ಮಂತ್ರಾಕ್ಷತೆ
೧
ಕಡಲಲೆ ದಡವನು ಬಡಿಯುವ ತೆರದಲಿ
ಯೌವನ ಎದೆಯನು ಬಡಿಯುತ್ತಿದೆ;
ಬಿರಗಾಳಿಯ ಕಡೆಗೋಲಿನ ಭರದಲಿ
ಬೇಟವು ಬಗೆಯನು ಕಡೆಯುತದೆ!
೨೬-೧೦-೧೯೨೮
೨
ಸಂದೇಹಿಯ ಪ್ರಾರ್ಥನೆ
ಓ ದೇವರೆ, ನೀನಿದ್ದರೆ,
ನನ್ನಾತ್ಮವನದು ಇದ್ದರೆ,
ಸಂರಕ್ಷಿಸು, ಬಲವಿದ್ದರೆ!
ಪ್ರಾರ್ಥನೆಯಿದು ನಿನಗೆ,
ಸಂದೇಹವೆ ಆರಾಧನೆ
ಮೇಣ್ ಸಾಧನೆ ನನಗೆ.
೨೦-೧೨-೧೯೨೯
೩
ಅಮ್ಮನ ಮಡಿಲೊಳು ಮಲಗಿರುವೆನಗೆ
ಗುಮ್ಮನ ಭಯವಿಹುದೇನಣ್ಣಾ
ಅಮೃತದ ಹೊಳೆಯೊಳು ತೇಲುವ ನನಗೆ
ಮೃತ್ಯುವ ಭಯವಿಹುದೇನಣ್ಣಾ?
೨೧-೫-೧೯೩೦
೪
ಬಿಂಕ
ನೀ ಕಲಿಸಿದುಲಿಯನ್ನೆ ನಾನುಲಿಯಲೊಮ್ಮೊಮ್ಮೆ
ನನಗೆ ಹೆಮ್ಮೆ:
ರವಿಯ ಮರುಬಿಂಬಿಸುವ ಕನ್ನಡಿಗೆ ನನ್ನಂತೆ
ಬಿಂಕವಂತೆ!
೨೦-೯-೧೯೩೧
೫
ಕವಿಮಾನಸ
ಮಮ ಮಾಯಾಮಯ ಮನಮಂದಿರದಲಿ
ಶತಚಂದ್ರೋದಯವಾಗುತ್ತಿವೆ;
ಮಮ ಮನ ಮಾನಸ ಕಮಲಾಕರದಲಿ
ಶತ ಸುಮ ವಿಕಷಿತವಾಗುತಿವೆ!
೨೭-೯-೧೯೩೧
೬
ಮುತ್ತಿನ ಮುಗುಳು
ಅಂತದ ತುಟಿಯಲಿ ಅನಂತವೊತ್ತಿದ
ಮುತ್ತಿನ ಮುಗುಳಾನು!
೨೭-೯-೧೯೩೧
೭
ಮುನ್ನುಡಿ
ತುತ್ತತುದಿಯ ಮೌನಕೇಕೆ
ಇಷ್ಟು ದೊಡ್ಡ ಮುನ್ನುಡಿ?
ರೂಪವಿಲ್ಲದಾತ್ಮಕೇಕೆ
ಜಗದ ರನ್ನಗನ್ನಡಿ?
೫-೧೦-೧೯೩೧
೮
ನಾನು–ನೀನು
ನೀಲ ನಭವ ನೋಡಿ ನೋಡಿ
ನಯನ ನೀಲವಾಗಿದೆ;
ಪಯಿರು ಪಸುರಿನೊಡನೆ ಆಡಿ
ಜೀವ ಪಚ್ಚೆಯಾಗಿದೆ:
ಅಂತೆ ನಿನ್ನ ಚಿಂತೆ ಮಾಡಿ
ನಾನು ನೀನೆ ಆಗಿದೆ!
೬-೧೦-೧೯೩೧
೯
ದೇಹ–ಆತ್ಮ
ನಿನ್ನ ದೇಹದ ಪಾಪವೆಲ್ಲವು
ದೇಹದೊಡನೇ ಅಳಿವುದು.
ಆದರಾತ್ಮದ ಕುಂದುಕೊರತೆಯ
ಆತ್ಮದೊಡನೇ ಉಳಿವುದು.
೨೯-೧೧-೧೯೩೧
೧೦
ಶತರೂಪಿ
ನೂರು ರೂಪದಿ ನಿಂದು ಕಣ್ಗೆ ಮೆರೆಯುವೆ ನೀನು,
ಸೌಂದರ್ಯ ರೂಪಿ.
ನೂರು ಭಾವದಿ ಬಂದು ಎದೆಯ ತುಂಬುವೆ ನೀನು,
ಹೇ ಸತ್ಯರೂಪಿ.
೧೩-೧೦-೧೯೩೨
Leave A Comment