ಧರೆಗೆ ದೊಡ್ಡವರಿಗೆ ದತ್ತು ಮಗನಾಯ್ತಿನಿ ಸ್ವಾಮಿ
ಖಂಡಾಯ ಹೊರವರಿಗೆ ಕಂದನಾಗಿ ಹೊಯ್ತಿನಿ ಗುರುವೆ
ಮಂಟೇದಾಲಿಂಗಪ್ಪನಿಗೆ ಮಗನಾಯ್ತಿನಿ ನನ್ನಪ್ಪ ಎಂದರು
ಕೆಂಪಣ್ಣ
ಈಗಲೀಗ ನನಗೂ ಮಗನಾಯ್ತಿನಿ ಅಂತೇಳಿ ಹೇಳಿತಿಯಲ್ಲೊ ಕಂದಾ
ನನಗೆ ಮಗನಾದ ಮೇಲೆ ಕಂದಾ
ನನಗೆ ದತ್ತು ಮಗ ಆದ ಮೇಲೆ
ನನಗೆ ಶಿಸುಮಗ ನೀನಾದ ಮೇಲೆ ಮಗನೇ
ನಿಮ್ಮ ತಾಯಿ ಕಟ್ಟಿರೊ ಉಡುದಾರ
ಯಾಕೆ ಮಡಗಿದ್ದಿಯೊ ಕಂದಾ
ನಿಮ್ಮ ತಂದೆ ಕಟ್ಟಿರುವಾ
ಜನಿವಾರಾ ಯಾತಕೆ ಮಡಿಕಂಡಿದ್ದಿಯೋ ಮಗನೆ

ನಿಮ್ಮ ತಾಯಿ ಕಟ್ಟಿರೋ ಉಡುದಾರವ
ಕಿತ್ತಾಕಿಬುಡು ಎಂದರಂತೆ || ಸಿದ್ಧಯ್ಯ ||
ನಿಮ್ಮ ತಾಯಿ ಕಟ್ಟಿದ ಕಂದಾ
ಉಡುದಾರನ ಮಗನೆ
ಕಿತ್ತು ನೀರಿಗೆ
ಇಟ್ಟು ಬುಡು ನನ ಕಂದಾ
ನಿಮ್ಮ ತಂದೆ ಕಟ್ಟಿರುವಂತಾ
ಜನಿವಾರವ ತಗದು
ನೀರಿಗೆ ಬುಟ್ಟು ಬುಡು
ಅಪ್ಪ ತಾಯಿ ತಂದೆ ಕೊಟ್ಟ ಹೆಸರು
ಇಂದಿಗೆ ಹಾಳಾಗೋಗಲಿ || ಸಿದ್ಧಯ್ಯ ||

ನಿಮ್ಮ ತಾಯಿ ತಂದೆ ಕಟ್ಟಿದಾ ಹೆಸರುs
ಇವತ್ತಿಗೆ ಹಾಳಾಗಿ ಬುಡಲಿ ಮಗನೇ
ಈ ಉಡುದಾರ ಜನಿವಾರ ಕಿತ್ತಾಕಿಬುಡು ಕಂದಾ ಎಂದುರು
ಧರಗೆ ದೊಡ್ಡೋರ ಮಾತ ಕೇಳಿಕಂಡು ಕೆಂಪಣ್ಣ

ಅಯ್ಯಾ ಉಡುದಾರ ನೋಡಿಕಂಡು
ತಾಯಿ ಗ್ಯಾನ ಮಾಡುತಾನೆ || ಸಿದ್ಧಯ್ಯ ||

ನನ್ನ ಅಂದಚಂದಾ ನೋಡುಲಾರದೆ
ರೂಪುರೇಖೆ ದೇವಾ
ನೋಡಲಾರದೆ ಗುರುವು
ನನ್ನ ತಾಯಿ ಮುದ್ದಮ್ಮ
ನಡಿಗೆ ಗುರುವೆ
ಉಡುದಾರ ಕಟ್ಟಿದ್ದರು
ನಮ್ಮ ತಾಯಿ ಕಟ್ಟಿದ ಉಡುದಾರವಾ
ಹ್ಯಾಗೆ ತಾನೆ ಕೀಳಲಯ್ಯೊ || ಸಿದ್ಧಯ್ಯ ||
ನಮ್ಮ ತಂದೆ ಹಾಕಿದ ಜನಿವಾರವ
ಹ್ಯಾಗೆ ತಾನೆ ತಗಿಯಲಪ್ಪ || ಸಿದ್ಧಯ್ಯ ||

