ನನ್ನ ಬಿರುದೆಲ್ಲ ನನ ಕಂದಾs
ಈ ಭೂಮಿ ಭೂಲೋಕ ಇರೋತನಕ ನಿನ್ನ ಬಿರುದೇ ಕಂದಾ
ಇದೆಲ್ಲನೂ ನೀನೆ ಧರಿಸ್ಕೋಪ್ಪ ಅಂತೇಳಿ
ಧರೆಗೆ ದೊಡ್ಡವರ ಬಳಿಲಿರ್ತಕಂತಾ ಬಿರುದು ಲಾಂಚಾಣವನ್ನೆಲ್ಲಾ
ಸಿದ್ದಪ್ಪಾಜಿ ಕೈಲಿ ಹೊರಸಿ ಧರೆಗೆ ದೊಡ್ಡವರು
ತೋಪಿನ ದೊಡ್ಡಮ್ಮ
ಈಗಲೀಗಾ ನನ್ನ ಮಗನು
ಈ ನಾಡು ದೇಸ ಮೆರಕಂಡು ಬರುತಾನೆ ಕಂದಾ
ಈಗಲೀಗಾ ಕನ್ನ ಕರಡಿ ತಕ್ಕಂಡು
ನನ್ನ ಮಗನ ಜೋತೆಲಿ ಹೋಗಿ ಕಂದಾ
ಮಡಿವಾಳ ಮಾಚಪ್ಪ
ನನ ಮಗ ಸಿದ್ದಪ್ಪಾಝಿ ನಾಡು ದೇಸದ ಮೇಲೆ ಮೆರಿಕೊಯ್ತವನೆ
ನೀನು ಮುಂದಲ ಮಡಿ ಬುಡು ಕಂದಾ
ಮಲ್ಲಿಗೆ ಮಾದೇವಮ್ಮ
ನಿನ್ನ ಪತಿ ಮುಂದಿನ ಮಡಿಬುಟ್ರೆ
ನೀನು ಯಿಂದಲಾ ಮಡಿ ಎತ್ತು ಕಂದಾ
ಮಾಚಪ್ಪನ ಮಗನೇ ಕಂದಾ ವೀರಣ್ಣ
ಆಯಿರಾಳ ಮಯಿರಾಳ ಎನುತೇಳಿ
ಎರಡು ಪಂಜ ಕಟ್ಟಿಗಂಡು ಕಂದಾ

ನನ್ನ ಬಾರಿ ಖಂಡಾಯ್ದ ಮುಂದೆ
ಪಂಜು ಮಗನೆ ಬರಲೇಬೇಕು || ಸಿದ್ಧಯ್ಯ ||

ಈಗಲೀಗಾ ನನ್ನ ಮಗನ ಮುಂಬಾಗದಲ್ಲಿ ಕಂದಾ s
ಪಂಜು ಬರಬೇಕು ಮಗನೆ
ಪಂಜಿನ ಬೆಳಕಲಿ ಕಂದಾ ಸಿದ್ದಪ್ಪಾಜಿ
ಈ ನರಲೋಕ ಮೆರಕಂಡು ಬಾ ಹೋಗು ಮಗನೆ
ಈಗ ದೇವರಾದೆ ಹೋಗು ಕಂದಾ
ನಾನು ರಾಜ ಬಪ್ಪಗೌಡ್ನಪುರಕೆ
ಮಠಕೆ ಹೊಯ್ತಿನಿ ಹೋಗು ಮಗನೆ ಎನುತೇಳಿ
ನಾಡು ದೇಸದ ಮೇಲೆ
ಎಲ್ಲಾ ಬಿರುದನು ಸಿದ್ದಪ್ಪಾಜಿಗೆ ಹೊರಿಸಿಬುಟ್ಟು
ಧರೆಗೆ ದೊಡ್ಡವರು ಮಂಟೇದಸ್ವಾಮಿ
ರಾಜ ಬಪ್ಪಗೌಡ್ನ ಪುರಕೆ ಬಂದು ಬುಟ್ಟರು
ಸಿದ್ದಪ್ಪಾಜಿಯವರು ರಾಜ್ಯ ರಾಜ್ಯದಾ ಮೇಲೆ
ಬರುವಾಗ ಗುರುವು

