ಹಲಗೂರು ಪಂಚಾಳ ಗೇರಿಗೆ
ಹೋಗಪ್ಪ ನನ್ನ ಕಂದ ಹೋಗು ಮಗನೇ
ಹೋಗಿದ್ದು ಬಾರೋ ಸಿದ್ದಪ್ಪಾಜಿ ಎಂದರು
ಧರೆಗೆ ದೊಡ್ಡವರ ಮಾತುಕೇಳಿ
ಏನಪ್ಪ ಜಗತ್ತು ಗುರುವೇ
ಹಲಗೂರು ಪಂಚಾಳಗೇರಿಗೆ ಹೋಗು ಹೋಗು ಅಂತ ಹೇಳ್ತೀರಿ
ಹಲಗೂರು ಪಾಂಚಾಳಗೇರಿ ನಾನಾಗಿ ಹೋದರೆ ದೇವಾ
ಹಲಗೂರು ಪಂಚಾಳದವರು ನನಗೆ ಖಂಡಿತವಾಗಲೂ ಬಿಡಬಲ್ಲವಾ ಗುರುವು

ಅಪ್ಪಾ ಹಾಳಾದ ಹಲಗೂರಿಗೆ
ಹೋಗದಿಲ್ಲ ಎಂದರಲ್ಲ || ಸಿದ್ಧಯ್ಯ ||

ಮಗನೇ ಯಾಕೋ ನನ್ನ ಕಂದ
ಯಾಕಪ್ಪ ನನ್ನ ಮಗನೇ
ನೀಲುಗಾರನ ಗಂಡ
ನೀಲಿ ಸಿದ್ದಪ್ಪಾಜಿದ
ನೀನು ಹೋಗು ಅಂದ ಮಾತಿಗೆ
ನೀ ಹೋದರೆ ಸರಿ ಕಂದ
ಮಗನೆ ಹೋಗದಿಲ್ಲ ಎಂದರೆ ನಿನ್ನ
ಬಿಡುವುದಿಲ್ಲ ಎಂದರಲ್ಲ || ಸಿದ್ಧಯ್ಯ ||

ಮಗನೇ ಹಲಗೂರಿಗೆ ಕಂದ
ಹೋಗದಿಲ್ಲ ಅಂತ
ನೀ ಹೇಳಿದರೆ ನನ್ನ ಕಂದ
ನಾ ಬಿಡುವಂಥ ಗುರುಗಳು
ನಾವಲ್ಲ ನನ್ನ ಮಗನೇ
ನಾ ಹೇಳಿದ ಮಾತಿಗೆ
ಪ್ರತಿಮಾತು ಹೇಳಿದರೆ
ನಾ ಹೇಳಿದ ಮಾತಿಗೆ
ಉತ್ತರಾವ ಹೇಳಿದರೆ
ಲೋ ನಾನು ನಿನಗೆ ಗುರುವಲ್ಲ
ನೀನು ನನಗೆ ಶಿಷ್ಯನಲ್ಲ || ಸಿದ್ಧಯ್ಯ ||

ಕಂದ ನಾನು ನಿನಗೆ ಕಂದ
ಗುರುವಲ್ಲ ನನ್ನ ಮಗನೇ
ಲೋ ನೀನು ನನಗೆ ಕಂದ

ಶಿಷ್ಯನಲ್ಲ ಕಂದ
ನಾನು ಹೇಳಿದ ಮಾತಿಗೆ
ಕಂದ ಪ್ರತಿಮಾತ ನೀನು
ಹೇಳಿಬುಟ್ರೆ ನನ್ನ ಕಂದ
ನಾ ಕಟ್ಟಿದ ಮಣಿಯ ಕಳೆದು ಮಡಗು
ಕೊಟ್ಟ ಜೋಳಿಗೆ ಕೊಟ್ಟುಬುಡು|| ಸಿದ್ಧಯ್ಯ ||

