ಗುರುವೇ ಪನ್ನೀರುವೊಳಗೆ
ದೊಡ್ಡಮ್ಮ ತಾಯಿ ಗುರುವು
ಗೋರಿಯ ತೊಳೆದವರೆ
ಅಯ್ಯಾ ರಂಗೋಲಿ ಬುಟ್ಟವರೆ
ಸಿಂಗಾರ ಮಾಡವರೆ
ಅವರು ಚಿತ್ರದ ಹೊಂಬಾಳೆ ತಂದು
ಚಿತ್ರಿಸಿ ಪೂಜೆಯ ಮಾಡುತಾರೆ || ಸಿದ್ಧಯ್ಯ ||

ಅವರು ಕಳ್ಳೇ ಪುರಿ ತಂದಾರಂತೆ
ಫಲಾರದ ಪೂಜೆ ಮಾಡುತಾರೆ || ಸಿದ್ಧಯ್ಯ ||

ಚಿತ್ರದ ಹೊಂಬಾಳೆ ತಂದು
ಚಿತ್ರಿಸಿ ಪೂಜೆ ಮಾಡಿ
ಕಳ್ಳೇಪುರಿ ತಂದು
ಫಲಾರದ ಪೂಜೆ ಮಾಡಿ
ಕೈಯೆತ್ತಿ ಮುಗಿದು ವಾಸು ಅಡ್ಡುಬಿದ್ದು ಸಿದ್ದಪ್ಪಾಜಿ
ದೊಡ್ಡಮ್ಮ ಈಗಲೀಗ ಗೋರಿ ಬುಟ್ಟು ಮೇಲಕ್ಕೆ ಬಂದು
ನನ್ನ ಜೊತೆವೊಳುಗೆ ಮೂರು ಮಾತಾಡಿದಂತೆ ಸರುವೋಯ್ತು ತಾಯಿ
ಏನಾರು ಮಾತಾಡದೆ ಹೋದರೆ

ನಿನ್ನ ಗೋರಿ ಮುಂದೆ ಬಿಳುವುತೀನಿ
ಬಿದ್ದು ಪ್ರಾಣ ಬಿಡುವುತೀನಿ || ಸಿದ್ಧಯ್ಯ ||

ನಿಮ್ಮ ಗೋರಿ ಮುಂದೆ ಬಿದ್ದುಬುಟ್ಟು ತಾಯಿ
ಬಿದ್ದು ಪ್ರಾಣ ಬಿಟ್ಟುಬುಡ್ತೀನಿ ದೊಡ್ಡಮ್ಮ
ಈವತ್ತಿನಾ ದಿವ್ಸದಲ್ಲಿ ತಾಯಿ
ಗೋರಿಬುಟ್ಟು ಹೊರಗೆ ಬಂದು ಮೂರು ಮಾತಾಡು ದೊಡ್ಡಮ್ಮ ಅಂತ್ಹೇಳಿ
ಇಂಥಾ ದೊಡ್ಡಮ್ಮ ತಾಯಿ ಗೋರಿ ಮುಂಭಾಗದಲ್ಲಿ ನಿಂತುಕೊಂಡು

ಗುಳುಗುಳನೆ ಅಳುವುತಾನೆ
ಬಿದ್ದು ಗೋಳಾಡುತಾನೆ || ಸಿದ್ಧಯ್ಯ ||

ಅವ್ವಾ ನೀನು ಪಡುದ ಮಗನ ಮುಂದೆ
ನಿನಗೆ ಕರುಣೆ ಇಲ್ಲವವ್ವ|| ಸಿದ್ಧಯ್ಯ ||

ಅಮ್ಮಾ ನೀವು ಪಡೆದ ಮಗಾ
ನೀನು ಸಾಕಿದ ಮಗ
ನಾನಲ್ಲ ದೊಡ್ಡಮ್ಮ
ನನ್ನ ಚಿಕ್ಕತಾರದಿಂದ
ಎತ್ತುಗೊಂಡು ಹೊತ್ತುಗೊಂಡು
ಮುತ್ತಿಕ್ಕಿ ಮುದ್ದುಮಾಡಿ
ನನ್ನ ಸಾಕಿ ಸಲುಹಿದೆ
ತಾಯಿ ದೊಡ್ಡಮ್ಮ
ಅವ್ವ ಈವೊತ್ತು ಬಂದು ತಾಯಿ
ಒಂದಿಗೆ ಮಾತ ಆಡು ತಾಯಿ || ಸಿದ್ಧಯ್ಯ ||