ಅವರ ಹಿಂದೆ ಡಮಗರಾ ಡೋಳು
ಮುಂದೆ ಢಮಗರಾ ಡೋಳು
ಜಿಕಿಜಿಕಿ ಚಿಕ್ಕ ತಾಳ
ಉಯ್ಯಿನಿ ಕೊಂಬುನಾ ಕಾಳೆ
ಹಳ ತಮಟೆ ಕಳೆ ತಮಟೆ
ಬಡಿತಾರೆ ನನ ಗುರುವು
ಗುರುವೆ ನಂದೀವಿಗೇ
ಬೆಳಕಲ್ಲಿ ಗುರುವೇ
ನಂದಿ ಮೋರುತಾ ಮಾಡಿ
ನನ್ನ ನೀಲುಗಾರರ ಗಂಡ
ನನ್ನ ನೀಲಿ ಸಿದ್ದಪ್ಪಾಜಿ
ಅವರು ನಂದೀವಿಗೆ ಬೆಳಕಿನಲ್ಲಿ
ಲೋಕನೆಲ್ಲ ಮೆರೆಯುತಾರೆ || ಸಿದ್ಧಯ್ಯ ||

ಈಗಲೀಗಾ ನಂದೀವಿಗೆ ಬೆಳಕಲ್ಲಿ ಗುರುವುs
ನಡುವೆ ನರಲೋಕನೆಲ್ಲಾನು ಗುರುದೇವಾ
ಸಿದ್ದಪ್ಪಾಜಿಯವರು ಮೆರಕಂಡು ಮೆರಕಂಡು ಬರುವಾಗ

ಅಪ್ಪ ಬಲಕೆ ಬಪ್ಪುಗೌಡ್ನಪುರ
ಎಡಕೆ ಚಿಕ್ಕಲ್ಲೂರು
ಅಯ್ಯಾ ನಟ್ಟ ನಡು ಮದ್ಯ
ಹೊಳೆಸಾಲು || ಸುವ್ವಾ ಬಾ ಚೆನ್ನ ಬಸವಣ್ಣ ||

ಅಯ್ಯಾ ನಟ್ಟ ನಡು ಮದ್ಯ ಹೊಳೆ ಸಾಲವೊಳಗೇ
ಕಿರಿಯ ಕಾಳಿಂಗಾ ಮನೆ ಮಾಡಿ || ಸುವ್ವಾ ಬಾ ||
ಗುರುವೇ ಕರಿಯ ಕಾಳಿಂಗ ಅಲ್ಲಿ
ಮನೆ ಮಾಡಿ ಸಿದ್ದಪ್ಪಾಜಿ
ಅಲ್ಲಿ ನಾಗರಾವುನ ಹೆಡೆಯಲ್ಲಿ
ನಾಗರಾವಿನ ಪಾದ ನೋಡುತಾರೆ || ಸುವ್ವಾ ಬಾ ||

ಅಯ್ಯೋ ಯಾಕೊ ಸಿದ್ದಪ್ಪಾಜಿ
ಲೋ ಕ್ವಾಪ ಭಕುತರ ಮೇಲೆ
ಅಪ್ಪ ಲೋಕದವರೆಲ್ಲ ನಿನಗೆ
ಯಿಡು ಹೊನ್ನು || ಸುವ್ವಾ ಬಾ ||

ಈ ಲೋಕದವುರೆಲ್ಲಾ ನಿಮಗೆ
ಹಿಡಿ ಹೊನ್ನ ಯಿಡುಕಂಡು
ಘನ ನೀಲು ಸಿದ್ದಪ್ಪಾಜಿ ಕಾದುನಿಂತವರೆ
ನಿನ್ನ ಚರಣವಾ || ಸುವ್ವಾ ಬಾ ||
ಗುರುವೆ ಲೋಕದವರೆಲ್ಲಾ ದೇವಾ
ಗುರುವೆ ಹಿಡಿ ಹೊನ್ನ ಇಡುಕೊಂಡು
ನಿಮಗೆ ಧೂಪದಾರತಿಯ
ಸ್ವಾಮಿ ಬೆಳಗಿದರು || ಸುವ್ವಾ ಬಾ ||