ನನ್ನ ಮಾತಿಗೆ ಪ್ರತಿ ಮಾತು ಹೇಳುಬುಟ್ರೆ ಕಂದ s
ನಾನು ನಿನಗೆ ಗುರುವಲ್ಲ ನೀನು ನನಗೆ ಶಿಶುಮಗನಲ್ಲ
ನಾನು ಕೊಟ್ಟ ಜೋಳಿಗೆ ಕೊಟ್ಟುಬುಡು ಕಂದ
ಕಟ್ಟಿದ ಮಣಿ ಕಳೆದು ಮಡಗುಬುಡು ಮಗನೇ

ಕಂದ ಎಲ್ಲಾರುವೆ ಕಂದ
ಹೊಂಟೋಗು ನನ್ನ ಮಗನೇ
ಯಾತಕ್ಕಾಗಿ ಕಂದ
ನೀ ನಿಂತಿದ್ದಿಯ ಕಂದ
ನಿನ್ನ ಜಾತಿಯವರ ಸೇರುಕೊಂಡು
ಬದುಕೋಗು ಎಂದರಲ್ಲ || ಸಿದ್ಧಯ್ಯ ||

ನಿಮ್ಮ ಜಾತಿಗೆ ಮತದವರ ಸೇರ್ಕೋಂಡು
ಬಾಳೋಗು ನನ್ನ ಕಂದ ಬದುಕೋಗು ಮಗನೇ
ನನ್ನ ಮಾತಿಗೆ ಪ್ರತಿಮಾತು ಹೇಳ್ಬುಟ್ಟು
ಎಲ್ಲಾರು ಹೊಂಟೋಗ್ಬುಟ್ಟು ಕಂದ
ನಿನ್ನ ಜಾತಿಯವರ ಸೇರ್ಕೊಂಡು ನೀನು ಬಾಳಿ ಬದುಕಿ
ಸಾಯುವಂಥ ಕಡೇಗಾಲ್ದಲ್ಲಿ ಕಂದ

ನೀ ಸತ್ತುರೂವೆ ನನ್ನ ಮಗನೇ
ಸ್ವರ್ಗ ನಿನಗೆ ಸಿಕ್ಕೋದಿಲ್ಲ || ಸಿದ್ಧಯ್ಯ ||
ನೀನು ಸತ್ತ ಕಾಲ್ದಲ್ಲಿ ಕಂದ
ಸ್ವರ್ಗವೂ ನಿನಗೇ
ಸಿಕ್ಕೋದಿಲ್ಲ ಕಂದ
ನೀಲಿ ಸಿದ್ದಪ್ಪಾಜಿ
ಈ ನಡುವೆ ನರ ಲೋಕದಲ್ಲಿ
ನಿನ್ನ ಗಾಳಿಯಾಗಿ ತಿರುಗಿಸ್ತೀನಿ || ಸಿದ್ಧಯ್ಯ ||

ನಿನ್ನ ಗಾಳಿಯಾಗಿ ತಿರುಗಿಸ್ತೀನಿ
ಪೀಡೆಯಾಗಿ ನರಳಿಸ್ತೀನಿ|| ಸಿದ್ಧಯ್ಯ ||

ನರ ಲೋಕದಲ್ಲಿ ಕಂದs
ನಿನ್ನ ಗಂಡುಗಾಳಿ ಮಾಡಿಬುಟ್ಟು ಬುಡ್ತೀವಿ ಕಂದ
ನನ್ನ ಮಾತಿಗೆ ಪ್ರತಿಮಾತು ಹೇಳದಂತೆ
ನೀ ಹಲಗೂರು ಪಟ್ಟಣಕ್ಕೇ ಭಿಕ್ಷಕ್ಕೆ ಹೊರಟೋದ್ರೆ
ಹಲಗೂರಿನಿಂದ ನೀನು ಬಂದಂಥ ಗಳಿಗೆವೊಳಗೆ ನನ್ನ ಕಂದ
ನಿನ್ನ ದಯ ಮಾಡೋದಿಲ್ಲ ಗಾಳಿ ಮಾಡೋದಿಲ್ಲ
ನಿನ್ನ ಪೀಡೆ ಮಾಡೋದಿಲ್ಲ ಪಿಶಾಚಿ ಮಾಡೋದಿಲ್ಲ ಕಂದ
ಈ ನರಲೋಕದ ಒಳಗೆ ಕಂದ
ಕೇಳಪ್ಪ ನನ್ನ ಮಗನೇ || ಸಿದ್ಧಯ್ಯ ||