ಈವೊತ್ತು ಬಂದು ತಾಯಿs
ನನ್ನ ಒಂದಿಗೆ ಮೂರು ಮಾತಾಡವ್ವ
ದುಡುವುಳ್ಳ ದೊಡ್ಡಮ್ಮ ತಾಯಿ ಎನುತೇಳಿ
ನೀಲಿ ಸಿದ್ದಪ್ಪಾಜಿ
ದೊಡ್ಡಮ್ಮ ತಾಯಿ ಗೋರಿ ಮುಂಭಾಗದಲ್ಲಿ ಕಂದ
ಕಣ್ಣೀರ ಸುರುಸಿಕೊಂಡು ದುಃಖಪಡುತ್ತಾ
ತತವತನೆ ಒದ್ದಾಡುವಾಗ ಗುರುವು
ಈ ಆಳಾಳುದ್ದ ಗೋರೀವೊಳಗೆ
ಏಳು ವರ್ಷದ ಮಗುವಾಗಿ ಮಲಗಿದ್ದಂಥ ದೊಡ್ಡಮ್ಮ
ಗೋರಿಬುಟ್ಟು ಮೇಲಕ್ಕೆ ಎದ್ದು ದೊಡ್ಡಮ್ಮ
ಈಗಲೀಗ ಮೇಲಕ್ಕೆ ಬಂದುತಾಯಿ

ಅವಳು ಒಡೆದ ಹೊಂಬಾಳೆವೊಳುಗೆ
ಒಡೆದು ಮಾತಾಡುವಳೆ || ಸಿದ್ಧಯ್ಯ ||

ಗುರುವೇ ಒಡೆದು
ಹೊಂಬಾಳೆ ಒಳಗೆ
ಏನಂಥ ತಾಯಿ
ಒಳಗೊಳಗೆ ತಾಯಿ
ಮಾತಾಡುವಳೆ
ಕಂದ ಯಾಕಪ್ಪ ನನ್ನ ಕಂದ
ಯಾಕಪ್ಪ ನನ್ನ ಮಗನೆ
ನೀಲುಗಾರರ ಗಂಡ
ನೀಲಿ ಸಿದ್ದಪ್ಪಾಜಿ
ಯಾಕೋ ಕಂದಯ್ಯ
ದುಃಖ ಪಡುತೀಯೆ
ಸಂಕಟ ಪಡುತೀಯೆ
ಯಾಕಪ್ಪ ನನ್ನ ಮಗನೇ
ನಿನ್ನ ಕಣ್ಣಲ್ಲಿ ಕಣ್ಣೀರು ಕಂದ
ಇನ್ನೂವೆ ತಪ್ಪಲಿಲ್ವ|| ಸಿದ್ಧಯ್ಯ ||

ನಿನ್ನ ಕಣ್ಣಲ್ಲಿ ಕಣ್ಣೀರು ಕಂದs
ಇನ್ನೂವೆ ತಪ್ಪಲಿಲ್ವ ಮಗನೇ
ನೀಲುಗಾರರ ಗಂಡ ನೀಲಿ ಸಿದ್ದಪ್ಪಾಜಿ
ಯಾತುಕ್ಕೆ ದುಃಖಪಟ್ಟೀಯೆ ಯಾತುಕ್ಕೆ ಸಂಕಟ ಪಟ್ಟೀಯೆ ಅಂತ್ಹೇಳಿ

