ಕಂದಾ ಬಾಳು ಬಾಳಾಟದಲ್ಲಿ ಕಂದ
ಪುಣ್ಯವಂತರಾಗಿ
ಕಂದಾ ಸ್ಥಿರವಂತರಾಗಿ
ಲಕ್ಷೀಕರಾಗಿ ಕಂದ
ಬಾಳ್ತರೆ ನನ್ನ ಕಂದ
ಇಂಥ ಲಕ್ಷಿಕರ ಮನೆಗೆ ಕಂದ
ಭಿಕ್ಷುಕನಾಗಿ ಹೋಗಿಬಾರೋ|| ಸಿದ್ಧಯ್ಯ ||
ಇಂಥ ಪುಣ್ಯವಂಥವರ ಮನೆಗೆ
ತಿರುಕನಾಗಿ ಹೋಗಿಬಾರೋ || ಸಿದ್ಧಯ್ಯ ||

ಲಕ್ಷಿಕರ ಮನೆಗೆ ಕಂದ
ಭಿಕ್ಷುಕನಾಗಿ ಹೋಗು ಮಗನೆ
ಪುಣ್ಯವಂತರ ಮನೆಗೆ
ತಿರುಕನಾಗಿ ಹೋಗು ಕಂದ ಸಿದ್ದಪ್ಪಾಜಿ

ಇಂಥ ಬಾಳುವರ ಬಾಳಾಟ ನಿನ್ನ
ಕಣ್ಣಾರೆ ನೋಡಿ ಬಪ್ಪಾ|| ಸಿದ್ಧಯ್ಯ ||

ಇಂಥ ಬಾಳವರ ಬಾಳಾಟ
ನಿನ್ನ ಕಣ್ಣಾರ ನೋಡಿಕೊಂಡು
ಬಾ ಹೋಗು ಮಗನೇ
ನೀಲಿ ಸಿದ್ದಪ್ಪಾಜಿ
ಹಾಗಂದವರೆ ನನ್ನ ಗುರುವು
ಇಂಥ ಧರೆಗೆ ದೊಡ್ಡವರ ಮಾತಕೇಳಿ
ಗುಳುಗುಳನೆ ಅಳುವುತಾರೆ || ಸಿದ್ಧಯ್ಯ ||

ಗುರುವೇ ಧರೆಗೆ ದೊಡ್ಡವರ ಮಾತ
ಕೇಳ್ಕೊಂಡು ನನ್ನ ಗುರುವು
ನೀಲುಗಾರರ ಗಂಡ
ನೀಲಿ ಸಿದ್ದಪ್ಪಾಜಿ
ಅಯ್ಯೋ ನನ್ನಪ್ಪ
ಅಯ್ಯೋ ನನ್ನ ಗುರುವು
ಗುರುವೇ ಸುತ್ತೇಳು ಊರಿಗೆ
ದೇವ ಸುತ್ತೇಳು ಗ್ರಾಮಕ್ಕೆ
ಹೇಳಿದ ಊರಿಗೆ
ತೋರಿದ ಗ್ರಾಮಕ್ಕೆ
ನಾ ಭಿಕ್ಷಕೆ ಹೊಯ್ತೀನಿ
ನಾ ದಾನಕ್ಕೆ ಹೊಯ್ತೀನಿ
ಅಪ್ಪಾ ಎಲ್ಲಿಗೇಳುದ್ರು ಹೋಗುತೀನಿ
ಹಲಗೂರಿಗೆ ನಾ ಹೋಗಲಾರೆ ಎಂದಾರಲ್ಲ || ಸಿದ್ಧಯ್ಯ ||

ಗುರುವೇ ಎಲ್ಲಿಗೇಳುದ್ರು ನಾನು
ತಪ್ಪುದಂತೆ ದೇವ
ನಾ ಹೋಯ್ತೀನಿ ನನ್ನಪ್ಪ
ಹಲಗೂರಿಗೆ ದೇವ
ನಾ ಹೋಗದಿಲ್ಲ ಗುರುವು
ಅಪ್ಪಾ ಹಲಗೂರಿಗೆ ದೇವ
ನನ್ನ ಕಳುಹಬೇಡಿ ಗುರುವೇ
ಅಪ್ಪಾ ಹಲಗೂರೆಸರ ಹೇಳಿದರೆ
ಹೊಟ್ಟೇ ಗರುಬ ನಡುಗತಾದೆ || ಸಿದ್ಧಯ್ಯ ||