ಈ ನರಲೋಕದ ಒಳಗೆ ಕಂದ
ಭೂಲೋಕದ ಒಳಗೇ
ನಿನಗೆ ಬಸುವನ ಬೆಟ್ಟ ಕುಟ್ಟಿ
ಬೆಳ್ಳಿ ರಾಸಿ ಮಾಡಿ
ಕುಂದೂರು ಬೆಟ್ಟ ಸುಟ್ಟಿ
ಚಿನ್ನದ ರಾಸಿ ಮಾಡಿ
ನಿನಗೆ ಚಿಕ್ಕದೊಂದು ಹಳ್ಳಿಗ್ರಾಮ
ಚಿಕ್ಕಲ್ಲೂರು ಮಾಡುತೀನಿ || ಸಿದ್ಧಯ್ಯ ||

ಕಂದ ಚಿಕ್ಕದೊಂದು ಹಳ್ಳಿಗ್ರಾಮ
ಚಿಕ್ಕಲ್ಲೂರ ಕಂದ
ಮಾಡ್ತೀನಿ ನನ್ನ ಮಗನೇ
ನಿನ್ನ ಚಿಕ್ಕಲ್ಲೂರ ಒಳಗೆ
ದೇವರ ಮಾಡಿ ನಿಲ್ಲಿಸುತೀನಿ|| ಸಿದ್ಧಯ್ಯ ||
ನಿನಗೆ ಕಪ್ಪಡಿ ಕೈಲಾಸ ಕೈಲಾಸ ಕಾಣೋ
ಚಿಕ್ಕಲ್ಲೂರ ಗುರುನಾಥ || ಸಿದ್ಧಯ್ಯ ||

ಚಿಕ್ಕಲ್ಲೂರ ಕಂದs
ಗುರುಮಠ ಮಾಡಸ್ತೀನಿ ಮಗನೇ
ಸಿದ್ದಪ್ಪಾಜಿ ಹೇಳ್ತೀನಿ ಕೇಳು ಕಂದ
ಎಲ್ಲ ದೈವ ದೇವಮಾನ್ರುಗೂವೆ ಹಿಂದುಲ ಪೂಜೆಯಾದರೆ
ಮೊದಲ ಹದಿನಾರು ಲೋಕದ ಪೂಜೆ ನಿನಗೆ ಕೊಡ್ತೀನಿ ಮಗನೆ
ಚಂದ್ರಮಂಡಲ ಸೂರ್ಯಮಂಡಲ
ಮೊದಲಾಗಿ ಮಾಡಿಸ್ತೀನಿ ಕಂದ

ಹಲಗೂರಿಗೆ ಕಂದ
ಹೋಗಪ್ಪ ನನ್ನ ಕಂದ
ಹಲಗೂರಿಗೆ ಮಗನೇ
ನೀ ಭಿಕ್ಷಕ್ಕೆ ಹೋಗಪ್ಪ
ಕಂದ ಹಲಗೂರವರು ಕಂದ
ನಿನ್ನ ಬಿರುದು ಲಾಂಛನವ
ನೋಡಿಕೊಂಡು ನನ್ನ ಕಂದ
ಮೊಕವನ್ನೇ ನೋಡಿಬುಟ್ಟು
ಅವರು ದಾನವ ಕೊಟ್ಟಾರೆ
ಜೋಳಿಗೆ ಒಡ್ಡು ಕಂದ
ಲೋ ಕೊಡದೇ ಹೋದ್ರೆ ಕಂದ
ಲೋ ಮಠಕ್ಕೆ ಬಾಪ್ಪ ಕಂದ
ನೀನು ಕೊಡದೇ ಹೋದವರ
ಬಲುವಂತ ಮಾಡಬ್ಯಾಡ || ಸಿದ್ಧಯ್ಯ ||

