಬಪ್ಪಗೌಡ್ನಪುರದ
ಮಠದ ಬಾಗಿಲಲ್ಲಿ ನಿಂತಗಂಡ
ಧರೆಗೆ ದೊಡ್ಡವರು ಅರೆಗಣ್ಣು ಮುಚ್ಚಿಗಂಡು
ಯರಗಣ್ಣು ಬಿಟಗಂಡು
ಉರೀಗದ್ದಿಗೆ ಮೇಲೆ ಪವಾಡಿಸಿದ್ದರು
ಪವಾಡಸಿರತಕ್ಕಂತ ಪರಂಜ್ಯೋತಿಯವರ
ನೋಡಕಂಡು ಸಿದ್ದಪ್ಪಾಜಿ
ಈಗ ನಮ್ಮ ತಂದೆಯವರು
ನಿದ್ರೆ ಮಾಡುತಿರಬೌದು
ಈಗ ನಾನು ಮಾತಾಡಿಬುಟ್ರೆ
ನಿದ್ರೆ ಭಂಗ ಮಾಡಬೇಕಾಯ್ತದೆ ಅಂತೇಳಿ

ಪಾದವ ಜೋಡಿಸಿಕಂಡು
ಕೈಯೆತ್ತಿ ಮುಗಿದುಕೊಂಡುಸ
ನನ್ನ ಸಿದ್ದಪ್ಪಾಜಿಯವರು
ಅವರು ಮಠದ ಮುಂದಗಡೆ ಕಂದಾ
ತಲೆಬಾಗಿ ನಿಂತರಲ್ಲ || ಸಿದ್ಧಯ್ಯ ||