ಅಪ್ಪ ಯಾಕೊ ಸಿದ್ದಪ್ಪಾಜಿ
ನೀವು ಬಂದ್ಯಾಕೆ ಹೋದಿರಿ
ಅಪ್ಪ ಮಂದಲಗೆ ಉಂಟು
ನಿಮಗೆ ಮಣೆಯುಂಟು || ಸುವ್ವಾ ಬಾ ||

ಗುರುವೆ ಮಂದಲಗೆ ಉಂಟು
ಮಣೆ ಉಂಟು ಗುರುವು
ಮನೆಯಲ್ಲಿ ನನ್ನ ದೇವಾ
ಅಪ್ಪ ನೀನು ಕೊಟ್ಟ ಮಕ್ಕಳು
ನಮ್ಮ ತೊಡೆ ಮೇಲೆ || ಸುವ್ವಾ ಬಾ ||

ಅಪ್ಪ ನೀನು ಕೊಟ್ಟ ಮಕ್ಕಳು
ನಮ್ಮ ತೊಡೆಯ ಮೇಲೆ ಅವೆ
ಮನೆಯಲ್ಲಿ ಅವೆ
ಅಪ್ಪ ಬಂದೋಗಿ
ನಮ್ಮ ಮಠಮನೆಗೆ || ಸುವ್ವಾ ಬಾ ||
ಗುರುವೆ ಬಂದೋಗಿ ನಮ್ಮ
ಮಠ ಮನೆಗೆ ಗುರುವು
ನೀಲಿ ಸಿದ್ದಪ್ಪಾಜಿ
ನಿಮಗೆ ಬೆಲ್ಲದಾರತಿಯ
ನಾವು ಬೆಳಗೇವು || ಸುವ್ವಾ ಬಾ ||

ಅಯ್ಯಾ ಬೆಲ್ಲದಾರತಿಯ
ನಿಮಗೆ ಬೆಳಗೇವು ಎನುತೇಳಿ
ಅಲ್ಲಿ ಲೋಕದವರೆಲ್ಲ
ಕೈಯ್ಯ ಮುಗಿದಾರು || ಸುವ್ವಾ ಬಾ ||
ಗುರುವೇ ಲೋಕದವುರೆಲ್ಲ
ದೇವಾ ಕೈಯೆತ್ತಿ ಮುಗಿವಾಗ
ನೀಲುಗಾರರ ಗಂಡ
ನೀಲಿ ಸಿದ್ದಪ್ಪಾಜಿ
ಗುರುವೇ ನರಲೋಕದ ಒಳಗೆ
ಭೂಲೋಕದ ಒಳಗೆ
ಮೆರಕೊಂಡು ಮೆರಕೊಂಡು
ಭಕುತರ ಕೈಲಿ
ಧೂಪ ಹಾಕಿಸಿಗಂಡು
ಶರಣರ ಕೈಲಿ
ಕೈ ಎತ್ತಿ ಮುಗಿಸಿಗಂಡು
ಅವರು ರಾಜ ಬಪ್ಪಣ್ಣ ಪುರಕೆ ಬರುತಾರೆ || ಸುವ್ವ ಬಾ ||

ಅಯ್ಯಾ ಸಿದ್ದಪ್ಪಾಜಿ ದುಡುವಾ
ಕಂಡವರು ಯಾರಯ್ಯ
ಈ ವಿಷ್ಣು ಈಸ್ವರರಿಗು ಹಳವಲ್ಲ || ಸುವ್ವಾ ಬಾ ||
ಇಂತ ವಿಷ್ಣು ಈಸ್ವರರಿಗೂ
ಅಳುವಲ್ಲ ಸಿದ್ದಪ್ಪಾಜಿ
ಲೋಕಕೆ ದೊಡ್ಡವರಿಗೆ ಮಗನಾದ || ಸುವ್ವಾ ಬಾ ||