ಹಲಗೂರವರು ನಿಮ್ಮ ಜಾತಿಮತದವರು
ಮರ್ಯಾದಿವೊಳಗೆ ದಾನಕೊಟ್ಟರೆ ಜೋಳಿಗೆ ಒಡ್ಡುಮಗನೇ
ಕೊಡದೇ ಹೊಗುಬುಟ್ರೆ ಕಂದ
ನನ್ನ ಮಠ ಮನೆಗೆ ಬಂದ್ಬುಡು ಕಂದ

ನೀನು ಹೊಡೆದವರ ಹೊಡೀಬ್ಯಾಡ
ಬೋದವರ ಬಯ್ಯಾಬ್ಯಾಡ || ಸಿದ್ಧಯ್ಯ ||

ಮಗನೇ ಬಾಯೆತ್ತಿ ಬೋದವರ
ಲೋ ಬಾಯೆತ್ತಿ ಬೈಯಬೇಡ
ಕೈಯೆತ್ತಿ ಹೊಡದವರ
ನೀ ಕೈಯೆತ್ತಿ ಹೊಡೆದವರ
ನೀ ಕಲ್ಲಲ್ಲಿ ಹೋಡಿಬ್ಯಾಡ
ಅವರು ಕಲ್ಲೆತ್ತಿಹೊಡೆದರೆ ಕಂದ
ನೀ ಕೈಯೆತ್ತಿ ಮುಗೀ ಮಗನೆ || ಸಿದ್ಧಯ್ಯ ||

ಅವರು ಕಲ್ಲೆತ್ತಿ ಹೊಡೆದರೆ ಕಂದ
ಕೈಯೆತ್ತಿ ಮುಗುದ್ಬುಟ್ಟು
ನನ್ನ ಬಿರುದು ಲಾಂಛನ
ಹೊತ್ತುಕೊಂಡು ನನ್ನ ಕಂದ
ಹೆಲಗೂರ ಬುಟ್ಟುಬುಟ್ಟು
ಬಂದ್ಬುಡು ನನ್ನ ಕಂದ
ಈ ಧರೆಗೆ ದೊಡ್ಡವರ ಮೈಮೆ
ಮಂಟೇದ ಲಿಂಗಯ್ಯನ ಮರ್ಮ
ನಿನಗೇನು ಗೊತ್ತು
ಕೇಳಪ್ಪ ನನ್ನ ಮಗನೇ
ನನ್ನ ಕಪ್ಪು ಧೂಳ್ತದ ಮೈಮೆ ಕಂದ
ನಾಳೆ ದಿವ್ಸ ನೋಡು ಮಗನೆ || ಸಿದ್ಧಯ್ಯ ||

ನನ್ನ ಕಪ್ಪು ಧೂಳ್ತದ ಮೈಮೆ
ನೋಡಪ್ಪ ನನ್ನ ಕಂದ
ಈ ಧರೆಗೆ ದೊಡ್ಡವರ ಮೈಮೆ
ಈ ಕಂಡಾಯದವರ ಸಾಸ
ಮಂಟೇದ ಲಿಂಗಯ್ಯನ ಮರ್ಮ
ಏನು ಎನ್ನುವುದು
ನಿನಗೆ ತಿಳಿಯುತಾನೆ
ನಾಳೆ ನಿನಗೆ ಗೊತ್ತಾಯ್ತಾದೆ
ನಾಳೆ ಅಂಕಾರದಲ್ಲಾಡವರ ನಾನು
ಹಾಳೆ ಪಟವ ಮಾಡುತೀನಿ || ಸಿದ್ಧಯ್ಯ ||

