ದೇಶ ಸುತ್ತಿ ಬಂದರೂವೆ ಕಂದs
ನನ್ನ ರಾಜ ಬೊಪ್ಪಗೌಡ್ನ ಪುರದ ಮಠಕ್ಕೆ ಬರ್ಬೇಕು ಮಗನೇ
ನನ್ನ ಮಠದ ಕಪ್ಪು ತಕ್ಕೊಂಡು
ನನ್ನ ಮಠದ ಧೂಳ್ತ ತಕ್ಕೊಂಡು
ಅವರಟ್ಟಿ ಅರಮನೆಗೆ ಹೋಗಿ ಮಗನೇ
ನನ್ನ ಮಠದ ಕಪ್ಪು ಧೂಳ್ತ ಅವರ ಮನೆಗೆ ಪಿಡುಗುದ್ದೇ ಆದರೆ

ಅವರ ಹಟ್ಟಿಲಾಡುವ ಗಂಡು ಗಾಳೀಯ
ಕಟ್ಟಾಕಿ ಹೊಡೆಯುತೀನಿ || ಸಿದ್ಧಯ್ಯ ||

ಸಿದ್ದಪ್ಪಾಜಿ
ಅರರ ಹಟ್ಟೀಲಾಡುವಂಥ ಗಂಡುಗಾಳಿಯ
ಕಟ್ಯಾಕಿ ಹೊಡೆಯಬಲ್ಲೆ ಮಗನೇ
ಹಲಗೂರಿಗೆ ಭಿಕ್ಷುಕ್ಕೆ ಹೊಗು
ಹಲಗೂರಿಗೆ ದಾನಕ್ಕೋಗಪ್ಪ
ಹಲಗೂರಿಂದ ನೀನು ಬಂದ್ಬುಟ್ರೆ ಕಂದ
ನನಗೆ ಏಳು ದುಡ್ಡಿನ ಕಬ್ಬಿಣದ ಭಿಕ್ಷ ಕಡತಂದು ಕೊಟ್ಟುಬುಟ್ರೆ ಕಂದ
ಚಿಕ್ಕಲ್ಲೂರು ಮಠದಲ್ಲಿ
ನಿನ್ನ ದೇವರು ಮಾಡಿ ನಿಲ್ಲಿಸ್ಬುಡ್ತೀನಿ ಮಗನೇ
ಈಗಲೀಗ ದೇವರು ಮಾಡ್ಬುಟ್ಟ ಮೇಲೆ ಕಂದ

ಲೋ ಕೂತು ಪಟ್ಟ ನನಗೇ ಕಾಣೋ
ಮೆರಿಯೋ ಪಟ್ಟ ನಿನಗೆ ಕಾಣೋ || ಸಿದ್ಧಯ್ಯ ||

ಕಂದ ಕೂತು ಪಟ್ಟ ನನಗೆ
ಮೆರಿಯೋ ಪಟ್ಟ ನಿನಗೆ
ಲೋ ರಾಜುಪಟ್ಟ ನನಗೆ
ದಳವಾಯಿ ಪಟ್ಟ ನಿನಗೆ
ಹರಿಸೇವೆ ನನಗೆ ಕಾಣೋ
ಗುರೂಸೇವೆ ನಿನಗೆ ಕಾಣೋ || ಸಿದ್ಧಯ್ಯ ||

ಕಂದಾ ಹರಿಸೇವೆ ನನ್ನದು
ಗುರುಸೇವೆ ನಿನ್ನದು
ಫಲಾರಪೂಜೆ ನನ್ನದು
ಭಂಗಿಪೂಜೆ ನಿನ್ನದು
ಈ ನಡುವೆ ನರಲೋಕ
ಭೂಮಿ ಭೂಲೋಕ
ಈ ನರಲೋಕದ ಒಳಗೆ
ಮಗನೇ ನಿನ್ನೆಸರ ಕಂದ
ಮುಂದೆ ಮಾಡುತೀನಿ
ನನ್ನೆಸರ ಕಂದ
ಹಿಂದೆ ಮಾಡುತೀನಿ
ಮೂರು ಮನೆಕಂದ
ಹಳ್ಳಿಯ ಗ್ರಾಮದಲ್ಲೂ
ಸಿದ್ದಪ್ಪಾಜಿ ಮಠ
ಎನುತೇಳಿ ನನ್ನ ಕಂದಾ
ಮಠವ ಕಟ್ಟಿಸುತೀನಿ
ಮಗನೇ ಮಠದ ಮುಂದೆ ನಿನಗೆ
ದಾಳ ನೆಡಿಸುತೀನಿ
ಲೋ ಏಳನೂರ ಮಾರೀರಿಗೆ ನಿನ್ನ
ಒಡೆಯನಾಗಿ ಮಾಡುತೀನಿ || ಸಿದ್ಧಯ್ಯ ||