ಈ ಲೋಕಕೆ ದೊಡ್ಡವರಿಗೆ
ಮಗನಾಗಿ ಸಿದ್ದಪ್ಪಾಜಿ
ಈ ಲೋಕದ ಮೇಲೆ ಕಂದ ಬರುತಾನೆ || ಸುವ್ವ ಬಾ ||

ಈ ಲೋಕದ ಮೇಲೆ
ಬರುವ ಸಿದ್ದಪ್ಪಾಜಿಯ
ಸತ್ಯಕಂಡವರೆ ಮೊದಲಿಲ್ಲಾ || ಸುವ್ವಾ ಬಾ ||

ಸಿದ್ಪಪ್ಪಾಜಿಯವರು ಗುರುವುs
ಗುರುಕೊಟ್ಟ ಬಿರುದಾ
ಎಲ್ಲಾನು ಒತ್ತಕಂಡು ಗುರುವು
ಈಗಲೀಗಾ ಮುಂಭಾಗದಲ್ಲಿ ಮಡಿ ಬುಡಿಸಿ ಗಂಡು
ಪಂಜನು ಕಂಡಾಯದ ಮುಂದೆ ಬರಮಾಡಿಕಂಡು
ಹಿಂದಲ ಮಡಿ ಎತ್ತಿಸಿಗಂಡು ಗುರುವು

ಅಯ್ಯಾ ಬೆನ್ನಿಂದೆ ದೊಡ್ಡಮ್ಮ ತಾಯಿ
ಗುರುವೇ ಬಲದಲಿ ರಾಚಪ್ಪಾಜಿ
ಮದ್ಯದ ಒಳಗೆ ನಮ್ಮ ಸಿದ್ದಪ್ಪಾಜಿ || ಸುವ್ವಾ ಬಾ ||

ಅಯ್ಯಾ ರಾಜ್ಯ ರಾಜ್ಯದ ಮೇಲೆ ನಮ್ಮ
ಸಿದ್ದಪ್ಪಾಜಿ ಬರುವಾಗ
ಈ ಲೋಕದ ದೈವ ದೇವರು ಸುಳಿವಿಲ್ಲ || ಸುವ್ವ ಬಾ ||

ಗುರುವೆ ಲೋಕ್ದು ದೈವ ದೇವರು
ಸುಳಿವಿಲ್ಲ ಸಿದ್ದಪ್ಪಾಜಿ
ಅವರು ಹಾದಿಯ ಮಠ ಮನೆಗೆ ಸ್ವಾಮಿ ಬರುತಾರೆ || ಸುವ್ವಾ ಬಾ ||

ಆದಿ ಮಠಮನೆಗೆ ಬಂದುರು ದೇವಾ s
ಇಂಥ ದುಡುವುಳ್ಳ ದೊ‌ಡ್ಡಮ್ಮ ತಾಯಿ ಓಡೋಡಿ ಬಂದು
ಮಠ ಮನೆ ಒಳಗೆ ಕನ್ನಡಿಕರಡಿ ಮಡಗಿ
ಸಿದ್ದಪ್ಪಾಜಿಯವರಿಗೆ ಗುರುದೇವಾ
ಪಾದಕೆ ಮಣೆ ಮಡಗಿ ಗುರುವು
ಪನ್ನೀರು ಗಿಂಡಿ ಒಳಗೆ ಹಾಗಣಿ ತುಂಬುಕಂಡು ಬಂದು

ಅವರು ಸಿದ್ದಪ್ಪಾಜಿ ಪದ ತೊಳೆದಾರು || ಸುವ್ವಾ ಬಾ ||
ಅವರು ಪಾದವ ತೊಳೆದಾರು
ಪಟ್ಟಾಭಿಷೇಕ ಮಾಡಾರು
ಅವರು ಮಗನೀಗಾರತಿಯ ಬೆಳಗುವರು || ಸುವ್ವ ಬಾ ||