ಗೋರಿಯಿಂದ ಬಂದು ಸಿದ್ದಪ್ಪಾಜಿ ಕರೆದು
ತೊಡೇಮ್ಯಾಲೆ ಕುಂಡರಿಸಕೊಂಡು
ಮಂಡೆ ಮೈ ಸವರಿ

ಅವಳ ಮುಂಜರಿಗಿನಲ್ಲಿ ತಾಯಿ
ಮಗನ ಕಣ್ಣೀರ ತೊಡೆದಳಾಗ|| ಸಿದ್ಧಯ್ಯ ||

ಮುಂಜೆರಗಿನಲ್ಲಿs
ಮಗನ ಕಣ್ಣೀರ ತೊಡೆದು ದೊಡ್ಡಮ್ಮ
ಯಾಕಪ್ಪ ಕಂದ ಯಾತುಕ್ಕೆ ದುಃಖಪಟ್ಟಿಯೋ ಮಗನೆ ಎಂದರು
ಏನು ಅಂದರೆ ಏನು ಹೇಳಲಿ ತಾಯಿ ದೊಡ್ಡಮ್ಮ
ನಾನಾಗಿ ಹೇಳುಬಾರದು ನೀನಾಗಿ ಕೇಳುಬಾರದು ದೊಡ್ಡಮ್ಮ
ಜಗತ್ತು ಗುರು ಧರೆಗೆ ದೊಡ್ಡವರಿಂದ
ಹಲಗೂರು ಪಂಚಾಳಗೇರಿಗೆ
ಕಬ್ಬಿಣದ ಭಿಕ್ಷುಕ್ಕೆ ಹೋಗುವುದಕ್ಕೆ ಅಪ್ಪಣೆಯಾಗ್ಬುಡ್ತು ದೊಡ್ಡಮ್ಮ
ಹಗಲೂರು ಪಂಚಾಳದವರು
ಚಿನ್ನ ಬೆರಳಿ ಬಂಗಾರ ಏನನ್ನಾರ ಕೊಟ್ಟು ಬುಡ್ತಾರೆ ದೊಡ್ಡಮ್ಮ
ಕಬ್ಬಿಣ ಅಂದ್ರೆ ಅವರಿಗೆ ಕರಿ ಚಿನ್ನ ತಾಯಿ
ಕಬ್ಬಿಣ ಕೊಟ್ಟುಬುಟ್ರೆ
ನಮ್ಮ ಮಡದೀಯ ಕೊಟ್ಟಂಗೆ ಅಂತ ಹೇಳ್ತಾರೆ ದೊಡ್ಡಮ್ಮ
ನಾನು ಹೋಗಿ ಕಬ್ಬಿಣ ಭಿಕ್ಷ ಪಡಕೊಂಡು ಬಂದು
ಜಗತ್ತು ಗುರುಗಳಿಗೆ ನಾನು ಒಪ್ಪಿಸಬಲ್ಲನಾ ತಾಯಿ
ನೀನಾರೂವೆ ಧರೆಗೆ ದೊಡ್ಡೋರಿಗೆ ಹೇಳ್ಬುಟ್ಟು ದೊಡ್ಡಮ್ಮ
ಜಗತ್ತು ಗುರುಗಳಿಗೆ ನೀನಾರು ಹೇಳಿತಾಯಿ

ಅವ್ವಾ ನೀನಾರು ನನ್ನ ಪ್ರಾಣ
ಉಳಿಸು ದೊಡ್ಡಮ್ಮ ತಾಯಿ || ಸಿದ್ಧಯ್ಯ ||

ನೀನಾರು ಜಗತ್ತು ಗುರುಗಳಿಗೇಳಿ ಅಮ್ಮ
ನನ್ನ ಪ್ರಾಣ ಉಳಿಸ್ಕೊಡಿ ತಾಯಿ
ನನ್ನ ಪ್ರಾಣ ಕಾಪಾಡ್ಕೋದ ದೊಡ್ಡಮ್ಮ ಎಂದರು
ಸಿದ್ದಪ್ಪಾಜಿ
ಧರೆಗೆ ದೊಡ್ಡವರಿಂದ
ಹಲಗೂರು ಪಂಚಾಳಗೆರಿಗೇ
ಕಬ್ಬಿಣ ಭಿಕ್ಷುಕ್ಕೆ ಹೊಗಾಕೆ ಅಪ್ಪಣೆಯಾಯ್ತು
ಕಂದ ಹೇಳ್ತೀನಿ ಕೇಳು ಮಗನೆ
ರಾಚಪ್ಪಾಜಿಯವರಿಂದಪ್ಪಣೆ ಆಗ್ಬುಟ್ರಿದ್ದೆ ಕಂದ
ನನ್ನ ಮಗನ ಕಳುಹಿಸಬ್ಯಾಡಿ ಅಂತ್ಹೇಳಿ
ನನ್ನ ಮುತ್ತಿನ ಸೆರಗನಾರು ಅವರ ಪಾದಕ್ಕೆ ಹಾಸಿ
ಅವರ ಪಾದ ಹಿಡಿದು ಬಿದ್ದು ಬೇಡಕೊಂಡು
ನಿನ್ನ ಪ್ರಾಣ ಉಳಿಸ್ತಿದ್ನಲ್ಲೋ ಕಂದ
ಬಸವಣ್ಣನವರಿಂದಾರು ಅಪ್ಪಣೆಯಾಗ್ಬುಟ್ರೆ
ನನ್ನ ಮಗನ ಕಳುಹಿಸಬ್ಯಾಡಿ ಗುರುದೇವಗ ಅಂತ್ಹೇಳಿ ಕೈ ಮುಕ್ಕೊಂಡು
ನಿನ್ನ ಪ್ರಾಣ ಉಳಿಸ್ಕೊಂಡು ಕಾಪಾಡ್ಕೋತ್ತಿದ್ದ ಮಗನೇ
ಧರೆಗೆ ದೊಡ್ಡವರು ಅಂದರೆ ಕಂದ
ನಿನಗೂ ದೊಡ್ಡವರು
ನನಗೂ ದೊಡ್ಡವರು
ಈ ಭೂಮಿಗೆ ದೊಡ್ಡವರು ಈ ಭೂಲೋಕಕ್ಕೆ ಹಿರಿಯವರಲ್ಲ ಕಂದ