ಅಪ್ಪಾ ಮಾರಿ ಹೊಕ್ಕಿದ ಊರು ನಿನ್ನದು
ಮಸಣಿ ಹೊಕ್ಕಿದ ಗ್ರಾಮ ನಿನ್ನದು || ಸಿದ್ಧಯ್ಯ ||

ಕಂದ ಮಾರಿ ಹೊಕ್ಕಿದ ಊರು ನನ್ನದು
ಮಸಣಿ ಹೊಕ್ಕಿದ ಗ್ರಾಮ
ನಿನ್ನದು ನನ್ನ ಕಂದ
ಕೇಳಪ್ಪ ನನ್ನ ಮಗುವು
ಲೋ ಕಾರ್ಲು ಬಂದ ಊರ್ಗೆನಾ
ದಾಳ ಕೊಟ್ಟು ಕಳುಗುತೀನಿ || ಸಿದ್ಧಯ್ಯ ||
ಮಾರಿ ಹೊಕ್ಕಿದ ಊರು ನಿನ್ನದು
ಮಸಣಿ ಹೊಕ್ಕಿದ ಗ್ರಾಮ ನಿನ್ನದು ಮಗನೇ
ಕಾರ್ಲು ಬಂದ ಊರಿಗೆ ದಾಳಕೊಟ್ಟು ಕಳುಗತೀನಿ ಕಂದ ಸಿದ್ದಪ್ಪಾಕೊ

ನಾನು ಮುಳ್ಳುಹಾಗಿದ ಗ್ರಾಮಕೆ ಲೋ
ಮುಳ್ಳು ತಗದು ಕಳುಗುತೀನಿ || ಸಿದ್ಧಯ್ಯ ||
ಅಪ್ಪಯ್ಯ ಕಲ್ಲು ಹಾಕುವ ಗ್ರಾಮಕ್ಕೆ
ಲೋ ಕಲ್ಲು ಕಿತ್ತು ಕಂದ
ಬುಡುತೀನಿ ನನ್ನ ಕಂದ
ಮುಳ್ಳು ಹಾಕುದ ಗ್ರಾಮಕ್ಕೆ
ಮುಳ್ಳು ತಗದು ನಿನ್ನ
ನಾ ಬಿಡುತೀನಿ ನನ್ನ ಕಂದ
ಲೋ ಮಾರಿ ಹೊಕ್ಕಿದ ಊರು ನಿನ್ನದು
ಮಸಣಿ ಹೊಕ್ಕಿದ ಗ್ರಾಮ ನಿನ್ನದು || ಸಿದ್ಧಯ್ಯ ||

ಮಾರಿ ಮಸಣಿ ಕಂದs
ದುರ್ಗಿ ಚೌಡೀರು ಮಗನೇ
ಕಾರ್ಲು ಬಂದು ಊರಿಗೇ ಕಂದ
ನನ್ನ ಕಂಡಾಯ ಹೊತ್ತುಕೊಂಡು
ಬಸವನ ಹೊಡಕೊಂಡು
ನನ್ನ ದಾಳ ತಕ್ಕೊಂಡು
ಕಾರ್ಲು ಬಂದು ಊರುಗೆ ನೀನಾಗಿ ನೀ ಹೊಂಟೋಗ್ಬುಟ್ರೆ ಕಂದ