ನನಗೆ ಹೊಟ್ಟೆ ಗರುಬ ನಡುಗತಾದೆ
ಕಾಲು ಕೈ ಒದರುತಾವೆ || ಸಿದ್ಧಯ್ಯ ||

ನಮ್ಮ ತಾಯಿ ಹಚ್ಚಿದ ಹಾಲುಬೆಣ್ಣೆ
ಹಿಂದುಕ್ಕಾದರೆ ಮಳ್ಳುತಾದೆ || ಸಿದ್ಧಯ್ಯ ||

ಹಲಗೂರಿನ ಸುದ್ದಿ ಎತ್ತುಬುಟ್ರೆ ದೇವಾs
ಹೊಟ್ಟೆ ಗರ್ಭ ನಡಗ್ತದೆ ನನ್ನಪ್ಪ
ಕಾಲು ಕೈ ಒದರುತವೆ ಗುರುವು
ನನ್ನ ತಾಯಿ ಹೂಡಿರುವಂಥ ಗಜಬೆಣ್ಣೆಯೆಲ್ಲ
ಹಿಂದಕ್ಕೆ ಮಳ್ಳುತದೆ ಗುರುದೇವ
ಹಲಗೂರು ಪಂಚಾಳದವರು ಅಂದರೆಸ
ನನ್ನ ಜಾತಿ ನನ್ನ ಕುಲ ನನ್ನ ಸಮ್ಮು
ಈಗಲೀಗ ನನ್ನ ಜಾತಿ ಮತದವರು ಅಂದ್ರೆ ಗುರುವು
ಹಟ್ಟೀಲಿರುವಂಥ ಕೆಮ್ಮು ಕೊಟ್ಟುಬುಟ್ಟು
ಹಮ್ಮು ತಂದವರು ಹಲಗೂರ ಪಂಚಾಳದವರು ಗುರುವು
ಅವರು ಎತ್ತಿನ ಕಾಲು ತುಳಿತಾರೆ
ಎತ್ತಿನ ಕಾಲು ತುಳಿತಾರೆ
ಎಮ್ಮೆ ಕಾಲು ತುಳಿದಾರೆ
ಅವರು ಎಮ್ಮೆ ಕಾಲು ತುಳಿತಾರೆ

ಅಪ್ಪಾ ಅವರ ಪಾದಕ್ಕೆ ದೇವ
ಅವರೆ ಶರಣ ಮಾಡುತಾರೆ || ಸಿದ್ಧಯ್ಯ ||
ಅವರಿಗೆ ದಾನವೆಂದರೆ ಧ್ಯಾನವಿಲ್ಲ
ಭಿಕ್ಷವೆಂದರೆ ಲಕ್ಷವಿಲ್ಲ || ಸಿದ್ಧಯ್ಯ ||

ಅವರು ನೀಡಿದ ಕಾಲ ತೆಗೆಯೋದಿಲ್ಲ
ಬೇಡಿದ ಭಿಕ್ಷ ಕೊಡುವೋದಿಲ್ಲ || ಸಿದ್ಧಯ್ಯ ||

ನೀಡಿದ ಕಾಲ ತೆಗೆಯೋದಿಲ್ಲ ದೇವಾs
ಬೇಡಿದಂಥ ಭಿಕ್ಷ ಕೊಡುವುದಿಲ್ಲ ಗುರುವೂ
ಹಲಗೂರು ಪಂಚಾಳದವರು ನನ್ನ ಜಾತಿ ಮತದವರು ಅಂದ್ರೆ ದೇವ

ಅಪ್ಪಾ ಜಾತಿಗೆ ಜಾತಿ ವೈರಿ
ನೀರಿಗೆ ಪಾಶ ವೈರಿ
ಕೇಳಪ್ಪ ನನ್ನ ಗುರುವು
ಗುರುವೇ ಅಣ್ಣ ತಮ್ಮನಿಗೆ ವೈರಿ
ತಂದ ಮಗನಿಗೆ ವೈರಿ
ಆ ವೈರಿಕಾರರ ಮನೆಗೆ ನನ್ನ
ಕಳುಹಬೇಡಿ ಮಾಯಕಾರ || ಸಿದ್ಧಯ್ಯ ||