ನಮ್ಮ ತಾಯಿ ತಂದೆ ಕಟ್ಟುದಾ
ಉಡುದಾರ ಜನಿವಾರ
ಯಾವ ರೀತಿ ಒಳಗೆ ನಾನು ತಗಿಬೇಕು ಎನುತೇಳಿ ಕೆಂಪಣ್ಣ
ಉಡುದಾರ ನೋಡುತಾನೆ
ಜನಿವಾರ ನೋಡುತಾನೆ ಕಂದಾ

ಅವರ ತಂದೆ ತಾಯಿ ನೆನಕೊಂಡು
ಗುಳುಗುಳನೆ ಅಳುತಾನೆ || ಸಿದ್ಧಯ್ಯ ||

ನಮ್ಮ ತಾಯಿ ಕಳಕಂಡೆ
ನಮ್ಮ ತಂದೆ ಕಳಕಂಡೆ
ನಾನು ಅಣ್ಣ ತಮ್ಮನ ದೇವಾ
ಕಳಕಂಡೆ ನನ್ನ ಗುರುವು
ನನ್ನ ಜನ ಜಾತಿನೆಲ್ಲ
ಕಳಕಂಡೆ ನನ್ನಪ್ಪ
ನಾ ಯಾರಿಗೆ ಹುಟ್ಟಿ ಗುರುವೆ
ಯಾರಿಗೆ ಮಗನಾಗಲಪ್ಪ || ಸಿದ್ಧಯ್ಯ ||

ಗುರುವೆ ಯಾರಿಗೆ ಹುಟ್ಟಿದ್ದಿ
ಯಾರಿಗೆ ನಾ ಬೆಳದಿ
ಎಲ್ಲಿ ಹುಟ್ಟಿದ್ದಿ ನಾನು
ಎಲ್ಲಿಗೋಗಿ ಬೆಳದಿ
ಎಲ್ಲಿಗೆ ನಾನು
ಬಂದು ಸೇರಿಕಂಡಿ
ನಾನು ಒಂದು ಜಾತಿಲಿ ಹುಟ್ಟಿ
ಒಂದು ಜಾತಿಲಿ ಬೆಳೆದು
ಒಂದೆ ಜಾತಿಗೆ ಬಂದು
ನಾನು ಯಾರುಗಪ್ಪ ಅನುಲಿ
ನಾನು ಯಾರುಗವ್ವ ಅನಲಿ
ಈ ಖಂಡಾಯ ಹೊತ್ತವರಿಗೆ
ಕಂದಾ ಆಗ ಬರಬಹುದಾ || ಸಿದ್ಧಯ್ಯ ||

ಈ ಮಂಟೇದಾ ಲಿಂಗಯ್ಯನಿಗೆ
ಮಗನಾಗಿ ಬರಬಹುದಾ || ಸಿದ್ಧಯ್ಯ ||

ಒಂದು ಜಾತಿಲಿ ಉಟ್ಟಿ ಒಂದು ಜಾತಿಗೆ ಬಂದು s
ಯಾರಿಗೆ ಅಪ್ಪ ಅನ್ನುಲಿ ಯಾರಿಗೆ ಅವ್ವ ಅನ್ನಲಿ ಗುರುವು
ಈ ಕಂಡಾಯ ಹೊತ್ತವರಿಗೆ ಕಂದನಾಗಿ ಬಂದೆನಲ್ಲ
ಈಗಲೀಗಾ ಇಂತ ಧರೆಗೆ ದೊಡ್ಡವರಿಗೆ
ದತ್ತು ಮಗನಾದೆನಲ್ಲೋ ಎನುತೇಳಿ ಎಳೆ ಕೆಂಪಣ್ಣ
ತಾಯಿ ತಂದೆ ನೆನಕಂಡು
ಕಣ್ಣೀರ ಸುರಿಸುತ ನಡುವೊಳೆಯಲಿ ನಿಂತಿದ್ದ
ಆಗಲೀಗಾ ತೋಪಿನ ದೊಡ್ಡಮ್ಮ
ಕಿಡುಗಣ್ಣು ರಾಚಪ್ಪಾಜಿ
ಅಳುವಂತ ಮಗನ ನೋಡಿ
ಬಂದು ಮುಂಭಾಗದಲಿ ನಿಂತುಗಂಡು
ಕೆಂಪಣ್ಣ
ಯಾತಕೆ ದುಃಖ ಪಟ್ಟಿಯಾ ಮಗನೆ
ಯಾತಕೆ ಸಂಕಟ ಪಟ್ಟಿಯೋ ಕಂದಾ
ಈಗಲೀಗಾ ತಾಯಿ ತಂದೆ ನೆನಕಂಡು ದುಃಖ ಮಾಡಿಯಾ ಮಗನೇ
ಈಗಲೀಗಾ ಗುರು ಕೊಟ್ಟ ಶಾಪಕ್ಕೆ
ಸಿಕ್ಕಿ ನನ ಕಂದಾ ಹನ್ನೆರಡು ವರುಷದಿಂದ ನರಳಿದ್ದಿಯಾ ಕಂದಾ
ಗುರುಕೊಟ್ಟ ವಾಗುತಾನಕ್ಕೆ ತಪ್ಪಬೇಡ ಮಗನೆ

