೧೨೧
ಭಗವಂತನಿಗೆ ಭಕ್ತಿ

ನಾನು
ಬೆಂಕಿಯ ಕಡ್ಡಿ.
ನನ್ನ ಭಕ್ತಿ
ಬೆಂಕಿಕಡ್ಡಿ ಗೀಚಿಕೆ:
ನೀನು
ಸಿಡಿಮದ್ದಿನ ರಾಶಿ.
ನಿನ್ನ ಸೋಂಕಲು ನನ್ನ ಭಕ್ತಿ
ಕಾರಣಕೆ ಕೋಟಿಮಡಿ ಮಿಂಚಿ ಶಕ್ತಿ
ಜ್ವಲಿಸುತಿದೆ ಜ್ಯೋತಿವಾರಾಶಿ!

೩-೩-೧೯೬೧ 

೧೨೨

ಕಾವ್ಯಪ್ರಜ್ಞಾರಸನೆಯ ಮೆಲೆ
ಹರಿಯುತ್ತಿದೆ ಲೋಕದ ಮಧುಲೀಲೆ:
ಸಹೃದಯ ಉದ್ಯಾನದ ಹೂಮಾಲೆ
ರಾಶಿಯೆ ಬಿದ್ದಿವೆ, ಹಾವುಗಳೋಲೆ,
ಕವಿಯ ಸಮಾಧಿಯ ಹುತ್ತದ ಮೇಲೆ!

೭-೪-೧೯೬೧ 

೧೨೩
ಒಂದು ನೋಟ

ಎರಡು ಮರಗಳ ನಡುವೆ ಆಗಸದ ಓಣಿ:
ತೇಲಿತ್ತು ಪಾಡಿವದ ಚಂದಿರನ ದೋಣಿ!

೧೫-೬-೧೯೬೧

 ೧೨೪

 

ಅಕ್ಕರೆ
ಹಾಲು ಜೇನು ಸಕ್ಕರೆ
ಬೆರಿಸಿದಂತೆ:
ಒಲುಮೆ ನಲಿದು ನಕ್ಕೆರೆ!

೫-೭-೧೯೬೧

 ೧೨೫

 

ಹೊಜೀವನ ಹೊನ್ನಾಗಲಿ:
ಹಸನಾಗಲಿ, ರಸವಾಗಲಿ,
ಶುಭವಾಗಲಿ, ಸುಖವಾಗಲಿ,
ಹೂವಾಗಲಿ,
ಹಣ್ಣಾಗಲಿ,
ಶ್ರೀಯಾಗಲಿ ನಿಮಗೆ!

೫-೭-೧೯೬೧ 

೧೨೬

ನೀನು ನನ್ನೊಡನಿರುವೆ ಎಂದು ನೆನೆದಾಗ
ಮನದ ದುಗುಡದ ಮಂಜು ಸರಿಯುವುದು ಬೇಗ;
ಹಿಂಗುವುದೊಡನೆ ಬಾಳಿನೆಲ್ಲ ಉದ್ವೇಗ,
ಶಾಂತಿ ತುಂಬುವುದಾತ್ಮಕಾದಂತೆ ಯೋಗ,
ನಿನ್ನ ಬೆಂಬಲವಿರುವ ನಂಬುಗೆಯ ಧೈರ್ಯ
ಮೂಡಿ ನನಗೊದಗುವುದು ಮೇರು ಸುಸ್ಥೈರ್ಯ!

೨೫-೧೨-೧೯೬೧ 

೧೨೭
ನಮ್ಮ ದೇವರಮನೆ

ಇಲ್ಲೆ ಗಂಗಾತೀರ; ಇಲ್ಲೆ ಹಿಮಗಿರಿ ಪಾರ;
ಇಲ್ಲಿಯೆ ಕಣಾ ಆ ಹರಿದ್ವಾರ!
ಇಲ್ಲೆ ವಾರಾಣಾಸಿ; ಇಲ್ಲಿಯೆ ಹೃಷಿಕೇಶ;
ಇಲ್ಲೆ ಇದೆ ಮುಕ್ತಿಗೆ ಮಹಾದ್ವಾರ!
ದಕ್ಷಿಣೇಶ್ವರವಿಲ್ಲಿ; ರಾಮೇಶ್ವರವು ಇಲ್ಲಿ;
ಎಲ್ಲ ತೀರ್ಥಗಳಿಲ್ಲಿ; ಪುಣ್ಯ ಕ್ಷೇತ್ರಗಳಿಲ್ಲಿ;
ಇಲ್ಲಿಹನು ಸರ್ವ ದೇವಾವತಾರ!
ಅಲ್ಲಿಗಿಲ್ಲಿಗೆ ಏಕೆ ಸುಮ್ಮನಲೆಯುವೆ ದೂರ ದೂರ?
ಇಲ್ಲೆ ಓಂ ಪೂರ್ಣಮಿದೆ: ಓ ಮನವೆ ಓ ಬಾರ ಬಾರ!

೭-೧-೧೯೬೨ 

೧೨೮

ದೊರೆ ಮತ್ತು ಪುರೋಹಿತ
ಕೂಡಿದಾಗ ಹುಟ್ಟಿತು ಮತ!
ಮೊದಲ ಠಕ್ಕ ಮೊದಲ ಬೆಪ್ಪ
ಕೂಡಿದಾಗ ಮೂಡಿತು ಮತ!
ಯಾವುದನೃತ? ಯಾವುದು ಋತ?
ಅಂತೂ ನಡೆಯಿತದ್ಭುತ!

೧೮-೧-೧೯೬೨

೧೨೯
ಫಾಲ್ಗುಣ ಪ್ರಭಾತರವಿ ದರ್ಶನ

ಮಗುವಾಗು, ಮಗುವಾಗು, ಮಗುವಾಗು, ಓ ನನ್ನ ಹೃದಯ;
ಭಗವದವತಾರವಾಗುವುದು ನಿನಗೆ ಈ ಸೂರ್ಯೋದಯ!
ಜಗದ ಜನನಿಯ ಕನಕವಕ್ಷೋಜವಾಗುವುದು ರವಿಯ ಬಿಂಬ:
ಕಣ್ ಮೊಗೆದು, ಬಗೆ ಈಂಟಿ, ಜೀವ ತಾನಾಗುವುದೊ ಅಮೃತಕುಂಭ!

೨೨-೧-೧೯೬೨ 

೧೩೦

ಇದು ಸೆಳೆವುದೆ ನನ್ನ
ಬರಿ ಕಣ್ಣ?
ಈ ಹುವಿನ ಗೊಂಚಲ ಬಣ್ಣ,
ಓ, ಅಮ್ಮನ ಆಲಿಂಗನವಣ್ಣಾ!
ಪೀಯೂಷವನೀಯುವ ಅಮ್ಮನ ವಕ್ಷಸ್ತನ್ಯ!
ಐಕ್ಯದ ಯೋಗಾಮೃತ ಪಾನದಿ ನಾ ಧನ್ಯ!

೧೭-೨-೧೯೬೨