ವೈರಿಕಾರರ ಮನೆಗೆ ಖಂಡತಿವಾಗೂ ನನ್ನ ಕಳುಹಬ್ಯಾಡಿ
ಹಲಗೂರಿಗೆ ಮಾತ್ರ ನನಗೆ ಅಪ್ಪಣೆ ಮಾಡಬ್ಯಾಡಿ ನನ್ನಪ್ಪ
ನಮ್ಮಂಥ ದಾಸ ಕಾಳಮುಖಿ ಸನ್ನವೇಸಿಗಳ ಕಂಡರೆ
ನಮಗೂ ಮರ್ಯಾದಿ ಕೊಡೋದಿಲ್ಲ
ಹೊತ್ತುಕೊಂಡು ಹೋದಂಥ
ಬಿರುದಿಗೂ ಮರ್ಯಾದ ಕೊಡೋದಿಲ್ಲ ಗುರುದೇವ

ನಮ್ಮ ಬಿರುದು ಲಾಂಛನ ನೋಡಿ
ಹಾರುರೇಸ ಮಾಡುತಾರೆ || ಸಿದ್ಧಯ್ಯ ||

ನನ್ನ ಬಿರುದು ಲಾಂಛನದ
ನೋಡ್ಕಂಡು ನನ್ನ ಗುರುವು
ಹಾಸುರೇಸ ದೇವ
ಮಾಡ್ತಾರೆ ನನ್ನಪ್ಪ
ನನ್ನ ಬಾರಿ ಕಂಡಾಯ ನೋಡಿ
ಕಕ್ಕೆದೊಣ್ಣೆ ಎನ್ನುತ್ತಾರೆ || ಸಿದ್ಧಯ್ಯ ||

ನನ್ನ ಭಾರ್ಸುವ ತಂಬೂರಿ ನೋಡಿ
ಬೂರುಗದ ಮರ ಎನ್ನುತಾರೆ || ಸಿದ್ಧಯ್ಯ ||

ನನ್ನ ರುದ್ರಾಕ್ಷಿ ಗುರುವೂ
ನೋಡ್ಕಂಡು ನನ್ನಪ್ಪ
ಅವರು ಅಳ್ಳುಕಾಯಿ ಅಂತ ದೇವ
ನಗುತಾರೆ ಪಂಚಾಳದವರು || ಸಿದ್ಧಯ್ಯ ||

ನನ್ನ ರುದ್ರಾಕ್ಷಿಯ ನೋಡಿ ಗುರುವೇ
ಅಳ್ಳುಕಾಯಿ ಅಂತಸ
ನಗುತಾರೆ ನನ್ನಪ್ಪ
ನನ್ನ ಭಸುಮಂಗವ ನೋಡಿ
ಕುಲುಮೆ ಬೂದಿ ಅಂತ
ಆಡ್ತಾರೆ ನನ್ನ ಗುರುವು
ನನ್ನ ಮಟ್ಟಿಕಪ್ಪ ನೋಡಿಕೊಂಡು
ಗಾಡಿಕಪ್ಪು ಎನ್ನುತಾರೆ || ಸಿದ್ಧಯ್ಯ ||

ನನ್ನ ಎದೆಯ ಮೇಗಳ ಲಿಂಗ
ನೋಡ್ಕಂಡು ನನ್ನ ಗುರುವು
ಎಕ್ಕದ ಕಾಯಿ ಅಂತ
ನೆಗ್ತಾರೆ ನನ್ನಪ್ಪ
ನನ್ನ ಕಾವಿ ಕಮ್ಮಾಳ ನೋಡಿ
ಕೆಮ್ಮೆಣ್ಣು ಬಟ್ಟೆ ಎನ್ನುತಾರೆ || ಸಿದ್ಧಯ್ಯ ||