ಅಪ್ಪ ತಾಯಿ ನಾನಾಗುತಿನಿ
ಉಡುದಾರ ಕೀಳು ಮಗನೆ || ಸಿದ್ಧಯ್ಯ ||

ಅಯ್ಯೊ ತಾಯಿ ನಾನು ಆಯ್ತಿನಿ ನನ ಕಂದಾs
ನಿಮ್ಮ ತಾಯಿ ಕಟ್ಟಿದ ಉಡುದಾರವ ಕಿತ್ತು ಬುಡು ನನ್ನ ಕಂದಾ
ಹಾಗಂದವಳೆ ದೊಡ್ಡಮ್ಮ
ಗುರುವೆ ತೋಪಿನ ದೊಡ್ಡಮ್ಮನ ಮಾತನೆ ಕೇಳಿಕಂಡು

ಎಳಿಯವನು ಕಂದಾ
ಕಿರಿಯವನು ಕೆಂಪಣ್ಣ
ಅವನು ದೊಡ್ಡಮ್ಮ ತಾಯಿ ಕೊರಳ
ತಬ್ಬಿಕೊಂಡು ನನ್ನ ಕಂದಾ
ಅವನು ತಾಯಿ ಕಟ್ಟಿದ ಉಡುದಾರವ
ಕಿತ್ತು ನೀರಿಗೆ ಬುಡುವುತಾನೆ || ಸಿದ್ಧಯ್ಯ ||

ಅವ್ವ ತಾಯಿಲ್ದಾ ಮಗನಿಗೆ
ನೀನೆ ತಾಯಿ ಎಂದನಲ್ಲಾ || ಸಿದ್ಧಯ್ಯ ||

ದಿಕ್ಕಿಲ್ಲದ ಮಗನಿಗೆ ಅಮ್ಮs
ನೀನೆ ನನಗೆ ತಾಯಿ ಕಣವ್ವ
ತೋಪಿನ ದೊಡ್ಡಮ್ಮ ಎನುತೇಳಿ
ದೊಡ್ಡಮ್ಮ ತಾಯಿ ಕೊರಳ ತಬ್ವಿಕೊಂಡು ಕಂದಾ
ತಾಯಿ ಕಟ್ಟಿರುವಾ ಉಡುದಾರ ಕಿತ್ತು ನೀರಿಗೆ ಬಿಟ್ಟುಬುಟ್ಟು ಕಂದಾ
ಬಲಗಡೆ ನಿಂತಿರುವಂತ ರಾಚಪ್ಪಾಜಿ ಮುಖ ನೋಡಿಕಂಡು ಕಣ್ಣೀರು ಸುರಿಸುವಾಗ
ಕಿಡುಗಣ್ಣು ರಾಚಪ್ಪಾಜಿಯವರು
ಕೆಂಪಾಚಾರಿ ಮಗನ ಕಣ್ಣಿಂದ ನೋಡಕಂಡು ಯಾಕಪ್ಪ ಮಗನೆ
ಧರೆಗೆ ದೊಡ್ಡವರ ಮಾತಿಗೆ ತೆಪ್ಪಬೇಡ ಕಂದಾ
ಗುರುಗೆ ಕೊಟ್ಟಂತ ವಾಕುತಾನಕ್ಕೆ
ಮೀರು ಬ್ಯಾಡ ಮಗನೆ
ನಿಮ್ಮ ತಂದೆ ಕಟ್ಟಿರುವಂತಾ
ಜನಿವಾರ ಕಿತ್ತಾಕಿಬುಡು ಕಂದಾ