ಈ ಭೂಮಿಗೆ ದೊಡ್ಡವರ ಮಾತ
ಮೀರುವುದು ಉಂಟಾ ಮಗನೇ || ಸಿದ್ಧಯ್ಯ ||

ಭೂಮಿಗೆ ದೊಡ್ಡವರ ಮಾತ ಕಂದ
ಮೀರೋದು ಉಂಟಾ ಕಂದ ಸಿದ್ದಪ್ಪಾಜಿ
ನಾಳೆ ದಿವ್ಸ ದೊಡ್ಡಮ್ಮ ಹೇಳಲಿಲ್ಲ ಕೇಳಲಿಲ್ಲ ಅಂತ್ಹೇಳಿ
ನನ್ನ ಮೇಲೆ ಮಾತ್ರ ತಪ್ಪೊರಿಸಬ್ಯಾಡ ಕಂದ
ಸಿದ್ದಪ್ಪಾಜಿ ನೀನು ಹಲಗೂರಿಗ್ಹೋಗಿ
ಪಾದ ಮಡಗಿದ ಗಳುಗೇವೊಳಗೆ
ಹಲಗೂರು ಪಂಚಾಳದವರು
ಒಂಬತ್ತು ಪವಾಡ ತಂದು ನಿನ್ನ ಮುಂಭಾಗದಲ್ಲಿ ಮಡಗ್ತಾರೆ ಮಗನೇ

ಆ ಒಂಬತ್ತು ಪವಾಡಕ್ಕೂವೆ
ನಾನೆ ತಾನೆ ಬರುವುತೀನಿ || ಸಿದ್ಧಯ್ಯ ||

ಕಂದಾ ಒಂಬತ್ತು ಪವಾಡಕ್ಕೂವೆ
ನಾನೆ ತಾನೆ ಕಂದಾ
ಬರುತೀನಿ ನನ್ನ ಮಗನೇ
ಹಲಗೂರಿಗೆ ಕಂದ
ನಾ ಒಬ್ಬನೇ ಹೊಯ್ತೀನಂಥ
ಹೆದರೀಯ ನನ್ನ ಕಂದ
ಅಪ್ಪನೀ ಹೋದ ಮೇಲೆ ಕಂದ
ನಾವು ತಾನೆ ಇದ್ದೀವಪ್ಪ || ಸಿದ್ಧಯ್ಯ ||

ಹಲಗೂರಿಗೆ ನೀನು ಹೋದ ಮೇಲೆ ಕಂದs
ನಾವು ತಾನೆ ಇದ್ದೀವ ನನ್ನ ಕಂದ ಸಿದ್ದಪ್ಪಾಝಿ
ಹಲಗೂರಲ್ಲಿ ನೀನೇನಾರು ಸತ್ತೋಗ್ಬುಟ್ರೆ ಕಂದ
ನಮ್ಮ ಪ್ರಾಣ ತಾನೆ ಮಡಗವಾ ಮಗನೆ
ಹಲಗೂರಲ್ಲಿ ನನ್ನ ಕಂದ
ಮಾಡುವಂಥ ಪಾವಾಡವೆಲ್ಲ ನಿನ್ನದಾಗಲಿ
ಮಾಡುವಂಥ ಬಿರುದು ಕಂದ ಪಾವಾಡಗಳೆಲ್ಲಾನು ನೀನೆ ಒಪ್ಪುಕೋ
ಅವರು ಮಾಡುವಂಥ ಶಿಕ್ಷೆಯೆಲ್ಲಾನು ನಾವು ಮಾಡ್ತೀವಿ ಮಗನೇ
ಗುರು ಮಾತಿಗೆ ತಿರಸ್ಕಾರ ಹೇಳಬ್ಯಾಡ ಕಂದ
ಈಗಲೀಗ ನಾನು ಒಬ್ಬನೇ ಹೊಯ್ತೀನಿ ಅಂತೇಳಿ
ಚಿಂತೆ ಪಡಬ್ಯಾಡ ಯಥೆ ಪಡುಬ್ಯಾಡ ಮಗು
ಹಲಗೂರಿಗೆ ನೀನು ಹೋಗಿ
ನೀನು ಪಾದ ಉರೋದರೊಳಗಾಗಿ ಕಂದ
ನಿನ್ನ ಜೊತೇವೊಳಗೆ ಯಾರ್ಯಾರು ಬರ್ತಾರೆ ಅಂದರೆ