ನಿನ್ನ ಕಂಡಾಯ ನೋಡಿಕೊಂಡು
ತಂಬೂರಿ ನೋಡಿಕೊಂಡು
ನಿನ್ನ ಬಸವನ ನೋಡಿಕೊಂಡು
ನಿನ್ನ ದಾಳವ ನೋಡಿಕೊಂಡು
ನಿನ್ನ ಮೊಕವನ್ನೇನೋಡಿಬುಟ್ಟು
ಮಾರೀರು ಕಂದ
ಮಸಣೀರು ನನ್ನ ಕಂದ
ಅಯ್ಯಾ ಆದಿದಯ್ಯ ಆಳಬೇಕು
ಬೀದಿದಯ್ಯಾ ಹೊಗುಳಬೇಕು || ಸಿದ್ಧಯ್ಯ ||

ನಿನ್ನ ಕಂಡ ಕಂಡ ಮಾರೀರೆಲ್ಲ
ಕೈಮುಗಿದು ಓಡಬೇಕು || ಸಿದ್ಧಯ್ಯ ||
ನಿನ್ನ ಕಂಡ ಕಂಡ ಮಾರೀರೆಲ್ಲ
ಕೈಯೆನ್ನ ಮುಗಿದ್ಬುಟ್ಟು
ಮೂರು ಮೈಲಿ ದೂರ
ಅವರ ಬಿದ್ದುಕೆ ಎದ್ದು ಕಂದ
ಓಡುಬುಟ್ಟು ನನ್ನ ಕಂದ
ಈ ಸುತ್ತಲ ಮಾರೀರಿಗೆ ನಿನ್ನ
ಒಡೆಯನಾಗಿ ಮಡುಗುತೀನಿ || ಸಿದ್ಧಯ್ಯ ||

ಧರೆಗೆ ದೊಡ್ಡವರ ಮಗ ಸಿದ್ದಪ್ಪಾಜಿ
ಇವರು ಕೆಟ್ಟದೇವರು ದುಷ್ಟದೇವರು
ಇವರು ಒಳ್ಳೇ ದೇವ್ರಲ್ಲ ಅಂತೇಳಿ
ಎಲ್ಲಾ ಮಾರೀರು ಮೂರು ಮೈಲಿ ದೂರ ಬಿದ್ದು ಕೆಡದು ಓಡಬೇಕು ಕಂದ
ಈ ಸುತ್ತೇಳು ಊರ್ಗೆಲ್ಲಾ ನಿನ್ನ ಒಡೆಯನಾಗಿ ಮಡಗುತ್ತೀನಿ ಕಂದ
ಹಲಗೂರು ಪಂಚಾಳಗೇರಿಗೆ ಭಿಕ್ಷಕ್ಕೆ ಹೋಗೋ
ದಾನುಕ್ಕೆ ಹೋಗೋ ಕಂದ

ಈ ಧರೆಗೆ ದೊಡ್ಡವರ ಮಾತು
ಹುಡುಗಾಟವಾಯಿತೇನೋ || ಸಿದ್ಧಯ್ಯ ||

ಈ ಧರೆಗೆ ದೊಡ್ಡವರ ಮಾತು
ಹುಡುಗಾಟ ಆಯ್ತಪ್ಪ
ಈ ಭೂಮಿಗೆ ದೊಡ್ಡವರ ಮಾತು
ನಿನಗೆ ಐಲಾಟ ಆಯ್ತಪ್ಪ
ಲೋ ಹೋಗುವಂದ ಮಾತಿಗೆ
ನೀ ಹೋದರೆ ಸರಿವೋಯ್ತು
ನೀ ಹೋಗದಿಲ್ಲ ಅಂತ
ನೀ ಹೇಳುಬುಟ್ರೆ ನನ್ನ ಕಂದ
ಇನ್ನೂವೆ ನನ್ನ ಕಂದ
ಹನ್ನೆರಡು ವರ್ಷ
ಕೇಳಪ್ಪ ನನ್ನ ಮಗು
ನಿನ್ನ ಕಾಳಿಂಗನ ಗವಿಗೆ ನಾ
ಕೂಡುತೀನಿ ಎಂದರಲ್ಲ || ಸಿದ್ಧಯ್ಯ ||