ಗುರುವೇ ಹಲಗೂರಿಗೆ ದೇವ
ನಿಮ್ಮ ಮಾತನ್ನೇ ಕೇಳಿಕೊಂಡು
ನಾ ಹೊಂಟೋದ್ರೆ ನನ್ನಪ್ಪ
ನಾನು ಹೋದಂಥ
ಗಳಿಗೆವೊಳಗೆ ಗುರುವು
ಗುರುವೇ ಹಲಗೂರು ಗುರುಗಳು ನನ್ನ
ಮುಖವನ್ನೇ ನೋಡಿಬುಟ್ಟರೆ
ಲೋ ಇವನ್ಯಾರ್ಲ ಇವನ್ಯಾರ್ಲ
ಊರಿಗೆ ಬಟ್ಟವರ್ಯಾರು
ಲೋ ಹಿಡಕರ್ಲ ಹಿಡಕರ್ಲ
ಹಾಗಂತ ಹೇಳಿ ನನ್ನ ಗುರುವು
ಅಪ್ಪಾ ಕಾದಿರುವ ಗುಳ ತೆಗೆದು
ಹಟ್ಟಿ ಬರೆಯ ಎಳೆಯುತಾರೆ || ಸಿದ್ಧಯ್ಯ ||

ನನ್ನ ಇಕ್ಕಳದಲ್ಲಿ ಹಿಡಕತಾರೆ
ಅಂಗೈ ಮೇಲೆ ಮಡಗುತಾರೆ || ಸಿದ್ಧಯ್ಯ ||

ಅಪ್ಪಾ ಕಾದುಗಟ್ಟಿ ಕಾವ್ಗೆ ನಾನು
ಹ್ಯಾಗೆ ತಾನೆ ಬೀಳಲಪ್ಪ|| ಸಿದ್ಧಯ್ಯ ||

ಗುರುವೇ ದೊಡ್ಡ ಬಾಚಿ ತಗದು
ಗುರುವೇ ಚಿಕ್ಕ ಬಾಚಿ ತಗದು
ಅಡಿಗಲ್ಲಿನ ದೊಡ್ಡ ಬಾಚಿ ತಗದು
ಗುರುವೇಚಿಕ್ಕ ಬಾಚಿ ತಗದು
ಅಡಿಗಲ್ಲಿನ ಮೇಲೆ ನನ್ನ ಕೆಡೀಕೊಂಡು ನನ್ನಪ್ಪ
ಗುರುವೇ ಮರವ ಕೆತ್ತಿದಂಗೆ ನನ್ನ
ತುಂಡು ತುಂಡಾಗಿ ಕೆತ್ತುತಾರೆ || ಸಿದ್ಧಯ್ಯ ||

ನನ್ನ ಜಾತಿವಂತರ ಕೈಲಿ ದೇವ
ನನ್ನ ಪ್ರಾಣ ತಗಿಸಿಯಪ್ಪ || ಸಿದ್ಧಯ್ಯ ||

ಅವರ ಹಟ್ಟಲಿರುವ ಕೊಳ್ಳಿಗೆ
ನನ್ನ ಕಾವ ಮಾಡಿ ಕಳುಹಿಯಪ್ಪ || ಸಿದ್ಧಯ್ಯ ||

ಅವರ ಹಟ್ಟಿಯಲ್ಲಿರುವ ಕೊಳ್ಳಿಗೆ ದೇವs
ನನ್ನ ಕಾವ ಮಾಡಿ ಕಳುಹಿರಿಯಾ ಜಗತ್ತು ಗುರು ದೊಡ್ಡಯ್ಯಾ
ಅವರ ಮನೆಯಲ್ಲಿರುವಂಥ ಕೊಳ್ಳಿಗೆ ನಾನು ಕಾವಾಗಿ ಹೋಗಿ ಸೇರಿದ ಮೇಲೆ
ಕಣ್ಣಿಗೆ ಬೇಕಾದಂಥ ಮರ ಕಡಿಯುವಂಗೆ ನನ್ನ ಕಡಿದುಬುಡ್ತರೆ ಗುರುವು
ಅಪ್ಪಾ ಬಾಯಿಮಾತಿನಲ್ಲಿ ಹೇಳುತೀರಿ
ಹೋಗುರಾದೆ ನನ್ನ ಪ್ರಾಣ || ಸಿದ್ಧಯ್ಯ ||