ಅಪ್ಪ ತಂದೆ ಇಲ್ಲದ ಮಗನಿಗೆ
ನಾನೆ ತಂದೆ ಆಗುತೀನಿ || ಸಿದ್ಧಯ್ಯ ||

ಗುರುವೆ ರಾಚಪ್ಪಾಜಿಯವರ
ಮಾತನೆ ಕೇಳಿಕೊಂಡು
ಎಳೆಯವನು ಕೆಂಪಣ್ಣ
ಈ ಎರಡೊಳೆ ಕೂಡುದಾ
ನದಿ ಒಳಗೆ ಗುರುವು
ತೋಪಿನ ದೊಡ್ಡಮ್ಮ ನನಗೆ
ಹೆತ್ತ ತಾಯಿ ಆಗವಳೆ
ಈ ರಾಚಪ್ಪಾಜಿಯವರು
ನಮ್ಮ ಪಡದ ತಂದೆಯಂಗೆ
ಇವರುವೆ ಕಾಣುತವರೆ
ನನಗೆ ಇಲ್ಲೆ ತಾಯಿ ತಂದೆ
ಸಿಕ್ಕುದುರು ಅನುತೇಳಿ
ಎಳಿಯವನು ಕೆಂಪಣ್ಣ
ಅವನು ತಂದೆ ಕಟ್ಟಿದ ಜನಿವಾರವ
ಕಿತ್ತು ನೀರಿಗೆ ಬುಡುವುತಾನೆ || ಸಿದ್ಧಯ್ಯ ||

ತಂದೆ ಕಟ್ಟಿರುವಾ
ಜನಿವಾರ ಜಗುದು ನೀರಿಗೆ ಬಿಟ್ಟುಬುಟ್ಟು ಕಂದಾ
ಆಗಲೀಗಾ ಬಲದಲ್ಲಿ ರಾಚಪ್ಪಾಜಿ
ಮಗನಾ ಕೈಯಿಡಕಂಡು
ಎಡದಲ್ಲಿ ತೋಪಿನ ದೊಡ್ಡಮ್ಮ
ಮನಗಾ ಕೈ ಯಿಡಕಂಡು
ಆಗಲೀಗಾ ಬಾರೋಕಂದಾ ಬಾಪ್ಪ ಬಾ ಮಗನೆ ಎನುತೇಳಿ

ಧರೆಗೆ ದೊಡ್ಡವರ ಬಳಿಗೆ
ಕರಕಂಡು ಬರುವುತಾರೆ || ಸಿದ್ಧಯ್ಯ ||

ಗುರುವೆ ಧರೆಗೆ ದೊಡ್ಡವರ ಬಳಿಗೆ
ಕರಕಂಡು ನನ ಗುರುವು
ಬರುವಂತ ಕಾಲದಲ್ಲಿ
ನನ್ನ ಹೆತ್ತಯ್ಯ ಗುರುವು
ಮಾಯ್ಕಾರದ ಒಡೆಯ
ಪರಂಜ್ಯೋತಿಯವರು
ಅವರು ಕರಕಂಡು ಬರುವಂತಾ
ರಾಚಪ್ಪಾಜಿಯವರ
ಕಣ್ಣಾರೆ ನೋಡಕಂಡು
ಗುರುವೆ ಕರಕಂಡು ಬರುವಂತಾ
ತೋಪಿನ ದೊಡ್ಡಮ್ಮನ
ಮೊಕವನೆ ನೋಡಿಕಂಡು
ಅವರು ಸಂತೋಸ ಪಟ್ಟಾರಂತೆ
ಹೆತ್ತಯ್ಯ ಮಂಟೇದುಸ್ವಾಂಇ || ಸಿದ್ಧಯ್ಯ ||