ಇನ್ನು ಹನ್ನೆರಡು ವರ್ಷ ತಕ್ಕೊಂಡೋಗಿ
ನಿನ್ನ ಕಾಳಿಂಗನ ಗವಿಗೆ ಕೊಡುಬುಡ್ತೀನಿ ಕಂದ ಸಿದ್ದಪ್ಪಾಜಿ
ಇನ್ನು ಹನ್ನೆರಡು ವರ್ಷ ಹಾವು ಚವುಳಿನ ಬಂಧಾನಕ್ಕೆ ಇಕ್ಬುಡ್ತೀನಿ ಮಗನೆ
ಇನ್ನು ಹನ್ನೆರಡು ವರ್ಷಕ್ಕಂಟ
ಕಾಳಿಂಗನ ಗವಿವೋಳಗೇ

ನಿನಗೆ ಬಲಕ್ಕೆ ಹೊಳ್ಳವ ಅಂದರೆ
ನಾಗುರಾಜನ ಕಾಟ
ಎಡಕ್ಕೆ ಹೊಳ್ಳವ ಅಂದರೆ
ಹೆಬ್ಬೆ ಹಾವಿನ ಕಾಟ
ಇಲ್ಲೇ ಮಲಗ್ತೀನಿ ಅಂದರೆ
ಯಮ ಚೌಳಿನ ಕಾಟ
ನಿನಗೆ ಹಾವು ಹಾಸಿಗೆ ಮಾಡುತೀನಿ
ಚೌಳು ತಲೆದಿಂಬು ಮಾಡುತೀನಿ || ಸಿದ್ಧಯ್ಯ ||

ಹಾವು ಹಾಸಿಗೆ ಮಾಡ್ತೀನಿ ಕಂದ s
ಚೌಳು ತಲೆದಿಂಬ ಮಾಡ್ತೀನಿ ಮಗನೇ ನೀಲಿ ಸಿದ್ದಪ್ಪಾಜಿ

ನಿನ್ನ ಹೆಬ್ಬೆಯಾವಿನ ಹೊಟ್ಟೆಗೆ
ನಾ ಕೂಡುತೀನಿ ಎಂದರಲ್ಲ || ಸಿದ್ಧಯ್ಯ ||

ಈಗಲೀಗ ನನ್ನ ಕಂದ
ನಿನ್ನ ಹೆಬ್ಬೆಯಾವಿನ ಹೊಟ್ಗೆ ಕೂಡ್ಬುಡ್ತೀನಿ ಮಗನೇ
ಹಲಗೂರಿಗೆ ಭಿಕ್ಷುಕ್ಕೆ ದಾನಕ್ಕೋಗು
ಕ್ವಾರುಣ್ಯಕ್ಕೆ ಹೋಗಪ್ಪ
ಈಗಲೀಗ ಹಲಗೂರ ಪಂಚಾಳಗೇರಿಗೆ
ದಾನಕ್ಕೆ ಭಿಕ್ಷುಕ್ಕೆ ನೀನು ಹೊಂಟೋದ್ರೆ ಕಂದ
ಹಲಗೂರು ಪಂಚಾಳಗೇರಿವೊಳಗೆ
ಈಗಲೀಗ ಬೇಡಿದ ದಾನ ಬೇಡಿದ ಭಿಕ್ಷ ತಂದುಕೊಟ್ಟು
ಪಾದಕ್ಕೆ ಶರಣ ಮಾಡಿ ಕಂಡಾಯ್ಕೆ ಕೈಮುಗಿದು
ಮರ್ಯಾದಿವೊಳಗೆ ಕಳುಹುಬುಟ್ರೆ ಕಂದ
ಏನಾರು ಕಳುಗದಿಲ್ಲ ಅಂತ ಹೇಳ್ಬುಟ್ರೆ ಕಂದ
ನಿಮ್ಮ ಹಲಗೂರು ಪಂಚಾಳಗೇರಿಗೆ
ಯಾವ ಕಷ್ಟ
ಯಾವ ಯಾವ ರೋಗ ಕೊಡ್ತೀನಿ ಅಂದರೆ