ಆರತಿ ಬೆಳಗುವಾಗ ಗುರುವುs
ಇಂಥಾ ಜಗತ್ತು ಗುರು ಧರೆಗೆ ದೊಡ್ಡಯ್ಯ ಮಂಟೇದ ಲಿಂಗಪ್ಪ
ತಾನಾಗಿ ಬಂದು ಸಿದ್ದಪ್ಪಾಜಿಯವರ
ಮುಂಬಾಗದಲಿ ನಿಂತುಗಂಡು
ಕಂದಾ ಸಿದ್ದಪ್ಪಾಜಿ
ಈಗಲೀಗಾ ನನಗೆ ಮಗನಾಗಿ ಬಂದಿದ್ದಿಯೇ ಕಂದಾ
ಇದೇ ಬಿರುದು ಇದೇ ಲಾಂಚಾಣ ಹೊತ್ತಗಂಡು ಮಗನೆ
ನಾಡು ರಾಜ್ಯ ರಾಜ್ಯದ ಮೇಲೆ ಕಂದಾ
ನೀನಾಗಿ ಹೋಗುವಾಗ ಮಗನೆ

ಮಗನೇ ಶರಣು ಎನ್ನುವ ಮಾತು
ನಿನ್ನ ನೆನಪಿನಲ್ಲಿ ಇರಲ್ಲಪ್ಪ || ಸಿದ್ಧಯ್ಯ ||

ಮಗನೇ ಶರಣು ಎನ್ನುವ ಮಾತು
ನಿನ್ನ ನೆನಪಿನಲಲ್ಲಿ ಇರಲಿ ಕಂದಾ
ಇರಲಿ ನನ್ನ ಕಂದಾ
ಹಾಗಂದು ನನ್ನ ಗುರುವು
ವರವನೇ ದೇವ
ಮಗನಿಗೆ ಕೊಟ್ಟು
ನಾಡು ದೇಶದ ಕಂದ
ತಿರೀಕೊಂಡು ನನ್ನ ಕಂದ
ಮೆರಕೊಂಡು ನನ್ನ ಮಗನೇ
ಬಂದಿದ್ದೀಯೆ ನನ್ನ ಕಂದ
ಈ ಚಂದ್ರಶಾಲೆ ಒಳಗೋಗಿ
ವಿಶರಾಂತಿ ಆಗು ಮಗನೇ || ಸಿದ್ಧಯ್ಯ ||

ಚಂದ್ರಶಾಲೆಗೋಗಿ ಬುಟ್ಟುs
ವಿಶ್ರಾಂತಿ ಹೊಂದೋಗಪ್ಪ ಮಗನೇ ಎಂದರು
ಧರೆಗೆ ದೊಡ್ಡವರ ಮಾತ ಕೇಳಿ ಸಿದ್ದಪ್ಪಾಜಿ
ಚಂದ್ರಶಾಲೆವೊಳಗೇ ಕಂದ ಪಾವಾಡಿಸುವಾಗ ಗುರುವು
ಕಿಡುಗಣ್ಣ ರಾಚಪ್ಪಾಜಿ ಹಿರಿ ಚೆನ್ನಾಜಮ್ಮ
ಈಗಲೀಗ ಮಡುವಾಳ ಮಾಚಪ್ಪ ಫಲಾರದಯ್ಯ
ಓಡಿ ಬನ್ರಪ್ಪ ಓಡಿಬನ್ನೀ ಮಕ್ಕಳೆ ಎಂದರು
ಎಲ್ಲ ಶಿಶುಮಕ್ಕಳ ಕರೆದು ಮುಂಭಾಗದಲ್ಲಿ ಕುಂಡರಿಸಿಕೊಂಡು ದೇವ
ಕೇಳಿರಪ್ಪ ನನ್ನ ಕಂದ ಶಿಶುಮಕ್ಕಳೇ
ಈ ನಡುವೆ ನರಲೋಕದಾಟ
ಇಂದಿಗೆ ಸಾಕಾಯಿತಲ್ಲ || ಸಿದ್ಧಯ್ಯ ||
ಕಂದ ನರಲೋಕದ ಆಟ
ಇಂದಿಗೆ ಸಾಕಾಯ್ತು
ಈ ಪ್ರಪಂಚದ ಆಟ
ಎಂದೆಂದಿಗೂ ಬ್ಯಾಡ
ಈ ನರರಾಳಿಕೆ ಹೋಗಿ
ಸುರುರಾಳ್ಕೆ ಕಂದ
ಬರುವ ತನಕ ಮಗನೆ
ನಾನು ಮರ್ತ್ಯಲೋಕಕ್ಕೆ ಕಂದ
ಮರ್ತುನಾ ಹೋಗಬೇಕು || ಸಿದ್ಧಯ್ಯ ||

