೧೧೧
ವಿಶ್ವವಿದ್ಯಾ ಪ್ರತಿಮೆ
ಪ್ರಶ್ನೆಯಿಂದೆ ಅಶ್ಚರ್ಯಕೆ
ಆಶ್ಚರ್ಯದಿಂದ ಪ್ರಶ್ನೆಗೆ
ಉಭಯ ಮಧ್ಯೆ ಚಲಿಪ ವಿದ್ಯೆ
ಪೂರ್ಣೆ ಶೂನ್ಯೆ ಕುಂಡಲಿನೀ!
೨೨-೯-೧೯೫೯
೧೧೨
ಮಗ್ಗಲಲಿ ಮಲಗಿರಲು ನೀನು
ಸಗ್ಗವೆಲ್ಲವ ಹುಡುಕಿ ದಣಿವೆ!
ಕಂಡಡಿಯ ಕಡೆಗಣಿಸಿ ನಾನು
ಕಾಣದಿಹ ಪಾದಕ್ಕೆ ಮಣಿವೆ!
೧೯-೨-೧೯೬೦
೧೧೩
ದ್ವಿಜ
“ಹದ್ದೂ ದ್ವಿಜ; ಹಾವೂ ದ್ವಿಜ;
ಅಂತೆ ಕಣಾ ನಾನೂ ದ್ವಿಜ!”
“ನಿಜ ನಿಜ; ನಜವೊ ನಿಜ:
ಹಾರಿಯೊ ಆಕಾಶಕೆ
ಹೊರಳಿಯೊ ಪಾತಾಳಕೆ
ಅಂತೊ ಇಂತೊ ಮಾಳ್ಪೆ ಮಜಾ!
೧೪-೩-೧೯೬೦
೧೧೪
ಮೊದಲ ಮಳೆ
ರೂಪಾತರ ಕೃಪೆ ನೆಲಕಿಳಿಯೆ
ಮಳೆ ಅಂದರೆ ಏನ್ ಬರಿ ಮಳೆಯೆ?
ಪುಲಕಿಸೆ ನನ್ನ ಮನ
ಇದು ಶ್ರೀ ಆಗಮನ!
೨೧-೩-೧೯೬೦
೧೧೫
ಕವಿಯ ಮನ ನಂದನವನ;
ಆನಂದದ ರಸನಿಕೇತನ:
ಅಲ್ಲಿ ಪಾಪವೂ ಪುಣ್ಯದ ವಾಹನ;
ಅಲ್ಲಿ ದುಃಖವೂ ಸುಖದ ಜವಾನ;
ಅಲ್ಲಿ ಸಾವೂ ಅಮೃತಯಾನ!
೯-೫-೧೯೬೦
೧೧೬
ತಾಯಿಗೆ ಮೊರೆ
ಕೇಡನೆಲ್ಲ ಭಕ್ಷಿಸು;
ಕಿವಿಯ ಹಿಂಡಿ ಶಿಕ್ಷಿಸು;
ರಟ್ಟೆ ಹಿಡಿದು ರಕ್ಷಿಸು:
ಕೃಪಣೆಯಾಗಬೇಡ, ಅಮ್ಮ,
ಓ, ಕೃಪಾಕಟಾಕ್ಷಿಸು!
೨೩-೯-೧೯೬೦
೧೧೭
ಈಗ ತಿಳಿಯಿತು
ನನ್ನ ನಿನ್ನಯ ನಡುವೆ
ಏಕೆ ಈ ಪೂಜಾರಿ?
ನಮ್ಮ ಪೂಜೆಗೆ ಇವನೆ
ಅರಿ: ಅದಕೆ ಪೂಜಾರಿ!
೩-೧೦-೧೯೬೦
೧೧೮
ಮೂಡಿತೈಕಿಲಿಂಗಳ
ಬಾನ ಹಣೆಯ ಮಂಗಳ;
ಕಾಣು ಹುಣಿಮೆ ತಿಂಗಳ;
ತಣಿಸು ನಿನ್ನ ಕಂಗಳ!
೨-೧-೧೯೬೧
೧೧೯
ಹಸರು, ಬಿಸಿಲು, ಇಬ್ಬನಿ;
ಅಲ್ಪ ಇಷ್ಟೆ ಸಾಕು ನನಗೆ
ಭೂಮದ ಅನುಭೂತಿಗೆ;
ಸಮಸ್ತವೂ ಚೇತನವೂ
ಶುಕ್ತಿಯಾಗೆ ಸ್ವಾತಿಗೆ!
೧೫-೧-೧೯೬೧
೧೨೦
ಬೆಳ್ಳಕ್ಕಿಯ ಗೊತ್ತು
ಹೊಳೆಯ ನಡುಗಡ್ಡೆ ಹಸುರಲಿ ಬಿಳಿಯ ಡಂಡು:
ಮರವೆ ಹೂಬಿಟ್ಟಂತೆ ಬೆಳ್ಳಕ್ಕಿ ಹಿಂಡು!
೧೮-೧-೧೯೬೧
Leave A Comment