೧೫೧
ತಾರಿಣಿಯ ಕಸೂತಿ

ಸಾಗರ ಸಾಗರ ರಸದ ನಯಾಗರ
ಧುಮ್ಮಿಕ್ಕಿದವೋಲಾಗುತಿದೆ!
ತಾರಿಣಿಯೀ ಕುಶಲ ಕಲಾ ಕಸೂತಿಗೆ
ಸೌಂದರ್ಯ ವಿಭೂತಿಗೆ
ಸ್ವರ್ಗಶ್ರೀ
ಮುಡಿಬಾಗುತಿದೆ!
ಆಗಿದೆ ಜಗಲಿಯೆ ಹಕ್ಕಿಯ ಕಾಶಿ!
ಆಗಿದೆ ಬಾಗಿಲೆ ಹೂವಿನ ರಾಶಿ!
ಹೊಂಗನಸಿಳಿದಿದೆ ನಿಜವನೆ ಮಾಸಿ,
‘ಉದಯರಿವಿ’ಗೆ ನಂದನವನೆ ಬೀಸಿ!

೨೫-೧೨-೧೯೬೪

೧೫೨
ಪೈಗಂಬರ ಸೂಕ್ತಿ

ಭಗವಂತನ ಸಿಂಹಾಸನ
ತಲದಲ್ಲಿದೆ ಮಹದೈಶ್ವರ್ಯ:
ಕವಿಜಿಹ್ವೆಯೆ ನಿಕ್ಷೇಪಕೆ
ಬೀಗದ ಕೈ ಕಾಣಯ್ಯಾ!

೨-೧-೧೯೬೫ 

೧೫೩

ಅಗ್ನಿಕುಂಕುಮ ಚೆಂಡು,
ಕಾಯ್ದ ಚಿನ್ನದ ಗುಂಡು,
ಫಾಲ್ಗುಣದ ರವಿಯ ಉದಯವನು ಕವಿಯ
ಕಣ್ಣಲ್ಲ ಹೃದಯ ಕಂಡು
ಕೆಂಪಾದುದೈ ಕೆಂಗಾಂತಿಯನೆ
ಸೌಂದರ್ಯ ಬಂಡನುಂಡು!

೨೪-೩-೧೯೬೫

 ೧೫೪

 

ವಿರಹಕಿಂತ ಹಿರಿಯದಿಲ್ಲ
ನರಕಯಾತನೆ:
ತನ್ನತಾನೆ ಇರಿದು ಕೊಂದ
ತಪ್ಪಿಗೆ ತನ್ನೆಡೆಗೆ ಬಂದ
ವಿರಹಿಗೊಂದು ಶಿಕ್ಷೆ ವಿಧಿಸೆ
ಯಮನೆ ಸೋತನೆ!

೧೬-೭-೧೯೬೫ 

೧೫೫
ಷಷ್ಟಿಪೂರ್ತಿ

ಪ್ರಲಯದಿಂದ ಸೃಷ್ಟಿಗೆ,
ಸರ್ವಕಾಮ ಇಷ್ಟಿಗೆ,
ಷಷ್ಠಿಯಿಂದ ಷಷ್ಟಿಗೆ
ಹರಿದೆ ಪೂರ್ಣದೃಷ್ಟಿಗೆ,
ತನ್ನ ತಾನೆ ತುಷ್ಟಿಗೆ!

೨೭-೮-೧೯೬೫

 ೧೫೬

ಭಾದ್ರಪದ

ಹಸುರು ಹಾಸಿದ ನೆಲದ
ಶಾದ್ವಲದ ಹಾಸ;
ತಿಲಕ ವೃಕ್ಷದ ಸಾಲು;
ಬುಡವೆಲ್ಲ ಹೂ ಹಾಲು:
ಭಾದ್ರಪದ ಮಾಸ!

೧೦-೯-೧೯೬೫ 

೧೫೭
ಚುನಾವಣೆ

ಅಂದು ಹೂವಿನ ಹಾರ,
ಇಂದು ಕಲ್ಲೇಟು:
ಏನಿದೀ ಗ್ರಹಚಾರ?
ಹಾಳು ಈ ಓಟು!

೯-೨-೧೯೬೭ 

೧೫೮
ಫಣಿರಮಣಿ

ಬಳೆಗಳ ಟಿಂಟಿಣಿ ನೂಪುರ ಕಿಂಕಿಣಿ
ಬಂದಳು ಕುಣಿಕುಣಿದಾ ತರುಣಿ:
ಒಲವಿನ ಕಣ್ಮಣಿ ಚೆಲುವಿನ ಹೊಂಗಣಿ
ಹೆಡೆಯಾಡುವ ಫಣಿ ಆ ರಮಣಿ! 

೧೫೯
ಯಂ ಶೈವಾಃ

ಶಿವನೆಂದಾ ಶೈವರಾರನ್ ಸಮುಪಾಸಿಪರ್, ಬ್ರಹ್ಮವೆಂದಾ ವೇದಾಂತಿಗಳ್,
ಜಿನನೆಂದಾ ಜೈನಶಾಸನರತರ್, ಕರ್ತನೆಂದಾ ನೈಯಾಯಿಕರ್,
ಗುರುವೆಂದಾ ಬುದ್ಧನು ಬೌದ್ಧರ್, ಕರ್ಮವೆಂದಾ ಮೀಮಾಂಸಕರ್,
ಹರಿಯೆಂಬಾ ದೇವಂ ವಾಂಛಿತ ಫಲಂಗಳಂ ನೀಡುಗಾ ತ್ರೈಲೋಕ್ಯನಾಥಂ! 

೧೬೦
ಕೇಂದ್ರ ಆಕಾಶವಾಣಿಯಲ್ಲಿ ಸುದ್ದಿ

“ಹತ್ತು ಸಾವಿರ ಜನರು ಅಮರನಾಥ ಗುಹೆಗೆ
ಯಾತ್ರೆ ದರ್ಶನವಿತ್ತು ಸಂದರ್ಶಿಸಿದರಂತೆ
ಐಕಿಲಿನ ಶಿವಲಿಂಗವನು ಪೂಜೆಗೈಯಲ್ಕೆ”
ಮತ್ತೆ ಅಚ್ಚರಿಯೆ ಅನ್ನ ಸಮಸ್ಯೆ ಈ ದೇಶಕ್ಕೆ?

೨೧-೮-೧೯೬೭