೧೬೧
ಕೃಪಾಚಂಚು

ಮಳೆಗರೆಯುವ ಕಾರ್ಮೋಡಕೆ ಎಂತೊ ಬಳ್ಳಿಮಿಂಚು,
ಅಂತೆ ಇಹುದು ಕತ್ತಲೆಗೂ ಬೆಳ್ಳಿಬೆಳಕಿನಂಚು:
ದುಃಖಗರ್ಭದಲ್ಲಿ ಹೊರೆಯುತಿಹುದೊ ಸುಖದ ಹೊಂಚು,
ಕ್ಲೇಶಾಂಡವ ಕುಕ್ಕಿ ಹೊಮ್ಮುವಂತೆ ಕೃಪೆಯ ಚಂಚು!

(ಕೌಟುಂಬಿಕ ಕ್ಲೇಶವೊಂದರಿಂದ ಪಾರಾದ ಸಂದರ್ಭದಲ್ಲಿ)

೧೭-೩-೧೯೬೮ 

೧೬೨

ಹಕ್ಕಿ, ಹೂವು, ಮಕ್ಕಳು
ಇರದೆ ಇದ್ದರೆ
ಆಗುತಿತ್ತು ನಮ್ಮ ಪೃಥಿವಿ
ಬರಡು ಮರುಧರೆ!

೫-೪-೧೯೭೨ 

೧೬೩
ಓಡಿ ಮೋಡಗಳೆ ಚಿತ್ರಕೂಟಕ್ಕೆ
ಬೇಕು ಮಳೆಯ ಕೃಪೆ ಕಾಫಿ ತೋಟಕ್ಕೆ:
ಅಲ್ಲಿ ನಿಮ್ಮೊಡನೆ ಮಕ್ಕಳಾಟಕ್ಕೆ
ಇಹಳು ಸುಸ್ಮಿತಾ ಚೆಲ್ವುನೋಟಕ್ಕೆ!

೧೦-೪-೧೯೭೨

 ೧೬೪

ಓಂ

ಇಂದುಕಲೆ ತಮಾಲೆಯೊಡನೆ
ಸುರೇಂದ್ರ ಸಂಗಿನಿ
ವಿಜಯಿಯಾಗಿ ಬೇಗ ಬರಲಿ:
ಅನುಗ್ರಹಿಸು, ದೇವಿ, ತಾಯಿ,
ಮಹಿಷ ಭಂಗಿನಿ!

(ವಿದೇಶದಿಂದ ಮಗಳು ಹಿಂದಿರುಗುವ ಸಂದರ್ಭದಲ್ಲಿ ಆಶೀರ್ವಾದ)

೪-೧೦-೧೯೭೩ 

೧೬೫

ಕರ್ನಾಟಕ: ಹಳೆಯದೆ ಅದು
ಹೊಸತಾಯಿತು ಹೆಸರು.
ತುಂಬುವುದಿದೆ ಜನಹೃದಯದ
ಭಾವೈಕ್ಯದ ಉಸಿರು,
ಕೆರೆಕಟ್ಟೆಯ ಹೊಲಗದ್ದೆಯ
ಸಿರಿದೋಂಟದ ಹಸಿರು:
ಭರತಾಂಬೆಗೆ ತಾನಾಗಲಿ
ನಾಡಿದು ಹೊಂಬಸಿರು!

೧-೧೧-೧೯೭೩ 

೧೬೬

“ನಮ್ಮ ನಾಡು ಸುಖದ ಬೀಡು
ನಿಷ್ಠೆಯಿಂದ ದುಡಿದರೆ!”
ಎಂದ ನಮ್ಮ ಮುಖ್ಯಮಂತ್ರಿ
ನಿಷ್ಠೆಯಿಂದ ನುಡಿದರೆ?

(ಗದಗಿನಲ್ಲಿ ಮುಖ್ಯಮಂತ್ರಿ ದೇವಾರಾಜ ಅರಸು ಭಾಷಣ ಮಾಡಿದ ಸಂದರ್ಭದಲ್ಲಿ) 

೧೬೭
ಆಪತ್ಕಾಲ

ಬಾಯ್ಗೆ ಬಟ್ಟೆ ತುರುಕಿದಾರೆ
ಬಿಗಿದು ಕೈಯ ಕಟ್ಟಿದಾರೆ
ಗಂಟಲೊತ್ತಿ ಹಿಸುಗಿದಾರೆ!
ಸತ್ತೆ ಸತ್ತೆ ಅಯ್ಯೊ ಸತ್ತೆ:
ನಾ….ನು….ಪ್ರ….ಜಾ….ಸ….ತ್ತೆ!

(ಇಂದಿರಾಗಾಂಧಿ ತಾನು ರಾಜೇನಾಮೆ ಕೊಟ್ಟು ಸುಪ್ರೀಂ ಕೋರ್ಟಿನ ಇತ್ಯರ್ಥಕ್ಕೆ ಕಾಯುವ ಬದಲು ತುರ್ತು ಪರಿಸ್ಥಿತಿ ಘೋಷಿಸಿ ದೇಶದ ಬದಕನ್ನೇ ಗೋಳಿಗೆ ಸಿಕ್ಕಿಸುವ ಧೂರ್ತೆಯಾಗಿದ್ದಾರಲ್ಲಾ!)

೧-೭-೧೯೭೫ 

೧೬೮
ಸರ್ವಾಧಿಕಾರಿ

ಹತ್ತಿಯಾಯ್ತು ಹುಲಿಯ ಬೆನ್ನು:
ಮತ್ತೆ ಇಳಿವುದೆಂತು ಇನ್ನು?
ಇಲ್ಲಗೈವುದೆನ್ನ ತಿಂದು!
ಬಂದುದೆಲ್ಲ ಬರಲಿ ಎಂದು
ಕೊಂದುಕೊಂದು ನಡೆವೆ ಮುಂದು!

೨-೭-೧೯೭೫ 

೧೬೯
ಮತದಿಂದ ಪಾರಾಗು: ಅಧ್ಯಾತ್ಮ ಶರಣಗು!
ಮೌಢ್ಯಕ್ಕೆ ದೂರಾಗು: ವಿಜ್ಞಾನ ಮತಿಯಾಗು!

೧೨-೩-೧೯೮೨