ಗುರುವೇ ಬಾಯಿಮಾತಿನಲ್ಲಿ
ಹಲಗೂರಿಗೆ ಗುರುವು
ಭಿಕ್ಷುಕ್ಕೆ ಹೋಗಪ್ಪ
ಅಂತೀರಿ ನನ್ನಪ್ಪ
ನೀವೇನೊ ದೇವ
ಹೇಳುಬುಟ್ಟು ಗುರುವೇ
ಮಠದಲ್ಲಿ ಇರುತೀರಿ
ಅಪ್ಪ ನನ್ನ ಪ್ರಾಣ ಗುರುವೇ
ಹಲಗೂರಿನಲ್ಲಿ ಹೋಗುತಾದೆ
ನನ್ನ ಜಾತಿವಂತರ ಕೈಲಿ
ಅಪ್ಪ ನನ್ನ ಪ್ರಾಣ ತೆಗಿಸಬ್ಯಾಡ || ಸಿದ್ಧಯ್ಯ ||

ನನ್ನ ಜಾತಿ ಮತದವರ ಕೈಲಿ ದೇವ
ನನ್ನ ಪ್ರಾಣ ತೆಗಿಸಬೇಡಿ ಗುರುವೂ
ಹಲಗೂರಿಗೆ ಖಂಡಿತವಾಗಲೂ ಹೋಗಲಾರಿ
ಹಲಗೂರಿಗೆ ಕಳುಹಿಸಬ್ಯಾಡಿ ನನ್ನಪ್ಪ

ಹಾಳೂರಿಗೆ ಹೋದರೆ ನನಗೆ
ಹೋಳಂಬಲಿ ಹುಟ್ಟೋದಿಲ್ಲ || ಸಿದ್ಧಯ್ಯ ||

ಗುರುವೇ ಹಾಳೂರಿಗೆ ನಾನು ಹೋದರೆ ನನ್ನಪ್ಪ
ಹೋಳಂಬಲಿ ನನಗೆ ಹುಟ್ಟೋದಿಲ್ಲ ಗುರುವು

ಗುರುವೇ ಸುತ್ತೇಳು ಊರು
ಸುತ್ತೇಳು ಗ್ರಾಮಕ್ಕೆ
ಹೇಳಿದ ಊರಿಗೆ
ತೋರಿದ ಗ್ರಾಮಕ್ಕೆ
ನಾನು ಭಿಕ್ಷಕ್ಕೆ ಹೋಯತೀನಿ
ಹಲಗೂರಿಗೆ ದೇವ
ನಾ ಹೋಗೋದಿಲ್ಲ ಗುರುವು
ನಿನಗೆ ಬೆಂಗಳೂರು ಬೆಳಕವಾಡಿಯ
ನಾ ಬೇಕು ಮಾಡಿಕೊಡುತೇನಿ || ಸಿದ್ಧಯ್ಯ ||

ಗುರುವೇ ಬೆಂಗಳೂರು ಬೆಳಕುವಾಡಿ
ನಿಮಗೆ ಬೇಕು ಮಾಡಿಕೋಡ್ತೀನಿ
ಗುರುವೇ ನಂಜನಗೂಡು ನರಸೀಪುರ
ಒಕ್ಕಲುಮಾಡಿಕೊಡ್ತೀನಿ
ಅಪ್ಪಾ ಅರಕೆರೆ ಆರುಸಾವಿರ
ಬನ್ನೂರು ಮೂರು ಸಾವಿರ
ಒಕ್ಕಲು ಮಾಡಿಕೊಡ್ತೀನಿ
ನಿಮಗೆ ಮೈಸೂರು ಮಳವಳ್ಳಿಯ
ಬೇಕು ಮಾಡಿಕೊಡುತೀನಿ || ಸಿದ್ಧಯ್ಯ ||
ಗುರುವೇ ಬೆಂಗಳೂರು ಬೆಳಕುವಾಡಿ
ಮೈಸೂರು ಮಳವಳ್ಳಿ
ಕೊಚ್ಚಿ ಕೊಯಮತೂರು
ಅಪ್ಪಾ ತಮಿಳಿನವರ ರಾಜ್ಯ
ತುರುಕರಾಳುವ ಸೀಮೆ
ಬೇಕು ಮಾಡಿಕೊಡುತೀನಿ
ನಿಮಗೆ ನಂಜನಗೂಡು ರಸುಬಾಳೆಯ
ಮಠಕೆ ನಾನು ತರಿಸುತೀನಿ || ಸಿದ್ಧಯ್ಯ ||