ಕರಕಂಡು ಬರುವಂತ ಮಗನ ನೋಡಿಕಂಡು ದೇವಾs
ಮನದಲ್ಲಿ ಚಿಂತೆ ಪಡುತಿದ್ದಂತಾ ಜಗತ್ತು ಗುರು ಧರೆಗೆ ದೊಡ್ಡಯ್ಯ
ಈಗಲೀಗ ಬಂದು ಮಗನಾ ಕಣ್ಣಿಂದ ನೋಡಿಕಂಡು
ಮುಂಬಾಗದಲಿ ನಿಲ್ಲಿಸಿಗಂಡು
ಕೇಳಿರವ್ವ ಕಂದಾ ತೋಪಿನ ದೊಡ್ಡಮ್ಮ
ಈ ಭೂಮಿ ಭೂಲೋಕಕ್ಕೆ
ನಡುವೆ ನರಲೋಕದಲ್ಲಿ ಕಂದಾ
ತಾಯಿ ತಂದಿಲ್ಲವಂತಾ ಮಗನಾ
ದತ್ತು ಮಗನ ಮಾಡಿಕಂಡ್ರು
ಧರೆಗೆ ದೊಡ್ಡೋರು ಅನುವಂತಾ
ನಾಮಕರಣ ಬರುತದೆ ಕಂದಾ
ತಾಯಿ ತಂದೆ ಸತ್ತಂತ
ಮಗನ ಪಡಕಂಡ್ರು ಅನುತೇಳಿ
ಈಗಲೀಗಾ ಧರೆಗೆ ದೊಡ್ಡವರಿಗೆ ಅಪಕೀರ್ತಿ
ನಾಳೆ ದಿವಸ ಬಂದ್ರು ಬರಬಹುದು ಮಗಳೇ
ಈಗ ನಡುವೊಳೆವಳಗೆ ಮಾತಾಡಿದ ಮಾತು
ನನ್ನ ಪಾದುಕರುವಾಯ್ತು ದೊಡ್ಡಮ್ಮ
ಈಗಲೀಗಾ ನಾನೇ ತಾಯಾಯ್ತಿನಿ ಅನುತೇಳಿ
ಉಡುದಾರ ಕಿಳಿಸ್ದೊಳು ನೀನು
ನಾನುತಂದೆ ಆಯ್ತಿನಿ
ನಿಮ್ಮ ತಂದೆ ಕಟ್ಟಿದ್ದ ಜನಿವಾರ ತಗುದಾಕಿಬುಡು ಮಗನೆ ಅಂತಾ
ತಗಿಸ್ದೋರು ರಾಚಪ್ಪಾಜಿ
ಈಗ ನಿಮಗೆ ಮಗನಾಗಿ ಮಾಡಿಕಂಡು
ನನ್ನ ಬಳಿಗೆ ಕರಕಂಡು ಬಂದಿದ್ದಿರಿ ಕಂದಾ
ಈಗ ನಮ್ಮ ಮಗನ ನೀವು ಮಾಡಬೇಕಾದ್ರೆ
ದೊಡ್ಡಮ್ಮ ರಾಚಪ್ಪಾಝಿ
ಇನ್ನು ನಮ್ಮ ಮಗನಲ್ಲ ಸ್ವಾಮಿ ನಿಮ್ಮ ಮಗನೆ ಎನುತೇಳಿ

ನೀವು ಸತಿಪತಿ ಕೈಯ ಹಿಡುದು
ನನ್ನ ಕೈಗೆ ಕೊಡಿರವ್ವ || ಸಿದ್ಧಯ್ಯ ||

ಕೈಯಿಡುದಿ ನನ ಕಂದಾ s
ನನ್ನ ಕೈಗೆ ಕೊಟ್ಟು ಬುಡಿ ಮಕ್ಕಳೆ ಕೊಡ್ರವ್ವ ಎಂದುರು
ಆಗಲೀಗಾ ಕೆಂಪಚಾರಿ ಕೈಯಿಡುದು
ರಾಚಪ್ಪಾಜಿ ತೋಪಿನ ದೊಡ್ಡಮ್ಮ
ಧರೆಗೆ ದೊಡ್ಡವರಾ ಅಂಗೈಯ ಅಸ್ತಕ್ಕೆ ಗುರುದೇವಾ
ಏನಂತ ಕೊಡ್ತಾರೆಂದರೆ