ನಿನ್ನ ಬಸುಮಂಗದಲ್ಲಿ ಕಂದ
ಬಸುವಣ್ಣ ಬರುವುತಾರೆ || ಸಿದ್ಧಯ್ಯ ||

ನಿನ್ನ ಕಪ್ಪಿನ ಸಾಧನೆವೊಳಗೆ
ರಾಚಪ್ಪಾಜಿ ಬರುವುತಾರೆ || ಸಿದ್ಧಯ್ಯ ||

ನಿನ್ನ ರುದ್ರಾಕ್ಷಿ ಸರದಲ್ಲಿ
ಚನ್ನಾಜಮ್ಮ ಬರುವುತಾಳೆ || ಸಿದ್ಧಯ್ಯ ||

ನಿನ್ನ ಹೃದಯ ಹೃದಯಾಕೆ ಕಂದ
ನಾನು ತಾನೆ ಬರುವುತೀನಿ || ಸಿದ್ಧಯ್ಯ ||

ನಿನ್ನ ಹೃದಯ ಹೃದಯಕ್ಕೆಲ್ಲ ಕಂದs
ನಾನೇ ತಾನೇ ಬರುತೀನಿ ಸಿದ್ಧಪ್ಪಾಜಿ
ಒಬ್ಬನೇ ಹೋಗಬೇಕಲ್ಲ ಅಂತ ಹೆದರಕೊಂಡೀಯಾ ಮಗನೇ

ಅಪ್ಪಾ ಮುಂದುಮುಂದೆ ನಡೀ ಕಂದ
ಹಿಂದಿಂದೆ ಬರುವುತೀನಿ || ಸಿದ್ಧಯ್ಯ ||

ಅಯ್ಯೋ ನನ್ನ ತಾಯಿ ದೊಡ್ಡಮ್ಮ
ಜಗತ್ತುಗುರು ಧರೆಗೆ ದೊಡ್ಡವರಿಗೆ ಹೇಳಿ
ನನ್ನ ಪ್ರಾಣ ಉಳಿಸ್ಕೊಂಡು ಕಾಪಾಡ್ತರೆ ಅಂತ ಕಾದಿದನಲ್ಲೋ ದೊಡ್ಡಮ್ಮ
ಈಗ ನೀವು ಮುಂದುಮುಂದೆ ನಡಿಯಪ್ಪ
ನಾವು ನಿನ್ನ ಹಿಂದೆಂದೆ ಬರುತೀನಿ ಅಂತ ಹೇಳ್ತೀರಿ ದೊಡ್ಡಮ್ಮ

ಹಲಗೂರಲ್ಲಿ ತಾಯೆ
ಏನಾದರೂ ನಾನು ಸತ್ತು ಕೆಟ್ಟು ಹೊರಟೋದರೆ ದೊಡ್ಡಮ್ಮ
ನಿನ್ನ ಗೋರಿ ಪಕ್ಕದಲ್ಲಿ ನನ್ನನ್ನೂ ಒಂದು ಜೀವದ ಗೋರಿ ಮಾಡ್ಕಂಡು
ನೀನು ತಕ್ಕೊಳುವಂಥಾ ಪೂಜೆವೊಳಗೆ
ನನಗೊಂದು ಪೂಜೆ ಕೊಟ್ಬುಡು ದೊಡ್ಡಮ್ಮ

ಅವ್ವ ಸತ್ತರೂವೆ ನಾನೋಗಿ
ಹಲಗೂರಲ್ಲೇ ಸಾಯ್ತೀನಿ
ಅವ್ವ ಬದುಕುದುರೂವೆ ತಾಯಿ
ನಿನ್ನ ಬಳಿಗೆ ಬರುತೀನಿ
ನಾನು ಸತ್ತರೆ ಹಲಗೂರು
ಗೆದ್ದು ಬಂದ್ರೆ ಬೊಪ್ಪಗೌಡ್ನಪುರ || ಸಿದ್ಧಯ್ಯ ||