ಗುರುವೇ ನಂಜನಗೂಡು ರಸುಬಾಳೆ
ಮಠಕೆ ನಾನು ದೇವ
ಬಂಡಿಗಾಡಿ ಮೇಲೆ
ನಾ ಏರಿಸ್ತೀನಿ ಗುರುವೂ
ಗುರುವೇ ಕೊಡಗಿನ ಕಿತ್ತಲೆ ಹಣ್ಣ
ನಿಮ್ಮ ಮಠಕೆ ನಾನು ದೇವ
ತರಿಸ್ತೀನಿ ನನ್ನಪ್ಪ
ನಿಮಗೆ ಮಲೆಯಾಳದ ಸೇಬ
ಆ ದೇವರಿಗೆ ಅಂತೇಳಿನಾ ಎತ್ತಿ ಮಡಗುತೀನಿ
ಅಪ್ಪಾ ಹುಟ್ಟಿಹುಟ್ಟಿದ ಮಕ್ಕಳಿಗೆಲ್ಲ
ನಿನ್ನ ಹೆಸರ ಕರೆಸುತೀನಿ || ಸಿದ್ಧಯ್ಯ ||
ಈ ಸುತ್ತೇಳು ರಾಜ್ಯಕೆ
ನಿಮ್ಮ ದೇವುರು ಆಗಿ ನಾವು
ಹೆಸರು ಕೊಡಿಸಿಕೊಂಡು
ಅಪ್ಪಾ ನೀವು ಹೇಳಿದಾಗೆ
ನಾವು ಕೇಳಿಕೊಂಡು
ಇರುತ್ತೀನಿ ನನ್ನಪ್ಪ
ಹಲಗಾರಿಗೆ ಮಾತ್ರ ನನ್ನ
ಕಳುಹಬ್ಯಾಡಿ ಎಂದಾರಲ್ಲ || ಸಿದ್ಧಯ್ಯ ||

ಹಲಗೂರಿಗೆ ಕಳುಗಿಸ ಬ್ಯಾಡಿ
ಹಲಗೂರಿಗೆ ನಾನು ಹೋಗೋದಿಲ್ಲ ಗುರುದೇವ
ಹಲಗೂರು ಪಂಚಾಳಗೇರಿ ಸುದ್ದಿ ಎತ್ತುಬ್ಯಾಡಿ ನನ್ನಪ್ಪ ಎಂದರು
ಯಾಕಪ್ಪ ನನ್ನ ಕಂದ ಯಾಕಲೋ ಸಿದ್ದಪ್ಪಾಜಿ
ಹಲಗೂರು ಪಂಚಾಳಗೇರಿಗೆ
ಜಾತಿಯವರ ಮನೆಗೆ ಮತದವರ ಮನೆಗೆ
ಬಿಕುಸಕ್ಕೆ ಹೋಗಬೇಕಲ್ಲ ದಾನಕ್ಕೆ ಹೋಗಬೇಕಲ್ಲ ಅಂತೇಳಿ
ಹೆದರಿಕಂಡೀಯ ಕಂದ
ಜಾತಿಯವರ ಮನೆಗೆ ನಾನು ಹೋಗಬೇಕಲ್ಲ ಅಂತೇಳಿ
ನಾಚಿಕೊಂಡಿಯಾ ಮಗನೇ
ಲೋ ನಾಚಿಕೊಂಡರೆ ಕಂದ

