೧೩೧
ಚೀಣಿಯರ ಧಾಳಿ
ಬರಿ ಹಿಮದ ಧೂಳಿ!
ತೂರಿ ಹೋಗುವುದು
ಆದರೀ ಕರಾಳಿ
ಇಂಗ್ಲೀಷಿನ ಗಾಳಿ
ಬೀಸಿ ಹೋಗುವುದೆ?
ಸ್ವಲ್ಪ ಕೇಳಿ!
೨೦-೧೧-೧೯೬೨
೧೩೨
ಸಾಕು, ತಾಯಿ, ಸಾಕು, ಈ ಸಾವು, ಈ ಸಾವು:
ಚೀಣೀ ಪಿಶಾಚಿಯಿಂ ಬುದ್ಧಿ ಕಲಿತೆವು ನಾವು
೨೧-೧೧-೧೯೬೨
೧೩೩
ಭಾರತದ ಮಕ್ಕಳ ಆರ್ತನಾದ
ಓ ಯಾರಾದರೂ ಬನ್ನಿ!
ಎಲ್ಲಿಂದಾದರೂ ಬನ್ನಿ!
ಏನಾದರೂ ಮಾಡಿ
ಹೆಣಹೊರೆಯ ಇಂಗ್ಲೀಷಿನಿಂದೆಮ್ಮ ಪಾರುಮಾಡಿ!
೨೯-೧೨-೧೯೬೨
೧೩೪
ಚೀಣೀ ರಾಕ್ಷಸ ದಳವನು ಸೀಳಿ
ಓ ಬಾ ಬಾ ಬಾ, ಹೇ ಮಹಾಕಾಳಿ!
೨೨-೧-೧೯೬೩
೧೩೫
ರಣ! ರಣ! ರಣ! ರಣ!
ಹಿಮಾಲಯದಿ ರಕ್ಕಸ ಗಣ
ಕುಣಿಯುತಿಹುದು ರಿಂಗಣ!
ಕೊಡು ಹಣ; ತೊಡು ಪಣ;
ತೀರಿಸು ನಡೆ ನಾಡಋಣ!
೨೨-೧-೧೯೬೩
೧೩೬
ಆಶ್ಚರ್ಯ ಪಡು, ಆಶ್ಚರ್ಯ ಪಡು,
ಆಶ್ಚರ್ಯ ಪಡು, ಓ ನನ್ನ ಜೀವ;
ಆಶ್ಚರ್ಯ ಪಡುವ ಶಕ್ತಿಯನು
ಕಳೆದುಕೊಂಡರೆ ನೀನು ನಿರ್ಜೀವ!
೨೨-೧-೧೯೬೩
೧೩೭
ಮಲಗಿರೆ ಕಲಿಯುಗ;
ಕುಳಿತರೆ ದ್ವಾಪರ;
ನಿಂತರೆ ತ್ರೇತಾ;
ನಡೆದರೆ ಕೃತ!
೨೨-೧-೧೯೬೩
೧೩೮
ನಮ್ಮ ಮತ – ಭಾರತ!
ನಮ್ಮ ವ್ರತ – ಭಾರತ!
ನಮ್ಮ ಬಾಹು ರಕ್ಷಿತ
ಸುರಕ್ಷಿತ ಸುರಕ್ಷಿತ
ಅನವರತ – ಭಾರತ!
೨೨-೧-೧೯೬೩
೧೩೯
ವಸಂತೋದಯ
ಮರಗಳಲ್ಲಿ ಚಿಗುರಿಹುದು ತಳಿರ ಸೊಂಪು;
ಕೇಳುತಿದೆ ಕೋಗಿಲೆಯ ಕೊರಲ ಇಂಪು;
ತೀಡುತಿದೆ ತೆಂಕಣದ ಗಾಳಿ ತಂಪು:
ಜೀವಕ್ಕೆ ಆಹ ಇನಿಯಳ ಕದಂಪು
ಸೋಂಕಿದಂದದಿ ಸೊಗಯಿಸಿದೆ ಅಲಂಪು!
೧೨-೧-೧೯೬೩
೧೪೦
ನಮಮ್ಮ ಜಗದಮ್ಮ;
ಜಗದಮ್ಮ ನಮಮ್ಮ !
ನೀನಿಲ್ಲದುದು ಇಲ್ಲ;
ನೀನಲ್ಲದುದು ಇಲ್ಲ;
ನೀನೊಲ್ಲದುದು ಇಲ್ಲ!
ನೀನೊಬ್ಬಳೆಯೆ ಎಲ್ಲ;
ನೀನೊಬ್ಬಳೂ ಅಲ್ಲ!
ನನ್ನಮ್ಮ ನಾಗಿಯೂ
ಜಗದಮ್ಮ!
ಜಗದಮ್ಮ ನಾಗಿಯೂ
ನನ್ನಮ್ಮ!
೨೯-೬-೧೯೬೩
Leave A Comment