ನಡುವೆ ನರಲೋಕದಾಟ ಇಂದಿಗೆ ಸಾಕಾಯ್ತು ಕಂದಾ
ಈ ಪ್ರಪಂಚದ ಆಟ ನನಗೆ ಎಂದೆಂದಿಗೂ ಬ್ಯಾಡ ದೊಡ್ಡಮ್ಮ
ಈಗ ನಾನು ಮರ್ತ್ಯ ಲೋಕಕ್ಕೆ ಹೋಗಬೇಕಾದರೇ
ಒಂಭತ್ತು ಆಯುಧಗಳಾಗಬೇಕಲ್ಲವಾ
ಈಗಲೀಗ ಆಯುಧ ತರುವುದಕ್ಕೆ ಕಂದ
ಯಾರನ್ನ ಕಳುಗುಸಲೀ ಅಂತೇಳಿ
ಯೋಚನೆ ಮಾಡಿಕೊಂಡು ಧರೆಗೆ ದೊಡ್ಡವರು
ದೊಡ್ಡಮ್ಮ ನನ್ನ ಆಯ್ದ ಪಡೆದು ತರುವುದಕ್ಕೆ
ನನ್ನ ಮಗನ್ನೆ ಪಡೆದುಕೊಂಡಿವನಲ್ಲ

ಅವರ ಜಾತಿಯವರ ಮನೆಗೆ
ಅವನನ್ನೇ ಕಳುಗಬೇಕು || ಸಿದ್ಧಯ್ಯ ||

ಅವರ ಜಾತಿಮತದ ಮನೆಗೇ
ಮತುಸ್ತೋರ ಮನೆಗೇ
ದೇವರ ಮಾಡಿ ನನ್ನ
ಮಗನ್ನೇ ಕಳುಗಬೇಕು
ಹಾಗಂದು ನನ್ನ ಗುರುವು
ಗುರುವೇ ಈಗಲೀಗ ಗುರುವೂ
ನನ್ನ ಮಗನ್ನಾ ದೇವಾ
ನಾನೇ ಕರೆಯಬೇಕು
ಹಾಗಂದು ನನ್ನಪ್ಪ
ಮಗನೇ ಬಾರೋಬಾರಪ್ಪ ಮಗನೇ
ಭಾರೀ ಕಂಡಾಯದವನೇ || ಸಿದ್ಧಯ್ಯ ||

ನನ್ನ ನೀಲುಗಾರರ ಗಂಡು ಬಪ್ಪಾ
ನಿಜುವುಳ್ಳ ಘನನೀಲಿ || ಸಿದ್ಧಯ್ಯ ||

ನನ್ನ ನೀಲುಗಾರರ ಗಂಡ
ನೀಲಿ ಸಿದ್ದಪ್ಪಾಜಿ
ಬಪ್ಪಾ ನನ್ನ ಕಂದಾ
ಬಾರಪ್ಪಾ ನನ್ನ ಮಗನೇ
ನಿನಗೆ ಪದ್ದು ಬಂದೀತು ಬಪ್ಪಾ
ಪಾವಾಡ ಬಂದೀತು ಬಾರೋ || ಸಿದ್ಧಯ್ಯ ||