ಅಪ್ಪ ತಂದೆ ತಾಯಿ ಇಲ್ಲದಂತಾ
ಮಗನಲ್ಲ ಇವನು ಗುರುವು || ಸಿದ್ಧಯ್ಯ ||

ಗುರುವೇ ನಾನು ಹೆತ್ತ ಮಗಾ
ನಾನು ಪಡೆದ ಶಿಸುಮಗಾ
ಎನುತೇಳಿ ಗುರುವು
ತೋಪಿನ ದೊಡ್ಡಮ್ಮ
ನನ್ನ ಕಿಡಗಣ್ಣು ರಾಚಪ್ಪಾಜಿ
ಮಗನ ಎರಡೂ ಕೈಯ
ಹಿಡಕಂಡು ನನ ರಾಚಪ್ಪ
ಅಪ್ಪ ನಮ್ಮ ಮಗನಲ್ಲ ಎನುತೇಳಿ
ಕೈ ಹಿಡಿದು ಕೊಡುವುತಾರೆ || ಸಿದ್ಧಯ್ಯ ||

ಕೈಯಿಡಿದು ಗುರುದೇವಾ
ಧರೆಗೆ ದೊಡ್ಡವರ ಕೈಲಿ ಕೊಟ್ಟರು ಗುರುವು
ಆಗಲೀಗಾ ಕೊಟ್ಟಂತ ಮಗನಾ
ಆಗಲೀಗಾ ಅಂಗೈ ಒಡ್ಡಿ ಮಗನಾ
ದತ್ತು ದಾನ ತಕಂಡು ಧರೆಗೆ ದೊಡ್ಡಯ್ಯ ಮಂಟೇದುಸ್ವಾಮಿ
ತಾವಾಗೆ ಬಂದು ಜಗತ್ತು ಗುರುಗಳ
ಮುಂಭಾಗದಲ್ಲಿ ನಿಂತುಗಂಡ ಕೆಂಪಣ್ಣ
ಆಗ ನಿಂತುಗಂಡ ಮಗನ ನೋಡಿಕಂಡು
ಬಾರೋ ನನ ಕಂದಾ ಬಾಪ್ಪ ಶಿಸುಮಗನೆ ಎನುತೇಲಿ ಧರೆಗೆ ದೊಡ್ಡಯ್ಯ
ಕರಿ ಕಂಬಳಿ ಗದ್ದಿಗೆ ಊಡಿ
ಕರಿ ಕಂಬಳಿ ಗದ್ದಿಗೆ ಮೇಲೆ ಕೆಂಪಾಚಾರಿ ಮಗನಾ ಕುಂಡ್ರಿಸಿ
ಆಗಲೀಗಾ ಆರುಸಾಸ್ತ್ರಪುರಾಣ ಪಾರಾಯಣವೆ ಓದಿ
ಜಗತ್ತುಗುರು ಧರೆಗೆ ದೊಡ್ಡಯ್ಯ

ಅವರು ಭಸುಮಂಗ ಊಬತ್ತಿ ತಗುದಾರಂತೆ
ಭಸುಮಂಗ ಒಡೆಯುತಾರೆ || ಸಿದ್ಧಯ್ಯ ||

ಗುರುವೇ ಉಬತ್ತಿಯ ತಗದು
ಭಸುಮಂಗದ ಒಡೆದು
ಗುರುವೆ ಪಂಚ ಮೊಕದ ರುದ್ರಾಕ್ಷಿಯಾ
ಕೊರಳಿಗೆ ಧರಿಸಿ
ಗುರುವೆ ಅಂಗಾಲಿಗೆ ತಕ್ಕ
ಅಂಗಾಲು ಜಂಗ ಧರಿಸಿ
ಮುಂಗೈಯಿಗೆ ತಡ್ಕ
ಮುಂಗೈ ಜಂಗ ಧರಿಸಿ
ಗುರುವೆ ಕಂಕಣಾರ್ತಿ ಮಾಡಿ
ಗುರುವೆ ಗುರುದೇವಾ
ಗುರುವೆ ಪಂಚಮೊಕದ ರುದ್ರಾಕ್ಷಿಯಾ
ಮಗನಾ ಕೊರಳಿಗೆ ಧರಿಸಿ
ಲೋ ಕೆಂಪಚಾರಿ ಎನ್ನೊ ಹೆಸರು
ಇಂದಿಗೆ ಕಂದಾ
ಹಾಳಾಗಿ ಹೊಂಟೋಗಲಿ
ಈ ಧರೆಗೆ ದೊಡ್ಡವರಿಗೆ
ದತ್ತು ಮಗ ನೀನು
ಈ ಸಿದ್ದಪ್ಪಾಜಿ ಅಂತಾ
ಈ ಲೋಕುವೆ ಕೊಂಡಾಡಲಪ್ಪ || ಸಿದ್ಧಯ್ಯ ||