ಗುರುವೇ ಸತ್ತರೂವೆ ತಾಯಿ
ಹಲಗೂರಲ್ಲಿ ತಾಯಿ
ಸಾಯ್ತೀನಿ ದೊಡ್ಡಮ್ಮ
ಬದುಕಿ ಬಂದರೆ ತಾಯಿ
ಹಲಗೂರಲ್ಲಿ ನಾನು
ಬದುಕಿ ಬರುತೀನಿ
ಹಾಳಾದ ಹಲಗೂರಿಗೆ
ಹೊಯ್ತೀನಿ ದೊಡ್ಡಮ್ಮ ತಾಯಿ || ಸಿದ್ಧಯ್ಯ ||

ಅಯ್ಯೋ ಹಾಳಾದ ಹಲಗೂರು
ಎಲ್ಲಿ ಇದ್ದುದೋ ಕಾಣೆ || ಸಿದ್ಧಯ್ಯ ||
ಅಪ್ಪಾ ಕಣ್ಣಿಗೆ ದಂಡೆ ಗುರುವೆ
ಕಾಲಿಗೆ ಬಹುದೂರ || ಸಿದ್ಧಯ್ಯ ||

ಹಾಳಾದ ಹಲಗೂರು ದೇವs
ಎಲ್ಲಿ ಇದ್ದುದೋ ಯಾವ್ತಾವಿದ್ದರೋ ಗೊತ್ತಿಲ್ವಲ್ಲ
ಕಣ್ಣಿಗೆ ದಂಡೆ ಕಾಲಿಗೆ ಬಹುದೂರ
ಹಾಗಂದು ನೀಲಿ ಸಿದ್ಧಪ್ಪಾಜಿ
ತಾಯಿ ದೊಡ್ಡಮ್ಮನ ಪಾದ ನೆನೆಯುತ್ತಾ
ರಾಜ ಬೊಪ್ಪಗೌಡ್ನ ಪುರಕ್ಕೆ ಕೈಯೆತ್ತಿ ಮುಗೀತಾ ಗುರುವು

ಅವರು ಎಳೆಯ ಕುಂದೂರು ಬೆಟ್ಟಕ್ಕೆ
ಓಡಿ ಓಡಿ ಬಂದರಲ್ಲ || ಸಿದ್ಧಯ್ಯ ||

ಗುರುವೇ ಎಳೇಯ ಕುಂದೂರು
ಬೆಟ್ಟಕ್ಕೆ ಗುರುವೂ
ಓಡಿ ಓಡಿ ಬಂದು
ಕುಂದೂರು ಬೆಟ್ಟದ
ಕೊಡೆಯ ಕಲ್ಲಿನ ಮೇಲೆ
ಬಂದು ನಿಂತುಕೊಂಡು
ಗುರುವೇ ಪೂರ್ವ ಪಶ್ಚಿಮ
ಉತ್ತರ ದಕ್ಷಿಣ್ಯ ನಾಕು ಮೂಲೆ ಗುರುವು
ಎಂಟು ದಿಕ್ಕು ದೇವ
ಕಣ್ಣಾರೆ ನೋಡಿ
ನಿಂತವರೇ ನನ್ನ ಗುರುವು