ಕಂದ ಆಂಕಾರದಲ್ಲಾಡವರ
ಹಾಳಪಟದ ಮಾಡಿ
ಕಂದ ದ್ವಾರಣೇಲಿ ಬೋದವರ
ನಾನು ಧೂಳು ಪಟವ ಮಾಡಿ
ಮಗನೆ ಇಸ ಇಕ್ಕಿದವರ
ಮನೆಯಾ ನಾಶಸ್ಥಾನ ಮಾಡಿ
ನಾಳೆ ಮದ್ದು ಇಕ್ಕಿದವರ ಮನೆಯ
ಮಧ್ಯಾಹ್ನಕೆ ತೊಡೆಯುತೀನಿ || ಸಿದ್ಧಯ್ಯ ||

ನಾಳೆ ಅವರ ಮನೆಯ ಮಾರಿ ಕರೆದು
ಅವರ ಮನೆಗೆ ಕೂಡುತೀನಿ || ಸಿದ್ಧಯ್ಯ ||

ಕಂದ ನಿನ್ನ ಪಾದ ನನ್ನ ಪಾದ
ಕೇಳಪ್ಪ ನನ್ನ ಮಗನೇ
ಗಂಧದ ಕಡ್ಡಿ ಕಸುಕೊಂಡು
ಕೈಯೆತ್ತಿ ಮುಗುದವರ
ಮನೆಯಲ್ಲಿ ನನ್ನ ಕಂದ
ನಾನೆ ವಾಲಾಡಿ
ಕೇಳು ನನ್ನ ಮಗನೇ
ಅಪ್ಪಾ ನನ್ನ ಪಾದ ನಿನ್ನ ಪಾದ
ಯಾರು ಮರೆಯುತಾರೋ
ಅಂಥ ಮರೆತವರ ಮನೆಗೆ ನಾ
ಮಾರಿತಂದು ಕೂಡುತೀನಿ || ಸಿದ್ಧಯ್ಯ ||

ಮಾರಿ ತಂದು ಕೂಡುತೀನಿ ಕಂದ
ಈಗಲೀಗ ಹಲಗೂರು ಪಂಚಾಳಗೇರಿಗೆ
ಧಾನಕ್ಕೋಗು ಭಿಕ್ಷುಕೆ ಹೋಗು
ಈಗಲೀಗ ಹಲಗೂರು ಪಂಚಾಳದವರು ಅಂದ್ರೆ ಮಗನೇ
ನಿನ್ನ ಮತಸ್ತರು ಕಂದ
ನಿನಗೆ ಹಿಂದಿಲ ಕಾಲದ ನಂಟು
‌ದೊಡ್ಡಪ್ಪನ ಮಕ್ಕಳು ಚಿಕ್ಕಪ್ಪನ ಮಕ್ಳು
ಭಾವ ಭಾವೈಕ್ಕುಳು
ಅಣ್ಣಾತಮ್ದಿರು ಇರ್ತಾರೆ ಕಂದ
ಈಗಲೀಗ ನಿಮ್ಮ ಜಾತಿಯವರ ಮನೆಗೆ ನೀ ಹೊಂಟೋದ್ರೆ
ನಮ್ಮ ಜಾತಿ ಮತಸ್ಥ ಬಂದಾಂಥೇಳಿ
ಬಾಳ ಮಾರ್ವಾದಿವೊಳಗೆ ಬಳಗಳೆಂದು ಕಂದಾ
ಬೇಡಿದ ಭಿಕ್ಷ ಕೊಟ್ಟು ಕಳುಸ್ತಾರೆ ಮಗನೆ
ನಿನ್ನ ಜಾತಿಯವರ ಮನೆಗೆ ನೀನು ಹೊರಟೋದ್ರೆ ಕಂದ

