೧೪೧

ಉದ್ಯಾನದಲ್ಲಿ ಸದ್ಯ ಆಗಮನಿ
ನೋಡು ಈ ಗುಲಾಬಿ!
ಅತ್ಯಂತ ಈಚಿನದೊ ತಾಯಿಯೀ ಅವತಾರ:
ದೇವಿಗೆ ನಮಸ್ಕರಿಸು ಆಗು ಉದ್ಧಾರ!

೧೨-೮-೧೯೬೩ 

೧೪೨

ಇಲ್ಲಗೈಯೆ ನಿನ್ನ ನೀನು
ದೇವರಲ್ಲದುಳಿವುದೇನು?

೨೪-೮-೧೯೬೩ 

೧೪೩

ನಿನಗೆ, ಮೋಡ:
ನನಗೆ, ಅಪ್ಸರಿ!
ನಿನಗೆ, ‘ಬೇಡ’:
ನನಗೆ ಅಚ್ಚರಿ!
ಭಾದ್ರಪದದ ಬಾನಿನಲ್ಲಿ
ತೇಲುತಿಹಳು, ನೋಡ:
ಬರಿಯ ಮೋಡ ಎನ್ನಬೇಡ,
ವಿಙ್ಙಾನದ ಮೂಢ!

೭-೯-೧೯೬೩ 

೧೪೪

ಬೇಡ, ಬೇಡ, ಬೇಡ;
ಮಕ್ಕಳ ಈ ಕೊಲೆ ಬೇಡ!
ತುಸು ಯೋಚಿಸೊ, ಹೇ ವಿದ್ವನ್ಮೂಢ;
ತಪ್ಪಿಸೊ ಈ ಇಂಗ್ಲೀಷಿನ ಕೇಡ!

೩-೧-೧೯೬೪ 

೧೪೫
ಲಾಂಪಟ್ಯದ ದೂರು

ಜಿಪುಣ ದೇವರು
ಕೃಪಣ ಸೃಷ್ಟಿಗೆ!
ಚೂರೆ ಹೆಚ್ಚು ತಿಂದರೂ
ಹೊಟ್ಟೆ ಕಿಚ್ಚು ಅವನಿಗೆ:
ಬಂತು ನಮಗೆ ಹೊಟ್ಟೆನೋವು,
ಶಿಕ್ಷೆ ಅಜೀರ್ಣಕೆ!
ತುಸುವೆ ಅಧಿಕವಾಯ್ತೊ ಭೋಗ?
ಬಂತು. . .
ಬಾಳನೆಲ್ಲ ಕಹಿಗೊಳಿಸುತ್ತ. . .
ರೋಗ!
ಕ್ಷಯ! ಮೃತಭಯ!. . . .
ಒಂದೆ ಅತಿಯ ಆಲಿಂಗನ,
ಒಂದೆ ಅಧಿಕ ಚುಂಬನ,
ಬಂದೆ ಬಂತು ಬೆನ್ನ ಹಿಂದೆ
ಹೃದಯ ಸ್ತಂಭನ!. . . .
ಇಂಥ ಕೃಪಣ ಸೃಷ್ಟಿಗೆ
ಎಂಥ ಜಿಪುಣ ದೇವರೊ?

೪-೧-೧೯೬೪

೧೪೬

ಪೂರ್ಣದೃಷ್ಟಿಯ ಮಹಾಕಾದಂಬರಿ

ಸರಸ್ವತಿಯ ಸಹಸ್ರ ಬಾಹು;
ಸರಸ್ವತಿಯ ಸಹಸ್ರ ಪಾದ
ಸರಸ್ವತಿಯ ಸಹಸ್ರ ವದನ:
ನಾಟ್ಯಮಾನ ದೇವಿಗೆ
ಪೂರ್ಣದೃಷ್ಟಿಯೀ
ಕಾದಂಬರಿಯೆ ಮಹಾಸದನ!

೩೧-೩-೧೯೬೪ 

೧೪೭
ಒಂದು ಸಂಸ್ಕೃತ ಸೂಕ್ತಿ

ಯಾರಿಗಿರದೊ ನಿಜಪ್ರಜ್ಞೆ,
ಬಹುಶ್ರುತನೊ ಕೇವಲ,
ಸಾರೊಳಗಿಹ ಸೌಟಿನವೊಲೆ
ಶಾಸ್ತ್ರಾರ್ಥದಿ ಸುವಿಫಲ!

೫-೮-೧೯೬೪ 

೧೪೮
ಸತಿಗೆ

ನಿನ್ನ ಮೋಹದ ಪಾಶವೆ
ನನ್ನನೊಯ್ಯುತಿದೆ
ಮುಕ್ತಿಯೆಡೆಗೆ;
ನಿನ್ನ ಅಂಗಾಂಗದ
ಅನಂಗರಂಗದಲಿ
ನಾ ನಿರಂತರ
ರಸ ತಪಸ್ವಿ!

೨೭-೯-೧೯೬೪ 

೧೪೯
ಪುನರ್ಭೇಟಿ***

ಮಸಣಿತಮ್ಮ, ಮಲ್ಲಿತಮ್ಮ, ಚಾಮಯ್ಯ, ಚೌಡಯ್ಯ,
ಅಪ್ರಸಿದ್ಧರು ಇವರು, ಅಜ್ಞಾತರಿವರು,
ಇವರ ಕಾಲಡಿಯಲ್ಲಿ ನುಸುಳಲರ್ಹರೆ ಅವರು
ಆ ಕುಪ್ರಸಿದ್ಧರು, ಆ ಲೋಕ ಕುಖ್ಯಾತರಾ
ಚೆಂಗೇಷ್‌ಖಾನ್‌, ಘಜ್ನಿಮಹ್ಮೂದ್‌,
ನೆಪೋಲಿಯನ್‌, ಹಿಟ್ಲರ್?

೧೬-೧೦-೧೯೬೪ 

೧೫೦

ಹೂದೋಂಟದಿ ಬೇಂಟೆಯಾಡಿ
ಹಳುನುಗ್ಗುತೆ ಹುಳುವ ಹಿಡಿದು
ಟುವ್ವಿನಹಕ್ಕಿ ತನ್ನ ಮರಿಯ
ಕೊಕ್ಕಿನೊಳಗೆ ಕೊಕ್ಕನಿಟ್ಟು
ಗುಟುಕು ಕೊಡುತಿದೆ!
ಗುಣಿಸು, ಗುಣಿಸು, ಗುಣಿಸು ಗಣಿಸನಂತದಿ:
ಭೂಮಮಕ್ಕುಮೀ ಅಲ್ಪಂ, ಋಷಿಸ್ವಾಂತದಿ!

೧೨-೧೧-೧೯೬೪


*** ಸೋಮನಾಥಪುರ ದೇವಾಲಯಕ್ಕೆ.