ಎತ್ತಾಗು ನೋಡಿದರೂ
ಹಲಗೂರು ಕಾಣಲಿಲ್ಲ || ಸಿದ್ಧಯ್ಯ ||

ಎಲೆಯ ಕುಂದೂರು ಬೆಟ್ಟಕ್ಕೆ ಬಂದುs
ನೀಲಿಗಾರರ ಗಂಡ ನೀಲಿ ಸಿದ್ದಪ್ಪಾಜಿ
ಕೊಡೇ ಕಲ್ಲಿನ ಮೇಲೆ ಬಂದು ನಿಂತ್ಕಂಡ್ರು ಸ್ವಾಮಿ
ಕೊಡೇ ಕಲ್ಲಿಗೆ ಬಂದಾಗ ದೇವ
ಪೂರ್ವ ಪಶ್ಚಿಮ ಉತ್ತರ ದಕ್ಷಿಣ್ಯ
ನಾಕು ಮೂಲೆ ಎಂಟು ದಿಕ್ಕ
ದುರುಬಿ ದೃಷ್ಟಿ ಮಡಗಿ ನೋಡುದ್ರು ಸಿದ್ದಪ್ಪಾಜಿ
ಎತ್ತಾಗ ತಿರುಗಿ ನೋಡಿದ್ರೂವೆ
ಹಲಗೂರೇ ಗೋಚರವಾಗಲಿಲ್ಲ
ಹಲಗೂರು ಪಾಂಚಾಳಗೇರಿಯ
ಏಳನೂರು ಹೆಗ್ಗುಲುಮೆಗಳ ಬೆಂಕಿ
ಹೊಗೆ ಮಾತ್ರ ಆಕಾಶಕ್ಕೆ ಹೊಯ್ತಿತ್ತಂತೆ
ಚಿನ್ನಬೆರಳಿ ಹೊಗೆ ಆಕಾಶಕ್ಕೆ ಹೋಗುವುದ
ನೋಡುಬುಟ್ಟು ಸಿದ್ದಪ್ಪಾಜಿ
ಆಗಲೀಗ ಆಕಾಶದಲ್ಲಿರ್ತಕ್ಕಂಥ ಹಕ್ಕಿಪಕ್ಷಿ ಜೀವಜಂತು ಪ್ರಾಣಿಗಳೆಲ್ಲ
ಹೊಗೆಗೆ ಸಿಕ್ಕರೆಕ್ಕೆ ಪುಕ್ಕವೆಲ್ಲ ಬೆಂದೋಗಿ
ಸತ್ತು ಸತ್ತು ಭೂಮಿಗೆ ಉದುರುತ್ತಿದ್ದುವಂತೆ
ಉದುರುವಂಥ ಪಕ್ಷಿಗಳ ನೋಡುಬುಟ್ಟು
ಆಕಾಶಕ್ಕೆ ಹೋಗುವಂಥ ಹೊಗೆ ನೋಡ್ಬುಟ್ಟು ಸಿದ್ದಪ್ಪಾಜಿ
ಅದು ಹಲಗೂರು ಪಂಚಾಳಗೇರಿ ಹೊಗೆಯೇ ಇರಬೇಕು ಅಂತೇಳಿ

ಅಯ್ಯಾ ಹೊಗೆಯನ್ನೇ ನೋಡುತಾನೆ
ಬಾಳ ಭಯ ಪಟ್ಟನಲ್ಲ || ಸಿದ್ಧಯ್ಯ ||

ಅಲ್ಲಿ ಹೋಗುವಂಥ ಹೊಗೆ ಹಲಗೂರಿನದಿರಬಹುದು ದೇವಾs
ಅಲ್ಲಿ ಕಾಣುವಂಥ ಹೊಗೆ ಹಲಗೂರಿನದಿರಬಹುದು ಎನುತೇಳಿ
ಸಿದ್ಧಪ್ಪಾಜಿ ಹೊಗೆ ನೋಡ್ಕಂಡು ದುಃಖಳಿಸಿ ದುಃಖಪಡ್ತ
ಎಡಬಲ ಸುತ್ತುಮುತ್ತ ನೋಡುದ್ರಂತೆ
ಆಗಲೀಗ ಮೂರ್ನಾಮದ ದಾಸಯ್ಯ ಮೂಲಲ್ಲಿ ಮುತ್ತತ್ತಿರಾಯ

ಅವನು ರೆಕ್ಕೆ ಮರದ ಅಂಡಲ್ಲಿ
ತಟ್ಟವೊತ್ತನೆ ಒದ್ದಾಡುತಾನೆ || ಸಿದ್ಧಯ್ಯ ||

ಗುರುವೇ ಕಕ್ಕೆ ಮರದಂಡಲ್ಲಿ
ಮೂಲೇಲಿ ಮುತ್ತತ್ತಿರಾಯ
ಮೂರ್ನಾಮದ ದಾಸಪ್ಪ
ಕಕ್ಕೆಮರದ ಅಂಡಲ್ಲಿ
ಸಿದ್ದಪ್ಪಾಜಿಯವರ
ನೋಡ್ಬುಟ್ಟು ನನ್ನ ಗುರುವು
ಅಯ್ಯೋ ಹಲಗೂರು ದೊರೆಗೋಳು
ಇವರು ಅಂತ ನನ್ನ ಗುರುವು
ಅವನು ಕಕ್ಕೆ ಮೆಳೆಯ ಅಂಡಲ್ಲಿ
ಅಂಡತ್ಕಂಡು ಮಲಗಿಕೊಂಡ|| ಸಿದ್ಧಯ್ಯ ||

