೨೧
ಕ್ರಾಂತಿಮಂತ್ರ

ಕಡೆಯ ಪುರೋಹಿತನ ಕರುಳು
ಕಡೆಯ ದೊರೆಯ ಕೊರಳಿಗುರುಳು
ಬಿಗಿದ ಹೊರತು ಬರಿಯ ನೆರಳು
ಸ್ವಾತಂತ್ರ್ಯದ ಸ್ವರ್ಗವು!

೩-೧೦-೧೯೩೫

 ೨೨

ಕವಿಯೂ ಚೆಲುವೂ

ಚೆಲುವೆ ಬಿಸುಪು, ಕವಿಯೆ ಬೆಣ್ಣೆ,
ಕರಗಿ ಕರಗಿ ಹರಿವನು!
ಕವಿಯೆ ಬೆಂಕಿ, ಚೆಲುವೆ ಎಣ್ಣೆ,
ದಗ್ಗದಗ್ಗನುರಿವನು!

೪-೧೦-೧೯೩೫ 

೨೩
ನಿಷ್ಕಾರಣಂ

ನಾ ನಿನ್ನನೊಲಿದಿಹುದು ನಿನ್ನ ಚೆಲುವಿಕೆಗಲ್ಲ,
ನಿನ್ನ ಐಸಿರಿಗಲ್ಲ, ಮತಿಗಲ್ಲ, ಜಸಕಲ್ಲ:
ನಾ ನಿನ್ನನೊಲಿದಿಹೆನು ನಿಷ್ಕಾರಣಂ!
ಕಾರಣಗಳೆಲ್ಲವೂ ನಶ್ವರಗಳೆಂದು ತಿಳಿ.
ಕಾರಣಂಗಳಿಗೆಲ್ಲ ಮೊದಲ ಕಾರಣ ಒಲುಮೆ:
ಸೃಷ್ಟಿಗೆಮ್ಮೊಲ್ಮೆಯೆ ಮಹಾಕಾರಣಂ!

೧೪-೧೦-೧೯೩೫ 

೨೪
ಪೂರ್ಣತೆಶೂನ್ಯತೆ

ನೀನು ಬಳಿಯಿರೆ ಸುಗ್ಗಿಯು,
ದೂರ ಹೋದರೆ ಮಾಗಿಯು.
ನೀನು ಬಳಿಯಿರೆ ಹೂಮಳೆ,
ದೂರ ಹೋದರೆ ಮಳಲಿಳೆ.
ನೀನು ಬಳಿಯಿರೆ ಪೂರ್ಣತೆ,
ದೂರ ಹೋದರೆ ಶೂನ್ಯತೆ.

೧೫-೧೦-೧೯೩೫ 

೨೫
ಇದ್ದೊಂದು

ಇದ್ದೊಂದು ಹೃದಯವನು ಕದ್ದೊಯ್ದೆ ನೀನು:
ಅನ್ಯರಿಗೆ ಕೊಡಲಿನ್ನು ನನಗಿರುವುದೇನು?

೮-೧೧-೧೯೩೫ 

೨೬
ಲೋಕಕ್ಕೆ ಕವಿಯ ಪ್ರಾರ್ಥನೆ

ಹೊಟ್ಟೆಗಿಷ್ಟು ಹಿಟ್ಟು ಕೊಡಿ;
ನನ್ನ ನನಗೆ ಬಿಟ್ಟು ಬಿಡಿ.
ಹಾಡೆ, ಕೇಳಿ, ಹರುಷಪಡಿ;
ಇಷ್ಟೆ ಕವಿಯ ಪ್ರಾರ್ಥನೆ.

೫-೧-೧೯೩೬

 ೨೭

ದೆವ್ವದೇವ

ಕಾಡಿಸುವ ಕಾಡುದೇವತೆಗೆ ಹೊಗಳಿಕೆ ಬೇಕು;
ಪ್ರೇಮನಿಧಿಯಾಗಿರುವ ದೇವರಿಗೊಲುಮೆ ಸಾಕು.

೨೭-೮-೧೯೩೬

 ೨೮

ಹಮ್ಮು

ಗೇರುಸೊಪ್ಪೆಯ ಮಹಾ ಜಲಪಾತವನು ನೋಡಿ
ನೀರರತ ಬಡವು ತೊರೆ ಎಂದಿತು: “ರಜಸ್ಸು!
ಒಂದಿಷ್ಟು ಸಭ್ಯ ಸಂಯಮವಿರದ ನಾಣ್ಗೇಡಿ!
ನೋಡೆನ್ನ ನಡತೆಯಲಿ ಎಷ್ಟಿದೆ ತಪಸ್ಸು?”

೫-೯-೧೯೩೬

 ೨೯

ಒಲುಮೆ ರಾಹು

ನನ್ನಿಂದ ನೀನೆನಿತು ದೂರ ಓಡಿದರೇನು?
ಬೆನ್ನ ಬಿಡುವುದೆ ನಿನ್ನನೆನ್ನೊಲುಮೆ ರಾಹು?
ದೇಶದೇಶಾಂತರದಿ ಜನ್ಮಜನ್ಮಾಂತರದಿ
ಬಿಡದೆ ಬೆನ್ನಟ್ಟಿ ಹಿಡಿವುದು ನಿನ್ನನೆದೆಗಪ್ಪಿ
ನನ್ನೊಲುಮೆಗಿಚ್ಚು ನೀಳ್ದುರಿಯ ನೀಡು ಬಾಹು!

೨೬-೭-೧೯೩೭

೩೦

ಒಳಗೂ ಹೊರಗೂ

ಮನೆಯ ಹೊರಗೋ ಹಸುರು ಹೊಲವು;
ಮನೆಯ ಒಳಗೋ ಹೊಸತು ಒಲವು!
ಹೊರಗೂ ಚೆಲುವು, ಒಳಗೂ ಚೆಲುವು:
ಕವಿಗೆ ಬೇಕೇನ್‌ ಬೇರೆ ಗೆಲುವು?

೭-೮-೧೯೩೭