ಲೋ ಹಾದಿಲಾಡೋ ಮಕ್ಕಳಿಗೆ ನಾ
ಹುಣ್ಣುರೋಗ ಕೊಡುವುತೀನಿ || ಸಿದ್ಧಯ್ಯ ||

ಕಂದಾ ಹಾದಿಲಾಡೋ ಮಕ್ಕಳಿಗೆ
ನಾ ಹಣ್ಣು ರೋಗ ಕೊಟ್ಟು
ಬೀದಿಲಾಡೋ ಮಕ್ಕಳಿಗೆ
ನಾಗ್ವಾರದ ರೋ ಕೊಟ್ಟು
ಲೋ ತೊಟ್ಲಲ್ಲಾಡೋ ಮಕ್ಕಳಿಗೆ
ನಾ ಸಿಡುಬುರೋಗ ಕೊಟ್ಟು
ಲೋ ಲಾಲಿಲಾಡೋಮಕ್ಕಳೀಗೆ ನಾ
ರಕುತ ಬೇದಿ ಕೊಡುವುತೀನಿ || ಸಿದ್ಧಯ್ಯ ||

ಮಗನೆ ಮುದಕೀರು ಮೋಟೀರು
ಎಡಾಯಿಸದವರು ಕಂದ
ಹೆಂಗುಸರಿಗೆ ನನ್ನ ಮಗನೆ
ನಾ ಕಂಕುಳ ಸಂದಿವೊಳಗೆ
ನಾ ಶಂಕುದಾಳಿ ಕೊಡುವುತೀನಿ || ಸಿದ್ಧಯ್ಯ ||

ಕಂದ ಕಂಕುಳ ಸಂದಿವೊಳಗೆ
ಕಂದ ಸಂಕುದಾಳ ಕೊಟ್ಟು
ಒಂದು ಮೂಡಬೇಕು
ಲೋ ಒಂಬತ್ತು ಹೊಡೀಬೇಕು
ಅವರು ಕಂಕುಳ ಬಾದಿ ತಡಿಲಾರ್ದೆ
ಫಕ್ಕನೆ ಪ್ರಾಣ ಬಿಡಲುಬೇಕು || ಸಿದ್ಧಯ್ಯ ||

ಕಂದ ದೊಡ್ಡ ದೊಡ್ಡವರಿಗೆಲ್ಲ
ಮೀಸೆ ಮಿಂಡಾಲರಿಗೆ
ಗಂಡಸರಿಗೆ ನನ್ನ ಕಂದ
ನಿಮ್ಮಲಗೂರಲ್ಲಿ ಕಂದ
ಯಾವ ಯಾವ ರೋಗಗಳು
ನಾ ಕೊಡುತೀನಿ ಅಂದರೆ
ಅವರಿಗೆ ಮುಂದೆ ವಮನ ಕೊಡುವುತೀನಿ
ಹಿಂದೆ ಭೇಧಿ ಕೊಡುವುತೀನಿ || ಸಿದ್ಧಯ್ಯ ||

ಮಗನೆ ಮುಂದೆ ವಮನ ಕೊಟ್ಟು
ಹಿಂದೆ ಭೇದಿ ಕೊಟ್ಟು
ನಿನ್ನ ಹಲಗೂರದಲ್ಲಿ ಕಂದ
ಮಗನೆ ಹಾದಿಲಾಡೋ ಮಕ್ಕಳು
ಹಾದೀಲಿ ಸಾಯಬೇಕು
ಬೀದಿಲಾಡೋ ಮಕ್ಕಳು
ಬೀದೀಲಿ ಸಾಯಬೇಕು
ಲೋ ತೊಟ್ಲಲ್ಲಾಡೋ ಮಕ್ಕಳು
ತೊಟ್ಲಲ್ಲಿ ಸಾಯಬೇಕು
ಮಗನೆ ನ್ಯಾಣೊಲಾಡೋ ಮಕ್ಕಳು
ನ್ಯಾಣಲ್ಲಿ ಸಾಯಬೇಕು
ಮಗನೆ ಹಾದಿ ಬೀದಿವೋಳಗೆ ಮಗನೆ
ಹೆಣವೆ ಇಟ್ಟಾಡಬೇಕು || ಸಿದ್ಧಯ್ಯ ||