ಅವರ ಚಿನ್ನ ಕೇಳಲು ಬ್ಯಾಡ
ಲೋ ಬೆಳ್ಳಿ ಕೇಳಲು ಬ್ಯಾಡ
ಲೋ ಮುತ್ತು ಕೇಳಲು ಬ್ಯಾಡ
ರತ್ತುನ ಕೇಳಲು ಬ್ಯಾಡ
ಅವರು ಚಿನ್ನ ಬೆರಳಿ ಕೊಟ್ಟರೆ
ಕಣ್ಣುಬುಟ್ಟು ನೋಡಬ್ಯಾಡ
ಮುತ್ತು ರತ್ನ ಕೊಟ್ಟರೆ
ನೀ ಮುಟ್ಟು ಬ್ಯಾಡ ಕಂದ
ಅವರು ಅಕ್ಕಿಬ್ಯಾಳೆ ಕೊಟ್ಟರೆ
ನೀ ಜೋಳಿಗೆ ಒಡ್ಡಲು ಬ್ಯಾಡ
ಅವರ ಹಣ ಹೊನ್ನ ಆಸೆಗೆ
ಅಂಗೈಯಾದರೂ ಒಡ್ಡಲೂ ಬ್ಯಾಡ || ಸಿದ್ಧಯ್ಯ ||

ಹಣ ಅನ್ನುವಂಥ ಆಸೆಗೆ ಕಂದ
ಅಂಗೈಯ ಮಾತ್ರ ಒಡ್ಡಿಬ್ಯಾಡ ಮಗನೇ ಸಿದ್ದಪ್ಪಾಜಿ
ನನಗೆ ಹಾರೆ ಮೂರು ಆಗಬೇಕು
ಎಲಗುಂದ್ಲಿ ಮೂರಾಬೇಕು || ಸಿದ್ಧಯ್ಯ ||

ಕಂದಾ ಹಾರೆಮೂರು ಕಂದ
ಎಲಗುದ್ದಲಿ ಮೂರು
ಲೋ ದಬಕ ಮೂರು ಮಗನೇ
ಆರು ಮೂರು ಕಂದ
ಒಂಭತ್ತು ಲಗಾ ನನಗೆ
ಕಬ್ಬಿಣ ಆಗಲೇಬೇಕು
ಅಪ್ಪಾ ಹಲಗೂರಿಗೆ ನೀನು
ಹೋಗಿ ನನ್ನ ಕಂದ
ನೀ ಏಳು ದುಡ್ಡೀನ ಕಬ್ಬಿಣ ಭಿಕ್ಷೆ
ಪಡೆದುಬಾರೋ ನನ್ನ ಮಗನೇ|| ಸಿದ್ಧಯ್ಯ ||

ಏಳು ದುಡ್ಡೀನ ಕಬ್ಬಿಣ ಭಿಕ್ಷೆ ತಕ್ಕೊಂಡುs
ಬಾವೋಗೋ ನನ್ನ ಕಂದ ಸಿದ್ದಪ್ಪಾಜಿ
ನಿನ್ನ ಜಾತಿಮತದವರು ಬಾಳ ಮರ್ವಾದಿವೊಳಗೆ ಬಳಗಳೆದು
ಏಳು ದುಡ್ಡಿನ ಕಬ್ಬಿಣ ಕೊಟ್ಟು ಬುಟ್ರೆ ಕಂದಾ

ನಿನ್ನ ಹಾಲಿನಂತ ಹಲಗೂರು ನಾ
ಹಾಲುಸಾಗರ ಮಾಡುತೀನಿ || ಸಿದ್ಧಯ್ಯ ||

ಹಾಲಿನಂಥ ಹಲಗೂರು ಕಂದs
ಹಾಲುಸಾಗರ ಮಾಡ್ತೀನಿ ಮಗನೇ ಸಿದ್ದಪ್ಪಾಜಿ
ಏನಾರು ಆಂಕಾರ ಆಡ್ಬುಟ್ಟು ದ್ವಾರಣೆವೊಳಗೆ ಬೋದ್ಬುಟ್ಟುಸ
ನಿನ್ನ ಬಿರುದು ಲಾಂಛಾನ ಕೊಟ್ಟು
ನಿನ್ನನ್ನೇ ಹಾಗೆ ಕಳುಸ್ಬುಟ್ರೆ ಕಂದ