ಮಗನೇ ಪದ್ದು ಬಂದೀತು
ನಿನಗೆ ಪಾವಾಡ ಬಂದೀತು
ಪಯಣ ಬಂದೀತು
ಪರಸ್ಥಳಗಳ ಕಂದ
ಬಂದೀತು ನನ್ನ ಕಂದ
ಬಾರಪ್ಪ ನನ್ನ ಕಂದ
ಹಾಗಂದವರೇ ನನ್ನ ಗುರುವು
ನನ್ನ ಧರೆಗೆ ದೊಡ್ಡವ್ರ ಮಾತ
ಕೇಳುಕೊಂಡು ನನ್ನ ಕಂದ
ನನ್ನ ಮಂಟೇದ ಲಿಂಗಯ್ಯನ ಬಳಿಗೆ
ಓಡಿ ಓಡಿ ಬಂದನಲ್ಲ || ಸಿದ್ಧಯ್ಯ ||

ಮಂಟೇದ ಲಿಂಗಪ್ಪನ ಬಳಿಗೆ ದೇವಾs
ಓಡೋಡಿ ಬಂದು ಘನ ನೀಲಿ ಸಿದ್ದಪ್ಪಾಜಿ
ಧರೆಗೆ ದೊಡ್ಡವರ ಮುಂಭಾಗದಲ್ಲಿ ನಿಂತುಕೊಂಡು
ಪಾದ ಜೋಡಿಸ್ಕಂಡು ಕರವೆತ್ತಿ ಕೈಮುಕ್ಕೊಂಡು ಸಿದ್ದಪ್ಪಾಜಿ
ಧರೆಗೆ ದೊಡ್ಡವರ ಮೊಕ ಕಣ್ಣಾರೆ ನೋಡ್ಕಂಡು

ಗುರುವೇ ಎತ್ತಲ ಚಾಕರೀಗೆ ನನ್ನ
ಕರೆದ್ರಿಯಪ್ಪ ಮಾಯಿಕಾರ || ಸಿದ್ಧಯ್ಯ ||
ಗುರುವೇ ಎತ್ತಲ ಚಾಕರಿಗೆ
ನಮ್ಮ ಕರೆದ್ರಿಯಪ್ಪ ಗುರುವು
ಯಾವ ಕಾರ್ಯಕ್ಕೆ ನನ್ನ
ಕೂಗುದ್ರಿ ನನ್ನಪ್ಪ
ನನ್ನ ಕರೆದಂಥ ವಿಚಾರವ
ಒಡದೇಳಿ ಮಾಯಾಕಾರ || ಸಿದ್ಧಯ್ಯ ||

ಯಾವ ಕಾರಣಕ್ಕೆ ಕೂಗಿದ್ರಿ ದೇವ
ಎತ್ತಲ ಚಾಕರೀಗೆ ಕರೆದ್ರೀಯಪ್ಪ
ನನ್ನ ಕರೆದ ರೀತಿ ಹೇಳ್ಬುಡಿ ಜಗಂಜ್ಯೋತಿ ಎಂದರು
ಕೇಳಪ್ಪ ನನ್ನ ಕಂದ ಸಿದ್ದಪ್ಪಾಜಿ
ಈಗಲೀಗ ಯಾತುಕ್ಕೆ ಏನು ಕಾರಣಕ್ಕೆ ಕರುದ್ಬುಟ್ಟಿ ಅಂದ್ರೆ ನನ್ನ ಕಂದಾ
ಈ ಭೂಲೋಕದಾಟ ಇಂದಿಗೆ ಸಾಕಾಯ್ತು ಮಗನೆ
ಈ ನರಲೋಕದಾಟ ಎಂದೆಂದಿಗೂ ಬ್ಯಾಡ ಕಂದ ಸಿದ್ದಪ್ಪಾಜಿ

ನನ್ನ ಕಂಡಾಯದ ತಗೊಂಡು
ತಂಬೂರಿ ತಕ್ಕೊಂಡು
ಬಸವನ ಹೊಡಕೊಂಡು
ನನ್ನ ತಾಳವ ಹಿಡಕಂಡು
ಮಗನೇ ಯಾವ್ದಾರೂ ಊರಿಗೆ ಕಂದ
ಗ್ರಾಮಕ್ಕೆ ಹೋಗಿದ್ದು ಬಾರೋ || ಸಿದ್ಧಯ್ಯ ||
ಕಂದಾ ಯಾವ್ದಾರೂ ಒಂದೂರ್ಗೆ ಕಂದ
ದಾನಕ್ಕೆ ಹೋಗಪ್ಪ
ಯಾವ್ದಾರೂ ಗ್ರಾಮಕ್ಕೆ
ಭೀಕ್ಷಕ್ಕೆ ಹೋಗಯ್ಯ
ಕಂದಾ ಕಂಡಾಯ ಹೊತ್ತುಕೊಂಡು
ಹೋಗಿ ಬಾರೋ ನನ್ನ ಮಗನೇ || ಸಿದ್ಧಯ್ಯ ||

