೧೦೧

ನಡೆದನು ಬೋಗನವಿಲೆಯಡಿಗೆ;
ಹರೆ ಸೋಂಕಿತು ಮುಡಿಗೆ:
ತಾಯಿಯ ಹೂವಿನ ತೋಳ್
ಹರಸಿರೆ ತಲೆಮುಟ್ಟಿ
ಅರಳಿತು ದಿಟ್ಟಿ,
ಅರಳಿತು ಬಾಳ್!

೨೯-೧-೧೯೫೮

೧೦೨

 

ತಂಗಿಯ ಮನೆ: ಏನು ತಂಪು!
ಹೆಸುರು ಏನೊ: ಕೊಳ್ಳಿಬೈಲು!
ಆದರೂ
ಮನಗೆ ಮೈಗೆ ಜೀವಕೆಲ್ಲ,
ನಡುಹಗಲಲಿ ಸುಡುಬಿಸಿಲಲಿ
ಹೊಂಗೆಯ ನೆರಳೆಂತೊ ಅಂತೆ,
ತಂಗಿಯ ಮನೆ ― ತಂಪು!

೨೭-೨-೧೯೫೮

 ೧೦೩

 

ಅಲ್ಪ ನಾನು ಎಂದು ಕುಗ್ಗಿ
ಮುದುಗ ಬೇಡವೋ:
ಓ ಅಲ್ಪವೆ,
ಅನಂತದಿಂದ ಗುಣಿಸಿಕೊ;
ನೀನ್ ಅನಂತವಾಗವೆ!

೨೩-೩-೧೯೫೮

 ೧೦೪

 

ವಿಭಾಗಿಪುದೊ ಅಹಂಕಾರ;
ಧ್ಯಾನಿಸುವುದೆ ಗುಣಾಕಾರ!
ಅಹಂಕಾರದಲ್ಪತೆಯನು
ಅನಂತ ಧ್ಯಾನದಿ
ಗುಣಾಕರಿಸಿ ವಿಸರ್ಜಿಸುತೆ,
ಆಹ್ವಾನಿಸು ಭುಮತೆಯನು
ಪ್ರದೀಪ್ತ ಜ್ಞಾನದಿ!

೨೩-೩-೧೯೫೮ 

೧೦೫

ಅಲ್ಪ ಸಂಖ್ಯೆಯಾದರೇನು?
ಮಹಾ ಸಂಖ್ಯೆಯಾದರೇನು?
ಅನಂತದಿಂದ ಗುಣಿಸಲು
ಅನಂತವಾಗುವಂತೆ, ನೀನು
ನೆನೆಯಲಾ ಅನಂತನ
ಆಗುವೆ ‘ಅನಂತ ನಾ!’

೨೩-೩-೧೯೫೮ 

೧೦೬

ನಿನ್ನ ಕೃಪೆಯ ಖರ್ಪರ
ಸದಾ ರಕ್ಷೆಯಾಗಲಿ:
ವಿಪನ್‌ನದೀ ಪ್ರವಾಹಕೆ
ಬದುಕು ಬಂಡೆವೋಗಲಿ!
ಬೆಂಡಿನಂತೆ ತೇಲಲಿ;
ಜೊಂಡಿನಂತೆ ಬಾಗಲಿ;
ಉರಿವ ಉಂಡೆ ಕರ್ಪ್ಪುರ
ಕೆಂಡದೊಣಿಯಾಗಲಿ!
ದೂರ ಕರೆವ ನಿನ್ನ ಅಡಿಯೆ
ಕಡಲ ದಂಡೆಯಾಗಲಿ!

೧೯-೩-೧೯೫೯ 

೧೦೭
ಕೆಟ್ಟ ಕನಸು

ಕರ್ಮದ ಕೇಡೇನಿದ್ದರೂ
ಕನಸಿನಲ್ಲೆ ಕಳೆಯಲಿ;
ಧರ್ಮದ ಲೇಸೇನಿದ್ದರೂ
ನನಸಿಲನಲ್ಲೆ ಬೆಳೆಯಲಿ.

೨೧-೩-೧೯೫೯ 

೧೦೮

ಮಲ್ಲಿಗೆಯ ಹೋವಿಂದ ಮನೆಯೆಲ್ಲ ಘಂ!
ಮುಡಿಯುವವಳಿಲ್ಲದೆಯೆ ಮನ ಬೆಕೋ ಬಿಂ!

೧೯-೫-೧೯೫೯ 

೧೦೯

ತನ್ನ ಮನೆಯನು ತಾನೆ ಹೊತ್ತಲೆವ ಓಡುಹುಳು
ಎಲ್ಲಿದ್ದರೇನು? ಎಂತಿರಲೇನು? ಇಚ್ಚೆ ಬರೆ
ಒಲಹೊಕ್ಕ ರಕ್ಷಣೆಯ ಪಡೆವುದಲ್ತೆ?

೨೬-೮-೧೯೫೯ 

೧೧೦

ಅಪಕಾರ ಮಾಡದಿರು, ಅದಕಿಂತಲೂ ಬೇರೆ
ಉಪಕಾರವನು ಬಯಸೆ ನಿನ್ನಿಂದ ನಾನು:
ಅಪಕಾರ ಮಾಡದಿರುವುದೆ ಪರಮ ಉಪಕಾರ!

೨೬-೮-೧೯೫೯