ಹಾದಿ ಬೀದಿವೊಳಗೆ
ಹೆಣಗಳೆ ಇಟ್ಟಾಡಬೇಕು ಮಗನೇ ಸಿದ್ದಪ್ಪಾಜಿ
ಸತ್ತೋದ ಹೆಣಗಳ ಹೊರುವೊಂದು ದಿಕ್ಕಿಲ್ಲದಂಗೆ ಮಾಡಿ
ಕ್ವಾಣನ ಗಾಡಿ ಮೇಲೆ ಹೆಣ ಏರುಸ್ತೀನಿ ಮಗನೆ

ಊರು ಮುಂದೆ ಇರುವ
ಉತ್ತು ಹೊಲದವೊಳಗೆ
ತೆಂಗಿನ ಮರದ ಉದ್ದ
ಹೆಣದ ರಾಶಿ ಕೆಡಗಿ
ಮಗನೆ ದಿನವೂ ಮಧ್ಯಾಹ್ನ
ಅಲ್ಲಿ ಗಬ್ಬು ನಾತ ಹೊಡೀಬೇಕು
ಅಲ್ಲಿ ಅಡುಗುನಾತ ಹುಟ್ಟಿಬೇಕು
ಅಲ್ಲಿ ಸತ್ತಿರುವ ಹೆಣಿನ ಮೇಲೆ
ಹದ್ದು ಕಾಗೆ ಆಡಬೇಕು || ಸಿದ್ಧಯ್ಯ ||

ಕಂದ ಸತ್ತಿರುವ ಕಂದ
ಹೆಣಿನ ಮ್ಯಾಲೆ ಮಗನೇ
ಹದ್ದು ಕಾಗೆ ಕಂದ
ನಾನ ಆಡಿಸ್ತೀನಿ ಮಗನೇ
ಅವರು ಏಳ್ನೂರು ಐವತ್ತು ಒಕ್ಕಲ
ಏಳು ಒಕ್ಕಲ ಮಾಡ್ತೀನಿ
ನೀ ಹೋಗಿ ಬಾರೋ ಪಾಂಚಾಳಗೇರಿಗೆ
ಬಗ್ಸಿ ಬಾರೋ ಪಂಚಾಳದವರ || ಸಿದ್ಧಯ್ಯ ||

ಹಲಗೂರಿಗೆ ಹೋಗು ಕಂದs
ನಿನ್ನ ಜಾತಿಯವರ ಮನೆಗೆ ಹೋಗು ಬಾರೋ ಮಗನೆ
ಪಾಂಚಾಳದ ದೊರೆಗಳ ಬಗ್ಗಿಸಿ ಬರೋಗು ಕಂದ
ಹೋಗ ಅಂದ ಮಾತಿಗೆ ಹೋದರೆ ಸರಿಹೋಯ್ತು
ಹೋಗಲಿಲ್ಲ ಅಂದರೆ ನಿನ್ನ ಖಂಡಿತವಾಗ್ಲೂ ಬುಡೋದಿಲ್ಲ ಅಂದರು

