೧೧
ನನ್ನ ಮನಮಂದಿರವನೆಲ್ಲ

ನನ್ನ ಮನಮಂದಿರವನೆಲ್ಲ ನೀ ತುಂಬಿರುವೆ;
ಬೇರೊಬ್ಬರಿಗೆ ಅಲ್ಲಿ ತಾವಿಲ್ಲವೋ!
ಜಗವೆಲ್ಲ ಬೇಡುತಿಹುದೆಡೆಯ ಪಡೆಯಲು ಅಲ್ಲಿ;
ನೀ ತುಂಬಿದಾಮೇಲೆ ತಾವೆಲ್ಲಿಯೋ?

೧೯-೧-೧೯೩೩ 

೧೨
ಎರಡು ವರಗಳು

ಎರಡು ವರಗಳ ಹಿಡಿದು ನಿಂತಿರುವೆ, ದೇವಿ;
ಒಂದು ಕಾಮನಬಿಲ್ಲು, ಇನ್ನೊಂದು ಕಾವಿ!
ಒಂದು ಮುಗಿಲಲಿ ಮುಗುಳ್ನಗೆ ಬೀರಿ ಕರೆಯುತ್ತಿದೆ;
ಇನ್ನೊಂದು ಪಕ್ಕದೊಳೆ ನಿಂತು ಕಿವಿಗೊರೆಯುತಿದೆ
ಎರಡನೂ ನೀಡಿತ್ತ, ಓ ಎನ್ನ ದೇವಿ:
ಕೈಗೆ ಕಾಮನ ಬಿಲ್ಲು, ಮೈಗಿರಲಿ ಕಾವಿ!

೨೨-೭-೧೯೩೩ 

೧೩
ಕಲೆ ನಮ್ಮಾತ್ಮದ ಮೇವು

ಎತ್ತಣ ನೋವು? ಎಲ್ಲಿಯ ಸಾವು?
ದೇವರ ಹುಚ್ಚರೊ ನಾವು!
ಬಾಳೊಳು ಸಾವು ಬೆಲ್ಲದೆ ಬೇವು:
ಕಲೆ ನಮ್ಮಾತ್ಮದ ಮೇವು!

೨೭-೧೦-೧೯೩೩ 

೧೪
ಶ್ರದ್ಧೆಸಂದೇಹ

ನೂರಾರು ಮತಭಕ್ತರೊಣಗು ನಂಬುಗೆಗಿಂತ
ಸಜ್ಜನರ ಸಂದೇಹದಲಿ ಹೆಚ್ಚು ಶ್ರದ್ಧೆಯಿದೆ:
ತಿಳಿಯಲೆಳಸುವ ಸಾಧಕನ ಮನದಿ ಬುದ್ಧಿಯಿದೆ;
ತಿಳಿದಂತೆ ನಟಿಸುವಾತನೊ ಬರಿಯ ದಿಗ್‌ಭ್ರಾಂತ!

೨-೧೦-೧೯೩೩ 

೧೫
ಪಠಾಧಿಪತಿ

ಸುಳ್ಳಿನ ಮಾಲೆಯ ಕೊರಳಿಗೆ ಸೂಡಿ
ಕಳ್ಳನೊಬ್ಬನನು ಗುರುವನು ಮಾಡಿ
ಬಡವರ ಹೊನ್ನನು ಕಾಣಿಕೆ ನೀಡಿ
ಧರ್ಮವ ಮೆರೆವರ ನೋಡಯ್ಯ!

೧೫-೨-೧೯೩೪ 

೧೬
ಆನೆ ಮತ್ತು ಕುರುಡರು

ಮುಟ್ಟಿಸೊಂಡಿಲನು ಮುಂಡಿಗೆ ಎಂಬ,
ಮುಟ್ಟಿ ಕಿವಿಗಳನು ಮೊರವೆಂದೆಂಬ,
ಮುಟ್ಟಿ ಹೊಟ್ಟೆಯನು ಗೋಡೆ ಇದೆಂಬ
ಕುರಡರ ಕಾಣ್ಕೆಯ ಕಾಣಯ್ಯ?

೧೫-೨-೧೯೩೪ 

೧೭
ಒಂದು ಹೂವಿಗೆ

ನಿನ್ನ ಚೆಲುವು ನಿನಗೆ ಅಲ್ಲ,
ನಿನ್ನ ಪಡೆದ ಶಿವನಿಗೆ,
ಮತ್ತೆ ನಿನಗೆ ರಂಗವಾಗಿ
ಶಿವ ಮಾಡಿದ ಅವನಿಗೆ.
ಇದನೊಂದನು ಮರೆಯದಿರು:
ಮರೆತು ಬರಿದೆ ಮೆರೆಯದಿರು,
ಹೂವೇ-ಮುದ್ದು ಹೂವೇ!

೧೮-೭-೧೯೩೪ 

೧೮
ಕಾಲ ಮತ್ತು ದೇಶ

ಕಾಲವೆಂದರೆ ಏನು? ರವಿಯ ದೂರಕೆ ನಾನು
ದಬ್ಬಿದೆನು: ಆ ಆತ್ಮಬಲವೆ ಕಾಲ!
ದೇಶವೆಂದರೆ ಏನು? ಒಲಿದು ಭೂಮಿಯ ನಾನು
ತಬ್ಬಿದೆನು: ಆ ಆತ್ಮದೊಲವೆ ದೇಶ!

೧೪-೧೧-೧೯೩೪ 

೧೯
ದೇವರ ಸನ್ನಿಧಿ ಎಲ್ಲೆಲ್ಲು!

ಯಾರಾಗಿರು ನೀ, ಏನಾಗಿರು ನೀ,
ಎಲ್ಲಿದ್ದೀಯೋ ಅಲ್ಲೇ ನಿಲ್ಲು!
ನಿನಗಿದ್ದರೆ ಮನಸಿದ್ದರೆ ಕಣ್ಣು
ಮೇಲೆ ಕೆಳಗೆ ಸುತ್ತಲು ನೋಡು:
ನೀ ನೋಡುವ ಆ ಹುಲ್ಲು,
ನೀ ನಿಂತಿಹ ಈ ಕಲ್ಲು
ಎಲ್ಲವು ಸ್ವರ್ಗದ ನೆಲೆವೀಡು:
ದೇವರ ಸನ್ನಿಧಿ ಎಲ್ಲೆಲ್ಲು!

೧೭-೭-೧೯೩೫ 

೨೦
ಕವಿಯ ಹೃದಯ

ಕನಸನೆಳೆದು ತಂದು ತಿರೆಗೆ
ಅದನು ನನಸುಗೈವ ವರೆಗೆ
ನುಡಿದೆ ನುಡಿವುದೆದೆಯ ವೀಣೆ;
ಎಂದಿಗದಕೆ ಬಿಡುವ ಕಾಣೆ.

೧೮-೯-೧೯೩೫