ನಿಮ್ಮ ಹಾಲಿನಂಥ ಹಲಗೂರ ನಾ
ಹಾಳುಪಟದ ಮಾಡುತೀನಿ || ಸಿದ್ಧಯ್ಯ ||
ಅವರ ಹಾಳುಪಟದ ಮಾಡುತೀನಿ
ಗಾಳಿಗೆತ್ತಿ ತೂರುತೀನಿ || ಸಿದ್ಧಯ್ಯ ||
ಕಂದಾ ಗಾಳಿ ಪಟ ಮಾಡಿ
ಅವರ ಗಾಳಿಗೆತ್ತಿ ತೂರಿ
ಕೇಳಪ್ಪ ನನ್ನ ಕಂದ
ಅವರು ಏಳುನೂರು ಐವತ್ತು
ಒಕ್ಕಲ ಹೇಳಿದಂಗೆ ಕೇಳಿಸಿ
ಅವರು ಹೋಗಂದ್ರೆ ಹೋಗಬೇಕು
ಮಗನೆ ಬಾ ಅಂದ್ರೆ ಬರಬೇಕು
ಅವರು ಏಳುನೂರ ಐವತ್ತ ಒಕ್ಕಲ
ನಿನ್ನ ಹೇಳಿದಾಗೆ ಕೇಳಿಸ್ತೀನಿ || ಸಿದ್ಧಯ್ಯ ||

ಈಗಲೀಗ ಏಳುನೂರೈವತ್ತೊಕ್ಕಲೂ ನಿಮ್ಮ ಜಾತಿವಂತರಾದರೆ ಕಂದ
ಆ ಏಳನೂರು ಐವತ್ತೊಕ್ಕಲು ಜನರನ್ನು ನೀ ಹೇಳಿದಂಗೆ ಕೇಳಿಸ್ತೀನಿ
ಹೋಗು ಅಂದರೆ ಹೋಗಬೇಕು ಬಾಅಂದರೆ ಬರಬೇಕು
ಕೂತಕೋ ಅಂದರೆ ಕೂತುಕೋ ಬೇಕು ನಿಂತಕೋ ಅಂದರೆ ನಿಂತುಕೋಬೇಕು ಮಗನೇ
ಈಗಲೀಗ ನಿಮ್ಮ ಹಲಗೂರು ಪಂಚಾಳದ ದೊರೆಗಳು ಕಂದ
ದಾನಕೊಟ್ಟು ಮರ್ಯಾದಿಗಳಿಗೆ ಕಳುಹಿಬಿಟ್ರೆ
ನಿಮ್ಮ ಹಾಲಿನಂಥ ಹಲಗೂರು ಹಾಲುಸಾರಗವಾಗಲಿ ಅಂತ್ಹೇಳಿ
ಆಶೀರ್ವಾದ ಕೊಟ್ಬುಟ್ಟು ಬಂದ್ಬುಡಪ್ಪ
ಏನಾರು ಆಂಕಾರದಲ್ಲಾಡುಬುಟ್ಟು
ದ್ವಾರಣೇಲಿ ಬೋದುಬುಟ್ಟು
ನಿನ್ನ ಬಿರುದು ಹೊರಸಿ ಹಾಗೇ ಕಳುಹಿಸಿಬುಟ್ರೆ