ಧರೆಗೆ ದೊಡ್ಡೋರ ಮಾತು ಕೇಳಿ
ಅವನು ಅಳುತಾ ನಿಂತಿರುವನಲ್ಲ || ಸಿದ್ಧಯ್ಯ ||

ಧರೆಗೆ ದೊಡ್ಡವರ ಮಾತು ಕೇಳುತಾ ಕಂದ
ಕಣ್ಣಲ್ಲಿ ಕಣ್ಣೀರು ಸುರಿಸುತ್ತ ಕಂದ ಸಿದ್ದಪ್ಪಾಜಿ
ಒಕ್ಕು ಒಕ್ಕುಳಾ ಕಣ್ಣೀರ ಎದೆಮ್ಯಾಲೆ ಧಾರಾವತಿಯಾಗಿ ಹರಿಸ್ಕೊಂಡು
ಏನಪ್ಪ ಜಗತ್ತುಗುರು ಧರೆಗೆ ದೊಡ್ಡಯ್ಯ
ಇನ್ನೂ ನಿಮ್ಮ ಜಾತಿಗೆ ಬದಲೀ ಮಾತ ಹೇಳುಬುಟ್ರೆ
ಏನು ಕಷ್ಟ ಕೊಟ್ಟೀಯೋ ಕಾಣೆ
ಇನ್ಯಾವ ಬಂಧಾನ ಕೊಟ್ಟಿರಿಯೋ ಗೊತ್ತಿಲ್ಲ

ಅಪ್ಪಾ ಹಾಳಾದ ಹಲಗೂರಿಗೆ
ಹೊಯ್ತೀನಿ ನನ್ನಾ ಗುರುವೆ || ಸಿದ್ಧಯ್ಯ ||
ಹಲಗೂರಿಗೆ ದೇವಾ
ಹೊಯ್ತೀನಿ ನನ್ನಪ್ಪ ಹೊಯ್ತೀನಿ ಗುರುದೇವ
ನನ್ನ ಜಾತಿಯವರ ಮನೆಗೆ ನಾನೇ ಹೊಯ್ತೀನಿ ಗುರುವು
ಹಲಗೂರಿಗೆ ನಾ ಹೊಂಟೋಯ್ತೀನಿ ನನ್ನಪ್ಪ

ಅಲ್ಲಿ ಪದ್ದು ಬಂದರೂ ನಿಮ್ಮದೆ
ಪವಾಡ ಬಂದರೂ ನಿಮ್ಮದೆ || ಸಿದ್ಧಯ್ಯ ||

ಗುರುವೇ ಪದ್ದು ಬಂದರೂ ನಿಮ್ಮದೇ
ಪವಾಡ ಬಂದರೂ ನಿಮ್ಮದೇ
ಅವಮಾನ ಬಂದರೂ ನಿಮ್ಮದೇ
ಬೋಮಾನ ಬಂದರೂ ನಿಮ್ಮದೇ
ಅಪ್ಪಾ ಬದುಕಿ ಬಂದರು ದೇವ
ರಾಜ ಬಪ್ಪಗೌಡ್ನ ಪುರಕೆ
ನಾ ಬತ್ತೀನಿ ನನ್ನಪ್ಪ
ನಾ ಸತ್ತು ಹೋದ್ರೂ ದೇವ
ಹಲಗೂರಲ್ಲಿ ಗುರುವು
ನಾ ಸಾಯ್ತೀನಿ ನನ್ನ ಗುರುವು
ನಾನು ಸತ್ತೋದ್ರೆ ಹಲಗೂರು
ಬದುಕಿ ಬಂದರೆ ಬೊಪ್ಪಗೌಡ್ನಪುರ || ಸಿದ್ಧಯ್ಯ ||

ಸತ್ತೋದ್ರೆ ಹಲಗೂರಲ್ಲೇ ಸತ್ತೋಯ್ತೀನಿ ದೇವ
ಬದುಕಿ ಬಂದರೆ ರಾಜಬೊಪ್ಪಗೌಡ್ನ ಪುರಕೆ ಬತ್ತೀನಿ ದೇವ
ಹಲಗೂರಿಗೆ ಹೊಯ್ತೀನಿ ತಂದೆ
ಹೋಯ್ತೀನಿ ನನ್ನಪ್ಪ ಗುರುದೇವ
ಹಲಗೂರಲ್ಲಿ ನಾನೇನಾರು ಬದುಕಿಬಂದಿನೋ
ಸತ್ತೋಗ್ಬುಟ್ಟಿನೋ ಗೊತ್ತಿಲ್ಲ
ಹಲಗೂರಿನಲ್ಲಿ ಏನಾರು ನಾನು ಸತ್ತು ಪ್ರಾಣ ಬಿಟ್ಟುಬುಟ್ಟರೆ ದೇವ
ನನ್ನ ಮಾತ್ರ ಹಂಗೆ ಬಿಟ್ಟು ಬುಡಬ್ಯಾಡಿ ಗುರುವು
ನಿಮ್ಮ ಪಕ್ಕದಲ್ಲಿ ನನ್ನನ್ನೂ ಜೀವದ ಗೋರಿ ಮಾಡಿಸ್ಕಂಡು
ನೀವು ತಕ್ಕೊಳ್ಳುವಂಥ ಪೂಜೆವೊಳಗೆ
ನನಗೊಂದು ಪೂಜೆ ಕೊಟ್ಬುಡಿ ಗುರುವು