ನರಲೋಕಕ್ಕೆ ಮಗನೇ ನೀನು
ದೇವರು ನೀ ಆಗೋದಿಲ್ಲ || ಸಿದ್ಧಯ್ಯ ||

ಕಂದ ನಾಚಿಕೊಂಡರೆ ಕಂದ
ಕಂದ ನರಲೋಕದ ಬಳಗೇ
ದೇವರು ನೀನು ಕಂದ
ಆಗೋದಿಲ್ಲ ಮಗನೇ
ನನ್ನ ಕಂಡಾಯ ಹೊತ್ತುಕೊಂಡು
ತಂಬೂರಿ ತಕ್ಕೊಂಡು
ಬಸವನ ಹೊಡಕೊಂಡು
ತಾಳವ ಹೊತ್ತುಕೊಂಡು
ಹಲಗೂರಿಗೆ ಕಂದ
ನೀ ದಾನಕ್ಕೆ ಹೋಗಪ್ಪ
ಕಂದ ಹಲಗೂರಿಗೆ ಕಂದಾ
ನೀನು ಹೊಂಟೋದರೆ ಮಗನೇ
ಹಲಗೂರಲ್ಲಿ ಕಂದ
ನಿನ್ನ ಜಾತಿವಂತರು ಮಗ
ನನ್ನ ಧರೆಗೆ ದೊಡ್ಡವರ ಮಗ
ನೀಲಿ ಸಿದ್ದಪ್ಪಾಜಿ
ನನ್ನ ಜಾತಿಯವರು ದೇವ
ನನ್ನ ಮನೆಗೆ ಬಂದವರೆ
ಈ ಭೂಮಿಗೆ ದೊಡ್ಡವರ ಮಗ
ನಮ್ಮ ಹಟ್ಟಿಗೆ ಬಂದವರೆ
ಹಾಗಂದು ನನ್ನ ಕಂದ
ನಿನ್ನ ಮೊಕವನ್ನೇ ನೋಟಿಬಿಟ್ಟು
ಲೋ ಮನೆಮನೆಗೂ ಕಂದ ನಿನಗೆ
ಮಣೆ ತಂದು ಮಡಗುತಾರೆ || ಸಿದ್ಧಯ್ಯ ||
ಕಂದ ಮನೆಮನೆಗೂ ಕಂದ
ನಿನ್ನ ಪಾದಕ್ಕೆಮಣೆ ಮಡಗಿ
ಪಾದವ ತೊಳೀತಾರೆ
ಪೂಜೆಯ ಮಾಡುತಾರೆ
ನಿನ್ನ ಭಾರಿಯ ಕಂಡಾಯ ನೋಡಿ
ಕೈಯೆತ್ತಿ ಮುಗಿದು
ನೀ ಭಾರಿಸುವ ತಂಬೂರಿ ನೋಡಿ
ಗಂಧದ ಕಡ್ಡಿ ಹತ್ಸಿ
ನೀ ಬೇಡಿದಂಥ ದಾನ
ಬೇಡಿದಂಥ ಭಿಕುಸ
ತಕ್ಕಂಡು ಬಂದು
ಜೊಳಿಗ್ಗೆ ಕೊಡುತಾರೆ
ಅಯ್ಯಾ ಬರುವ ಕಾಲದ ಒಳಗೆ
ನಿನ್ನ ಜಾತಿಯವರು ಕಂದ
ಮತದವರು ಮಗನೇ
ಅಯ್ಯಾ ಸಿದ್ದಪ್ಪಾಜಿಯವರು
ಹಂಗೆ ಹೊಯ್ತಾರಂತ
ನಿನಗೆ ಒಳ್ಳೇದ ಮಾಡುತಾರೆ ಕಂದ
ಒಳ್ಳೇದ ಇಕ್ಕುತಾರೆ
ಲೋ ಹೊಟ್ಟೇ ತುಂಬ ಮಗನೇ
ಬಡಿಸ್ತಾರೆ ನನ್ನ ಕಂದ
ನಿನಗೆ ಕಾಫಿ ತಿಂಡಿ ಕೊಡ್ತಾರೆ
ನಿಮ್ಮ ಹಲಗೂರು ಅಯ್ಯನವರು || ಸಿದ್ಧಯ್ಯ ||

ಕಾಫಿ ತಿಂಡಿ ತಂದು ಕಂದ s
ಕೊಟ್ಟು ನಿನಗೆ ಸಲಕರಣೆ ಮಾಡಿ ಮಗನೇ
ಹೋಗಿದ್ದು ಬನ್ನಿರಿಯಪ್ಪ ಸಿದ್ದಪ್ಪಾಜಿ ಎನುತೇಳಿ
ಊರು ಹೆಬ್ಬಾಗಿಲಂಟ ಬಂದು
ಹೋಗಿದ್ದು ಬಂದಿರಿಯ ಗುರುವೂ
ಹೋಗಿದ್ದು ಬಂದಿಯಪ್ಪ ಎನುತೇಳಿ
ಹಲಗೂರಿನಿಂದ ಬಳಬಳಗವೇ ನಿನ್ನ ಕಳುಗತಾರೆ ಸಿದ್ದಪ್ಪಾಜಿ

ಲೋ ಹೋಗಪ್ಪ ನನ್ನ ಮಗನೇ
ಹೋಗಿದ್ದು ಬಾರೋಕಂದ || ಸಿದ್ಧಯ್ಯ ||