ಗುರುವೆ ನಾನು ಕಟ್ಟಿದ ಎಸರು ಕಂದಾ
ನಾನು ಕಟ್ಟಿದ ನಾಮಕರಣ
ನಡುವೆ ನರಲೋಕದೊಳಗೆ
ಈ ಭೂಮಿ ಇರೋ ತನಕ
ಸಾತಿಸಾಲಾಗಿ
ಉಳಕಳ್ಳಲಿ ನನ್ನ ಕಂದಾ
ಅಯ್ಯಾ ಸಿದ್ದಪ್ಪಾಜಿ ಅನುತೇಳಿ
ಅಕ್ಕಿ ಆದ್ರು ಇಟ್ಟಾರಲ್ಲಾ || ಸಿದ್ಧಯ್ಯ ||

ಗುರುವೇ ವಿಷ್ಣು ಈಸುವರಾ ಗುರುವೆ
ಬ್ರಹ್ಮ ತ್ರಿಮೂರುತಿ
ಕಲ್ಯಾಣದ ಬಸವಣ್ಣ
ಸತ್ಯಾ ಶರಣರು
ಈಗ ಧರೆಗೆ ದೊಡ್ಡೋರು ಮಗ
ಸಿದ್ದಪ್ಪಾಜಿಯವರು
ಸಿದ್ದಪ್ಪಾಜಿ ಇವರು
ಎನುತೇಳಿ ನನ ಗುರುವು
ಗುರುವೆ ಸಿದ್ದಪ್ಪಾಜಿಗೆ
ಅಕ್ಕಿಯಾ ಇಟ್ಟವರೆ
ಧರೆಗೆ ದೊಡ್ಡೋರ ಶಿಸಮಗಾ ಎನತೇಳಿ
ಕೈ ಚಪ್ಪಾಳೆ ಒಡೆದವರಲ್ಲೋ || ಸಿದ್ಧಯ್ಯ ||

ಈಗಲೀಗಾ ಗುರುವೇ ಗುರುದೇವಾ s
ಕೈ ಚಪ್ಪಾಳೆ ಒಡೆದ ಕಾಲದಲಿ ಗುರುವು
ಸಿದ್ದಪ್ಪಾಜಿವರಿಗೆ ದೇವಾ
ಆಗಲೀಗಾ ಹಣೆಯಲಿ ಮಡ್ಡಿಕಪ್ಪು ಕೂಡ ಧರಿಸಿ
ಸಿದ್ದಪ್ಪಾಜಿ ಮಾಡಿ

ಉಲಿಚರ್ಮದ ಉಡಿಗೆ
ಉಡಿಸವರೆ ನನ ಗುರುವು
ಉಲ್ಲೇಚರ್ಮವ ಗುರುವು
ಬೆನ್ನಿಗೆ ಕಟ್ಟವರೆ
ಗುರುವೆ ಅಂಗೈಯಿನಾ ಮೇಲೆ
ನಾಗುಬೆತ್ತ ಮಡಗವರೆ || ಸಿದ್ಧಯ್ಯ ||

ಮುತ್ತಿನಾ ಜೋಳಿಗೆ ತಗುದು
ಮುಂಗೈಗೆ ಧರಿಸವರೆ
ಉತ್ತರದೇಸ್ದ ಕಂಡಾಯವ
ಹೆಗಲ ಮೇಲೆ ಮಡಗವರೆ
ಅವರಿಗೆ ಮುರಳಿನ ಪವಾಡ
ಪಾದುಕೆ ಧರಿಸವರೆ
ಗುರುವೆ ಬಾರ್ಸುವ ತಂಬೂರಿಯ
ಎದೆ ಮೇಲೆ ಧರಿಸವರೆ
ಭಾರಿಯ ಜಾಗಟೆಯ
ಮುಂಗೈಗೆ ಕೊಟ್ಟವರೆ
ಅಪ್ಪ ನನ್ನ ಬಿರುದೆಲ್ಲಾ ಕಂದಾ
ನಿನ್ನ ಬಿರುದು ಕಾಣೋ ಮಗನೆ || ಸಿದ್ಧಯ್ಯ ||