ಅವರ ಏಳುನೂರೈವತ್ತು ಒಕ್ಕಲ
ಏಳೆ ಒಕ್ಕಲ ಮಾಡುತೀನಿ || ಸಿದ್ಧಯ್ಯ ||

ಅವರ ಏಳೂನೂರೈವತ್ತು ಒಕ್ಲ
ಏಳು ಒಕ್ಲ ಕಂದ
ನಾ ಮಾಡ್ತೀನಿ ನನ್ನ ಮಗನೇ
ನೀಲಿ ಸಿದ್ದಪ್ಪಾಜಿ
ನನ್ನ ಯಾವ ದೇವರು ಎನ್ನುವುದು
ಇನ್ನೂ ಗೊತ್ತಿಲ್ಲ
ನನ್ನ ಕೆಟ್ಟ ದೇವರು ಎನ್ನುವುದು
ನಿಮಗಿನ್ನೂ ತಿಳಿದಿಲ್ಲ
ನನ್ನ ಒಳ್ಳೇ ದೇವರು ಅಂತ
ನಿಂತಿರಬ್ಯಾಡ ಎಂದರಲ್ಲ || ಸಿದ್ಧಯ್ಯ ||

ನನ್ನ ಒಳ್ಳೆ ದೇವರು ಅಂತ ತಿಳೀಬ್ಯಾಡ ಕಂದ
ನೀನು ದಾನುಕ್ಕೆ ಬಿಕ್ಷುಕ್ಕೆ ಹೊರಟೋದ್ರೆ
ಈಗಲೀಗ ನಿಮ್ಮ ಜಾತಿ ಮತದವರು ನನ್ನ ಕಂದ
ಧರ್ಮ ಕೊಟ್ಟು ಕಳುಹಿಬಿಟ್ರೆ
ಬಾಳ ಒಳ್ಳೇದು ಕಂದ
ಕೊಡದೇ ಹೋಗ್ಬುಟ್ರೆ ಕಂದ
ನಿಮ್ಮ ಜಾತಿವಂತರು ಉಳಿಯೋಂಗಿಲ್ಲ ಕಂದ
ನಾನು ಮಾತ್ರ ಬಿಡುವಂಗಿಲ್ಲ ಮಗನೇ
ನಿಮ್ಮ ಹಲಗೂರು ಪಂಚಾಳಗೇರಿವೊಳಗೆ ಕಂದ
ಈಗಲೀಗ ಸಾಯುವವರೇ ಹೊರತು
ಅಲ್ಲಿ ಬಾಳೋರಿಲ್ಲ ಬದುಕೋರಿಲ್ಲ
ಅಲ್ಲಿ ವಾಸಸ್ಥಾನ ಮಾಡುವರೇ ಮೊದಲಾಗಿಲ್ಲ ಕಂದ
ನಿನ್ನ ಹಲಗೂರು ಪಂಚಾಳಗೇರಿಗೆ ಕಂದ
ಯಾವ ಕಷ್ಟ ಯಾವ ಕಾಯಿಲ ಯಾವ ರೋಗ ಕೊಡ್ತೀನಿ ಅಂದರೆ

ಕಂದ ನಾನು ಕೊಡುವ ಕಷ್ಟ
ನಾನು ಕೊಡುವ ಕಾಯ್ಲ
ನಾನು ಕೊಡುವ ರೋಗ
ಈ ನರಲೋಕದ ಒಳಗೆ
ಸುತ್ತೇಳು ಲೋಕದಲ್ಲಿ
ಸುತ್ತೇಳು ದೇವರೆಲ್ಲ
ನನ್ನ ಮಠಮನೆಗೆ ಬಂದರೂ
ಅವರು ಬಂದರೂವೆ ನನ್ನ ಕಂದ
ನಾನು ಕೊಟ್ಟ ಕಾಯ್ಲ
ನಾನು ಕೊಟ್ಟ ಕಷ್ಟ
ನಾನು ಕೊಟ್ಟ ರೋಗ
ತಕ್ಕೊಳ್ಳುವಂಥ ದೇವರು
ಈ ನರಲೋಕದ ಬೆಳಗೆ
ಯಾರು ಇಲ್ಲ ಮಗನೇ
ಅವರು ದೇಶಸುತ್ತಿ ಬಂದ್ರೂವೆ
ನನ್ನ ಮಠ ಮನೆಗೆ ಬರಲೇಬೇಕು || ಸಿದ್ಧಯ್ಯ ||