ಏನಪ್ಪ ಜಗತ್ತು ಗುರು
ಈಗಲೀಗ ಬಿರುದು ಲಾಂಚನ ಹೊತ್ಕೊಂಡು
ಯಾವ್ದಾರೂ ಊರಿಗೆ ಯವ್ದಾರೂ ಗ್ರಾಮಕ್ಕೆ
ಭಿಕ್ಷುಕ್ಕೆ ಹೋಗು ದಾನಕ್ಕೆ ಹೋಗು ಅಂತ ಹೇಳ್ತೀರಿಯಲ್ಲ ದೇವ
ನಾನು ಕಾಡಲ್ಲಿ ಹುಟ್ಟಿದ ಮಗ ಕಾಡಲ್ಲಿ ಬೆಳೆದ ಮಗ
ಬಾವಿಯಲ್ಲಿ ವಾಸ ಮಾಡ್ತಿದ್ದಂಥ ಮಗ
ಊರು ಗೊತ್ತಿಲ್ಲ ನನ್ನಪ್ಪ ನಾಡು ಗೊತ್ತಿಲ್ವಲ್ಲೋ ಗುರುವು
ಗ್ರಾಮವೇ ಕಾಣನಲ್ಲಪ್ಪ

ನಾನು ಯಾವೂರಿಗೆ ಹೋಗಬೇಕು
ಯಾವ ಗ್ರಾಮಕ್ಕೆ ಹೋಗಲಪ್ಪ || ಸಿದ್ಧಯ್ಯ ||

ಏನಪ್ಪಾ ಕಂದಾ
ಊರು ಗೊತ್ತಿಲ್ವ ನನ್ನ ಕಂದ ನಾಡು ಗೊತ್ತಿಲ್ವ ಮಗನೇ
ಹೇಳುವೆನು ಕೇಳು ಕಂದ

ಲೋ ಮೂಡುಲಾಗಿ ನೋಡು ಮಗನೇ
ಚಿಕ್ಕರಾಯನ ಪಟ್ಟಣವಲ್ಲ || ಸಿದ್ಧಯ್ಯ ||

ಕಂದಾ ಮೂಡಲಾಗಿ ಕಂದ
ಕಾಣುವುದು ನೋಡು
ಚಿಕ್ಕರಾಯನ ಪಟ್ಟಣ
ಎಂದರೆ ನನ್ನ ಕಂದ
ಮಗನೇ ಹಲಗೂರು ಏಳುಬೀದಿ
ಲೋ ಚಿಲಕೂರು ಏಳು ಬೀದಿ
ಈ ಏಳು ಬೀದಿವೊಳಗೆ
ಹದಿನಾಲ್ಕು ಬೀದಿಲಿ
ಕಂದ ನಿನ್ನವರು ನಿನ್ನ ಜಾತಿ
ನಿನ್ನವರು ನಿನ್ನ ಕುಲ
ಮಗನೇ ಆಚಾರಿ ಜಾತಿಯವ್ರು
ಬ್ರಹ್ಮ ಕುಲದವರು
ಬ್ರಹ್ಮ ವಂಶದವರು
ಕಂದ ಒಕ್ಕಲು ಪಾಂಚಾಳದವರು
ಇರುತಾರೆ ನನ್ನ ಕಂದ
ಕೇಳು ಸಿದ್ದಪ್ಪಾಜಿ
ಅವರು ಬಾಳು ಬಾಳಾಟದಲ್ಲಿ
ಚಂದಾಗಿ ಬಾಳಾಡುತಾರೆ || ಸಿದ್ಧಯ್ಯ ||