ಕಕ್ಕೆ ಮರದ ಅಂಡಲ್ಲಿ ದೇವs
ಸಿದ್ದಪ್ಪಾಜಿಯವರ ನೋಡ್ಬುಟ್ಟು
ಅಡುತ್ಕಂಡು ಗಡಗಡನೆ ನಡುಗ್ತ ಧರಧರನೆ ಒದರುತ್ತ
ಆಗಲೀಗ ಮೂಲಿಗ ಮುತ್ತತ್ತಿರಾಯ ಮೊಕ್ಕಡನಾಗಿ ಮಲಗಿದ್ದ
ಮನುಗಿದ್ದಂಥ ಮೂರ್ನಾಮದ ದಾಸಪ್ಪನನ್ನು
ಕಣ್ಣಿಂದ ನೋಡ್ಬುಟ್ಟು ಸಿದ್ದಪ್ಪಾಜಿ
ಏನಪ್ಪ ಮೂರ್ನಾಮದ ದಾಸಯ್ಯ
ಯಾಕೋ ಕಕ್ಕೆ ಮರದಂಡಲ್ಲಿ ಬಿದ್ದುಕೊಂಡು ಯಾಕೆ ಒದ್ದಾಡಿಯಪ್ಪ

ಲೋ ಕಕ್ಕೆ ಮರ ಬಿಟ್ಟು ನೀನು
ಹೊರಗೆ ಬಪ್ಪಾ ಎಂದರಲ್ಲ || ಸಿದ್ಧಯ್ಯ ||

ಕಕ್ಕೆ ಮರ ಬುಟ್ಟುಬುಟ್ಟು ಹೊರಗೆ ಬಪ್ಪಾ
ಬಾ ಕಂದ ಎಂದರು
ಅಯ್ಯೋ ಗುರುದೇವ ಅಯ್ಯೋ ನನ್ನಪ್ಪ
ನೀವು ಯಾರು ಬುದ್ದಿ
ನೀವು ಎಂತು ಹಲಗೂರವರೋ ಯಾವೂರಪ್ಪ ಎಂದರು
ಲೋ ದಾಸಪ್ಪ
ನಾನು ಹಲಗೂರವ್ನಲ್ಲ ಕಣಪ್ಪ
ಧರೆಗೆದೊಡ್ಡವರ ಮಗ ಸಿದ್ದಪ್ಪಾಜಿ
ನಮ್ಮ ತಂದೆ ರಾಚಪ್ಪಾಜಿ
ತಾಯಿ ದೊಡ್ಡಮ್ಮ ತಾಯಿ
ಅವರು ಮೂರು ಜನಕ್ಕೂ ನಾನು ಒಬ್ಬ ಮಗ ಕಣೋ
ನನ್ನ ಹೆಸ್ರು ಸಿದ್ದಪ್ಪಾಜಿ ಕಣಪ್ಪ ಎಂದರು
ಅಯ್ಯೋ ಸಿದ್ದಪ್ಪಾಜಿಯವರೇ
ಇಲ್ಲಿಗಂಟ ಯಾಕೆ ಬಂದ್ಬುಟ್ರಿ ನೀವು?
ಈವೊತ್ತು ಸಟ್ಟ ಸನುವಾರ ಎನುತೇಳಿ ಗುರುದೇವ
ಎದ್ದು ಸ್ನಾನ ಮಾಡ್ಕೊಂಡು ಸ್ವಾಮಿ
ಹಳದಿ ಅಂಗರೀಕ ಇಕ್ಕೊಂಡು
ಈ ಬೆರೆಬೆರೆತ ಕಾವಿ ಸುತ್ಕೊಂಡು
ನಾಮ ನೇಮನೆ ಮಾಡ್ಕೊಂಡು
ಈ ಜಾಗಟೇ ತಕ್ಕೊಂಡು
ಈ ಸಂಕನೇ ಹೊತಕೊಂಡು
ಈ ಗಂಟೇನೇ ತಕ್ಕೊಂಡು
ಎಲ್ಲಾ ಊರ್ಗೂ ಹೊಯ್ತೀನಿ ಒಸೊಸಿ ಸಿಗ್ತದೆ ಭಿಕ್ಷಾ
ಹಲಗೂರ್ಗೆಂಟೋಗ್ಬುಟ್ರೆ ದೊಡ್ಡ ಪಟ್ನವಾಗದೆ
ಅಲ್ಲಿಗೊಂಟೋಗ್ಬುಟ್ರೆ ನನಗೆ
ಜೋಳ್ಗೆ ತುಂಬ ಭಿಕ್ಷ ಸಿಕ್ಬುಡ್ತದೆ ಅಂತೇಳಿ
ಯಾವುರ್ನೂ ಬಿಟ್ಟುಬುಟ್ಟು

ಹಲಗೂರು ಭಿಕ್ಷಕೆ ನಾ
ಹೋದಿ ನನ್ನ ಗುರುವು || ಸಿದ್ಧಯ್ಯ ||