ಹಾಳಾದ ಹಲಗೂರಿಗೆ
ಹೋಯ್ತೀನಿ ಎಂದಾರಲ್ಲ || ಸಿದ್ಧಯ್ಯ ||

ಅಲ್ಲಿ ಬದುಕಿ ಬಂದರೂ ನಿಮ್ಮದೇ
ಕೆಟ್ಟು ಹೋದರೂ ನಿಮ್ಮದೇ|| ಸಿದ್ಧಯ್ಯ ||

ಅಪ್ಪಾ ಬದುಕಿದರೂ ನಿನ್ನಿಂದ ಸತ್ತರೂವೆ ನಿನ್ನಿಂದ
ಹೊಯ್ತೀನಿ ಅನುತೇಳಿ ನನ್ನ ನೀಲುಗಾರರ ಗಂಡ
ನೀಲಿ ಸಿದ್ದಪ್ಪಾಜಿ

ಅವರು ದೊಡ್ಡಮ್ತಾಯ ನೆನಕೊಂಡು
ಗುಳುಗುಳನೆ ಅಳುವುತಾರೆ || ಸಿದ್ಧಯ್ಯ ||

ದೊಡ್ಡಮ್ತಾಯಿ ನೆನಕೊಂಡು ಸಿದ್ದಪ್ಪಾಜಿs
ಕಣ್ಣೀರ ಕೆಡಿಕೊಂಡು ದುಃಖ ಮಾಡ್ಕೊಂಡು
ಈಗಲೀಗ ನನ್ನ ಕಷ್ಟ ಸುಖ ಯಾರಿಗೇಳಬೇಕು
ನನ್ನ ಸಾಕಿ ಸಲುಗಿದಂಥ ತೋಪಿನ ದೊಡ್ಡಮ್ಮನಿಗೆ ಹೇಳಬೇಕಲ್ಲ
ದೊಡ್ಡಮ್ತಾಯಿಗಾರೂ ಹೋಗಿ
ನನ್ನ ಕಷ್ಟ ಸುಖ ಹೇಳಿಕೊಂಡರೆ
ಜಗತ್ತು ಗುರು ಧರೆಗೆ ದೊಡ್ಡವರಿಗಾರು ಹೇಳುಕೊಂಡು
ನನ್ನ ಮಗನ ಕಳುಗುಸಬ್ಯಾಡಿ ಗುರುದೇವ
ಅಂತೇಳಿ ಪಾದನಾರು ಬಿದ್ದು ಬೇಡಿಕೊಂಡು
ನನ್ನ ಪ್ರಾಣ ಉಳಿಸ್ಕೊತಾಳೆ ದೊಡ್ಡಮ್ಮ

ಈಗ ಮುತ್ನಳ್ಳಿ ತೋಪಿಗೆ
ನಾ ಹೋಗಬೇಕು ಎಂದರಂತೆ|| ಸಿದ್ಧಯ್ಯ ||

ಮುತ್ನಳ್ಳಿ ತೋಪಿಗೆ ಹೋಗಬೇಕು ಅಂತ್ಹೇಲಿ
ಆಗಲೀಗ ಸಿ‌ದ್ದಪ್ಪಾಜಿ
ಮುತ್ನಳ್ಳಿ ತೋಪಿಗೆ ಓಡೋಡಿ ಬಂದು ಗುರುವು
ಅವನು ಪನ್ನೀರಿನೊಳಗೆ ಗುರುವೇ
ಗೋರಿಗೆಲ್ಲ ತೊಳೆದನಂತೆ || ಸಿದ್ಧಯ್ಯ ||